

ಕೆಂಪನಂಜೇಗೌಡರು ವಿಜಯನಗರ ಸಾಮ್ರಾಜ್ಯಕ್ಕೆ ಅತ್ಯಂತ ನಿಷ್ಠರಾಗಿದ್ದುದರಿಂದ ಕೃಷ್ಣದೇವರಾಯರು ಗೌಡರನ್ನು ಹಾಗೂ ಅವರ ಆಡಳಿತದ ಕಾರ್ಯಶೈಲಿಯನ್ನು ಬಹಳ ಮೆಚ್ಚಿಕೊಂಡಿದ್ದರು. ರಾಜಧರ್ಮದ ಪ್ರಕಾರ ಕೆಂಪನಂಜೇಗೌಡರು ವಿಜಯನಗರಕ್ಕೆ ಭೇಟಿ ಕೊಟ್ಟಾಗಲೆಲ್ಲ ತಮ್ಮ ಪುತ್ರನಾದ ಬಾಲಕ ಕೆಂಪೇಗೌಡರನ್ನೂ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋಗಿರುವಾಗ ಒಮ್ಮೆ ತಂದೆಯ ಹೆಗಲ ಮೇಲೆ ಕುಳಿತು ರಾಜಧಾನಿ ಹಂಪಿಯ ಸಮೃದ್ಧಿ, ಸೌಂದರ್ಯ, ಅದರ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡ ತನ್ನ ಯಲಹಂಕ ಭಾಗದ ಸ್ಥಿತಿಯನ್ನು ನೆನೆದು ಚಿಂತೆಗೊಳಗಾಗಿದ್ದ. ವಿಜಯನಗರದಿಂದ ವಾಪಸ್ಸು ಬಂದ ನಂತರ ತಾನು ವಿದ್ಯಾಭ್ಯಾಸ ಮಾಡುತ್ತಿದ್ದ ಗುರುಕುಲವಿದ್ದ ಶಿವಗಂಗೆಯ ಬೆಟ್ಟದ ಶೃಂಗವನ್ನೇರಿ ಕುಳಿತು, ‘ನಾನೇನಾದರೂ ಮುಂದೆ ಈ ನಾಡನ್ನಾಳುವ ಸಂದರ್ಭ ಒದಗಿ ಬಂದರೆ ದಿಗ್ ದಿಗಂತದವರೆಗೂ ನಾಡನ್ನು ವಿಸ್ತರಿಸುವುದರ ಜೊತೆಗೆ ಅದನ್ನು ಸುಖ, ಶಾಂತಿ, ಸಮೃದ್ಧಿಯ ತಾಣವನ್ನಾಗಿಸುತ್ತೇನೆ’ ಎಂದು ದೃಢನಿಶ್ಚಯ ಮಾಡಿದ್ದ. ಕೆಂಪನಂಜೇಗೌಡರ ಕಾಲಾನಂತರ ಯಲಹಂಕದ ಪ್ರಭುವಾಗಿ ಕೆಂಪೇಗೌಡರು ಪಟ್ಟಾಭಿಷಿಕ್ತರಾಗಿ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದ ನಾಡಿನ ಸುವರ್ಣಯುಗ ಆರಂಭವಾಯಿತು. ತಮ್ಮ ಜೀವಿತಾವಧಿಯಲ್ಲಿ ಏನಾದರೂ ಅದ್ಭುತವಾದುದನ್ನು ಸಾಧಿಸಲೇಬೇಕೆಂಬ ಮಹತ್ವಾಕಾಂಕ್ಷೆ ಕೆಂಪೇಗೌಡರಲ್ಲಿ ಮನೆಮಾಡಿತ್ತು. ರಾಜ್ಯಾಡಳಿತದ ಜವಬ್ದಾರಿಯನ್ನು ಹೊತ್ತುಕೊಂಡ ನಂತರವೂ ಕೃಷ್ಣದೇವರಾಯರ ಮೇಲಿನ ನಿಷ್ಠೆಯನ್ನು ಮುಂದುವರಿಸಿದ್ದ ಕೆಂಪೇಗೌಡರು ಯುದ್ಧದಲ್ಲಿ ವಿಜಯನಗರದ ಅರಸರಿಗೆ ಹೆಗಲೆಣೆಯಾಗಿ ನಿಂತು ಹೋರಾಡಿ ಜಯವನ್ನು ತಂದು ಕೊಡುವುದರ ಜೊತೆಗೆ ಸಾಮ್ರಾಜ್ಯದ ಸಮೃದ್ಧಿಗೂ ಕಾರಣರಾದರು.
