

ಎಲ್ಲರ ಬದುಕಿನಲ್ಲೂ ಅವರದ್ದೇ ಆದ ಜವಾಬ್ದಾರಿ, ಹೊಣೆಗಾರಿಕೆ ಇದೆ. ಜೀವನದಲ್ಲಿ ಗೆಲ್ಲಬೇಕು ಎಂದರೆ ನಮಗೆ ಒದಗಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗಬೇಕು. ಒಂದಲ್ಲ ಒಂದು ದಿನ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಮುಖ್ಯವಾಗಿ, ಸಾಧಿಸುವ ಛಲ ಇರುವವರು ಪ್ರಯತ್ನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಒಂದೆರಡು ಪ್ರಯತ್ನಗಳು ವಿಫಲಗೊಂಡರೆ ಅದನ್ನು ಸೋಲು ಎಂದು ಭಾವಿಸಬಾರದು. ಅದನ್ನು ಅನುಭವವಾಗಿ ತೆಗೆದುಕೊಂಡು ಮುಂದಡಿ ಇಡಬೇಕು. ಅರ್ಧದಲ್ಲೇ ನಮ್ಮ ಪ್ರಯತ್ನ ಕೈಬಿಟ್ಟರೆ ಅಂದುಕೊಂಡ ಕಾರ್ಯಗಳು ನೆರವೇರುವುದಿಲ್ಲ. ಸಾಧನೆ ಸಾಧ್ಯವಾಗುವುದಿಲ್ಲ. ನನ್ನ ಬದುಕಿನಲ್ಲೂ ಅಷ್ಟೇ. ಅರ್ಧಕ್ಕೆ ಸಿನಿಮಾ ರಂಗ ಅಥವಾ ರಾಜಕೀಯ ಕ್ಷೇತ್ರವನ್ನು ತೊರೆದಿದ್ದರೆ ನಿಮ್ಮ ಈ ತಾರಾ ಇಷ್ಟು ಎತ್ತರಕ್ಕೆ ಬೆಳೆಯಲು, ಚರಿತ್ರೆ ಸೃಷ್ಟಿಸಲು ಸಾಧ್ಯವಿರಲಿಲ್ಲ.
ನನ್ನದು ಮೊದಲಿನಿಂದಲೂ ಸ್ಥಿತಿವಂತ ಕೂಡು ಕುಟುಂಬ. ಮನೆಯಲ್ಲಿ ಯಾವುದೇ ಕಷ್ಟವಿರಲಿಲ್ಲ. ಎಲ್ಲರೂ ಒಳ್ಳೆಯ ಹುದ್ದೆಯಲ್ಲಿದ್ದರು, ಸಂಪಾದನೆ ಚೆನ್ನಾಗಿತ್ತು. ನನ್ನ ತಾತ ಜಿ. ನಾರಾಯಣಸ್ವಾಮಿ ಬೆಂಗಳೂರಿನ ಡೆಪ್ಯುಟಿ ಕಮಿಷನರ್ ಆಗಿದ್ದರು. ಆರಂಭದಿಂದಲೇ ಸಾಂಸ್ಕೃತಿಕ ನಂಟಿತ್ತು. ನನಗೆ ಬಾಲ್ಯದಿಂದಲೇ ಸಿನಿಮಾ ಬಗ್ಗೆ ಆಸಕ್ತಿ, ಸೆಳೆತ ಇತ್ತು. ಶಾಲಾವ್ಯಾಸಂಗ ಸಂದರ್ಭದಲ್ಲೇ ಹಲವು ಚಿತ್ರಗಳಲ್ಲಿ ನಟಿಸಿದೆ. ನಾನು ಚಿತ್ರರಂಗ ಪ್ರವೇಶಿಸುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. ಆದರೆ, ‘ಅವಳಿಗೆ ಆಸಕ್ತಿ ಇದೆ, ಒಂದು ಸಿನಿಮಾ ಮಾಡಲಿ’ ಎಂದು ತಾತ ಹೇಳಿ, ಪ್ರೋತ್ಸಾಹಿಸಿದರು. ಕಾಲೇಜ್ ದಿನಗಳಲ್ಲೇ ಸಿನಿಮಾ ನಟಿಯಾಗಿ ಪ್ರಸಿದ್ಧಳಾಗಿದ್ದೆ. ಕಾಲೇಜಿಗೆ ಬರುವಷ್ಟರಲ್ಲೇ 50 ಸಿನಿಮಾಗಳಲ್ಲಿ ಅಭಿನಯಿಸಿಯಾಗಿತ್ತು. ಆದರೆ, ನನ್ನ ಅದೃಷ್ಟ ಮತ್ತು ಗುರುಹಿರಿಯರ ಆಶೀರ್ವಾದ ಹಾಗೂ ನನ್ನ ಕುಟುಂಬದವರ ಬಗ್ಗೆ ಇದ್ದ ಗೌರವದಿಂದಾಗಿ ಶಾಲೆ, ಕಾಲೇಜು ದಿನಗಳಲ್ಲಿ ನನಗೆ ಉಪನ್ಯಾಸಕರಿಂದ ಬೆಂಬಲ ದೊರಕಿತು. ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು, ಪಠ್ಯದ ಅನುಮಾನಗಳನ್ನು ಪರಿಹರಿಸುತ್ತಿದ್ದರು (ಕಾಲೇಜ್ ವ್ಯಾಸಂಗ ಮಾಡಿದ್ದು ಬೆಂಗಳೂರಿನ ಆರ್ವಿ ಕಾಲೇಜು ಮತ್ತು ಎನ್ಎಕೆಆರ್ವಿ ಕಾಲೇಜು).
ಸಿನಿಮಾನೇ ನನ್ನ ವೃತ್ತಿ ಆಗುತ್ತದೆ ಎಂದು ನಾನೂ ಭಾವಿಸಿರಲಿಲ್ಲ. ಹಣಕ್ಕೆ ಪ್ರಾಮುಖ್ಯ ನೀಡದ್ದರಿಂದ ಒಂದಾದ ಮೇಲೆ ಒಂದರಂತೆ ಅವಕಾಶಗಳು ಬಂದವು. ಬೇರೆ ಬೇರೆ ಶಿಫ್ಟ್ಗಳಲ್ಲಿ ಒಂದೇ ದಿನ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಹಲವು ವಾರಗಳ ಕಾಲ ಪಾಲ್ಗೊಂಡಿದ್ದೂ ಇದೆ. ಅಲ್ಲದೆ, ಎಂದೂ ನನಗೆ ಇದೇ ಪಾತ್ರವೇ ಬೇಕು ಎಂದು ಹಠ ಹಿಡಿಯಲಿಲ್ಲ. ಬಂದ ಪಾತ್ರಗಳನ್ನೆಲ್ಲ ಖುಷಿಯಿಂದ ಮಾಡಿದೆ. ಸ್ವಾರಸ್ಯದ ಸಂಗತಿ ಎಂದರೆ, ತುಂಬ ಜನರು ಸಿನಿಮಾ ರಂಗಕ್ಕೆ ಬರಲು ಕಷ್ಟ ಪಡುತ್ತಾರೆ, ಬಂದ ಮೇಲೆ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಪಡುತ್ತಾರೆ. ನನಗೆ ಕಷ್ಟ ಅಂತ ಆರಂಭವಾಗಿದ್ದು ಸಿನಿಮಾ ರಂಗಕ್ಕೆ ಬಂದ ಮೇಲೆ! ಅವಕಾಶಗಳು ಇದ್ದವು. ಆದರೆ, ನಟ- ನಟಿಯರಿಗೆ ಮಾತ್ರ ಭರ್ಜರಿ ಸೌಲಭ್ಯಗಳು. ಸಹ ಕಲಾವಿದರನ್ನು ಕೀಳಾಗಿ ಕಾಣುತ್ತಿದ್ದರು. ಚಿತ್ರರಂಗದಲ್ಲಿ ಹಂತದಿಂದ ಹಂತಕ್ಕೆ ಬೆಳೆಯಲು ಕೆಲ ಅವಮಾನಗಳನ್ನು ಎದುರಿಸಲೇಬೇಕು.
