

ಮನುಷ್ಯನು ಆರೋಗ್ಯದಿಂದ ಇರಬೇಕಾದರೆ ಜೀವಿತಾವಧಿಯಲ್ಲಿ ಮಾಡಲೇಬೇಕಾದ ಹಾಗೂ ಅನುಸರಿಸಲೇಬೇಕಾದ ಹಲವಾರು ವಿಚಾರಗಳನ್ನು ದಿನಚರ್ಯು, ಋತುಚರ್ಯು, ರಾತ್ರಿಚರ್ಯು ಸದ್ವೃತ್ತ ಮತ್ತು ಸ್ವಸ್ಥವೃತ್ತಗಳೆಂಬ ವಿಧಿವಿಧಾನಗಳ ಮೂಲಕ ಆಯುರ್ವೆದವು ತೆರೆದಿಟ್ಟಿದೆ. ವ್ಯಕ್ತಿಯ ಬದುಕಿನಲ್ಲಿ ಮಾಡಲೇಬಾರದ ಕೆಲವೊಂದು ವಿಚಾರಗಳೂ ಇವೆ. ಮಲ, ಮೂತ್ರವೇ ಮೊದಲಾದ ಹದಿಮೂರು ವೇಗಗಳನ್ನು ತಡೆಹಿಡಿಯಬಾರದು, ಹಾಗೆಂದು ಯಾವಾಗಲೋ ಒಮ್ಮೆ ತಡೆಯುಂಟಾದರೆ ತೊಂದರೆಯಾಗುವುದಿಲ್ಲ. ಅದೇ ನಿತ್ಯವೂ ನಡೆದರೆ ಅದರಿಂದ ಅನೇಕ ರೋಗಗಳು ಬರುತ್ತವೆ. ಇವುಗಳಿಗೆ ಅಧಾರಣೀಯ ವೇಗಗಳು ಎನ್ನುತ್ತೇವೆ.
ಈ ಸಹಜ ವೇಗಗಳನ್ನು ತಡೆದರೆ ಬರುವ ರೋಗಗಳನ್ನೂ ವಿವರಿಸಿ ಹೇಳಲಾಗಿದೆ. ಬಾಯಾರಿಕೆ ಆದಾಗ ನೀರು ಕುಡಿಯದೆ ಹಾಗೆಯೇ ಸುಮ್ಮನಾದರೆ ಬರುವ ಜಾಡ್ಯಗಳಲ್ಲಿ ಮೈ ಉರಿಯೂ ಒಂದು. ಬಾಯಾರಿಕೆಯನ್ನು ತಡೆಯುವುದರಿಂದ ದೇಹದಲ್ಲಿರುವ ಏಳು ಧಾತುಗಳಲ್ಲಿ ರಸಧಾತು ಹಾಗೂ ಅದರ ಅಂಶಗಳು ಕ್ಷೀಣವಾಗಿ ಶರೀರದ ಉಷ್ಣತ್ವವನ್ನು ಹೆಚ್ಚಿಸುತ್ತದೆ. ಪಿತ್ತದ ಗುಣವಾದ ಈ ಉಷ್ಣತ್ವವು ದೇಹದ ಒಳಭಾಗದಲ್ಲಿ ಅಥವಾ ಹೊರಮೈಯಲ್ಲಿ ಉರಿಯನ್ನು ಉಂಟುಮಾಡುತ್ತದೆ. ಇದರಿಂದ ವ್ಯಕ್ತಿಯ ಉತ್ಸಾಹ ಕುಂದಿ ಚಟುವಟಿಕೆಗಳು ನಿಲ್ಲುತ್ತವೆ. ದೇಹವು ಕ್ಷೀಣವಾಗುತ್ತ್ತ ಬಲವನ್ನು ಕಳೆದುಕೊಂಡು ನಡುಕವನ್ನೂ ಉಂಟುಮಾಡುವುದಿದೆ. ದಾಹವು ರೋಗವೂ ಹೌದು, ಕೆಲವೊಮ್ಮೆ ಲಕ್ಷಣವೂ ಹೌದು, ಮತ್ತೆ ಕೆಲವೊಮ್ಮೆ ಪೂರ್ವ ಚಿಹ್ನೆಯೂ ಅಹುದು.
