

ಈ ಬಾರಿ ಮಳೆ ಕಾಲ ಬಲುಜೋರು. ಯಾರೂ ಅದನ್ನು ಮರೆಯುವಂತೆಯೇ ಇಲ್ಲ. ಚಳಿಗಾಲಕ್ಕೂ ಮಳೆಗಾಲವು ಮೈಚಾಚಿಕೊಂಡಿತ್ತು. 25 ವರ್ಷಗಳಲ್ಲಿ ಅತಿ ಹೆಚ್ಚು ಕಾಲ ಮಳೆಗಾಲ ಈ ಬಾರಿ ಇತ್ತು. ಚಳಿಗಾಲ ಮುಗಿಯುತ್ತಾ ಬಂದರೂ ಮಳೆಗಾಲದ ಮೋಡಗಳು ಇನ್ನೂ ಮನೆಗೆ ಹೋಗಿಲ್ಲ! ಹೀಗಾಗಿ ಥಂಡಿ- ಕೊರೆತ ಜಾಸ್ತಿ. ಶೀತವೂ ಅಧಿಕ. ಇದು ನಮ್ಮ ಸ್ಥಿತಿ. ದೇಶದ ಜಿಡಿಪಿಗೂ ಇದೇ ಸ್ಥಿತಿ. ಥಂಡಿಯಿಂದಾಗಿ ವ್ಯವಹಾರ ಚಟುವಟಿಕೆಗಳು ಶೀತ- ನೆಗಡಿಗೆ ಸಿಲುಕಿದ್ದವು. ಇದನ್ನೇ ಥಂಡಾ ಹೊಡೆದಿದೆ ಜೆಡಿಪಿ ಎಂದು ತಮಟೆ ಬಾರಿಸಿ ಕಹಳೆ ಊದಿದವರು ನಮ್ಮಲ್ಲಿದ್ದರು. ನೆಗಡಿಗೆ ಶಸ್ತ್ರಚಿಕಿತ್ಸೆ ಬೇಕೇ? ಇಲ್ಲ. ಇನ್ನೇನಿದ್ದರೂ ನೆಗಡಿ- ಮೈಚಳಿ ಬಿಟ್ಟುಬಿಡುವ ಮಾತು. ಇನ್ನು ಸಂಕ್ರಾಂತಿಯಿಂದ ಜಿಡಿಪಿಗೆ ಸುಗ್ಗಿ ಕಾಲದ ಆರಂಭ. ವೈಕುಂಠ ಏಕಾದಶಿಯು ಈ ವರ್ಷ ಜನವರಿಗೇ ಬಂದಿದೆ. 2019ರಲ್ಲಿ ವೈಕುಂಠ ಏಕಾದಶಿಯೇ ಇರಲಿಲ್ಲ! ಆಗ ನಮಗೆ, ದೇಶದ ಜಿಡಿಪಿಗೆ ಸ್ವರ್ಗದ ಬಾಗಿಲು ತೆಗೆಯಲಿಲ್ಲ. ಏಕೆಂದರೆ ಮೊದಲು ಬರ, ಆಮೇಲೆ ಪ್ರವಾಹಗಳಾಗಿ ಹಳ್ಳಿಯ ಜನಸಾಮಾನ್ಯರ ಬದುಕಿಗೆ ಗರ ಬಡಿಯಿತು. ಅದನ್ನು ಕೇಳುವವರೇ ಇರಲಿಲ್ಲ.
