ಮೈಸೂರು ದಸರಾ ಸದಾ ಸುಂದರ!

4-68d04729619a2
Published on

1610ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಕಾಲದಲ್ಲಿ ದಸರಾ ಆರಂಭಗೊಂಡಿತು. ಅರಸೊತ್ತಿಗೆಯ ಶಕ್ತಿ ಪ್ರದರ್ಶನದ ಪ್ರತೀಕವಾಗಿದ್ದ ಇದು 1971ರ ನಂತರ ರಾಜ್ಯ ಸರ್ಕಾರದಿಂದ ನಾಡಹಬ್ಬವಾಗಿ, ಜನತಾ ದಸರೆಯಾಗಿ ಆಚರಿಸಲ್ಪಡುತ್ತಿದೆ. ಪ್ರಜಾಪ್ರಭುತ್ವ ಜಾರಿ ಹಿನ್ನೆಲೆಯಲ್ಲಿ ರಾಜಾಕರ್ಷಣೆ ಕಳೆದುಕೊಂಡರೂ ಅದ್ದೂರಿತನಕ್ಕೆ ಕೊರತೆಯಾಗಿಲ್ಲ. ದೇಶ-ವಿದೇಶದ ಜನರಿಗೂ ಅವಿನಾಭಾವ ಸಂಬಂಧ, ಸೆಳೆತ.

| ಅವಿನಾಶ್ ಜೈನಹಳ್ಳಿ ಮೈಸೂರು

‘ದಸರಾ ಬಂತು ದಸರಾ, ಸಡಗರ ತಂತು ದಸರಾ’... ರಾಜ ಪರಂಪರೆಯ ವೈಭೋಗ ಮೇಳೈಸುವ, ಸಾಂಸ್ಕೃತಿಕ ಸಿರಿತನ ಪ್ರಜ್ವಲಿಸುವ, ವಿಶ್ವಪ್ರಸಿದ್ಧ ನಾಡಹಬ್ಬ ‘ಮೈಸೂರು ದಸರಾ’ ಮಹೋತ್ಸವ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ಹೊತ್ತು ಮತ್ತೆ ಬಂದಿದ್ದು, ದೇಶ, ವಿದೇಶದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ಸದಾ ಸುಂದರ ಮತ್ತು ಆಕರ್ಷಣೀಯ. ಕಾಲಕಾಲಕ್ಕೆ ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ. ಭಾಗಿಯಾಗುವ ಜನರೂ ಬದಲಾಗಿದ್ದರೂ ದಸರೆಗೆ ಈಗಲೂ ಅದೇ ರಂಗು, ಅದೇ ಮೆರುಗು. ದಸರಾ ವೈಭವ ಈ ಬಾರಿ ಸೆಪ್ಟೆಂಬರ್ 22 ರಂದು ಅನಾವರಣಗೊಳ್ಳಲಿದ್ದು, ಅಕ್ಟೋಬರ್ 2ರವರೆಗೆ ಇರಲಿದೆ. ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಏರ್​ಶೋ, ಫಲಪುಷ್ಪ ಪ್ರದರ್ಶನ, ಯುವ ದಸರೆ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ನಾಡ ಕುಸ್ತಿ, ಪಂಜ ಕುಸ್ತಿ, ಟಾಂಗಾ ಸವಾರಿ, ಡ್ರೋನ್ ಶೋ, ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ, ಜಲಸಾಹಸ ಕ್ರೀಡೆ, ದೀಪಾಲಂಕಾರ, ವಜ್ರಮುಷ್ಟಿ ಕಾಳಗ, ದಸರಾ ಕ್ರೀಡಾಕೂಟ, ಚಲನಚಿತ್ರೋತ್ಸವ, ಪಂಜಿನ ಕವಾಯಿತು... ಹೀಗೆ ಹತ್ತು ಹಲವು ಕಾರ್ಯಕ್ರಮಗಳ ವೈಭವ. ದಸರೆಯಲ್ಲಿ ಪ್ರವಾಸಿಗರು ಏನೆಲ್ಲ ನೋಡಬಹುದು, ಎಲ್ಲಿ ವಸತಿ ಅವಕಾಶವಿದೆ, ದಸರಾ ಕಾರ್ಯಕ್ರಮಗಳು ಯಾವ ಯಾವ ಸ್ಥಳದಲ್ಲಿ ನಡೆಯುತ್ತವೆ, ಟಿಕೆಟ್, ಗೋಲ್ಡ್ ಕಾರ್ಡ್ ಹೇಗೆ ಖರೀದಿಸಬೇಕು...

