ಹಿರಿಯರ ಹೊಣೆ ಹೊರೆಯಾಗದಿರಲಿ

old age
Published on
ಕೆಲ ದಿನಗಳ ಹಿಂದೆ ಮಂಗಳೂರಿನ ಟ್ರಾಫಿಕ್ ಪೊಲೀಸರ ಜೊತೆ ಹಿರಿಯ ನಾಗರಿಕರೊಬ್ಬರು ನಡೆಸಿದ ಅನಿರೀಕ್ಷಿತ ಜಟಾಪಟಿಯ ವಿಡಿಯೋವೊಂದನ್ನು ನೋಡಿದ ದಿನ ನನ್ನ ಮನಸ್ಸು ತೀರಾ ಪ್ರಕ್ಷುಬ್ಧಗೊಂಡಿತ್ತು. ನೋಡಲು ಸುಶಿಕ್ಷಿತರು, ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು ಎಂದು ಹೇಳಬಹುದಾದ ಹಿರಿಯರೊಬ್ಬರು ಟ್ರಾಫಿಕ್ ಪೊಲೀಸರ ಎದುರು ಕಾರು ನಿಲ್ಲಿಸಿ ಸಿಲುಕಿಕೊಂಡರು. ‘ಮಾಸ್ಕ್ ಧರಿಸದೆ ಎಲ್ಲಿಗೆ ಹೋಗುತ್ತಿದ್ದೀರಿ?’ ‘ಕಾರಿನ ದಾಖಲೆಗಳೆಲ್ಲಿ?’ ‘ಪಾಸ್ ಇದೆಯಾ?’ ಎಂದು ಪೊಲೀಸರು ಕೆೇಳಿದಾಗ ಸಿಟ್ಟಿಗೆದ್ದ ಆ ಹಿರಿಯರು ಕಾರಿನಿಂದ ಇಳಿದು, ‘ಇದು ನನ್ನ ಊರು ನಾನ್ಯಾಕೆ ಪಾಸ್ ತೋರಿಸಬೇಕು?’ ಎಂದು ಪೊಲೀಸರಿಗೆ ದಬಾಯಿಸಿದರು. ‘ಈಗ ಕರೊನಾ ಇರುವುದರಿಂದ ಹೀಗೆ ಸುಮ್ಮನೆ ಹೋಗುವಂತಿಲ್ಲ. ಯಾವ ಕಾರಣಕ್ಕಾಗಿ, ನೀವು ಎಲ್ಲಿಗೆ ಹೋಗಬೇಕು?’ ಎಂದು ತಾಳ್ಮೆಯಿಂದ ಪೊಲೀಸರು ವಿಚಾರಿಸಿದರೂ ಸರಿಯಾಗಿ ಉತ್ತರಿಸದ ಕಿವಿ ಸಹ ಕೇಳದ ಆ ಹಿರಿಯರು ದೇಶದಲ್ಲಿ ಕರೊನಾ ಲಾಕ್​ಡೌನ್ ಇದೆ ಎಂಬುದೇ ಗೊತ್ತಿಲ್ಲದವರಂತೆ, ‘ಏನು ಮಾಸ್ಕೊ? ಏನು ಪಾಸು?’ ಎಂದು ಸಿಟ್ಟಿಗೆದ್ದು ಕೊಳಕು ಶಬ್ದಗಳನ್ನು ಬಳಸಿ ಇಂಗ್ಲಿಷಿನಲ್ಲಿ ಪೊಲೀಸರಿಗೆ ಬೈದರು. ಆದರೂ ವಿಚಲಿತನಾಗದೆ ಪೊಲೀಸನೊಬ್ಬ ‘ನಮಗೂ ಇಂಥ ಭಾಷೆ ಬಳಸಲು ಗೊತ್ತು ಸರ್. ಆದರೆ ನಿಮ್ಮ ವಯಸ್ಸಿಗೆ ಮರ್ಯಾದೆ ಕೊಟ್ಟು ಸುಮ್ಮನಿದ್ದೇವೆ, ಏನು ಮಾಡುವುದು ನಮ್ಮ ಕರ್ಮ’ ಎಂದು ಅಸಹಾಯಕನಾಗಿ ಹೇಳುತ್ತಿದ್ದ ಸ್ವರ ನನ್ನ ಕಿವಿಗೆ ಬಿದ್ದಾಗ, ಇದು ನನ್ನ ಕ್ಲಾಸಿನಲ್ಲಿ ನಾನು ತುಂಬ ಕೇಳಿದ ನನ್ನ ಪ್ರಿಯ ಶಿಷ್ಯ ಸಂಪತ್ ಬಂಗೇರಾ ಎಂಬ ಹುಡುಗನ ಸ್ವರ ಎಂದು ಗೊತ್ತಾಯಿತು.

