ಸೆಂಗೋಲ್ ಸುತ್ತ ನಂದಿಕೋಲು ಪರಂಪರೆ!

Sengol
Published on

| ಪ್ರಶಾಂತ ರಿಪ್ಪನ್​ಪೇಟೆ

ವಾರದಿಂದೀಚೆಗೆ ಎಲ್ಲೆಡೆ ಅನುರಣಿಸುತ್ತಿರುವ ಪದ ಸೆಂಗೋಲ್. ದೇಶಾದ್ಯಂತ ಸೆಂಗೋಲ್ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ನನಗಂತೂ ತಮಿಳು ಭಾಷೆಯ ಅರಿವಿಲ್ಲ. ಆದರೆ, ಸೆಂಗೋಲ್ ಅನ್ನೋ ಪದವನ್ನು ಕನ್ನಡದ ಪರಿಭಾಷೆಯಲ್ಲೇ ನೋಡುವ ಪ್ರಯತ್ನ ಮಾಡಿದಾಗ ಅದರಲ್ಲೊಂದು ಕೋಲು ಇರುವುದು ಕಂಡು ಬಂತು! ಅದಕ್ಕೆ ಶಿಷ್ಟ ಭಾಷೆಯಲ್ಲಿ ರಾಜದಂಡ ಎಂಬ ಹೆಸರಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದೆ. ಆದರೆ, ಸ್ವಾತಂತ್ರ್ಯವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದ ಪ್ರತೀಕವಾದ ಈ ಕೋಲಿ (ರಾಜದಂಡ)ನ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇದ್ದುದು ಕಡಿಮೆ.

