ಅತ್ತೆ ಮಾಡಿದ ಪ್ರಮಾದ

ವಿಜಯವಾಣಿ (3)
Published on

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ಉತ್ತರಾಖಂಡದ ನಿವಾಸಿ ರಾಜೇಶ್ (28) ತನ್ನ ಊರಿನಲ್ಲಿ ಪದವಿ ಮುಗಿಸಿದ ನಂತರ ಕೆಲ ವರ್ಷಗಳು ಅಲ್ಲಿಯೇ ಸಣ್ಣಪುಟ್ಟ ನೌಕರಿಗಳನ್ನು ಮಾಡಿದ. ಉತ್ತಮ ನೌಕರಿ ಹುಡುಕಿಕೊಂಡು ಆತ ದೆಹಲಿಗೆ ಬಂದಾಗ ಹೊಸದಾಗಿ ತೆರೆಯಲಾಗಿದ್ದ ಬೃಹತ್ ಮಾಲ್​ನಲ್ಲಿ ಅವನಿಗೆ ಸೂಪರ್​ವೈಸರ್ ಕೆಲಸ ಸಿಕ್ಕಿತು. ಸ್ಪುರದ್ರೂಪಿಯಾಗಿದ್ದು ಉತ್ತಮವಾಗಿ ಇಂಗ್ಲಿಷ್ ಮಾತನಾಡಬಲ್ಲವನಾಗಿದ್ದ ರಾಜೇಶ್ ಬೇಗ ಗ್ರಾಹಕರ ಮತ್ತು ಮಾಲೀಕರ ಕೃಪಾಕಟಾಕ್ಷಕ್ಕೆ ಪಾತ್ರನಾದ. ಅವನಿದ್ದ ಅಂಗಡಿಯಲ್ಲಿಯೇ ಬಬಿತಾ ಎಂಬ 26 ವರ್ಷದ ಯುವತಿ ಕೆಲಸ ಮಾಡುತ್ತಿದ್ದಳು. ಆಕೆ ಉತ್ತರ ಪ್ರದೇಶದ ಜಿಲ್ಲೆಯೊಂದರವಳಾಗಿದ್ದಳು. ಪಿಯುಸಿ ಪಾಸಾಗಿದ್ದು, ಆಕೆಯೂ ಒಬ್ಬಂಟಿಯಾಗಿಯೇ ದೆಹಲಿಗೆ ಬಂದು ಸೇಲ್ಸ್​ಗರ್ಲ್ ಕೆಲಸಕ್ಕೆ ಸೇರಿದ್ದಳು. ಆಕರ್ಷಕ ಮೈಕಟ್ಟನ್ನು ಹೊಂದಿ ಸದಾಕಾಲ ನಗುನಗುತ್ತಲೇ ಇರುತ್ತಿದ್ದ ಬಬಿತಾಳನ್ನು ಕಂಡಕೂಡಲೇ ರಾಜೇಶ್​ನಿಗೆ ಅವಳ ಮೇಲೆ ಪ್ರೇಮಾಂಕುರವಾಯಿತು. ತಡಮಾಡದೆ ಆತ ಅವಳಿಗೆ ತನ್ನ ಪ್ರೇಮನಿವೇದನೆಯನ್ನು ಮಾಡಿದ.

