ಮಾಜಿ ಮಾಡೆಲ್ ನಿಗೂಢ ಸಾವು; ಆ ಕ್ಷಣದಲ್ಲಿ ಡಾ. ಡಿ.ವಿ. ಗುರುಪ್ರಸಾದ್​ ವಿವರಣೆ

edit 3
Published on

ಮಹಾನಗರವೊಂದರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇದ್ದ ಗ್ರಾಮವೊಂದರ ನಿವಾಸಿಗಳ ಗುಂಪು ಅಂದು ಮುಂಜಾನೆ ಎಂದಿನಂತೆ ವಾಕಿಂಗ್​ಗೆ ಹೊರಟಿತ್ತು. ರಸ್ತೆಯ ಪಕ್ಕದಲ್ಲಿದ್ದ ಹೊಲದಲ್ಲಿ ಯುವತಿಯೊಬ್ಬಳು ಮಲಗಿದ್ದಂತೆ ಕಂಡಾಗ ಕುತೂಹಲಗೊಂಡ ಒಬ್ಬ ವ್ಯಕ್ತಿ ಸಮೀಪಕ್ಕೆ ಹೋಗಿ ನೋಡಿ ‘ಯಾರದೋ ಕೊಲೆಯಾಗಿದೆ’ ಎನ್ನುತ್ತ ಜತೆಗಾರರನ್ನು ಕರೆದ. ನೀಲಿಬಣ್ಣದ ಜೀನ್ಸ್ ಹಾಗೂ ಗುಲಾಬಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ಸ್ತ್ರೀಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ತಲೆಯನ್ನು ಜಜ್ಜಲು ಬಳಸಿದ್ದ ಸಿಮೆಂಟ್ ಇಟ್ಟಿಗೆ ಪಕ್ಕದಲ್ಲಿಯೇ ಬಿದ್ದಿತ್ತು. ಗಾಬರಿಯಾದ ಕಾಲ್ನಡಿಗೆದಾರರು ಪೊಲೀಸ್ ಠಾಣೆಗೆ ಫೋನ್ ಮಾಡಿದರು.

ಮೃತಳು ಉತ್ತರ ಭಾರತೀಯಳಂತೆ ಕಾಣುತ್ತಿದ್ದು ಕೈಗೆ ಟೈಟಾನ್ ವಾಚ್ ಕಟ್ಟಿದ್ದು, ಬಂಗಾರದ ಉಂಗುರ ಧರಿಸಿದ್ದಳು. ಪೊಲೀಸರು ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲಿಸಿದರು.

‘ಮೃತಳು 35-40 ವರ್ಷ ವಯಸ್ಸಿನ ವಿವಾಹಿತ ಮಹಿಳೆಯಾಗಿದ್ದು, ಆಕೆಯ ಬೆನ್ನು, ಎದೆ ಮತ್ತು ಹೊಟ್ಟೆ ಮೇಲೆ ಹರಿತ ವಸ್ತುವಿನಿಂದ ಇರಿದು ಆನಂತರ ತಲೆಬುರುಡೆಯನ್ನು ಜಜ್ಜಿದ ಫಲವಾಗಿ ತೀವ್ರ ರಕ್ತಸ್ರಾವವಾಗಿ ಸಾವು ಸಂಭವಿಸಿದೆ’ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂತು. ಮೃತಳ ಮೇಲೆ ಅತ್ಯಾಚಾರವಾಗಿಲ್ಲ ಎನ್ನುವುದನ್ನೂ ವೈದ್ಯರು ಸ್ಪಷ್ಟಪಡಿಸಿದರು.

