‘ಎದ್ದು ನಿಲ್ಲು ವೈನತೇಯ’ ಎಂಬ ಕೃಷ್ಣನುಡಿ ಈಗ ಬೇಕಿದೆ!

Edit 8
Published on
  • ನಾಗರಾಜ್ ಇಳೆಗುಂಡಿ

ಗೋಮಾಂತಕದ ಇಂಚಿಂಚೂ ಅವನಿಗೆ ಪರಿಚಿತ. ಒಂದೇ ಉಸಿರಿಗೆ ಎಷ್ಟು ದೂರ ಬೇಕಾದರೂ ಓಡಬಲ್ಲವನಾಗಿದ್ದ. ಆ ಪ್ರದೇಶದಲ್ಲಿ ತುಂಬಿಹೋಗಿದ್ದ ಎತ್ತೆತ್ತರದ ಬಂಡೆಗಳನ್ನು ಕ್ಷಣಾರ್ಧದಲ್ಲಿ ಏರಿ ನಗುಬೀರುತ್ತಿದ್ದ. ಬಂಡೆಯಿಂದ ಬಂಡೆಗೆ ಛಂಗನೆ ಜಿಗಿಯಬಲ್ಲವನಾಗಿದ್ದ. ಇದ್ದರೆ ಹೀಗಿರಬೇಕು ತರುಣರು ಎಂಬಂತೆ ಕಾಣುತ್ತಿದ್ದ. ಅವನ ಹೆಸರು ವೈನತೇಯ. ತಾಯಿಯ ಹೆಸರು ವಿನತೆ ಎಂದಾದ್ದರಿಂದ ಅವನಿಗೆ ಈ ಹೆಸರು. ಗರುಡ ಕುಲದ ನಾಯಕನ ಹಿರಿಯ ಮಗ. ಈ ಹಿರಿಮಗ ಕುಲದ ಕೀರ್ತಿ ಬೆಳಗುತ್ತಾನೆ ಎಂದು ತಂದೆತಾಯಿಗೆ ಖುಷಿಯೋ ಖುಷಿ. ಆದರೆ ಕೆಲ ದಿನಗಳ ಅಂತರದಲ್ಲಿ ಎಲ್ಲವೂ ಬದಲಾಗಿಹೋಯಿತು. ವೈನತೇಯನಿಗೆ ಒಮ್ಮೆ ತೀವ್ರವಾಗಿ ಜ್ವರ ಅಮರಿಕೊಂಡಿತು. ಅದು ಅಂತಿಂಥ ಜ್ವರವಲ್ಲ. ಅಂಥ ಮಹಾಚಟುವಟಿಕೆಯ ಯುವಗರುಡನೇ ಬಸವಳಿದ. ಕ್ರಮೇಣ ಜ್ವರವೇನೋ ವಾಸಿಯಾಯಿತು. ಆದರೆ ಅವನಿಗೆ ಪಾರ್ಶ್ವವಾಯು ಬಡಿದು ಹೆಳವನಾಗಿ ಹೋದ. ಅವನ

ಉತ್ಸಾಹದ ಬದುಕು ಕಮರಿಹೋಯಿತು. ಎಂಥ ಬಂಡೆಗಳನ್ನಾದರೂ ಏರಬಲ್ಲವನಾಗಿದ್ದ ವೈನತೇಯ ಈಗ ಓಡಾಡಲಾಗದೆ ಗುಡಿಸಲಿನಲ್ಲಿ ನಿಸ್ಸಹಾಯಕನಾಗಿ ಕಾಲ ಕಳೆಯುವಂತಹ ಸ್ಥಿತಿ ಬಂತು. ಗೋಮಾಂತಕವನ್ನೆಲ್ಲ ಸುತ್ತುತ್ತಿದ್ದ ಅತ ಈಗ ಹಾಸಿಗೆಯಲ್ಲೇ ತೆವಳುತ್ತಿರಬೇಕಾಯಿತು. ‘ದೇವರೇ ಏಕಿಂಥ ಗತಿ ತಂದೆ’ಎಂಬುದು ನಿತ್ಯರೋದನವಾಯಿತು.

