

ಪೊಲೀಸರು ಜಿಗಿಶಾಳ ತಾಯಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿ ‘ಆ ಯುವಕರಲ್ಲಿ ಯಾರನ್ನಾದರೂ ಗುರುತಿಸುವಿರಾ?’ ಎಂದು ಕೇಳಿದರು. ಆಕೆ, ‘ಈ ಯುವಕರು ಯಾರೆಂದು ತಿಳಿದಿಲ್ಲ. ಆದರೆ ಇಲ್ಲಿ ನೋಡಿ ಡೆಬಿಟ್ಕಾರ್ಡ್ ಸ್ಲಿಪ್ಗೆ ಸಹಿ ಮಾಡುತ್ತಿರುವ ವ್ಯಕ್ತಿಯ ಮೊಣಕೈ ಮೇಲೆ ಒಂದು ಹಚ್ಚೆಯ ಗುರುತಿದೆ’ ಎಂದರು. ಆ ಗುರುತನ್ನು ಕಂಪ್ಯೂಟರಿನಲ್ಲಿ ಹಿಗ್ಗಿಸಿ ನೋಡಿದಾಗ, ಮಲಿಕ್ ಎಂಬ ಹೆಸರು ಗೋಚರಿಸಿತು. ‘ಸರ್, ನಮ್ಮ ಠಾಣೆಯ ವ್ಯಾಪ್ತಿಯಲ್ಲಿಯೇ ಮಲಿಕ್ ಎನ್ನುವವ ಹಲವಾರು ಕಳ್ಳತನ ಮಾಡಿದ್ದಾನೆ, ಆತನನ್ನು ಕರೆದುಕೊಂಡು ಬಂದು ವಿಚಾರಿಸೋಣವೇ?’ ಎಂದು ಕೇಳಿದ ಅಲ್ಲಿದ್ದ ಒಬ್ಬ ಕಾನ್ಸ್ಟೇಬಲ್.
ರವಿ ಕಪೂರ್ ದೆಹಲಿಯ ಅನೇಕ ಕಡೆಗಳಲ್ಲಿ ಕಳ್ಳತನ ಹಾಗೂ ದರೋಡೆಗಳನ್ನು ಮಾಡಿ ಜೈಲಿಗೆ ಹೋಗಿ ಬಂದಿದ್ದ. ಆತ ಕಳೆದ ಎರಡು ವರ್ಷಗಳಿಂದ ವಸಂತ್ವಿಹಾರ್ ಮತ್ತು ವಸಂತ್ಕುಂಜ್ ಪೊಲೀಸ್ ಠಾಣೆಗಳಲ್ಲಿ ಮಾಹಿತಿದಾರನಾಗಿದ್ದು ಕ್ರಿಮಿನಲ್ಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಪೊಲೀಸರಿಂದ ಹಣ ಪಡೆಯುತ್ತಿದ್ದ. ಆತ ತನ್ನ ಅಪರಾಧ ಜೀವನವನ್ನು ತ್ಯಜಿಸಿದ್ದಾನೆ ಎಂದೇ ಪೊಲೀಸರು ಭಾವಿಸಿದ್ದರು. ತಡಮಾಡದೆ ತನಿಖಾಧಿಕಾರಿ ಅವನ ಮನೆಗೆ ಹೋದರು. ರವಿ ಮನೆಯಲ್ಲಿಯೇ ಇದ್ದ. ರವಿಯ ಪ್ಯಾಂಟಿನ ಎಡಜೇಬಿನಲ್ಲಿ ಕಂಟ್ರಿ ಪಿಸ್ತೂಲ್ ಇದ್ದು ಅದರಲ್ಲಿ ಒಂದು ಬುಲೆಟ್ ಇತ್ತು. ಬಲಜೇಬಿನಲ್ಲಿ ಮೂರು ಜೀವಂತಗುಂಡುಗಳಿದ್ದವು.
