ಸಂಸ್ಕೃತ ಕಲಿಕೆಯ ಸೊಗಸು, ಸಂಭ್ರಮ

Sanskrit
Published on
ಹೊಸದೇನನ್ನಾದರೂ ಕಲಿಯುವುದರಲ್ಲಿ ಇರುವ ಸೊಗಸನ್ನು ಅರಿಯಬೇಕಾದರೆ ವಿದ್ಯಾರ್ಥಿಗಳಾಗಿ ಬಿಡಬೇಕು. ಆದರೆ ವಿದ್ಯಾರ್ಥಿಗಳೋ ನೌಕರಿ ಹಿಡಿಯಲು ಬೇಕಾದ ಶಿಕ್ಷಣವನ್ನು ಸವಿಯುವ ಸ್ಥಿತಿಯಲ್ಲಿರುವುದಿಲ್ಲ. ಆದರೂ ಕ್ವಚಿತ್ತಾಗಿ ಬೇರೆಬೇರೆ ವೃತ್ತಿಯಲ್ಲಿ ಇರುವವರು ತಮ್ಮ ಇಷ್ಟದ ವಿದ್ಯೆಗಳನ್ನು ಕಷ್ಟಪಟ್ಟಾದರೂ ಕಲಿಯುವುದನ್ನು ಅಲ್ಲಲ್ಲಿ ನೋಡಿರುತ್ತೇವೆ. ಕೊಳಲು ಬಾರಿಸುವ ಡಾಕ್ಟರು, ಭರತನಾಟ್ಯ ಮಾಡುವ ಇಂಜಿನಿಯರು ಹೀಗೆ ವೃತ್ತಿಗೂ ಪ್ರವೃತ್ತಿಗೂ ತಾಳೆ ಇಲ್ಲದಂಥ ಸುಂದರ ಸಂಬಂಧವನ್ನು ಈ ಕಲಿಯುವಿಕೆ ಸ್ಥಾಪಿಸಬಲ್ಲುದು.

ನಾನು ಕಳೆದ ಮೂವತ್ತೆರಡು ವರ್ಷಗಳಿಂದ ಕಾಲೇಜು ಮಕ್ಕಳಿಗೆ ಅರ್ಥಶಾಸ್ತ್ರವನ್ನು ಬೋಧಿಸುತ್ತ ಬಂದೆ. ಡಿಗ್ರಿಯ ಮೊದಲ ವರ್ಷದಲ್ಲಿ ‘ಆಡಂ ಸ್ಮಿತ್ ಈಸ್ ದ ಫಾದರ್ ಆಫ್ ಎಕಾನಮಿಕ್ಸ್’ ಎಂದು ಪ್ರಾರಂಭಿಸಿ ಅಂತಿಮ ವರ್ಷದಲ್ಲಿ ‘ಇಂಡಿಯನ್ ಎಕಾನಾಮಿಕ್ ಥಾಟ್’ ಕಲಿಸುವಾಗ ಅರ್ಥಶಾಸ್ತ್ರದ ಪಿತಾಮಹ ಕೌಟಿಲ್ಯನ ಅರ್ಥಶಾಸ್ತ್ರವನ್ನು ಇಂಗ್ಲಿಷಿನಲ್ಲಿ ಬೋಧಿಸುವಾಗೆಲ್ಲ ನೀತಿಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮನಶ್ಶಾಸ್ತ್ರ...ಗಳನ್ನೆಲ್ಲ ಹೇಗೆ ಸೊಗಸಾಗಿ ಮಿಳಿತವಾಗುವಂತೆ ಬರೆದಿದ್ದಾನೆ ಈ ಪುಣ್ಯಾತ್ಮ, ಈ ಕೃತಿಯನ್ನು ಮೂಲ ಸಂಸ್ಕೃತದಲ್ಲಿಯೇ ಓದಿ ಸವಿಯುವ ಹಾಗಿದ್ದಿದ್ದರೆ ಎಂದು ಅದೆಷ್ಟು ಬಾರಿ ಅಂದುಕೊಂಡಿದ್ದೆನೋ. ನಿವೃತ್ತಿಯಾಗುವವರೆಗೂ ಅದು ಸಾಧ್ಯವಾಗಲಿಲ್ಲ.