ದೇಶದ ಸವೋಚ್ಛ ನಾಯಕರಲ್ಲಿ ಒಬ್ಬರಾಗಿದ್ದ ರಾಜಗೋಪಾಲಾಚಾರಿಯವರ ಮುಂದಾಳತ್ವದಲ್ಲಿ ಅಧೀನಂ ಮಠದ ಶ್ರೀಗಳ ಮಾರ್ಗದರ್ಶನದಂತೆ ನಿರ್ವಣಗೊಂಡು, ಮೌಂಟ್ ಬ್ಯಾಟನ್ ಎಂಬ ಕೊನೆಯ ಆಂಗ್ಲ ಅಧಿಕಾರಿಯಿಂದ ದೇಶದ ಪ್ರಥಮ ಪ್ರಧಾನಿಗೆ ಹಸ್ತಾಂತರಗೊಂಡಿದೆ ಈ ಸೆಂಗೋಲ್. ರಾಜದಂಡ ಎಂದರೆ ರಾಜನು ಆಡಳಿತ ನಡೆಸಲು ಬಳಸುವ ಕೋಲು ಎಂದು ಕರೆಯಬಹುದು. ಈ ಸೆಂಗೋಲಿನ ರಚನೆ, ವಿನ್ಯಾಸವನ್ನು ನೋಡಿದರೆ ಕನ್ನಡದಲ್ಲಿ ಇದನ್ನು ’ನಂದಿಕೋಲು’ ಎಂದು ಕರೆಯುವುದು ಸೂಕ್ತವಾಗಲಿದೆ. ನಂದಿ ಧಾರ್ವಿುಕ ಹಿನ್ನೆಲೆಯಲ್ಲಿ ನೋಡಿದರೆ ಶಿವನ ವಾಹನ. ವ್ಯಾಸರು ರಚಿಸಿರುವ ಶಿವಮಹಾಪುರಾಣದ ಪ್ರಕಾರ ಶಿವನ ಪ್ರಮುಖ ಗಣಾಧೀಶ್ವರರಲ್ಲಿ ನಂದಿ ಮತ್ತು ಭೃಂಗಿ ಪ್ರಮುಖರು. ಇವರನ್ನು ಗೋತ್ರ ಪುರುಷರು ಎಂಬುದಾಗಿಯೂ ಕರೆಯಲಾಗುತ್ತದೆ. ವೀರ, ನಂದಿ, ಭೃಂಗಿ, ವೃಷಭ, ಮತ್ತು ಸ್ಕಂದ ಪಂಚಪೀಠಗಳ ಪಂಚಗೋತ್ರಪುರುಷರು. ಉಜ್ಜಯಿನಿ ಪೀಠದ ಗೋತ್ರಪುರುಷ ಈ ನಂದಿ. ನಂದಿ, ಭೃಂಗಿ, ವೃಷಭ ಎಲ್ಲರೂ ಒಂದೇ ಪ್ರಬೇಧದವರೇ ಆದರೂ ಕೈಲಾಸದಲ್ಲಿ ಇವರದ್ದು ಬೇರೆಬೇರೆ ಜವಾಬ್ದಾರಿ. ನಂದಿ ಶಿವನ ವಾಹನವಾದರೆ, ಭೃಂಗಿ ಕೈಲಾಸದ ದ್ವಾರಪಾಲಕ. ಶಿವನೆಂದರೆ ಜ್ಞಾನದ ಸಂಕೇತ ಜಗತ್ತಿನಲ್ಲಿರುವ ಎಲ್ಲ ಜ್ಞಾನಕ್ಕೂ ಆತನೇ ಅಧಿಪತಿ. ಇಂತಹ ಶಿವನ ವಾಹನವಾಗಿರುವ ನಂದಿಯು ಜ್ಞಾನವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ವಾಹಿನಿಯಾಗಿದ್ದಾನೆ. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಮಾತಿನಂತೆ ರಾಜ್ಯವಾಳುತ್ತಿದ್ದ ರಾಜರು ಶಿವನ ಸ್ವರೂಪವೆಂಬ ಹಿನ್ನೆಲೆಯಲ್ಲಿ ಅವರನ್ನು ಸುಸೂತ್ರವಾಗಿ ಕರೆದಕೊಂಡು ಹೋಗುವುದುದರ ಸಾಂಕೇತಿಕ ಅರ್ಥವೇ ರಾಜರ ಕೈಯಲ್ಲಿರುವ ರಾಜದಂಡ ಅರ್ಥಾತ್ ನಂದಿಕೋಲು. ಒಬ್ಬ ರಾಜ ಸುಭಿಕ್ಷವಾಗಿ ರಾಜ್ಯವನ್ನಾಳಬೇಕೆಂದರೆ ಆತನಿಗೆ ಅಪಾರ ಜ್ಞಾನವಿರಬೇಕು. ಆ ಜ್ಞಾನದ ವಾಹಕನಾದ ನಂದಿಯ ಆಸರೆ ಅಂತಹ ರಾಜ್ಯಾಧಿಪತಿಗಿರಬೇಕು ಎಂಬುದು ಅದರ ಹಿನ್ನೆಲೆ ಆಗಿರಬಹುದು. ಈ ದಂಡ ಕೇವಲ ರಾಜಪರಂಪರೆ ಮಾತ್ರವಲ್ಲ, ಗುರುಪರಂಪರೆಯಲ್ಲೂ ಕಾಣಸಿಗುತ್ತದೆ. ಅದನ್ನು ಧರ್ಮದಂಡ ಎಂಬುದಾಗಿ ಕರೆಯಲಾಗುತ್ತದೆ. ಎಷ್ಟೋ ಮಠಗಳ ಸಿಂಹಾಸನದ ಮೇಲೆ ನಂದಿಯ ಲಾಂಚನ ಇರುತ್ತದೆ. ಮಾತ್ರವಲ್ಲ ಮಠದಲ್ಲಿ, ಅರಮನೆಯಲ್ಲಿ ಪಟ್ಟದ ನಂದಿಗೆ ಪೂಜೆ ಸಲ್ಲಿಸುವ ಪದ್ಧತಿ ಇಂದಿಗೂ ಇದೆ. ಧಾರ್ವಿುಕವಾಗಿ ಮಾತ್ರವಲ್ಲದೆ ಅಭಿವೃದ್ಧಿಯ ಸಂಕೇತವಾಗಿದೆ ಈ ನಂದಿ. ಕೃಷಿಪ್ರಧಾನವಾದ ಭಾರತದಲ್ಲಿ ಎತ್ತುಗಳಿಂದಲೇ ಕೃಷಿ ಕೆಲಸ ನಡೆಯುವುದರಿಂದ ರೈತನ ಬದುಕಿನ ಆಶಾಕಿರಣ ಎಂದು ಪರಿಗಣಿಸಲಾಗುತ್ತದೆ. ಬಸವನಿಂದ ಬದುಕಿತ್ತೀ ಲೋಕವೆಲ್ಲ ಎಂಬ ಕನ್ನಡದ ನಾಣ್ಣುಡಿ ಇದನ್ನು ಪುಷ್ಟೀಕರಿಸುತ್ತದೆ.

