

(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)
ಆರ್ಡರ್! ಆರ್ಡರ್! ಎನ್ನುತ್ತ ನ್ಯಾಯಾಧೀಶರು ಮರದ ಸುತ್ತಿಗೆಯನ್ನು ಮೇಜಿನ ಮೇಲೆ ಲಘುವಾಗಿ ಬಡಿಯುತ್ತಾರೆ. ನ್ಯಾಯಾಲಯದಲ್ಲಿ ಅದುವರೆಗೆ ಇದ್ದ ಸದ್ದುಗದ್ದಲ ಒಮ್ಮೆ ನಿಲ್ಲುತ್ತದೆ. ವಕೀಲರು, ಫಿರ್ಯಾದುದಾರರು, ಸಾಕ್ಷಿಗಳು ಎಲ್ಲರೂ ನಿಶ್ಶಬ್ದರಾಗುತ್ತಾರೆ. ಕಲಾಪ ಮುಂದುವರಿಯುತ್ತದೆ... ಇಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ನಾವು ನೋಡುತ್ತಿರುತ್ತೇವೆ. ಸ್ವಲ್ಪಮಟ್ಟಿಗೆ ಅದು ಸಿನಿಮೀಯವೇ, ಏಕೆಂದರೆ ನಿಜವಾಗಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಹಾಗೆಲ್ಲ ಪದೇಪದೇ ಸುತ್ತಿಗೆ ಬಡಿಯುವುದಿಲ್ಲ. ಅದೊಂದು ಅಧಿಕಾರವಾಣಿಯ, ಶಾಂತಿ ಸ್ಥಾಪನೆಗೆ ಆದೇಶದ ಸಂಕೇತ ಅಷ್ಟೇ. ಸುತ್ತಿಗೆಯ ಬಳಕೆಯೇ ಇಲ್ಲದ ನ್ಯಾಯಾಲಯಗಳೂ ಇರುತ್ತವೆ. ಆದರೂ ನ್ಯಾಯಾಧೀಶ ಮತ್ತು ಮರದ ಸುತ್ತಿಗೆಯದು ಅವಿನಾಭಾವ ಸಂಬಂಧ ಎಂದೇ ಅನಿಸುವಂತಾಗಿದೆ. ಅದಕ್ಕೆ ಕಾರಣವೂ ಇದೆ. ಯುರೋಪಿಯನ್ ಪುರಾಣಗಳಲ್ಲಿ ದೇವರು ಮತ್ತು ಮಾನವರ ನಡುವಿನ ದ್ವಿತೀಯ ದೇವತೆಯಾಗಿ ಕಲ್ಲುಕುಟಿಗ ಇರುತ್ತಾನೆ ಎಂಬ ನಂಬಿಕೆ. ಆತ ಸುತ್ತಿಗೆಯಿಂದ ಬಡಿದು ಕಲ್ಲುಗಳ ಓರೆಕೋರೆಗಳನ್ನು ತೆಗೆದು ಅವು ಒತ್ತೊತ್ತಾಗಿ ಸೇರಿ ಕಟ್ಟಡ ನಿರ್ವಣಕ್ಕೆ ಅನುವಾಗುವಂತೆ ಮಾಡುತ್ತಾನೆ. ಅಂತೆಯೇ ಸಮಾಜದಲ್ಲಿ ಅನ್ಯಾಯದ ಓರೆಕೋರೆಗಳನ್ನು ಅಳಿಸಿ ನ್ಯಾಯಯುತ ಸಮಾಜವೆಂಬ ಕಟ್ಟಡ ನಿರ್ವಣಕ್ಕೆ ಅನುವಾಗಬೇಕಾದವನು ನ್ಯಾಯಾಧೀಶ. ಅಸ್ತವ್ಯಸ್ತವಾಗಿರುವುದನ್ನು ಅಚ್ಚುಕಟ್ಟಾಗಿಸುವ ಕೆಲಸದ, ಅಂದರೆ ಕಲ್ಲುಕುಟಿಗತನದ ಸಂಕೇತವಾಗಿ ಅವನ ಕೈಯಲ್ಲೊಂದು ಮರದ ಸುತ್ತಿಗೆ.
