

ಇನ್ನೂ ಹೆಜ್ಜೆ ಇಡಲು ಕಲಿಯುತ್ತಿರುವ ಮಗುವನ್ನು ಹಳ್ಳಿಗಳ ಅಪ್ಪಂದಿರು ಹೆಗಲ ಮೇಲೆ ಕೂಡಿಸಿಕೊಂಡು ತೋಟ, ಗದ್ದೆ, ಜಾತ್ರೆ, ಸಂತೆಗಳಲ್ಲಿ ಸುತ್ತಾಡುವ ದೃಶ್ಯವನ್ನು ನಾವೆಲ್ಲ ನೋಡಿದವರೇ. ಅಪ್ಪನ ಹೆಗಲೇರಿ ಕೂತ ಮಗುವಿಗೆ ಇಡೀ ಜಗತ್ತೇ ತನ್ನ ಕಣ್ಣೆದುರು ತೆರೆದುಕೊಂಡಂತಾಗಿ ಶಿಶುಸಹಜ ಸಂಭ್ರಮದಿಂದ ಅಪ್ಪನ ತಲೆಯನ್ನು ಅವುಚಿ ಹಿಡಿದು ಸಂತೋಷದಿಂದ ಕೇಕೆ ಹಾಕುವಾಗ ಅಪ್ಪನ ಎದೆಯನ್ನು ಒದೆಯುವ ಮಗು ಮುಂದೆ ಚಾಚಿಕೊಂಡಿರುವ ತನ್ನ ಇಡೀ ಬದುಕನ್ನು ಅಪ್ಪನ ಹೆಗಲೇರಿ ವೀಕ್ಷಿಸುತ್ತ ಅಪ್ಪನ ಕಣ್ಣಿನಿಂದಲೇ ಜಗತ್ತನ್ನು ನೋಡುತ್ತ ಬೆಳೆಯುತ್ತದೆ. ಅಪ್ಪನ ವ್ಯಕ್ತಿತ್ವದ ಮುಂದುವರಿಕೆಯಾಗಿ ಬದುಕನ್ನು ಕಟ್ಟಿಕೊಳ್ಳುವ ತರಬೇತಿಗೆ ಅಣಿಯಾಗುತ್ತದೆ.
ಆಧುನಿಕತೆಯ ವೈಭವಗಳಿಗೆ ಮನಸೋತ ನಗರದ ನಾಜೂಕು ತಾಯಿ-ತಂದೆಯರ, ಬೇಬಿವಾಕರ್ಗಳಲ್ಲಿ ಕೂಡಿಸಿಕೊಂಡು ಪಾರ್ಕಗಳಲ್ಲಿ ರೌಂಡ್ ಹೊಡೆಸುವ ಉದ್ಯೋಗಸ್ಥ ತಾಯ್ತಂದೆಯರ ಶಿಶುಗಳು ತಮ್ಮ ಕಣ್ಣೆದುರಿನ ಸೀಮಿತ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ವಂಚಿತವಾಗುತ್ತವೆ. ಸಂಕುಚಿತ ದೃಷ್ಟಿಕೋನದಿಂದ ಬೆಳೆಯುವ ಮಗು ಸ್ವಾರ್ಥಿಯಾಗುತ್ತ ತಾನು ತನ್ನದು ಲೋಕದಲ್ಲಿಯೇ ವಿಹರಿಸುತ್ತ ಪರೋಪಕಾರ ಪರರೊಡನಾಟ ಮೊದಲಾದ ಶಬ್ದದ ಪರಿಚಯವೇ ಇಲ್ಲದೆ ನಾಗರಿಕರ ನಡುವಿದ್ದೂ ವ್ಯಕ್ತಿಕೇಂದ್ರಿತ ಸಮಾಜದಲ್ಲಿ ಬೆಳೆಯುತ್ತದೆ. ಸಂಪತ್ತಿನ ಗಳಿಕೆಯೇ ಬದುಕಿನ ಆದ್ಯತೆಯಾಗುತ್ತದೆ.
