ಏಕಶಿಲಾ ಗೊಮ್ಮಟ ವಿರಾಟರೂಪ

untitled-design-5-6908ed8aace15
Published on

ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳವು ವಿಶ್ವವಿಖ್ಯಾತ ಜೈನರ ಯಾತ್ರಾಸ್ಥಳ. ಇಲ್ಲಿನ ದೊಡ್ಡ ಬೆಟ್ಟ ವಿಂಧ್ಯಗಿರಿಯ ತುತ್ತತುದಿಯಲ್ಲಿ ಏಕಶಿಲೆಯಲ್ಲಿ ಕೆತ್ತಿದ ಬಾಹುಬಲಿಯ 58 ಅಡಿ ಎತ್ತರದ ಭವ್ಯ ಮೂರ್ತಿ ಜನಾಕರ್ಷಣೆಯ ಕೇಂದ್ರಬಿಂದು. ಬಾಹುಬಲಿಯ ಸುಂದರ ಶಿಲಾಮೂರ್ತಿಯು ಉತ್ತರಾಭಿಮುಖವಾಗಿ ನಿಂತಿದ್ದು, ಪ್ರತಿಮಾ ಯೋಗವನ್ನು ಧಾರಣ ಮಾಡಿ, ಧ್ಯಾನ ಮಾಡುತ್ತಿರುವ ಭಂಗಿಯಲ್ಲಿದೆ.

ಮುಖಮುದ್ರೆ ಪ್ರಶಾಂತ ಮತ್ತು ವೈರಾಗ್ಯ ಭಾವವನ್ನು ಸೂಸುತ್ತದೆ. ಕಾಲುಗಳ ಕೆಳಗೆ ಕಮಲ ಪೀಠವಿದೆ. ಎರಡೂ ಬದಿಯಲ್ಲಿ ಹುತ್ತಗಳಿದ್ದು, ಬಳ್ಳಿಗಳು ಕೈಕಾಲುಗಳ ಮೇಲೆ ಬಳ್ಳಿ ಹಬ್ಬಿದೆ. ಗಂಗ ಸಾಮ್ರಾಜ್ಯದ ರಾಚಮಲ್ಲನ ದಂಡನಾಯಕನಾಗಿದ್ದ ಚಾವುಂಡರಾಯ ತನ್ನ ತಾಯಿಯ ಆಸೆಯಂತೆ ಕ್ರಿ.ಶ.981ರಲ್ಲಿ ಈ ಮೂರ್ತಿಯನ್ನು ಕೆತ್ತಿಸಿದ ಎಂದು ಇತಿಹಾಸ ಹೇಳುತ್ತದೆ. ಶಿಲಾಮೂರ್ತಿಯ ಸುರಕ್ಷತೆಗಾಗಿ ಹೊಯ್ಸಳ ರಾಜ ವಿಷ್ಣುವರ್ಧನನ ದಂಡಾಧಿಪತಿ ಯಾದ ಗಂಗರಾಜ 1117ರಲ್ಲಿ ಸುತ್ತಲೂ ಭದ್ರವಾದ ಆವರಣ ಆಲಯ ಕಟ್ಟಿಸಿದನೆಂದು ವಿಗ್ರಹದ ಮೇಲಿನ ಶಿಲಾಶಾಸನ ಹೇಳುತ್ತದೆ.