ಆ ಕ್ಷಣಕ್ಕೆ ನಾನು ಕ್ಲಾಸಿನಲ್ಲಿ ಆಗಾಗ ಹೇಳುತ್ತಿದ್ದ ಹಿತವಚನವನ್ನು ಕೇಳಿಸಿಕೊಂಡು ಪಾಲಿಸುವ ವಿದ್ಯಾರ್ಥಿಯೊಬ್ಬ ಪೊಲೀಸನಾಗಿದ್ದಾನೆ ಮತ್ತು ‘ಹಿರಿಯರ ಕುರಿತಾಗಿ ಯಾವತ್ತೂ ದರ್ಪ ತೋರಿಸಬೇಡಿ’ ಎಂದಿದ್ದನ್ನು ಪಾಲಿಸಿಕೊಂಡು ಬಂದಿದ್ದಾನೆ ಎಂದು ಹೆಮ್ಮೆಯಾಯಿತು. ಅಂದೇ ಫೋನು ಮಾಡಿ ನನ್ನ ಶಿಷ್ಯನಿಗೆ ಅಭಿನಂದನೆ ಸಲ್ಲಿಸಿದೆ. ‘ಕ್ರಿಮಿನಲ್​ಗಳ ಜೊತೆ ವ್ಯವಹರಿಸುವಾಗ ಒರಟು ಭಾಷೆ, ಖಡಕ್ ವ್ಯವಹಾರ ಅಗತ್ಯವಿರುತ್ತದೆ ಮೇಡಮ್ ಅನೇಕ ಬಾರಿ ನಮ್ಮ ತಾಳ್ಮೆಯ ಪರೀಕ್ಷೆ ಆಗುತ್ತದೆ. ಆದರೆ ಈ ಹಿರಿಯರು ಮಾನಸಿಕವಾಗಿ ಏನೋ ತೊಂದರೆಯಲ್ಲಿ ಇದ್ದಂತೆ ಭಾಸವಾಯಿತು. ಆದ್ದರಿಂದಲೇ ವಿಶೇಷ ನಿಗಾ ವಹಿಸಿ ಅವರ ಕೇಸನ್ನು ಹ್ಯಾಂಡಲ್ ಮಾಡಿದೆವು’ ಎಂದರು.