ಮೊದಲಾದ ಪ್ರವಾಸಿ ಮಾಹಿತಿ ಇದೋ ಇಲ್ಲಿದೆ.

ದಸರಾ ಆಹಾರ ಮೇಳ : ಈ ಬಾರಿ ದಸರಾ ಆಹಾರ ಮೇಳ 14 ದಿನಗಳ ಕಾಲ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳ ಬಗೆಬಗೆಯ ತಿಂಡಿ-ತಿನಿಸುಗಳನ್ನು ಆಹಾರಪ್ರಿಯರಿಗೆ ಉಣಬಡಿಸಲು ದಸರಾ ಆಹಾರ ಮೇಳ ಉಪ ಸಮಿತಿ ಮುಂದಾಗಿದೆ. ಬಾಳೆಎಲೆ ಬಿರಿಯಾನಿ, ಪಾರಂಪರಿಕ ತಿನಿಸು, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ, ಬಿದಿರಕ್ಕಿ ಪಾಯಸ, ಸಿರಿಧಾನ್ಯಗಳ ಉಪಾಹಾರ ಸೇರಿ ಎಲ್ಲ ಶೈಲಿಯ ಆಹಾರಗಳನ್ನು ಇಲ್ಲಿ ಸವಿಯಬಹುದು.

ಬೃಹತ್ ಡ್ರೋನ್ ಶೋ: ಈ ವರ್ಷ ಡ್ರೋನ್ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ. ಬನ್ನಿಮಂಟಪದಲ್ಲಿ ಸೆ.28 ಮತ್ತು 29ರಂದು ಪ್ರಾಯೋಗಿಕ ಪ್ರದರ್ಶನ, ಅ.1 ಮತ್ತು 2ರಂದು ಸಂಜೆ 6 ಗಂಟೆಗೆ ಮುಖ್ಯ ಪ್ರದರ್ಶನ ನಡೆಯಲಿದೆ. ಅಂದಾಜು 3 ಸಾವಿರ ಡ್ರೋನ್​ಗಳು ಬಾನಿನಲ್ಲಿ ಚಿತ್ತಾರ ಮೂಡಿಸಲಿವೆ. ಈ ವರ್ಷ ವಿಶೇಷವಾಗಿ 27ರಂದು ಮತ್ತು ಅ,1ರಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನವೂ ನಡೆಯಲಿದೆ.

ಪಂಚ ಕವಿಗೋಷ್ಠಿ: ಇದೇ ಮೊದಲ ಬಾರಿಗೆ ಕವಿಗೋಷ್ಠಿಯಲ್ಲಿ ವೃದ್ಧಾಶ್ರಮದ ವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಪೌರಕಾರ್ವಿುಕರಿಗೂ ಕವನ ವಾಚನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ದಸರೆಯ ಕವಿಗೋಷ್ಠಿಗೆ ಹೊಸತನ ನೀಡಬೇಕೆಂಬ ಉದ್ದೇಶದಿಂದ ಈ ಬಾರಿ ‘ಪಂಚ ಕಾವ್ಯದೌತಣ’ ನಡೆಸಲಾಗುತ್ತಿದೆ. ಮಾನಸಗಂಗೋತ್ರಿಯ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಸೆ.23ರಿಂದ 27ರವರೆಗೆ ಕವಿಗೋಷ್ಠಿ ನಡೆಯಲಿದೆ.

ವಿಜೃಂಭಿಸಲಿದೆ ಗಂಡá-ಕಲೆ ಕುಸ್ತಿ: ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೆ.22ರಿಂದ 28 ರವರೆಗೆ ‘ನಾಡಕುಸ್ತಿ’, ‘ರಾಜ್ಯ ಮಟ್ಟದ ಪಾಯಿಂಟ್ ಕುಸ್ತಿ’ ಹಾಗೂ ‘ಪಂಜಕುಸ್ತಿ’ ಪಂದ್ಯಾವಳಿ ರೋಚಕ ಅನುಭವ ನೀಡಲಿದೆ. ‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’, ‘ದಸರಾ ಕೇಸರಿ’, ‘ದಸರಾ ಕಿಶೋರಿ’ ಪ್ರಶಸ್ತಿಗಳ ಕುಸ್ತಿಯೂ ಇರಲಿದೆ.