ಈಗ ಹಳ್ಳಿಗಳಲ್ಲಿ ಸುಭಿಕ್ಷ ಕಾಲ. ಕೆರೆ ಕಟ್ಟೆ ಅಣೆಕಟ್ಟುಗಳಲ್ಲಿ ಜಲರಾಶಿ ಅದ್ಭುತವಾಗಿದೆ. ಹಳ್ಳಿಯ ಸುಭಿಕ್ಷಕಾಲವು ದೇಶದ ಅರ್ಥ ವ್ಯವಸ್ಥೆಯ, ಜಿಡಿಪಿಗೆ ಸುಭಿಕ್ಷಕಾಲ ತರಲಿದೆ. 2020ರಲ್ಲಿ ಸ್ವರ್ಗದ ಬಾಗಿಲು ತೆರೆದಿದೆ. ಇನ್ನೇನಿದ್ದರೂ ಉತ್ತರಾಯಣ ಪುಣ್ಯಕಾಲ. ಇನ್ನು ಒಳ್ಳೆಯ ಮಾತುಗಳು ಹೆಚ್ಚು ಹೆಚ್ಚಾಗಿ ಬರುತ್ತದೆ. ಒಂದು ಮಾತು ಮಾತ್ರ ನೆನಪಿರಲಿ. ನಮ್ಮ ದೇಶದ ಜಿಡಿಪಿಗೂ ಹಳ್ಳಿಯ ಬದುಕಿಗೂ ಸಂಬಂಧ ಇಲ್ಲ. ನೀವು ಇದನ್ನು ನಂಬುವುದೂ ಇಲ್ಲ. ಇದು ಹೀಗಿದೆ ನೋಡಿ: ನಮ್ಮ ದೇಶದ ಹಣದ ಜಲಾಶಯಗಳು- ಸರ್ಕಾರ ಹಾಗೂ ಬ್ಯಾಂಕ್ ಗಳು. ಇವುಗಳ ಕಾಲುವೆಗಳು ಕಂಪನಿಗಳಿಗೆ ಇದೆ. ನೂರು ಸಹಸ್ರ ಲಕ್ಷ ಕೋಟಿ ರೂ.ಗಳ ಹಣದ ಹೊಳೆ ಈ ಕಾಲುವೆಗಳ ಮೂಲಕ ಕಂಪನಿಲೋಕಕ್ಕೆ ಹರಿಯುತ್ತಿದೆ. ಆದರೆ ಹಳ್ಳಿಯ ಲೋಕಕ್ಕೆ ಈ ಭಾಗ್ಯ ಇಲ್ಲ.
ಒಂದು ನಿದರ್ಶನ ನೋಡಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಈ ರೈತರಿಗೆ ರಾಯಧನ- ಪ್ರಧಾನಿ ಕೃಷಿ ಸಮ್ಮಾನ ನಿಧಿ ಯೋಜನೆ. ಈ ಸಾಲಿನಲ್ಲಿ 75,000 ಕೋಟಿ ರೂಪಾಯಿ ಮಂಜೂರು ಆಗಿದೆ ಕೇಂದ್ರ ಬಜೆಟ್ ನಲ್ಲಿ. ಈ ವರ್ಷದ ಬಟವಾಡೆ ಮುಗಿದುಹೋಗಿದೆ. ಕೊಡಲು ಸಾಧ್ಯವಾಗಿದ್ದು 45,000 ಕೋಟಿ ರೂಪಾಯಿ ಮಾತ್ರ! ದೇಶದಲ್ಲಿ 14 ಕೋಟಿ ರೈತರಿದ್ದಾರೆ. ಕೊಡಲು ಸಾಧ್ಯವಾಗಿದ್ದು 6.5 ಕೋಟಿ ರೈತರಿಗೆ ಮಾತ್ರ!! ಇದು ಹಳ್ಳಿಯ ಹಣದ ಕಾಲುವೆ ಸ್ಥಿತಿ. ಹೀಗಾಗಿ ಹಳ್ಳಿಯ ಹಣಕಾಸು ಮುಗ್ಗಟ್ಟು ಲೆಕ್ಕಕ್ಕೇ ಇಲ್ಲ. ಬರ - ಪ್ರವಾಹಗಳಾಗಿದ್ದರೂ - ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಒಂದು ಮಾತು. ಬಿರುಬೇಸಿಗೆಯಲ್ಲಿ ಕಾಡು ಬೆಂಗಾಡಾಗುತ್ತದೆ. ಮಳೆಗಾಲದಲ್ಲಿ ಹಸಿರೇ ಉಸಿರಾಗಿ ಕಾಡು ಕಂಗೊಳಿಸುತ್ತದೆ. ಇದೇ ಹಳ್ಳಿಯ ಅರ್ಥ ವ್ಯವಸ್ಥೆಯ ಬಂಡವಾಳ- ಪ್ರಕೃತಿ. ಇಲ್ಲಿ ಅಳಿವು ಉಳಿವು ಪ್ರಕೃತಿ ಸಹಜ ಧರ್ಮ. ಕಂಪನಿಗಳ ಲೋಕಕ್ಕೆ ಇದಿಲ್ಲ. ಹಣದ ಕಾಲುವೆ ಕಂಪನಿಗಳಿಗಿದೆ; ಹಳ್ಳಿಗಳಿಗೆ ಇಲ್ಲ. ಒಂದು ಉಪಕಥೆ ನೋಡಿ:
ಅರ್ಥ ವ್ಯವಸ್ಥೆಯಲ್ಲಿ ಏರುಪೇರಾಗಬಹುದು. ಅದನ್ನು ಮುಗ್ಗಟ್ಟು ಎಂದು ಭಾವಿಸಿದರೆ ಅದು ಮೂರ್ಖತನ. ನೆಗಡಿಗೆ ಮೂಗು ಕೊಯ್ಯಬೇಕಿಲ್ಲ. ಅಸಿಡಿಟಿಗೆ ಮಾತ್ರೆ ಸಾಕು; ಆಪರೇಷನ್ ಬೇಕಿಲ್ಲ. ಆದರೆ ಮೂವರು ಮೂರ್ಖರು ನಮ್ಮಲ್ಲಿದ್ದಾರೆ. ಇವರು ಪರದೇಶಿ ಆರ್ಥಿಕ ಪಂಡಿತರು. ಇವರು ಕಾಯಾ-ವಾಚಾ-ಮನಸಾ ಅಮೆರಿಕದವರು. ಮತ್ತೆ ಮತ್ತೆ ಭಾರತಕ್ಕೆ ಬಂದು ತಮ್ಮ ಪರದೇಶಿ ಪಾಂಡಿತ್ಯದ ಪ್ರದರ್ಶನ ಮಾಡುತ್ತಾರೆ. ಇಂಥವರಿಗೆ ಮನಮೋಹನಸಿಂಗ್ ಮುಂದಾಳು! ಮೊದಲು ಸಿಂಗ್ ಅವರು ಭಾರತದ ಅರ್ಥವ್ಯವಸ್ಥೆ ಅದಃಪತನ ಆಗಿದೆ ಎಂದು ಬೊಬ್ಬೆಹೊಡೆಯುತ್ತಾರೆ. ಅದಾದ ಮೇಲೆ ಇದೇ ಕುಣಿತ ಸಾಗುತ್ತದೆ. ಇಲ್ಲಿ ಸ್ಟೆಪ್ ಹಾಕುವವರು ರಘುರಾಮ್ ರಾಜನ್ ! ಇವರು ರಿಸರ್ವ್ ಬ್ಯಾಂಕ್ ಗದ್ದುಗೆ ಉಳಿಸಿಕೊಳ್ಳಲು ಭೂಮಿ ಆಕಾಶ ಒಂದು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಅಧ್ಯಕ್ಷ ಒಬಾಮಾ ಅವರಿಂದ ಶಿಫಾರಸು ತಂದಿದ್ದರು! ಆದರೆ
