

ನಮ್ಮ ಚಿಕ್ಕ ಕುಟುಂಬದಲ್ಲಿ ಅಪ್ಪನೇ ಆಲದ ಮರ. ಬಹಳ ವರ್ಷಗಳ ಬಳಿಕ ಹುಟ್ಟಿದ ನಾನು ಅವರ ಮುದ್ದಿನ ಮಗಳು. ಮೊದಲ ಮಗು ಹೆಣ್ಣಾಗಲಿ ಅಪ್ಪ ದೇವರಲ್ಲಿ ಹರಕೆ ಕಟ್ಟಿದ್ದರಂತೆ. ಆ ದೇವರ ವರದಿಂದ ಜನಿಸಿದ್ದಕ್ಕೆ ನನ್ನ ಮೇಲೆ ತಂದೆಯವರದ್ದು ಬಹಳ ಪ್ರೀತಿ. ನನಗೆ ತಂಗಿ, ತಮ್ಮ ಇದ್ದರೂ ಅಪ್ಪನ ಪ್ರೀತಿಯ ಹೆಚ್ಚಿನ ಪಾಲು ನನಗೆ. ನಾನು ಯಾವುದೇ ಕೆಲಸಕ್ಕೂ ಮುಂದಾದರೂ ಅದಕ್ಕೆ ಮೊದಲ ಒಪ್ಪಿಗೆ ಅಪ್ಪನದಾಗಿರುತ್ತಿತ್ತು. ಎಂದಿಗೂ ಬೇಸರಿಸಿಕೊಂಡವರಲ್ಲ. ಹಾಗಾಗಿ ಅಪ್ಪ ನನ್ನ ಜೀವನದ ಮೊದಲ ಹೀರೋ. ನಾನು ಅವರ ಎದೆಯ ಮೇಲೆ ಇಟ್ಟ ಪುಟ್ಟ ಹೆಜ್ಜೆ, ತೊದಲು ನುಡಿಯೇ ಅವರಿಗೆ ಸ್ವರ್ಗ ಸದೃಶವಾಗಿತ್ತು. ಬೆಳೆದು ದೊಡ್ಡವಳಾದ ಮೇಲೆ ಹಾಸ್ಟೆಲ್ಗೆ ಹೋಗುವಾಗ ಅವರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗಗಳು ಇವೆ. ಆಗ ಮಗು ನಾನೋ, ಅವರೂ ಎಂದು ಅನ್ನಿಸಿದ್ದಿದೆ. ಆ ಭಾವನೆಗೆ ಇಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದೇ ಅಪ್ಪನ ತೋಳ ಸ್ಪರ್ಶದ ಅನುಭವ ಇಂದಿಗೂ ನನ್ನನ್ನು ತೇಲಿಸುತ್ತಿದೆ.
| ಅಕ್ಷತಾ ನಂದಿಕೇಶ್ವರಮಠ ವಿಜಯಪುರ