ವಜ್ರಮುಷ್ಟಿ ಕಾಳಗ: ಪಾರಂಪರಿಕ ವಜ್ರಮುಷ್ಟಿ ಕಾಳಗ ಅ.2ರಂದು ನಡೆಯಲಿದ್ದು, ಮೈನವಿರೇಳುವಂತೆ ಮಾಡಲಿದೆ. ಅರಮನೆಯ ಕರಿಕಲ್ಲು ತೊಟ್ಟಿ ಅಂಗಳದಲ್ಲಿ ನಡೆಯಲಿರುವ ಕಾಳಗದಲ್ಲಿ ನಾಲ್ವರು ಜಟ್ಟಿಗಳು ‘ವಜ್ರನಖ’ ಎಂಬ ಹರಿತವಾದ ಆಯುಧದೊಂದಿಗೆ ಕಾದಾಡುತ್ತಾರೆ.

ಮಿನಿ ಜಂಬೂಸವಾರಿ: ಕಲಾಮಂದಿರದಲ್ಲಿ ಸೆ.23 ಮತ್ತು 24ರಂದು ಮಕ್ಕಳ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಯಲಿವೆ. ಮಕ್ಕಳ ದಸರಾದ ಪ್ರಮುಖ ಆಕರ್ಷಣೆ ಆಗಿರುವ ಕಲಾಥಾನ್ ಮೆರವಣಿಗೆ ಸೆ.23ರಂದು ನಡೆಯಲಿದೆ. ಶಾಲಾ ಮಕ್ಕಳು ನಡೆಸುವ ಮಿನಿ ಜಂಬೂಸವಾರಿ ಇದಾಗಲಿದೆ.

ರೈತ ದಸರಾ: ನಗರದ ಜೆ.ಕೆ. ಮೈದಾನದಲ್ಲಿ ಸೆ.26ರಿಂದ 28ರವರೆಗೆ ರೈತ ದಸರಾ ಆಯೋಜಿಸಲಾಗಿದೆ. ಗ್ರಾಮೀಣ ಸೊಗಡು, ಕೃಷಿ ಸಂಸ್ಕೃತಿ ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಸೆ.26ರಂದು ಬೆಳಗ್ಗೆ 10 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಸುಧಾರಿತ ಹೈಟೆಕ್ ಯಂತ್ರೋಪಕರಣಗಳ ಮೆರವಣಿಗೆ ನಡೆಯಲಿದೆ. ಸೆ.27ರಂದು ಹಾಲು ಕರೆ ಯುವ ರಾಜ್ಯ ಮಟ್ಟದ ಸ್ಪರ್ಧೆ, ಸೆ.28ರಂದು ಡಾಗ್ ಶೋ ಸ್ಪರ್ಧೆ ನಡೆಯಲಿದೆ.

ಖಾಸಗಿ ದರ್ಬಾರ್

ಅಂಬಾವಿಲಾಸ ಅರಮನೆಯಲ್ಲಿ ರಾಜಮನೆತನದವರು ಸಂಪ್ರದಾಯದಂತೆ ಹಮ್ಮಿಕೊಂಡಿರುವ ಖಾಸಗಿ ದರ್ಬಾರ್​ಗೆ ಸೋಮವಾರ ಚಾಲನೆ ದೊರೆಯಲಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್​ಗೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಅರಮನೆಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್​ಗಾಗಿ ಈಗಾಗಲೇ ಸಿಂಹಾಸನ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಕಂಕಣಧಾರಿಯಾದ ಯದುವೀರ ಮೊದಲಿಗೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಅದಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿಂಹಾಸನವನ್ನೇರá-ತ್ತಾರೆ. ಈ ಸಮಯಲ್ಲಿ ಯದುವೀರ ಕೈ ಎತ್ತಿ ಸೆಲ್ಯೂಟ್ ಮಾಡಿದಾಗ ಹೊಗಳುಭಟರು, ಬಹುಪರಾಕ್ ಹಾಕುತ್ತಾರೆ. ನಂತರ ವಿವಿಧ ಧಾರ್ವಿುಕ ವಿಧಿವಿಧಾನಗಳು ನಡೆಯುತ್ತವೆ.