‘ನಡೆಯಿರಿ ಆಚೆ’ ಎಂದು ಮೋದಿ ಸರ್ಕಾರವು ರಾಜನ್ ಗೆ ಬಾಗಿಲು ತೋರಿಸಿತ್ತು. ಆಗಿನಿಂದ ರಾಜನ್ ಯಾವಾಗಲೂ ಭಾರತದ ಅರ್ಥವ್ಯವಸ್ಥೆ ಆಗಿದೆ ದುರವಸ್ಥೆ ಎಂದು ಹೇಳುತ್ತಾರೆ. ಇನ್ನೊಬ್ಬ ಪರದೇಶಿ ಪಂಡಿತ ಈ ಅರವಿಂದ ಸುಬ್ರಹ್ಮಣ್ಯಂ. ಮೋದಿ ಸರ್ಕಾರಕ್ಕೆಇವರು ಮೊದಲು ಮುಖ್ಯ ಆರ್ಥಿಕ ಸಲಹೆಗಾರ ಆಗಿದ್ದರು. ಆತ್ಮದಲ್ಲಿ ಅಮೆರಿಕದವರು ಎಂದು ಅವರನ್ನು ಆಮೇಲೆ ಹೊರದಬ್ಬಲಾಗಿತ್ತು. ಈಗ ಇವರು ಭಾರತದ ಅರ್ಥವ್ಯವಸ್ಥೆಯು ಐಸಿಯುನಲ್ಲಿ ಶರಶಯ್ಯೆಯಲ್ಲಿ ಇದೆಯೆಂದು ಹರಿಕಥೆ ಮಾಡುತ್ತಿದ್ದಾರೆ! ಇವರ ಜೋಡಿ ಎಂದರೆ ಗೀತಾ ಗೋಪಿನಾಥ್. ಇವರು ಕೇರಳದ ಮೂಲದವರು, ಆದರೆ ಶಾಲಾ ಶಿಕ್ಷಣ ಆಗಿದ್ದು ಮೈಸೂರಿನಲ್ಲಿ. ಅವರು ರಘುರಾಮ್ ರಾಜನ್ ಅವರ ಬಾಲಂಗೋಚಿ. ಭಾರತದ ಅರ್ಥವ್ಯವಸ್ಥೆ ದೂಷಣೆಯೇ ಇವರಿಗೆ ನಿತ್ಯ ಸುಪ್ರಭಾತ. ಭಾರತದ ಅರ್ಥವ್ಯವಸ್ಥೆ ಗೋತಾ ಹೊಡೆಯುತ್ತೆ ಎನ್ನುವರು ಗೀತಾ. ಇದು ಭೂತ ಭಗವದ್ಗೀತೆ ಭೋಧಿಸಿದಂತೆ. ಇವರು ಈಗ ಐಎಂಎಫ್ ನಲ್ಲಿ ಮುಖ್ಯ ಆರ್ಥಿಕ ಅಧಿಕಾರಿ ಆಗಿದ್ದಾರೆ. ಈ ಮೂವರು ಪರದೇಶಿ ಅರ್ಥಶಾಸ್ತ್ರ ಪಂಡಿತರು, ಜೊತೆಗೆ ಮನಮೋಹನ ಸಿಂಗ್ ಈ ಬಳಗದ ಮನದಾಸೆ ಎಂದರೆ ಕಂಪನಿ ಲೋಕದ ಉದ್ದಾರಕಾರ್ಯ! ಕಂಪನಿ ಲೋಕದ ಕೈಂಕರ್ಯವೇ ಇವರ ಮಂತ್ರ.