ಇಂಥ ವೈಪರೀತ್ಯದ ದಿನಗಳಲ್ಲಿ ಹೊರಬಂದಿರುವ ಈ ‘ಅಪ್ಪನ ಹೆಗಲು’ ಕೃತಿ ಸಮಾಜಶಾಸ್ತ್ರೀಯ ಹಾಗೂ ಮಾನಸಿಕ ವಿಕಸನದ ಕುರಿತ ಅಧ್ಯಯನ ನಡೆಸುವವರಿಗೆ ಒಂದು ಮಾನವೀಯ ಆಕರ ಗ್ರಂಥವಾಗಬಲ್ಲದು. ಈ ಕೃತಿಗೆ ಮುನ್ನುಡಿ ಒದಗಿಸಿರುವವರು ಹಿರಿಯ ಲೇಖಕ ಗೊ.ರು.ಚನ್ನಬಸಪ್ಪ. ‘ಈ ಕೃತಿಯಲ್ಲಿರುವ ಬರಹಗಳೆಲ್ಲ ಆಯಾ ಬರಹಗಾರರ ಹೃದಯದಿಂದಲೇ ಹೊಮ್ಮಿ ಬಂದಿವೆ. ಅವುಗಳನ್ನು ಓದುವುದೇ ಒಂದು ಅನಿರ್ವಚನೀಯವಾದ ಅನುಭವ, ಅಷ್ಟೇ ಕುತೂಹಲಕಾರಿ. ಓದುವಾಗ ಎಷ್ಟೋ ಕಡೆ ನಮ್ಮ ಮುಖದಲ್ಲಿ ಮಂದಹಾಸ ಮೂಡಿದಂತೆ ಕಣ್ಣಲ್ಲಿ ನೀರು ಆಡುತ್ತದೆ. ತಂದೆ-ತಾಯಿ ಎನ್ನುವ ಜೀವಗಳು ಎಷ್ಟು ಅಮೂಲ್ಯ, ಎಷ್ಟು ಉನ್ನತ ಎನ್ನುವುದು ಅರ್ಥವಾಗಿದೆ’ ಎಂದು ಹೇಳಿದ್ದಾರೆ.
‘ತಪ್ಪೋ ಒಪ್ಪೋ ಒಪ್ಪಿಕೋ ಅಪ್ಪ ಅಂದಂಗೆ’ ಎನ್ನುವ ಗ್ರಾಮೀಣ ಗಾದೆಯನ್ನು ನೆನಪಿಸಿಕೊಂಡು ಇಲ್ಲಿರುವ ನೂರಾರು ನೆನಪುಗಳಲ್ಲಿ ಅಪ್ಪನಲ್ಲಿ ತಪು್ಪ ಕಂಡವರ ಸಂಖ್ಯೆ ನಾಲ್ಕೈದು ಇದ್ದರೂ ಅವರು ಸಹ ಅಪ್ಪನನ್ನು ಒಪ್ಪಿಕೊಂಡವರೆ ಆಗಿದ್ದಾರೆ. ಎಲ್ಲಿಯೂ ಭಾವನಾತ್ಮಕ ವೈಭವೀಕರಣಕ್ಕೆ ಸೀಮಿತಗೊಳ್ಳದೆ ವಸ್ತುನಿಷ್ಠವಾಗಿ ಅವರವರ ತಂದೆಯನ್ನು ಚಿತ್ರಿಸಿದ್ದಾರೆ. ಈ ಪ್ರೀತಿ-ವಾತ್ಸಲ್ಯಗಳ ಸಂಬಂಧದಲ್ಲಿ ಪರಸ್ಪರ ಕ್ಷಮಾಗುಣವಿದೆ, ಶ್ರೇಯಸ್ಸಿನ ಆಶಯವಿದೆ, ಪರಸ್ಪರ ಆಂತರಂಗಿಕ ವಿಶ್ವಾಸವಿದೆ, ಕರುಳ ಸಂಬಂಧದ ಸರಳ ಯೋಗವಿದೆ.
ಇಲ್ಲಿನ ಹೆಚ್ಚಿನ ಲೇಖಕರು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದಿರುವವರು ಹಾಗೂ ಈ ಸಾಧನೆಯ ಮೂಲ ಇರುವುದು ತಮ್ಮ ತಂದೆಯ ಬದುಕಿನಲ್ಲಿ ಎಂಬುದನ್ನು ಮನಗಂಡವರು.