ತನಿಖಾಧಿಕಾರಿ ಶವದ ಫೋಟೋಗಳನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಿ ಅದನ್ನು ಕಾಣೆಯಾದ ವ್ಯಕ್ತಿಗಳ ಫೋಟೋಗಳ ಜತೆಗೆ ಹೋಲಿಸಿ ನೋಡಲು ವಿನಂತಿಸಿದರು. ಏತನ್ಮಧ್ಯೆ ಪ್ರಕರಣದ ತನಿಖಾಧಿಕಾರಿಯ ವರ್ಗಾವಣೆಯಾಗಿ ಹೊಸದಾಗಿ ನೌಕರಿಗೆ ಸೇರಿದ್ದ ಪೊಲೀಸ್ ಅಧಿಕಾರಿ ತನಿಖೆಯನ್ನು ವಹಿಸಿಕೊಂಡರು. ಮೃತಳು ಧರಿಸಿದ್ದ ಜೀನ್ಸ್ ಮತ್ತು ಟೀ ಶರ್ಟ್​ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅವರು ಆ ಬಗೆಯ ಜೀನ್ಸ್ ಸಾಧಾರಣವಾಗಿ ಅಂಗಡಿಗಳಲ್ಲಿ ಸಿಗದೆ ಆನ್​ಲೈನ್ ಮೂಲಕವೇ ವ್ಯಾಪಾರವಾಗುವ ಬ್ರಾಂಡ್ ಎಂದು ಮನಗಂಡು, ಆನ್​ಲೈನ್ ಮಾರಾಟ ಸಂಸ್ಥೆಗಳನ್ನು ಸಂರ್ಪಸಿ ಆ ಬ್ರಾಂಡ್ ಜೀನ್ಸ್ ಖರೀದಿ ಮಾಡಿದವರ ವಿವರ ಕೋರಿದರು. ಮಿಂತ್ರಾ ಸಂಸ್ಥೆಯು ಅಂತಹ ಜೀನ್ಸ್​ಗಳು ದೆಹಲಿ ಮತ್ತು ಕೊಲ್ಕತ್ತಗಳಲ್ಲಿ ಜನಪ್ರಿಯವಾಗಿವೆ ಎಂದು ತಿಳಿಸಿದರೂ ಸದರಿ ಜೀನ್ಸ್ ಕೊಂಡವರು ಯಾರು ಎಂದು ತಿಳಿಸಲಿಲ್ಲ.

ತನಿಖಾಧಿಕಾರಿ ಮೃತಳ ಫೋಟೋಗಳನ್ನು ದೆಹಲಿ ಹಾಗೂ ಕೊಲ್ಕತ್ತದ ಪೊಲೀಸ್ ಕಮಿಷನರ್ ಕಚೇರಿಗಳಿಗೆ ಕಳುಹಿಸಿ ಕಳೆದ ಒಂದೆರಡು ತಿಂಗಳುಗಳಲ್ಲಿ ನಾಪತ್ತೆಯಾಗಿರುವ ಸ್ತ್ರೀಯರ ಪ್ರಕರಣಗಳ ವಿವರ ಕೋರಿದರು. ಆದರೆ ಅಲ್ಲಿಂದ ಉತ್ತರ ಬಾರದಾದಾಗ ತಮ್ಮಕಾನ್​ಸ್ಟೆಬಲ್​ಗಳನ್ನೇ ಅಲ್ಲಿಗೆ ಕಳುಹಿಸಿದರು. ಕೊಲ್ಕತ್ತಕ್ಕೆ ಹೋಗಿದ್ದ ಕಾನ್​ಸ್ಟೆಬಲ್ ಮೃತಳ ವಿವರಗಳನ್ನು ಹೋಲುವ ಮಹಿಳೆಯೊಬ್ಬಳು ಕಾಣೆಯಾಗಿರುವಳೆಂದು, ಕೊಲ್ಕತ್ತ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೆಂದು ತಿಳಿಸಿ ಕಾಣೆಯಾದ ಮಹಿಳೆಯ ಚಿತ್ರವನ್ನು ವಾಟ್ಸ್​ಆಪ್ ಮೂಲಕ ಕಳಿಸಿದ. ಬಳಿಕ ತನಿಖಾಧಿಕಾರಿಯೇ ಕೊಲ್ಕತ್ತಕ್ಕೆ ಹೋಗಿ ದೂರನ್ನು ನೀಡಿದ್ದ ಸೌದೀಪ್ ಮುಖರ್ಜಿ ಎಂಬುವವರನ್ನು ಸಂರ್ಪಸಿದರು.

‘ನನ್ನ ಪತ್ನಿ ಪೂಜಾ ಹಿಂದೆ ಮಾಡೆಲ್ ಆಗಿದ್ದು ನಮ್ಮ ಮದುವೆಯಾದ ನಂತರ ಇವೆಂಟ್ ಮ್ಯಾನೇಜ್​ವೆುಂಟ್ ಸಂಸ್ಥೆ ನಡೆಸುತ್ತಿದ್ದಳು. ಒಂದೂವರೆ ತಿಂಗಳ ಹಿಂದೆ ಮಹಾನಗರಕ್ಕೆ ಕೆಲಸದ ಮೇಲೆ ವಿಮಾನದಲ್ಲಿ ಹೋದಳು. ಒಂದು ದಿನ ರಾತ್ರಿ ಹೋಟೆಲಲ್ಲಿ ತಂಗಿದ್ದಳು. ಮಾರನೆಯ ದಿನ ಬೆಳಗಿನ ವಿಮಾನದಲ್ಲಿ ವಾಪಸಾಗಬೇಕಾಗಿತ್ತು. ಆಕೆ ಮನೆಗೆ ಬಾರದಿದ್ದಾಗ ಫೋನ್ ಮಾಡಿದೆ. ಅದು ಸ್ವಿಚ್​ಆಫ್ ಆಗಿತ್ತು. ಪೂಜಾ ತಂಗಿದ್ದ ಹೋಟೆಲ್ಲಿಗೆ ಫೋನ್ ಮಾಡಿದಾಗ ಆಕೆ ಬೆಳಗ್ಗೆಯೇ ರೂಮ್ ಖಾಲಿ ಮಾಡಿದ್ದಾಗಿ ತಿಳಿಯಿತು. ಆಕೆ ಕೆಲಸದ ಮೇಲೆ ಇನ್ನೆಲ್ಲಿಗೋ ಹೋಗಿರಬೇಕೆಂದು ನಾನು ಒಂದು ದಿನ ಕಾಯ್ದು ಆನಂತರವೂ ಅವಳು ಫೋನ್​ಗೆ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದೆ’ ಎಂದ ಸೌದೀಪ್.

ತನಿಖಾಧಿಕಾರಿ ಸೌದೀಪ್​ನಿಗೆ ಮೃತಳ ವಸ್ತುಗಳನ್ನು ತೋರಿಸಿದರು. ಆತ ಪೂಜಾಳ ಬಟ್ಟೆ, ಉಂಗುರ ಮತ್ತು ವಾಚನ್ನು ಗುರುತಿಸಿದನಲ್ಲದೆ, ಪೂಜಾ ತನ್ನ ತೋಳಿನ ಒಂದು ಮೂಲೆಯಲ್ಲಿ ‘ಎಸ್’ ಎಂದು ಹಾಕಿಸಿಕೊಂಡಿದ್ದ ಹಚ್ಚೆಯನ್ನು ಫೋಟೋದಲ್ಲಿ ಗುರುತಿಸಿದ. ಪೂಜಾ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಬರುವ ದಾರಿಯಲ್ಲಿ ಕೊಲೆಯಾಗಿದ್ದ ಕಾರಣ ಹೋಟೆಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಯಾವ ಸುಳಿವೂ ಸಿಗಲಿಲ್ಲ. ಆಕೆ ಕೊಲ್ಕತ್ತದಿಂದ ಬಂದಿಳಿದ ದಿನ ವಿಮಾನ ನಿಲ್ದಾಣದಿಂದ ಕ್ಯಾಬ್ ಬುಕ್ ಮಾಡಿದ್ದಳೇ ಎಂದು ವಿಚಾರಿಸಿದಾಗ ಓಲಾ ಟ್ಯಾಕ್ಸಿಯಲ್ಲಿ ಆಕೆ ನಗರ ಕೇಂದ್ರಸ್ಥಾನಕ್ಕೆ ಬಂದಿದ್ದಳೆಂದು ತಿಳಿಯಿತು. ಆ ಟ್ಯಾಕ್ಸಿ ಚಾಲಕನನ್ನು ವಿಚಾರಿಸಿದಾಗ ಆತ ಪೂಜಾಳನ್ನು ಏರ್​ಪೋರ್ಟಿನಿಂದ ನಗರದ ಮಧ್ಯಭಾಗದಲ್ಲಿನ ಒಂದು ಕಚೇರಿಗೆ ಬಿಟ್ಟೆ ಎಂದಷ್ಟೇ ತಿಳಿಸಿದ. ಪೂಜಾ ಅಲ್ಲಿಂದ ಹೋಟೆಲ್ಲಿಗೆ ಹೇಗೆ ಹೋದಳು ಎಂದು ತಿಳಿಯಲು ಮತ್ತೆ ಓಲಾ ಕಂಪನಿಯನ್ನೇ ಸಂರ್ಪಸಿ ಇನ್ನೊಂದು ವಾಹನದ ವಿವರಗಳನ್ನು ಪಡೆಯಲಾಯಿತು. ಆ ವಾಹನ ಬಿಳಿಯ ಸ್ವಿಫ್ಟ್ ಕಾರ್ ಆಗಿದ್ದು, ಅದರ ಚಾಲಕ ರಾಜೇಶ್​ನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಆತ ಹೀಗೆ ಹೇಳಿದ:

‘ನನ್ನ ಟ್ಯಾಕ್ಸಿಯಲ್ಲಿ ಮೃತಳನ್ನು ಒಂದು ಸಂಜೆ ನಗರ ಮಧ್ಯಭಾಗದಿಂದ ಹೋಟೆಲ್​ಗೆ ಬಿಟ್ಟೆ. ಆಕೆ ಇಳಿಯುವಾಗ ಮಾರನೆಯ ದಿನ ಬೆಳಗ್ಗೆ 4 ಗಂಟೆಗೆ ತನ್ನನ್ನು ಏರ್​ಪೋರ್ಟಿಗೆ ಬಿಡಲು ಸಾಧ್ಯವೇ ಎಂದು ಕೇಳಿದಳು. ನೀವು ಓಲಾ ಕಂಪನಿ ಮೂಲಕ ಬುಕ್ ಮಾಡಬೇಡಿ, ನಾನೇ ಬರುತ್ತೇನೆ ಎಂದೆ. ನಾನು ಆ ರಾತ್ರಿ ಕಾರನ್ನು ಅವಳಿದ್ದ ಹೋಟೆಲ್ ಬಳಿಯೇ ನಿಲ್ಲಿಸಿಕೊಂಡಿದ್ದು ಬೆಳಗ್ಗೆ 3.45ಕ್ಕೆ ಆಕೆಯ ಮೊಬೈಲ್​ಗೆ ಕರೆ ಮಾಡಿ ಎಬ್ಬಿಸಿದೆ. 4 ಗಂಟೆಗೆ ಅವಳನ್ನು ಟ್ಯಾಕ್ಸಿಯಲ್ಲಿ ಕೂರಿಸಿಕೊಂಡು ಅಲ್ಲಿಂದ 60 ಕಿ.ಮೀ. ದೂರವಿರುವ ವಿಮಾನ ನಿಲ್ದಾಣದತ್ತ ಹೊರಟೆ. ಕಾರು ಸ್ವಲ್ಪ ದೂರ ಹೋಗುವಷ್ಟರಲ್ಲಿ ಆಕೆ ನಿದ್ರೆಗೆ ಶರಣಾದಳು. ಆಗ ನಾನು ಕಾಮೋದ್ರೇಕಗೊಂಡು ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಹಿಂದಿನ ಸೀಟಿಗೆ ಬಂದು ಪಕ್ಕದಲ್ಲಿ ಕುಳಿತು ಅವಳನ್ನು ಅಪ್ಪಿಕೊಂಡೆ. ಎಚ್ಚರಗೊಂಡ ಅವಳು ಜೋರಾಗಿ ಕಿರುಚಿದಾಗ ‘ಸಾರಿ ಮೇಡಂ ತಪ್ಪಾಯಿತು’ ಎಂದೆ. ಆಕೆ ತುಂಬ ಗಾಬರಿಯಾಗಿದ್ದಳು. ನನ್ನ ಬಗ್ಗೆ ಓಲಾ ಕಂಪನಿಗೆ ದೂರಬಹುದೆಂದು ಊಹಿಸಿ ಆಕೆಯನ್ನು ಮುಗಿಸಿಬಿಡಬೇಕು ಎಂದು ತೀರ್ವನಿಸಿದೆ. ಆಕೆಯ ಬಳಿಯಿದ್ದ ಹಣವನ್ನು ದೋಚಿ ನನ್ನ ಊರಿಗೆ ಮರಳಿ ಹೋಗಬೇಕು ಎಂದು ನಿರ್ಧರಿಸಿದೆ.