ಮೊದಲೇ ಹೇಳಿದಂತೆ ನಮ್ಮದು ಸ್ಥಿತಿವಂತರ ಕುಟುಂಬ. ಆದರೆ, ಚಿತ್ರೀಕರಣಕ್ಕೆಂದು ಹೋದಾಗ ಉಳಿದುಕೊಳ್ಳಲು ಸಣ್ಣ ಹೋಟೆಲಿನ ಸಣ್ಣ ಕೋಣೆ. ‘ಅಯ್ಯೋ, ಇಂಥ ಕೋಣೆಯಲ್ಲಿ ಉಳಿದುಕೊಳ್ಳಬೇಕಾ’ ಎಂದು ಹಿಂಸೆಯಾಗುತ್ತಿತ್ತು. ಈ ಬಗ್ಗೆ ವಿಚಾರಿಸಿದರೆ, ‘ನಿಮಗೆ ಸಿಗುವುದು ಇಂಥದ್ದೇ ಕೋಣೆ’ ಎಂದು ಅವಮಾನಿಸುತ್ತಿದ್ದರು. ಚಿತ್ರೀಕರಣದ ವೇಳೆ ನನ್ನ ಜತೆ ಸದಾ ನೆರಳಿನಂತೆ ನನ್ನ ಅಮ್ಮ ಮತ್ತು ದೊಡ್ಡಮ್ಮ ಇರುತ್ತಿದ್ದರು. ಮನೆಯಲ್ಲಿ ಸಕಲ ಸೌಲಭ್ಯಗಳಲ್ಲಿ ದಿನದೂಡುವ ಅವರು ನನ್ನಿಂದ ಕಷ್ಟ ಪಡುವಂತಾಯಿತೆ ಎಂಬ ಬೇಜಾರು ಕಾಡುತ್ತಿತ್ತು. ಚಿತ್ರೀಕರಣದ ವೇಳೆ ನೀಡುವ ಯಾವುದೋ ಒಂದು ಕುರ್ಚಿಯಲ್ಲಿ ಅವರು ದಿನವಿಡೀ ಕುಳಿತಿರಬೇಕಿತ್ತು. ಕೆಲವೊಮ್ಮೆ ಕುರ್ಚಿಯೂ ಇರದೆ ನೆಲದ ಮೇಲೆ ಕೂರುತ್ತಿದ್ದರು. ನಟಿಗೆ ನೀಡುತ್ತಿದ್ದ ಅನುಕೂಲತೆಗಳು ನಮಗೆ ಇರಲಿಲ್ಲ. ನೋಡಿಕೊಳ್ಳುವ ರೀತಿಯೂ ಭಿನ್ನವಾಗಿ ಇರುತ್ತಿತ್ತು.
ನನಗೆ ಸಂಕಟ ಉಂಟುಮಾಡಿದ ಮತ್ತೊಂದು ಸಂಗತಿ ಶೂಟಿಂಗ್ ವೇಳೆಯಲ್ಲಿ ಮಾಡುತ್ತಿದ್ದ ಪಂಕ್ತಿಭೇದ. ನಮ್ಮದು ದೊಡ್ಡ ಕುಟುಂಬ. ಮನೆಯಲ್ಲೇ 20-22 ಜನರಿದ್ದರು. ದಿನವಿಡೀ ಒಲೆ ಉರಿಯುತ್ತಿತ್ತು. ಮಧ್ಯಾಹ್ನದ ಊಟ ಆಗುವಷ್ಟರಲ್ಲೇ ಸಂಜೆ ಆರು ಗಂಟೆ ಕಳೆದಿರುತ್ತಿತ್ತು. ನಮ್ಮ ಮನೆಯಲ್ಲಿ ಕೆಲಸಗಾರರಿಗೆ, ಅತಿಥಿಗಳಿಗೆ, ಮನೆ ಯಜಮಾನನಿಗೆ ಎಲ್ಲರಿಗೂ ಒಂದೇ ರೀತಿಯ ಭೋಜನ. ಯಾವುದೇ ಭೇದಭಾವ ಇರಲಿಲ್ಲ. ಆದರೆ, ಡಾ. ರಾಜಕುಮಾರ್ ಮತ್ತು ರವಿಚಂದ್ರನ್ ಕಂಪನಿಗಳನ್ನು ಹೊರತುಪಡಿಸಿ ಉಳಿದೆಡೆಯ ಚಿತ್ರೀಕರಣದ ವೇಳೆ ನಿರ್ದೇಶಕ, ನಿರ್ವಪಕ, ನಟ-ನಟಿಗೆ ಬೇರೆ ಊಟ, ಸಹ ಕಲಾವಿದರಿಗೆ ಬೇರೆ, ಮೇಕಪ್ ಕಲಾವಿದರಿಗೆ ಬೇರೆ ಊಟ ಎಂಬ ಭೇದ ಇರುತ್ತಿತ್ತು.
