ಪರರ ಪಾಲಾದ ಬೆವರಿನ ಹಣ; ಆ ಕ್ಷಣ ಅಂಕಣ..

Aa kshana co
Published on
ಉತ್ತರ ಕರ್ನಾಟಕದ ನಗರವೊಂದರಲ್ಲಿದ್ದ 60 ವರ್ಷದ ಶಾಂತಮ್ಮ ಪ್ರೖೆಮರಿ ಶಾಲೆ ಮುಖ್ಯೋಪಾಧ್ಯಾಯಿನಿಯಾಗಿ ಆಗ ತಾನೇ ನಿವೃತ್ತಿ ಹೊಂದಿದ್ದಳು. ಪತಿ ತೀರಿಕೊಂಡು ಹಲವಾರು ವರ್ಷಗಳಾಗಿದ್ದವು. ತನ್ನ ಏಕೈಕ ಮಗಳನ್ನು ಅಮೆರಿಕದಲ್ಲಿದ್ದವನಿಗೆ ಮದುವೆ ಮಾಡಿಕೊಟ್ಟಿದ್ದಳು. ಹೀಗಾಗಿ ಶಾಂತಮ್ಮ ಒಬ್ಬಂಟಿಯಾಗಿಯೇ ಜೀವಿಸುತ್ತಿದ್ದಳು. ಅನುಕೂಲಸ್ಥಳಾಗಿದ್ದು, ಪ್ರತಿಷ್ಠಿತ ಬಡಾವಣೆಯಲ್ಲಿ ಸ್ವಂತ ಮನೆಯಲ್ಲಿದ್ದ ಆಕೆಗೆ ಯಾವುದೇ ತೊಂದರೆ ಇರಲಿಲ್ಲ.

ನಿವೃತ್ತಿ ನಂತರ ಶಾಂತಮ್ಮನಿಗೆ ಪ್ರಾವಿಡೆಂಟ್ ಫಂಡ್, ರಜೆ ನಗದೀಕರಣ ಮುಂತಾದವುಗಳಿಂದ 20 ಲಕ್ಷ ರೂ.ದಷ್ಟು ಹಣ ಬಂದಿತ್ತು. ಆ ಹಣವನ್ನು ಬ್ಯಾಂಕಿನಲ್ಲಿಟ್ಟಿದ್ದಳು. ಒಂದು ದಿನ ಆಕೆ ಲಗ್ನವೊಂದಕ್ಕೆ ಹೋದಾಗ ಕಲ್ಯಾಣಿ ಎನ್ನುವವಳು ಪರಿಚಯವಾದಳು. ಆಕೆಗೆ ಸುಮಾರು 35 ವರ್ಷ. ಕಲ್ಯಾಣಿ ಊಟ ಮಾಡುವಾಗ ಶಾಂತಮ್ಮನ ಪಕ್ಕದಲ್ಲಿ ಕುಳಿತು ತಾನು ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ವರದಿಗಾರ್ತಿ ಎಂದು ಪರಿಚಯಿಸಿಕೊಂಡಳು. ‘ನಿನ್ನನ್ನು ಆ ವಾಹಿನಿಯಲ್ಲಿ ನೋಡಿಲ್ಲವಲ್ಲ’ ಎಂದು ಶಾಂತಮ್ಮ ಹೇಳಿದಾಗ, ‘ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವುದರಿಂದ ವರದಿಗಾರರು ಕಳಿಸುವ ವರದಿಗಳನ್ನು ನೋಡುವುದು ನನ್ನ ಕೆಲಸ’ ಎಂದು ಹೇಳಿ ತನ್ನದೊಂದು ವಿಸಿಟಿಂಗ್ ಕಾರ್ಡ್ ಕೊಟ್ಟಳು. ‘ನಿಮಗೇನಾದರೂ ಸಹಾಯ ಬೇಕಾದರೆ ನನ್ನನ್ನು ಸಂರ್ಪಸಿ’ ಎಂದಳು.