ಈ ಮರದ ಸುತ್ತಿಗೆಯನ್ನೇ ಇಂಗ್ಲಿಷ್ನಲ್ಲಿ Gavel ಎನ್ನುತ್ತಾರೆ. ಇದರ ವ್ಯುತ್ಪತ್ತಿಯ ಬಗ್ಗೆ ಭಾಷಾತಜ್ಞರಲ್ಲಿ ಒಮ್ಮತವಿಲ್ಲ. ಜರ್ಮನ್ ಭಾಷೆಯ gaffel (ಸೌಹಾರ್ದ ಸಮಾಜ ಎಂಬರ್ಥ), ಅಥವಾ ಹಳೆಯ ಇಂಗ್ಲಿಷ್ನ Gafol (ಕಪ್ಪಕಾಣಿಕೆ ಎಂಬರ್ಥ) ಅಥವಾ giefan (ಕೊಡುವುದು ಎಂದರ್ಥ) ಇದರ ಮೂಲವಿರಬಹುದು ಎನ್ನಲಾಗಿದೆ. ಪೋ›ಟೊ-ಇಂಡೋ-ಯುರೋಪಿಯನ್ ಭಾಷೆಗಳ Ghabh ಧಾತು (ಕೊಡು-ಕೊಳ್ಳುವುದು) ಸಹ ಇದರ ಬೇರು ಆಗಿರುವ ಸಾಧ್ಯತೆಯಿದೆಯಂತೆ. ಸಂಸ್ಕೃತದ ‘ಗಭಸ್ತಿ’ (ಕಿರಣಗಳೆಂಬ ಕೈಗಳು) ಇದೇ ಬೇರಿನ ಇನ್ನೊಂದು ಕಾಂಡವಿರಬಹುದೆಂದು ಅಂದಾಜು. ಅಂದರೆ, ಪಾರಮಾರ್ಥಿಕವಾಗಿ ಆಲೋಚಿಸಿದರೆ ಗ್ಯಾವೆಲ್ ಬರೀ ಬಡಿಯುವುದಕ್ಕಲ್ಲ ಇರುವುದು, ಮಹತ್ತರವಾದ ಏನನ್ನೋ ಕೊಡುವ ಉದಾತ್ತತೆ ಅದರಲ್ಲಿದೆ. ಆಕಾರ ಮತ್ತು ಬಳಕೆ ಕ್ರಮದಿಂದಾಗಿ ಸುತ್ತಿಗೆ ಅಂತನಿಸುತ್ತದೆ ಅಷ್ಟೇ. ನ್ಯಾಯಾಲಯಗಳಲ್ಲಷ್ಟೇ ಅಲ್ಲ, ಸಂಯುಕ್ತರಾಷ್ಟ್ರಗಳ ಮಹಾಸಭೆ ಕಲಾಪ ಆರಂಭವಾಗುವುದು ಸಭಾಧ್ಯಕ್ಷರು ಗ್ಯಾವೆಲ್ ಬಡಿಯುವುದರ ಮೂಲಕವೇ.