ಕೆಂಪೇಗೌಡರ ನಿಷ್ಠೆ ಹಾಗೂ ಧೈರ್ಯವನ್ನು ಮೆಚ್ಚಿ ಕೃಷ್ಣದೇವರಾಯರು ಮಹಾನವಮಿ ದಿನದಂದು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿ ಕೆಂಪೇಗೌಡರಿಗೆ ರಾಯ ಬಿರುದನ್ನು ನೀಡಿ ಸನ್ಮಾನಿಸಿದರು. ಆ ಶುಭ ಸಂದರ್ಭದಲ್ಲಿ ಏನಾದರೂ ಕೋರಿಕೆಯಿದ್ದರೆ ಕೇಳುವಂತೆ ಕೃಷ್ಣದೇವರಾಯರು ಹೇಳಿದಾಗ ಕೆಂಪೇಗೌಡರು ತಮ್ಮ ಬಹುದಿನಗಳ ಕನಸಾಗಿದ್ದ ತನ್ನ ಪ್ರಾಂತ್ಯಕ್ಕೆ ಸುಂದರ ಹಾಗೂ ಸಮೃದ್ಧ ನಾಡಿನ, ಪಟ್ಟಣದ ನಿರ್ವಣದ ಬೇಡಿಕೆಗೆ ಅನುಮತಿ ಕೇಳಿದರು. ಕೆಂಪೇಗೌಡರ ಕೋರಿಕೆಗೆ ರಾಜರು ಸಮ್ಮತಿಸಿದರು. ನಂತರ ನಡೆದದ್ದೆಲ್ಲ ಇತಿಹಾಸ. ಕೆಂಪೇಗೌಡರು ಇಡೀ ಜಗತ್ತೇ ತಿರುಗಿ ನೋಡುವಂಥ ಬೆಂಗಳೂರು ನಗರವನ್ನು ನಿರ್ವಿುಸಲು ಸಂಕಲ್ಪಿಸಿದರು. ಅವರ ಸತ್ಸಂಕಲ್ಪದ ಫಲವಾಗಿ ನಿರ್ವಣಗೊಂಡ ಬೆಂಗಳೂರು ನಗರ ಇಂದು ಜಗತ್ತಿನ ಜನರೆಲ್ಲರ ಗಮನ ಸೆಳೆದು, ಜ್ಞಾನದ ತಾಣವಾಗಿ, ಆರೋಗ್ಯದ ಧಾಮವಾಗಿ, ಸರ್ವಜನರ, ಸರ್ವಧರ್ವಿುಯರ ಸಾಮರಸ್ಯದ ನೆಲೆವೀಡಾಗಿ ಬೆಳಗುತ್ತಿದೆ.
ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂಬ ತತ್ತ ್ವವನ್ನರಿತಿದ್ದ ಕೆಂಪೇಗೌಡರು ಪ್ರಕೃತಿಯಲ್ಲಿ ಸಮತೋಲನವಿರಬೇಕಾದರೆ ಮಾನವ ಸೃಷ್ಟಿಯ ಜೊತೆ ಜೊತೆಗೆ ಜೀವಸಂಕುಲಗಳೂ, ಜೀವವೈವಿಧ್ಯಗಳೂ ಸಾಮರಸ್ಯದಿಂದಿರಬೇಕು ಎಂಬುದನ್ನು ಅರಿತಿದ್ದರು. ಅನಾದಿ ಕಾಲದಿಂದಲೂ ಮನುಷ್ಯ ವಿವಿಧ ವೃತ್ತಿಗಳಿಂದ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ. ಅವರವರ ಮನೋಧರ್ಮಕ್ಕನುಗುಣವಾದ ವೃತ್ತಿಯನ್ನವಲಂಬಿಸಿ ಸ್ವಾವಲಂಬನೆಯಲ್ಲಿ ಬದುಕನ್ನು ನಡೆಸಿದರೆ ಸಮಾಜದಲ್ಲಿ ಶಾಂತಿ, ಸಮೃದ್ಧಿ, ಸಾಮರಸ್ಯ ನೆಲೆಸುತ್ತದೆ. ಅಂತೆಯೇ ಪ್ರತಿ ವ್ಯಕ್ತಿಯಲ್ಲಿಯೂ ವಿಶೇಷ ಶಕ್ತಿ ವ್ಯಕ್ತವಾಗಿ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ಮನಗಂಡು ಬೆಂಗಳೂರು ನಗರ ನಿರ್ಮಾಣ ಕಾರ್ಯಕ್ಕೆ ತೊಡಗಿದಾಗ ಎಲ್ಲ ಸಮುದಾಯಗಳ ವೃತ್ತಿಗೆ ತಕ್ಕಂತೆ ನಗರದ ಯೋಜನೆಯ ನಕ್ಷೆಯನ್ನು ತಯಾರಿಸಿದರು. ಪ್ರತಿಯೊಬ್ಬರೂ ತಮ್ಮ ಕಾಯಕದ, ದುಡಿಮೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ನಗರವನ್ನು ನಿರ್ವಿುಸಿದರು.