ಈ ನಡುವೆ ನಮ್ಮ ನೆರೆಕೆರೆಯ ಓರ್ವ ಸಜ್ಜನ ಕುಟುಂಬದಲ್ಲಿ ಜನಿಸಿದ ಒಂದು ಗಂಡುಮಗು ದೈಹಿಕ ಹಾಗೂ ಮಾನಸಿಕ ವಿಕಲತೆ ಇಲ್ಲದಿದ್ದರೂ ತನ್ನ ಅತೀವ ತೊದಲುವಿಕೆಯಿಂದಾಗಿ ವಿಪರೀತ ಬಾಧೆ ಪಡುತ್ತಿತ್ತು. ಅವನ ಸಮವಯಸ್ಕ ಮಕ್ಕಳು ‘ಉಗ್ಗಪ್ಪ’ ಎಂದೆಲ್ಲ ತಮಾಷೆ ಮಾಡುವುದನ್ನು ನೋಡಿ ಅವನ ತಾಯಿ ಕಣ್ಣೀರಿಡುತ್ತಿದ್ದರು. ‘ಈ ಮಗು ಜನಿಸಿದ ಮೇಲೆ ನಮ್ಮ ಮನೆಯ ಮನಃಶಾಂತಿಯೇ ಕದಡಿ ಹೋಗಿದೆ ಮೇಡಂ’ ಎಂದವಳಿಗೆ ಸಮಾಧಾನ ಹೇಳುವುದು ಹೇಗೆಂದು ತಿಳಿಯದೆ ಪ್ರಸಿದ್ಧ ಮನಃಶಾಸ್ತ್ರಜ್ಞರಲ್ಲಿ ಅವಳನ್ನು ಕರೆದೊಯ್ದೆ. ಕಲಿಕೆಯಲ್ಲಿ ಹಿಂದಿಲ್ಲ, ದೈಹಿಕ ನ್ಯೂನತೆಗಳಿಲ್ಲ ಮಾತು ಮಾತ್ರ ತೊದಲುತ್ತದೆ ಎಂಬುದನ್ನೆಲ್ಲ ಕೇಳಿಸಿಕೊಂಡ ಆ ಹಿರಿಯ ಮನಃಶಾಸ್ತ್ರಜ್ಞರು, ‘ನಿಮ್ಮ ಸುತ್ತಮುತ್ತ ಯಾವುದಾದರೂ ಸಂಸ್ಕೃತ ಪಾಠಶಾಲೆ ಇದ್ದರೆ ಈ ಮಗುವನ್ನು ಅಲ್ಲಿ ಸೇರಿಸಿ. ಆತ ಸರಾಗವಾಗಿ ಸಂಸ್ಕೃತ ಕಲಿತು ರಾಗವಾಗಿ ಶ್ಲೋಕಗಳನ್ನು ಹೇಳತೊಡಗಿದ ಮೇಲೆ ನೀವು ಪವಾಡವನ್ನು ಕಾಣುತ್ತೀರಿ. ಎರಡು ವರ್ಷದ ಬಳಿಕ ಬಂದು ನನ್ನನ್ನು ಭೇಟಿಯಾಗಿ’ ಎಂದು ಧೈರ್ಯ ತುಂಬಿ ಕಳಿಸಿದ್ದರು. ಮೂರನೆಯ ವರ್ಷ ನಾನು ಆ ಮಗುವನ್ನು ನೋಡಿದಾಗ ನಂಬಲಾಗಲಿಲ್ಲ. ಉಗ್ಗುವಿಕೆ ಮಾಯವಾಗಿದ್ದೊಂದೇ ಅಲ್ಲ, ಮುಖದಲ್ಲಿ ಒಂದು ಬಗೆಯ ಆತ್ಮವಿಶ್ವಾಸ! ತಾಯಿಯ ಮುಖದಲ್ಲಿ ನಿರಾಳತೆ ಕಂಡು ಮನಃಶಾಸ್ತ್ರಜ್ಞರನ್ನು ಪುನಃ ಹೋಗಿ ಭೇಟಿಯಾಗಿ ಸಿಹಿ ಕೊಟ್ಟು ಬಂದೆವು.