ಇದ್ಯಾಕೆ ಹೀಗೆ ಮಾಡುತ್ತಾರೆ ಎಂದು ಬೇಸರವಾಗುತ್ತಿತ್ತು. ನನ್ನ ತಂದೆಯಂತೂ, ‘ಅದ್ಯಾವುದೋ ಸಣ್ಣ ಹೋಟೆಲಿನಲ್ಲಿ ಇರಿಸುತ್ತಾರಂತಲ್ಲ. ಯಾಕೆ ಅಷ್ಟು ಕಷ್ಟ ಪಡ್ತೀಯ, ಬಿಟ್ಟುಬಿಡು’ ಅಂತ ಹೇಳುತ್ತಿದ್ದರು. ಆದರೆ, ಪಾತ್ರಗಳ ಮೂಲಕವೇ ನಾನು ಜೀವಿಸಿದೆ. ಆ ಸಣ್ಣ ಕಷ್ಟಗಳನ್ನೇ ಭಾರಿ ಹಿಂಸೆ ಅಂತ ಅಂದುಕೊಂಡು ಹಿಂದೆ ಸರಿದಿದ್ದರೆ ನಾನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿಯಾಗಿ (ಹಸೀನಾ ಚಿತ್ರಕ್ಕೆ) ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರರಂಗದಲ್ಲಿ ನನಗಿಂತ ಹೆಚ್ಚು ಕಷ್ಟಪಟ್ಟವರು, ನೋವು ಉಂಡವರು, ಅವಮಾನ ಎದುರಿಸಿದವರು ಇದ್ದಾರೆ ಎಂಬುದರ ಸ್ಪಷ್ಟ ಅರಿವು ಇದೆ. ಅಲ್ಲದೆ, ನಾನು ಯಾವತ್ತೂ ದುಡ್ಡಿಗಾಗಿ ಹಪಹಪಿಸಲಿಲ್ಲ. ನಾನು ನಟಿಸಿದ ಎಲ್ಲ ಚಿತ್ರಗಳಿಂದ ಸಂಭಾವನೆ ಪಡೆದುಕೊಂಡಿದ್ದರೆ, ಪ್ರಸ್ತುತ ಅತ್ಯಂತ ಶ್ರೀಮಂತ ನಟಿಯಾಗಿರುತ್ತಿದ್ದೆ! ಆದರೆ, ಕೆಲಸದಲ್ಲಿ ಎಷ್ಟು ಮಗ್ನಳಾಗಿರುತ್ತಿದ್ದೆ ಎಂದರೆ ಒಂದು ಸಿನಿಮಾ ಮುಗಿದ ಬೆನ್ನಲ್ಲೇ ಮತ್ತೊಂದು... ಹೀಗೆ ಸಾಗುತ್ತಲೇ ಇತ್ತು. ಚಿತ್ರೀಕರಣ ಮುಗಿದ ಮೇಲೆ ದುಡ್ಡು ಕೊಡಿ ಅಂತ ಹೋಗಿ ಕೇಳಲು, ಫಾಲೋಅಪ್ ಮಾಡಲು ಯಾರೂ ಇರಲಿಲ್ಲ.