ಓರ್ವ ವ್ಯಕ್ತಿಯನ್ನು ನಾಡಿಗೆಲ್ಲ ಪ್ರಭುವೆಂದು ಪರಿಗಣಿಸಬೇಕಾದರೆ ಆತ ಸಮಾಜದ ಎಲ್ಲ ಜನಾಂಗದ, ಎಲ್ಲ ಧರ್ವಿುಯರ, ಎಲ್ಲ ಪಂಥಗಳ ನಾಯಕನಾಗಿರಬೇಕಾಗಿರುತ್ತದೆ. ಕೆಂಪೇಗೌಡರು ಅನುಷ್ಠಾನ ಪೂರ್ವಕವಾಗಿ ನಿಜದ ನಾಡಪ್ರಭುವಾಗಿದ್ದರು. ಗಿಡ ಹುಟ್ಟುವುದಕ್ಕೆ ಮಣ್ಣಿನ ಆಸರೆ ಅವಶ್ಯಕ. ಗಿಡ ಬೆಳೆದು ಮರವಾಗಿ ಶಾಖೋಪಶಾಖೆಗಳನ್ನುಳ್ಳ ವಟವೃಕ್ಷವಾದ ಮೇಲೆ ಅದು ಎಲ್ಲರಿಗೂ ನೆರಳನ್ನೂ, ಗಾಳಿಯನ್ನೂ, ಹೂವನ್ನೂ, ಹಣ್ಣನ್ನೂ ಕೊಡುವಂತೆ, ಪಶುಪಕ್ಷಿಗಳಿಗೆ ಆಸರೆಯನ್ನು ನೀಡುವಂತೆ, ಮನುಷ್ಯ ಹುಟ್ಟುವುದಕ್ಕೆ ಒಂದು ಜಾತಿ ಮತ್ತು ಒಂದು ನೆಲೆ. ವಿಶಾಲ ಸಮಾಜದ ಪ್ರಭುವಾಗಿ ದೊರೆತನದ ಮೂಲಕ ಸೇವೆಯನ್ನು ಮಾಡಹೊರಟಾಗ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗುತ್ತದೆ. ಕೆಂಪೇಗೌಡರು ಹುಟ್ಟಿದ್ದು ಒಂದು ಜಾತಿ ಮತ್ತು ಒಂದು ಧರ್ಮದಲ್ಲಿ. ಆದರೆ ಅವರು ನಾಡಪ್ರಭುವಾದದ್ದು ರಾಜನಾದದ್ದರಿಂದ ಮಾತ್ರವಲ್ಲ, ನಗರವನ್ನು ಕಟ್ಟಿದ್ದರಿಂದಲೂ ಅಲ್ಲ; ಅವರ ವಿಶಾಲ ಮನೋಭಾವದಿಂದ.
ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿರುವ ಕೆಂಪೇಗೌಡರು ಜಾತ್ಯತೀತ ಸಮಾಜದ ನೆಮ್ಮದಿಯ ಬದುಕಿಗೆ ಅದ್ವಿತೀಯ ಕೊಡುಗೆ ನೀಡಿದ ಮಹಾನ್ ನಾಯಕರು. ಜಾತಿಯಲ್ಲಿ ಒಕ್ಕಲಿಗರಾಗಿದ್ದರೂ ಅವರ ಸೇವೆ ಸರ್ವಜನರಿಗೂ ನೆಮ್ಮದಿಯನ್ನು ನೀಡುವುದಾಗಿತ್ತು. ಕೆಂಪೇಗೌಡರು ನಗರವನ್ನು ನಿರ್ವಿುಸುವಾಗಲೇ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ವೃತ್ತಿ ಆಧಾರಿತವಾದ ಐವತ್ನಾಲ್ಕು ಪೇಟೆಗಳನ್ನು ನಿರ್ವಿುಸಿದರು. ಇದರಿಂದ ಎಲ್ಲ ಸಮುದಾಯದ ಬಡಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಯಿತು. ಅಕ್ಕಿಪೇಟೆ, ಅರಳೇಪೇಟೆ, ತಿಗಳರ ಪೇಟೆ, ತರಗು ಪೇಟೆ, ಸುಣ್ಣಕಲ್ಲು ಪೇಟೆ, ಗೌಡರ ಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಸೌರಾಷ್ಟ್ರ ಪೇಟೆ... ಮುಂತಾದ ಪೇಟೆಗಳನ್ನು ನಿರ್ವಿುಸಿರುವುದು ಅವರು ಸರ್ವ ಜನಾಂಗದ ಅಭ್ಯುದಯದ ಬಗ್ಗೆ ಹೊಂದಿದ್ದ ಕಳಕಳಿಗೆ ಸಾಕ್ಷಿಯಾಗಿದೆ.
ರೈತ ನಾಡಿನ ಬೆನ್ನೆಲುಬು ಎಂಬುದನ್ನು ಅರಿತಿದ್ದ ಕೆಂಪೇಗೌಡರಿಗೆ ತಾವು ನಿರ್ವಿುಸುತ್ತಿರುವ ಬೆಂಗಳೂರಿನಲ್ಲಿ ಯಾವುದೇ ನದಿ ಮೂಲಗಳಿಲ್ಲ ಎಂಬುದರ ಅರಿವೂ ಇತ್ತು. ಆ ದೃಷ್ಟಿಯಿಂದ ಮನುಷ್ಯರಿಗಾಗಿ ಮಾತ್ರವಲ್ಲದೆ ಪಶು-ಪಕ್ಷಿ, ಪ್ರಾಣಿಗಳ ಕುಡಿಯುವ ನೀರಿಗಾಗಿ ಹಾಗೂ ವ್ಯವಸಾಯಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ನಗರದ ಸುತ್ತ ವೈಜ್ಞಾನಿಕ ಚಿಂತನೆಯ ಅಡಿಯಲ್ಲಿ ನೂರಾರು ಕೆರೆಕಟ್ಟೆಗಳನ್ನು ನಿರ್ವಿುಸಿದರು. ಧರ್ವಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು ಕೆರೆ, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಮುಂತಾದ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ವಿುಸಿದ್ದನ್ನು ಗಮನಿಸಿದಾಗ ಕೆಂಪೇಗೌಡರು ಜಲಮೂಲಗಳಿಗೆ ಕೊಟ್ಟಿದ್ದ ಪ್ರಾಮುಖ್ಯದ ಅರಿವಾಗುತ್ತದೆ. ಆದರೆ ಹಿರಿಯರ ಕಳಕಳಿ ಹಾಗೂ ಕಾಳಜಿಯನ್ನು ಅರ್ಥ ಮಾಡಿಕೊಳ್ಳದ ಇಂದಿನ ಆಧುನಿಕರು ಅಭಿವೃದ್ಧಿಯ ಹೆಸರಿನಲ್ಲಿ ಕೆಂಪೇಗೌಡರ ಕಾಲದ ಬಹುಪಾಲು ಕೆರೆಕಟ್ಟೆಗಳನ್ನೆಲ್ಲ ಆಪೋಶನ ತೆಗೆದುಕೊಂಡಿರುವುದು ದುರಂತದ ವಿಷಯ.