ಮನೆಯ ಹೊರಗಡೆ ಸಾಂಟ್ರೋ ಕಾರು ನಿಂತಿತ್ತು. ಅದರ ಮೇಲೆ ಪಂಜಾಬ್-ಹರಿಯಾಣ ಹೈಕೋರ್ಟ್ ನ್ಯಾಯಾಧೀಶರು ಎಂಬ ಸ್ಟಿಕರ್ ಅಂಟಿಸಲಾಗಿತ್ತು. ಸ್ಟೀರಿಂಗ್ ಕೆಳಗಿದ್ದ ಪೆಟ್ಟಿಗೆಯಲ್ಲಿ ಚೀನೀ ತಯಾರಿಕೆಯ ರಿವಾಲ್ವರ್ ಇದ್ದು ಅದರಲ್ಲಿ ನಾಲ್ಕು ಗುಂಡುಗಳಿದ್ದವು. ಕಾರಿನ ಡಿಕ್ಕಿಯಲ್ಲಿ ಎರಡು ಬ್ಯಾಕ್ಪ್ಯಾಕ್ಗಳಿದ್ದವು. ಒಂದರಲ್ಲಿ ದೆಹಲಿ ಪೊಲೀಸ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಧರಿಸುವ ಸಮವಸ್ತ್ರ ಮತ್ತು ವಕೀಲರು ಧರಿಸುವ ಕರಿಯ ಗೌನ್ ಇತ್ತು. ಇನ್ನೊಂದರಲ್ಲಿ ಪೊಲೀಸ್ ವಾಹನಗಳ ತಾರಸಿಗಳ ಮೇಲೆ ಹಾಕುವಂತಹ ಕೆಂಪುತಿರುಗು ದೀಪ, ತಲವಾರ್, ಚೂರಿ, ವಾಹನಗಳ ನಕಲಿ ಕೀಲಿಕೈಗಳ ದೊಡ್ಡ ಗೊಂಚಲು, ರವಿ ಕಪೂರ್ ಹೆಸರಿನಲ್ಲಿ ಸ್ಟಾರ್ ನ್ಯೂಸ್ ಸಂಸ್ಥೆಯ ರಿಪೋರ್ಟರ್ ಎಂಬ ನಕಲಿ ಗುರುತುಚೀಟಿ, ಮುಂತಾದವಿದ್ದವು. ಈ ಎಲ್ಲ ವಸ್ತುಗಳನ್ನೂ ವಶಪಡಿಸಿಕೊಂಡು ರವಿಯನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಆತ ಹೀಗೆ ಹೇಳಿದ:
‘ಮಾರ್ಚ್ 18ರ ಮುಂಜಾನೆ 4 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯರು ಹಿಂದಿನ ದಿನ ಗಾಜಿಯಾಬಾದ್ನಿಂದ ಕಳವು ಮಾಡಿದ್ದ ಸಾಂಟ್ರೋ ಕಾರಿನಲ್ಲಿ ಕುಳಿತು ಮನೆಗಳಿಗೆ ವಾಪಸಾಗುತ್ತಿದ್ದಾಗ ಒಂದು ಮನೆಯ ಕಾಂಪೌಂಡಿನ ಮುಂದೆ ಒಬ್ಬ ಯುವತಿ ಫೋನ್ನಲ್ಲಿ ಮಾತನಾಡುತ್ತಿದ್ದಳು. ಆಕೆಯನ್ನು ದೋಚಬೇಕೆಂದು ಮನಸ್ಸಾಯಿತು. ಅವಳ ಮನೆಯ ಮುಂದೆ ಕಾರನ್ನು ನಿಲ್ಲಿಸಿ, ವಿಳಾಸ ಕೇಳಿದೆವು. ಆಕೆ ವಿಳಾಸ ಹೇಳಲು ನಮ್ಮ ಕಾರಿನ ಬಳಿ ಬಂದಾಗ ನನ್ನ ಸಹಚರರು ಆಕೆಯ ಬಾಯಿಯನ್ನು ಮುಚ್ಚಿ ಕಾರಿನೊಳಗೆ ಎಳೆದುಕೊಂಡರು. ನಾನು ಆಕೆಗೆ ಪಿಸ್ತೂಲ್ ತೋರಿಸಿ ನಿನ್ನ ಬಳಿ ಇರುವ ವಸ್ತುಗಳನ್ನೆಲ್ಲ ಕೊಟ್ಟರೆ ಬಿಟ್ಟುಬಿಡುವೆ ಎನ್ನುತ್ತ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋದೆ.