ಕಂಪನಿಗಳು ಬ್ಯಾಂಕ್ ಹಣ ಎಂದರೆ ಅಪ್ಪನ ಮನೆ ಆಸ್ತಿ ಎಂದು ಭಾವಿಸಿರುವಂತಿದೆ. ಇದನ್ನು ನೀವು ನಂಬುವುದಿಲ್ಲ. ನಿಮಗೆ ಒಂದು ವಿಷಯ ಹೇಳುತ್ತೇನೆ ಕೇಳಿ: 5 ಕೋಟಿ ರೂಪಾಯಿಗಿಂತ ಜಾಸ್ತಿ ಕಂಪನಿ ಸಾಲವನ್ನು ದೊಡ್ಡ ಸಾಲ ಎಂದು ಭಾವಿಸಲಾಗುತ್ತದೆ. ಇಂತಹ ದೊಡ್ಡ ಸಾಲವು ಬ್ಯಾಂಕುಗಳು ಕೊಟ್ಟ ಒಟ್ಟು ಸಾಲದಲ್ಲಿ ಶೇ. 53ರಷ್ಟು 2017- 18 ನೇ ಸಾಲಿನಲ್ಲಿ ಇತ್ತು. ಈ ಸಾಲವು ಹುಟ್ಟುಹಾಕಿದ ಎಡವಟ್ಟು ಕುಲಗೆಟ್ಟ ಸಾಲ ಎಷ್ಟು ನಿಮಗೆ ಗೊತ್ತಾ? ಅದು ಒಟ್ಟು ಸುಸ್ತಿಯ ಶೇ. 91ರಷ್ಟು! ಅಂದರೆ ಕಂಪನಿಗಳ ದೊಡ್ಡ ಸಾಲಗಾರರು ಬ್ಯಾಂಕ್ ರಾಬರಿ ಮಾಡಿದ್ದಾರೆ!! ಇದು ಗ್ರೇಟ್ ಇಂಡಿಯನ್ ಬ್ಯಾಂಕ್ ರಾಬರಿ!!! ಇದನ್ನೆಲ್ಲ ಬಿಟ್ಟು ನಮ್ಮ ಪರದೇಶಿ ಆರ್ಥಿಕ ಪಂಡಿತರು ಕೇವಲ ಕಂಪನಿಗಳ ಯೋಚನೆ ಮಾಡುತ್ತಾರೆ. ಕಂಪನಿಗಳು ಭಯಭೀತ ಗೊಂಡಿವೆ, ಕಂಪನಿಗಳು ಕಂಗಾಲಾಗಿವೆ , ಅವು ಕಷ್ಟದಲ್ಲಿವೆ ಎಂದು ಇವರೆಲ್ಲ ಬೊಬ್ಬೆ ಹೊಡೆಯುತ್ತಾರೆ. ಮನಮೋಹನ್- ರಘುರಾಂ ರಾಜನ್ ಕಾಲದಲ್ಲಿ 2008-14ರ ಅವಧಿಯಲ್ಲಿ ಬ್ಯಾಂಕ್ ಸಾಲವು 18 ಲಕ್ಷ ಕೋಟಿ ರೂಪಾಯಿಯಿಂದ 54 ಲಕ್ಷ ಕೋಟಿ ರೂಪಾಯಿಗೆ ಜಿಗಿದಿತ್ತು. ಇವರ ದರ್ಬಾರಿನಲ್ಲಿ ಕುಲಗೆಟ್ಟ ಸಾಲವನ್ನು ಕೂಡ ಬ್ಯಾಂಕುಗಳು ಪುಸ್ತಕದಲ್ಲಿ ಪೂರ್ತಿಯಾಗಿ ತೋರಿಸುತ್ತಿರಲಿಲ್ಲ! ಎಂಥ ದುರವಸ್ಥೆ- ಎಂಥ ಅಂಧಾ ದರ್ಬಾರ್ ಇವರದ್ದು ಇತ್ತು ನೀವೇ ನೋಡಿ.