ಕನ್ನಡ ನಾಡಿನ ಹೆಗ್ಗುರುತು ನಂದಿಕೋಲು: ಸೆಂಟ್ರಲ್ ವಿಸ್ತಾದ ಸ್ಪೀಕರ್ ಆಸನದ ಬಳಿ ಈ ಸೆಂಗೋಲ್ ಸ್ಥಾಪನೆಯಾಗುತ್ತಿರುವ ಈ ನಂದಿಕೋಲಿನ ಮೂಲದ ಬಗ್ಗೆ ಕೆದಕುತ್ತಾ ಹೋದರೆ ಅದರ ಪೂರ್ವ ಇತಿಹಾಸವು ಕನ್ನಡ ನಾಡಿಗೆ ಬಂದು ನಿಲ್ಲುತ್ತದೆ. ನಂದಿ ಲಾಂಛನವುಳ್ಳ ರಾಜದಂಡದ ಪರಂಪರೆ ತಮಿಳುನಾಡನ್ನು ಆಳಿದ ಚೋಳ ದೊರೆಗಳಲ್ಲಿ ಕಂಡುಬರುತ್ತದೆ. 12ನೇ ಶತಮಾನದಲ್ಲಿದ್ದ ಚೋಳ ದೊರೆಗಳ ರಾಜದಂಡದ ಮಾದರಿಯಲ್ಲೇ ಈ ಸೆಂಗೋಲನ್ನು ನಿರ್ವಿುಸಲಾಗಿದೆ ಎನ್ನಲಾಗಿದೆ. ಆದರೆ, ಈ ನಂದಿಕೋಲು ಅದಕ್ಕಿಂತಲೂ ಮುನ್ನ ಕನ್ನಡ ನಾಡ ನ್ನಾಳಿದ ಬಾದಾಮಿ ಚಾಲುಕ್ಯರ ಕಾಲದಲ್ಲಿದ್ದ ಬಗ್ಗೆ ಪುರಾವೆ ಇದೆ.

ಕ್ರಿ.ಶ.742ರಲ್ಲಿ ಚಾಲುಕ್ಯರು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ಸ್ಥಾಪಿಸಿರುವ ವಿರೂಪಾಕ್ಷ ದೇವಾಲಯದ ಗೋಡೆಯ ಮೇಲಿರುವ ಚತುರ್ಭಜ ಶಿವನ ಮೂರ್ತಿಯ ಕೈಯಲ್ಲಿ ನಂದಿಕೋಲಿದೆ. ಮಾತ್ರವಲ್ಲ ಮೈಸೂರು ಅರಸರು ಕೂಡ ನಂದಿಕೋಲಿಗೆ ಪೂಜೆ ಸಲ್ಲಿಸುವುದನ್ನು ಇತಿಹಾಸದಿಂದ ತಿಳಿದುಕೊಳ್ಳಬಹುದು. ಕರ್ನಾಟಕ ಸಂಸ್ಕೃತಿಯ ಪ್ರತಿಬಿಂಬವಾಗಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯುವುದೇ ನಂದಿಕೋಲಿಗೆ ಪೂಜೆ ಸಲ್ಲಿಸುವ ಮೂಲಕ. ಮಹಾರಾಜರು ನಡೆಸಿಕೊಂಡು ಬರುತ್ತಿದ್ದ ಈ ಪರಂಪರೆಯನ್ನು ನಾಡಿನ ಮುಖ್ಯಮಂತ್ರಿಗಳು ಇಂದಿಗೂ ಮುಂದುವರಿಸಿದ್ದಾರೆ. ನಂದಿಕೋಲು ಕುಣಿತ, ನಂದಿಧ್ವಜಾರೋಹಣ ಇತ್ಯಾದಿ ಕನ್ನಡ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ನಂದಿ ಎಂಬುದನ್ನು ಕನ್ನಡದಲ್ಲಿ ಬಸವ ಎನ್ನಲಾಗುತ್ತದೆ. ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ನಂದಿಯನ್ನು ಪೂಜಿಸುವ ಪರಂಪರೆ ಇಂದಿಗೂ ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪ್ರಥಮ ಬಾರಿಗೆ ನೀಡಿದ ಬಸವಣ್ಣನವರು, ಕಾಯಕ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಈ ಕಾರಣಕ್ಕಾಗಿಯೇ ಸಂಸತ್ ಭವನದ ಆವರಣದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಕಾಯಕದ ಪ್ರತಿರೂಪವಾಗಿರುವ ನಂದಿ ಇರುವ ದಂಡವನ್ನು ನೂತನ ಸಂಸತ್ ಭವನದಲ್ಲಿ ಸ್ಥಾಪಿಸುವುದರ ಹಿಂದೆ ಈ ಎಲ್ಲ ಅಂಶಗಳನ್ನು ಗುರುತಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net