ವಯಸ್ಸಾದ ದಂಪತಿಗೆ ಮಕ್ಕಳು ದೂರದಲ್ಲಿರುವ ಸಂಕಟ, ದೈಹಿಕವಾಗಿ ಉಡುಗಿದ ಸಾಮರ್ಥ್ಯ, ತೆಗೆದು ಕೊಳ್ಳುತ್ತಿರುವ ಔಷಧಗಳ ಅಡ್ಡಪರಿಣಾಮ, ಪರಾವಲಂಬನೆಯ ದುಃಖ, ಮರೆವಿನ ಕಾಯಿಲೆ, ಆರ್ಥಿಕ ಅಡಚಣೆಗಳಿದ್ದರೆ ಅದರ ಆತಂಕ... ಹೀಗೆ ಹಲವಾರು ಗೊಂದಲಗಳ ನಡುವೆ ವೃದ್ಧಾಪ್ಯವನ್ನು ಕಳೆಯುತ್ತಿರುವವರೇ ಹೆಚ್ಚು. ಮಕ್ಕಳು ಹತ್ತಿರ ಇಲ್ಲದಿದ್ದರೆ ಒಂದು ಬಗೆಯ ಕಷ್ಟ. ಜತೆಯಲ್ಲಿದ್ದು ಹೊಂದಾಣಿಕೆ ಇಲ್ಲದ ಸ್ಥಿತಿ ಒದಗಿದರೆ ಇನ್ನೊಂದು ಬಗೆಯ ಕಷ್ಟ. ಅಂತೂ ವಾರ್ಧಕ್ಯವೆಂಬುದು ಬಾಲ್ಯ, ಯೌವನಗಳಿಗಿಂತ ಭಿನ್ನವಾದ ಮತ್ತು ಅಪಾಯಕಾರಿಯಾದ ಮನಸ್ಥಿತಿ. ‘ದೆೈನ್ಯವಿಲ್ಲದ ಜೀವನ’ ‘ಅನಾಯಾಸ ಮರಣ’ಗಳನ್ನು ನಮ್ಮ ಪೂರ್ವಜರು ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ಮಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಸವಾಲೆಸೆದ ಆ ವೃದ್ಧರೊಬ್ಬರು ಈ ಎಲ್ಲ ಚಿಂತನೆಗಳನ್ನು ನೆನಪಿಗೆ ತಂದರು. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್​ನಂಥ ಜವಾಬ್ದಾರಿ ಸ್ಥಾನವನ್ನು ನಿರ್ವಹಿಸಿ ನಿವೃತ್ತರಾದ ಈ ವೃದ್ಧರು ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ‘ಡಿಮೆನ್ಷಿಯಾ’ ಎಂಬ ಕಾಯಿಲೆಯಿಂದ ನರಳುತ್ತ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿ ಇರುವ ವೃದ್ಧಪತ್ನಿಗೆ ಇವರನ್ನು ಮಗುವಿನಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ. ಮಕ್ಕಳು ಯಥಾಪ್ರಕಾರ ದೂರದೂರುಗಳಲ್ಲಿ ಇರುವವರು. ಆ ದಿನ ಈ ಮರೆವಿನ ಹಿರಿಯರನ್ನು ನೋಡಿಕೊಳ್ಳುತ್ತಿದ್ದ ಪತ್ನಿಗೆ ದೈಹಿಕ ಬಳಲಿಕೆಯಿಂದ ಹಗುರು ನಿದ್ದೆ ಹತ್ತಿರಬಹುದು, ಅದೇ ಸಮಯದಲ್ಲಿ ಹಳೆಯ ನೆನಪುಗಳಿಂದ ಪ್ರೇರಿತರಾದ ಈ ಹಿರಿಯರು ತಮ್ಮ ಕಾರನ್ನು ತಾವೇ ಚಲಾಯಿಸಿಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಘಾತಗಳನ್ನು ಮಾಡಿ ಅನಾಹುತದಲ್ಲಿ ಸಿಕ್ಕಿಬಿದ್ದಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಪರಿಸ್ಥಿತಿಯ ಅರಿವಿಲ್ಲದವರು ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ವಾಗ್ದಾಳಿ, ಅವಮಾನಗಳಿಂದ ತುಂಬ ನೊಂದು ಅವರ ಪತ್ನಿ ಕಣ್ಣೀರು ಸುರಿಸಿದರು. ಹತ್ತಿರದಿಂದ ಬಲ್ಲವರು ಅವರನ್ನು ಆಪ್ತಸಮಾಲೋಚಕರ ನೆರವಿನಿಂದ ಸಮಾಧಾನಗೊಳಿಸಿದರು ಎಂದು ಕೆೇಳಿದೆ. ಆ ಮಟ್ಟಿಗೆ ನಮ್ಮ ಸಮಾಜದಲ್ಲಿ ಇನ್ನೂ ಹೃದಯವಂತ ಮನುಷ್ಯತ್ವ ಉಳಿದುಕೊಂಡಿದೆ ಎಂದಾಯಿತು.