‘ನಾನು ಬೇರೆ ಜಾತಿಗೆ ಸೇರಿದವಳು, ನಿನ್ನ ಮನೆಯಲ್ಲಿ ಈ ಸಂಬಂಧಕ್ಕೆ ಒಪ್ಪುತ್ತಾರೆಯೋ ಇಲ್ಲವೋ?’ ಎಂದು ಬಬಿತಾ ಆತಂಕ ವ್ಯಕ್ತಪಡಿಸಿದಳು. ‘ಪ್ರೇಮಕ್ಕೆ ಜಾತಿ ಅಡ್ಡಿಬರುವುದಿಲ್ಲ, ನಾನು ನನ್ನ ತಂದೆ-ತಾಯಿಯನ್ನು ಒಪ್ಪಿಸುವೆ, ನೀನೂ ಹಾಗೆಯೇ ಮಾಡು’ ಎಂದ ರಾಜೇಶ್. ಆಕೆ ಒಪ್ಪಿದಳು. ತಮ್ಮ ಸಂಬಂಧವನ್ನು ಕುಟುಂಬದವರಿಂದ ಕೆಲಕಾಲ ಗುಟ್ಟಾಗಿಯೇ ಇಡಲು ಇಬ್ಬರೂ ನಿರ್ಧರಿಸಿದರು. ಎರಡು ತಿಂಗಳ ನಂತರ ಮಾಲ್ ಇದ್ದ ಬಡಾವಣೆಯಲ್ಲಿಯೇ ಒಂದು ಪುಟ್ಟ ಮನೆಯನ್ನು ರಾಜೇಶ್ ಮತ್ತು ಬಬಿತಾ ಬಾಡಿಗೆಗೆ ಪಡೆದು ಒಟ್ಟಾಗಿ ವಾಸಿಸತೊಡಗಿದರು. ಇದರ ಕಾರಣದಿಂದ ಬಬಿತಾ ಗರ್ಭಿಣಿಯಾದಳು. ಬಬಿತಾ ರಾಜೇಶ್​ನಿಗೆ ಈ ವಿಷಯವನ್ನು ತಿಳಿಸಿದಾಗ, ‘ನಾವಿಬ್ಬರೂ ನಮ್ಮ ಲಗ್ನಕ್ಕೆ ಇನ್ನೂವರೆಗೆ ನಮ್ಮ ತಂದೆ-ತಾಯಿಯ ಅನುಮತಿ ಪಡೆದಿಲ್ಲ. ಮದುವೆಗೆ ಮುಂಚೆಯೇ ನೀನು ಗರ್ಭಿಣಿಯಾದೆಯೆಂದು ನನ್ನ ತಂದೆಗೆ ತಿಳಿದರೆ ಖಂಡಿತ ಅವರು ಈ ಸಂಬಂಧಕ್ಕೆ ಒಪ್ಪುವುದಿಲ್ಲ, ಜಾತಿಯ ಕಾರಣವನ್ನೂ ಕೊಟ್ಟು ನಿನ್ನನ್ನು ಬಿಟ್ಟುಬಿಡಲು ನನಗೆ ಹೇಳುತ್ತಾರೆ.

ಹೀಗಾಗಿ ಸದ್ಯ ನೀನು ಗರ್ಭಪಾತ ಮಾಡಿಸಿಕೋ, ಒಂದು ವರ್ಷದ ನಂತರ ನನ್ನ ತಂದೆ-ತಾಯಿಯನ್ನು ಒಪ್ಪಿಸುವೆ. ನಂತರ ಇಬ್ಬರೂ ಮದುವೆಯಾಗೋಣ’ ಎಂದ. ಬಬಿತಾ ಇದಕ್ಕೊಪ್ಪಿದಾಗ ಆತನೇ ಅವಳನ್ನು ಖಾಸಗಿ ನರ್ಸಿಂಗ್ ಹೋಂ ಒಂದಕ್ಕೆ ಕರೆದೊಯ್ದು ಅವಳಿಗೆ ಗರ್ಭಪಾತ ಮಾಡಿಸಿದ. ತನ್ನನ್ನು ಬೇಗನೇ ಮದುವೆಯಾಗು ಎಂದು ಮುಂದಿನ ದಿನಗಳಲ್ಲಿ ಬಬಿತಾ ರಾಜೇಶ್​ನನ್ನು ಪೀಡಿಸತೊಡಗಿದಳು. ಆದರೆ ಆತ ಒಂದಲ್ಲ ಒಂದು ಕಾರಣವನ್ನು ನೀಡಿ ಕಾಲಾವಕಾಶ ಕೇಳುತ್ತಿದ್ದ. ಆರು ತಿಂಗಳಾದ ನಂತರ ರಾಜೇಶ್​ನ ವರ್ತನೆಯಿಂದ ಬೇಸತ್ತ ಬಬಿತಾ ತನ್ನ ತಾಯಿಗೆ ನಡೆದ ವಿಷಯ ತಿಳಿಸಿದಳು. ಆಕೆಯ ಸೂಚನೆ ಮೇರೆಗೆ ಸಮೀಪದ ಪೊಲೀಸ್ ಠಾಣೆಗೆ ಹೋಗಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ರಾಜೇಶ್ ಸಂಭೋಗ ನಡೆಸಿದ್ದಾನೆ ಎಂದು ದೂರು ನೀಡಿದಳು. ಇದಲ್ಲದೆ ತಾನು ಅಬಾರ್ಷನ್ ಮಾಡಿಸಿಕೊಂಡ ಬಗ್ಗೆ ದಾಖಲೆಗಳನ್ನು ನೀಡಿದಳು. ಅವಳ ದೂರಿನ ಮೇರೆಗೆ ರಾಜೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಯಿತು. ಪೊಲೀಸರು ರಾಜೇಶ್​ನನ್ನು ಬಂಧಿಸಿ ಅವನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ತನಿಖೆ ಮುಂದುವರಿಸಿದರು.

ಜೈಲಿನಿಂದಲೇ ತನಿಖಾಧಿಕಾರಿಯನ್ನು ಸಂರ್ಪಸಿದ ರಾಜೇಶ್, ತನ್ನ ವಿರುದ್ಧದ ಪ್ರಕರಣ ಕೈಬಿಟ್ಟರೆ ತಾನು ಬಬಿತಾಳನ್ನು ಪೊಲೀಸರ ಸಮ್ಮುಖದಲ್ಲಿಯೇ ಮದುವೆಯಾಗುವುದಾಗಿ ಹೇಳಿದ. ಬಬಿತಾ ಮತ್ತು ಅವಳ ಪಾಲಕರನ್ನು ಠಾಣೆಗೆ ಕರೆಸಿದ ಠಾಣಾಧಿಕಾರಿ ರಾಜೇಶ್​ನ ಪ್ರಸ್ತಾವನೆಯನ್ನು ಅವರಿಗೆ ತಿಳಿಸಿದರು. ರಾಜೇಶ್ ಬಬಿತಾಳನ್ನು ಲಗ್ನವಾದರೆ ತಾವು ಪ್ರಕರಣ ಹಿಂಪಡೆಯುವುದಾಗಿ ಅವರೆಲ್ಲರೂ ಹೇಳಿದರು. ರಾಜೇಶ್​ನಿಗೆ ಜಾಮೀನನ್ನೂ ಕೊಡಿಸಿದರು. ಕೆಲವೇ ದಿನಗಳ ತರುವಾಯ ಪೊಲೀಸರ ಮತ್ತು ಬಬಿತಾಳ ಪಾಲಕರ ಸಮ್ಮುಖದಲ್ಲಿ ಇಬ್ಬರ ಮದುವೆಯೂ ನಡೆಯಿತು. ಆನಂತರ ಪೊಲೀಸರು ಬಬಿತಾಳ ಮರುಹೇಳಿಕೆ ದಾಖಲಿಸಿಕೊಂಡು ರಾಜೇಶ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಮುಕ್ತಾಯ ಮಾಡಿದರು.  ಲಗ್ನವಾದ ಕೆಲತಿಂಗಳ ಕಾಲ ಪತಿ-ಪತ್ನಿ ಸಂತಸದಿಂದಲೇ ಜೀವನ ಮಾಡುತ್ತಿದ್ದರು. ಈ ನಡುವೆ ಬಬಿತಾಳ ಪಾಲಕರು ಮಗಳ ಜತೆಗಿರಲು ತಮ್ಮ ಊರಿನಿಂದ ದೆಹಲಿಗೆ ಬಂದರು. ಒಂದು ಕೋಣೆಯ ಮನೆಯಲ್ಲಿದ್ದ ತನ್ನ ಮನೆಯಲ್ಲಿ ಬಬಿತಾಳ ಪಾಲಕರಿಗೂ ಸ್ಥಳ ಮಾಡಿಕೊಡುವುದು ರಾಜೇಶ್​ನಿಗೆ ಕಷ್ಟವಾಯಿತು. ಇದು ಸಾಲದೆಂಬಂತೆ ಗಂಡಹೆಂಡಿರ ಎಲ್ಲ ವ್ಯವಹಾರದಲ್ಲಿಯೂ ಬಬಿತಾಳ ತಾಯಿ ಪುಷ್ಪಾ ಮೂಗು ತೂರಿಸುತ್ತಿದ್ದಳು. ಮಾತುಮಾತಿಗೂ ಅಳಿಯನನ್ನು ಹಂಗಿಸುತ್ತಿದ್ದಳು. ಇದನ್ನು ಸಹಿಸಲಾರದಾದ ರಾಜೇಶ್ ಏನಾದರೂ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ಯೋಚಿಸಿದ.

