ನಾಮವೊಂದೇ ಸಾಕಲ್ಲವೆ?: ಮನೋಲ್ಲಾಸ

Manollasa
Published on
| ನಾಗೇಶ ಜಿ. ವೈದ್ಯ

ಜೀವನದಲ್ಲಿ ಸಾಧನೆ ಮಾಡಲು, ಪರಮಗತಿಯನ್ನು ಪಡೆಯಲು, ದೇವರನ್ನು ಓಲೈಸಲು ಪೂಜೆ, ಪುನಸ್ಕಾರ, ಹೋಮ, ಹವನ, ಜಪ, ತಪಗಳನ್ನು ಮಾಡುವುದನ್ನು ಕಾಣುತ್ತೇವೆ. ಘೊರ ತಪಸ್ಸನ್ನು ಮಾಡುತ್ತಿದ್ದ ಋಷಿಮುನಿಗಳ ಬಗ್ಗೆಯೂ ಕೇಳಿದ್ದೇವೆ. ದೇವರನ್ನು ಒಲಿಸಿಕೊಳ್ಳಲು ಕೇವಲ ನಾಮಸ್ಮರಣೆ ಸಾಕೆನ್ನುತ್ತಿವೆ ಪುರಾಣಗಳು. ಮಹಾಭಾರತದಲ್ಲಿ ಅಜಮಿಳನ ಕತೆಯೊಂದಿದೆ. ಕನ್ಯಾಕುಬ್ಜವೆಂಬ ನಗರದಲ್ಲಿ ಸಂಸ್ಕಾರಿ ಕುಟುಂಬದಲ್ಲಿ ಹುಟ್ಟಿದ ಅಜಮಿಳ ಬಾಲ್ಯದಲ್ಲೇ ಆಳವಾದ ವೇದಾಧ್ಯಯನ ಮಾಡಿದವ. ಒಮ್ಮೆ ಪೂಜೆಗೆ ಹೂವನ್ನು ತರಲು ಹೊರಟಾಗ ವೇಶ್ಯೆಯೊಬ್ಬಳ ರೂಪಕ್ಕೆ ಮರುಳಾಗುತ್ತಾನೆ. ತನ್ನ ಸಂಸ್ಕಾರವನ್ನೇ ಮರೆಯುತ್ತಾನೆ. ಅವಳಲ್ಲಿ ಅನುರಕ್ತನಾಗಿ, ತನ್ನ ಮನೆಗೆ ಕರೆತರುತ್ತಾನೆ. ಇದನ್ನು ವಿರೋಧಿಸಿದ ತಂದೆ ಮತ್ತು ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕುತ್ತಾನೆ. ಪೂಜಾ ಪಾಠವನ್ನು ಬಿಟ್ಟು, ದರೋಡೆಕೋರನಾಗುತ್ತಾನೆ. ಆ ವೇಶ್ಯೆಯಿಂದ ಒಂಬತ್ತು ಮಕ್ಕಳನ್ನು ಪಡೆಯುತ್ತಾನೆ. ಒಮ್ಮೆ ಅವನ ಮನೆಗೆ ಬಂದ ಋಷಿಗಳ ಗುಂಪು ಇವನಿಂದ ಕೊಡುಗೆಯನ್ನು ಕೇಳುತ್ತಾರೆ. ತನ್ನಲ್ಲಿ ಏನೂ ಇಲ್ಲವೆಂದು ಅಜಮಿಳ ಹೇಳಿದಾಗ, ಆತನಿಗೆ ಮುಂದೆ ಹುಟ್ಟುವ ಮಗುವಿಗೆ ನಾರಾಯಣನೆಂದು ನಾಮಕರಣ ಮಾಡಿದರೆ, ಅದೇ ತಮಗೆ ಭಿಕ್ಷೆ ಎನ್ನುತ್ತಾರೆ ಋಷಿಗಳು. ಅಜಮಿಳ ಒಪ್ಪುತ್ತಾನೆ. ಹತ್ತನೇ ಮಗು ಹುಟ್ಟಿದಾಗ ಅವನಿಗೆ ನಾರಾಯಣ ಎಂದೇ ಹೆಸರಿಡುತ್ತಾನೆ. ಆತ ಇವನಿಗೆ ಅತ್ಯಂತ ಪ್ರೀತಿಯ ಮಗನಾಗುತ್ತಾನೆ. ಪ್ರತಿಕ್ಷಣವೂ ಅವನ ಹೆಸರು ಹಿಡಿದು ಕೂಗುವುದೆಂದರೆ, ಅಜಮಿಳನಿಗೆ ಎಲ್ಲಿಲ್ಲದ ಪುಳಕ!