ಮಧುಮೇಹ ಇನ್ನೇನು ಪ್ರಾರಂಭವಾಗುತ್ತದೆ ಎನ್ನುವ ಹಂತದಲ್ಲಿ ಹಸ್ತ ಪಾದಗಳಲ್ಲಿ ಉರಿಯ ಅನುಭವ ಕೆಲವು ತಿಂಗಳುಗಳ ಕಾಲ ಆಗುವುದಿದೆ. ಮಧುಮೇಹದ ಪ್ರಾರಂಭಿಕ ಚಿಹ್ನೆಗಳಲ್ಲಿ ಒಂದಾಗಿ ಆಯುರ್ವೆದ ಇದನ್ನು ಹೇಳಿದೆ. ಸಾಮಾನ್ಯವಾಗಿ ಜನರಿಗೆ ಈ ಬಗ್ಗೆ ಅರಿವು ಇರುವುದಿಲ್ಲ. ಹಾಗೆಯೇ ತಾತ್ಸಾರ ಮಾಡಿಬಿಡುತ್ತಾರೆ. ಇದಾದ ಕೆಲ ಸಮಯದ ಬಳಿಕ ಮಧುಮೇಹ ಪ್ರತ್ಯಕ್ಷವಾಗುತ್ತದೆ! ಪಾದದ ಉರಿ ಆರಂಭವಾದಾಗಲೇ ಎಚ್ಚೆತ್ತು ಪ್ರತಿದಿನ ಬೆಳಗ್ಗೆ ನಡಿಗೆ, ವ್ಯಾಯಾಮ, ಆಹಾರದಲ್ಲಿ ನಿಯಂತ್ರಣವನ್ನು ಮಾಡಿ, ಹಗಲುನಿದ್ರೆ ಮಾಡದೆ, ಆಲಸ್ಯದಿಂದ ಬದುಕನ್ನು ಕಳೆಯದೆ ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿ ನಾಳೆ ಎಡತಾಕುವ ಡಯಾಬಿಟಿಸ್ ಅನ್ನು ಕನಿಷ್ಠಪಕ್ಷ ಏಳೆಂಟು ವರ್ಷವಾದರೂ ಮುಂದಕ್ಕೆ ಹಾಕಲು ಸಾಧ್ಯವಾಗುತ್ತದೆ! ಮಧುಮೇಹ ಬಂದು ಹಲವಾರು ವರ್ಷಗಳು ಕಳೆದ ಮೇಲೆ ಮತ್ತೆ ಈ ಹಸ್ತ ಪಾದದ ಉರಿಗಳು ಕಾಣಿಸಿಕೊಳ್ಳುವುದಿದೆ. ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣದಲ್ಲಿ ಇಲ್ಲದಿದ್ದರೆ, ಬೇಕಾಬಿಟ್ಟಿ ಆಹಾರ ಕ್ರಮಗಳಿದ್ದರೆ, ದೇಹಕ್ಕೆ ಸಮಂಜಸವಾದ ಯಾವುದೇ ವ್ಯಾಯಾಮ ಚಟುವಟಿಕೆ ಗಳು ಇಲ್ಲವಾಗಿದ್ದರೆ ಈ ಉರಿ ಬೇಗನೇ ಕಾಡಲು ಆರಂಭವಾಗುತ್ತದೆ.
ರಕ್ತದಲ್ಲಿ ಅಧಿಕವಾಗಿರುವ ಸಕ್ಕರೆಯ ಅಂಶದಿಂದ ನರಮಂಡಲವೇ ತೊಂದರೆಗೆ ಈಡಾಗಿ ಈ ಉಪದ್ರವ ಕಾಣಿಸಿಕೊಳ್ಳುತ್ತದೆ. ವಿಶೇಷವೆಂದರೆ ಈ ಉರಿ ಮಧ್ಯಾಹ್ನದ ಹೊತ್ತಿನಲ್ಲಿ ಹಾಗೂ ಮಧ್ಯರಾತ್ರಿಯ ಸಮಯದಲ್ಲೇ ಹೆಚ್ಚಾಗಿ ಕಾಡುತ್ತದೆ. ರಾತ್ರಿ ಹವಾಮಾನ ತಂಪಾಗಿದ್ದು ಚಳಿಯು ಹೆಚ್ಚಿರುವ ಹೊತ್ತಿನಲ್ಲಿ ಉರಿ ಯಾಕೆ ಜಾಸ್ತಿಯಾಗುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಈ ಉರಿ ಅಥವಾ ದಾಹ ಎಂಬುದು ಪಿತ್ತ ಸಂಬಂಧೀ ಕಾಯಿಲೆ. ಮಧ್ಯಾಹ್ನ ಹತ್ತು ಗಂಟೆಯಿಂದ ಅಪರಾಹ್ನ ಎರಡು ಗಂಟೆಯ ತನಕ ಪಿತ್ತವು ಏರುವ ಸಮಯ. ಅದೇ ರೀತಿ ರಾತ್ರಿ ಹತ್ತು ಘಂಟೆಯಿಂದ ತಡರಾತ್ರಿ ಎರಡು ಘಂಟೆಯ ತನಕದ ಸಮಯವೂ ಪಿತ್ತವು ಹೆಚ್ಚಾಗಿರುವ ಕಾಲ! ಆ ಸಮಯದಲ್ಲೇ ಮೈ ಉರಿ ಹೆಚ್ಚಾಗುವುದರಿಂದ ಇದು ಪಿತ್ತ ದೋಷದ ಉಲ್ಬಣದಿಂದಾಗುವ ವ್ಯಾಧಿ ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ.