ಈ ಪ್ರಕರಣದಿಂದ ನಾನಂತೂ ಒಂದು ಪಾಠ ಕಲಿತೆ. ಕಣ್ಣಿಗೆ ಕಂಡಿದ್ದನ್ನೆಲ್ಲ ಪರಾಮಶಿಸದೆ ಯಾವುದೇ ತೀರ್ವನಕ್ಕೆ ಬಂದು ಬಿಡಬಾರದು ಎಂದು.

ಹಿರಿಯರ ಹಿರಿತನ ಸುಮ್ಮನೆ ಬರುವಂಥದ್ದಲ್ಲ. ಜೀವನಾನುಭವ, ತಾವು ಪಟ್ಟ ಕಷ್ಟಗಳಿಂದ ಹರಳುಗಟ್ಟಿದ ಅಭಿಪ್ರಾಯಗಳು, ಮುಂದಿನ ತಲೆಮಾರಿನ ಕುರಿತಾದ ಕಾಳಜಿಪೂರ್ವಕ ಪ್ರೀತಿ ಇವೆಲ್ಲವುಗಳನ್ನು ಹೊಂದಿದ ಮನೆಯ ಹಿರಿಯ ಜೀವಗಳು ಮನೆತುಂಬ ಓಡಾಡಿಕೊಂಡಿದ್ದರೆ ಚಿಕ್ಕ ಅಂಬೆಗಾಲಿಡುವ ಮಗು ಮನೆಗೆ ತರುವ ಕಳೆಯು ಸಹ ದ್ವಿಗುಣಗೊಳ್ಳುತ್ತದೆ. ಯುವಕ-ಯುವತಿಯರ ಉಡಾಫೆಯ ವರ್ತನೆ, ಮಧ್ಯವಯಸ್ಕರ ತಲ್ಲಣ, ಆತಂಕಗಳು ಇವೆಲ್ಲವನ್ನೂ ಮೀರಿದ ಜೀವನಾನುಭವದ ರಸಪಾಕವನ್ನು ಕಂಡುಂಡ ಹಿರಿಯ ಜೀವಗಳು ತಮಗೆ ತೋಚಿದ ಮಾರ್ಗದರ್ಶನವನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ ಮಾಡುತ್ತ ಅವರೊಂದಿಗೆ ಒಂದಾಗಿ ಬಾಳುವ ಕುಟುಂಬಗಳು ಪುಣ್ಯಧಾಮಗಳು. ಇಂಥ ಅನೇಕ ಕುಟುಂಬಗಳನ್ನು ನಾನು ಕಂಡಿದ್ದೇನೆ. ‘ಧನ್ಯೋ ಗ್ರಹಸ್ಥಾಶ್ರಮ’ ಎಂಬ ಮಾತನ್ನು ಕಟೆದಿಟ್ಟಂತೆ ತೋರುವ ತುಂಬಿದ ಮನೆಗಳವು. ಬಾಲ್ಯದಲ್ಲಿ ಇಂಥ ಅನೇಕ ಬಂಧುಗಳ ಮನೆಗಳಲ್ಲಿ ಹೋಗಿ ಉಳಿದು ಹಿರಿಯರ ಜತೆಗೆ ಕೂತು ಮಾತನಾಡಿದ ಸವಿನೆನಪುಗಳು ನನ್ನ ಬುತ್ತಿಯಲ್ಲಿ ಅನೇಕ ಇವೆ. ಆ ಅಜ್ಜ-ಅಜ್ಜಿಯರು ಒಟ್ಟಾಗಿ ಕುಳಿತು ಅವರ ಬಾಲ್ಯದ ತುಂಟತನಗಳು, ಯೌವ್ವನದ ಸಾಹಸಗಳು ಇವನ್ನೆಲ್ಲ ಬಣ್ಣಿಸಿ ಹೇಳುವಾಗ ಕೇಳುವ ಆಸಕ್ತಿ ನಮಗೆ ಗರಿಗೆದರುತ್ತಿತ್ತು. ಬದುಕಿನಲ್ಲಿ ತಾವು ಗಳಿಸಿದಷ್ಟೆ ಪರರಿಗೆ ನೀಡುವುದರಲ್ಲಿ ಕೃತಾರ್ಥತೆ ಕಂಡ ತಲೆಮಾರು ಅದು. ಇಂದಿನವರ ‘ಕೊಳ್ಳುಬಾಕತನ’ದ ಸಂಸ್ಕೃತಿಯನ್ನು ಅರಗಿಸಿಕೊಳ್ಳಲಾರದೆ ಮನೆಯ ಕಿರಿಯ ಸದಸ್ಯರ ಧಾರಾಳ ಖರ್ಚಿನ ಕುರಿತು ಅಸಮ್ಮತಿಯನ್ನು ವ್ಯಕ್ತಪಡಿಸುತ್ತ ಕಿರಿಕಿರಿಯುಂಟು ಮಾಡಿ ಭಾರವಾದ ಹಿರಿಯರು ಕೂಡ ಇದ್ದಾರೆ.

ಲಾಕ್​ಡಾನ್ ಆರಂಭವಾದಂದಿನಿಂದ ನಮ್ಮ ಮನೆಯಲ್ಲಿ ಮಗಳು ನನ್ನನ್ನು ಅಪಾರ್ಟ್​ವೆುಂಟಿನ ಮೆಟ್ಟಿಲು ಇಳಿಯಲು ಬಿಟ್ಟಿಲ್ಲ. ನಮ್ಮ ಎದುರಿನ ರಸ್ತೆಯಲ್ಲಿ ಎಷ್ಟೋ ಮಹಿಳೆಯರು, ಪುರುಷರು, ನಾಯಿಗಳಿಗೆ ಬೀದಿ ಬಳಿ ಕಕ್ಕಸು ಮಾಡಿಸುವವರು ಕುತ್ತಿಗೆಗೆ ಮಾಸ್ಕು ಜೋತಾಡಿಸಿಕೊಂಡು ಹೋಗುವುದನ್ನು ನೋಡಿ ನನಗೂ ಕಾಲಾಡಿಸಿ ಬರುವ ಆಸೆ ಆಗುತ್ತಿತ್ತು. ಆದರೆ ಅದಕ್ಕೆ ಮಗಳು ಅಡ್ಡಗಾಲು ಹಾಕುತ್ತಲೇ ಇದ್ದಳು. ‘ನೀನು ಮನೆಯೊಳಗೆ ಯೋಗ ಮಾಡಮ್ಮ. ಬೇಕಾದರೆ ಟೆರೇಸ್ ಮೇಲೆ ಹೋಗಿ ಕಾಲಾಡಿಸಿ ಬರೋಣ’ ಎಂದು ಪುಸಲಾಯಿಸುತ್ತಿದ್ದಳು. ತಾನೇ ಹತ್ತಿರದ ಹಾಪ್​ಕಾಮ್ಸ್ಗೆ ಹೋಗಿ ವಾರಕ್ಕೊಮ್ಮೆ ತರಕಾರಿ ತರುವುದು, ತಿಂಗಳಿಗೆ ಆಗುವಷ್ಟು ದಿನಸಿ ತಂದಿಟ್ಟು ಜೋಪಾನ ಮಾಡುವುದು, ಹಾಲು-ಪೇಪರುಗಳನ್ನು ಎಚ್ಚರಿಕೆಯಿಂದ ಮನೆಯೊಳಗೆ ಸೇರಿಸುವುದು, ಹೊರಗೆ ಹೋಗಿ ಬರುವ ಚಪ್ಪಲಿಗಳನ್ನು ಬಿಸಿಲಲ್ಲಿ ಇಡುವುದು, ಕೈ ತೊಳೆಯುವುದು, ತೊಳೆಯ ಹೇಳುವುದು... ಹೀಗೆ ಕರೊನಾ ಕಾರುಬಾರು ವಹಿಸಿಕೊಂಡು ಬಿಟ್ಟಳು.