ನ್ಯೂಯಾರ್ಕ್ ಷೇರುಮಾರುಕಟ್ಟೆಯ ದಿನದ ಚಟುವಟಿಕೆ ಆರಂಭ/ಅಂತ್ಯಗೊಳ್ಳುವುದೂ ಗ್ಯಾವೆಲ್ (ಮತ್ತು ಗಂಟೆಯ) ಬಡಿತದಿಂದಲೇ. ಗಮನಿಸಬೇಕಾದ್ದೆಂದರೆ ಇದು ಕಬ್ಬಿಣದ ತಲೆ ಮತ್ತು ಮರದ ಹಿಡಿಕೆಯುಳ್ಳ ಸುತ್ತಿಗೆ ಅಲ್ಲ. ಪೂರ್ಣವಾಗಿ ಮರದಿಂದಲೇ ಮಾಡಿರುವುದು. ಇದಕ್ಕೆ ಕನ್ನಡದಲ್ಲಿ ಕೊಡಂತಿ ಅಥವಾ ಕೊಡತಿ ಎಂಬೊಂದು ಶಬ್ದವಿದೆ. ಕನ್ನಡದ ಆದಿಕವಿ ಪಂಪನೂ ಬಳಸಿದ್ದಾನೆ- ‘ಉಳಿಯನೂರಿ ಕೊಡಂತಿಯೊಳ್ ಬೆಟ್ಟಿದಂತೆ...’ ಎಂದು. ಪರಶುರಾಮನು ಕರ್ಣನ ತೊಡೆಮೇಲೆ ತಲೆಯಿಟ್ಟು ಮಲಗಿದ್ದಾಗ, ಇಂದ್ರನು ವಜ್ರಕೀಟಗಳನ್ನು ಅಲ್ಲಿಗೆ ಕಳುಹಿಸಲಾಗಿ, ಅವು ಕರ್ಣನ ತೊಡೆಯನ್ನು ಹೇಗೆ ಕಚ್ಚಿದವೆಂಬ ವರ್ಣನೆ. ಉಳಿಯನ್ನು ಊರಿ ಸುತ್ತಿಗೆಯಿಂದ ಹೊಡೆದರೆ ಆಗುವ ಹಾಗೆ, ಕರ್ಣನ ತೊಡೆಯನ್ನು ಕಚ್ಚಿ ಅತ್ತಇತ್ತ ಎರಡು ಭಾಗ ಮಾಡಿದವಂತೆ! ‘ಕಮಳದಳ ಕೊಡತಿಗಳ ಕೈಹಾರೆಗಳನಳವಡಿಸಿದರು ವಹಿಲದಲಿ’ ಎಂದು ಕುಮಾರವ್ಯಾಸ, ‘ಕೊಡತಿ ಕೀಲಕಮೆನಿಕ್ಕು ಸತ್ತಿಗೆ ಲೋಹದ ಟಂಕಮಕ್ಕು’ ಎಂದು ಅಭಿನವಮಂಗರಾಜ, ‘ಬಡಿವ ಬಲ್ಗದೆಯ ಕೊಡಾತಿಯಾಗಲಾ ಭೀಮ ಮಡಿವಳನಂತೊಪ್ಪಿದನು’ ಎಂದು ಮುಮ್ಮಡಿ ಮಂಗರಸ, ‘ಬಟ್ಟೆಗಳನ್ನು ಗಟ್ಟಿಸುವ ಕೊಡತಿಯಿಂದ ಆ ಕತ್ತೆಯ ಮೈಮುರಿಯ ಹೊಡೆದನು’ ಎಂದು ಕಥಾಮಂಜರಿಯ ಅನಾಮಧೇಯ ಮುಂತಾಗಿ ಬೇರೆ ಕವಿಗಳು ಬಳಸಿರುವುದನ್ನೂ ಪಟ್ಟಿಮಾಡಿದೆ ಕಸಾಪ ನಿಘಂಟು.
ಹಾಗಾಗಿ ಕೊಡತಿ ಎಂಬ ಪದ ಇರುವಾಗ ಹೊಸದೊಂದನ್ನು ಉಳಿ-ಕೊಡತಿ ಪ್ರಯೋಗದಿಂದ ಕೆತ್ತಬೇಕಾದ್ದಿಲ್ಲ. ಅಂಜನಾ ತುಮಕೂರು, ಮೋಹನ ಕುಮಾರ್, ರಾಜೇಶ್ವರಿ ಟಿ.ಆರ್, ಸಿದ್ದನಗೌಡ ಮುದಿಗೌಡ್ರ, ಮೀನಾಕ್ಷಿ ಟಕ್ಕಳಕಿ, ಶೈಲಜಾ ಸುಬ್ರಹ್ಮಣ್ಯ, ಕಾಡೇಶ ವಿ.ಬಿ, ಗಗನ ಶಿವಮೊಗ್ಗ, ಭ.ನಿಂ ಗೋಪಿನಾಥ್, ಜಿ.ನಾರಾಯಣರಾವ್, ಸುರೇಂದ್ರ ಪೈ, ಗೋಪಾಲಕೃಷ್ಣ ಹೆಮ್ಮಿಗೆ, ಎ.ವಿ ಗಿರೀಶ್, ಪದ್ಮಾ ಬದರಿನಾಥ್, ಷಡಕ್ಷರಮುನಿ ಸ್ವಾಮೀಜಿ ಮುಂತಾದವರು ಸೂಚಿಸಿರುವಂತೆ ಎಚಡಛ್ಝಿ ಪದಕ್ಕೆ ಕನ್ನಡದಲ್ಲಿ ‘ಕೊಡತಿ’ಯನ್ನೇ ಬಳಸಬಹುದು. ಆದರೂ ಕೆಲವು ಹೊಸ ಸೃಷ್ಟಿಗಳನ್ನೂ ಪರಿಗಣಿಸುವುದಾದರೆ- ‘ಗದಗೋಲು’ (ಪ್ರಕಾಶ ಬಿ ಮೈಸೂರು), ‘ಪುಟ್ಟಕುಟ್ಟಣಿ’ (ಜ್ಯೋತಿ ಮಹಾದೇವ), ‘ಕರಕುಟ್ಟಣಿ’ (ಡಾ.ಜಿ.ಎಸ್.ವೇಣುಗೋಪಾಲ್), ‘ತಟ್ಟಣಿಕೆ’ (ದೇವರಾಜ ಗಾಂವ್ಕರ್, ಗುರನಗೌಡ ಪಾಟೀಲ್), ‘ಘೊಷದಂಡ’ (ಶಿವಶಂಕರ ಪ್ರಭು), ‘ಧೀಟಂಕ’ (ದಿನೇಶ ತನ್ನಗುಳಿ), ‘ಸ್ತಬ್ಧಕ’ (ಸಂಜಯ ಕುಲಕರ್ಣಿ), ‘ನಿಶ್ಶಬ್ದಿಕೆ’ (ಮಮತಾ ಕುಂದಾಪುರ) ಇವೆಲ್ಲ ಅರ್ಥಪೂರ್ಣವೂ ಆಕರ್ಷಕವೂ ಆಗಿವೆ. ‘ಗುದಿಗೆ’ (ಎಂ.ಕೆ ಬದರಿನಾಥ್) ನಿಘಂಟುವಿನಲ್ಲೇ ಇದೆಯಾದರೆ ‘ಬಾಯ್ಮುಚ್ಬಡಿಗೆ’ (ವಸಂತಕುಮಾರ್ ಕಲ್ಯಾಣಿ) ಬಾಯ್ಮುಚ್ಚಿಕೊಂಡರೂ ನಗೆಯುಕ್ಕಿಸುವಂತಿದೆ!