ಅಜಮಿಳನ ಮುದಿ ವಯಸ್ಸಿನಲ್ಲಿ ಯಮದೂತರು ಬರುತ್ತಾರೆ. ಸ್ವತಃ ದರೋಡೆಕೋರನಾಗಿದ್ದರೂ, ಅವರ ಭಯಂಕರ ರೂಪ ನೋಡಿ, ಹೆದರಿದ ಅಜಮಿಳ ತನ್ನ ಮಗನನ್ನು ಕೂಗುತ್ತಾನೆ. ಅವರು ಕೊರಳಪಾಶವನ್ನು ಎಸೆದಾಗ, ವಿಷ್ಣುದೂತರೂ ಅಲ್ಲಿಗೆ ಬರುತ್ತಾರೆ. ಅಜಮಿಳನ ಜೀವ ತೆಗೆಯದಂತೆ ತಡೆಯುತ್ತಾರೆ. ಅಜಮಿಳನಿಗೆ ಅಚ್ಚರಿಯ ಜೊತೆ ತಾನೆಸಗಿದ ಕೆಟ್ಟ ಕಾರ್ಯಗಳ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಆತ ಪುನಃ ಮೊದಲಿನಂತೆ ಸಂಸ್ಕಾರಿಯಾಗುತ್ತಾನೆ. ಯಮದೂತರು ಯಮಲೋಕಕ್ಕೆ ಹಿಂದಿರುಗಿ, ವಿಷ್ಣುದೂತರು ತಮಗೆ ತಡೆಯೊಡ್ಡಿದ ವಿಚಾರವನ್ನು ಯಮಧರ್ಮನಿಗೆ ಹೇಳುತ್ತಾರೆ. ಯಮಧರ್ಮ ನಕ್ಕು ಆತ ಅದೆಷ್ಟು ಕೆಟ್ಟ ಕೆಲಸ ಮಾಡಿದರೂ ನಾರಾಯಣ ನಾಮ ಸ್ಮರಣೆಯಿಂದ ಅದಕ್ಕಿಂತ ಹೆಚ್ಚು ಪುಣ್ಯ ಗಳಿಸಿದ್ದಾನೆ. ಹಾಗಾಗಿ ಇನ್ನೂ ಕೆಲವು ಕಾಲ ಭೂಮಿಯಲ್ಲಿ ಇರಬಹುದು ಎನ್ನುತ್ತಾನೆ.

ಕಾಲಾನಂತರ ಯಮದೂತರು ಅವನಲ್ಲಿಗೆ ಬಂದಾಗ, ಅಜಮಿಳ ನಿಶ್ಚಿಂತನಾಗಿ ಅವರ ಜೊತೆ ತೆರಳುತ್ತಾನೆ. ಆದರೆ, ಈ ಬಾರಿ ಸ್ವರ್ಗದಲ್ಲಿ ಅವನಿಗಾಗಿ ನಾರಾಯಣನೇ ಕಾಯುತ್ತಿರುತ್ತಾನೆ. ನಮ್ಮ ದಾಸ ಪರಂಪರೆಯಲ್ಲಿ ಕೂಡ ಇದನ್ನೇ ಅಲ್ಲವೇ ಹೇಳಿರುವುದು? ಪುರಂದರದಾಸರಂತೂ ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ...ಎಂದು ತನ್ಮಯತೆಯಿಂದ ಹಾಡುವ ಮೂಲಕ ದೇವರಿಗಿಂತ ದೇವರ ನಾಮವೇ ಹೆಚ್ಚು ಪ್ರಭಾವಶಾಲಿ ಎಂದಿದ್ದಾರೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net