‘ಅಂತೂ ಕರೊನಾ ಬಂದು ಒಂದು ತಲೆಮಾರಿನ ಅಜಾಗರೂಕ ಉದ್ಧಟತನವನ್ನು ಇಲ್ಲವಾಗಿಸಿ ಬಿಟ್ಟಿತಲ್ರಿ’ ಎಂದು ಮೆತ್ತಗೆ ಮಾತನಾಡಿಕೊಳ್ಳುತ್ತೇವೆ. ಇಲ್ಲವಾದರೆ ಮಿತವ್ಯಯ, ಮುಂದಾಲೋಚನೆ, ದೈಹಿಕ ಕ್ಷಮತೆ ಇಂತಹ ಪದಪುಂಜಗಳು ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಇರುತ್ತಿತ್ತು ಅವಳ ನಡವಳಿಕೆ. ಮೊನ್ನೆ ಹಾಪ್​ಕಾಮ್ಸ್ನಿಂದ ಬಂದವಳು ಯಾಕೊ ಡಿಸ್ಟರ್ಬ್ ಆದಂತೆ ತೋರಿತು. ನಿಧಾನಕ್ಕೆ ಕೇಳಲಾಗಿ, ‘ತರಕಾರಿ ಅಂಗಡಿಗೆ ಎಷ್ಟೊಂದು ವಯಸ್ಸಾದವರು ಬರುತ್ತಾರಮ್ಮ... ಕೈಚೀಲ ಹಿಡಿದು ತರಕಾರಿ ಹೆಕ್ಕುವಾಗ ಕೈಯೆಲ್ಲ ನಡುಗುತ್ತಿರುತ್ತದೆ. ಅವರ ಮನೆಯಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ ಎಂದು ಮೊದಲು ಸಮಾಧಾನ ಮಾಡಿಕೊಂಡಿದ್ದೆ. ನಿನ್ನೆ ನೋಡುವಾಗ ಕಾರಲ್ಲಿ ಒಬ್ಬ ಯುವಕ ಕುಳಿತು ವಯಸ್ಸಾದ ತಂದೆಯನ್ನು ತರಕಾರಿ ತರಲು ಕಳಿಸಿ ಬೇಗ ಬಾ ಎಂಬಂತೆ ಹಾರ್ನ್ ಹಾಕುತ್ತಿದ್ದ. ಯಾಕೋ ಮನಸ್ಸಿಗೆ ಕಸಿವಿಸಿಯಾಯಿತು’ ಎಂದಳು. ‘ಕಣ್ಣಾರೆ ಕಂಡರೂ ಪರಾಂಬರಿಸದೆ ತೀರ್ವನಕ್ಕೆ ಬರಬಾರದು. ನೀನವರ ಚೀಲವನ್ನು ಕಾರಿನ ತನಕ ತೆಗೆದುಕೊಂಡು ಹೋಗಿ ಕೊಡಬೇಕಿತ್ತು’ ಎಂದಷ್ಟೇ ಹೇಳಿ ಸುಮ್ಮನಾದೆ. ‘ನೀನು ಹೇಳದಿದ್ದರೂ ನಾನದನ್ನು ಮಾಡಿದ್ದೇನೆ’ ಎಂದಳು ಕೊರೊನಾರ್ಜಿತ ಜ್ಞಾನ ಪಡೆದಂತಿದ್ದ ಮಗಳು.

(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net