

‘‘2006ರ ನವೆಂಬರ್ 11ರ ಮಧ್ಯಾಹ್ನ 12.45ಕ್ಕೆ ನಾನು ಮತ್ತು ರಾಮನಾರಾಯಣ್ ವಾಶಿಯಲ್ಲಿರುವ ನಮ್ಮ ಸ್ನೇಹಿತ ಧೀರಜ್ ಮೆಹ್ತಾನ ಅಂಗಡಿಯಿಂದ ಹೊರಗೆ ಬಂದಾಗ ಕ್ವಾಲಿಸ್ ವಾಹನದಲ್ಲಿ ಬಂದಿದ್ದ ಕೆಲವರು ನಮ್ಮಿಬ್ಬರಿಗೂ ಅಡ್ಡ ಹಾಕಿದರು. ತಮ್ಮ ವಾಹನದಲ್ಲಿ ನಮ್ಮನ್ನು ಎತ್ತಿಹಾಕಿಕೊಂಡು ಭಾಂಡುಪ್ ಸಂಕೀರ್ಣಕ್ಕೆ ಕರೆತಂದರು. ಅವರು ಸಮವಸ್ತ್ರದಲ್ಲಿಲ್ಲದ ಪೊಲೀಸರೆಂದು ನಮಗೆ ಕೂಡಲೇ ತಿಳಿಯಿತು. ನಮ್ಮನ್ನು ಅಲ್ಲಿಂದ ಡಿ.ಎನ್. ನಗರ ಪೊಲೀಸ್ ಠಾಣೆಗೆ ಕರೆತಂದರು. ನನ್ನನ್ನು ಅಲ್ಲಿಯೇ ಇರಿಸಿ ರಾಮ್ಾರಾಯಣ್ನನ್ನು ಕಾರಿನಲ್ಲಿ ಎಲ್ಲಿಗೋ ಕರೆದುಕೊಂಡು ಹೋದರು. ನಾನು ಆ ರಾತ್ರಿ ಪೊಲೀಸ್ ಠಾಣೆಯಲ್ಲಿಯೇ ಕಳೆದೆ.
ಮಾರನೆಯ ಬೆಳಗ್ಗೆ ನನಗೆ ರಾಮ್ಾರಾಯಣ್ ಎನ್ಕೌಂಟರ್ನಲ್ಲಿ ಸತ್ತಿರುವುದಾಗಿ ತಿಳಿಯಿತು. ನನಗೂ ಅದೇ ಗತಿ ಬರಬಹುದೆಂದು ನಾನು ಭಯಭೀತನಾಗಿದ್ದೆ. ಆ ಸಂಜೆ ನನ್ನನ್ನು ಅದೇ ಪೊಲೀಸರು ವಾಶಿ ಪೊಲೀಸ್ ಠಾಣೆಗೆ ಕರೆತಂದರು. ನಾನು ಅಲ್ಲಿರುವ ವಿಷಯವನ್ನು ನನ್ನ ಪತ್ನಿ ಅರುಣಾಗೆ ತಿಳಿಸಿದರು. ಆಕೆ ಪೊಲೀಸ್ ಠಾಣೆಗೆ ಬಂದಳು. ನಾನು ಕಾಣೆಯಾಗಿದ್ದೇನೆಂದು ತಾನು ಕೊಟ್ಟ ಕಂಪ್ಲೇಂಟನ್ನು ವಾಪಸ್ ಪಡೆಯಲು ಪೊಲೀಸರು ಅವಳಿಗೆ ಹೇಳಿದ ಮೇರೆಗೆ ಆಕೆ ನಾನು ಮನೆಗೆ ಮರಳಿರುವುದಾಗಿ ಅವರಿಗೆ ಲಿಖಿತ ಹೇಳಿಕೆಯನ್ನು ನೀಡಿದಳು. ಆನಂತರ ನಮ್ಮಿಬ್ಬರನ್ನೂ ನಮ್ಮ ಮನೆಗೆ ಪೊಲೀಸರೇ ಖಾಸಗಿ ವಾಹನದಲ್ಲಿ ಕರೆತಂದರು. ಅಲ್ಲಿಂದ ನನ್ನನ್ನು ನನ್ನ ಪತ್ನಿ ಮತ್ತು ಮಗನ ಜತೆಗೆ ಭಟವಾಡಿ ಬಡಾವಣೆಯಲ್ಲಿರುವ ನನ್ನ ಪತ್ನಿಯ ತವರು ಮನೆಗೆ ಕರೆದುಕೊಂಡು ಬಂದರು. ಆ ರಾತ್ರಿ ನಮ್ಮಿಬ್ಬರನ್ನೂ ಅಲ್ಲಿಯೇ ಇರಲು ಹೇಳಿ ನಾವೂ ಎಲ್ಲೂ ಹೋಗದಂತೆ ನಮ್ಮ ಮನೆಯ ಹೊರಗೆ ಕಾವಲು ಕುಳಿತರು. ಮಾರನೆಯ ಬೆಳಗ್ಗೆ ಅದೇ ಪೊಲೀಸರು ನನ್ನನ್ನು ಡಿ.ಎನ್. ನಗರ ಪೊಲೀಸ್ ಠಾಣೆಗೆ ಕರೆದೊಯ್ದರು.