ಕಳೆದಸಲ ಕೇಳಿದ್ದ Twilight ಪದಕ್ಕೂ ವಿಧವಿಧ ಆಲೋಚನೆಗಳಿಂದ ರೂಪುಗೊಂಡ ರಂಗುರಂಗಿನ ಪದಗಳು ಬಂದಿವೆ. ಇಂಗ್ಲಿಷ್ನಲ್ಲಿ ಈ ಪದದ ವಿಶೇಷತೆಯೇನೆಂದರೆ ಸೂರ್ಯಾಸ್ತದ ಬಳಿಕ ಕೆಲಕಾಲ ಇರುವ ಬೆಳಕಿಗೂ, ಸೂರ್ಯೋದಯವಾಗುವ ಮುನ್ನವೇ ಹರಡುವ ಬೆಳಕಿಗೂ, ಅಂದರೆ dawn ಮತ್ತು dusk ಎರಡೂ ವೇಳೆಗಳಲ್ಲಿನ ಬೆಳಕಿಗೂ Twilight ಎಂದೇ ಹೇಳುವುದು. ಅದರಲ್ಲಿ ಮತ್ತೆ ಮೂರು ವಿಧಗಳಿವೆ: ಸೂರ್ಯನು ದಿಗಂತದಿಂದ ಮರೆಯಾಗಿ 6 ಡಿಗ್ರಿ ಕೋನದೊಳಗೆ ಇದ್ದರೆ ಅದು civil Twilight. ಜನಸಾಮಾನ್ಯರ ಚಟುವಟಿಕೆಗಳಿಗೆ ಈ ಬೆಳಕು ಧಾರಾಳ ಸಾಕು. ‘ಇದು ಬರಿ ಬೆಳಗಲ್ಲೋ ಅಣ್ಣ...’ ಎಂದು ಮುಂಜಾನೆಯಲ್ಲಿ, ಮತ್ತು ‘ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ...’ ಎಂದು ಮುಸ್ಸಂಜೆಯಲ್ಲಿ ಬೇಂದ್ರೆಯಜ್ಜ ಹಾಡಿ ನಲಿಯಲಿಕ್ಕೂ ಹೇಳಿಮಾಡಿಸಿದಂಥದ್ದಿದು. ಸೂರ್ಯನು 7ರಿಂದ 12 ಡಿಗ್ರಿ ಕೋನದೊಳಗಿದ್ದರೆ nautical Twilight. ನಾವಿಕರು ನಕ್ಷತ್ರಗಳನ್ನು ಗಮನಿಸತೊಡಗಿ ಇನ್ನು ಎತ್ತ ಸಾಗಬೇಕು ಎಂದು ತಿಳಿದುಕೊಳ್ಳುವ ಬೆಳಕು. ಸೂರ್ಯನು 13ರಿಂದ 18 ಡಿಗ್ರಿ ಕೋನದೊಳಗೆ ಇದ್ದರೆ ಅದು astronomiocal Twilight. ವ್ಯೋಮವಿಜ್ಞಾನಿಗಳಿಗೆ ಆಕಾಶಕಾಯಗಳ ಗುರುತಿಸುವಿಕೆ ಸಾಧ್ಯವಾಗುವ ಬೆಳಕು. ಇವೆಲ್ಲದರ ಆಚೆಗಿನದು ಕರಾಳರಾತ್ರಿ. Twilight ಪದದಲ್ಲಿರುವ Twi ಭಾಗವು ಸಂಸ್ಕೃತದ ‘ದ್ವೇ’ಯ ದಾಯಾದಿಯೇ. ಎರಡು ಎಂಬರ್ಥ. ಹಗಲು ಮತ್ತು ಇರುಳು ಇವೆರಡರ ಸಂಧಿಕಾಲದ ಬೆಳಕೇ Twilight.