ಗರುಡಕುಲದ ಆಶಾದೀಪ ಎನಿಸಿಕೊಂಡವ ಈಗ ತಾನೇ ಕತ್ತಲೆಯ ಕೂಪದಲ್ಲಿ ಬಿದ್ದಿದ್ದ. ಹೊರಗೆಲ್ಲ ವಾರಗೆಯವರು ಕುಣಿಯುವ, ಕೇಕೆಹಾಕುವ ಸದ್ದು ಕೇಳಿದಾಗೆಲ್ಲ ತನ್ನ ಮೇಲೇ ತನಗೆ ಅಸಹ್ಯವಾಗುತ್ತಿತ್ತು. ತಾನು ಸತ್ತುಹೋಗಬಾರದೆ ಎಂದು ಎಷ್ಟೋ ಸಲ ಅನಿಸುತ್ತಿತ್ತು. ಮಗ ಹೀಗಾದನಲ್ಲ ಎಂದು ತಂದೆಗೆ ಅಸಹನೆ. ಆತನತ್ತ ಬರುತ್ತಲೂ ಇರಲಿಲ್ಲ. ವೈನತೇಯನಿಗೆ ಆಸರೆ ಅಂತಿದ್ದುದು ತಾಯಿ ವಿನತೆಯೊಬ್ಬಳೇ. ಅವಳಾದರೂ ಏನು ಮಾಡಿಯಾಳು, ಮೌನವಾಗಿ ಕಣ್ಣೀರು ಸುರಿಸುವುದನ್ನು ಬಿಟ್ಟು? ಹೀಗಿರುವಾಗ, ಒಮ್ಮೆ ಕೃಷ್ಣ-ಬಲರಾಮರು ಅಲ್ಲಿಗೆ ಬರುವುದೆಂದು ನಿರ್ಧಾರವಾಯಿತು. ಗೋಮಾಂತಕದ ತುಂಬೆಲ್ಲ ಅದೇ ಸುದ್ದಿ. ತನ್ನ ಗುಡಿಸಲಿನ ಹೊರಗೆ ಈ ಬಗ್ಗೆ ಮಾತಾಡಿಕೊಳ್ಳುವುದು ವೈನತೇಯನಿಗೂ ಕೇಳಿಸುತ್ತಿತ್ತು. ಅವರು ಬಂದೇಬಿಟ್ಟರು. ಎಲ್ಲೆಲ್ಲೂ ಹರ್ಷದ ಹೊನಲು. ಆ ದಿನ ಮಗನಿಗೆ ಅನ್ನ ನೀಡಲು ಬಂದ ವಿನತೆ ಹೇಳಿದಳು- ‘ಇಲ್ಲಿಗೆ ಬಂದಿದ್ದಾರಲ್ಲ, ಆ ಇಬ್ಬರೂ ಬಹಳ ಅದ್ಭುತದವರು. ಹಿರಿಯವ ದೊಡ್ಡ ಶರೀರದವ. ಚಿಕ್ಕವನಿದ್ದಾನಲ್ಲ, ಅವನಂಥ ವ್ಯಕ್ತಿಯನ್ನು ನೋಡೇ ಇಲ್ಲ. ಎಂಥ ಚೆಲುವ! ಅವನು ದೇವರೇ ಇರಬೇಕೆಂದು ಎಲ್ಲರೂ ಹೇಳುತ್ತಾರೆ.’ ವೈನತೇಯನಿಗೆ ಭರವಸೆಯ ಬೆಳಕೊಂದು ಚಿಮ್ಮಿದಂತಾಯಿತು. ತಾನೂ ಆ ದೇವರಂಥ ಚೆಲುವನನ್ನು ಒಮ್ಮೆ ಭೇಟಿ ಮಾಡಲು ಸಾಧ್ಯವಾದರೆ ಈ ಜನ್ಮಕ್ಕೆ ಅಂಟಿಕೊಂಡ ಹೆಳವತನವನ್ನು ಹೋಗಿಸುತ್ತಾನೋ ಎಂಬ ದೂರದ ಆಸೆ...