ರಾಮನಾರಾಯಣ್ ಜತೆ ನನ್ನನ್ನೂ ಅಪಹರಿಸಲಾಗಿತ್ತು ಎಂದು ನಾನು ಯಾರಿಗೂ ತಿಳಿಸದಿರಲು ನನಗೆ ಅಲ್ಲಿದ್ದ ಅಧಿಕಾರಿಗಳು ತಾಕೀತು ಮಾಡಿ, ಯಾರಿಗಾದರೂ ತಿಳಿಸಿದರೆ ನನ್ನನ್ನೂ ಎನ್ಕೌಂಟರ್ ಮಾಡಲಾಗುತ್ತದೆಂದು ಬೆದರಿಸಿದರು. ಅದೇ ಸಂಜೆ ನನ್ನನ್ನು ನನ್ನ ಪತ್ನಿ ಮತ್ತು ಪುತ್ರನ ಜತೆಗೆ ಕೊಲ್ಹಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಹೊಟೆಲ್ ಒಂದರಲ್ಲಿ ಇರಿಸಿದರು. ಮಾರನೆಯ ದಿನ ಸಾಂಗ್ಲಿಯ ನ್ಯಾಯಾಲಯದಲ್ಲಿ ನನ್ನ ವಿರುದ್ಧ ವಿಚಾರಣೆಯೊಂದು ನಡೆಯುತ್ತಿದ್ದ ಕಾರಣ ನನ್ನನ್ನು ಅಲ್ಲಿಗೆ ಕರೆದೊಯ್ದರು. ವಿಚಾರಣೆಯ ನಂತರ ನನ್ನನ್ನು ಕೊಲ್ಹಾಪುರದ ಹೊಟೆಲ್ಗೆ ಕರೆತಂದರು. ಮುಂದಿನ ಸುಮಾರು 5 ದಿನ ನಾವು ಅಲ್ಲೇ ತಂಗಿದ್ದೆವು. ಆನಂತರ ನಾವೆಲ್ಲರೂ ಬಸ್ಸಿನಲ್ಲಿ ಮುಂಬೈಗೆ ಮರಳಿದೆವು.
ಮಾರನೆಯ ದಿನ ಮತ್ತೆ ನನ್ನನ್ನು ಡಿ.ಎನ್. ನಗರ ಪೊಲೀಸ್ ಠಾಣೆಗೆ ಬರಹೇಳಿ ರಾಮನಾರಾಯಣ್ ಅಪಹರಣದ ಬಗ್ಗೆ ಬಾಯಿಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಪೊಲೀಸರು ಬೆದರಿಕೆ ಹಾಕಿದರು. ನಾನು ವಾಸಿಸುತ್ತಿರುವ ಮನೆಯನ್ನು ಬಿಟ್ಟು ಬೇರೆ ಬಡಾವಣೆಯಲ್ಲಿ ವಾಸಿಸಲು ಅವರು ಸೂಚಿಸಿದಂತೆ ನಾನು ವಾಶಿಯಲ್ಲಿನ ನನ್ನ ಮನೆ ಖಾಲಿ ಮಾಡಿ ಬೇರೊಂದು ಮನೆಯಲ್ಲಿ ವಾಸಿಸುತ್ತಿರುವೆ.’