ಈ ಬಾರಿ ಮನಃಶಾಸ್ತ್ರಜ್ಞರಲ್ಲಿ ಹೋದಾಗ ನಾನೇ ಅಧೈರ್ಯದಿಂದ ಆತಂಕಿತಳಾಗಿದ್ದೆ. ಕಾರಣ ಮತ್ತೇನಲ್ಲ ಜಗತ್ತನ್ನು ನಡುಗಿಸಿರುವ ಕರೊನಾಸುರ ನಮ್ಮ ಅಪಾರ್ಟ್​ವೆುಂಟಿನ ಕೆಳಗಡೆಯ ಮನೆಯಲ್ಲಿಯೇ ಎಂಟ್ರಿ ತೆಗೆದುಕೊಂಡು ಆ ಮನೆಯ ಅಜ್ಜಿಯನ್ನು ಬಲಿ ತೆಗೆದುಕೊಂಡಿದ್ದ. ಹಗಲು-ರಾತ್ರಿ ತೀರಾ ನಮ್ಮ ಪಾದದ ಕೆಳಗೇ ಹೋಮ್​ಸೋಲೆಶನ್ ಪಾಸಿಟಿವ್ ಕೇಸುಗಳು ಕೆಮ್ಮುತ್ತ ಓಡಾಡಿಕೊಂಡಿವೆ ಎಂದರೆ ಮೇಲಿರುವವರು ಎಂಟೆದೆ ಬಂಟರಾದರೂ ನಡುಗದಿದ್ದಾರೆಯೆ? ‘ನನಗೆ ನಿದ್ದೆ ಬರುತ್ತಿಲ್ಲ. ಕರೊನಾ ಭಯ ಗೆಲ್ಲಲು ಏನಾದರೂ ಮಾರ್ಗ ಸೂಚಿಸಿ ಡಾಕ್ಟ್ರೆ’ ಎಂದೆ. ಪಕ್ಕದ ಮನೆಯ ಮಗುವಿನ ಬೆನ್ನು ಸವರುತ್ತ ‘ಈ ಮಗು ಮಾಡಿದ್ದನ್ನೇ ನೀವೂ ಮಾಡಿ ನೋಡಿ’ ಎಂದು ನಕ್ಕರು, ನನ್ನ ವೈದ್ಯಮಿತ್ರರು.

