ಎಸ್ಕೇಪ್ ರೂಟು ಇಟ್ಟುಕೊಂಡೇ ಚಕ್ರವ್ಯೂಹಕ್ಕೆ ನುಗ್ಗಬೇಕು!: ನಮ್ಮನಮ್ಮಲ್ಲಿ ರವಿ ಬೆಳಗೆರೆ ಅಂಕಣ

Ravi belegare and Chakravyuha
Published on
ಅಂಥ ದೊಡ್ಡ ಚಕ್ರವ್ಯೂಹವೇನಲ್ಲ ಬಿಡಿ. ಆದರೆ ಥಟ್ಟನೆ ಹಿಂದಕ್ಕೆ ಬರೋಣವೆಂದರೆ, ಬರಲಿಕ್ಕೆ ದಾರಿ ಗೊತ್ತಾಗದ ಅಭಿಮನ್ಯು ಸ್ಥಿತಿ.

ಅಂಥದ್ದು ನಿಮ್ಮ ಅನುಭವಕ್ಕೂ ಬಂದಿರಲಿಕ್ಕೆ ಸಾಕು. ಒಂದು ಸಾಲ ಮಾಡುತ್ತೀರಿ. ಅಂದುಕೊಂಡ ಟೈಮಿಗೆ ತೀರಿಸಲಾಗುವುದಿಲ್ಲ. ಇನ್ನೊಂದು ಸಾಲ ಮಾಡುತ್ತೀರಿ. ಆದರೆ ಮೊದಲ ಸಾಲದಲ್ಲಿ ಅರ್ಧ ಮಾತ್ರ ತೀರಿಸುತ್ತೀರಿ. ಇನ್ನರ್ಧ ಬಳಸಿಕೊಳ್ಳುತ್ತೀರಿ. ತೀರ ಖಾಸಗಿ ಸಾಲದವರಿಗೆ ಆ ಪರಿ ಬಡ್ಡಿ ಕಟ್ಟುವುದಕ್ಕಿಂತ ಯಾವುದಾದರೊಂದು ಬ್ಯಾಂಕಿನಲ್ಲಿ ದೊಡ್ಡ ಮೊತ್ತ ಅಂತ ತಗೊಂಡು, ಅದನ್ನು ಸುಲಭದ ಕಂತುಗಳಲ್ಲಿ ತೀರಿಸುತ್ತ ಹೋದರಾಯಿತು ಅಂದುಕೊಂಡು ಅಕ್ಕನ ಗಂಡನದೋ, ಹೆಂಡತಿಯ ಅಪ್ಪನದೋ ಶೂರಿಟಿ ಹಾಕಿಸುತ್ತೀರಿ. ಅಂದುಕೊಂಡಷ್ಟು ಮೊತ್ತದ ಸಾಲ ಸಿಗುವುದಿಲ್ಲ. ಹಳೆಯ ಸಾಲಗಳ ಪೈಕಿ ಮೂರು ತೀರುತ್ತವೆ, ಎರಡು ಉಳಿಯುತ್ತವೆ. ಅವೆರಡಕ್ಕೂ ಬಡ್ಡಿ ಕಟ್ಟಿರುತ್ತೀರಿ. ಅಸಲು ಅಲ್ಲಾಡುವುದಿಲ್ಲ. ಇನ್ನೊಂದು ಸಾಲ ಎಲ್ಲಾದರೂ ಸಿಗುತ್ತಾ ಅಂತ ಕೈಚಾಚುತ್ತೀರಿ. ಒಂದು ಬೆಳಗ್ಗೆ ಎದ್ದು ಕೂತು ಎಷ್ಟು ಕಡೆ ಸಾಲವಿದೆ ಅಂತ ಲೆಕ್ಕ ಹಾಕುವ ಹಾಗಾಗುತ್ತದೆ. ಆ ಲೆಕ್ಕ ಹಾಕುವಾಗಲೇ ನಿಮಗೆ ಗೊತ್ತಾಗೋದು: ನೀವೀಗ ಅಭಿಮನ್ಯು!