ಆಕೆ ತನ್ನ ಪರ್ಸ್, ಮೊಬೈಲ್ ಫೋನುಗಳು ಮತ್ತು ಆಭರಣಗಳನ್ನು ಕೊಟ್ಟಳು. ಆ ಪರ್ಸ್ನಲ್ಲಿದ್ದ ಡೆಬಿಟ್ಕಾರ್ಡ್ ನೋಡಿದ ನಾನು ನಿನ್ನ ಬ್ಯಾಂಕ್ನಲ್ಲಿ ಎಷ್ಟು ಹಣವಿದೆ ಎಂದಾಗ ಆಕೆ 75 ಸಾವಿರ ಇರಬಹುದು ಎಂದಳು. ಅವಳಿಂದ ಎಟಿಎಂ ಪಿನ್ ಪಡೆದು, 25 ಸಾವಿರ ರೂ. ಹಣ ತೆಗೆದೆವು. ಅವಳನ್ನು ಹಾಗೆಯೇ ಬಿಟ್ಟರೆ ಆಕೆ ನಮ್ಮನ್ನು ಗುರುತಿಸಿ ನಮ್ಮ ಬಂಧನಕ್ಕೆ ಕಾರಣವಾಗುತ್ತಾಳೆ ಎಂದು ಅವಳನ್ನು ಕೊಲೆ ಮಾಡಲು ನಿರ್ಧರಿಸಿದೆ. ಹಿಂದಿನ ಸೀಟಿನಲ್ಲಿದ್ದ ಮಲಿಕ್ ಮತ್ತು ಅಜಯ್ ಅವಳ ಕತ್ತು ಹಿಸುಕಿ ಕೊಲೆ ಮಾಡಿದರು. ಆನಂತರ ಸೂರಜ್ಕುಂಡ್ ಬಳಿ ಹೋಗಿ ರಸ್ತೆಬದಿಯಲ್ಲಿದ್ದ ಪೊದೆಯಲ್ಲಿ ಅವಳ ದೇಹವನ್ನು ಎಸೆದೆವು. ಪರ್ಸ್ ನಲ್ಲಿದ್ದ ಹಣ ಮತ್ತು ಡೆಬಿಟ್ ಕಾರ್ಡ್ ತೆಗೆದುಕೊಂಡೆವು. ಮೊಬೈಲ್ ಫೋನುಗಳನ್ನು ಆಫ್ ಮಾಡಿ ಅವನ್ನು ಹಾದಿಯಲ್ಲಿ ಹೋಗುತ್ತಿದ್ದ ಲಾರಿಗಳಿಗೆ ಎಸೆದೆವು. ಅದೇ ಮಧ್ಯಾಹ್ನ ಅವಳ ಡೆಬಿಟ್ ಕಾರ್ಡ್ ಉಪಯೋಗಿಸಿ ಮಾರುಕಟ್ಟೆಯಿಂದ ಹಲವಾರು ವಸ್ತುಗಳನ್ನು ಖರೀದಿಸಿದೆವು’.
