ದಾಸೋಹ ಪರಂಪರೆಯ ಅನ್ನದಾನೀಶ್ವರ ಮಠ: ಮುಂಡರಗಿಯಲ್ಲಿ ಮಹಾರಥೋತ್ಸವ

Mundaragi Rathotsava
Published on
ಅನ್ನದಾಸೋಹದ ಮೂಲಕ ‘ಅನ್ನದಾನೀಶ್ವರ ಮಠ’ ಎಂದೇ ಪ್ರಸಿದ್ಧವಾದುದು ಮುಂಡರಗಿ ಅನ್ನದಾನೀಶ್ವರ ಮಠ. ನಾಳೆ (ಫೆ. 7) ಮಠದಲ್ಲಿ ಮಹಾರಥೋತ್ಸವ ಜರುಗಲಿದ್ದು, ತನ್ನಿಮಿತ್ತ ಬರಹ ಇಲ್ಲಿದೆ.

ಷಟ್​ಸ್ಥಲ ಸಿದ್ಧಾಂತದ ಮೇರುಶಿಖರ ಚನ್ನಬಸವಣ್ಣ ಶರಣಸಂಕುಲದಲ್ಲೇ ಅತ್ಯಂತ ಜ್ಞಾನಿ. ಅಂಥ ಚನ್ನಬಸವಣ್ಣನವರ ಪರಂಪರೆಯಲ್ಲೇ ಸ್ಥಾಪನೆಗೊಂಡಿರುವುದು ಮುಂಡರಗಿ ಅನ್ನದಾನೀಶ್ವರ ಮಠ.

ಚನ್ನಬಸವಣ್ಣನವರಿಂದ ಲಿಂಗದೀಕ್ಷೆ ಸ್ವೀಕರಿಸಿದ ಶ್ರೀ ಅನ್ನದಾನೀಶ್ವರ ಮಹಾಸ್ವಾಮಿಗಳು ಅವರು ಕಾಲವಾದ ನಂತರ ಈ ಭಾಗದ ಹಲವೆಡೆ ಅನುಷ್ಠಾನ ಮಾಡಿದರು. ಮುಂಡರಗಿ ಪ್ರಾಂತದ ಕೆಲವರು ದಾರಿಹೋಕರನ್ನು ಹಿಂಸಿಸುತ್ತ ಅನ್ಯಾಯ, ಅನಾಚಾರ ಮಾಡುತ್ತಿದ್ದುದ್ದನ್ನು ಕಂಡು, ಸತ್ಯಶುದ್ಧ ಕಾಯಕ ಮಾಡಿ, ಹಸಿದವರಿಗೆ ದಾಸೋಹ ಮಾಡಬೇಕೆಂದು ಬುದ್ಧಿ ಹೇಳಿದರು. ಸ್ವಾಮಿಗಳಿಗೆ ಶರಣಾದ ಅವರು ದೌರ್ಜನ್ಯವನ್ನು ಬಿಟ್ಟುದಲ್ಲದೆ ಪೂಜ್ಯರಿಗೆ ಮಠವನ್ನು ಕಟ್ಟಿಕೊಟ್ಟರು. ಬಳಿಕ ಇಲ್ಲಿಯೇ ನೆಲೆನಿಂತ ಸ್ವಾಮಿಗಳು ನಿರಂತರ ಅನ್ನದಾನವನ್ನು ನಡೆಸಿದರು. ಆದ್ದರಿಂದಲೇ ಇದು ಅನ್ನದಾನೀಶ್ವರ ಮಠ ಎಂದು ಪ್ರಸಿದ್ಧವಾಗಿದೆ.

ಈ ಮೃಡಗಿರಿ ಮಠದ ಪರಂಪರೆಯಲ್ಲಿ ಪ್ರತಿವರ್ಷ ವೈಶಾಖ ಶುದ್ಧ ದಶಮಿಯಂದು ಮಹಾರಥೋತ್ಸವವು ನಡೆಯುತ್ತಿತ್ತು. ಕಳೆದ 150 ವರ್ಷಗಳಿಂದ ಮಾಘ ಶುದ್ಧ ತ್ರಯೋದಶಿಯಂದು ರಥೋತ್ಸವವನ್ನು ನಡೆಸಲಾಗುತ್ತಿದೆ. ಒಂಬತ್ತನೇ ಪೀಠಾಧಿಪತಿಗಳು ಅವರ ಗುರುಗಳ ಸ್ಮರಾಣಾರ್ಥ ಮಾಘ ಶುದ್ಧ ತ್ರಯೋದಶಿಯಂದು ರಥೋತ್ಸವ ನಡೆಸಲು ಆರಂಭಿಸಿದರು.