ಸಾಲದ ಚಕ್ರವ್ಯೂಹದಿಂದ ಹೊರಬರಲಿಕ್ಕೆ ಅಷ್ಟೆಲ್ಲ ಮಾಡಿದ ನಂತರವೂ ಒಂದು ದಾರಿ ಅಂತ ಇಟ್ಟುಕೊಂಡಿರುತ್ತೀರಿ. ‘ತೀರ ಕುತ್ತಿಗ್ಗೆ ಬಂದ್ರೆ ಇರೋ ಜಮೀನು ಮಾರಿಬಿಡ್ತೀನಿ’ ಅಂದುಕೊಳ್ಳುತ್ತೀರಿ. ಕುತ್ತಿಗೆಗೆ ಬಂದೇ ಬರುತ್ತೆ. ಆದರೆ ಮಾರಲು ಹೋದರೆ ಜಮೀನು ಕೊಳ್ಳುವವರಿರುವುದಿಲ್ಲ. ಮಾಡಿದ ಸಾಲ ತೀರಿಸಿ ಅತ್ಲಾಗೆ ಕೈ ತೊಳೆದುಕೊಂಡು ನಿರಾಳವಾಗೋಣವೆಂದು ಪ್ರಾಮಾಣಿಕವಾಗಿ ಇಚ್ಛೆಪಟ್ಟರೂ ಚಕ್ರವ್ಯೂಹದಿಂದ ಹೊರಬರಲು

ಸಾಧ್ಯವಾಗುವುದಿಲ್ಲ. ಅಭಿಮನ್ಯು ಹೆಲ್ಪ್​ಲೆಸ್!

ಸಾಲದ್ದೊಂದೇ ಮಾತಲ್ಲ: ಸಂಬಂಧಗಳದೂ ಇದೇ ಕಥೆ. ಹಿಂದುಮುಂದು ಯೋಚನೆ ಮಾಡದೆ ಒಂದು ಸಂಬಂಧವನ್ನು ಅದೆಷ್ಟು ಗಾಢಗೊಳಿಸಿಕೊಂಡು ಬಿಟ್ಟಿರುತ್ತೇವೆಂದರೆ, ಆಮೇಲೆ ಅದು ಅಸಹನೀಯ ಅಸಹ್ಯ ಅನ್ನಿಸಿದರೂ ಅದರಿಂದ ಹೊರಬರಲಿಕ್ಕಾಗುವುದಿಲ್ಲ. ಪೂರ್ತಿಯಾಗಿ ಅವರ ಕೈಗೆ, ಅವರ ಕೃಪೆಗೆ ಸಿಕ್ಕು ಹಾಕಿಕೊಂಡು ಬಿಟ್ಟಿರುತ್ತೇವೆ. ಹೊರಬರಲು ದಾರಿಯೇ ಇರುವುದಿಲ್ಲ.