ಒಂದು ದಿನ ಆತ ಬಬಿತಾಗೆ, ‘ನಮ್ಮ ಮದುವೆಯಾದ ನಂತರ ನಾನು ನಿನ್ನನ್ನು ನನ್ನ ಪಾಲಕರಿಗೆ ಪರಿಚಯ ಮಾಡಿಸಿಲ್ಲ. ನಮ್ಮ ಊರಿಗೆ ಹೋಗೊಣ’ ಎಂದು ಅವಳನ್ನೊಪ್ಪಿಸಿದ. ಮುಂದಿನ ವಾರವೇ ರಾಜೇಶ್ ಬಬಿತಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವಳ ಪಾಲಕರಿಗೆ ಹೇಳಿ ಅವರನ್ನು ತನ್ನ ಮನೆಯಿಂದ ರವಾನಿಸಿದ. ಆನಂತರ ಬಬಿತಾಳಿಗೆ, ‘ನಾವು ಇನ್ನೂವರೆಗೆ ಹನಿಮೂನ್ ಸಹ ಮಾಡಿಲ್ಲ, ಇಲ್ಲೇ ಹತ್ತಿರದಲ್ಲಿರುವ ನೈನಿತಾಲ್​ನಲ್ಲಿ ಒಂದೆರಡು ದಿನಗಳು ಮೋಜುಮಾಡಿ ಆನಂತರ ನನ್ನ ಪಾಲಕರ ಮನೆಗೆ ಹೋಗೋಣ’ ಎಂದು ಹೇಳಿ ಅವಳನ್ನು ಅಲ್ಲಿಗೆ ಕರೆದುಕೊಂಡು ಹೋದ. ಒಂದು ವಾರದ ನಂತರ ಬಬಿತಾಳ ತಾಯಿ ಮಗಳಿಗೆ ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿದೆ ಎಂಬ ಸೂಚನೆ ಪದೇಪದೆ ಬಂದಾಗ ಗಾಬರಿಯಾದ ಆಕೆ ಗಂಡನೊಡನೆ ರಾಜೇಶ್​ನ ಮನೆಗೆ ಬಂದಳು. ಮಗಳು ಎಲ್ಲಿ ಎಂದು ವಿಚಾರಿಸಿದಾಗ, ತನ್ನ ತಾಯಿಯನ್ನು ನೋಡಿಕೊಳ್ಳಲು ಅವಳನ್ನು ಬಿಟ್ಟುಬಂದಿದ್ದೇನೆ ಎಂದ ರಾಜೇಶ್. ಎರಡು ದಿನಗಳ ತರುವಾಯವೂ ಪುಷ್ಪಾಗೆ ಬಬಿತಾಳ ಸಂಪರ್ಕ ಸಿಗಲಿಲ್ಲ. ಆಗ ರಾಜೇಶ್​ನಿಗೆ ತನ್ನ ತಾಯಿಯನ್ನು ಸಂರ್ಪಸಿ ಬಬಿತಾಳ ಜತೆ ತನ್ನನ್ನು ಮಾತನಾಡಿಸಲು ಪುಷ್ಪಾ ಕೋರಿದಳು. ರಾಜೇಶ್ ಹಾರಿಕೆಯ ಉತ್ತರ ಕೊಟ್ಟಾಗ ಅವಳಿಗೆ ಏನೋ ಆಗಬಾರದ್ದು ಅಗಿದೆ ಎಂಬ ಸಂಶಯ ಬಂದಿತು.