ಈ ದಾಹ ರೋಗವು ಉಂಟಾಗಲು ಪ್ರಮುಖವಾಗಿ ಏಳು ಕಾರಣಗಳಿವೆ. ಮದ್ಯಪಾನ, ರಕ್ತದ ವ್ಯಾಧಿ, ಪಿತ್ತದೋಷ, ಬಾಯಾರಿಕೆಯನ್ನು ತಡೆಹಿಡಿಯುವುದು, ಆಘಾತದಿಂದಾಗುವ ಆಂತರಿಕ ರಕ್ತಸ್ರಾವ, ಧಾತುಕ್ಷಯದಿಂದ ಅದರಲ್ಲೂಮುಖ್ಯವಾಗಿ ರಸ, ಮೇದ, ಶುಕ್ರ, ಮಜ್ಜಾ, ಶುಕ್ರ ಧಾತು ಹಾಗೂ ಉಪಧಾತುಗಳ ಕ್ಷಯದಿಂದ, ಶರೀರದ ಗಾಯಗಳಿಂದ - ಈ ಕಾರಣಗಳಿಂದ ದೇಹದ ಒಳಗೆ ಅಥವಾ ಹೊರಮೈಯಲ್ಲಿಉರಿ ಕಾಣಿಸಿಕೊಳ್ಳುತ್ತದೆ. ಪಿತ್ತದ ಐದು ವಿಧಗಳ ಪೈಕಿಉದರದಲ್ಲಿರುವ ಪಾಚಕ ಪಿತ್ತ ಹಾಗೂ ಚರ್ಮದಲ್ಲಿನೆಲೆನಿಂತಿರುವ ಭ್ರಾಜಕ ಪಿತ್ತಗಳು ಮುಖ್ಯ ಪಾತ್ರವಹಿಸುತ್ತವೆ. ಹಾಗಾಗಿ ಇಲ್ಲಿ ಪಿತ್ತ ಶಮನ ಮಾಡುವ ಚಿಕಿತ್ಸೆ ಹಾಗೂ ರಸರಕ್ತ ಧಾತುಗಳನ್ನು ಪೋಷಿಸುವ ಕ್ರಮಗಳಿಗೆ ಆದ್ಯತೆ ನೀಡಿದರೆ ಚಿಕಿತ್ಸೆ ಫಲಪ್ರದವಾಗುತ್ತದೆ. ಮಧುಮೇಹ ರೋಗಿಗಳಲ್ಲಿ ಕಂಡುಬರುವ ಉಪದ್ರವಗಳಲ್ಲಿ ಅತಿಬೇಗನೇ ಬಂದೆರಗುವ ಉಪಟಳ ಕೈಕಾಲು ಉರಿ. ಒಂದೆಡೆ ಮಧುಮೇಹ, ಇನ್ನೊಂದೆಡೆ ಮದ್ಯಪಾನ. ಎರಡೂ ಸೇರಿಕೊಂಡರೆ ಕೈಕಾಲು ಉರಿ ಕಟ್ಟಿಟ್ಟ ಬುತ್ತಿ. ಮದ್ಯದಲ್ಲಿರುವ ಉಷ್ಣ ಹಾಗೂ ತೀಕ್ಷ್ಣ ಗುಣಗಳು ಪಿತ್ತವನ್ನು ಹೆಚ್ಚಿಸಿ ರಸ, ರಕ್ತಗಳು ಕ್ಷೀಣಿಸುವಂತೆ ಮಾಡಿಮೈ ಉರಿಯನ್ನು ಉಂಟುಮಾಡುತ್ತದೆ. ಮದ್ಯಪಾನ ವರ್ಜಿಸಿ ರೋಗ ತ್ಯಜಿಸುವುದೇ ಕ್ಷೇಮ.