ಈ ದೃಷ್ಟಿಯಿಂದ ‘ಸಂಧಿಪ್ರಕಾಶ’ ಅಥವಾ ‘ಸಂಧ್ಯಾಪ್ರಕಾಶ’ ಅತಿಸೂಕ್ತ ಪದಗಳು. ಸೂಚಿಸಿರುವವರು ಎನ್.ಎಚ್.ದೇಶಪಾಂಡೆ, ಲೋಕೇಶ್ ಚಿತ್ರದುರ್ಗ, ಗಿರೀಶ ಫಡ್ಕೆ, ಭವಾನಿ ಜೋಶಿ ಸಿಂದಗಿ, ವಿನಯಕುಮಾರ ಶಿಲ್ಪಿ, ರಾಮಮೂರ್ತಿ ಬೆಂಗಳೂರು, ದತ್ತಾತ್ರೇಯ ಎನ್, ನಾಗಮಣಿ ಎನ್ ಶಾಂಪೂರ್ ಮುಂತಾದವರು. ಇಲ್ಲೊಂದು ಸೂಕ್ಷ್ಮವನ್ನೂ ಗಮನಿಸಬೇಕು. ಸಂಧ್ಯಾ(ತತ್ಸಮ)- ಸಂಜೆ(ತದ್ಭವ) ಆದ್ದರಿಂದ ಸಂಧ್ಯಾ ಎಂದರೆ ಸಾಯಂಕಾಲ ಎಂದಷ್ಟೇ ತಿಳಿದುಕೊಳ್ಳಬಾರದು. ಭಾಷಾದೃಷ್ಟಿಯಿಂದ ಬೆಳಗಿನದೂ ಸಂಧ್ಯಾಕಾಲವೇ ಸಂಜೆಯದೂ ಸಂಧ್ಯಾಕಾಲವೇ. ಇನ್ನು, ಅಚ್ಚಕನ್ನಡ ಪದವೇ ಬೇಕು ಅಂತಾದರೆ ‘ಮಬ್ಬೆಳಕು’ ಸೂಕ್ತವಾಗಿದೆ. ಸೂರ್ಯನಿರುವಾಗಿನದು ಪ್ರಖರ ಬೆಳಕು; ಸೂರ್ಯ ಮೂಡುವ ಮುನ್ನದ್ದು ಮತ್ತು ಸೂರ್ಯ ಮುಳುಗಿದ ನಂತರದ್ದು ಮಬ್ಬು ಬೆಳಕು ಅಥವಾ ಮಬ್ಬೆಳಕು. ಸೂಚಿಸಿದವರು: ಸುಧೀರ ಟಂಕಸಾಲಿ, ಕಂಪಲಾಪುರ ಶ್ರೀನಿವಾಸ್, ನರೇಂದ್ರನಾಥ್ ಎಚ್.ಎಂ, ಮಮತಾ ಕೋಲಾರ, ಪೂರ್ಣಾನಂದ ಮೈಸೂರು. ‘ನಸುಬೆಳಕು’ (ಗೋಪಿನಾಥ ರಾವ್, ಬಿ.ಆರ್.ಚಂದ್ರಮೌಳಿ, ಭಾಗ್ಯಶ್ರೀ ಕೆ.ಸಿ, ಡಾ.ದಯಾನಂದ ಭಟ್ಟ ಮುಂತಾದವರು), ‘ಅರೆಬೆಳಕು’ (ಪ್ರಭುಪ್ರಸಾದ್ ನಡುತೋಟ), ಮತ್ತು ‘ಕಿರುಬೆಳಕು’ (ವಿದ್ಯಾಶಂಕರ ಸಿದ್ದಾಪುರ) ಸಹ ಇದೇ ಅರ್ಥದವು.
ಆಲಂಕಾರಿಕವಾಗಿ ‘ಹೊಂಬೆಳಕು’ ಆಗಬಹುದೆಂದವರು: ರಂಗನಾಥ ಟಿ.ಕೆ, ರವೀಂದ್ರ ಬಿ.ಡಿ. ಚೈತ್ರ ಎಚ್.ಪಿ, ತುರುವೇಕೆರೆ ಮಂಜೇಶ್, ವಿ.ಬಿ ಹೊಸಪೇಟೆ, ಶೈಲಾ ಬಾಲಕೃಷ್ಣ, ಡಾ.ಎಸ್.ಎಸ್ ಚೋರಗಿ, ಬಸವರಾಜ ಐಗೋಳ, ಸಂಜೀವ ಜೋಶಿ, ಮಂಜುಳಾ ಎಸ್.ಎನ್, ಪ್ರಕಾಶ ಉಮರಾಣಿ, ಶಶಿರೇಖಾ ಪರಾಂಜಪೆ, ಗಿರೀಶ ಕೆ.ಎಸ್, ಮಿಸ್ಕಿನ್ ಕುಟುಂಬಸದಸ್ಯರು ಮುಂತಾದವರು. ‘ಚೆಂಬೆಳಕು’ ಎಂದವರು: ಸುಮಲತಾ ಗಡಿಯಪ್ಪನವರ, ವಿ.ವಿಜಯೇಂದ್ರ ರಾವ್, ಜಿ.ಎಚ್.ಸಂಕಪ್ಪ, ವಿಜಯಲಕ್ಷ್ಮೀ ಎಸ್.
‘ಇಷ್ಟು ನಸುಕಿನಲ್ಲೇ ಹೋಗುತ್ತೀರಾ? ಅಥವಾ, ಸಂಜೆಗತ್ತಲಾಗುತ್ತಿದೆ ಹೇಗೆ ಹೋಗುತ್ತೀರಾ, ಕೈಬೆಳಕು ಕೊಡಲೇ? ಎಂದು ನಮ್ಮ ಹಳ್ಳಿಯ ಹಿರಿಯರ ಬಳಿ ಕೇಳಿದರೆ ಅವರು, ಬೇಡ, ಬಾನ್ಬೆಳಕಿದೆ ಸಾಕು, ಕಾಣುತ್ತದೆ ಎನ್ನುತ್ತಿದ್ದರು. ಸೂರ್ಯನಿಲ್ಲದ ಸಮಯದಲ್ಲಿ ಬಾನಿನಿಂದ ಸೂಸುವ ಈ ಬಾನ್ಬೆಳಕು Twilight ಪದಕ್ಕೆ ಹೊಂದಬಹುದು’ ಎಂದು ಚಂದ್ರಿಕಾ ಹೆಗಡೆ ಮತ್ತಿಹಳ್ಳಿಯವರ ವ್ಯಾಖ್ಯಾನ.
ಕೊನೆಯದಾಗಿ Bullet Point. ಬರೆವಣಿಗೆಯಲ್ಲಿ ಉದ್ದುದ್ದ ವಾಕ್ಯಪರಿಚ್ಛೇದಗಳ ಬದಲಿಗೆ ಮುಖ್ಯಾಂಶಗಳನ್ನು ಚಿಕ್ಕಚಿಕ್ಕ ವಾಕ್ಯಗಳ ಪಟ್ಟಿಯ ರೀತಿಯಲ್ಲಿ ಪ್ರಸ್ತುತಪಡಿಸುವಾಗ ಆ ಒಂದೊಂದು ವಾಕ್ಯದ ಆರಂಭಕ್ಕೂ ಗುಂಡುಸೂಜಿಯ ತಲೆಯಂತಹ ಚುಕ್ಕಿಯಿರುತ್ತದಲ್ಲ ಅವುಗಳನ್ನು Bullets ಎನ್ನುತ್ತೇವೆ; ಪಟ್ಟಿಯಲ್ಲಿನ ಪ್ರತಿಯೊಂದು ವಾಕ್ಯ Bullet Point ಆಗುತ್ತದೆ. ಭಾಷಣಕ್ಕೆ ತಯಾರಿ ಮಾಡಿಕೊಳ್ಳುವಾಗಲೂ ಈ ವಿಧಾನ ಉಪಯುಕ್ತ. ಪಟ್ಟಿಯ ಒಂದೊಂದೇ ಮುಖ್ಯಾಂಶವನ್ನು ನೋಡಿ ಪೂರಕ ಮಾತುಗಳನ್ನಾಡಿದರಾಯ್ತು. ಹಾಗಲ್ಲದೆ ಉದ್ದುದ್ದ ವಾಕ್ಯಪರಿಚ್ಛೇದಗಳನ್ನು ಹಾಳೆಯಲ್ಲಿ ಬರೆದುಕೊಂಡು ಹೋದರೆ ಯಾವ ಅಂಶ ಎಲ್ಲಿದೆ ಅಂತ ತತ್ಕ್ಷಣಕ್ಕೆ ಗೊತ್ತಾಗುವುದಿಲ್ಲ. ಕೊನೆಗದು ಭಾಷಣ ಅಲ್ಲ, ಲೇಖನ/ಪ್ರಬಂಧದ ಓದು ಎಂದಾಗುತ್ತದೆ. Bullet Point ಪಟ್ಟಿಯ ವಾಕ್ಯಗಳಲ್ಲಿ ಇಡೀ ಪ್ರಬಂಧ ಅಥವಾ ಭಾಷಣದ ಸಾರ ಅಡಗಿರುವುದರಿಂದ, ‘ಸಾರಬಿಂದು’ ಹೆಚ್ಚು ಸೂಕ್ತವೆಂದು ಬರೆದಿದ್ದಾರೆ ಡಾ.