ಕೆಲವರು ನೀವು ಸಣ್ಣಪುಟ್ಟ ಪಾತ್ರಗಳನ್ನು ಏಕೆ ಒಪ್ಪಿಕೊಳ್ಳುತ್ತೀರಿ, ನಾಯಕಿಯ ಪಾತ್ರವನ್ನೇ ಕೇಳಿ ಎನ್ನುತ್ತಿದ್ದರು. ಆ ಅವಕಾಶವೂ ತಾನಾಗಿ ಒದಗಿ ಬಂತು. ಕಲಾತ್ಮಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಬಳಿಕ ವೃತ್ತಿಜೀವನದ ಎತ್ತರಕ್ಕೆ ತಲುಪಿದೆ. ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ನಂಜುಡೇಗೌಡರು, ಶೇಷಾದ್ರಿ, ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ನಟಿಸಿದ ಕಲಾತ್ಮಕ ಚಿತ್ರಗಳು ಮನ್ನಣೆ ತಂದುಕೊಟ್ಟವು. ಇವುಗಳ ನಡುವೆ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಆಗಿರಲಿಲ್ಲ. ಬಳಿಕ ವೇಣುಗೋಪಾಲ್ ಅವರೊಂದಿಗೆ ಮದುವೆಯಾಗಿ, ಜೀವನದ ಹೊಸ ಅಧ್ಯಾಯ ಆರಂಭವಾಯಿತು.
ಸಿನಿಮಾ ರಂಗದಲ್ಲಿನ ಕಾರ್ಯ, ಸಾಧನೆಯ ಬಲದಿಂದ ರಾಜಕೀಯ ಕ್ಷೇತ್ರದಿಂದ ಆಹ್ವಾನ ಬಂತು. ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದ ಒಳ್ಳೆಯ ಆಡಳಿತದಿಂದ ಪ್ರಭಾವಿತಳಾಗಿದ್ದೆ. 2012ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದೆ. ರಾಜಕೀಯ ಕ್ಷೇತ್ರಕ್ಕೆ ಬರಲು ಕುಟುಂಬದವರ ವಿರೋಧವಿತ್ತು. ಇದು ನನಗೆ ಹೊಸ ಕ್ಷೇತ್ರವಾಗಿದ್ದರಿಂದ ಸಾಕಷ್ಟು ಸವಾಲುಗಳು ಇದ್ದವು. ಇಲ್ಲೂ ಅಷ್ಟೇ, ನನ್ನ ಪಾಲಿಗೆ ಬಂದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತ ಹೋದೆ. ನನ್ನ ತಂದೆ ಒಂದು ಮಾತನ್ನು ಹೇಳಿದ್ದರು, ‘ನಿನ್ನ ಕೈಗೆ ಪೊರಕೆ ನೀಡಿದರೂ, ನಿಷ್ಠೆಯಿಂದ ಸ್ವಚ್ಛತೆಯ ಕೆಲಸ ಮಾಡಬೇಕು’ ಎಂದು. ಮನುಷ್ಯನಿಗೆ ಸಹಜ ಸಹಜ ಆಸೆಗಳು ಇರುವುದು ಸ್ವಾಭಾವಿಕ. ಆದರೆ, ರಾಜಕೀಯದಲ್ಲೂ ಅತಿಯಾಗಿ ಆಸೆ ಪಡಲಿಲ್ಲ, ಅತಿಯಾಗಿ ಹಠ ಮಾಡಲಿಲ್ಲ.
ಮುಂದೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಫ್ಡಿಸಿ) ಚೇರ್ಮನ್ ಹುದ್ದೆ ಒಲಿದು ಬಂತು. ಆದರೆ, ಆ ನಿಗಮ ಮುಚ್ಚುವ ಸ್ಥಿತಿಯಲ್ಲಿತ್ತು. 120-150 ಕೋಟಿ ರೂ. ಇದ್ದ ನಿಗಮದ ಠೇವಣಿ 30-35 ಕೋಟಿ ರೂ.ಗೆ ಇಳಿದಿತ್ತು. ನಾನು ಅಧಿಕಾರ ಹಸ್ತಾಂತರ ಮಾಡುವ ವೇಳೆ 141 ಕೋಟಿ ರೂ.ಗೆ ಏರಿಸಿ, ನಿಗಮವನ್ನು ನಷ್ಟದಿಂದ ಲಾಭಕ್ಕೆ ತಂದು ಅಧಿಕಾರದಿಂದ ನಿರ್ಗಮಿಸಿದೆ. ಇದು ಸಾಧ್ಯವಾಗಿದ್ದು ಅಧಿಕಾರಿಗಳ ಸಹಕಾರ ಮತ್ತು ಹಿರಿಯ ಪತ್ರಕರ್ತರ ಸಲಹೆಯಿಂದ. ಹಂತಹಂತವಾಗಿ ಸುಧಾರಣೆಯನ್ನು ಸಾಕಾರಗೊಳಿಸಿದೆವು. ದೊರೆತ ಅಲ್ಪ ಅವಧಿಯಲ್ಲೇ ಇದನ್ನು ಸಾಧಿಸಿಯಾಗಿತ್ತು. ನಷ್ಟದಲ್ಲಿದ್ದ ನಿಗಮದ ಅಧ್ಯಕ್ಷ ಸ್ಥಾನ ನನಗೆ ಬೇಡ ಎಂದು ಒಂದು ವೇಳೆ ಹಿಂದೆ ಸರಿದಿದ್ದರೆ, ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಯಶಸ್ಸು ಸಿಗುತ್ತದೆ ಎಂಬ ಬಲವಾದ ನಂಬಿಕೆ ನನ್ನದು. ಹಾಗಾಗಿಯೇ, ದೇವರು ನನ್ನ ಕೈಹಿಡಿದು ನಡೆಸಿಕೊಂಡು ಹೋಗುತ್ತಿದ್ದಾನೆ ಎನಿಸುತ್ತದೆ.
ವಿಧಾನ ಪರಿಷತ್ ಸದಸ್ಯೆಯಾಗಿ ಸದನ ಪ್ರವೇಶಿಸುವಾಗ ನಾನು ಗರ್ಭಿಣಿ. ಅಲ್ಲಿ ಪಕ್ಷಾತೀತವಾಗಿ ಎಲ್ಲ ಹಿರಿಯ ನಾಯಕರಿಂದ ಸದನದ ನಡಾವಳಿಯನ್ನು ಕಲಿತೆ. ಮಹಿಳೆಯರ ಹಲವು ವಿಷಯಗಳ ಬಗ್ಗೆ ದನಿ ಎತ್ತಿದೆ. ಒಟ್ಟಾರೆ, ನೋವಿಗೆ ಹೆದರಿ ಚಿತ್ರರಂಗ ತೊರೆದಿದ್ದರೆ ಅಥವಾ ರಾಜಕೀಯದಿಂದ ದೂರವಾಗಿದ್ದರೆ ಇಷ್ಟೆಲ್ಲ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ರಾತ್ರಿ-ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿ ಆಗಲು ಖಂಡಿತ ಸಾಧ್ಯವಿಲ್ಲ. ಈ ದಾರಿಯಲ್ಲಿ ಸವಾಲುಗಳಿವೆ, ಕನಸುಗಳಿವೆ. ನಿರಂತರ ಪರಿಶ್ರಮವಿದೆ. ಅಷ್ಟಕ್ಕೂ, ದಿಢೀರ್ ಯಶಸ್ಸು, ದಿಢೀರ್ ಹಣ ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದುದ್ದಕ್ಕೂ ಕಲಿಕೆ ಇರುತ್ತದೆ. ಪ್ರತಿ ದಿನವೂ ನಮಗೆ ಜೀವನ ಹೊಸ ಪಾಠ ಕಲಿಸುತ್ತದೆ. ಅದನ್ನು ಕಲಿಯುತ್ತ, ಜೀವನ ರೂಪಿಸಿಕೊಳ್ಳೋಣ, ಶ್ರೇಯಸ್ಸಿನತ್ತ ಸಾಗೋಣ.
(ಲೇಖಕರು ಹಿರಿಯ ನಟಿ, ವಿಧಾನ ಪರಿಷತ್ ಮಾಜಿ ಸದಸ್ಯರು)