ಉತ್ತರ ಕರ್ನಾಟಕದ ಜಾನಪದ ಹಾಗೂ ಗ್ರಾಮೀಣ ಬದುಕಿನ ಸೋಜಿಗಗಳನ್ನು ಒಳಗೊಂಡ ಅನೇಕ ಲೇಖನಗಳು ಇದರಲ್ಲಿವೆ. ವಿಠ್ಠಪ್ಪ ಗೋರಂಟ್ಲಿ ಎಂಬುವರು ಎಲ್ಲ ಭಾರತೀಯ ಶಿಶುಗಳ ಹಾಗೆ ತಾಯಿಯ ಕರಿಮಣಿ ಸರವನ್ನು ಕೈಯಲ್ಲಿ ಹಿಡಿದು ಮೊಲೆ ಹಾಲು ಕುಡಿಯುತ್ತಿದ್ದವರು. (ಉತ್ತರ ಕರ್ನಾಟಕದ ಜಾನಪದ ನಂಬಿಕೆಯೊಂದರ ಪ್ರಕಾರ ಹೀಗೆ ಹಾಲು ಕುಡಿಯುವ ಶಿಶು ತಾಯಿಯ ಕರಿಮಣಿ ಸರವನ್ನು ಜಗ್ಗಿ ಹರಿದರೆ ಅದು ಮಾತೃತ್ವದ ಪರಿಪೂರ್ಣತೆಯ ಸಂಕೇತ) ಈ ಲೇಖಕರು ಹಾಲು ಕುಡಿಯುವ ಶಿಶುವಾಗಿದ್ದಾಗಲೇ ತಂದೆ ತೀರಿ ಹೋಗುತ್ತಾರೆ. ತಾಯಿಯ ಕರಿಮಣಿಯನ್ನು ತೆಗೆಯಲಾಗುತ್ತದೆ. ಕರಿಮಣಿ ಇಲ್ಲದ್ದರಿಂದ ಮಗುವಿನ ಕೈಗೆ ಆಧಾರವೇ ಸಿಗದಂತಾಗಿ ಅದು ಹಾಲು ಕುಡಿಯದೆ ಕಿಟಾರನೆ ಕಿರುಚಿ ಅಳತೊಡಗುತ್ತದೆ. ಹಿರಿಯರ ಸಲಹೆಯಂತೆ ತಾಯಿ ಮತ್ತೆ ಕರಿಮಣಿ ಧರಿಸಿ ಹಾಲೂಡಿಸಿದಾಗ ಶಿಶು ಹಾಲು ಕುಡಿಯಲು ಪ್ರಾರಂಭಿಸಿತಂತೆ. ‘ಹುಟ್ಟುತ್ತಲೇ ಹೋರಾಟದ ಪ್ರವೃತ್ತಿ ಬೆಳೆಸಿಕೊಂಡು ಕರಿಮಣಿ ತೆಗೆಯುವಂಥ ಕ್ರೂರ ಪದ್ಧತಿ ವಿರೋಧಿಸಿದ ಶಿಶು’ ಎಂದು ಸ್ನೇಹಿತರು ಹೇಳಿದ್ದನ್ನು ಕೇಳಿ ಹೀಗೂ ಹೇಳಬಹುದೆಂಬುದನ್ನು ವಿನಯದಿಂದ ಒಪ್ಪಿಕೊಂಡಿದ್ದಾರೆ ಈ ಲೇಖಕರು. ಇಲ್ಲಿನ ಅನೇಕ ಲೇಖನಗಳಲ್ಲಿ ತಂದೆಯನ್ನೇ ಕಾಣದವರು ಇದ್ದಾರೆ. ಕೆಲವು ಲೇಖಕರು ಹೆತ್ತ ತಂದೆ-ತಾಯಿಯಿಂದ ದೂರವಾಗಿ ಐದಾರು ವರ್ಷದಲ್ಲಿರುವಾಗಲೇ ದತ್ತುಪುತ್ರನಾಗಿ ಬೆಳೆದ ಚಿತ್ರಣವನ್ನು ಡಾ.ವೃಷಭೇಂದ್ರಾಚಾರ್ಯ ಅರ್ಕಸಾಲಿ ನೀಡಿದ್ದಾರೆ. ತನ್ನ ವ್ಯಕ್ತಿತ್ವವನ್ನು ರೂಪಿಸಿದ ರೂವಾರಿ ತನ್ನ ದತ್ತಪ್ಪ ಎನ್ನುವಲ್ಲಿ ಧನ್ಯತೆಯ ಭಾವವಿದೆ.