ಜಗಳಗಳೂ ಅಷ್ಟೆ. ನಮ್ಮದು ನೇರ ನುಡಿ. ನಿಷ್ಠುರ ಮಾತು. ಇಡೀ ಆಫೀಸು ಲಂಚ ತಿನ್ನುತ್ತಿರಬಹುದು. ನಾವು ನಿಷ್ಠರು. ಹಾಗಂತ ಅಂದುಕೊಂಡೇ, ಆ ಠಠ್ಟಿಛ್ಞಿಜಠಿಜನ ನಂಬಿಕೊಂಡೇ ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತೇವೆ. ಚಿಕ್ಕಪುಟ್ಟವರು ಸರಿ. ಮಹಾಬಲಿಷ್ಠರನ್ನೂ ಕೇರ್ ಮಾಡದೆ ಎದುರು ಹಾಕಿಕೊಂಡಿರುತ್ತೇವೆ. ಆ ಕ್ಷಣದ ವಿಜಯ ನಮಗೆ ಸಂತೋಷ ಕೊಟ್ಟಿರುತ್ತದೆ. ವಿಜೃಂಭಿಸಿರುತ್ತೇವೆ. ಆದರೆ ಒಂದು ಸಲ ಎಲ್ಲವೂ ತಿರುಗಿ ಬಿದ್ದುಬಿಡುತ್ತದೆ. ಪ್ರಾಮಾಣಿಕರಾಗಿದ್ದುದೇ ಮಹಾಪಾಪವೇನೋ ಎಂಬಂತೆ ಎಲ್ಲರೂ ಮೈಮೇಲೆ ಬೀಳುತ್ತಾರೆ. ಆ ಗಳಿಗೆಯಲ್ಲಿ, ಒಬ್ಬ ಅತ್ಯಂತ ಬಲಹೀನ, ಸಣ್ಣ ಸೈಜಿನ, ನಿಸ್ಸಹಾಯಕ ಲಂಚಕೋರ ಚಪರಾಸಿ ಕೂಡ ನಮ್ಮೆದುರು ರಾಕ್ಷಸನಾಗಿ ನಿಂತುಬಿಡುತ್ತಾನೆ. ತಪ್ಪಿಸಿಕೊಳ್ಳುವ ದಾರಿ ಯಾವುದೂ ಇರುವುದಿಲ್ಲ. ಅಭಿಮನ್ಯು ಈಸ್ ಹೋಪ್​ಲೆಸ್!

ಜಾಣರು ಇಂಥ ಕೆಲಸ ಮಾಡಿಕೊಳ್ಳುವುದಿಲ್ಲ. ಎಂಥ ಚಕ್ರವ್ಯೂಹಕ್ಕೆ ನುಗ್ಗಿದರೂ ಒಂದು ಎಸ್ಕೇಪ್ ರೂಟು, ಸೇಫ್ಟಿ ವಾಲ್ವ್ ಇಟ್ಟುಕೊಂಡಿರುತ್ತಾರೆ. ಅಂಥದೊಂದು ಜಾಣತನಕ್ಕೆ ಮುಖ್ಯವಾಗಿ ಬೇಕಾದದ್ದು ಆಯ್ಕೆಯ ಚಾತುರ್ಯ, ಹತ್ತು ಜನರನ್ನು ಎದುರು ಹಾಕಿಕೊಳ್ಳಬೇಕಾಗಿ ಬಂದಾಗ ಅವರಲ್ಲೊಬ್ಬ ಕಡಿಮೆ ಕೆಟ್ಟವನನ್ನ ಆದರೆ ಉಳಿದ ಒಂಬತ್ತೂ ಜನರನ್ನ ಸಂಭಾಳಿಸಬಲ್ಲವನನ್ನ ತಮ್ಮೊಂದಿಗಿಟ್ಟುಕೊಳ್ಳುತ್ತಾರೆ. ತೀರ ಅವನನ್ನೂ ಎದುರು ಹಾಕಿಕೊಳ್ಳಬೇಕಾಗಿ ಬಂದಾಗ ಯುದ್ಧವನ್ನು ಏಕಕಾಲಕ್ಕೆ ಎಲ್ಲರೊಂದಿಗೂ ಘೊಷಿಸದೆ ಹಂತಹಂತವಾಗಿ ಶತ್ರುವಿನ ಮೈಮೇಲೆ ಬೀಳುತ್ತಾರೆ. ಒಂದು ಸಲಕ್ಕೆ ಒಬ್ಬ ಶತ್ರುವಿನೊಂದಿಗೆ ಒಂದು ಯುದ್ಧ ಮಾಡಬೇಕು ಎಂಬುದು ನಿಜವಾದ ಯುದ್ಧನೀತಿ. ಎಲ್ಲರನ್ನೂ ಮೈಮೇಲೆ ಎಳೆದುಕೊಂಡವನು ಯೂಸ್​ಲೆಸ್ ಅಭಿಮನ್ಯು.