ವೈಶಿಷ್ಟ್ಯಗಳು

ಐವತ್ತೆಂಟು ಅಡಿ ಎತ್ತರವುಳ್ಳ ಈ ಬೃಹನ್ಮೂರ್ತಿಯಲ್ಲಿ ಶಿಲ್ಪಿಯು ಬಾಹುಬಲಿಯ ರೂಪ, ಗುಣ ಸ್ವಭಾವಗಳನ್ನು ಸಹಜವೆಂಬಂತೆ ಹೊಮ್ಮಿಸಿದ್ದಾನೆ. ಆ ಮುಖದಲ್ಲಿ ತೋರುವ ಉದಾತ್ತ ಮನೋಭಾವ, ಸಂಪೂರ್ಣ ತ್ಯಾಗ, ವೈರಾಗ್ಯ, ಆತ್ಮಸಂಯಮಗಳೂ ಕಷ್ಟಕಾರ್ಪಣ್ಯಗಳಲ್ಲಿ ತೊಳಲುತ್ತಿರುವ ಪ್ರಪಂಚದ ಮೇಲಿನ ಮರುಕವನ್ನು ವ್ಯಕ್ತಪಡಿಸುವ ಕಿರುನಗೆಯೂ ವರ್ಣನಾತೀತವಾಗಿವೆ. ವಿಶಾಲವಾದ ಎದೆ, ನೇರವಾದ ನಿಲುವು, ಯಾವುದಕ್ಕೂ ಹೆದರದ, ಚಕ್ರವರ್ತಿಯನ್ನು ಸೋಲಿಸಿದ ಒಂದು ಕೆಚ್ಚು-ಇವು ಆತ್ಮಾಭಿಮಾನವನ್ನು ಸೂಚಿಸುತ್ತವೆ. ಇಷ್ಟು ಉನ್ನತವಾದ ಮೂರ್ತಿಯಲ್ಲಿ ಇಂಥ ಸೌಂದರ್ಯ ಮೇಳೈಸಿರುವುದನ್ನು ಬೇರೆಡೆ ಕಾಣುವುದು ಅಸಾಧ್ಯವೆಂದು ಬೊಪ್ಪಣ್ಣ ಕವಿ ಹಾಡಿ ಹೊಗಳಿದ್ದಾನೆ. ಭಗವಾನ್ ಬಾಹುಬಲಿ ಅಥವಾ ಗೊಮ್ಮಟೇಶ್ವರ ಜೈನ ಧರ್ಮದ ಪ್ರಥಮ ಮೋಕ್ಷಗಾಮಿ. ಭಗವಾನ್ ಬಾಹುಬಲಿ ಜೈನ ಧರ್ಮದ ಪ್ರಥಮ ತೀರ್ಥಂಕರರಾದ ಆದಿನಾಥ ಅಥವಾ ವೃಷಭನಾಥನ ಕಿರಿಯ ಮಗ.

12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ

ಇತಿಹಾಸ ಪ್ರಸಿದ್ಧ ಭವ್ಯ ಬಾಹುಬಲಿ ಮೂರ್ತಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಭಾರತದ ಎಲ್ಲ ಭಾಗಗಳಿಂದ, ವಿಶೇಷವಾಗಿ ಜೈನ ಮುನಿಗಳು ಸೇರಿದಂತೆ ಲಕ್ಷಾಂತರ ಭಕ್ತರು ಶ್ರವಣಬೆಳಗೊಳಕ್ಕೆ ಬರುತ್ತಾರೆ. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕವು ಗೊಮ್ಮಟೇಶ್ವರ ಮೂರ್ತಿಯ ಪ್ರತಿಷ್ಠಾಪನೆಯಾದ ದಿನವೇ ಪ್ರಾರಂಭವಾಯಿತು. ಕ್ರಿ.ಶ. 981ರ ಮಾರ್ಚ್ 13ರಂದು ಚಾವುಂಡರಾಯನ ನೇತೃತ್ವದಲ್ಲಿ ಬಾಹುಬಲಿ ಮೂರ್ತಿಗೆ ಪ್ರಥಮ ಮಸ್ತಕಾಭಿಷೇಕ ಸಂಪನ್ನಗೊಂಡಿತು. ನಂತರ ಪ್ರತಿ 12 ವರ್ಷಗಳಿಗೊಮ್ಮೆ ಈ ಮಹಾಮಸ್ತಕಾಭಿಷೇಕವನ್ನು ಆಚರಿಸಲಾಗುತ್ತಿದೆ. ಮಹಾಮಸ್ತಕಾಭಿಷೇಕದಲ್ಲಿ ಮೂರ್ತಿಗೆ ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಕ್ಷೀರ, ಶ್ವೇತ ಕಲ್ಕಚೂರ್ಣ, ಅರಿಶಿಣ, ಕಷಾಯ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರಿ ಅಭಿಷೇಕ, ರಜತ, ಸುವರ್ಣ, ಪುಷ್ಪವೃಷ್ಟಿ, ಪೂರ್ಣಕುಂಭ, ಅಷ್ಟದ್ರವ್ಯಗಳ ಅಭಿಷೇಕ ನೆರವೇರá-ತ್ತದೆ. ನಂತರ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ

ಶ್ರವಣಬೆಳಗೊಳ ಶ್ರೀಜೈನ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, 1993ರಲ್ಲಿ ಪಿ.ವಿ.ನರಸಿಂಹ ರಾವ್ ಹಾಗೂ ರಾಷ್ಟ್ರಪತಿ ಶಂಕರದಯಾಳ್ ಶರ್ವ, 2006ರಲ್ಲಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ, 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಉದ್ಘಾಟಿಸಿದ್ದರು. 2030ರಲ್ಲಿ ಮುಂದಿನ ಮಸ್ತಕಾಭಿಷೇಕ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net