ಮುಕ್ತ ಕಾಗಲಿ ಅವರ ಲೇಖನದಲ್ಲಿ, ಮದುವೆ ಮಾಡಿ ತನ್ನನ್ನು ಕಳಿಸುವಾಗ ಪುಸ್ತಕದ ಕಪಾಟಿಗೊರಗಿ ನಿಂತು ಬಿಕ್ಕಿ ಬಿಕ್ಕಿ ಅಳುವ ಅಪ್ಪನನ್ನು ಹೇಗೆ ಮರೆಯುವುದು ಎನ್ನುತ್ತಾರೆ. ಬ್ಯಾಡಗಿಯ ಲೇಖಕಿ ಸಂಕಮ್ಮರಿಗೆ ವಿಭಿನ್ನ ಕಾರಣಗಳಿಂದಾಗಿ ಹೆತ್ತಪ್ಪನ ವಾತ್ಸಲ್ಯ ದೊರೆಯದಿದ್ದರೂ ತನ್ನನ್ನು ತಂದೆ-ತಾಯಿಯಾಗಿ ಬೆಳೆಸಿದ ಅಮ್ಮನಲ್ಲಿ ಸಕಲವನ್ನು ಕಂಡರು. ಮೈಸೂರು ಪ್ರಾಂತ್ಯದಲ್ಲಿ ನೆಲೆಸಿರುವ ಅನೇಕ ಲೇಖಕಿಯರು (ಈ ಭಾಗದಲ್ಲಿ ಅಪ್ಪನನ್ನು ಅಣ್ಣ ಎನ್ನುತ್ತಾರೆ) ತಂದೆಯಿಂದ ಬಳುವಳಿಯಾಗಿ ಪಡೆದ ಸಂಗೀತ, ಕಲೆ, ಸಾಹಿತ್ಯಾಸಕ್ತಿಗಳನ್ನು ತಂದೆಯ ನೆನಪಿನೊಟ್ಟಿಗೆ ಜತನವಾಗಿ ಇರಿಸಿಕೊಂಡಿದ್ದಾರೆ.
ಕೃಷಿಕ ಅಪ್ಪನನ್ನು ಬಳೆಲ್ ಹೊಯ್ಸಪ್ಪಿನ ಸಮೇತ ನೆನಪಿಸಿಕೊಂಡವರು ಕುಂದಾಪುರದ ಡಾ.ಜಯಪ್ರಕಾಶ್ ಶೆಟ್ಟಿ. ‘ಬೆಂಕಿಯಾಗದಂತೆ ಬೆಳಕು ಕಾದ ನನ್ನಪ್ಪ’ ಎಂಬ ಅನುಭವ ಕಥನದಲ್ಲಿ, ತಂದೆ ಹೊಲಗದ್ದೆಗಳಲ್ಲಿ ದುಡಿಯುತ್ತಲೇ ಕರ್ಮಯೋಗಿಯಂತೆ ಬದುಕಿ ಹೊಳೆ, ನೆಲ, ಮಣ್ಣುಗಳಲ್ಲಿ ತಮ್ಮ ಇರುವಿಕೆಯನ್ನು ನೆಟ್ಟು ಇಟ್ಟು ಹೋದರು ಎಂದು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ಕನ್ನಡದ ವಿಟ್ಲದವರಾದ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ‘ಚಂದಮಾಮ’, ‘ಬಾಲಮಿತ್ರ’ ಓದಿಸುತ್ತ ಬಣ್ಣದ ಪೆನ್ಸಿಲ್ ತಂದು ಚಿತ್ರ ಬರೆಸಿದ ಅಪ್ಪನನ್ನು ನೆನೆಯುತ್ತ, ‘ಈಗ ಚಿತ್ರರಂಗದಲ್ಲಿನ ನನ್ನ ಏಳಿಗೆ ಹಾಗೂ ನಾನು ಎಷ್ಟೇ ಹೆಸರು ಮಾಡಿದ್ದರೂ ಅದನ್ನು ನೋಡಿ ಖುಷಿಪಡಲು ಅಪ್ಪನಿಲ್ಲ’ ಎಂದಾಗ ಮನಸ್ಸು ಭಾರವಾಗುತ್ತದೆ.