ಈ ಹೇಳಿಕೆಯ ಮೇರೆಗೆ ತನಿಖಾ ದಳವು ಭೇಡಾನನ್ನು ಅಪಹರಿಸಿದ್ದ ಮತ್ತು ಕೊಲ್ಹಾಪುರಕ್ಕೆ ಕರೆದೊಯ್ದಿದ್ದ ಪೊಲೀಸರನ್ನು ಪತ್ತೆ ಮಾಡಿ ಅವರೆಲ್ಲರನ್ನೂ ಅನಿಲ್ ಭೇಡಾ ಮತ್ತವನ ಪತ್ನಿಯ ಮುಂದೆ ಹಾಜರುಪಡಿಸಿದರು. ಅವರಲ್ಲಿ ಹಲವಾರು ಪೊಲೀಸರನ್ನು ಇಬ್ಬರೂ ಗುರುತಿಸಿದರು. ಮುಂದೆ ಭೇಡಾನನ್ನು ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ಹಾಜರುಪಡಿಸಿದರು. ಅವನ ಹೇಳಿಕೆಯನ್ನು ಕಲಂ 164ರ ಅಡಿ ನ್ಯಾಯಾಧೀಶರು ದಾಖಲಿಸಿಕೊಂಡರು.
ವಿಶೇಷ ತನಿಖಾ ದಳವು ರಾಮನಾರಾಯಣ್ನ ಎನ್ಕೌಂಟರ್ನಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ಪತ್ತೆ ಮಾಡಿ ಅವರೆಲ್ಲರ ಕೂಲಂಕಷ ವಿಚಾರಣೆಯನ್ನು ನಡೆಸಿತು. ಆಗ ತಿಳಿದುಬಂದದ್ದೇನೆಂದರೆ ಮುಂಬೈ ನಗರದಲ್ಲಿ ಚುರುಕಾಗಿದ್ದ ಕುಖ್ಯಾತ ರೌಡಿಗಳು, ಕೊಲೆಗಾರರು, ಭೂಗತ ಪಾತಕಿಗಳು, ಬ್ಲ್ಯಾಕ್ವೆುೕಲರ್ಗಳು ಮುಂತಾದವರನ್ನು ಎನ್ಕೌಂಟರ್ಗಳಲ್ಲಿ ಕೊಲ್ಲಬೇಕೆಂದು ನಿರ್ಧರಿಸಲಾಗಿತ್ತು. ಈ ಮೇರೆಗೆ ಕೆಲವು ತಂಡಗಳನ್ನು ನೇಮಿಸಲಾಗಿತ್ತು. ಮುಂಬೈನ ಪಶ್ಚಿಮ ವಿಭಾಗಕ್ಕೆ ಇನ್ಸ್ಪೆಕ್ಟರ್ ಪ್ರದೀಪ್ ಶರ್ಮ ನೇತೃತ್ವದಲ್ಲಿ ಇಂತಹ ವಿಶೇಷ ಸ್ಕಾ್ವಡ್ ಒಂದನ್ನು 2006ರ ಆದಿಭಾಗದಲ್ಲಿ ರಚಿಸಲಾಗಿತ್ತು. ಈ ತಂಡದಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿದ್ದದ್ದಲ್ಲದೆ ಕೆಲವು ಖಾಸಗಿ ವ್ಯಕ್ತಿಗಳೂ ಇದ್ದರು. ಅತಿ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ತಂಡವು ಮುಂಬೈನ ಡಿ.ಎನ್. ನಗರ ಪೊಲೀಸ್ ಠಾಣೆಯ ಒಂದು ಕೋಣೆಯಲ್ಲಿ ತನ್ನ ಕಚೇರಿಯನ್ನು ಹೊಂದಿತ್ತು. ಈ ತಂಡದ ಸದಸ್ಯರು ಯೂನಿಫಾಮ್ರ್ ಧರಿಸದೆ ಖಾಸಗಿ ವಾಹನಗಳಲ್ಲಿ ಓಡಾಡುತ್ತಿದ್ದರು. ಇತರ ಪೊಲೀಸರಿಗೆ ಈ ತಂಡದ ಯಾವ ಚಟುವಟಿಕೆಯ ಬಗ್ಗೆಯೂ ಮಾಹಿತಿ ಇರಲಿಲ್ಲ. ಈ ತಂಡವು ಮುಂಬೈನಲ್ಲಿ ಈಗಾಗಲೇ ಹಲವು ಎನ್ಕೌಂಟರ್ಗಳನ್ನು ಮಾಡಿತ್ತು.
