ಮನಿ ಮಾತು; ಎಸ್​ಸಿಎಸ್​ಎಸ್ ಹೂಡಿಕೆ ವಿಸ್ತರಣೆ ಸಾಧ್ಯವೇ?

MONEY
Published on
  • ನಾನು ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು (ಎಸ್ ಸಿಎಸ್ ಎಸ್) 5 ವರ್ಷಕ್ಕೆ ಮಾಡಿಸಿದ್ದೇನೆ. ಅದನ್ನು ವಿಸ್ತರಿಸಲು ಅವಕಾಶವಿದೆಯೇ. ಪ್ರಕ್ರಿಯೆ ಏನು?

| ಪರಶಿವಪ್ಪ ಚಾಮರಾಜನಗರ

ಹಿರಿಯನಾಗರಿಕರ ಉಳಿತಾಯ ಯೋಜನೆಯ (ಎಸ್ ಸ್ ಸಿಎಸ್ ಎಸ್) ಅವಧಿ 5 ವರ್ಷಗಳು. ಅದನ್ನು ಇನ್ನೂ 3 ವರ್ಷಗಳ ವರೆಗೆ ವಿಸ್ತರಿಸುವ ಆಯ್ಕೆ ಇದೆ. ಇದಕ್ಕೆ ಹೂಡಿಕೆದಾರರು ಯೋಜನೆಯ ವಿಸ್ತರಣೆಗೆ ಸರಿಯಾಗಿ ಭರ್ತಿ ಮಾಡಿದ ಫಾಮ್ರ್ ಬಿ ಅನ್ನು ಸಲ್ಲಿಸಬೇಕಾಗುತ್ತದೆ. ಕೇವಲ ಒಂದು ವಿಸ್ತರಣೆಯನ್ನು ಮಾತ್ರ ಅನುಮತಿಸಲಾಗಿದೆ. ಇಂತಹ ವಿಸõತ ಖಾತೆಗಳನ್ನು ಯಾವುದೇ ದಂಡವಿಲ್ಲದೆ ಒಂದು ವರ್ಷದ ವಿಸ್ತರಣೆಯ ನಂತರ ಮುಚ್ಚಬಹುದು. ಹಿರಿಯನಾಗರಿಕರ ಉಳಿತಾಯ ಯೋಜನೆಯಲ್ಲಿ ಅಕಾಲಿಕ ಹಿಂಪಡೆಯುವಿಕೆಯನ್ನು ಅನುಮತಿಸಲಾಗಿದೆ. ಆದರೆ ಖಾತೆಯನ್ನು ತೆರೆದ ಒಂದು ವರ್ಷದ ನಂತರ ಮಾತ್ರ. ಠೇವಣಿದಾರನ ಸಾವಿನ ಸಂದರ್ಭದಲ್ಲಿ, ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದಕ್ಕಾಗಿ ಯಾವುದೇ ಶುಲ್ಕಗಳು ಅಥವಾ ದಂಡವನ್ನು ವಿಧಿಸಲಾಗುವುದಿಲ್ಲ. ಆದರೆ ಅವಧಿಪೂರ್ವ ವಾಪಸಾತಿಗೆ ಕೆಲ ಶುಲ್ಕಗಳಿವೆ.
  • ಡಿಸೆಂಬರ್​ನಲ್ಲಿ ಮಾಡಲಾದ ನಿಯಮದಲ್ಲಿ ಪಿಪಿಎಎಫ್ ಮೇಲಿನ ಸಾಲದ ಮೇಲಿನ ಬಡ್ಡಿ ದರವನ್ನು ಹೇಗೆ ನಿಗದಿ ಮಾಡಲಾಗಿದೆ ತಿಳಿಸಿ. ಹಾಗೆಯೇ ಈ ಹಿಂದೆ 7 ವರ್ಷಗಳ ಬಳಿಕ ಭಾಗಶಃ ಹಣ ಹಿಂಪಡೆಯಲು ಅವಕಾಶವಿತ್ತು. ಅದರಲ್ಲಿ ಬದಲಾವಣೆಗಳಾಗಿವೆಯೇ ಸ್ಪಷ್ಟಪಡಿಸಿ.

