ಅವಳ ತಾತ್ಸಾರ ನಿನ್ನಲ್ಲೊಬ್ಬ ಗೃಹಸ್ಥನನ್ನು ಹುಟ್ಟಿಸಲಿ!

Ravi belegre 26 april 20
Published on

ಅಹಂಕಾರಕ್ಕೆ ಉದಾಸೀನ ಮದ್ದು ಅಂತಾರೆ. ಆದರೆ ಯಾರದಾದರೂ ಉದಾಸೀನಕ್ಕೆ ನಾವೇ ಒಳಗಾದಾಗ ಏನು ಮಾಡಬೇಕು? ನಾವೆಲ್ಲ ನೆಗ್ಲಿಜೆನ್ಸ್​ನ ಸೃಷ್ಟಿಗಳೇ. ಆಫ್ರಿಕಾದಲ್ಲಿ ಬಿಳಿಯರ ನೆಗ್ಲಿಜೆನ್ಸನ್ನು ಭರಿಸಲಾಗದೆ ಮೋಹನದಾಸ್ ಕರಮಚಂದನಲ್ಲಿ ಗಾಂಧಿ ಹುಟ್ಟಿಕೊಂಡ. ಗುಂಪಿನೊಳಗೊಂದು ಅನಾದರದ ಮಗು: ಮುಂದೆ ಸುಭಾಷ್​ಚಂದ್ರ ಬೋಸ್ ಆಯಿತು.

ಅವಳು ನೆಗ್ಲೆಕ್ಟ್ ಮಾಡ್ತಾಳೆ. ನಾನು hurtಆಗ್ತೀನಿ. ನಾನು ನೊಂದುಕೊಳ್ತೀನಿ ಅಂತ ಗೊತ್ತಾದಷ್ಟೂ ಅವಳ ಉದಾಸೀನ ಜಾಸ್ತಿಯಾಗುತ್ತೆ. ನಾನಿವತ್ತು ನಿರ್ಧರಿಸಿದೀನಿ; ಇನ್ಮೇಲೆ hurt ಆಗಲ್ಲ. ಅಹಂಕಾರಕ್ಕೆ ಉದಾಸೀನ ಮದ್ದು ಅಂತಾರೆ. ಆದರೆ ಯಾರದಾದರೂ ಉದಾಸೀನಕ್ಕೆ ನಾವೇ ಒಳಗಾದಾಗ ಏನು ಮಾಡಬೇಕು? ಅದಕ್ಕೆ ಯಾವ ಮದ್ದು ಹುಡುಕಬೇಕು? ಅವರನ್ನು ನಾವು ಎಷ್ಟೊಂದು ಪ್ರೀತಿಸಿರುತ್ತೇವೆ. ಅವರಿಗೋಸ್ಕರ ಏನೆಲ್ಲ ಮಾಡಿರುತ್ತೇವೆ. ಅವರ ಒಂದೇ ಒಂದು ನಗೆ, ಒಂದು ಒಳ್ಳೆಯ ಮಾತು, ಚಿಕ್ಕ ಹೊಗಳಿಕೆ, ಸಣ್ಣ ತಬ್ಬುಗೆ, ಕಣ್ಣಲ್ಲೇ ತೋರಿಸುವ ಅಪ್ರಿಸಿಯೇಷನ್ನು ಅಷ್ಟು ಸಾಕಿರುತ್ತೆ. ಆದರೆ ಉಹುಂ- ಅವರು ನಮ್ಮನ್ನು ಉದಾಸೀನ ಮಾಡುತ್ತಾರೆ. ಅವರು ಜಗಳ ಮಾಡಿದ್ದಿದ್ದರೆ ಸಹಿಸಿಕೊಳ್ಳಬಹುದಿತ್ತು; ಸಂಬಂಧ ಮುರಿದುಕೊಂಡಿದ್ದರೂ ಸುಮ್ಮನಿರಬಹುದಿತ್ತು. ಆದರೆ ಅವರು ಉದಾಸೀನ ಮಾಡುತ್ತಾರೆ. ಹಿಂಸೆಯಾಗುತ್ತದೆ. ಅವರ ನೆಗ್ಲಿಜೆನ್ಸ್ ನಮ್ಮಪ್ರಾಣ ತಿನ್ನುತ್ತದೆ.

ಮೊನ್ನೆ ಅದೇ ಆಯ್ತು.