ಅನ್ನದಾನೀಶ್ವರರ ಮಹಾ ರಥೋತ್ಸವ: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮೃಡಗಿರಿ ಉತ್ಸವದಲ್ಲಿ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಪ್ರವಚನ, ಕೃಷಿಗೋಷ್ಠಿ

ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಗಳು

ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿವೆ. ನಾಳೆ (ಫೆ. 7) ಅನ್ನದಾನೀಶ್ವರ ಮಹಾರಥೋತ್ಸವ ಜರುಗಲಿದ್ದು, ನಂತರ ಧರ್ಮಸಭೆ, ಅನ್ನದಾನೀಶ್ವರ ಪ್ರತಿಷ್ಠಾನದ ಪುರಸ್ಕಾರ ಸಮಾರಂಭ ನಡೆಯಲಿದೆ. 8ರಂದು ಜಂಗಮೋತ್ಸವ ಹಾಗೂ 9ರಂದು ಶಿವಾನುಭವ ಕಾರ್ಯಕ್ರಮಗಳಿವೆ. ಈ ಕಾರ್ಯಕ್ರಮಗಳಲ್ಲಿ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಸೇರಿದಂತೆ ನಾಡಿನ ಹಲವಾರು ಮಠಾಧೀಶರು, ಗಣ್ಯರು, ಸಾಹಿತಿಗಳು, ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಯಾವ ವ್ಯಕ್ತಿ ಜ್ಞಾನ ಸಂಪಾದಿಸಿಕೊಂಡು ಜಗತ್ತಿಗೆ ಉಪದೇಶ ಮಾಡುವ ಸಾಮರ್ಥ್ಯ ಪಡೆದಿರುತ್ತಾನೆಯೋ ಅವನು ಪರಿಪೂರ್ಣ ಗುರು ಎನಿಸಿಕೊಳ್ಳಲು ಸಾಧ್ಯ. ಅನ್ನದಾನೀಶ್ವರ ಮಠದ ಪ್ರಸ್ತುತ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮಿಗಳಿಗೆ 21 ಶತಮಾನದ ಅಭಿನವ ಚನ್ನಬಸವಣ್ಣ ಎಂಬ ಹೆಗ್ಗಳಿಕೆ ಇದೆ. ಸಾಕ್ಷಾತ್ ಸರಸ್ವತಿಪುತ್ರರಾಗಿರುವ ಡಾ. ಅನ್ನದಾನೀಶ್ವರ ಸ್ವಾಮಿಗಳು ಇಲ್ಲಿಯವರೆಗೆ ಸುಮಾರು 120ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ. ಜಚನಿಯವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಗ್ರಂಥ ರಚಿಸಿದ ಪೂಜ್ಯರು ಇವರು. ಜೊತೆಗೆ ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ನಡೆಸಿ ಸಾಹಿತ್ಯ ಮತ್ತು ಸಂಶೋಧನಾಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅನ್ನದಾನೀಶ್ವರ ಪ್ರಕಾಶನ ಸಂಸ್ಥೆಯಿಂದ ಇತರರ 250ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳ ಸಮಗ್ರ ಸಾಹಿತ್ಯವನ್ನು ಆಧರಿಸಿ ಹಲವರು ಎಂಫಿಲ್, ಪಿಎಚ್​ಡಿ ಸಂಶೋಧನೆಗಳನ್ನು ಮಾಡಿದ್ದಾರೆ. ಶ್ರೀಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಯನ್ನು ಪರಿಗಣಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವವನ್ನು ನೀಡಿದೆ. ಶ್ರೀಗಳಿಗೆ ಬಂದಿರುವ ಇತರ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

ಸ್ವಾಮಿಗಳ ಪೂರ್ವಾಶ್ರಮ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಪೀರಾಪುರ ಗ್ರಾಮದ ವೀರಭದ್ರಯ್ಯ-ಬಸಮ್ಮ ದಂಪತಿಯ ಪುಣ್ಯಸಂಜಾತರಾಗಿ 1942ರಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಮಹಾಲಿಂಗಸ್ವಾಮಿ. ಬಾಲ್ಯದಲ್ಲಿಯೇ ವೈದಿಕ, ಜ್ಯೋತಿಷ್ಯ ಮತ್ತು ವೈದ್ಯಕೀಯ ಶಾಸ್ತ್ರವನ್ನು ಕೌಟಂಬಿಕ ಪರಿಸರದಲ್ಲಿ ಅಧ್ಯಯನ ಮಾಡಿದ್ದ ಶ್ರೀಗಳು ಶಿವಯೋಗಮಂದಿರದಲ್ಲಿ ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಕಾವ್ಯತೀರ್ಥ, ಕಾವ್ಯಮಾಧ್ಯಮ, ವ್ಯಾಕರಣಾದ್ಯ ಸೇರಿದಂತೆ ಹಲವು ಪದವಿಗಳನ್ನು ಹೊಂದಿರುವ ಶ್ರೀಗಳು ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಪರಿಣತರು.

ಅಧ್ಯಯನ ಮಾಡುತ್ತಿರುವಾಗಲೇ ಮುಂಡರಗಿ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಅವರು ನಂತರ ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯರತ್ನ, ವೇದಾಂತ ಶಾಸ್ತ್ರಿ ಇತ್ಯಾದಿ ಪದವಿಗಳನ್ನು ಪಡೆದಿದ್ದಾರೆ. ಹಿರಿಯ ಶ್ರೀಗಳು ಲಿಂಗೈಕ್ಯರಾದ ನಂತರ 1969ರಲ್ಲಿ ಮುಂಡರಗಿ ಸಂಸ್ಥಾನದ ಹತ್ತನೇ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು. ಮುಂಡರಗಿ ಮಠದ ಆಧಿಪತ್ಯವನ್ನು ವಹಿಸಿಕೊಂಡ ನಂತರ ಮೂವತ್ತಕ್ಕೂ ಹೆಚ್ಚು ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಉಚಿತ ಪ್ರಸಾದ ನಿಲಯಗಳ ಮೂಲಕ ಅನ್ನದಾನ ಪರಂಪರೆಯನ್ನು ವಿಸ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net