ದೂರದಲ್ಲಿ ಸಮುದ್ರದಂಚಿನಲ್ಲಿ, ಕೋಡುಗಲ್ಲಿನ ಮೇಲೆ ಅವರಿಗೆ ಉಳಿಯಲು ವ್ಯವಸ್ಥೆ ಮಾಡಿದ್ದಾರೆ ಎಂದು ತಾಯಿ ಹೇಳಿದ್ದಳು. ಆದರೆ ಈ ತ್ರಾಣವಿಲ್ಲದ ದೇಹವನ್ನು ಎಳೆದುಕೊಂಡು ಅಷ್ಟು ದೂರ ಹೋಗಲು ಸಾಧ್ಯವೇ ಎಂದು ಒಂದು ಕ್ಷಣ ನಿರಾಸೆಯಾಯಿತು ವೈನತೇಯನಿಗೆ. ಆ ದಿನ ರಾತ್ರಿಯಾಯಿತು. ಆ ದೇವರಂಥವನನ್ನು ನೋಡಲೇಬೇಕು ಎಂಬ ಬಯಕೆಯನ್ನು ನಿಗ್ರಹಿಸಲಾಗಲಿಲ್ಲ. ಗುಡಿಸಲಿಂದ ಹೊರಗೆ ಸಾಗಿದ. ಎಲ್ಲರೂ ನಿದ್ರೆಯಲ್ಲಿದ್ದರು. ಇವನಿಗೆ ಮಾತ್ರ ಬದುಕಬೇಕೆಂಬ ಎಚ್ಚರ. ತೆವಳಿಕೊಂಡೇ ಹೊರಟ. ಬದುಕಿನ ಬೆಳಕು ಅರಸಿಹೊರಟವನಿಗೆ ಆಗಸದ ಚಂದಿರನೇ ದಾರಿತೋರಿದ. ದಾರಿಯಲ್ಲಿ ಸಾಗುವಾಗ ಮೈಯೆಲ್ಲ ತರಚು ಗಾಯ. ರಕ್ತ ಒಸರುತ್ತಿತ್ತು. ಯಾವುದೂ ಲೆಕ್ಕಕ್ಕಿಲ. ಕಲ್ಪನೆಯಲ್ಲಿ ನೂರೆಂಟು ಕನಸು ತುಂಬಿದ ಕೃಷ್ಣನೊಂದೇ ವೈನತೇಯನ ಗಮ್ಯ. ಅಂತೂ ಕೋಡುಗಲ್ಲಿನ ಸನಿಹ ಬಂದೇಬಿಟ್ಟ. ಅದರ ಮೇಲೇರಲು ಹರಸಾಹಸ ಮಾಡಿ ಬಿದ್ದುಬಿಟ್ಟ. ಪ್ರಜ್ಞೆತಪ್ಪಿತು. ಎಚ್ಚರವಾದಾಗ ಯಾರೋ ಗಾಯ ತೊಳೆದು, ಮೈಯನ್ನು ನೇವರಿಸುತ್ತಿದ್ದರು. ವೈನತೇಯ ಕಣ್ಣುಬಿಟ್ಟ. ಒಹ್, ಎದುರಿಗೆ ಚೆಲುವಿನ ಪುತ್ಥಳಿ. ಕರುಣಾಮೂರ್ತಿ. ಇವನೇ ದೇವರು. ಸಂಶಯವಿಲ್ಲ! ವೈನತೇಯ ಕೃಷ್ಣನ ಪಾದವನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರಿನಿಂದ ತೋಯಿಸಿಬಿಟ್ಟ.