ಮ್ಯೂರಲ್ ಶಿಲ್ಪ ಪ್ರದರ್ಶನ

ಲಲಿತಕಲೆ ಉಪ ಸಮಿತಿಯಿಂದ ನಗರದ ಕಾವಾ ಆವರಣದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ‘ಟೆರ್ರಾಕೋಟಾ ಮ್ಯೂರಲ್ ಶಿಲ್ಪ’ ಶಿಬಿರ ಆಯೋಜಿಸಲಾಗಿದ್ದು, ಕಲಾವಿದರು ವಿವಿಧ ಶೈಲಿಯ ಮ್ಯೂರಲ್ ಶಿಲ್ಪಗಳನ್ನು ತಯಾರಿಸಿದ್ದಾರೆ. ದಸರಾದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸೆ.22ರಿಂದ 30ರವರೆಗೆ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ, ರಾಜ್ಯ ಮಟ್ಟದ ಕಲಾ ಪ್ರದರ್ಶನ, ಕಲಾ ಜಾತ್ರೆ, ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆಯಲಿವೆ.

ಚಿತ್ತಾಕರ್ಷಕ ದೀಪಾಲಂಕಾರ

ದಸರಾ ದೀಪಾಲಂಕಾರ ಈ ಬಾರಿ ಹಿಂದೆಂದಿ ಗಿಂತಲೂ ಹೆಚ್ಚು ಆಕರ್ಷಣೀಯವಾಗಿಸ ಲಾಗುತ್ತಿದೆ. ಮೈಸೂರಿನ ಹೃದಯ ಭಾಗದ ಪ್ರಮುಖ ವೃತ್ತಗಳು ಸೇರಿದಂತೆ ವಿವಿಧ ಬಡಾವಣೆ ಗಳಲ್ಲಿರುವ 118 ವೃತ್ತಗಳಿಗೂ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. 136 ಕಿಮೀ ರಸ್ತೆ, 118 ವೃತ್ತಗಳು, 60 ಆಕೃತಿಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಸಹ ಆಕರ್ಷಕ ದೀಪಾಲಂಕಾರ ಇರಲಿದೆ.

ಕ್ರೀಡಾಕೂಟ ಆಯೋಜನೆ

ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ ಸೆ.22ರಿಂದ 25ರವರೆಗೆ ಆಯೋಜಿಸಲಾಗಿದೆ. ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿವಿ ವಿವಿಧ ಕ್ರೀಡಾಂಗಣ ಸೇರಿದಂತೆ 13 ಸ್ಥಳಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್​ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್​ಬಾಲ್ ಸೇರಿದಂತೆ 26 ಕ್ರೀಡೆಗಳು ನಡೆಯಲಿವೆ. ಜತೆಗೆ ಸ್ಥಳೀಯವಾಗಿ ಸೈಕಲ್ ಪೋಲೋ, ಕರಾಟೆ, ಬಾಡಿ ಬಿಲ್ಡಿಂಗ್, ಅಂಧರ ಚೆಸ್ ಸ್ಪರ್ಧೆಗಳನ್ನು ಸಂಘಟಿಸಲಾಗಿದೆ. ಈ ಬಾರಿ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಯಲಿದ್ದು, ಸಾಹಸಪ್ರಿಯರಿಗೆ ಭರಪೂರ ಥ್ರಿಲ್ ನೀಡಲಿದೆ.