ರಸ್ತೆ ನಿರ್ಜನವಾಗಿತ್ತು. ವಿಮಾನ ನಿಲ್ದಾಣ 5 ಕಿ.ಮೀ. ದೂರವಿರುವಾಗ ಕಾರನ್ನು ನಿಲ್ಲಿಸಿ ಹಿಂದಿನ ಸೀಟ್​ಗೆ ಹೋಗಿ ಆಕೆಯ ಮೇಲೆರಗಿ ಅವಳನ್ನು ಬಲವಂತವಾಗಿ ಚುಂಬಿಸಿ ಚಾಕುವಿನಿಂದ ಆಕೆಯ ಹೊಟ್ಟೆ ಮತ್ತು ಎದೆಗೆ ಇರಿದೆ. ನಂತರ ಆಕೆಯನ್ನು ಕಾರಿನಿಂದ ಕೆಳಗೆಳೆದು ಪಕ್ಕದಲ್ಲಿದ್ದ ಹೊಲಕ್ಕೆ ತಳ್ಳಿದೆ. ಆಕೆ ಇನ್ನೂ ಉಸಿರಾಡುತ್ತಿದ್ದಳು. ಆಗ ಸಿಮೆಂಟ್ ಇಟ್ಟಿಗೆಯನ್ನು ಆಕೆಯ ತಲೆಯ ಮೇಲೆ ಎಸೆದು ಆಕೆ ಸತ್ತಳೆಂದು ಖಾತ್ರಿಯಾದ ನಂತರ ಕಾರಿನಲ್ಲಿದ್ದ ಅವಳ ಸೂಟ್​ಕೇಸ್, ಹ್ಯಾಂಡ್​ಬ್ಯಾಗ್, ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾದೆ. ಆಕೆ ಸಿನಿಮಾ ಅಥವಾ ಟಿ.ವಿ. ತಾರೆಯಿರಬೇಕು ಎಂದು ಭಾವಿಸಿದ್ದ ನನಗೆ ಅವಳ ಬ್ಯಾಗಿನಲ್ಲಿ ಕೇವಲ 500 ರೂ. ಸಿಕ್ಕಾಗ ನಿರಾಶೆಯಾಯಿತು’.

ಚಾಣಾಕ್ಷತನದಿಂದ ಕೊಲೆ ಕೇಸನ್ನು ಪತ್ತೆಮಾಡಿದ ಇನ್​ಸ್ಪೆಕ್ಟರನ್ನು ಪ್ರಶಂಸಿಸಿದ ನ್ಯಾಯಾಲಯ ರಾಜೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅವೇಳೆಯಲ್ಲಿ ಪ್ರಯಾಣಿಸುವ ಒಂಟಿ ಸ್ತ್ರೀಯರ ರಕ್ಷಣೆಗೆ ಹಲವಾರು ಸೂಚನೆಗಳನ್ನು ನೀಡಿದ್ದರೂ ಕ್ಯಾಬ್ ಕಂಪನಿಯನ್ನು ಬಿಟ್ಟು ನೇರವಾಗಿ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದ ಪೂಜಾ ದುರಂತಕ್ಕೆ ಆಹ್ವಾನವಿತ್ತಳು. ಇಟಾಲಿಯನ್ ನಾಟಕಕಾರ ವಿಟ್ಟೋರಿಯೋ ಅಲ್ ಫಿಯೆರಿ ಹೇಳುವಂತೆ, ‘ಸಮಾಜವು ಅಪರಾಧದ ವಾತಾವರಣವನ್ನು ಕಲ್ಪಿಸಿದಾಗ ಅಪರಾಧಿಯು ಅಪರಾಧ ಮಾಡುತ್ತಾನೆ’.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net