ಕೂಡಲೇ ಪುಷ್ಪಾ ತನ್ನ ಗಂಡನೊಡನೆ ಸಮೀಪದ ಪೊಲೀಸ್ ಠಾಣೆಗೆ ಹೋಗಿ ಮಗಳು ಕಾಣೆಯಾಗಿರುವಳೆಂದೂ ತಮಗೆ ಈ ಬಗ್ಗೆ ರಾಜೇಶ್​ನ ಮೇಲೆ ಸಂಶಯವಿರುವುದೆಂದೂ ದೂರು ಕೊಟ್ಟಳು. ದೂರು ದಾಖಲಿಸಿದ ಪೊಲೀಸರು ಬಬಿತಾಳ ಮೊಬೈಲ್​ನ್ನು ಲೊಕೇಷನ್ ಸರ್ಚ್​ಗೆ ಹಾಕಿದರು. ಅದು ನೈನಿತಾಲ್​ನಲ್ಲಿ ಇದ್ದದ್ದು ತಿಳಿಯಿತು. ದೆಹಲಿ ಪೊಲೀಸರು ನೈನಿತಾಲ್ ಪೊಲೀಸರನ್ನು ಸಂರ್ಪಸಿ ಸಹಾಯ ಯಾಚಿಸಿದರು. ನೈನಿತಾಲ್ ಪೊಲೀಸರು ಬಬಿತಾಳಿಗಾಗಿ ಹುಡುಕಾಟ ಆರಂಭಿಸಿದಾಗ ಅವರಿಗೆ ಬಬಿತಾಳ ಮೊಬೈಲ್ ಇದ್ದ ಜಾಗ ರಸ್ತೆಯ ಬದಿಯ ಗುಡ್ಡ ಪ್ರದೇಶದಲ್ಲಿದ್ದದ್ದು ತಿಳಿದು ಬಂದಿತು. ಅಲ್ಲಿ ಶೋಧನೆ ನಡೆಸುವಾಗ ಪೊದೆಯೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದ ಕೇಸರಿ ಬಣ್ಣದ ದುಪಟ್ಟಾ ಕಂಡಿತು. ಅಲ್ಲಿಗೆ ಹೋದಾಗ ಮುಂದೆ ಗುಹೆಯೊಂದಿದ್ದು ಅದರ ಬಾಗಿಲ ಬಳಿ ಒಂದು ಅಸ್ಥಿಪಂಜರ ಕಂಡಿತು. ಅದರ ಮೇಲಿದ್ದ ಬಳೆಗಳು ಮತ್ತು ಸರದಿಂದ ಅದು ಸ್ತ್ರೀಯೊಬ್ಬಳದಿರಬಹುದು ಎಂದು ರ್ತಸಿದ ಪೊಲೀಸರು ಇನ್ನಷ್ಟು ಹುಡುಕಿದಾಗ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿತು.