ಮನ ತಣಿಸುವ ಸಂಗೀತ ಸುಧೆ

ಮೈಸೂರು ಅರಮನೆ ಮುಖ್ಯ ವೇದಿಕೆ ಸೇರಿದಂತೆ ಒಟ್ಟು 10 ವೇದಿಕೆಗಳಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.22 ರಿಂದ 30ರವರೆಗೆ ಸಂಜೆ 5 ರಿಂದ 10 ಗಂಟೆವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಪುರಭವನದಲ್ಲಿ ಬೆಳಗ್ಗೆಯಿಂದಲೇ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿವೆ. ಕಿರುರಂಗಮಂದಿರದಲ್ಲಿ ಆಧುನಿಕ ಮತ್ತು ಸಾಮಾಜಿಕ ನಾಟಕಗಳು ಮಧ್ಯಾಹ್ನದಿಂದ ಆರಂಭವಾಗಲಿವೆ. ಅರಮನೆ ವೇದಿಕೆಯಲ್ಲಿ 22ರಂದು ಗಾಯಕ ಹರಿಹರನ್ ಮತ್ತು ತಂಡದಿಂದ ಗಜಲ್ ಶಾಸ್ತ್ರೀಯ ಫ್ಯೂಷನ್, 23ರಂದು ಥೈಕ್ಕುಡಂ ಬ್ರಿಡ್ಜ್ ಲೈವ್ ತಂಡದಿಂದ ಇಂಡಿಯನ್ ಫೋಕ್ ಪ್ಯಾಷನ್, 24ರಂದು ಅನನ್ಯಾ ಭಟ್ ಮತ್ತು ತಂಡದಿಂದ ಜಾನಪದ ಗಾಯನ, 25ರಂದು ಡಾ.ಮೊಹಿಸಿನ್ ಖಾನ್ ಮತ್ತು ತಂಡದಿಂದ ಸಿತಾರ್ ವಾದನ, 26ರಂದು ಪೊಲೀಸ್ ಬ್ಯಾಂಡ್, 27ರಂದು ನೀಲಾದ್ರಿ ಕುಮಾರ್ ಮತ್ತು ತಂಡದಿಂದ ಸಿತಾರ್ ಫ್ಯೂಷನ್, 28ರಂದು ಗಾಯಕ ವಿಜಯಪ್ರಕಾಶ್ ಮತ್ತು ತಂಡದಿದಂದ ಸಂಗೀತ ಯಾನ ಕಾರ್ಯಕ್ರಮ ಗಮನ ಸೆಳೆಯಲಿವೆ.

ಪಾರಂಪರಿಕ ಟಾಂಗಾ ಸವಾರಿ

ನೂರಾರು ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡಗಳು, ಅರಮನೆಗಳು, ಸ್ಮಾರಕಗಳ ಮಹತ್ವದ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ತಿಳಿಸುವ ಉದ್ದೇಶದಿಂದ 27ರಂದು ‘ಪಾರಂಪರಿಕ ಟಾಂಗಾ ಸವಾರಿ’ ಇರುತ್ತದೆ. ಅಂದು ಪಾರಂಪರಿಕ ಉಡುಗೆಯಲ್ಲಿ ದಂಪತಿ ಪಾರಂಪರಿಕ ಟಾಂಗಾ ಸವಾರಿ ಮಾಡಬಹುದು. ಮೊದಲು ನೋಂದಣಿ ಮಾಡಿಕೊಂಡ 50 ಜೋಡಿಗಳಿಗೆ ಮಾತ್ರ ಅವಕಾಶ ಇರಲಿದೆ. ಸೆ.25ರಂದು ‘ಪಾರಂಪರಿಕ ಸೈಕಲ್ ಸವಾರಿ’, 26ರಂದು ‘ಪಾರಂಪರಿಕ ನಡಿಗೆ’ ನಡೆಯಲಿದೆ. ಬೆಳಗ್ಗೆ 7ಕ್ಕೆ ಪುರಭವನದಿಂದ ಆರಂಭವಾಗಲಿವೆ.

ಐದು ದಿನಗಳ ಕಾಲ ಯುವ ದಸರಾ

ಯುವ ಮನಸ್ಸುಗಳಿಗೆ ಸಂಗೀತದ ರಸದೌತಣವನ್ನೇ ಉಣಬಡಿಸುವ ‘ಯುವ ದಸರಾ’ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ಸೆ.23ರಿಂದ 27ರವರೆಗೆ 5 ದಿನಗಳ ಕಾಲ ಸಂಜೆ 6ರಿಂದ ರಾತ್ರಿ 10.30ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಸೆ.23ರಂದು ಸ್ಯಾಂಡಲ್​ವುಡ್ ನೈಟ್ಸ್, ಸೆ.24ರಂದು ಖ್ಯಾತ ಸಂಗೀತ ನಿರ್ದೇಶಕ, ಆಲ್ಬಂ ನಿರ್ವಪಕ ಪ್ರೀತಂ ಮತ್ತು ತಂಡ, ಸೆ.25ರಂದು ಖ್ಯಾತ ಗಾಯಕ ಜುಬಿನ್ ನೌಟಿಯಾಲ್, ಸೆ.26ರಂದು ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್, ಸೆ.27ರಂದು ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಕಾರ್ಯಕ್ರಮ ನೀಡಲಿದ್ದಾರೆ.