ಹೊರಜಗತ್ತಿನ ಆಗುಹೋಗುಗಳಿಗೆ ತನ್ನನ್ನು ಅಣಿಗೊಳಿಸಿದ ಅಪ್ಪನನ್ನು ನೆನೆಯುತ್ತ ತಾಳ್ತಜೆಯವರು, ‘ನನ್ನ ಅಪ್ಪನೊಳಗೊಬ್ಬ ಕನಸುಗಾರನಿದ್ದ, ಕವಿ ಇದ್ದ, ಕಲಾವಿದನಿದ್ದ’ ಎಂದು ನೆನಪಿಸಿಕೊಳ್ಳುತ್ತಾರೆ. ಇವರೆಲ್ಲರ ಸಾಮಾನ್ಯ ಅಂಶ ಬಡತನ ಮತ್ತು ಪ್ರಾಮಾಣಿಕತೆ. ಒಂದು ರೊಟ್ಟಿ ನಾಲ್ಕು ಪಾಲು ಮಾಡಿ, ಉಪು್ಪ ಹಚ್ಚಿಕೊಂಡು ತಿಂದು ಮಲಗುವ ಕರಾಳ ಬಡತನದ ರೈತನ ಮಗ ಹಂಶಕವಿಗೆ ಹೊಲದಲ್ಲಿ ಅಪ್ಪನೊಂದಿಗೆ ದುಡಿಯಲು ಹೋದಾಗ ಕಟ್ಟಿಗೆ ರಾಶಿಯಲ್ಲಿ ಫಳಫಳ ಹೊಳೆಯುವ ರೋಲೆಕ್ಸ್ ಕೈಗಡಿಯಾರ ಸಿಗುತ್ತದೆ. ಮಗ ಸಂಭ್ರಮದಿಂದ ಅಪ್ಪನಿಗೆ ತೋರಿಸಿದಾಗ ಅದು ಹಿಂದೊಮ್ಮೆ ಹೊಲಕ್ಕೆ ಬಂದ ಗೌಡರದ್ದು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ‘ಯಾರ್ದ ತಗೊಂಡು ನಮಗೇನು ಮಾಡಾದದ? ನಡಿ ಮಗ ಗೌಡರ ಮನೆಗೆ ಹೋಗಿ ಅವರ ಚೀಜ್ ಅವರಿಗೆ ಒಪ್ಪಿಸಿಬಿಡೋಣ’ ಅಂತ ಮಗನನ್ನು ಕರ್ಕೆಂಡು ಊರ ಗೌಡರ ಮನೆಗೆ ಹೋಗುತ್ತಾರೆ. ಹೊಲದಲ್ಲಿ ಕಳೆದು ಹೋಗಿದ್ದ ತನ್ನ ಕೈಗಡಿಯಾರ ಮರಳಿಸಿದ್ದಕ್ಕೆ ಕೃತಜ್ಞರಾದ ಗೌಡರು ಮಗುವಿಗೆ ಬಜಾರಿನಲ್ಲಿ ಒಂದು ಅಂಗಿಚಡ್ಡಿ, ತಿನ್ನಲು ಚುಡುವಾ ಕೊಡಿಸಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.