ರವಿಯ ಹೇಳಿಕೆ ಮೇರೆಗೆ ಅವನ ಎರಡನೇ ಸಹಚರ ಅಜಯ್ ಶುಕ್ಲಾನನ್ನು ಬಂಸಲಾಯಿತು. ಜಿಗಿಶಾಳ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಿದ್ದ ಅಂಗಡಿಗಳಿಗೆ ಮೂರೂ ಆರೋಪಿಗಳನ್ನು ಕರೆದೊಯ್ದಾಗ ಅವರನ್ನು ಎಲ್ಲ ಅಂಗಡಿಯವರೂ ಗುರುತು ಹಿಡಿದರು. ಅವರಲ್ಲಿ ಇಬ್ಬರ ಕೈಬರಹಗಳು ಡೆಬಿಟ್ಕಾರ್ಡ್ ಸ್ಲಿಪ್ಗಳ ಬರಹಕ್ಕೆ ಹೋಲಿಕೆಯಾದವು.
ಮೂವರೂ ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಮಾಡಿ ಮುಂದಿನ ತನಿಖೆಗಾಗಿ ತಮ್ಮ ವಶಕ್ಕೆ ಪಡೆದರು. ಒಂದು ರಾತ್ರಿ ಏಕಾಏಕಿ ರವಿ ಕಪೂರ್ ತಾನು ಆರೇಳು ತಿಂಗಳ ಹಿಂದೆ ಯುವತಿಯೊಬ್ಬಳ ಕೊಲೆ ಮಾಡಿರುವುದಾಗಿ ತಿಳಿಸಿದಾಗ ತನಿಖಾಧಿಕಾರಿ ಬೆಚ್ಚಿ ಬಿದ್ದರು. ಆತ ಹೀಗೆ ಹೇಳಿದ: ‘2008ರ ಸೆಪ್ಟೆಂಬರ್ ತಿಂಗಳ ಒಂದು ರಾತ್ರಿ ನಾವು ಮೂರೂ ಜನರು ಪಾರ್ಟಿ ಮಾಡಿ ಮನೆಗಳಿಗೆ ವಾಪಸ್ಸಾಗುತ್ತಿದ್ದೆವು. ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಹೋಗುತ್ತಿದ್ದಾಗ ನಮ್ಮ ಹಿಂದೆ ಜೆನ್ ಕಾರ್ ಬರುತ್ತಿತ್ತು. ಅದನ್ನು ಒಬ್ಬ ಯುವತಿ ಡ್ರೈವ್ ಮಾಡುತ್ತಿದ್ದುದನ್ನು ಕಂಡ ನಾನು ಅವಳನ್ನು ಸತಾಯಿಸಲು ಬೇಕೆಂತಲೇ ನನ್ನ ವಾಹನವನ್ನು ನಿಧಾನವಾಗಿ ನಡೆಸುತ್ತ ಅವಳನ್ನು ಓವರ್ಟೇಕ್ ಮಾಡಲು ಬಿಡಲಿಲ್ಲ. ಅವಳು ಪದೇಪದೆ ಹಾರನ್ ಮಾಡುತ್ತ ಒಂದು ಸ್ಥಳದಲ್ಲಿ ನಮ್ಮ ವಾಹನವನ್ನು ಹಿಂದೆ ಹಾಕಿದಳು. ಆಗ ನನಗೆ ಸಿಟ್ಟು ಬಂದು ಅವಳ ಕಾರಿನ ಪಕ್ಕದಲ್ಲಿಯೇ ನನ್ನ ಕಾರನ್ನು ಚಲಾಯಿಸುತ್ತ ಅವಳತ್ತ ನನ್ನ ಪಿಸ್ತೂಲಿನಿಂದ ಎರಡು ಗುಂಡುಗಳನ್ನು ಹಾರಿಸಿದೆ. ಅದು ಅವಳ ತಲೆಗೆ ತಗುಲಿತು. ಅವಳ ಕಾರು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆಯಿತು. ಆಗ ನಾವು ಮೂವರೂ ಅವಳ ಕಾರಿನ ಬಳಿ ಹೋದೆವು. ಆಕೆ ಕುಸಿದು ಬಿದ್ದಿದ್ದಳು. ಅವಳ ವಸ್ತುಗಳನ್ನು ದೋಚಲು ಹೋದಾಗ ಎದುರಿನಿಂದ ಇನ್ನೊಂದು ವಾಹನ ಬರುವುದು ಕಂಡಿತು. ಹೀಗಾಗಿ ಅವಳ ಪರ್ಸ್ ಮಾತ್ರ ಕದ್ದು ಅಲ್ಲಿಂದ ಹೊರಟುಹೋದೆವು. ಆನಂತರ ಆಕೆ ಟಿವಿ ಪತ್ರಕರ್ತೆ ಎಂದು ತಿಳಿಯಿತು’.