ಚಟಗಳಿರಲಿ, ಸಂಬಂಧಗಳಿರಲಿ, ಸಾಲವಿರಲಿ, ಯುದ್ಧವಿರಲಿ, ತಲುಪಬೇಕಾದ ಗಮ್ಯಗಳೇ ಇರಲಿ: ನುಗ್ಗುವ ಮುನ್ನ ಚಕ್ರವ್ಯೂಹಕ್ಕೊಂದು ಎಸ್ಕೇಪ್ ರೂಟ್ ಇದೆಯಾ ಅಂತ ಖಚಿತಪಡಿಸಿಕೊಳ್ಳಿ. ಈ ವಿಷಯದಲ್ಲಿ ಹುಂಬತನ ಬೇಡ. ಬಾವಿಗೆ ಧುಮುಕುವುದು ಸುಲಭ. ಆದರೆ ಮೆಟ್ಟಿಲಿಲ್ಲದ ಬಾವಿಯೊಳಗಿನಿಂದ ಹಗ್ಗದ ನೆರವೂ ಇಲ್ಲದೆ ಮೇಲಕ್ಕೆ ಹತ್ತಿ ಬರುವುದು ಅಸಾಧ್ಯ. ಒಂದು ವ್ಯಾಪಾರ ಯಶಸ್ವಿಯಾಯಿತು ಅಂದಕೂಡಲೆ ಏಕಕಾಲಕ್ಕೆ ಹತ್ತು ವ್ಯಾಪಾರಗಳನ್ನು ಆರಂಭಿಸಿಬಿಡೋದು, ಸಹಾಯಕರೇ ಇಲ್ಲದಂತೆ ಮಾಡಿಕೊಂಡು, ಎಲ್ಲವನ್ನೂ ನಾನೇ ಮಾಡುತ್ತೇನೆ ಅಂತ ಹೊರಟುಬಿಡೋದು, ಸಲಹೆ ಕೇಳುವುದಕ್ಕೂ ಒಬ್ಬ ಗೆಳೆಯನಿಲ್ಲದಂತೆ ಮಾಡಿಕೊಂಡುಬಿಡುವುದು, ಇವು ಜಾಣರ ವರ್ತನೆಗಳಲ್ಲ.

ಕೆಲವು ವ್ಯಕ್ತಿಗಳನ್ನು ಗಮನಿಸಿ ನೋಡಿ. ಇರುವ ಚಿಕ್ಕ ಊರಿನಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡಿರುತ್ತಾರೆ. ವಾಸಕ್ಕಿರುವ ಬೀದಿಯಲ್ಲಿ ಎಲ್ಲರ ಮನೆಗಳಲ್ಲೂ ಶತ್ರುಗಳೇ. ಅವರು ಪ್ರತಿಯೊಬ್ಬರ ವಿರುದ್ಧವೂ ಕದನಕ್ಕಿಳಿದಿರುತ್ತಾರೆ. ಒಬ್ಬರಲ್ಲ ಒಬ್ಬರು-ಬಿಡುವಿಲ್ಲದೆ ಬಡಿದಾಡಿರುತ್ತಾರೆ. ಹಾಗಂತ ಇವರು ಕೆಟ್ಟವರಾ? ಖಂಡಿತ ಅಲ್ಲ. ಇವರು ಎಸ್ಕೇಪ್ ರೂಟ್ ಸೃಷ್ಟಿಸಿಕೊಳ್ಳದ ಮೂರ್ಖ ಅಭಿಮನ್ಯುಗಳು. ತಾವು ಸಾಚಾಗಳು, ಒಳ್ಳೆಯವರು, ದುರಭ್ಯಾಸಗಳಿಲ್ಲದವರು: ಆದ್ದರಿಂದ ಉಳಿದೆಲ್ಲರೂ ಕೆಟ್ಟವರು, ಅಲ್ಪರು, ಹಾಳಾಗಿ ಹೋದವರು ಅಂದುಕೊಂಡು ಬಿಟ್ಟಿರುತ್ತಾರೆ. ತಮ್ಮ ಮಾತೇ ಪೆಡಸು, ದೃಷ್ಟಿಯೇ ಕ್ರುದ್ಧ, ತಾವಿರುವುದೇ ಹೀಗೆ-ಅನ್ನುವಂತೆ ಬದುಕುತ್ತಿರುತ್ತಾರೆ. ತೊಂದರೆಯಾಗುವುದೇ ಅವರಿಗೆ.