| ರಮೇಶ್ ಹುಬ್ಬಳ್ಳಿ

ಪಿಪಿಎಫ್ ಮೇಲೆ ಸಾಲ ಪಡೆಯಲು ಈ ಹಿಂದೆಯೂ ಅವಕಾಶವಿತ್ತು. ಆದರೆ ಈಗ ಪಿಪಿಎಫ್ ಮೇಲೆ ಪಡೆಯುವ ಸಾಲದ ಮೇಲಿನ ಬಡ್ಡಿದರವನ್ನು ಶೇ 1 ರಷ್ಟು ಕಡಿಮೆ ಮಾಡಲಾಗಿದೆ. ಈ ಹಿಂದೆ ಪಿಪಿಎಫ್ ಹೂಡಿಕೆ ಮೇಲೆ ಪಡೆಯಲಾಗುವ ಸಾಲಗಳಿಗೆ ಪಿಪಿಎಫ್ ಬಡ್ಡಿ ದರದ ಮೇಲೆ ಶೇ 2 ರಷ್ಟು ಬಡ್ಡಿ ಹಾಕಲಾಗುತ್ತಿತ್ತು. ಆದರೆ ಈಗ ಪಿಪಿಎಫ್ ಮೇಲಿನ ಸಾಲಕ್ಕೆ ಪಿಪಿಎಫ್ ಬಡ್ಡಿ ದರದ ಮೇಲೆ ಶೇ 1 ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಉದಾಹರಣೆ: ಈ ಹಿಂದೆ ಪಿಪಿಎಫ್ ದರ ಶೇ 8 ರಷ್ಟಿದ್ದಾಗ ನೀವು ಶೇ 10 ರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತಿದ್ದು. ಆದ್ರೆ ಇನ್ನು ಮುಂದೆ ಪಿಪಿಎಫ್ ಬಡ್ಡಿ ದರ ಶೇ8 ರಷ್ಟಿದ್ದರೆ ನೀವು ಶೇ 9 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಮತ್ತೊಂದು ಬೆಳವಣಿಗೆಯೆಂದರೆ ಪಿಪಿಎಫ್ ಖಾತೆ ಆರಂಭಿಸಿ 5 ವರ್ಷ ತುಂಬಿದ ಬಳಿಕ ಇನ್ನು ಮುಂದೆ ಶೇ 50 ರಷ್ಟು ಹಣವನ್ನು ಪಡೆಯಲು ಅವಕಾಶವಿದೆ. ಈ ಹಿಂದೆ 7 ವರ್ಷಗಳ ಬಳಿಕ ಶೇ 25 ರಷ್ಟು ಹಣ ಹಿಂಪಡೆಯಲು ಅವಕಾಶವಿತ್ತು. ಅದನ್ನು ಈಗ ಸಡಿಲಿಸಲಾಗಿದೆ.

  • ನಾನು ಹಿರಿಯನಾಗರಿಕನಾಗಿದ್ದು ರೂ. 7 ಲಕ್ಷ ನಿವ್ವಳ ಆದಾಯ ಹೊಂದಿದ್ದೇನೆ. ನನಗೆ ಎಷ್ಟು ತೆರಿಗೆ ಬರುತ್ತದೆ. ತೆರಿಗೆ ಉಳಿತಾಯಕ್ಕೆ ಸಲಹೆ ನೀಡಿ.

