

ವಿಶ್ವಸಂಸ್ಥೆ ಪ್ರಕಾರ 2025ರ ಅಂತ್ಯದೊಳಗೆ ಭಾರತ ವಿಶ್ವದಲ್ಲೇ ಗರಿಷ್ಠ ಜನಸಂಖ್ಯೆ ಹೊಂದಲಿದೆ. ಇದು ಖುಷಿಕೊಡುವ ವಿಚಾರವೋ? ಆತಂಕ ತಂದೊಡ್ಡುವ ಬೆಳವಣಿಗೆಯೋ ಬೇರೆ ವಿಚಾರ. ಆದರೆ ಅದೇ ವರದಿಯಲ್ಲಿ ದೇಶದ ಒಟ್ಟು ಫಲವತ್ತತೆ ದರ (fertility rate) ತೀರಾ ಕುಸಿತ ಕಾಣುತ್ತದೆ ಎಂಬ ಅಂಶ ಆತಂಕದ ಜತೆಗೆ ಆದ್ಯತೆ ಕೊಡಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದೆ. ಈ ಸಮಸ್ಯೆಯ ಗಂಭೀರತೆ ಕುರಿತು ಬೆಳಕು ಚೆಲ್ಲುವ ವರದಿ ಇಲ್ಲಿದೆ.
ಜನಸಂಖ್ಯೆಯಲ್ಲಿ ಅಗ್ರಸ್ಥಾನದತ್ತ ಮುನ್ನುಗುತ್ತಿರುವ ಭಾರತ ಮಹಿಳೆಯರ ಸಮಸ್ಯೆಯ ಭಾರ ಹೊರುವ ಸಂದರ್ಭ ಎದುರಾಗಿದೆ. ವಿಶ್ವಸಂಸ್ಥೆ ವರದಿ ಪ್ರಕಾರ ಭಾರತೀಯ ಮಹಿಳೆಯರ ಫಲವತ್ತತೆ ಪ್ರಮಾಣ ಸರಾಸರಿ 2.1ರಿಂದ 1.9ಕ್ಕೆ ಇಳಿದಿದೆ. ಅಂದರೆ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯ ಪ್ರಮಾಣ ಕುಸಿಯಲಾರಂಭಿಸಿದೆ. ಭವಿಷ್ಯದಲ್ಲಿ ಈ ಪ್ರಮಾಣ ಇನ್ನಷ್ಟು ಕುಸಿಯಬಹುದೆಂಬ ವರದಿ ತಲ್ಲಣ ಮೂಡಿಸಿದೆ. ದೇಶವು ಆರ್ಥಿಕ ಬೆಳವಣಿಗೆ ಜತೆ ಜತೆಯಲ್ಲೇ ಕೈಗಾರಿಕಾ ಕ್ರಾಂತಿ ಜತೆಗೆ ನಗರೀಕರಣದಲ್ಲಿ ದಿನೇ ದಿನೆ ಹೆಜ್ಜೆ ವಿಸ್ತರಿಸಿಕೊಳ್ಳುತ್ತಿದೆ. ಜತೆಗೆ ಶೈಕ್ಷಣಿಕವಾಗಿಯೂ ಮುನ್ನಡೆದು ಸಂಪದ್ಭರಿತವಾಗುತ್ತಿದೆ. ಇಂತಹ ಅಭಿವೃದ್ಧಿ ಪರ್ವದ ನಡುವೆಯೇ ಫಲವತ್ತತೆ ದರ ಇಳಿಕೆಯಾಗುತ್ತಿ ರುವುದು ದೇಶ ಎತ್ತ ಸಾಗುತ್ತಿದೆ ಎಂಬ ವಾಸ್ತವಕ್ಕೆ ಕೈಗನ್ನಡಿ ಆಗಿದೆ.