ಅದರಲ್ಲಿದ್ದ ಸೆಲ್​ಫೋನನ್ನು ಸ್ವಿಚ್ ಆನ್ ಮಾಡಿ ಬಬಿತಾಳ ನಂಬರ್​ಗೆ ಕರೆ ಮಾಡಿದಾಗ ಅದು ರಿಂಗಣಿಸಿತು. ಹೀಗಾಗಿ ಆ ಅಸ್ಥಿಪಂಜರ ಬಬಿತಾಳದೇ ಎಂದು ತೀರ್ವನಿಸಿದ ನೈನಿತಾಲ್ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರು. ದೆಹಲಿ ಪೊಲೀಸರು ಬಬಿತಾಳ ಪಾಲಕರ ಸಂಗಡ ಸ್ಥಳಕ್ಕೆ ಬಂದು ಅಸ್ಥಿಪಂಜರವನ್ನು ಮುಂದಿನ ಪರೀಕ್ಷೆಗೆ ಕಳಿಸಿದರು. ಅಸ್ಥಿಪಂಜರದ ಮೇಲೆ ಸಿಕ್ಕಿದ್ದ ಆಭರಣಗಳು ಬಬಿತಾಳದ್ದೆಂದು ಪುಷ್ಪಾ ಹೇಳಿದಳು. ಏತನ್ಮಧ್ಯೆ ರಾಜೇಶ್ ಪರಾರಿಯಾಗಿದ್ದ. ಒಂದು ತಿಂಗಳ ನಂತರ ಆತ ಪತ್ತೆಯಾದ. ಅವನನ್ನು ಬಂಧಿಸಿ ಅವನನ್ನು ವಿಚಾರಣೆಗೆ ಗುರಿಪಡಿಸಿದಾಗ ಆತ ತಾನೇ ಬಬಿತಾಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ. ‘ನನಗೆ ಬಬಿತಾಳಿಗಿಂತ ಅವಳ ತಾಯಿಯ ಕಾಟವೇ ಜಾಸ್ತಿಯಾಗಿತ್ತು. ನನ್ನ ಎಲ್ಲ ಖಾಸಗಿ ವಿಷಯಗಳಲ್ಲಿಯೂ ತಲೆಹಾಕಿ ಏನಾದರೂ ಒಂದು ಕೊಂಕನ್ನು ತೆಗೆಯುತ್ತಿದ್ದಳು. ನಿನ್ನ ತಾಯಿಯನ್ನು ಅವರ ಊರಿಗೆ ವಾಪಸ್ ಕಳಿಸು, ಇಲ್ಲವೇ ನಮ್ಮ ವ್ಯವಹಾರದಲ್ಲಿ ಕೈಹಾಕಬಾರದೆಂದು ತಿಳಿಸೆಂದು ಬಬಿತಾಳನ್ನು ನಾನು ಸಾಕಷ್ಟು ಬಾರಿ ಕೇಳಿದೆ. ಆದರೆ ಅವಳು ತನ್ನ ಅಮ್ಮನನ್ನೇ ಸಮರ್ಥಿಸಿಕೊಳ್ಳುತ್ತಿದ್ದಳು.

ನನಗೆ ಜೀವನ ಮಾಡುವುದೇ ದುಸ್ತರವಾಯಿತು. ಬಬಿತಾಳಿಗೆ ವಿಚ್ಛೇದನ ಕೊಡಬೇಕೆಂದು ಯೋಚಿಸಿದೆ. ಆದರೆ ಅದರಿಂದ ನನಗೆ ಹೆಚ್ಚು ಖರ್ಚು ಬರುತ್ತದೆ ಎಂದೆನಿಸಿತು. ನನ್ನ ಎಲ್ಲ ದುಃಖಗಳಿಗೆ ಮೂಲಕಾರಣವಾದ ಬಬಿತಾಳನ್ನೇ ಕೊಂದು ನನ್ನ ತಂದೆ-ತಾಯಿ ಗೊತ್ತುಮಾಡುವ ಒಳ್ಳೆಯ ಮನೆತನದ ಹೆಣ್ಣನ್ನು ಮದುವೆಯಾಗುವುದು ಒಳ್ಳೆಯದು ಎಂದು ನಿಶ್ಚಯಿಸಿದೆ. ಅವಳನ್ನು ನೈನಿತಾಲ್​ಗೆ ಕರೆದುಕೊಂಡು ಹೋದಾಗ ರಸ್ತೆಯ ಬದಿಯಲ್ಲಿ ಗುಹೆಯೊಂದನ್ನು ಕಂಡೆ. ಇಲ್ಲಿ ನಾವಿಬ್ಬರು ಲೈಂಗಿಕ ಕ್ರಿಯೆ ನಡೆಸಿದರೆ ಥ್ರಿಲ್ಲಿಂಗ್ ಆಗಿರುತ್ತದೆ ಬಾ ಎಂದು ಅವಳನ್ನು ಗುಹೆಯೊಳಗೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ. ಬಬಿತಾ ಮೇಲಕ್ಕೇಳುವಷ್ಟರಲ್ಲಿ ಅವಳ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ದೆಹಲಿಗೆ ಮರಳಿದೆ’ ಎಂದು ತಪ್ಪೊಪ್ಪಿಕೊಂಡ. ರಾಜೇಶ್​ನ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಆರೋಪದ ಮೇಲೆ ನ್ಯಾಯಾಧೀಶರು ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.

