ಚಪ್ಪಲಿಗಳಿಂದ ಪತ್ತೆಯಾದ ಕೊಲೆ: ಆ ಕ್ಷಣ ಅಂಕಣ, ಭಾಗ-2

Aa Kshana
Published on
ಪೊಲೀಸ್ ಠಾಣೆಗೆ ಪತಿ-ಪತ್ನಿ ಇಬ್ಬರೂ ದೂರು ನೀಡಿದ ರಾತ್ರಿಯೇ ಭಾಸ್ಕರನ ರೂಮಿನ ಬಾಗಿಲನ್ನು ಒದ್ದು ಒಳಗೆ ನುಗ್ಗಿದ ನವನೀತ್, ‘ನೀನು ಇನ್ನೂ ಜೀವಂತವಾಗಿರುವಿಯಾ?’ ಎಂದು ತಂದೆಗೆ ಬೆದರಿಸಿದ. ಗಾಬರಿಗೊಂಡ ಭಾಸ್ಕರ್ ಮಾರನೆಯ ದಿನದಿಂದಲೇ ಮನೆಯಲ್ಲಿ ಮಲಗುವುದನ್ನು ಬಿಟ್ಟು ತನ್ನದೇ ಹೋಟೆಲಿನ ಕೋಣೆಯಲ್ಲಿ ವಾಸಿಸತೊಡಗಿದ. ಆದರೆ ಪ್ರತಿ ಸಂಜೆ ಮನೆಗೆ ಹೋಗಿ ಸ್ನಾನ ಮಾಡಿ ಬರುವ ಪರಿಪಾಠ ಮಾಡಿಕೊಂಡ. ಇದಾದ ಕೆಲ ದಿನಗಳ ನಂತರ ನವನೀತ್ ತನ್ನ ಫೇಸ್​ಬುಕ್ ಗೋಡೆ ಮೇಲೆ ‘ಭಾಸ್ಕರ್ ಹಾಗೂ ಸುಧಾ ಇವರ ಕಾಮದ ಒಂದು ಆಡಿಯೋ ಕ್ಲಿಪ್’ ಎನ್ನುವ ತಲೆಬರಹದಲ್ಲಿ ತಂದೆ ಸುಧಾಳೊಡನೆ ಮಾಡಿದ್ದೆನ್ನಲಾದ ಸಂಭಾಷಣೆಯ ಆಡಿಯೋ ಹಾಕಿದ. ಅಲ್ಲದೆ ಸುಧಾಳ ಮಗುವನ್ನು ಅನೈತಿಕ ಸಂತಾನ ಎಂದು ಬಿಂಬಿಸಿದ.

ಗಂಡ ತನ್ನಿಂದ ದೂರ ಸರಿದರೆ ತನಗೂ, ಮಗನಿಗೂ ಅವನ ಆಸ್ತಿಯಲ್ಲಿ ಯಾವುದೇ ಪಾಲು ಬರುವುದಿಲ್ಲ ಎನ್ನುವ ಭಾವನೆ ರಾಜೇಶ್ವರಿ ಮನದಲ್ಲಿ ಬೇರೂರಿತ್ತು. ಏಕೆಂದರೆ ಭಾಸ್ಕರ್ ತನ್ನ ವಿಲ್ (ಮೃತ್ಯುಪತ್ರ) ಮಾಡಿಸಲು ವಕೀಲರನ್ನು ಕಾಣುತ್ತಿರುವ ಬಗ್ಗೆ ಅವಳಿಗೆ ಯಾರೋ ಮಾಹಿತಿ ನೀಡಿದ್ದರು. ಮೃತ್ಯುಪತ್ರ ಮಾಡದೇ ಯಾರಾದರೂ ಸತ್ತರೆ ಅವರ ಆಸ್ತಿಯಲ್ಲಿ ಹೆಂಡತಿ-ಮಕ್ಕಳಿಗೆ ಪಾಲು ಬಂದೇ ಬರುತ್ತದೆ ಎಂದವಳಿಗೆ ತಿಳಿದಿತ್ತು. ಭಾಸ್ಕರ್ ವಿಲ್ ಮಾಡುವ ಮೊದಲೇ ಅವನನ್ನು ಕೊಲೆ ಮಾಡಿದರೆ ತನ್ನ ಹಾಗೂ ಮಗನ ಜೀವನಾಧಾರಕ್ಕೆ ತೊಂದರೆಯಾಗುವುದಿಲ್ಲ ಎಂದು ರ್ತಸಿ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದಳು. ಇದನ್ನು ನವನೀತ್ ಮತ್ತು ನಿರಂಜನನ ಜತೆಗೆ ಹಂಚಿಕೊಂಡಾಗ ಇಬ್ಬರೂ ಅವಳಿಗೆ ಸಾಥ್ ನೀಡಲು ಒಪ್ಪಿದರು. ಅದೇ ದಿನವೇ ನವನೀತ್ ಇಂಟರ್​ನೆಟ್​ನಲ್ಲಿ ಕೊಲೆ ಮಾಡುವ ಹಲವಾರು ವಿಧಾನಗಳನ್ನು ಶೋಧಿಸಿದ.

2016 ಜುಲೈ 27ರಂದು ರಾಜೇಶ್ವರಿ, ನವನೀತ್ ಹಾಗೂ ನಿರಂಜನ ಕೊಲೆ ಮಾಡುವ ಸಿದ್ಧತೆಗಳ ಬಗ್ಗೆ ರ್ಚಚಿಸಿದರು. ಮಾರನೆಯ ದಿನವನ್ನೇ ಕೊಲೆಗಾಗಿ ನಿಗದಿಮಾಡಿದರು. ಇದಕ್ಕಾಗಿ ಚಿಲ್ಲಿ ಸ್ಪ್ರೇ, ಕೀಟನಾಶಕ, ಹಗ್ಗ, ಜೆರ್ರಿ ಕ್ಯಾನ್, ಪೆಟ್ರೋಲ್, ಮಾಸ್ಕ್, ಕೈಗ್ಲೌಸ್ ಮತ್ತು ಇತರ ವಸ್ತುಗಳನ್ನು ಖರೀದಿಸಿದರು. 28ರಂದು ಎಂದಿನಂತೆ ಭಾಸ್ಕರ್ ಸ್ನಾನಮಾಡಲು ಮನೆಗೆ ಮಧ್ಯಾಹ್ನ 3.30ಕ್ಕೆ ಬಂದ. ಅವನಿಗಾಗಿ ಮನೆಯಲ್ಲಿ ಮೂರೂ ಜನರು ಹೊಂಚು ಹಾಕಿದ್ದರು. ಭಾಸ್ಕರ್ ಸ್ನಾನ ಮಾಡಿ ಬಾತ್​ರೂಂನಿಂದ ಹೊರಬರುತ್ತಲೇ ನವನೀತ್ ಅವನೆದುರಿಗೆ ಬಂದು ತಂದೆ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ. ಭಾಸ್ಕರ್ ವಿಚಲಿತನಾಗಿ ಕಣ್ಣುಜ್ಜತೊಡಗಿದಾಗ ನವನೀತ್ ರಾಡಿನಿಂದ ಅವನ ತಲೆಗೆ ಹಲವಾರು ಬಾರಿ ಹೊಡೆದ. ಭಾಸ್ಕರ್ ಕುಸಿದು ಕೆಳಗೆ ಬಿದ್ದಾಗ ರಾಜೇಶ್ವರಿ ಜಿರಳೆ ಕೊಲ್ಲುವ ಔಷಧವನ್ನು ಅವನಿಗೆ ಬಲವಂತವಾಗಿ ಕುಡಿಸಿದಳು. ಅದೇ ಸಮಯಕ್ಕೆ ನಿರಂಜನ ಮತ್ತು ನವನೀತ್ ಅವನ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿದರು. ಆನಂತರ ಮೂರೂ ಜನರು ಭಾಸ್ಕರನನ್ನು ಎತ್ತಿಕೊಂಡು ಬಾತ್​ರೂಮಿನ ಬಾತ್​ಟಬ್​ನಲ್ಲಿ ಮಲಗಿಸಿ ಟಬ್​ಗೆ ನೀರು ತುಂಬಿಸಿ ಅವನನ್ನು ಅದರಲ್ಲಿ ಮುಳುಗಿಸಿದರು. ಆತನ ಉಸಿರಾಟ ನಿಂತ ನಂತರ ಶವವನ್ನು ಕಂಬಳಿಯಲ್ಲಿ ಸುತ್ತಿದರು. ರಾಜೇಶ್ವರಿ ನೆಲದ ಮೇಲೆ ಬಿದ್ದಿದ್ದ ರಕ್ತದ ಕಲೆಗಳನ್ನು ಒರೆಸಿ ಸ್ವಚ್ಛ ಮಾಡಿದಳು. ನಂತರ ಶವವನ್ನು ರಾಜೇಶ್ವರಿಯ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡರು. ಈಗಾಗಲೇ ಖರೀದಿಸಿದ್ದ 20 ಲೀಟರ್ ಪೆಟ್ರೋಲ್ ಕ್ಯಾನನ್ನೂ ಕಾರಿನಲ್ಲಿ ಇಟ್ಟುಕೊಂಡರು.

ನಂತರ ಮೂರೂ ಜನರು ಕಾರಿನಲ್ಲಿ ನಿರಂಜನನ ಮನೆಯತ್ತ ಹೊರಟರು. ಮಾರ್ಗಮಧ್ಯದಲ್ಲಿ ಸಿಕ್ಕ ಹೊಳೆಯಲ್ಲಿ ಭಾಸ್ಕರನ ಮೂರೂ ಮೊಬೈಲ್​ಗಳನ್ನು ಎಸೆದರು. ಸಂಜೆ 7 ಗಂಟೆಗೆ ನಿರ್ಜನ ಪ್ರದೇಶದಲ್ಲಿದ್ದ ನಿರಂಜನನ ಯಾಗಶಾಲೆಗೆ ತಲುಪಿದರು. ನಿರಂಜನನ ತಂದೆ-ತಾಯಿ ಆಗ ಆಸ್ಪತ್ರೆಯಲ್ಲಿದ್ದ ಕಾರಣ ಅಲ್ಲಿ ಬೇರಾರೂ ಇರಲಿಲ್ಲ. ಯಾಗಶಾಲೆಯಲ್ಲಿ ಕಲ್ಲು ಮತ್ತು ಇಟ್ಟಿಗೆಗಳನ್ನು ಜೋಡಿಸಿ ನಿರಂಜನ ನಾಲ್ಕು ಅಡಿ ಚೌಕಾಕಾರದ ಹೋಮಕುಂಡವನ್ನು ಸಿದ್ಧಗೊಳಿಸಿದ. ಅದರೊಳಗೆ ತೆಂಗಿನ ಚಿಪು್ಪ, ಕಟ್ಟಿಗೆ, ಕರ್ಪರ, ತುಪ್ಪ ಮತ್ತು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ. ನಂತರ ಮೂರೂ ಜನರು ಕಾರಿನಿಂದ ಶವವನ್ನು ಹೊರತೆಗೆದು ಅದನ್ನು ಉರಿಯುತ್ತಿದ್ದ ಬೆಂಕಿಗೆ ಹಾಕಿದರು. ರಕ್ತಸಿಕ್ತ ಬಟ್ಟೆಗಳನ್ನೂ, ಭಾಸ್ಕರನ ಬೆಲ್ಟ್ ಮತ್ತು ಪರ್ಸಗಳನ್ನು ಹೋಮಕುಂಡದಲ್ಲೆಸೆದರು. ಶವ ಮುಕ್ಕಾಲು ಭಾಗ ಸುಟ್ಟ ಬಳಿಕ ನಿರಂಜನ ತನ್ನ ಕಾರಿನ ಚಾಲಕ ರಾಘವೇಂದ್ರನನ್ನು ಯಾಗಶಾಲೆಗೆ ಕರೆಸಿಕೊಂಡ.