ಬ್ಯಾಂಕ್ ಉದ್ಧಾರ ಮಾಡಿ; ಆಗ ಅರ್ಥವ್ಯವಸ್ಥೆ ಉದ್ದಾರ ಆಗುತ್ತದೆ ಎಂದು ಈ ಪರದೇಶಿ ಪಂಡಿತರ ಬಳಗ ಹೇಳುತ್ತದೆ. ಭಾರತದ ಗ್ರೇಟ್ ಬ್ಯಾಂಕ್ ರಾಬರಿಯ ಜನಕರು- ಪಾಲಕರು- ಪೋಷಕರು- ಪುರೋಹಿತರು - ಸಮಸ್ತರೂ ಇವರೇ ಎಂದು ಅನಿಸುತ್ತದೆ. ಈ ಕಥೆ ಇನ್ನೂ ಇದೆ ನೋಡಿ: ನಮ್ಮ ಸರ್ಕಾರಿ ಬ್ಯಾಂಕುಗಳು 100 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದಿರುವವರಿಗೆ ಸಾಲ ಮನ್ನಾ ಮಾಡಿವೆ. ಅಂತಹ 980 ಖಾತೆಗಳಿವೆ. ಇಂಥ 220 ಕಧೀಮರಿಗೆ ಎಸ್ ಬಿ ಐ ದಯಪಾಲಿಸಿರುವ ಸಾಲ ಮನ್ನಾ - ತಲಾ 348 ಕೋಟಿ ರೂಪಾಯಿ! 348 ಇಂಟು 220 ಗುಣಿಸಿ ಅದಕ್ಕೆ ಕೋಟಿ ಲೆಕ್ಕದಲ್ಲಿ ನೋಡಿದರೆ ಕೊಪ್ಪರಿಗೆ ಹಣ ಎಷ್ಟು ಅಗಾಧ ಎಂದು ಗೊತ್ತಾಗುತ್ತದೆ.
ಇನ್ನು ಆರ್ಟಿಐ ಮೂಲಕ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ನೋಡಿ. 2019 ರ ಮಾ. 31ರವರೆಗೆ ವರ್ಷದಲ್ಲೇ 100 ಕೋಟಿಗೂ ಅಧಿಕ ಸಾಲ ಮಾಡಿರುವ 222 ಕಂಪನಿಗಳಿಗೆ 76,760 ಕೋಟಿ ರೂ. ಸಾಲ ಮನ್ನಾ ಮಾಡಿದ್ದಾಗಿದೆ; 500 ಕೋಟಿಗೂ ಹೆಚ್ಚು ಸಾಲ ಮಾಡಿರುವ 33 ಕಂಪನಿಗಳಿಗೆ 37,700 ಕೋಟಿ ಸಾಲ ಮನ್ನಾ ಆಗಿದೆ! 500 ಕೋಟಿಗೂ ಹೆಚ್ಚು ಸಾಲ ಪಡೆದಿರುವ ದೊಡ್ಡವರು ಬಾಕಿ ಇಟ್ಟಿಕೊಂಡದ್ದು 67, 600 ಕೋಟಿ. ಇವರಿಗೆ 37,700 ಕೋಟಿ ಸಾಲ ಮನ್ನಾ ಆಗಿದೆ!! ನೂರು ಪ್ಲಸ್ ಹಾಗೂ 500 ಪ್ಲಸ್ ಕೋಟಿ ಸಾಲ ಮಾಡಿದವರಿಗೆ 2.75 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಆಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡೋಣ. ಈಗಷ್ಟೇ ಸಂಸತ್ತಿನ ಪ್ರಶ್ನೋತ್ತರ ಕಾಲದಲ್ಲಿ ಸತ್ಯವೊಂದು ಬೆಳಕಿಗೆ ಬಂದಿದೆ ಅದೆಂದರೆ 2014 -15ರಲ್ಲಿ ಕಂಪನಿಗಳಿಗೆ ಬ್ಯಾಂಕುಗಳು ಮಾಡಿದ ಸಾಲ ಮನ್ನಾ 47,658 ಕೋಟಿ ರೂಪಾಯಿ. ಇದು 2018- 19ರಲ್ಲಿ 1.86 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಕಂಪನಿ ಸಾಲಮನ್ನಾ ಈ ಐದು ವರ್ಷಗಳಲ್ಲಿ 4.93 ಲಕ್ಷ ಕೋಟಿ ರೂಪಾಯಿಗೂ ಮೀರಿದೆ! ಇದೇನು ಅನ್ಯಾಯ ಸ್ವಾಮಿ! (ಅಲ್ಲದೆ ರಾಜನ್ ಹೇಳುತ್ತಾರೆ; ‘2014ಕ್ಕೆ ಮುನ್ನ 5ವರ್ಷಗಳಲ್ಲಿ 1.61 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಇತ್ತು’.)