ನನ್ನ ಸಂಸ್ಕೃತ ಕಲಿಕೆಯ ಅಪೇಕ್ಷೆಗೆ ಕಾಲ ಕೂಡಿ ಬಂದಿದೆ ಎನ್ನಿಸಿಬಿಟ್ಟಿತು. ನನ್ನ ಕಿರಿಯ ಸಹೋದ್ಯೋಗಿ ಸಂಸ್ಕೃತ ಪ್ರಾಧ್ಯಾಪಿಕೆ ಮಂಗಳೂರಿನಲ್ಲಿ ಇದ್ದುಕೊಂಡೇ ದೇಶ-ವಿದೇಶದ ಅನೇಕರಿಗೆ ಸಂಸ್ಕೃತ ಕಲಿಸುವ ಗುರು ಡಾ.ಶಾಂತಲಾ ವಿಶ್ವಾಸ್ ಅವರಿಗೆ ಫೋನ್ ಹಚ್ಚಿದೆ. ‘ಫೋನ್ ಮಾಡಿದ್ದು ಒಳ್ಳೆಯದಾಯಿತು ಮೇಡಂ, ನಿನ್ನೆಯಿಂದಷ್ಟೆ ನಮ್ಮ ಆನ್​ಲೈನ್ ತರಗತಿಗಳು ಪ್ರಾರಂಭವಾಗಿವೆ. ಸಂಸ್ಕೃತ ಸಂಭಾಷಣಾ ವರ್ಗಕ್ಕೆ ಇಂದಿನಿಂದಲೇ ಸೇರಿಕೊಂಡುಬಿಡಿ’ ಎಂದರು. ಮುಸ್ಸಂಜೆಯ ಹೊತ್ತಿನಲ್ಲಿ ಚುರುಕಾಗಿ ಕ್ಲಾಸಿಗೆ ಹೋಗುವಂತೆ ಸಿದ್ಧತೆ ನಡೆಸಿಕೊಂಡು ಲ್ಯಾಪ್ಟಾಪ್ ಮುಂದೆ ಪ್ರತಿಷ್ಠಿತಳಾಗತೊಡಗಿದೆ. ಬಾಲಿಶ ಉತ್ಸಾಹದಲ್ಲಿ ಪಾಠಗಳನ್ನು ಕಲಿಯ ತೊಡಗುವುದೇ ಒಂದು ಅದ್ಭುತ ಖುಷಿ.

ಮೂರ್ನಾಲ್ಕು ದಿನಗಳಲ್ಲಿಯೇ ಸಹಪಾಠಿಗಳ ಪರಿಚಯವಾಗತೊಡಗಿತು. ನಿವೃತ್ತರು, ವಿದ್ಯಾರ್ಥಿಗಳು, ವೈದ್ಯರು, ಪಂಜಾಬಿನ ಬಲ್ವಿಂದರ್ ಸಿಂಗ್, ಬಾಂಗ್ಲಾದೇಶದ ಪ್ರಾಮಾಣಿಕ್ ಎಂಬ ಬಾಂಗ್ಲಾ ಉಚ್ಚಾರಣೆಯ ಉತ್ಸಾಹಿ, ಪೈಲೆಟ್ ಆಗಿರುವ ಯುವಕ ಮಧುಜಿ, ಜರ್ಮನಿ, ಅಮೆರಿಕ, ನೆದರ್ಲ್ಯಾಂಡ್​ನಲ್ಲಿ ನೆಲೆಸಿರುವ ಭರತನಾಟ್ಯ ಪ್ರವೀಣೆಯರು, ವೈದ್ಯೆಯರು... ನಿತ್ಯವೂ ಸಂಜೆ ಏಳರಿಂದ ಎಂಟುವರೆಯ ತನಕ ನಡೆಯುವ ತರಗತಿಗಳಿಗೆ ಅರ್ಧ ಗಂಟೆ ಮೊದಲೇ ಬಂದು ಕೂಡುವ ಉತ್ಸಾಹಿ ‘ಛಾತ್ರ’ಗಳು. ಸಂಭಾಷಣೆ ವರ್ಗ ನಡೆಯುತ್ತಲೇ ಇದ್ದಂತೆಯೇ ಕೆಳಗಿನ ಮನೆಯ ಸೀಲ್​ಡೌನ್ ಮುಗಿದು ಓಪನ್ ಆಗಿದ್ದು ಸಹ ನನಗೆ ಗೊತ್ತಾಗಲೇ ಇಲ್ಲ. ಇದನ್ನೂ ಓದಿ: 

ಮಂಗಳೂರಿನಲ್ಲಿ ನೆಲೆಸಿರುವ ಸಂಸ್ಕೃತ ಭಾರತಿಯ ಅಖಿಲ ಭಾರತ ಶಿಕ್ಷಣ ಪ್ರಮುಖರಾಗಿರುವ ಡಾ. ವಿಶ್ವಾಸ್ ಹಾಗೂ ಅವರ ಪತ್ನಿ ಸಂಸ್ಕೃತ ಪ್ರಾಧ್ಯಾಪಿಕೆ ಡಾ.ಶಾಂತಲಾ ಸಂಸ್ಕೃತ ಕಲಿಸುವ ಕಾಯಕವನ್ನು ಪ್ರೀತಿ, ಶ್ರದ್ಧೆಗಳಿಂದ ಮಾಡುತ್ತಿರುವ ಪರಿಣಾಮ ಅನೇಕರಿಗೆ ಅದರ ಪ್ರಯೋಜನ ಸಿಗುತ್ತಿದೆ. ವಿದ್ವತ್ಪೂರ್ಣವಾದ ಅನೇಕ ಕೃತಿಗಳನ್ನು ಹೊರ ತಂದಿರುವುದಲ್ಲದೇ ದೇಶ-ವಿದೇಶಗಳ ಅನೇಕ ಸಂಸ್ಕೃತ ಅಭ್ಯಾಸಿಗಳಿಗೆ ನೆರವು ನೀಡುತ್ತಿರುವ ಈ ಸಂಸ್ಕೃತ ಕುಟುಂಬ ಅಗತ್ಯವಿರುವ ಎಲ್ಲ ಕಲಿಕಾ ಸಾಮಗ್ರಿಗಳಲ್ಲದೆ ಜನಾರ್ದನ ಹೆಗಡೆ ಬರೆದಿರುವ ‘ಸಂಸ್ಕೃತ ಮಾಹಿತಿ ಸಂಗ್ರಹ’ ಎಂಬ ಉಪಯುಕ್ತ ಪ್ರಕಟಣೆಯೊಂದನ್ನು ನನಗೆ ಕಳಿಸಿಕೊಟ್ಟರು ಸಂಸ್ಕೃತದ ಕುರಿತಾಗಿ ಪ್ರೀತಿ ಇರುವ ಎಲ್ಲರಿಗೂ ಆಪ್ತವಾಗುವ ಕೃತಿ ಇದು.

ಕೌಟಿಲ್ಯನ ಅರ್ಥಶಾಸ್ತ್ರವನ್ನು ಪ್ರಥಮ ಬಾರಿಗೆ ತಾಳೆಗರಿಯ ರೂಪದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ರುದ್ರಪಟ್ಟಣ ಶಾಮಶಾಸ್ತ್ರಿ ಎಂಬ ವಿದ್ವಾಂಸರು. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ಗ್ರಂಥಪಾಲಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಶ್ಯಾಮ ಶಾಸ್ತ್ರಿ ಸಂಸ್ಕೃತ ಸಾಗರದ ಅಮೂಲ್ಯ ರತ್ನದಂತಿರುವ ಅರ್ಥಶಾಸ್ತ್ರವನ್ನು ಜಗತ್ತಿನೆದುರಿಗೆ ಸಾದರಪಡಿಸಿ ವಿದ್ವಾನ್ ಲೋಕದಲ್ಲಿ ಎಲ್ಲಿಲ್ಲದ ಮಾನ್ಯತೆ ಪಡೆದರು. ವಿದೇಶೀ ಹಾಗೂ ಭಾರತೀಯ ವಿದ್ವಾಂಸರು, ರವೀಂದ್ರನಾಥ ಟ್ಯಾಗೋರ್, ಗಾಂಧಿಯಂಥವರೂ ಶಾಮ ಶಾಸ್ತ್ರಿಗಳ ಪ್ರಯಾಸವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ವಾಷಿಂಗ್ಟನ್ ವಿಶ್ವವಿದ್ಯಾಲಯ, ಕೊಲ್ಕತ್ತ ವಿಶ್ವವಿದ್ಯಾಲಯ ಮುಂತಾದವು ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದವು. ಭಾರತ ಸರ್ಕಾರ ಮಹಾಮಹೋಪಾಧ್ಯಾಯ ಪದವಿ ನೀಡಿದ್ದು, ಮೈಸೂರು ಮಹಾರಾಜರು ‘ಅರ್ಥಶಾಸ್ತ್ರ ವಿಶಾರದ’ ಎಂಬ ಬಿರುದನ್ನು ನೀಡಿದ್ದರು.