ಮುಂಬೈನಲ್ಲಿಯೇ ಹತ್ತಕ್ಕೂ ಹೆಚ್ಚು ಗುರುತರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಾಮ್ಾರಾಯಣ್ನನ್ನು ಎನ್ಕೌಂಟರ್ನಲ್ಲಿ ಕೊಲ್ಲಬೇಕೆಂದು ತೀರ್ವನಿಸಿದ ಈ ವಿಶೇಷ ಸ್ಕಾ್ವಡ್ ಆತನ ಚಲನವಲನಗಳ ಬಗ್ಗೆ ನಿಗಾ ಇಟ್ಟಿತ್ತು. 2006ರ ನವೆಂಬರ್ 10ರಿಂದಲೇ ಅವನಿಗಾಗಿ ಹೊಂಚು ಹಾಕಿ ಕಾಯುತ್ತಿದ್ದ ಸ್ಕಾ್ವಡ್ನ ಪೊಲೀಸರು ಮಾರನೆಯ ದಿನ ಆತನನ್ನು ಆತನ ಗೆಳೆಯ ಅನಿಲ್ ಭೇಡಾನೊಡನೆ ಅಪಹರಣ ಮಾಡಿದರು. ಅಪಹರಣಕ್ಕಾಗಿ ಖಾಸಗಿ ಕ್ವಾಲಿಸ್ ವಾಹನವನ್ನು ಬಾಡಿಗೆ ಪಡೆದಿದ್ದರೆಂದೂ ಅಪಹರಣಕಾರರಲ್ಲಿ ಇಬ್ಬರು ನಾಗರಿಕರೂ ಇದ್ದರೆಂದು ಮುಂದಿನ ತನಿಖೆಯಲ್ಲಿ ತಿಳಿದುಬಂದಿತು. ನಾನಾ ನಾನಿ ರ್ಪಾನಲ್ಲಿ ಎನ್ಕೌಂಟರ್ ನಡೆಯಿತೆನ್ನಲಾದ ಜಾಗದ ಬಗ್ಗೆ ವಿಸõತ ವೈಜ್ಞಾನಿಕ ತನಿಖೆಯನ್ನು ಪ್ರಸನ್ನರ ತಂಡವು ನಡೆಸಿತು. ಎನ್ಕೌಂಟರ್ ನಂತರ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್ ಸೂರ್ಯವಂಶಿ ಮಾಡಿದ್ದ ಪಂಚನಾಮೆಯ ಒಂದೊಂದು ವಾಕ್ಯವನ್ನೂ ಕೂಲಂಕಷವಾಗಿ ಪರಿಶೀಲಿಸಿತು. ಪಂಚನಾಮೆಯಲ್ಲಿ ಸೂರ್ಯವಂಶಿ ಹೇಳಿರುವ ರೀತಿಯಲ್ಲಿ ರಾಮ್ಾರಾಯಣ್ನ ಮೇಲೆ ಗುಂಡುಗಳನ್ನು ಹಾರಿಸಿದ್ದರೆ ಆತನ ದೇಹಕ್ಕೆ ಬಿದ್ದ ಗುಂಡುಗಳ ಕೋನವೇ ಬೇರೆಯಾಗುತ್ತಿತ್ತು ಹಾಗೂ ಆ ಬಗೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದರೆ ಪೊಲೀಸರು ಹಾರಿಸಿದ ಗುಂಡುಗಳು ಪೊಲೀಸರಿಗೇ ಬೀಳುತ್ತಿದ್ದವು ಎಂದು ಎತ್ತಿ ತೋರಿಸಿತು. ರಾಮ್ಾರಾಯಣ್ ದೇಹಕ್ಕೆ ಬಿದ್ದ ಗುಂಡು ಬೇರೆಯೇ ದಿಕ್ಕಿನಿಂದ ಬಂದಿತ್ತು. ಸಾವು ನಡೆದ ಸ್ಥಳದಲ್ಲಿ ಸಿಕ್ಕ ರಕ್ತದ ಕಲೆಗಳ ಪ್ರಮಾಣವನ್ನು ಗಮನಿಸಿದರೆ ನಾನಾ ನಾನಿ ರ್ಪಾನಲ್ಲಿ ರಾಮ್ಾರಾಯಣ್ನ ಸಾವು ಆಗಿಯೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಪ್ರಸನ್ನರ ತಂಡ ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ನಾನಾ ನಾನಿ ರ್ಪಾನ ಬಳಿ ತರಲಾಯಿತೆಂದು ಸಾಬೀತು ಮಾಡಿತು. ಆದರೆ ಕೊಲೆ ನಡೆದು ಹಲವಾರು ವರ್ಷಗಳಾಗಿದ್ದರಿಂದ ಎಲ್ಲಿ ಕೊಲೆ ನಡೆಯಿತೆಂದು ತನಿಖಾಧಿಕಾರಿಗೆ ಸಾಬೀತುಪಡಿಸಲಾಗಲಿಲ್ಲ.
ಮೃತನ ದೇಹಕ್ಕೆ ಹೊಕ್ಕ ಬುಲೆಟ್ ಪಶ್ಚಿಮ ವಲಯದ ವಿಶೇಷ ಸ್ಕಾ್ವಡ್ ತಂಡದ ಮುಖ್ಯಸ್ಥ ಎನ್ಕೌಂಟರ್ ಸ್ಪೆಷಲಿಸ್ಟ್ ಇನ್ಸ್ಪೆಕ್ಟರ್ ಪ್ರದೀಪ್ ಶರ್ಮಗೆ ಕೊಟ್ಟಿದ್ದ ಅಧಿಕೃತ ರಿವಾಲ್ವರಿನಿಂದಲೇ ಹೊರಬಂದಿತ್ತೆಂದು ಸಾಬೀತು ಮಾಡಿದ ಪ್ರಸನ್ನರ ತಂಡ ಆತನನ್ನೇ ಕೊಲೆಯ ಮುಖ್ಯ ಆರೋಪಿಯನ್ನಾಗಿ ಗುರುತಿಸಿತು. ಈ ಪ್ರಕರಣವು ನಕಲಿಯಲ್ಲ ಎಂದು ಸಾಬೀತು ಮಾಡಲು ಶರ್ಮನ ಸ್ಕಾ್ವಡ್ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾಗಿ ಹೊರಗೆಡವಿದ ತನಿಖಾ ತಂಡವು 13 ಪೊಲೀಸ್ ಅಧಿಕಾರಿಗಳು ಮತ್ತು 9 ಖಾಸಗಿ ವ್ಯಕ್ತಿಗಳ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿತು.