ಕೃಷ್ಣ ಹೇಳಿದ- ‘ವೈನತೇಯ ಎದ್ದು ನಿಲ್ಲು.’ ವೈನತೇಯ ಅಸಹಾಯಕತೆಯಿಂದ ತನ್ನ ಕಾಲುಗಳತ್ತ ನೋಡಿದ. ಈ ದೇಹ ಎದ್ದುನಿಲ್ಲಲು ಸಾಧ್ಯವೇ ಎಂಬ ಅಳುಕು, ಹಿಂಜರಿಕೆ. ಆದರೆ... ಕೃಷ್ಣ ಹೇಳುತ್ತಿದ್ದಾನೆ, ನಿರಾಕರಿಸಲಾದೀತೆ? ವೈನತೇಯ ಕೃಷ್ಣನನ್ನೇ ಆಸರೆಯಾಗಿಸಿಕೊಂಡು ಎದ್ದು ನಿಲ್ಲಲೆತ್ನಿಸಿದ. ಎದ್ದು ನಿಂತೇಬಿಟ್ಟ. ಮತ್ತೆ ಕೃಷ್ಣನ ಸೂಚನೆ- ‘ನನ್ನ ಜತೆ ಹೆಜ್ಜೆ ಹಾಕು.’ ವೈನತೇಯ ಹೆಜ್ಜೆ ಮುಂದಿಟ್ಟ. ಏನಾಶ್ಚರ್ಯ. ಪವಾಡವೇ ನಡೆಯಿತು. ವರ್ಷಗಳ ಕಾಲ ನಡೆಯಲು ಆಗದೆ ಮೂಲೆಯಲ್ಲಿ ಮುದುರಿಕೊಂಡು ಬದುಕುತ್ತಿದ್ದ ವೈನತೇಯ ಇದ್ದಕ್ಕಿದ್ದಂತೆ ಹೊಸ ಬದುಕಿನತ್ತ ಮುಖಮಾಡಿದ್ದ- ಕೃಷ್ಣನ ಆಸರೆಯಲ್ಲಿ, ಕೃಷ್ಣನ ಕರುಣೆಯ ಬೆಳಕಿನಲ್ಲಿ. ಗರುಡಸಂಕುಲ ಖುಷಿಯಿಂದ ನಿಂತಲ್ಲೇ ನೆಗೆಯಿತು...

***

ಅಂದಿನ ವೈನತೇಯನಂತೆ ಇಂದಿನ ಎಷ್ಟೋ ಮಂದಿ ತರುಣರು ಕರೊನಾ ಮಹಾಮಾರಿಯ ದೆಸೆಯಿಂದಾಗಿ ಸಂಕಟ ಅನುಭವಿಸುತ್ತಿದ್ದಾರೆ; ಎಷ್ಟೋ ಮಂದಿ ಜೀವಚೆಲ್ಲಿದ್ದಾರೆ. ಇಂದು ನಗುನಗುತ್ತ ಇದ್ದ ಮೂವತ್ತು-ನಲವತ್ತು ವಯಸ್ಸಿನವರು ನಾಳೆಯಾಗುವಷ್ಟರಲ್ಲಿ ಸಾವಿನಮನೆ ಸೇರುವುದೆಂದರೇನು?! ಈ ಕರೊನಾ ಎರಡನೆಯ ಅಲೆ ಜನಮಾನಸದಲ್ಲಿ ಒಂದು ಬಗೆಯ ಭೀತಿಯ ಅಲೆಯನ್ನು ಎಬ್ಬಿಸಿರುವುದು ಸುಳ್ಳಲ್ಲ. ಮೊದಲನೆಯ ಅಲೆಯಲ್ಲಿ ಇಂಥ ಹೆದರಿಕೆ ಕಂಡುಬರುತ್ತಿರಲಿಲ್ಲ. ಈಗ ಹಾಗಲ್ಲ. ಮನೆಮನೆಯನ್ನೂ ಪ್ರವೇಶಿಸಿದೆ ಈ ಹೆಮ್ಮಾರಿ. ತಂದೆಯನ್ನು ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ಪಾಲಕರು, ಪತಿಯನ್ನು ಕಳೆದುಕೊಂಡ ಪತ್ನಿ, ಪತ್ನಿಯ ಅಂತ್ಯಕ್ರಿಯೆಯನ್ನೂ ಸರಿಯಾಗಿ ನಡೆಸಲಾಗಲಿಲ್ಲವಲ್ಲ ಎಂದು ಕೊರಗುತ್ತಿರುವ ಗಂಡ... ಛೇ! ಎಷ್ಟೆಲ್ಲ ದುರಂತದ ಚಿತ್ರಗಳು ದಿನದಿನವೂ ಅನಾವರಣಗೊಳ್ಳುತ್ತಿವೆ. ಇವನ್ನೆಲ್ಲ ಅರಗಿಸಿಕೊಳ್ಳುವುದಾದರೂ ಹೇಗೆ? ಹೀಗಾಗಿ ಜನರು ಕರೊನಾವನ್ನು ಔಷಧಗಳ ಮೂಲಕ, ಮುನ್ನೆಚ್ಚರಿಕೆಗಳ ಮುಖಾಂತರ ಎದುರಿಸುವುದು ಒಂದು ಕಡೆಯಾದರೆ, ಧೈರ್ಯ ಕಳೆದುಕೊಳ್ಳದಂತೆ ಜನರಲ್ಲಿ ವಿಶ್ವಾಸ ತುಂಬುವ ದೊಡ್ಡ ಸವಾಲು ಕೂಡ ಈಗ ಇದೆ.

ಖ್ಯಾತ ಹೃದಯತಜ್ಞ ಡಾ.ದೇವಿ ಶೆಟ್ಟಿ ಅವರು, ಕರೊನಾ ಎರಡನೆಯ ಅಲೆಯಿಂದಾಗಿ ಉದ್ಭವಿಸಿರುವ ವೈದ್ಯಕೀಯ ತುರ್ತಿನ ಬಗ್ಗೆ ಗಮನ ಸೆಳೆದಿದ್ದಾರೆ. ಅವರು ಹೇಳುವ ಪ್ರಕಾರ, ಕರೊನಾ ಕೇಸುಗಳು ಹೆಚ್ಚುತ್ತಲೇ ಇರುವುದರಿಂದ ಇದರ ವಿರುದ್ಧ ಸೆಣೆಸಲು ಇನ್ನೂ ಅಪಾರ ಪ್ರಮಾಣದಲ್ಲಿ ವೈದ್ಯರು, ನರ್ಸ್​ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ವೈದ್ಯಕೀಯ ತಂತ್ರಜ್ಞರು ಬೇಕಾಗುತ್ತಾರೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಕನಿಷ್ಠ 2 ಲಕ್ಷ ನರ್ಸ್​ಗಳು ಮತ್ತು 1.5 ಲಕ್ಷ ವೈದ್ಯರು ಬೇಕಾಗುತ್ತಾರೆ ಎಂದು ಅವರು ಅಂದಾಜಿಸುತ್ತಾರೆ. ಇಲ್ಲವಾದಲ್ಲಿ ಈ ಸಮರವನ್ನು ಪರಿಣಾಮಕಾರಿಯಾಗಿ ಮುಂದುವರಿಸುವುದು ಕಷ್ಟ. ಏಕೆಂದರೆ, ಈ ಎರಡನೆಯ ಅಲೆಯಲ್ಲಿ ಹೆಚ್ಚೆಚ್ಚು ಜನರಿಗೆ ಆಮ್ಲಜನಕ ಮತ್ತು ಐಸಿಯು ಬೆಡ್ ಅಗತ್ಯವಾಗುತ್ತಿದೆ. ಇನ್ನೊಂದೆಡೆ, ಮಧ್ಯಪ್ರಾಚ್ಯದಂತಹ ದೇಶಗಳಲ್ಲಿ ತರಬೇತಾದ ನರ್ಸ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭಾರತದಂತಹ ಬೃಹತ್ ದೇಶದಲ್ಲಿ ಇದ್ದಕ್ಕಿದ್ದಂತೆ ಉದ್ಭವಿಸುವ ವೈದ್ಯಕೀಯ ತುರ್ತು ಅಗತ್ಯಗಳನ್ನು ಪೂರೈಸುವುದು ಸುಲಭವಲ್ಲ. ‘ಏನ್ ಮಾಡ್ತಾರ್ರೀ ಈ ಸರ್ಕಾರಗಳವರು. ಜನರ ಬಗ್ಗೆ ಕಾಳಜಿಯಿಲ್ಲವಾ? ಒಂದು ವ್ಯವಸ್ಥೆ ಮಾಡಲಿಕ್ಕಾಗಲ್ವಾ?’ ಎಂದು ನಾವು ಸರ್ಕಾರಗಳಿಗೆ ಎಷ್ಟೇ ಬೈಯಬಹುದು, ಕ್ರಮ ಕೈಗೊಂಡಿಲ್ಲವೆಂದು ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸಬಹುದು. ಇದರಲ್ಲಿ ಕೆಲಮಟ್ಟಿಗೆ ಸತ್ಯವೂ ಇದೆ. ಆದರೆ ಸರ್ಕಾರಿ ವ್ಯವಸ್ಥೆ ಕೂಡ ಒಂದೂವರೆ ವರ್ಷದಿಂದ ಹೆಣಗಾಡಿ ಕೈಸೋಲುತ್ತಿದೆ ಎಂಬುದನ್ನು ಮರೆಯಬಾರದು. ಕರೊನಾ ವಾರಿಯರ್​ಗಳೂ ಹೈರಾಣಾಗಿದ್ದಾರೆ. ಆರೋಗ್ಯ ಸವಲತ್ತು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿರುವುದನ್ನೂ ಸಾರಾಸಗಟಾಗಿ ಅಲ್ಲಗಳೆಯಲಾಗದು.