2 ಕಡೆ ಫಲಪುಷ್ಪ ಪ್ರದರ್ಶನ

ಈ ಬಾರಿ ಮೈಸೂರಿನ ಕುಪ್ಪಣ್ಣ ಉದ್ಯಾನದ ಜತೆಗೆ ಲಿಂಗಾಂಬುಧಿ ಕೆರೆಯ ಬಟಾನಿಕಲ್ ಗಾರ್ಡನ್​ನಲ್ಲೂ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೂ ಪುಷ್ಪಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಲಿಂಗಾಂಬುಧಿ ಕೆರೆಯಲ್ಲಿ 40 ಸಾವಿರ ಹೂವಿನ ಗಿಡಗಳು ನೋಡುಗರನ್ನು ಸ್ವಾಗತಿಸಲಿವೆ. ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ ಲಕ್ಷಾಂತರ ಹೂಗಳಿಂದ ಈ ಸಲ ಸಬರಮತಿ ಆಶ್ರಮ ಮಾದರಿ ನಿರ್ವಣವಾಗಲಿದೆ.

ಪರಂಪರೆಗೆ ಒತ್ತು

ಜೆ.ಕೆ. ಮೈದಾನದಲ್ಲಿ ಸೆ.23ರಿಂದ 26ರವರೆಗೆ ಮಹಿಳಾ ದಸರಾ ಮೇಳೈಸಲಿದೆ. ಮೊದಲ ಬಾರಿಗೆ ಸೆ.25ರಂದು ಬೆಳಗ್ಗೆ 10ಕ್ಕೆ ಮಹಿಳೆಯರ ಪಾರಂಪರಿಕ ನಡಿಗೆ ನಡೆಯಲಿದ್ದು, ಮಹಿಳೆಯರು ಕೆ.ಆರ್.ವೃತ್ತದಿಂದ ಜೆ.ಕೆ.ಮೈದಾನದವರೆಗೂ ಹೆಜ್ಜೆ ಹಾಕಲಿದ್ದಾರೆ. 1500ಕ್ಕೂ ಮಹಿಳೆಯರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಹೂ ಮುಡಿದು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ಜಿಐ ಟ್ಯಾಗ್ ಪಡೆದಿರುವ ಮೈಸೂರು ಉತ್ಪನ್ನಗಳನ್ನು ಕೈಯಲ್ಲಿ ಹಿಡಿದು ಸಾಗಲಿರುವುದು ಈ ಬಾರಿಯ ವಿಶೇಷವಾಗಿದೆ. ಜತೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳು ನಡೆಯಲಿವೆ.

ಮೊದಲ ದಿನದ ಕಾರ್ಯಕ್ರಮಗಳು ಎಲ್ಲೆಲ್ಲಿ?: ಶ್ರೀಚಾಮುಂ ಡೇಶ್ವರಿ ದೇವಾಲಯದ ಎದುರು ಸೋಮವಾರ ಬೆಳಗ್ಗೆ 9.30ಕ್ಕೆ ದಸರಾ ಕ್ರೀಡಾಜ್ಯೋತಿಗೆ, ಕುಪ್ಪಣ್ಣ ಪಾರ್ಕ್​ನಲ್ಲಿ ಮಧ್ಯಾಹ್ನ 12.30ಕ್ಕೆ ದಸರಾ ಫಲಪುಷ್ಪ ಪ್ರದರ್ಶನಕ್ಕೆ, ಸಂಜೆ 4ಕ್ಕೆ ದೇವರಾಜ ಅರಸು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಗೆ, ಸಂಜೆ 5.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟಕ್ಕೆ, ಸಂಜೆ 7.30ಕ್ಕೆ ವಸ್ತುಪ್ರದರ್ಶನ ಆವರಣದಲ್ಲಿ ವಸ್ತುಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಕ್ಕೆ ಸಚಿವ ಕೆ.ಎಚ್.ಮುನಿಯಪ್ಪ, ಸಂಜೆ 4ಕ್ಕೆ ಕಾವಾ ಕಾಲೇಜಿನಲ್ಲಿ ಚಿತ್ರಕಲಾ ಶಿಬಿರಕ್ಕೆ ಮತ್ತು 5ಕ್ಕೆ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳಕ್ಕೆ ಸಚಿವ ಶಿವರಾಜ್ ತಂಗಡಗಿ, ಸಂಜೆ 5ಕ್ಕೆ ಜೆ.ಕೆ.ಮೈದಾನದ ಅಲುಮ್ನಿ ಸಂಘ ಸಭಾಭವನದಲ್ಲಿ ‘ಯೋಗಾ ದಸರಾ’ ನೃತ್ಯ ನಾಟಕಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯ ಹಸಿರು ಮಂಟಪದಲ್ಲಿ ದಸರಾ ದೀಪಾಲಂಕಾರಕ್ಕೆ ಇಂಧನ ಕೆ.ಜೆ.ಜಾರ್ಜ್ ಚಾಲನೆ ನೀಡಲಿದ್ದಾರೆ.