| ನಿರಂಜನ್ ವೈ. ಆರ್ . ಕೊಪ್ಪ

ಹಿರಿಯ ನಾಗರಿಕರಿಗೆ ರೂ. 3 ಲಕ್ಷ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ. ರೂ. 3 ರಿಂದ ರೂ. 5 ಲಕ್ಷ ವರೆಗಿನ ಆದಾಯಕ್ಕೆ ಶೇ 5 ರಷ್ಟು ತೆರಿಗೆ ಅನ್ವಯಿಸುತ್ತದೆ. ರೂ. 5 ಲಕ್ಷದಿಂದ ರೂ. 10 ಲಕ್ಷದ ವರೆಗಿನ ಆದಾಯಕ್ಕೆ ಶೇ 20 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ನಿಯಮ ಹೀಗಿದ್ದರೂ ಕೂಡ ನೀವು ನ್ಯಾಯಯುತವಾಗಿ ತೆರಿಗೆ ಉಳಿಸಲು ಸರ್ಕಾರ ಹಲವು ಅವಕಾಶಗಳನ್ನು ನೀಡಿದೆ.

ಅಂಚೆ ಕಚೇರಿ ಉಳಿತಾಯ, ಪಿಪಿಎಫ್ ಉಳಿತಾಯ, ಜೀವ ವಿಮೆ, ಗೃಹ ಸಾಲದ ಅಸಲು ಪಾವತಿ, ಎನ್ ಪಿಎಸ್ ಹೂಡಿಕೆ ಸೇರಿದಂತೆ ಇನ್ನು ಕೆಲ ಉದ್ದೇಶಗಳಿಗೆ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ವರೆಗೆ ವಿನಾಯಿತಿ ಪಡೆಯಬಹುದು. ನೀವು ಆರೋಗ್ಯ ವಿಮೆ ಮಾಡಿಸಿದ್ದು ಪ್ರೀಮಿಯಂ ಪಾವತಿಸುತ್ತಿದ್ದರೆ ರೂ. 50 ಸಾವಿರದ ವರೆಗೆ ವಿನಾಯಿತಿ ಸಿಗುತ್ತದೆ.

ವಾಸಕ್ಕಾಗಿ ಮನೆ ಬಾಡಿಗೆಗೆ ಪಡೆದಿದ್ದು ನಿಮಗೆ ಎಚ್ ಆರ್ ಎ ( ಬಾಡಿಗೆ ಭತ್ಯೆ) ಸಿಗದಿದ್ದರೆ ನೀವು ಸೆಕ್ಷನ್ 80 ಜಿಜಿ ಅಡಿಯಲ್ಲಿ ವಾರ್ಷಿಕ ರೂ. 60 ಸಾವಿರದ ವರೆಗೆ ವಿನಾಯಿತಿ ಪಡೆಯಬಹುದು. ಹಿರಿಯನಾಗರಿಕರ ಉಳಿತಾಯ ಖಾತೆ ಮಾಡಿಸಿದ್ದರೆ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ರೂ. 50 ಸಾವಿರದ ವರೆಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಕೆಲ ಆಯ್ಕೆಗಳನ್ನು ಮಾತ್ರ ತಿಳಿಸಿದ್ದೇನೆ. ಸರಿಯಾಗಿ ಎಲ್ಲ ಆಯ್ಕೆಗಳನ್ನು ಬಳಸಿಕೊಂಡಲ್ಲಿ ನೀವು ಹೆಚ್ಚಿನ ತೆರಿಗೆ ಉಳಿಸಲು ಸಾಧ್ಯವಿದೆ.

  • ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಾಸಿಕ ರೂ. 12 ಸಾವಿರ ವೇತನ. ವಾಸಕ್ಕೆ ಸ್ವಂತ ಮನೆ ಇಲ್ಲ. ಬಿಪಿಎಲ್ ಕಾರ್ಡ್ ಹೊಂದಿದ್ದೇನೆ. ನನ್ನ ಹೆಂಡತಿಯ ಹೆಸರಿನಲ್ಲಿ ಕೊಪ್ಪಳ ನಗರದಲ್ಲಿ 20x30 ಅಳತೆಯ ಸೈಟ್ ಇದ್ದು ಮನೆ ಕಟ್ಟಲು ಸುಮಾರು ರೂ.7 ರಿಂದ ರೂ. 8 ಲಕ್ಷ ಹಣ ಬೇಕಾಗುತ್ತದೆ. ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ ಸಾಲ ಸಿಗಬಹುದೇ? ಸಾಲ ಸಿಕ್ಕರೆ ಮಾಸಿಕ ಕಂತು ಎಷ್ಟು ಪಾವತಿಸಬೇಕಾಗುತ್ತದೆ?