ರೈತರಿಗೆ ಬ್ಯಾಂಕುಗಳು ಮಾಡಿರುವ ಸಾಲ ಮನ್ನಾ ಎಷ್ಟು ಗೊತ್ತಾ? 2014-15ನೇ ಸಾಲಿನಲ್ಲಿ 2833 ಕೋಟಿ ರೂ. ಅದು 2018-19ರಲ್ಲಿ 12,566 ಕೋಟಿ ಆಯಿತು. ಈ ಐದು ವರ್ಷಗಳಲ್ಲಿ ದೇಶದ ಸಮಸ್ತ ರೈತರಿಗೆ ಬ್ಯಾಂಕ್ ಗಳು ಕೊಟ್ಟ ಒಟ್ಟು ಸಾಲ ಮನ್ನಾ - ಕೇವಲ 39 ,186 ಕೋಟಿ ಮಾತ್ರ!!! ನೋಡಿ, 500 ಕೋಟಿಗೂ ದೊಡ್ಡ ಮೊತ್ತದ ಸಾಲ ಪಡೆದ 33 ಕುಬೇರರಿಗೆ 37,700 ಕೋಟಿ ಸಾಲ ಮನ್ನಾ ಮಾಡಿ ಇಡೀ ರೈತಾಪಿ ವರ್ಗಕ್ಕೆ 39, 186 ಕೋಟಿ ಸಾಲ ಮನ್ನಾ! ಸರ್ಕಾರಿ ಬ್ಯಾಂಕ್ ಗಳದ್ದು- ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ನೀತಿ. ಇದನ್ನೇ ನಾನು ಕಂಪನಿಗಳಿಗೆ ಕಾಸಿನ ಕಾಲುವೆ ಇದೆ; ಹಳ್ಳಿಗೆ ಕಾಸಿನ ಕಾಲುವೆ ಇಲ್ಲ ಎಂದು ಹೇಳಿದ್ದು.
25 ವರ್ಷಗಳಿಂದ ಕಂಪನಿಗಳು ಸಾಲ ಮನ್ನಾ ವರ ಪಡೆದಿವೆ. ಈ ಸಾಲ ಮನ್ನಾ ವಿಚಾರದಲ್ಲಿ ಹೇಳುವವರು ಕೇಳುವವರು ಇಲ್ಲ. ಅಲ್ಲದೆ ಇದನ್ನು ಗೌಪ್ಯವಾಗಿಯೂ ಇಡಲಾಗುತ್ತದೆ. ಇದು ನನ್ನ ಮಾತಲ್ಲ. 2015ರಲ್ಲಿ ಸುಪ್ರೀಂಕೋರ್ಟ್ ಈ ಬಗ್ಗೆ ಖಾರವಾಗಿ ಹೇಳಿದೆ ; ಉದಾರೀಕರಣ ಯುಗವು ಬ್ಯಾಂಕ್ ಸಾಲ ಮನ್ನಾ ವರವನ್ನು ಕಂಪನಿ ಲೋಕಕ್ಕೆ ಉದ್ದಕ್ಕೂ ನೀಡುತ್ತಾ ಬಂದಿದೆ ಎಂದು ಆಕ್ಷೇಪ ಎತ್ತಿದೆ. ಸಾಲ ಕೊಡಲು ಒಲ್ಲದ ಕಂಪನಿಗಳ ಪಟ್ಟಿಯು ಸುಪ್ರೀಂ ಕೋರ್ಟ್ ಗೂ ಅಲಭ್ಯ ಎಂದರೆ ಏನರ್ಥ ? ಇದಕ್ಕೆ ಒಂದು ರೀತಿ-ನೀತಿ ಬೇಕು; ನೀತಿ-ನಿಯಮ ಬೇಕು- ದಾರಿ ಹುಡುಕಿ ಎಂದು ಬ್ಯಾಂಕುಗಳು ಹಾಗೂ ಸರ್ಕಾರಕ್ಕೆ ಅದು ತಪರಾಕಿ ಹಾಕಿದೆ. ಆದರೂ ಕಂಪನಿಗಳ ಹಣದ ಕಾಲುವೆ ಇನ್ನೂ ತುಂಬಿತುಳುಕುತ್ತಿದೆ! ಇದನ್ನೆಲ್ಲ ಬಿಟ್ಟು ನಮ್ಮ ಪರದೇಶಿ ಮೂರ್ಖ ಪಂಡಿತರು ಬ್ಯಾಂಕ್-ಕಂಪನಿಗಳನ್ನು ಉದ್ಧಾರ ಮಾಡಿ ಎನ್ನುತ್ತಾರೆ!
ಭಾರತದ ಹಳ್ಳಿನಾಡು ಬೇರೆ. ಭಾರತದ ಜನಸಾಮಾನ್ಯರು ಬೇರೆ, ಕಂಪನಿ ಬ್ಯಾಂಕ್ ಲೋಕವೇ ಬೇರೆ. ಹೀಗಾಗಿ ದೇಶದ ಉದ್ಧಾರ ಬ್ಯಾಂಕ್ ನಿಂದ ಆಗುವುದಿಲ್ಲ. ಪರದೇಶಿ ಪಂಡಿತರು ಹೇಳುವ ರೋಗ- ಮದ್ದು ಮಾಡಿದರೆ ಅನಾಹುತವೇ ಆಗುತ್ತದೆ. ಈ ಮಂದಿ ಸಕ್ಕರೆ ರೋಗಕ್ಕೆ ಬಿಪಿ ಮಾತ್ರ ಕೊಡುತ್ತಾರೆ. ಆದ್ದರಿಂದ ಈ ಪರದೇಶಿ ಪಂಡಿತರು ಭಾರತದ ಅರ್ಥವ್ಯವಸ್ಥೆಗೆ ಬೇಕಾಗಿಲ್ಲ. ಅವರನ್ನು ಗಡೀಪಾರು ಮಾಡಿದರೆ ದೇಶಕ್ಕೆ ಕ್ಷೇಮ.
ಆಗಲೇ ಹೇಳಿದಂತೆ ಚಳಿಗಾಲ ಮಳೆಗಾಲ ಮುಗಿದು ಈಗ ಸಂಕ್ರಾಂತಿ ಬಂದಿದೆ. ದೇಶದ ಉದ್ಧಾರ ತಾನೇ ತಾನಾಗಿ ಆಗುತ್ತಿದೆ. ಇನ್ನೇನಿದ್ದರೂ ಉತ್ತರಾಯಣ ಪುಣ್ಯಕಾಲ. ಅಣೆಕಟ್ಟೆ ಕೆರೆಕಟ್ಟೆ ಜಲಾಶಯಗಳು ಈಗ ತುಂಬಿತುಳುಕುತ್ತಿವೆ. ಹೀಗಾಗಿ ಕೃಷಿಯು ಸಮೃದ್ಧವಾಗಿ , ಅದು ಜಿಡಿಪಿಯನ್ನು ಮೇಲಕ್ಕೆ ಎತ್ತುತ್ತದೆ. ನಮ್ಮ ಕೃಷಿಗೆ ಹಾಗೆಯೇ ನಮ್ಮ ಜಿಡಿಪಿಗೆ ಈಗ ಆನೆ ಬಲ ಬರುತ್ತಿದೆ.