ಅ. 2ರಂದು ಜಂಬೂಸವಾರಿ : ದಸರೆಯ ಪ್ರಮುಖ ಆಕರ್ಷಣೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದ ಗಜಪಡೆಯ ಜಂಬೂಸವಾರಿ ಅ.2ರಂದು ವಿಜಯದಶಮಿ ದಿನ ನಡೆಯಲಿದೆ. ಅಂದು ಮಧ್ಯಾಹ್ನ 1ರಿಂದ 1.18ರವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ಬಳಿಕ ಅರಮನೆ ಒಳಗೆ ಸಂಜೆ 4.42ರಿಂದ 5.06ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮೆರವಣಿಗೆ ಹೊರಡಲಿದೆ. ಸ್ತಬ್ಧಚಿತ್ರಗಳು, ಕಲಾತಂಡಗಳು ಇರಲಿವೆ. ಬನ್ನಿಮಂಟಪದಲ್ಲಿ ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಗೌರವ ವಂದನೆ ಸ್ವೀಕರಿಸುವರು.

ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ಅರಮನೆ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕನ್ನಡ- ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪಂಡಿತ ಎಂ.ವೆಂಕಟೇಶ್​ಕುಮಾರ್ ಸ್ವೀಕರಿಸಲಿದ್ದಾರೆ.

ಚಾಮುಂಡೇಶ್ವರಿ ದೇವಿಗೆ ಲೇಖಕಿ ಬಾನು ಮುಷ್ತಾಕ್​ರಿಂದ ಪೂಜೆ

ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಸೋಮವಾರ ಬೆಳಗ್ಗೆ 10.10ರಿಂದ 10.40ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಈ ವರ್ಷದ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಶಾಸಕ ಜಿ.ಟಿ.ದೇವೇಗೌಡ ಮತ್ತಿತರರು ಹಾಜರಿರುತ್ತಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದಲ್ಲಿ ಬೃಹತ್ ವೇದಿಕೆ, ಆಸನ ವ್ಯವಸ್ಥೆ ಸಿದ್ಧವಾಗಿದ್ದು, ಮಳೆ ಬಂದರೆ ಸೋರದಂತೆ ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಈ ಬಾರಿ 11 ದಿನ ವಿವಿಧೆಡೆ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದ್ದು ಅ. 2ರಂದು ಜಂಬೂಸವಾರಿ, ಪಂಜಿನ ಕವಾಯತಿನೊಂದಿಗೆ ಉತ್ಸವಕ್ಕೆ ತೆರೆಬೀಳಲಿದೆ.