| ನಾಗರಾಜ ನಾಯಕ ಕೊಪ್ಪಳ

ಬ್ಯಾಂಕ್ ಗಳು ಗೃಹ ಸಾಲ ನೀಡುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಪಡೆಯುವ ವ್ಯಕ್ತಿಯ ಒಟ್ಟು ಮಾಸಿಕ ವೇತನ, ಸಾಲ ಮರು ಪಾವತಿ ಸಾಮರ್ಥ್ಯ, ಅರ್ಜಿದಾರರ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ.

ಸಾಮಾನ್ಯವಾಗಿ ಗೃಹ ಸಾಲ ನೀಡಬೇಕೆಂದರೆ ಸಾಲ ಪಡೆಯುವ ವ್ಯಕ್ತಿಯ ನಿವ್ವಳ ಮಾಸಿಕ ಆದಾಯ ರೂ. 25 ಸಾವಿರಕ್ಕಿಂತ ಹೆಚ್ಚಿರಬೇಕು. ಆದರೆ ಸದ್ಯಕ್ಕೆ ನಿಮ್ಮ ಆದಾಯ ಕಡಿಮೆ ಇರುವುದರಿಂದ ನಿಮಗೆ ಗೃಹ ಸಾಲ ಸಿಗುವುದು ಕಷ್ಟವಾಗಬಹುದು. ನಿಮ್ಮ ಮಡದಿ ಉದ್ಯೋಗದಲ್ಲಿದ್ದರೆ ಅವರನ್ನು ಗೃಹ ಸಾಲಕ್ಕೆ ಸಹ ಅರ್ಜಿದಾರರನ್ನಾಗಿಸುವ ಜತೆಗೆ ನಿಮ್ಮ 2030 ಸೈಟ್ ಅನ್ನು ಗ್ಯಾರಂಟಿಯಾಗಿ ಪರಿಗಣಿಸಿದರೆ ಲೋನ್ ಸಿಗುವ ಸಂಭವ ಇರಬಹುದು.

ಆದರೆ ಸಾಲ ಸಿಕ್ಕೇ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೆನಪಿನಲ್ಲಿಡಿ ಯಾವುದೇ ಕಾರಣಕ್ಕೂ ಅತಿಯಾದ ಹೊರೆ ಹಾಕಿಕೊಂಡು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಮಾಡಿ ಮನೆ ಕಟ್ಟಲು ತೀರ್ವನಿಸಬೇಡಿ. ಯಾಕಂದ್ರೆ ಬಾಡಿಗೆ ಮನೆ, ಸ್ವಂತ ಮನೆ ಎನ್ನುವುದಕ್ಕಿಂತ ನೆಮ್ಮದಿ ಮುಖ್ಯ. ಇನ್ನು ಪ್ರಧಾನಮಂತ್ರಿ ಯೋಜನೆ ಅಡಿಯಲ್ಲಿ ಸಾಲ ಸಿಗುವುದಿಲ್ಲ. ಆದರೆ ಗೃಹ ನಿರ್ವಣಕ್ಕೆ ಸಾಲ ಪಡೆದರೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ರೂ. 2.67 ಲಕ್ಷದ ವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಲಭ್ಯವಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಹಾಕಬಹುದು.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ - ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ.

ಪ್ರಶ್ನೆ ಕಳಿಸಬೇಕಾದ ಇಮೇಲ್:  vittasuggi@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net