‘ಏನೋ ಮಾಡ್ಲಿ ನಾನೂ? I am desparate. ಅವಳಿಗೋಸ್ಕರ ಏನೆಲ್ಲ ಮಾಡಿದೆ. ಎಷ್ಟು ಪ್ರೀತಿಸಿದೆ. ಎಷ್ಟು ಜನರ ವಿರೋಧ ಕಟ್ಟಿಕೊಂಡೆ. ಯಾರ್ಯಾರಿಗೆ ಮೋಸ ಮಾಡಿದೆ. you know? ನನ್ನ ಮಗೂಗೆ ಜ್ವರ ಬಂದಿತ್ತು. ಡಾಕ್ಟರ ಹತ್ರಕ್ಕೂ ಕರ್ಕೊಂಡು ಹೋಗಲಿಲ್ಲ. ಇವಳಿಗೋಸ್ಕರ ಓಡಿ ಬಂದೆ. ಆದರೆ ಇವಳು ನೆಗ್ಲೆಕ್ಟ್ ಮಾಡ್ತಾಳೆ. ಏನೂ ಆಗೇ ಇಲ್ಲ ಅನ್ನುವ ಹಾಗೆ ವರ್ತಿಸ್ತಾಳೆ. ಮಾತು ಕೂಡ ತುಂಡು ತುಂಡು. ನಗುವು ದುಬಾರಿ. ನಂಗೆ ಈ ಕ್ಷಣಕ್ಕೆ ಏನು ಬೇಕಾಗಿದೆ ಅಂತ ಇವಳಿಗೆ ಅರ್ಥವಾಗಿರುತ್ತೆ. ಅದಕ್ಕೆ ರೆಸ್ಪಾಂಡ್ ಮಾಡಲ್ಲ. ದುರಂತ ಅಂದ್ರೆ, ನಂಗೆ ಏನು ಬೇಕಾಗಿದೆ ಅಂತ ಇವಳಿಗೆ ಮಾತ್ರ ಅರ್ಥವಾಗಿರುತ್ತೆ. ಇವಳು ಮತ್ತೇನು ಮಾಡಿದ್ರೂ ಸಹಿಸಿಕೊಳ್ತಿದ್ದೆ. ಇವಳ negligence ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ.’ ಛೇಂಬರಿಗೆ ಬಂದಿದ್ದ ಗೆಳೆಯನೊಬ್ಬ ಭುಸುಗುಡುತ್ತಿದ್ದ.

ಅವನ ಸಂಕಟ ನನಗೆ ಅರ್ಥವಾಗುತ್ತಿತ್ತು. ಮನೆಯಲ್ಲಿ ಹೆಂಡತಿಯಿದ್ದಾಳೆ. ಮಕ್ಕಳಿದ್ದಾರೆ. ಇವನನ್ನು ಕಂಡರೆ ಅವರಿಗೆಲ್ಲ ತುಂಬ ಇಷ್ಟ. ಇವನಿಗೆ ಮತ್ತೊಬ್ಬಳ್ಯಾವಳೋ ಇಷ್ಟ. ಮನೆಯಲ್ಲಿ ತುಂಬ ಹೊತ್ತು ಕುಳಿತಿರಲಾರ. ಚಡಪಡಿಸಿ ಹೊರಬೀಳುತ್ತಾನೆ. ಇವಳಿಗೋಸ್ಕರ ಗಂಟೆಗಟ್ಟಲೆ ಕಾಯುತ್ತಾನೆ. ದಿನವಿಡೀ ಇವಳನ್ನು ಕುರಿತೇ ಧೇನಿಸುತ್ತಾನೆ. ಹಂಬಲಿಸುತ್ತಾನೆ. ಅವಳು ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು- ಇವನ ಪ್ರಪಂಚ ಉಬ್ಬಿ ನಲಿದು ಹೋಗುತ್ತೆ. ಆದರೆ ಅವಳೀಗ ನೆಗ್ಲೆಕ್ಟ್ ಮಾಡತೊಡಗಿದ್ದಾಳೆ. ಇವನು ಪ್ರತಿಕ್ಷಣ ಸಾಯುತ್ತಾನೆ.

ಇವನ ನೋವಿಗೆ ಮದ್ದಿದೆಯಾ?