ನಮ್ಮ ತರಗತಿಗಳು ಕಲಿಕೆಯ ಕ್ರಮಬದ್ಧತೆಯಂತೆ ಸಂಭಾಷಣೆಯ ಮಟ್ಟಕ್ಕೆ ಬಂದು ತಲುಪುವಷ್ಟರಲ್ಲಿ ಎಲ್ಲರಲ್ಲೂ ವಿದ್ಯಾರ್ಥಿಗಳ ಹುರುಪು ತುಂಬಿಕೊಂಡಿದ್ದನ್ನು ಕಂಡ ನಮ್ಮ ಗುರು ಶಾಂತಲಾ ಅವರು ಒಂದು ಕಾರ್ಯಕ್ರಮವನ್ನು ಏರ್ಪಡಿಸಿದರು. ಪ್ರತಿಯೊಬ್ಬರು ಒಂದೊಂದು ಸಂಸ್ಕೃತ ನಗೆಹನಿಯನ್ನು ಪ್ರಸ್ತುತಪಡಿಸಬೇಕು ಎಂಬುದಾಗಿತ್ತು. ವಿದೇಶಿ ವಿದ್ಯಾರ್ಥಿಗಳ ಆಸಕ್ತಿ ನಮ್ಮನ್ನು ದಂಗು ಬಡಿಸಿತು. ನಾನು ಬೆಂಗಳೂರಿನ ನನ್ನ ಹೆಲ್ಪ್​ಲೈನ್ ಅಣಕು ರಾಮನಾಥ್ ಅವರ ಖಜಾನೆಯಿಂದ ಒಂದು ಚಾಟು ಶ್ಲೋಕವನ್ನು ಪಡೆದು ಪ್ರಸ್ತುತಪಡಿಸಿದೆ.

ಮುಖ ನಾಸಿಕ ಛಾದನ ವಾಸಿನಹಂ

ನಿಯತಂ ಕರ ಮಾರ್ಜನ ಶೀಲಮತೇ

ಜನ ಯೂಥ ಪರಾಂಙುಖ ಚಿತ್ತಿರಿಯಂ

ಕರೊನಾ ಪ್ರತಿ ಧಾರಣ ಸೂತ್ರ ಮಿದಂ?

ಕರೊನಾ ಭಯವನ್ನು ಗೆಲ್ಲಲು ಸಂಸ್ಕೃತ ಸಾಗರದ ದರ್ಶನಕ್ಕೆ ಹೊರಟ ನಮಗೆ ವಿವಿಧ ಬಗೆಯ ಚಾಟು ಶ್ಲೋಕಗಳು, ಸುಭಾಷಿತಗಳು ಒದಗಿ ಬರತೊಡಗಿದವು. ಸಂಸ್ಕೃತ ಸುಭಾಷಿತಗಳೆಂದರೆ ಬರಿಯ ನೀತಿ ಬೋಧನೆ ಅಥವಾ ಧಾರ್ವಿುಕ ಭಾವನೆಗಳನ್ನು ಮಾತ್ರವಲ್ಲದೆ ಬುದ್ಧಿಗೆ ಚುರುಕು ಮತ್ತು ಮನರಂಜನೆ ನೀಡಬಲ್ಲ ಅನೇಕ ಬಗೆಯ ಚಾಟೂಕ್ತಿಗಳನ್ನು ಹೊಂದಿವೆ. ಇದನ್ನೂ ಓದಿ: ಮುಗುಳು|ಎಳ್ಳು ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡಬಹುದು!