ತಮ್ಮ ಮಕ್ಕಳ ಜೀವನದಲ್ಲಿ ಪಾಲಕರು ವಿನಾಕಾರಣ ಹಸ್ತಕ್ಷೇಪ ಮಾಡಿ ಅವರಿಗೆ ಬೇಡದ ಸಲಹೆ-ಸೂಚನೆ ಕೊಡುವುದರಿಂದ ಆಗುವ ಅಪಾಯವನ್ನು ಈ ಘಟನೆ ನಿರೂಪಿಸಿದೆ. ತಾನು ರೇಪ್ ಮಾಡಿದ್ದ ಯುವತಿಯನ್ನು ಲಗ್ನವಾಗಿ ಸಮಸ್ಯೆಯಿಲ್ಲದ ಜೀವನ ನಡೆಸುತ್ತಿದ್ದ ರಾಜೇಶ್ ಕೊಲೆಗಾರನಾಗಲು ಪುಷ್ಪಾಳೇ ಕಾರಣವೇ? ‘ಯಾವುದಾದರೂ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಬೇಕೆಂದಿದ್ದರೆ ಆ ವ್ಯಕ್ತಿಯ ಜೀವನದಿಂದ ಹೊರಗಿರು’ ಎನ್ನುತ್ತಾನೆ ಅಮೆರಿಕದ ನಟ ಡೇನ್ ಕುಕ್. ಇದನ್ನು ಪುಷ್ಪಾ ಅರಿಯಬೇಕಾಗಿತ್ತು.

ನಿಮ್ಮ ಪ್ರೀತಿಗೆ ಧನ್ಯವಾದ

ವಿಜಯವಾಣಿಯಲ್ಲಿ ‘ಆ ಕ್ಷಣ’ ಅಂಕಣ ಆರಂಭವಾದದ್ದು 2019ರ ಜ. 19ರಂದು. ಇಂದಿಗೆ ಸರಿಯಾಗಿ ಆರು ವರ್ಷವಾಯಿತು. 3 ವರ್ಷಕ್ಕೆ ಮುಕ್ತಾಯ ಮಾಡಬೇಕು ಎಂದುಕೊಂಡಿದ್ದರೂ, ಪ್ರತಿ ವಾರ ಹತ್ತಾರು ಓದುಗರು ಕೊಡುತ್ತಿದ್ದ ಪ್ರತಿಕ್ರಿಯೆಯ ಕಾರಣದಿಂದ ಇಷ್ಟು ಕಾಲ ಬರೆಯುವಂತಾಯಿತು. ಆದರೆ ಆಲ್ ಗುಡ್ ಥಿಂಗ್ಸ್ ಮಸ್ಟ್ ಕಮ್ ಟು ಆನ್ ಎಂಡ್ ಅಲ್ಲವೇ? ಹೀಗಾಗಿ ಈ ಅಂಕಣವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ನೀವೆಲ್ಲರೂ ನೀಡಿರುವ ಬೆಂಬಲಕ್ಕೆ ನಾನು ಆಭಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net