ಮನೆಯಾಚೆಗೊಂದು ಸಂಬಂಧವಿಟ್ಟುಕೊಂಡ ಅನೇಕ ಗಂಡಸರ ಅಸಲಿ ಸಮಸ್ಯೆಯೇ ಇದು. ಇವನು ಬಂಧ ಬೆಳೆಸಿಕೊಂಡಿದ್ದಾನಲ್ಲ- ಆಕೆ ದಡ್ಡಿಯಲ್ಲ. ಭಾವನೆಗಳಿಲ್ಲದ ಕೊರಡಲ್ಲ. ಇನ್​ಸೆನ್ಸೆಟಿವ್ ಅಲ್ಲ. ಆದರೆ ಆಕೆ ಇದ್ದಕ್ಕಿದ್ದಂತೆ ಹೀಗಾಗಿ ಬಿಡುತ್ತಾಳೆ:coldshoulder! ಉದಾಸೀನವೆಂಬುದು ಆಕೆಯ ಪ್ರತಿ ನಡತೆಯಲ್ಲೂ ವ್ಯಕ್ತವಾಗುತ್ತದೆ. ಆಡಿದ ಮಾತಿನಲ್ಲೂ ಮಂಜುಗಡ್ಡೆ. ಆತ್ಮದೊಳಗಿನ ಅಯಸ್ಕಾಂತ ಕಳೆದುಹೋದಂತೆ. ಇವನು ಅದೊಂದು negligence ಭರಿಸಲಾಗದೆ ದಿಕ್ಕು ತಪ್ಪಿದವನಂತಾಗಿ ಬಿಡುತ್ತಾನೆ. ವಿಪರೀತ ಕುಡಿಯುತ್ತಾನೆ. ಹೆಂಡತಿ ಇನ್ನಷ್ಟು ಬೇಡವಾಗುತ್ತಾಳೆ. ಮಕ್ಕಳು ಮಲಗಿದರೆ ಸಾಕೆನ್ನಿಸುತ್ತದೆ. ತನ್ನ ಕೆಲಸದ ಮೇಲೆ ಕೊಂಚವೂ ಶ್ರದ್ಧೆ ತೋರಿಸಲಾರ. ಇವನನ್ನು ಹೇಗೆ ಸರಿಮಾಡಬೇಕು?

‘ರಿಲ್ಯಾಕ್ಸ್ ಆಗು. ನಾನು ಮಾತಾಡೋದೆಲ್ಲ ಸುಮ್ಮನೆ ಕೇಳಿಸಿಕೋ. ಮಧ್ಯೆ ಉಸಿರೆತ್ತಬೇಡ. ಹೇಳಬೇಕೆನಿಸಿದ್ದು ಹೇಳಿಬಿಡ್ತೇನೆ. ಆಮೇಲೆ ನಿನಗೆ ತಿಳಿದದ್ದು ಮಾಡು’ ಅಂದವನೇ ಮಾತಾಡತೊಡಗಿದೆ.

‘ಐದು ವರ್ಷಗಳಾದವು ಈ ಹುಡುಗಿಯೊಂದಿಗೆ ನೀನು ಸಂಬಂಧವಿಟ್ಟುಕೊಂಡು. ಅಲ್ವಾ? ನಿನ್ನ ಶ್ರದ್ಧೆ, ತಪನೆ, ಏಕಾಗ್ರತೆ, ನಿನ್ನ ಪ್ರೀತಿ, ಮೋಹ- ಎಲ್ಲವನ್ನೂ ಈ ಐದು ವರ್ಷಗಳಲ್ಲಿ ಅವಳಿಗೆ ಮಾತ್ರ ಧಾರೆಯೆರೆದೆ. ಅವಳಿಗೋಸ್ಕರ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡಿದೆ. ಅದೆಲ್ಲ ಸರಿಯೇ. ಮನುಷ್ಯ ತನ್ನ ಸುಖಕ್ಕೆ, ಸಂತೋಷಕ್ಕೆ ಏನೇನು ಬೇಕೋ ಅದನ್ನೆಲ್ಲ ಮಾಡಿಕೊಳ್ತಾನೆ. ನೀನು ಮಾಡಿದ್ದರಲ್ಲಿ ತಪ್ಪಿಲ್ಲ.

ಆದರೆ ಇವತ್ತು ನೆಗ್ಲೆಕ್ಟ್ ಮಾಡ್ತಿದಾಳೆ ಅಂತೀಯ. ತುಂಬ ನೋವಾಗಿದೆ ಅಂತೀಯ. ದಿಕ್ಕೇ ತಪ್ಪಿದವನ ಹಂಗಾಡ್ತೀಯ. ಒಂದು ನಿಮಿಷ ನಿಂತ್ಕೋ- ಇಂಥದೇ ನೆಗ್ಲಿಜೆನ್ಸು, ನೋವು, ಅಸಡ್ಡೆ, ಅವಮಾನ-ಇವನ್ನೇ ಐದು ವರ್ಷಗಳಲ್ಲಿ ನಿನ್ನ ಹೆಂಡತಿ ಎಷ್ಟು ತೀವ್ರವಾಗಿ ಅನುಭವಿಸಿದ್ದಿರಬಹುದು? ದಯವಿಟ್ಟು ಒಂದ್ಸಲ ತಿರುಗಿ ನೋಡ್ತೀಯಾ ಮಿತ್ರ?