ಗ್ರಾಮೋಫೋನ್ ಕಂಡು ಹಿಡಿದ ಎಡಿಸನ್ ತನ್ನ ಗ್ರಾಮೋಫೋನ್ ಯಂತ್ರದಿಂದ ಮೊದಲು ಕೇಳಿ ಬರಬೇಕಾದದ್ದು ಜಗತ್ತಿನ ಅತಿಶ್ರೇಷ್ಠರ ಮಾತಿನ ದನಿಯಾಗಿರಬೇಕು ಎಂದು ಸಂಕಲ್ಪಿಸಿದ್ದ. ಅದಕ್ಕಾತ ವಿನಂತಿಸಿದ್ದು ಮ್ಯಾಕ್ಸ್ ಮುಲ್ಲರ್ ಅವರನ್ನು. ‘ನನ್ನ ಉಪಕರಣದ ಮುಂದೆ ನಿಂತು ನೀವು ಹೇಳಬೇಕಾದುದನ್ನು ಹೇಳಿ’ ಎಂದು ಮ್ಯಾಕ್ಸ್ ಮುಲ್ಲರ್​ನನ್ನು ಯಂತ್ರದ ಎದುರು ನಿಲ್ಲಿಸಿ ಎಡಿಸನ್ ತನ್ನ ಪ್ರಯೋಗಾಲಯಕ್ಕೆ ಹೋದ. ನಂತರ ಆತ ಉದ್ಗರಿಸಿದ್ದನ್ನು ಸಭೆಗೆ ಕೇಳಿಸಲಾಯಿತು. ಆತ ಮೊದಲ ಬಾರಿಗೆ ಯಂತ್ರದಲ್ಲಿ ಮುದ್ರಿಸಿ ಕೇಳಿಸಿದ್ದು ಋಗ್ವೇದದ ಮೊದಲ ಮಂತ್ರವಾಗಿತ್ತು. ನಮ್ಮೆಲ್ಲರನ್ನೂ ಮೋಡಿ ಮಾಡಿದ ಮಂತ್ರ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು. ಸಂಸ್ಕೃತ ಕುರಿತಾದ ಆದರ ಹೆಚ್ಚಿಸಲು ಇಂಥ ನೂರು ಉದಾಹರಣೆಗಳನ್ನು ಹೇಳುತ್ತ ಪಾಠ ಮಾಡುವ ನಮ್ಮ ಗುರು ಶಾಂತಲಾ ಅವರನ್ನು, ಅವರ ತಾಳ್ಮೆ, ಶ್ರದ್ಧೆಗಳನ್ನು ನೋಡಿದಾಗ ನನಗೆ ನೆನಪಿಗೆ ಬಂದ ಇನ್ನೊಂದು ಸುಭಾಷಿತ

ಗುರವಃ ಬಹವಃ ಸಂತಿ ಶಿಷ್ಯ ವಿತ್ತಾಪಹಾರಕಃ

ಗುರವಃ ವಿರಲಾ ಸಂತಿ ಶಿಷ್ಯ ಚಿತ್ತಾಪಹಾರಕಾಃ

ಮಗು ಹುಟ್ಟುವ ಮೊದಲೇ ಹಣ ತೆತ್ತು ಸೀಟ್ ರಿಸರ್ವ್ ಮಾಡಿಸುವ ಇಂದಿನ ‘ವಿತ್ತಾಪಹಾರಕ’ ಶಾಲೆಗಳಲ್ಲಿ ಶಿಷ್ಯರ ಚಿತ್ತವನ್ನು ಅಪಹರಿಸುವ ಗುರುಗಳು ಶೀಘ್ರವಾಗಿ ಕಾರ್ಯಪ್ರವೃತ್ತವಾಗುವಂತೆ ಆಗಲಿ.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net