ಫಲವತ್ತತೆ ಕುಸಿತಕ್ಕೆ ಮಹಿಳೆಯರ ವಯಸ್ಸು ಪ್ರಾಥಮಿಕ ಅಂಶ. ವಿಶೇಷವಾಗಿ 35ರ ಪ್ರಾಯದ ನಂತರ ಮಹಿಳೆಯರಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಆ ನಂತರ ಮಕ್ಕಳು ಜನಿಸುವುದಿಲ್ಲವೆಂದಲ್ಲ. ಹಾಗೆಂದು ಫಲವತ್ತತೆ ಪ್ರಕ್ರಿಯೆ ತ್ವರಿತವಾಗಿ ನಿಲ್ಲುವುದಿಲ್ಲ. ನಿಧಾನವಾಗಿ ಕುಂಠಿತವಾಗುತ್ತಾ ಹೋಗುತ್ತದೆ. 40ರ ವಯಸ್ಸಿನವರೆಗೂ ಜನ್ಮ ನೀಡಲು ಸಾಧ್ಯವಿದೆ. ಆದರೆ ಗರ್ಭಧಾರಣೆ ಬೇಕೆಂದುಕೊಂಡಂತೆ ಧರಿಸಲು ಸಾಧ್ಯವಿಲ್ಲ. ಏಕೆಂದರೆ ಮಹಿಳೆಯರ ಫಲವತ್ತತೆಗೆ ಬೇಕಾದ ಅಂಡಾಣುಗಳ ಪ್ರಮಾಣ ಮತ್ತು ಗುಣಮಟ್ಟವೂ ವಯಸ್ಸಿನ ಸಂಬಂಧವನ್ನು ಹೊಂದಿದೆ. ಆದ್ದರಿಂದ ವಯಸ್ಸು ಮೀರಿದಾಗ ಗರ್ಭಧಾರಣೆ ಎನ್ನುವುದು ಒಂದು ಸವಾಲಿನ ಕೆಲಸವಾಗುತ್ತದೆ. ಮಹಿಳೆಯ ಅಂಡಾಶಯದ ವಯಸ್ಸು ಜೊತೆಗೆ ದುರ್ಬಲತೆಯಿಂದ ಅಂಡಾಣುಗಳ ನಷ್ಟದೊಂದಿಗೆ ಗರ್ಭಧರಿಸಲು ಕಷ್ಟವಾಗಿ ಗರ್ಭಪಾತ ಮತ್ತು ಇನ್ನಿತರ ಗರ್ಭಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಂಡುಬರುತ್ತದೆ.
ನಮ್ಮ ದೇಶದ ವೈದ್ಯಕೀಯ ಚಿಕಿತ್ಸೆ ಉತ್ತಮ ಗುಣಮಟ್ಟದ್ದಾಗಿದ್ದು, ದಿನೇ ದಿನೆ ಇನ್ನಷ್ಟು ಬೆಳವಣಿಗೆ ಕಾಣುತ್ತಲೇ ಇದೆ. ಆದರೆ ಅದೊಂದೇ ಮಹಿಳೆಯರ ಫಲವತ್ತತೆ ನಿರ್ಣಯಿಸುತ್ತಿಲ್ಲ. ಇತರ ಹಲವಾರು ಅಂಶಗಳು ಇಲ್ಲಿ ಪರಿಣಾಮ ಬೀರುತ್ತವೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕ್ಷಮತೆಯ ಏರುಪೇರು ಅಂದರೆ ವಯಸ್ಸು, ಗರ್ಭ ನಿರೋಧಕಗಳು, ಹಾರ್ವೇನ್ ಮದ್ದುಗಳು, ಅತಿಯಾದ ದೈಹಿಕ ವ್ಯಾಯಾಮ, ಬಂಜೆತನವೂ ಸೇರಿರುತ್ತವೆ. ಅದಲ್ಲದೆ ಲಿಂಗ ಅಸಮಾನತೆ, ಪರಸ್ಪರ ಸಹಬಾಳ್ವೆಯಿರದಿರುವುದು, ಕುಡಿತ, ಸಿಗರೇಟ್, ಆಲ್ಕೋಹಾಲ್ ಸೇವನೆ, ಅತಿಯಾದ ಕಲಬೆರಕೆ, ವಿಷಯುಕ್ತ ಜಂಕ್ ಆಹಾರ ಸೇವನೆ, ಹೆಚ್ಚಿದ ಆಹಾರ ಉತ್ಪಾದನೆ, ಪರಿಸರ ತ್ಯಾಜ್ಯಗಳು ಕೂಡ ಫಲವತ್ತತೆ ಕುಸಿತಕ್ಕೆ ಕಾರಣವಾಗುತ್ತದೆ.