ಮಗುವಿಗೆ ಜ್ವರ: ನೀನು ನೆಗ್ಲೆಕ್ಟ್ ಮಾಡಿದೆ. ಹೆಂಡತಿಗೆ ಹೊಟ್ಟೆನೋವು: ಇವಳಿಗೆ ನೀನು ಐಸ್ಕ್ರೀಮ್ ಕೊಡಿಸುತ್ತಿದ್ದೆ. ಬೇಸಿಗೆ ರಜೆಯಿತ್ತು. ಮಕ್ಕಳನ್ನು ಎಲ್ಲಿಗೂ ಕರೆದುಕೊಂಡು ಹೋಗಲಿಲ್ಲ. ಆದರೆ ಈಕೆಯೊಂದಿಗೆ ಯಾತ್ರೆ ಹೋಗಿ ಬಂದೆ. ಆಫ್​ಕೋರ್ಸ್, ನೀನು ನಿನ್ನ ಹೆಂಡತಿ ಮಕ್ಕಳೊಂದಿಗೆ ಮಾತು ಬಿಡಲಿಲ್ಲ. ಬೇಕಾದ್ದು ತಂದು ಹಾಕಿದೆ. ಕೇಳಿದ್ದು ಕೊಡಿಸಿದೆ. ಆದರೆ ಎಲ್ಲದರಲ್ಲೂ ನಿನಗೇ ಗೊತ್ತಿಲ್ಲದೆ ಒಂದು ಉದಾಸೀನತೆಯಿತ್ತು. ಐದು ವರ್ಷಗಳಲ್ಲಿ ಎಂಥವರನ್ನು ಬೇಕಾದರೂ ಕೊಂದುಬಿಡಬಹುದಾದಂಥ ನೆಗ್ಲಿಜೆನ್ಸ್!

ಈಗ ಐದು ದಿನದಿಂದ ಇವಳು ನೆಗ್ಲೆಕ್ಟ್ ಮಾಡ್ತಿದಾಳೆ ಅನ್ನೋ ಕಾರಣಕ್ಕೆ ಕಿರುಲಿಕೊಂಡು ಬಂದಿದೀಯ. ಇವತ್ತಾದರೂ ಮನೆಯ ಕಡೆಗೆ ತಿರುಗಿ ನೋಡು ಮಿತ್ರಾ. ಅವರು ಉಸಿರೆತ್ತದೆ, ತಕರಾರು ಮಾಡದೆ, ಏನನ್ನೂ ಕೇಳದೆ ಸುಮ್ಮನೆ ನಿನ್ನ ಪ್ರೀತಿಗೋಸ್ಕರ, ನಿನ್ನ ಅಟೆನ್ಷನ್​ಗೋಸ್ಕರ, ಒಂದು ಅಪ್ರಿಸಿಯೇಷನ್​ಗೋಸ್ಕರ ಐದು ವರ್ಷಗಳಿಂದ ಕಾಯುತ್ತಲೇ ಇದ್ದಾರೆ. ಹೋಗಿ ಮಾತನಾಡಿಸು. ಜೊತೆಗೆ ಕೂಡು. ಮಾರ್ಕ್ಸ್ ಕಾರ್ಡ, ಕ್ರೆಯಾನ್​ನಲ್ಲಿ ಬರೆದ ಚಿತ್ರ, ತಂದುಕೊಂಡ ಸರ್ಟಿಫಿಕೇಟು ಎಲ್ಲವನ್ನೂ ನೋಡು. ಸಾಧ್ಯವಾದರೆ ಮೆಚ್ಚುಗೆಯ ಮಾತಾಡು. ಮಕ್ಕಳು ಮಲಗಿದ ಮೇಲೆ ಸುಮ್ಮನೆ ಹೆಂಡತಿಯೊಂದಿಗಿರು. ನಂಗೊತ್ತು, ಮನಸಿಗೆ ಕಸಿವಿಸಿಯಾಗುತ್ತೆ. ಅವಳ ನೆನಪು ಕಾಡುತ್ತೆ. ನಿದ್ದೆ ಬಂದರೆ ಸಾಕೆನ್ನಿಸುತ್ತೆ.