ಆನಂತರ ಅಷ್ಟೂ ಜನರು ಕಾರಿನಲ್ಲಿ ಕುಳಿತು ಯಾಗಶಾಲೆಯಿಂದ ನಿರ್ಗಮಿಸಿದರು. ಹಾದಿಯಲ್ಲಿ ಸಿಕ್ಕ ಹೊಳೆಯೊಂದರ ಬಳಿ ಕಾರ್ ನಿಲ್ಲಿಸಿ ಭಾಸ್ಕರನ ವಾಚು ಹಾಗೂ ಕೊಲೆಮಾಡಲು ಉಪಯೋಗಿಸಿದ್ದ ಎಲ್ಲ ಇತರ ಉಪಕರಣಗಳನ್ನೂ ನೀರಿಗೆ ಎಸೆದರು. ರಾತ್ರಿ 11ಕ್ಕೆ ರಾಜೇಶ್ವರಿಯ ಮನೆಯನ್ನು ತಲುಪಿದರು. ಅಲ್ಲಿಂದ ನಿರಂಜನ ಮತ್ತು ರಾಘವೇಂದ್ರ ನಿರಂಜನನ ತಾಯಿಯನ್ನು ನೋಡಲು ಆಸ್ಪತ್ರೆಗೆ ಹೋದರು. ಮಾರನೆಯ ದಿನ ನಿರಂಜನ ರಾಘವೇಂದ್ರನ ಜತೆಗೂಡಿ ಹೋಮಕುಂಡವನ್ನು ಸ್ವಚ್ಛ ಮಾಡಿದ. ಅದರಲ್ಲಿದ್ದ ಬೂದಿ, ಮೂಳೆ ತುಂಡುಗಳು ಇತ್ಯಾದಿಗಳನ್ನು ಒಂದು ಚೀಲದಲ್ಲಿ ತುಂಬಿಸಿದ. ನಂತರ ಇಬ್ಬರೂ ಯಾಗಶಾಲೆಯನ್ನು ನೀರಿನಿಂದ ಸ್ವಚ್ಛ ಮಾಡಿ ಬೂದಿ ಮತ್ತು ಮೂಳೆಗಳಿದ್ದ ಮೂಟೆಯನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಹತ್ತಿರದಲ್ಲಿದ್ದ ನದಿಗೆ ಎಸೆದರು. ಏತನ್ಮಧ್ಯೆ ಪ್ರತಿದಿನ ತನಗೆ ಎರಡು ಬಾರಿ ಫೋನ್ ಮೂಲಕ ಸಂರ್ಪಸುತ್ತಿದ್ದ ಭಾಸ್ಕರ್ ಕಳೆದ ಸಂಜೆಯಿಂದ ಫೋನ್ ಮಾಡದೇ ಇದ್ದ ಕಾರಣ ಭಾಸ್ಕರನ ತಾಯಿ ಗುಲಾಬಿ ಗಾಬರಿಯಾದರು. ಆಕೆ ಭಾಸ್ಕರನನ್ನು ಫೋನ್ ಮೂಲಕ ಸಂರ್ಪಸಲು ಮಗಳಿಗೆ ತಿಳಿಸಿದರು. ಮಗಳು ಹೇಮಲತಾ ಎಷ್ಟೇ ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಎಂದೇ ಬಂದಿತು. ಭಾಸ್ಕರನ ಹೋಟೆಲಿಗೆ ಹೋಗಿ ವಿಚಾರಿಸಿದರೆ, ‘ಮಾಲೀಕರು ಕಳೆದ ಮಧ್ಯಾಹ್ನ ಸ್ನಾನ ಮಾಡಲು ಮನೆಗೆ ಹೋದವರು ಇನ್ನೂ ಬಂದಿಲ್ಲ’ ಎಂಬ ಉತ್ತರ ದೊರಕಿತು. ಭಾಸ್ಕರನ ಕಾರಿನಲ್ಲಿ ರಾಜೇಶ್ವರಿ ಓಡಾಡುತ್ತಿದ್ದಳು ಎಂದು ಯಾರೋ ತಿಳಿಸಿದಾಗ ಅನುಮಾನಗೊಂಡು ಭಾಸ್ಕರನ ಮನೆಗೆ ಹೋಗಿ ನೋಡಿದರು. ಅಲ್ಲಿಯೂ ಆತನಿರದೆ ರಾಜೇಶ್ವರಿ ತನ್ನ ಗಂಡ ಎಲ್ಲಿಗೆ ಹೋಗಿರುವನೋ ತಿಳಿದಿಲ್ಲ ಎಂಬ ಹಾರಿಕೆಯ ಉತ್ತರ ಕೊಟ್ಟಳು. ಆದರೆ ಭಾಸ್ಕರ್ ಧರಿಸುತ್ತಿದ್ದ ಚಪ್ಪಲಿಗಳು ಮನೆಯಲ್ಲಿಯೇ ಇದ್ದದನ್ನು ಕಂಡ ಆತನ ಸಂಬಂಧಿಕರಿಗೆ ಸಂಶಯ ಬಲವಾಯಿತು. ಏಕೆಂದರೆ ಆತ ಎಲ್ಲಿಗೆ ಹೋಗಬೇಕಾದರೂ ಅವನ್ನು ಧರಿಸಿಯೇ ಹೋಗುತ್ತಿದ್ದ. ಆಗ ಭಾಸ್ಕರನ ತಾಯಿ ಮಗ ಕಾಣೆಯಾಗಿರುವನೆಂದು ಪೊಲೀಸ್ ಠಾಣೆಗೆ ದೂರು ನೀಡಿದರು.

ದೂರನ್ನು ದಾಖಲಿಸಿದ ಪೊಲೀಸರು ರಾಜೇಶ್ವರಿಯನ್ನು ವಿಚಾರಿಸಿದಾಗ ತಾನು ಮಗನೊಡನೆ ಊರಿಗೆ ಹೋಗಿ ಬಂದಿದ್ದಾಗಿಯೂ, ಭಾಸ್ಕರ್ ಪ್ರತಿರಾತ್ರಿ ತನ್ನ ಹೋಟೆಲ್​ನಲ್ಲಿ ತಂಗುತ್ತಿದುದ್ದರಿಂದ ತನಗೆ ಅವನ ಬಗ್ಗೆ ಏನೂ ತಿಳಿದಿಲ್ಲ. ಆತ ಸೌದಿಗೆ ವಾಪಸಾಗಿರಬಹುದು ಎಂದಳು. ಆದರೂ ತಾಯಿ, ಮಗನ ನಡವಳಿಕೆ ಮತ್ತು ಹಾರಿಕೆ ಉತ್ತರಗಳಿಂದ ಸಂದೇಹಗೊಂಡ ಪೊಲೀಸರು ಅವರಿಬ್ಬರನ್ನೂ ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಅವರು ನಡೆದ ವಿಷಯವನ್ನು ಹೇಳಿದರು. ಭಾಸ್ಕರನ ಮನೆಯ ಗೋಡೆ ಮೇಲೆ ರಕ್ತದ ಕೆಲವು ಕಲೆಗಳು ದೊರಕಿದವು. ನಂತರ ನಿರಂಜನನನ್ನು ಬಂಧಿಸಲಾಯಿತು. ಆತ ಭಾಸ್ಕರನ ಎಲುಬುಗಳನ್ನು ಎಸೆದಿದ್ದ ಜಾಗ ತೋರಿಸಿದ. ಡೈವರ್​ಗಳ ಸಹಾಯದಿಂದ ಆ ಹೊಳೆಯನ್ನು ಹುಡುಕಿದಾಗ ಎಲಬುಗಳಿದ್ದ ಚೀಲ ಮರದ ಬೇರೊಂದಕ್ಕೆ ಸಿಕ್ಕಿಕೊಂಡಿದ್ದು ಕಂಡಿತು. ಅದನ್ನು ಹೊರತೆಗೆಯಲಾಯಿತು.