ವೇದಾ ವಿ ಪುರೋಹಿತ. ಮಂಜುನಾಥ ಡಿ.ಎಸ್ ಮತ್ತು ಎ.ಬಿ ಪ್ರಕಾಶ ಅವರದೂ ಇದೇ ಅಭಿಪ್ರಾಯ. ಸಾರಬಿಂದು ನಿಜಕ್ಕೂ ಚುಟುಕಾಗಿ ಚಂದವಾಗಿ ಇದೆ. ಅಲ್ಲದೇ, ‘ಗುಂಡುಬಿಂದು’ವಿನಲ್ಲಿಲ್ಲದ ಗಾಂಭೀರ್ಯ, ಶಿಷ್ಟತೆಗಳೂ ‘ಸಾರಬಿಂದು’ವಿನಲ್ಲಿವೆ. ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕ ಇಂದಿರಾರಮಣಗರ್ಪಿತ... ಎಂದಂತೆ ಸಾರಬಿಂದುಗಳಲ್ಲಿ ಅಡಕವಾದ ಭಾಷಣದ ಸಾರ ಮುಂದೆ ಕುಳಿತು ಕೇಳುವ ಪ್ರೇಕ್ಷಕರನ್ನು ಮುದಗೊಳಿಸುತ್ತದೆ.
ಪದ ಕಟ್ಟುವ/ಹುಡುಕುವ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವವರೆಲ್ಲರಿಗೂ ಅಭಿನಂದನೆಗಳು. ದೀಪಾವಳಿ ಹಬ್ಬದ ಹೊಂಬೆಳಕಿನ ಶುಭಾಶಯಗಳು.
1. Drug Peddler: ಮಾದಕ ಪದಾರ್ಥಗಳ ಕಾನೂನುಬಾಹಿರ ವ್ಯಾಪಾರ ಮಾಡುವವನನ್ನು ಕನ್ನಡದಲ್ಲಿ ಏನನ್ನೋಣ?
2. Pattern: ಇದೇ ಕಲರ್ನಲ್ಲಿ ಬೇರೆ ಪ್ಯಾಟರ್ನ್ ತೋರಿಸ್ತೀರಾ, ಇದೇ ಪ್ಯಾಟರ್ನ್ನಲ್ಲಿ ಬೇರೆ ಕಲರ್ದು ತೋರಿಸ್ತೀರಾ... ಬಟ್ಟೆಯಂಗಡಿಯವನನ್ನು ಸತಾಯಿಸುವಾಗ ಕನ್ನಡದಲ್ಲೇ ಹೇಳಿದರೇನು ತೊಂದರೆ?
3.Screwdriver: ಇದಕ್ಕೆ ಕನ್ನಡ ಪದ ಇಲ್ಲವೆಂದಲ್ಲ, ನೆನಪಿಟ್ಟು ಯಾರೂ ಬಳಸುವುದಿಲ್ಲ ಅಷ್ಟೇ. ನಾವೇ ಕಂಡುಕೊಂಡು ಬಳಸೋಣವಂತೆ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945