ಕರೊನಾ ಎರಡನೆಯ ಅಲೆ ಬರುತ್ತದೆ ಎಂದು ತಜ್ಞರು ಮೊದಲೇ ಎಚ್ಚರಿಸಿದ್ದರು ಎಂಬುದು ನಿಜ. ಆದರೆ ಕೆಲವರು ಹೇಳುವ ಪ್ರಕಾರ, ಈ ಅಲೆ ಇಷ್ಟು ವೇಗವಾಗಿ ಪಸರಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್ ಅವರೂ ಈ ಮಾತನ್ನು ಒಪು್ಪತ್ತಾರೆ.

ದೇಶದ ಒಳಗಿನ ಮತ್ತು ವಿದೇಶಗಳ ತಜ್ಞರು ಯಾರೂ ಇಷ್ಟು ತೀವ್ರತೆಯ ಅಪ್ಪಳಿಸುವಿಕೆಯನ್ನು ಅಂದಾಜು ಮಾಡಿರಲಿಲ್ಲ. ಐಎಚ್​ಎಂಇ (ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಇವ್ಯಾಲುಯೇಶನ್ ಅಟ್ ದಿ ಯುನಿವರ್ಸಿಟಿ ಆಫ್ ವಾಷಿಂಗ್ಟನ್) ಮತ್ತು ಎಲ್​ಎಎನ್​ಎಲ್ (ಅಮೆರಿಕದ ಲಾಸ್ ಅಲ್ಮೋಸ್ ನ್ಯಾಷನಲ್ ಯುನಿವರ್ಸಿಟಿ)ಯವರು ಕೂಡ ಇಷ್ಟು ತೀವ್ರವಾಗಿ ಎರಡನೇ ಅಲೆ ಹರಡುತ್ತದೆ ಎಂದು ಊಹಿಸಿರಲಿಲ್ಲ ಎಂದು ಅವರು ಬೊಟ್ಟುಮಾಡುತ್ತಾರೆ. ಎರಡನೆಯ ಅಲೆ ಈ ಪರಿ ಹೊಡೆತ ನೀಡಲು ನಿರ್ದಿಷ್ಟ ಕಾರಣಗಳೇನು ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಜನರ ವರ್ತನೆ, ಜನಸಂಖ್ಯಾ ಬಾಹುಳ್ಯ ಮತ್ತು ಕರೊನಾ ವೈರಾಣುವಿನ ಹೊಸ ರೂಪಾಂತರಗಳು ತೀವ್ರತೆಗೆ ಕಾರಣವಾಗಿರಬಹುದು ಎಂದು ವಿಜಯ ರಾಘವನ್ ಅವರು ಮೂರು ಕಾರಣಗಳನ್ನು ಪಟ್ಟಿಮಾಡುತ್ತಾರೆ.

ಈಗ ದೇಶದಲ್ಲಿ ಒಂದು ಬಗೆಯ ವೈದ್ಯಕೀಯ ಎಮರ್ಜೆನ್ಸಿ ನಿರ್ವಣವಾಗಿದೆ. ಎಲ್ಲಿ ನೋಡಿದರೂ ಆಕ್ಸಿಜನ್, ಐಸಿಯು, ರೆಮ್ೆಸಿವಿರ್ ಇತ್ಯಾದಿಯದೇ ಮಾತು. ‘ಹಾಗಂತ ಈಗಿನ ಅಗತ್ಯ ಏನಿದೆ ಅದಕ್ಕೆ ಸಾಕಾಗುವಷ್ಟು ವೈದ್ಯಕೀಯ ಸವಲತ್ತುಗಳನ್ನು ಒಂದು ವರ್ಷದೊಳಗೆಯೇ ಮೇಲ್ದರ್ಜೆಗೇರಿಸುವುದು ಹೇಳಿದಷ್ಟು ಸುಲಭವಲ್ಲ. ಮೊದಲನೆಯ ಅಲೆಯ ಕಾಲಘಟ್ಟದಲ್ಲಿನ ಪರಿಸ್ಥಿತಿ ಈಗ ಇದ್ದಿದ್ದರೆ ಹೇಗೋ ನಿಭಾಯಿಸಬಹುದಾಗಿತ್ತು’ ಎಂದು ವಿಜಯ ರಾಘವನ್ ಅವರು ವಾಸ್ತವ ಚಿತ್ರಣವನ್ನು ಮುಂದಿಡುತ್ತಾರೆ.

ಇನ್ನು, ಮೂರನೆಯ ಅಲೆ ಕೂಡ ಪಕ್ಕಾ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. 18 ವರ್ಷದ ಒಳಗಿನವರಿಗೆ ಈಗ ವ್ಯಾಕ್ಸಿನ್ ನೀಡುತ್ತಿಲ್ಲವಾದ್ದರಿಂದ ಆ ವಯೋಮಾನದವರು ಮೂರನೆಯ ಅಲೆಯ ಬಲೆಗೆ ಹೆಚ್ಚು ಸಿಲುಕಬಹುದು ಎಂಬ ಮುನ್ಸೂಚನೆಯನ್ನೂ ತಜ್ಞರು ನೀಡಿದ್ದಾರೆ. ಪರಿಸ್ಥಿತಿಯ ಮೇಲೆ ನಿರಂತರ ನಿಗಾ, ಜನರ ವರ್ತನೆಯಲ್ಲಿ ಬದಲಾವಣೆ ಮತ್ತು ಕರೊನಾ ಲಸಿಕೆಯನ್ನು ಹೆಚ್ಚೆಚ್ಚು ಜನರಿಗೆ ನೀಡುವುದು- ಈ ಮುಂತಾದ ಕ್ರಮಗಳು ಮೂರನೆಯ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಕಾರಿ ಎಂದು ಅವರು ಸಲಹೆ ನೀಡುತ್ತಾರೆ.

ಹೀಗಾಗಿ, ನಾಳೆಯ ಬಗ್ಗೆ ಒಂದು ಭರವಸೆ ಇಟ್ಟುಕೊಂಡೇ ವೈರಸ್ ಯುದ್ಧಕ್ಕೆ ತಯಾರಾಗಬೇಕಾದುದು ಅನಿವಾರ್ಯ ಎಂಬಂತೆ ತೋರುತ್ತಿದೆ. ಒಂದಂತೂ ಖರೆ, ಇದು ಬೇಗನೆ ಮುಗಿಯುವ ಸಮರವಂತೂ ಅಲ್ಲ! ಇದರಲ್ಲಿ ಸರ್ಕಾರ ಸೇನಾನಾಯಕನ ಪಾತ್ರ ವಹಿಸಬಹುದು. ಆದರೆದೇಶದ 130 ಕೋಟಿ ಜನರೂ ಸೈನಿಕರೇ!

ಕೊನೇ ಮಾತು: ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಕರೊನಾ ನಡುವೆಯೂ ಭರವಸೆ, ಆಶಾವಾದ ತುಂಬಬಲ್ಲ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂಕಷ್ಟದ ದಿನಗಳಲ್ಲಿ ಇಂಥ ಮಾತುಗಳು ತುಸು ನೆಮ್ಮದಿ ನೀಡಬಲ್ಲವು.

‘ನೀವು ಯಾಕೆ ಚಿಂತೆ ಮಾಡುತ್ತೀರಿ/ಎಲ್ಲವನ್ನೂ ಲಾಕ್ ಮಾಡಿಲ್ಲ/ಸೂರ್ಯೋದಯವನ್ನು ಲಾಕ್ ಮಾಡಿಲ್ಲ/ಪ್ರೀತಿಯನ್ನು ಲಾಕ್ ಮಾಡಿಲ್ಲ/ಕುಟುಂಬದ ಸಮಯವನ್ನು ಲಾಕ್ ಮಾಡಿಲ್ಲ/ದಯೆ ಲಾಕ್ ಆಗಿಲ್ಲ/ಸೃಜನಶೀಲತೆಯನ್ನು ಲಾಕ್ ಮಾಡಿಲ್ಲ/ಕಲಿಕೆ ಲಾಕ್ ಆಗಿಲ್ಲ/ ಸಂಭಾಷಣೆಯನ್ನು ಲಾಕ್ ಮಾಡಲಾಗಿಲ್ಲ/ಕಲ್ಪನೆಯನ್ನು ಲಾಕ್ ಮಾಡಿಲ್ಲ/ಓದುವಿಕೆ ಲಾಕ್ ಆಗಿಲ್ಲ/ಸಂಬಂಧವನ್ನು ಲಾಕ್ ಮಾಡಿಲ್ಲ/ಪ್ರಾರ್ಥನೆ ಲಾಕ್ ಆಗಿಲ್ಲ/ಧ್ಯಾನವನ್ನು ಲಾಕ್ ಮಾಡಿಲ್ಲ/ನಿದ್ರೆ ಲಾಕ್ ಆಗಿಲ್ಲ/ಮನೆಯಿಂದ ಕೆಲಸ ಲಾಕ್ ಆಗಿಲ್ಲ/ಭರವಸೆ ಲಾಕ್ ಆಗಿಲ್ಲ’. ಹೌದಲ್ಲವೆ? ಲಾಕ್ ಆಗದ ಎಷ್ಟೋ ಸಂಗತಿಗಳು ನಮ್ಮೆದುರಲ್ಲೇ ಇವೆ. ಅಥವಾ ನಮ್ಮೊಳಗೇ ಇದೆ. ಅದನ್ನು ಗುರುತಿಸಲು ಮನಸ್ಸಿನ ಲಾಕ್ ತೆಗೆಯಬೇಕಷ್ಟೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net