ಇಷ್ಟರಲ್ಲಿ ನಿರಂಜನ ಪೊಲೀಸ್ ಠಾಣೆಯಲ್ಲಿ ತನಗೆ ಹೊಟ್ಟೆನೋವೆಂದು ಒದ್ದಾಡತೊಡಗಿದಾಗ ಅವನಿಗೆ ಕಾರಣ ಕೇಳಿದರು. ಆತ ತನ್ನ ಕೃತ್ಯದಿಂದ ತನಗೆ ತೀವ್ರ ಪಶ್ಚಾತ್ತಾಪವಾದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಉಂಗುರ ಹಾಗೂ ಓಲೆಯನ್ನು ನುಂಗಿದ್ದಾಗಿ ತಿಳಿಸಿದ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎರಡೂ ಆಭರಣಗಳನ್ನು ಹೊರತೆಗೆಸಲಾಯಿತು.

ಪ್ರಕರಣ ತೀರಾ ಸೂಕ್ಷ್ಮವಾಗಿದ್ದ ಕಾರಣ ಮುಂದಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಯಿತು. ತನಿಖಾಧಿಕಾರಿ ಡಿ.ಎಸ್.ಪಿ ಎಸ್.ಟಿ.ಚಂದ್ರಶೇಖರ್ ಭಾಸ್ಕರನ ಸೋದರ ಹಾಗೂ ತಾಯಿಯ ಡಿಎನ್​ಎ ಪಡೆದು ಹೊಳೆಯಲ್ಲಿ ಸಿಕ್ಕ ಎಲುಬುಗಳೊಂದಿಗೆ ಹೋಲಿಸಿದಾಗ ಅವು ಭಾಸ್ಕರನವೇ ಎಂದು ಸಾಬೀತಾಯಿತು. ಸೆಲ್​ಫೋನ್ ಸಿಡಿಆರ್​ಗಳ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಮುಖಾಂತರ ಆರೋಪಿಗಳು ಕೃತ್ಯಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಇದ್ದುದನ್ನು ಸಾಬೀತು ಪಡಿಸಿದರು.

ಈ ಪ್ರಕರಣದಲ್ಲಿ ಯಾವ ಪ್ರತ್ಯಕ್ಷದರ್ಶಿಯೂ ಇರದ ಕಾರಣ ಅದು ಸಂಪೂರ್ಣವಾಗಿ ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆ ಅವಲಂಬಿತವಾಗಿತ್ತು. ನ್ಯಾಯಾಲಯವು 2021ರ ಜೂನ್ ತಿಂಗಳಲ್ಲಿ ಮೂರೂ ಆರೋಪಿಗಳಿಗೆ ಆಜೀವ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿತು. ‘ಏರಿಯ ಮೇಲಣ ಪಂಜು ನೀರೊಳಗೆ ಉರಿವಂತೆ ನಾರಿಯರೊಲುಮೆ ತನಗೆಂಬ ಮೂಢಂಗೆ ಮಾರಿ ಹೊಡೆಯಿತ್ತು ಸರ್ವಜ್ಞ’ ಎನ್ನುವ ನುಡಿಗಳನ್ನು ಭಾಸ್ಕರ್ ನಂಬಬೇಕಾಗಿತ್ತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net