ಶಿಕ್ಷಣದ ವಿಷಯದಲ್ಲಿ ನೋಡಿದರೆ ಹೆಚ್ಚು ಹೆಚ್ಚು ಓದಿ ಬುದ್ಧಿವಂತರೆನ್ನಿಸಿಕೊಂಡವರು ಒಂದು ತಮ್ಮ ಓದು, ಉದ್ಯೋಗದಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಮಹಿಳೆಯರು ವಿದ್ಯಾವಂತರಾಗಿ ತಮ್ಮ ಕಾಲ ಮೇಲೆ ತಾವು ನಿಲ್ಲುವ ಭರವಸೆ ಹೊತ್ತವರಾಗಿದ್ದಾರೆ, ಕಾರ್ವಿುಕ ಮಾರುಕಟ್ಟೆ ಲಭಿಸುತ್ತಿದೆ. ಅಂಥವರಲ್ಲಿ ಹಲವರು ತಮ್ಮ ಸ್ವಂತ ಜೀವನಪೀಳಿಗೆ ಕುರಿತಾಗಿ ಯೋಚಿಸದೆ, ವಯಸ್ಸು ಮೀರುವ ಹಂತದಲ್ಲಿದ್ದರೂ ಮದುವೆಯಾಗಲಿ, ಮಕ್ಕಳನ್ನು ಹೊಂದುವ ಯೋಜನೆಯನ್ನು ರೂಪಿಸಿಕೊಳ್ಳದೆ ಇರುವುದು ದುರದೃಷ್ಟಕರ ಸಂಗತಿ. ಇಲ್ಲಿ ತಮ್ಮ ಶಿಕ್ಷಣ, ವೃತ್ತಿ, ಸೌಂದರ್ಯ, ಆರೋಗ್ಯವೆಲ್ಲದರ ಏರುಪೇರಾಗುವುದೆಂಬ ಸಾಮಾಜಿಕ ಮತ್ತು ಶೈಕ್ಷಣಿಕ ಧೋರಣೆಯ ಬೇಜವಾಬ್ದಾರಿತನ ಎದ್ದುನಿಲ್ಲುತ್ತಿದೆ. ಆದರೆ ಕಡಿಮೆ ಶಿಕ್ಷಣ, ಉದ್ಯೋಗದ ಮಟ್ಟವು ಕಡಿಮೆಯಿದ್ದಂತಹ ಅಭಿವೃದ್ಧಿ ಕಾಣಬೇಕಿರುವ ಪ್ರದೇಶಗಳಲ್ಲಿ ಫಲವ ತ್ತತೆ ದರ ಹೆಚ್ಚು ಕಂಡುಬರುತ್ತದೆ.
ಈಗ ಮದುವೆ ಜತೆಗೆ ಮದುವೆಯಲ್ಲದ ಒಟ್ಟಿಗೆ ಬಾಳುವಿಕೆ (ಲಿವಿಂಗ್ ಟುಗೆದರ್) ಕೂಡಾ ಟ್ರೆಂಡ್ ಆಗಿಬಿಟ್ಟಿದೆ. ಇದು ಮದುವೆಗೂ ಮುನ್ನ ಮಾಡುವಂತಹ ಪರೀಕ್ಷೆಯಂತೆಯೇ.. ಯುವಕ ಮತ್ತು ಯುವತಿಯ ನಡುವಿನ ಪರಸ್ಪರ ಹೊಂದಾಣಿಕೆ ಮತ್ತು ಬದ್ಧತೆಯನ್ನು ಅವರವರೇ ಕಂಡುಕೊಳ್ಳಲಿರುವ ದಾರಿ! ಇಲ್ಲಿ ಕೆಲವೊಮ್ಮೆ ಗರ್ಭಧರಿಸಲು ತಯಾರಾದಾಗ ಅಥವಾ ಗರ್ಭಧಾರಣೆ ನಂತರ ಲಿವಿಂಗ್ ಟುಗೆದರ್ ಲೈಫ್ನಿಂದ ಮದುವೆಯಾಗಿ ಬಾಳುವ ಸ್ಥಿತಿಗೂ ಬರಬಹುದೆಂಬ ಕಲ್ಪನೆಯಿದೆ. ಆದರೆ ಈ ವರ್ಗದವರಲ್ಲಿ ಫಲವತ್ತತೆ ಪ್ರಮಾಣ ಮದುವೆಯಾದ ದಂಪತಿಗಿಂತ ಕಡಿಮೆಯೆನ್ನಬಹುದು. ಹಲವು ದೇಶಗಳಲ್ಲಿಯೂ ಫಲವಂತಿಕೆ ದರದ ಪ್ರಮಾಣ ಕಡಿಮೆಯಾಗುತ್ತಿರುವುದರೊಂದಿಗೆ ಇದೊಂದು ಜಾಗತಿಕ ಪ್ರವೃತ್ತಿ (Global trend) ಆಗುತ್ತಿದೆ.