ಈ ಪ್ರಕರಣವು ನ್ಯಾಯಾಲಯದಲ್ಲಿ 2011ರ ಮಾರ್ಚ್ 8ರಂದು ವಿಚಾರಣೆಗೆ ಬಂತು. ಪ್ರಮುಖ ಸಾಕ್ಷಿ ಅನಿಲ್ ಭೇಡಾನ ಸಾಕ್ಷ್ಯ ಮಾರ್ಚ್ 16ಕ್ಕೆ ನಿಗದಿಯಾಗಿತ್ತು. ಮಾರ್ಚ್ 12ರಂದು ತನ್ನ ಮನೆಯಿಂದ ಹೊರಗೆ ಹೋಗಿದ್ದ ಭೇಡಾ ಮನೆಗೆ ಮರಳಲೇ ಇಲ್ಲ. ಅರುಣಾ ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದಳು. ಮಾರ್ಚ್ 13ರಂದು ಮುಂಬೈ ಹೊರವಲಯದ ಮಾನೋರ್ನಲ್ಲಿ ಒಂದು ಸುಟ್ಟ ದೇಹ ಪತ್ತೆಯಾಯಿತು. ಅದು ನಾಪತ್ತೆಯಾಗಿದ್ದ ಭೇಡಾದಿರಬಹುದೆಂದು ಡಿಎನ್ಎ ಪರೀಕ್ಷೆಯನ್ನು ಮಾಡಿದಾಗ ಅದು ಭೇಡಾನದೇ ಎಂದು ಸಾಬೀತಾಯಿತು. ತಮ್ಮ ವಿರುದ್ಧ ಕೋರ್ಟಿನಲ್ಲಿ ಸಾಕ್ಷ್ಯ ನೀಡದಿರಲೆಂದು ರಾಮ್ಾರಾಯಣ್ ಪ್ರಕರಣದ ಆರೋಪಿಗಳೇ ಅವನನ್ನು ಕೊಲ್ಲಿಸಿರಬಹುದು ಎನ್ನುವ ಸಂಶಯ ವ್ಯಕ್ತವಾಯಿತು. ಈ ಸಾವಿನ ಬಗ್ಗೆಯೂ ಪ್ರಸನ್ನರ ಟೀಂ ತನಿಖೆ ನಡೆಸಿದರೂ ಯಾವ ಸುಳಿವೂ ಸಿಗಲಿಲ್ಲ.
ಭೇಡಾನ ಸಾಕ್ಷ್ಯವಿಲ್ಲದೇ ಹೋದರೂ ಸೆಷನ್ಸ್ ನ್ಯಾಯಾಲಯವು ಪ್ರದೀಪ್ ಶರ್ಮನನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ವನಿಸಿ 2013ರ ಜುಲೈನಲ್ಲಿ ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಈ ತೀರ್ಪಿನ ವಿರುದ್ಧ ಎಲ್ಲ ಅರೋಪಿಗಳೂ ಮತ್ತು ಸರ್ಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ತಾನು ಅಲ್ಲಿಯವರೆಗೆ ನಡೆಸಿದ್ದ ನೂರಕ್ಕೂ ಹೆಚ್ಚು ಎನ್ಕೌಂಟರ್ಗಳಲ್ಲಿ ಬಚಾವಾದಂತೆ ಈ ಪ್ರಕರಣದಲ್ಲಿಯೂ ತನಗೇನೂ ಆಗಲಿಲ್ಲವೆಂದು ಶರ್ಮ ಹರ್ಷದಿಂದಿದ್ದ.
ರಾಮ್ಾರಾಯಣ್ ಎನ್ಕೌಂಟರ್ ಪ್ರಕರಣದ ಎಲ್ಲ ಅಪೀಲುಗಳನ್ನೂ ಒಟ್ಟಾಗಿ 2024ರ ಮಾರ್ಚ್ 19ರಂದು ತೀರ್ವನಿಸಿದ ಮುಂಬೈ ಹೈಕೋರ್ಟ್ ಇದೊಂದು ಹೇಯ ಕೃತ್ಯವೆಂದು ಬಣ್ಣಿಸಿ ಪ್ರದೀಪ್ ಶರ್ಮನನ್ನೂ ಸೇರಿಸಿ ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಇದರ ವಿರುದ್ಧ ಶರ್ಮ ಮತ್ತಿತರರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಶರ್ಮನಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ಕಡೆಗೂ ಶರ್ಮನಿಗಿದ್ದ ಅದೃಷ್ಟ ಈ ಪ್ರಕರಣದಲ್ಲಿ ಕೈಕೊಟ್ಟಿತು. ಹೀಗಾಗಿಯೇ ಡಿ.ವಿ.ಜಿ.ಯವರು ಹೇಳಿದ್ದಾರೆ: ವಿಧಿಗೆ ನೀ ಕಾರ್ಯನಕ್ಷೆಯ ವಿಧಿಸ ಹೊರಡದಿರು, ಅಧಿಕಾರಿ ನೀನಲ್ಲ ವಿಧಿ ಬೆಪ್ಪನಲ್ಲ; ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು ಅದಟದಿರು ನೀನವನ, ಮಂಕುತಿಮ್ಮ.
(ಮುಂದುವರೆಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)