ನಾಡಹಬ್ಬವಾದ ದಸರಾ ಉದ್ಘಾಟನೆ ಮಾಡಲು, ಸರ್ಕಾರ ಅವಕಾಶ ಕಲ್ಪಿಸಿರುವುದು ನನ್ನ ಬದುಕಿನ ಸಾರ್ಥಕ ಕ್ಷಣ. ಇದು ಕಾಕತಾಳೀಯವಾದರೂ ನಿಜ. ನನ್ನ ಹೆಸರು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆಯಾದ ಸಂದರ್ಭದಲ್ಲಿ ಸ್ನೇಹಿತೆ ಮೀನಾ ಮೈಸೂರು ಅವರು ಈ ಪ್ರಶಸ್ತಿ ನನಗೆ ಬರಲಿ ಎಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಹರಕೆ ಹೊತ್ತಿದ್ದರಂತೆ. ಅದು ಫಲಿಸಿದ್ದು ಈ ವಿಷಯವನ್ನು ನನಗೆ ಅವರು ತಿಳಿಸಿದ್ದರು. ಅಂದಿನಿಂದ ಚಾಮುಂಡಿ ದರ್ಶನಕ್ಕೆ ಹೋಗಿ ಬರಬೇಕು ಎಂದುಕೊಂಡಿದ್ದೆ. ಹಾಗಾಗಿ ಕಳೆದ ಸಲ ಬುಕ್ ಫೆಸ್ಟಿವಲ್ ನಡೆದಾಗ ಮೈಸೂರಿಗೆ ಹೋಗಿದ್ದೆ. ಆದರೆ ಕಾರ್ಯದೊತ್ತಡದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಲು ಆಗಿರಲಿಲ್ಲ. ಮತ್ತೊಮ್ಮೆ ಮೈಸೂರಿಗೆ ಹೋದಾಗ ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ಅಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ದಸರಾ ಉದ್ಘಾಟನೆಗೆ ಈ ಬಾರಿ ನಿಮ್ಮನ್ನೇ ಆಯ್ಕೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಫೋನ್ ಮಾಡಿ ತಿಳಿಸಿದರು. ಆಗ ಅತ್ಯಂತ ಸಂತೋಷವಾಯಿತು. ಅದು ಮರೆಯಲಾಗದ ಕ್ಷಣ. ವಾದ-ವಿವಾದಗಳಿಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಆದರೆ, ನಾಡಹಬ್ಬ ದಸರಾ ಉದ್ಘಾಟನೆ ಮಾಡಲು ನನಗೆ ಅವಕಾಶ ದೊರೆತಿರುವುದು ಸಂತಸದ ಸಂಗತಿ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆಗಳು.| ಬಾನು ಮುಷ್ತಾಕ್ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರು

ವೆಬ್​ಸೈಟ್​ನಲ್ಲಿ ಟಿಕೆಟ್ ಖರೀದಿಸಿ

ಪ್ರವಾಸಿಗರಿಗೆ ದಸರಾ ಜಂಬೂಸವಾರಿ, ಡ್ರೋನ್ ಶೋ, ವೈಮಾನಿಕ ಪ್ರದರ್ಶನ, ಪಂಜಿನ ಕವಾಯಿತು ಹಾಗೂ ಯುವ ದಸರೆಗೆ ಟಿಕೆಟ್ ಮತ್ತು ಗೋಲ್ಡ್ ಕಾರ್ಡ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ಮೈಸೂರು ದಸರಾ ಅಧಿಕೃತ ಜಾಲತಾಣ ಜಠಿಠಿಟಠ://ಞಢಠಟ್ಟಛಿಛಚಠಚ್ಟಚ.ಜಟಡ.ಜ್ಞಿ/ ರಲ್ಲಿ ಖರೀದಿಸಬಹುದು. ಮೈಸೂರು ನಗರದಲ್ಲಿ 450ಕ್ಕೂ ಹೆಚ್ಚು ಹೋಟೆಲ್, ರೆಸಾರ್ಟ್​ಗಳಿದ್ದು, 10 ಸಾವಿರಕ್ಕೂ ಹೆಚ್ಚು ರೂಮ್ಳಿವೆ. ಸಾವಿರ ರೂ.ಗಳಿಂದ 20 ಸಾವಿರ ರೂ.ವರೆಗೂ ರೂಮ್ಳು ಸಿಗುತ್ತವೆ. ಪಂಚತಾರಾ ಹೋಟೆಲ್​ಗಳೂ ಇದ್ದು, ದಸರೆ ನೋಡಲು ಬರುವವರು ಮೊದಲೇ ರೂಮ್ ಬುಕ್ ಮಾಡಿ ಬರಬೇಕು. ಮೈಸೂರಿನಲ್ಲಿ ಸಿಗದಿದ್ದರೂ ಪಕ್ಕದ ಮಂಡ್ಯ, ಶ್ರೀರಂಗಪಟ್ಟಣ, ನಂಜನಗೂಡು ಮೊದಲಾದೆಡೆ ವಸತಿ ಸೌಕರ್ಯ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net