ಭಾರತೀಯರ ಜೀವಿತಾವಧಿ ಸರಾಸರಿಯಾಗಿ ಪುರುಷರಲ್ಲಿ ವಯಸ್ಸು 71, ಮಹಿಳೆಯರಲ್ಲಿ 74 ಕ್ಕೆ ಏರಿಕೆಯಾಗಿದೆಯಂತೆ. ವಯಸ್ಸು 65ರ ನಂತರ ದುಡಿಯುವ ವರ್ಗ ಶೇ.7 ರಷ್ಟಿದೆ. ಇದು ಮುಂದಿನ ವರ್ಷಗಳಲ್ಲಿ ಹೆಚ್ಚಾಗಬಹುದು. ಯುವಜನತೆಯ ವರ್ಗ ಸ್ಥಿರವಾಗಿದೆ ಏಕೆಂದರೆ ಫಲವಂತಿಕೆಯಿಲ್ಲ, ಇದರಿಂದ ವಯಸ್ಸಾದವರ ವರ್ಗ ಮಾತ್ರ ಸದ್ಯಕ್ಕೆ ಏರುತ್ತಲಿದೆ. ಆಧುನಿಕ ಭಾರತದಲ್ಲಿ ಮಹಿಳೆಯರಿಗೂ ಪ್ರಮುಖ ಸ್ಥಾನವಿರುವುದರಿಂದ ಹೆಚ್ಚಿನ ಹಕ್ಕುಗಳ ಆಯ್ಕೆಯೂ ಸೇರಿವೆ. ಮಹಿಳಾ ಸಬಲೀಕರಣದೊಂದಿಗೆ ಗರ್ಭಧಾರಣೆ ಕುರಿತ ಸ್ವಾತಂತ್ರ್ಯವೂ ಸೇರಿದೆ. ’ನಾವಿಬ್ಬರು ನಮಗಿಬ್ಬರು’ ಎಂಬ ಕಾಲ ಹೋಗಿ ಈಗ ’ನಾವಿಬ್ಬರೂ ನಮಗೊಬ್ಬರೇ’ ಎಂಬ ಸಂದರ್ಭ ಕಾಣುತ್ತಿದ್ದೇವೆ.
ಇದರಿಂದಾಗಿ ಮುಂದಿನ ಸಮಾಜದಲ್ಲಿ ಯುವಜನಾಂಗ ಮತ್ತು ವಯಸ್ಕರ ನಡುವೆ ಅಂತರ ಬರಲಿದೆ. ಸದ್ಯಕ್ಕೆ ದೇಶದಲ್ಲಿ ಪ್ರತಿ ಮಹಿಳೆ ಸರಾಸರಿ 2 ಮಕ್ಕಳನ್ನು ಹೊಂದಿರುವ ವರದಿಯಿದೆ. ಹಾಗೆಯೇ ಮುಂದಿನ ಸಮಾಜದ ಸ್ಥಿತಿಗತಿಗಳು ಫಲವತ್ತತೆ ಪ್ರಮಾಣದ ಕುರಿತಾಗಿ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳ ಸಮಗ್ರ ವಿಧಾನಗಳನ್ನು ಉದ್ದೇಶಿಸುತ್ತದೆ.