ಕಾಯಕದ ಜೊತೆಗೆ ಅಂತರಂಗದ ವಿಕಾಸಕ್ಕೆಂದು ಅವರವರ ಶ್ರದ್ಧೆ ಮತ್ತು ನಂಬಿದ ತತ್ವಗಳು ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ಧಾರ್ವಿುಕ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನೂ ನಿರ್ವಿುಸಿಕೊಟ್ಟಿದ್ದ ಕೆಂಪೇಗೌಡರು ಸರ್ವಧರ್ವಿುಯರೂ ಸಾಮರಸ್ಯದಿಂದ ಬಾಳುವುದಕ್ಕೆ ಅನುವು ಮಾಡಿಕೊಟ್ಟಿದ್ದರು. ಇಂದು ಜನಪ್ರಿಯವಾಗಿರುವ ದೊಡ್ಡಗಣಪತಿ, ಗವಿಗಂಗಾಧರೇಶ್ವರ, ಹಲಸೂರು ಸೋಮೇಶ್ವರ ದೇವಾಲಯ ಮುಂತಾದುವು ಅವುಗಳಲ್ಲಿ ಕೆಲವು. ಹಲವಾರು ಉದ್ಯಾನಗಳನ್ನು ನಿರ್ವಿುಸುವ ಮೂಲಕ ಬೆಂಗಳೂರು ಭಾರತ ದೇಶದ ಉದ್ಯಾನ ನಗರಿ, ಸ್ವಾಭಾವಿಕ ಹವಾನಿಯಂತ್ರಿತ ನಗರಿ ಎಂಬ ಅಭಿದಾನಕ್ಕೆ ಕಾರಣರಾದರು. ಕಲೆಗೆ, ಕ್ರೀಡೆಗೆ, ಪ್ರಕೃತಿ ಸಂರಕ್ಷಣೆಗೆ ಪ್ರೋತ್ಸಾಹ ನೀಡಿ ಜನರ ಸ್ವಾಭಿಮಾನದ
ಬದುಕಿಗೂ ಕಾರಣರಾಗಿದ್ದರು. ಇಂದಿನ ಸಿಲಿಕಾನ್ ಸಿಟಿಗೆ ಅಂದಿನ ಅವರ ನಿರ್ವಣದ ದೂರದರ್ಶಿತ್ವದ ನಗರಿ ಕಾರಣ ಎಂಬುದನ್ನು ಯಾರೂ ಮರೆಯಲಾಗದು. ಅಂತಹ ವಿಶಾಲ ದೃಷ್ಟಿಯ, ಆಧ್ಯಾತ್ಮಿಕ ತತ್ವದ ನೆಲೆಯಲ್ಲಿ ನಗರವನ್ನು ನಿರ್ವಿುಸಿದುದರ ಫಲವಾಗಿ ಇಂದು ಬೆಂಗಳೂರು ರಾಜ್ಯದ ರಾಜಧಾನಿಯಾಗಿರುವುದಷ್ಟೇ ಅಲ್ಲ, ವಿಶ್ವದರ್ಜೆಯ ನಗರವಾಗಿ ಬೆಳೆದು ವಿಶ್ವದ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿದೆ.
ದಕ್ಷ ಆಡಳಿತಗಾರರೂ, ಸನಾತನ ಸಂಸ್ಕೃತಿ ಹಾಗೂ ಪರಂಪರೆಗಳ ರಕ್ಷಕರೂ, ಜನತೆಯ ದುಃಖದುಮ್ಮಾನಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವವರೂ ಆಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿರುವ ನಾಡಪ್ರಭು ಕೆಂಪೇಗೌಡರು ಜಾತ್ಯತೀತ ಸಮಾಜದ ನೆಮ್ಮದಿಯ ಬದುಕಿಗೆ ಅದ್ವಿತೀಯ ಕೊಡುಗೆ ನೀಡಿದ ಮಹಾನ್ ನಾಯಕರು. ಸುಮಾರು
ಐದೂವರೆ ದಶಕಗಳ ಕಾಲ ಆಡಳಿತ ನಡೆಸಿ, ತಮ್ಮ ಸಾಮ್ರಾಜ್ಯವನ್ನು ಜಾಜ್ವಲ್ಯಮಾನವಾಗಿ ಬೆಳಗಿ ಭವ್ಯ ಇತಿಹಾಸವನ್ನೇ ನಿರ್ವಿುಸಿದವರು. ಇಂಥ ಮಹಾನ್ ನಾಯಕರೂ, ಪ್ರಗತಿಯ ಹರಿಕಾರರೂ ಆಗಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜನ್ಮ ದಿನೋತ್ಸವವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೆಂಪೇಗೌಡರ ವ್ಯಕ್ತಿತ್ವವನ್ನು, ಕೀರ್ತಿಯನ್ನು ಅವರ ಕಾರ್ಯಸಾಧನೆಗಳ ಅತ್ಯಮೂಲ್ಯ ಸಾರವನ್ನು ಅರಿಯಲೆಂದು, ತನ್ಮೂಲಕ ಮುಂದಿನ ತಲೆಮಾರಿನ ಹೃನ್ಮನದಲ್ಲಿ ಕೆಂಪೇಗೌಡರ ಆದರ್ಶವನ್ನು ಪಸರಿಸಲೆಂದು ಆಶಿಸುತ್ತೇವೆ.
(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು)