

ಜ್ಞಾನದ ಬೆಳಕು ತೋರಿ ಭಕ್ತರ ಬದುಕನ್ನು ಬೆಳಗಿಸಿದ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳು ಕನ್ನಡನಾಡಿನ ಶ್ರೇಷ್ಠ ಯೋಗಪುರುಷ. ಯೋಗ ಮತ್ತು ನಿಸರ್ಗಚಿಕಿತ್ಸೆಯ ಮೂಲಕ ಶಾರೀರಿಕ ರೋಗ ಕಳೆದ ಸಿದ್ಧಿಪುರುಷರು.
1910ರಲ್ಲಿ ಬೀದರ್ ಜಿಲ್ಲೆಯ ಅವಿಭಜಿತ ಬಸವಕಲ್ಯಾಣ ತಾಲೂಕಿನ ಮುಚಳಂಬ ಗ್ರಾಮದಲ್ಲಿ ರಾಮಶೆಟ್ಟೆಪ್ಪ-ನಿಂಬೆವ್ವ ದಂಪತಿ ಪುತ್ರರಾಗಿ ಜನಿಸಿದ ನಾಗಭೂಷಣ ಶಿವಯೋಗಿಗಳು ಬಾಲ್ಯದಲ್ಲೇ ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡಿದ್ದರು.
16ನೇ ವಯಸ್ಸಿನಲ್ಲಿಯೇ ಲೌಕಿಕದಿಂದ ವಿಮುಖರಾಗಿ ಶ್ರೀಶೈಲ ಮತ್ತು ಕದಳೀವನದಲ್ಲಿ ತಪಸ್ಸು ಮಾಡಿದರು. ಹಿಮಾಲಯದತ್ತ ತೆರಳಿ ಯೋಗಸಿದ್ಧಿ ಪಡೆದರು. ಅಧ್ಯಾತ್ಮಜ್ಞಾನ, ಯೋಗಸಾಧನೆಗಳು ಸಮಾಜೋದ್ಧಾರಕ್ಕೆ ಬಳಕೆಯಾಗಲಿ ಎಂಬ ಸಂಕಲ್ಪದಿಂದ ಅಧ್ಯಾತ್ಮಜ್ಞಾನ ಹಂಚುತ್ತ, ಯೋಗದ ಶಿಕ್ಷಣ ನೀಡುತ್ತ ಭಕ್ತರ ಕಷ್ಟಗಳ ನಿವಾರಿಸತೊಡಗಿದರು.
ಅಧ್ಯಾತ್ಮದ ಮೂಲಕ ಮನಸ್ಸಿನ ರೋಗವನ್ನು ಕಳೆದ ಶಿವಯೋಗಿಗಳು, ಯೋಗ ಮತ್ತು ನಿಸರ್ಗ ಚಿಕಿತ್ಸೆಯಿಂದ ಅದೆಷ್ಟೋ ಜನರಿಗೆ ಮರುಜನ್ಮ ಕಲ್ಪಿಸಿಕೊಟ್ಟಿದ್ದರು. ವರ್ಷದ ಕೆಲವು ದಿನ ಮಾತ್ರ ಮುಚಳಂಬದಲ್ಲಿ ಇರುತ್ತಿದ್ದ ಶಿವಯೋಗಿಗಳದು ಸದಾ ದೇಶಸಂಚಾರ. ಗುರುಗಳು ಬಂದಿದ್ದಾರೆ ಎಂದು ಗೊತ್ತಾಗುತ್ತಲೇ ಗ್ರಾಮದವರಷ್ಟೇ ಅಲ್ಲ, ದೂರದೂರದ ಊರುಗಳಿಂದ ಭಕ್ತರು ಧಾವಿಸಿ ಬರುತ್ತಿದ್ದರು. ಊರ ಮುಂದಿನ ಪೂಜ್ಯರ ತೋಟದಲ್ಲಿನ ಗವಿಯ ಬಳಿ ತಮ್ಮ ಗುಡಿಸಲು ಹಾಕಿಕೊಂಡು ಶಿವಯೋಗಿಗಳ ಜತೆಗೆ ಉಳಿದು ನಿರೋಗಿಗಳಾಗಿ ಮರಳುತ್ತಿದ್ದರು. ಇಲ್ಲಿ ಚಿಕಿತ್ಸೆ ಪಡೆದವರು ಇಂದಿಗೂ ಅರೋಗ್ಯದಿಂದ ಬದುಕುತ್ತಿದ್ದು, ಶಿವಯೋಗಿಗಳ ಅಧ್ಯಾತ್ಮ ಮತ್ತು ಯೋಗಶಕ್ತಿಯನ್ನು ಬಣ್ಣಿಸುತ್ತಾರೆ. ಅವರು ಜನಕಲ್ಯಾಣಕ್ಕಾಗಿ ಜೀವನ ಸವೆಸಿದ್ದರಿಂದ ಅನೇಕ ಕಡೆ ಅವರ ಮಠಗಳು ಸ್ಥಾಪನೆಯಾಗಿವೆ. ಅವರು ಶಿವಸ್ಮರಣೆಯೊಂದಿಗೆ ದೇಹ ಬಿಟ್ಟರು. ಆ ದಿನವನ್ನು ಪುಣ್ಯದಿನವೆಂದು ಭಾವಿಸಿ ಪುಣ್ಯಾರಾಧನೆಯನ್ನು ಆಚರಿಸಲಾಗುತ್ತಿದೆ.
ನಾಗಭೂಷಣ ಶಿವಯೋಗಿ ಸಂಸ್ಥಾನದ ಪ್ರಸ್ತುತ ಪೀಠಾಧ್ಯಕ್ಷರು ಶ್ರೀ ಪ್ರಣವಾನಂದ ಮಹಾಸ್ವಾಮಿಗಳು. ಸಿಂದಗಿ ತಾಲೂಕಿನ ಅಲಗೂರು ಗ್ರಾಮದ ಶಿವಯ್ಯ ಸ್ವಾಮಿ ಮತ್ತು ರುದ್ರಮ್ಮ ದಂಪತಿ ಪುತ್ರರಾಗಿ ಜನಸಿದ ಅವರು ಅಧ್ಯಾತ್ಮದ ಹಸಿವಿನಿಂದಾಗಿ 16ನೇ ವಯಸ್ಸಿನಲ್ಲೇ ಮನೆ ಬಿಟ್ಟು ವಿಜಯಪುರ ಷಣ್ಮುಖಾರೂಢ ಮಠದ ಸದ್ಗುರು ಶಿವಪುತ್ರ ಮಹಾಸ್ವಾಮೀಜಿಯವರಿಂದ ದೀಕ್ಷೆ ಪಡೆದರು.
ಹುಬ್ಬಳ್ಳಿ, ಸಿದ್ಧಗಂಗಾ, ಬೆಂಗಳೂರು, ಮೈಸೂರುಗಳಲ್ಲಿ ವೇದ ಉಪನಿಷತ್ತುಗಳ ಅಧ್ಯಯನ ಮಾಡಿದರು. ಜಯಚಾಮರಾಜೇಂದ್ರ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಓದುತ್ತಿರುವಾಗಲೇ ಪ್ರಣವಾನಂದರಲ್ಲಿದರಲ್ಲಿದ್ದ ಆಧ್ಯಾತ್ಮಿಕ ಆಸಕ್ತಿಯನ್ನು ಬೀದರ್ ಚಿದಂಬರಾಶ್ರಮದ ಸದ್ಗುರು ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಗುರುತಿಸಿದರು. ಹೀಗಾಗಿ ಪ್ರಣವಾನಂದರು 1998ರಲ್ಲಿ ಮುಚಳಂಬ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನಮಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದರು.
ಧರ್ಮ-ಅಧ್ಯಾತ್ಮದ ಬಗ್ಗೆ ಆಸಕ್ತಿ ಮತ್ತು ಪರಿಣತಿಯನ್ನು ಹೊಂದಿರುವ ಪ್ರಣಾವಾನಂದ ಶ್ರೀಗಳು ಮಠದ ಪರಿಸರದಲ್ಲಿ ಶಿಕ್ಷಣಸಂಸ್ಥೆ ಆರಂಭಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿದ್ದಾರೆ. ನಿಜಗುಣಶಾಸ್ತ್ರ, ವಚನಸಾಹಿತ್ಯ, ಭಗವದ್ಗೀತಾ ವೇದಾಂತ-ಸಿದ್ಧಾಂತಗಳ ಆಳವಾದ ಅಧ್ಯಯನ ಮಾಡಿರುವ ಪೂಜ್ಯರು ನಾಡಿನಾದ್ಯಂತ ತತ್ವಪ್ರಸಾರದಲ್ಲಿ ತೊಡಗಿದ್ದಾರೆ.
ಶ್ರೀ ನಾಗಭೂಷಣ ಶಿವಯೋಗಿಗಳ ಐವತ್ತನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಮಹಾಸ್ವಾಮೀಜಿಯವರ ಐವತ್ತನೇ ವರ್ಧಂತಿ ನಿಮಿತ್ತ ಫೆಬ್ರವರಿ 1ರಿಂದ 7ರವರೆಗೆ ಅರ್ಥಪೂರ್ಣವಾಗಿ ಸುವರ್ಣ ಮಹೋತ್ಸವ ಜರುಗಲಿದೆ. ಶ್ರೀ ಶ್ರೀ ರವಿಶಂಕರ ಗುರೂಜಿ, ನಾಡಿನ ವಿವಿಧ ಮಠಾಧೀಶರು ಸೇರಿ ಇನ್ನೂರಕ್ಕೂ ಹೆಚ್ಚು ಪೂಜ್ಯರು ಇದರಲ್ಲಿ ಭಾಗವಹಿಸಲಿದ್ದಾರೆ.
| ಮಾರ್ಥಂಡ ಜೋಶಿ, ಬಸವಕಲ್ಯಾಣ