ನಿಷ್ಠುರತೆಗೆ ಯಾವತ್ತಿಗೂ ತೊಂದರೆ ತಪ್ಪಿದ್ದಲ್ಲ. ಸತ್ಯ ಹೇಳುವವನು ಎಲ್ಲರಿಗೂ ಸ್ನೇಹಿತನಾಗಲಾರ. ಶತ್ರುಗಳ ಸಂಖ್ಯೆಯೂ ಹೆಚ್ಚು. ಕಳ್ಳ ಎಲ್ಲರೊಂದಿಗೂ ಹೊಂದಿಕೊಳ್ಳುತ್ತಾನೆ. ಅವನ ಮಾತೇ ಬಲು ನಯ. ಸ್ವಲ್ಪ ಎಡವಟ್ಟಾದರೂ ಕಾಲಿಗೆ ಬೀಳುತ್ತಾನೆ. ಅವನು ಯಾವತ್ತಿಗೂ ಚಕ್ರವ್ಯೂಹಕ್ಕೆ ಸಿಲುಕಲಾರ. ತನ್ನದೇ ಆದ ಅರ್ಥದಲ್ಲಿ ಸುಖವಾಗಿಯೂ ಇರುತ್ತಾನೆ. ಆದರೆ ಅದು ಬದುಕಲ್ಲ. ಬದುಕಬೇಕಾದ ರೀತಿಯೂ ಅಲ್ಲ.

ನಿಯತ್ತಿನ ಬದುಕು ಬದುಕಲು ಹೊರಡುವವನಿಗೆ ಸೈನಿಕನ ಜಾಣ್ಮೆ ಇರಬೇಕು. ನುಗ್ಗಿ ಬಡಿಯುವುದು ಗೊತ್ತಿರುವಂತೆಯೇ, ಅವಶ್ಯಕತೆಯಿದ್ದಾಗ ತಗ್ಗಿ ನಡೆಯಲೂ ಗೊತ್ತಿರಬೇಕು. ಅನಿವಾರ್ಯವಾದಾಗ ಹಿಂದಕ್ಕೆ ಸರಿಯುವುದನ್ನೂ ರೂಢಿ ಮಾಡಿಕೊಳ್ಳಬೇಕು. ನೂರು ವರ್ಷಗಳ ಬದುಕು ಎಷ್ಟು ಸುದೀರ್ಘ ಮತ್ತು ಕ್ಷಣ ಕ್ಷಣಕ್ಕೂ ಎಷ್ಟು ವಿಭಿನ್ನ ಅಂದರೆ: ಇಂಥ ತಿರುವಿನಲ್ಲಿ ಹೀಗೇ ನಡೆದುಕೊಳ್ಳಬೇಕು ಅಂತ ಯಾರೂ ಯಾರಿಗೂ ಹೇಳಿಕೊಡಲು ಸಾಧ್ಯವಿಲ್ಲ. ಆದರೆ ಎಂಥ ತಿರುವಿನಲ್ಲೂ ಒಂದು ತಪ್ಪಿಸಿಕೊಳ್ಳುವ ದಾರಿ ಮಾಡಿಕೊಂಡಿರದಿದ್ದರೆ ಅಪಾಯ ತಪ್ಪಿದ್ದಲ್ಲ.

ಆದರೆ ತಪ್ಪಿಸಿಕೊಂಡು ನಡೆಯುವುದನ್ನೇ ಅಭ್ಯಾಸ ಮಾಡಿಕೊಂಡರೆ, ಅದು ಧೀರನ ನಡಿಗೆಯಲ್ಲ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net