ಸೌಮ್ಯಳ ತಲೆಯಿಂದ ಹೊರತೆಗೆದಿದ್ದ ಗುಂಡನ್ನು ರವಿ ಕಪೂರ್ನಿಂದ ಜಪ್ತಿ ಮಾಡಿದ್ದ ರಿವಾಲ್ವರ್ನಿಂದಲೇ ಹೊಡೆಯಲಾಗಿತ್ತು ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದಾಗ ಮೂವರು ಆರೋಪಿಗಳನ್ನು ಆ ಪ್ರಕರಣದಲ್ಲಿಯೂ ಆರೋಪಿತರನ್ನಾಗಿ ಮಾಡಲಾಯಿತು. ಸೌಮ್ಯಳ ಕೊಲೆಗೆ ಉಪಯೋಗಿಸಿದ್ದ ಪಿಸ್ತೂಲನ್ನು ಮಾರಿದ್ದ ಆರೋಪದ ಮೇರೆಗೆ ಇನ್ನೊಬ್ಬ ಆರೋಪಿ ಅಜಯ್ಕುಮಾರ್ನನ್ನು, ಕೊಲೆಗೆ ಸಂಚು ಮಾಡಿದ ಆರೋಪದ ಮೇರೆಗೆ ಅಜಯ್ ಸೇಠಿಯನ್ನು ಬಂಧಿಸಿ ಎರಡೂ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.
2016ರಲ್ಲಿ ಜಿಗಿಶಾ ಪ್ರಕರಣದ ವಿಚಾರಣೆ ಮುಗಿಸಿದ ನ್ಯಾಯಾಲಯ ರವಿ ಕಪೂರ್ ಮತ್ತು ಅಜಯ್ ಶುಕ್ಲಾಗೆ ಮರಣದಂಡನೆ ಹಾಗೂ ಮಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮುಂದೆ ದೆಹಲಿ ಹೈಕೋರ್ಟ್ ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿತು. ಸೌಮ್ಯಳ ಪ್ರಕರಣದಲ್ಲಿ ಎಲ್ಲ ಐದು ಆರೋಪಿಗಳಿಗೂ ಶಿಕ್ಷೆಯಾಗಿದೆ. ಕಡೆಗೂ ಒಬ್ಬ ತಾಯಿಯ ಛಲದಿಂದ ಎರಡು ಕೊಲೆಯ ಪ್ರಕರಣಗಳು ಪತ್ತೆಯಾದವು. ಈ ಕಾರಣಕ್ಕೇ ಅಮೆರಿಕದ ಕಾದಂಬರಿಗಾರ್ತಿ ಬಾರ್ಬರಾ ಕಿಂಗ್ಸಾಲ್ವರ್ ಹೀಗೆನ್ನುತ್ತಾಳೆ: ‘ಕೆಲವೊಮ್ಮೆ ತಾಯಿಯ ಬಲವು ಎಲ್ಲ ಪ್ರಾಕೃತಿಕ ಶಕ್ತಿಗಳಿಗಿಂತ ಮಿಗಿಲಾಗಿರುತ್ತದೆ’.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)