ಆದರೂ ಸಹಿಸಿಕೋ. ಹೆಂಡತಿಯೊಂದಿಗೆ ಸುಮ್ಮನೆ ಮಾತಾಡು. ಆಕೆ ಕಷ್ಟ ಹೇಳಿಕೊಳ್ಳುವುದಿಲ್ಲ. ಐದು ವರ್ಷ ನೀನು ಮಾಡಿದ ಮೋಸಕ್ಕೆ, ವಂಚನೆಗೆ, ಉದಾಸೀನಕ್ಕೆ ಲೆಕ್ಕ ಕೇಳುವುದಿಲ್ಲ. ನೀನು ಮತ್ತೆ ಆಕೆಯಲ್ಲಿಗೆ ಮರಳಿದೆಯಲ್ಲ- ಅದಕ್ಕಾಗಿ ಸಂಭ್ರಮಿಸುತ್ತಾಳೆ. ಐದು ದಿನಗಳ ಕಾಲ ಈ ಹುಡುಗಿ ತೋರಿಸಿದ ನೆಗ್ಲಿಜೆನ್ಸು ನಿನ್ನನ್ನು ನೋಯಿಸಿದ್ದಕ್ಕಿಂತ, ಐದು ವರ್ಷಗಳ ನಂತರ ನೀನು ತೋರಿಸುತ್ತಿರುವ ಇಂಪಾರ್ಟೆನ್ಸು ನಿನ್ನ ಮನೆಯಾಕೆಯನ್ನು ಸಂತೋಷಪಡಿಸುತ್ತದೆ. ಇಷ್ಟು ದಿನ ಇನ್ನೊಬ್ಬರನ್ನು ನೋಯಿಸಿ ಆನಂದಪಟ್ಟೆ. ಇವತ್ತು ನಿನಗೆ ನೋವಾದರೂ ಸರಿಯೇ- ಮನೆಗೊಂದಿಷ್ಟು ಆನಂದ ಕೊಡು.

ನಾವೆಲ್ಲ ನೆಗ್ಲಿಜೆನ್ಸ್​ನ ಸೃಷ್ಟಿಗಳೇ. ಸುತ್ತಲಿನ ಸಮಾಜ ನನ್ನನ್ನು ವಿಧವೆಯ ಮಗ, ಬಡವರ ಮಗ ಎಂದು ತಾತ್ಸಾರದಿಂದ ನೋಡದೆ ಹೋಗಿದ್ದಿದ್ದರೆ ನನ್ನೊಳಗೊಬ್ಬ ಬರಹಗಾರ ಹುಟ್ಟುತ್ತಿರಲಿಲ್ಲ. ನನ್ನದೇನು ಕೇಳುತ್ತೀ? ನಾನೊಂದು ಕ್ರಿಮಿ. ಆಕೆಯ ಕುರೂಪ ತಂದಿಟ್ಟ ತಾತ್ಸಾರವೇ ಆಕೆಯನ್ನು ಮದರ್ ಥೆರೇಸಾಳನ್ನಾಗಿ ಮಾಡಿತು. ಆಫ್ರಿಕಾದಲ್ಲಿ ಬಿಳಿಯರ ನೆಗ್ಲಿಜೆನ್ಸನ್ನು ಭರಿಸಲಾಗದೆ ಮೋಹನದಾಸ್ ಕರಮಚಂದನಲ್ಲಿ ಗಾಂಧಿ ಹುಟ್ಟಿಕೊಂಡ. ಗುಂಪಿನೊಳಗೊಂದು ಅನಾದರದ ಮಗು: ಮುಂದೆ ಸುಭಾಷ್​ಚಂದ್ರ ಬೋಸ್ ಆಯಿತು.

ಗೆಳತಿಯ ನೆಗ್ಲಿಜೆನ್ಸು ನಿನ್ನೊಳಗೊಬ್ಬ ಗೃಹಸ್ಥನನ್ನಾದರೂ ಸೃಷ್ಟಿಸಲಿ. ಮುಂದೆ ಅವಳನ್ನು ಅದ್ಯಾರು ತಾತ್ಸಾರ ಮಾಡುತ್ತಾರೋ ಅವತ್ತು ಅವಳಲ್ಲೊಬ್ಬ ಗೃಹಿಣಿ ಹುಟ್ಟುತ್ತಾಳೆ. ಅವಳಿಗೆ ಶುಭ ಹಾರೈಸು; go back to your wife' ಅಂದೆ.

ಗೆಳೆಯ ಸಿಗರೇಟು ಮುಗಿಸಿ ಎದ್ದು ಹೋದ. ಬಹುಶಃ ಮನೆಗಿರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net