ಹೀಗೆ ಕೃತಿಯ ಉದ್ದಕ್ಕೂ ದುಡಿಮೆಯನ್ನು ತಪಸ್ಸೆಂಬಂತೆ ಸ್ವೀಕರಿಸಿದ ಕರ್ಮಯೋಗಿಗಳ ಬಡತನವನ್ನು ಮತ್ತು ಅದೇ ಕಾರಣಕ್ಕೆ ಬಾಳದಾರಿ ಸರಿಯಾದ ದಿಕ್ಕನ್ನು ಪಡೆದುಕೊಂಡಿದ್ದಕ್ಕೆ ಧನ್ಯತೆಯನ್ನು ಅನುಭವಿಸುವ ಲೇಖಕರು ಕಾಣಸಿಗುತ್ತಾರೆ. ಪುಸ್ತಕದ ಗಾತ್ರ 655 ಪೇಜುಗಳಿರುವುದರಿಂದ ಎಲ್ಲ ಲೇಖಕರನ್ನು ಹೆಸರಿಸುವುದು ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಬದುಕಿನ ಈಗಿನ ಸುಖದ ಮೂಲವನ್ನು ತಂದೆಯ ತ್ಯಾಗದಲ್ಲಿ ಕಂಡುಕೊಂಡಿದ್ದಾರೆ. ತಂದೆಯ ಕೊನೆಗಾಲದ ಆಸೆಯನ್ನು ಅಲಕ್ಷ್ಯದಿಂದಾಗಿ ತೀರಿಸಲಾಗದೆ ಈಗ ಪರಿತಪಿಸುವ ಮಕ್ಕಳೂ ಇಲ್ಲಿದ್ದಾರೆ. ಗಂಗಾವತಿ ಪ್ರಾಣೇಶ್ರ ತಂದೆ ‘ನಾ ಅನುಭವಿಸಿದ ಜೈಲಿನ ಕಷ್ಟವನ್ನೆಲ್ಲ ಹೇಳ್ತೇನೆ. ಟೇಪ್ ರೆಕಾರ್ಡ್ನಲ್ಲಿ ರೆಕಾರ್ಡ್ ಮಾಡಿ’ ಎನ್ನುತ್ತಿದ್ದರಂತೆ. ರೇಡಿಯೋ ಹಾಡು ಕೇಳುವ ಮಕ್ಕಳು ಅಪ್ಪನ ಕೋರಿಕೆಯನ್ನು ಅಲಕ್ಷಿಸಿ ಬಿಟ್ಟಿದ್ದರು. ಮೂರ್ನಾಲ್ಕು ಚಾನೆಲ್ಲುಗಳಲ್ಲಿ ತಮ್ಮ ಕಾರ್ಯಕ್ರಮ ಬರುತ್ತಿರುವಾಗ, ‘ನೀ ಬೇಡ ಬೇಡ ಅಂದ್ರೂ ಜನ ನಿನ್ನ ಧ್ವನಿ ಟೇಪ್ ಮಾಡಿಕೊಳ್ಳುವಂತಾಗಲಿ’ ಎಂದು ಅಪ್ಪ ಹರಸಿಬಿಟ್ಟರೇನೋ ಎನ್ನಿಸಿ ನಾಚಿಕೆ- ಬೇಸರಗಳಿಂದ ಕುಗ್ಗಿ ಕಣ್ಣೀರಾಗುತ್ತೇನೆ ಎನ್ನುತ್ತಾರೆ. ಹಣದ ಬೆನ್ನು ಹಿಂದೆ ಬಿದ್ದ ಮಕ್ಕಳನೇಕರು ಸ್ವಂತ ಆದಾಯವಿದ್ದರೂ ಅಪ್ಪನ ಆಸ್ತಿಗಾಗಿ ಟೇಪ್ ಹಿಡಿದು ಇಂಚಿಂಚು ಅಳೆದು ಜಗಳವಾಡುತ್ತಿರುವ ಈ ದಿನಗಳಲ್ಲಿ ತಂದೆ ಬಿಟ್ಟು ಹೋದ ಬಡತನವನ್ನು ಕೃತಜ್ಞತೆಯಿಂದ ನೆನೆಯುವ ಲೇಖಕರು ಇಲ್ಲಿದ್ದಾರೆ ಎಂಬುದೇ ಸಮಾಧಾನದ ಸಂಗತಿ. ‘ಆಗ ನೀನಿದ್ದಿ ಹಾಗಾಗಿ ಇಂದು ನಾನಿದ್ದೇನೆ’ ಎಂಬ ವಾಸುದೇವ ನಾಡಿಗ್ ಅವರ ಮಾತು (ಪುಟ 355) ಇಡೀ ಕೃತಿಯ ಆಶಯವನ್ನು ಘನತೆಯಿಂದ ಎದುರಿಗಿಟ್ಟಿದೆ. ಇಂಥದ್ದೊಂದು ಉಪಯುಕ್ತ ಕೃತಿಯನ್ನು ಕನ್ನಡಿಗರಿಗೆ ನೀಡಿದ್ದಕ್ಕಾಗಿ ಸಂದು ಹೋದ ಅಪ್ಪಂದಿರ ಆತ್ಮಗಳು ರಾಜಶೇಖರ ಜಮದಂಡಿಯವರನ್ನು ಆಶೀರ್ವದಿಸದೆ ಇರಲಾರವು.
(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)