ಒಂದು ವಾರದ ನಂತರ ಶಾಂತಮ್ಮ ಕಲ್ಯಾಣಿಗೆ ಫೋನ್ ಮಾಡಿ, ‘ನೀನು ಪತ್ರಕರ್ತೆಯಾಗಿರುವ ಕಾರಣ, ನಿನ್ನಿಂದ ಒಂದು ಸಹಾಯ ಕೇಳಬಹುದೇ’ ಎಂದಳು. ಏನಾಗಬೇಕಿತ್ತು ಎಂದು ಕಲ್ಯಾಣಿ ಕೇಳಿದಾಗ, ‘ನಿವೃತಿ ನಂತರ ನನಗೆ ಬಂದಿದ್ದ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಆರು ತಿಂಗಳ ಹಿಂದೆ ನನಗೆ ಪರಿಚಯವಿರುವ ಕಮಲಾ ಎನ್ನುವವಳಿಗೆ ಸಾಲವಾಗಿ ಕೊಟ್ಟೆ. ಆಕೆ ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಹಣ ಕೇಳಿದ್ದ ಕಾರಣ ಒಂದು ಉತ್ತಮ ಕೆಲಸ ಮಾಡುತ್ತಿರುವೆ ಎನ್ನುವ ಭಾವನೆಯಿಂದ ಸಾಲ ನೀಡಿದೆ. ಒಂದು ವರ್ಷದಲ್ಲಿ ಬಡ್ಡಿ ಸಮೇತವಾಗಿ ಸಾಲ ತೀರಿಸುತ್ತೇನೆ ಎಂದಳು. ಬಿಳಿಯ ಹಾಳೆಯ ಮೇಲೆ ಅವಳಿಂದ ಪ್ರಾಮಿಸರಿ ನೋಟನ್ನು ಬರೆಯಿಸಿಕೊಂಡು ಕೆಲವು ಸಾಕ್ಷಿಗಳ ಸಮ್ಮುಖದಲ್ಲಿ ಹಣವನ್ನು ಅವಳ ಅಕೌಂಟಿಗೆ ವರ್ಗಾಯಿಸಿದ್ದೇನೆ. ಹಣ ಅವಳಿಗೆ ಸಂದಾಯವಾದ ದಾಖಲೆಯಿದೆ. ನಂತರ ಎರಡು ತಿಂಗಳು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಕಟ್ಟಿದಳು. ಆನಂತರ ಹಣ ಕೊಡುವುದನ್ನೇ ನಿಲ್ಲಿಸಿದಳು. ಕೇಳಿದರೆ, ತುಂಬ ಕಷ್ಟದಲ್ಲಿದ್ದೇನೆ. ಎರಡು-ಮೂರು ತಿಂಗಳ ನಂತರ ತೀರಿಸುವೆ, ಅವಕಾಶ ಕೊಡು ಎನ್ನುತ್ತ ಸತಾಯಿಸುತ್ತಿದ್ದಾಳೆ. ಅವಳಿಂದ ನನ್ನ ಹಣ ವಾಪಸ್ ಕೊಡಿಸಿದರೆ ದೊಡ್ಡ ಉಪಕಾರವಾಗುತ್ತದೆ’ ಎಂದಳು. ‘ನಾಳೆ ನಾನೇ ನಿಮ್ಮ ಮನೆಗೆ ಬಂದು ಮಾತನಾಡುವೆ’ ಎಂದಳು ಕಲ್ಯಾಣಿ.

ತನ್ನ ಮನೆಗೆ ಕಲ್ಯಾಣಿ ಬಂದಾಗ ಶಾಂತಮ್ಮ ಅವಳಿಗೆ ಕಮಲಳಿಂದ ಬರೆಸಿಕೊಂಡಿದ್ದ ಪ್ರಾಮಿಸರಿ ನೋಟ್ ತೋರಿಸಿದಳು. ‘ಇದನ್ನು ಬಿಳಿ ಹಾಳೆಯಲ್ಲಿ ಬರೆದಿರುವ ಕಾರಣ ಕೋರ್ಟಿನಲ್ಲಿ ಇದಕ್ಕೆ ಬೆಲೆಯಿಲ್ಲ, ಸಾಲ ಕೊಡಬೇಕಾದಾಗ ಸ್ವಲ್ಪ ಹುಷಾರಾಗಿ ಕೊಡಬೇಕಾಗಿತ್ತು’ ಎಂದಳು ಕಲ್ಯಾಣಿ. ಗಾಬರಿಯಾದ ಶಾಂತಮ್ಮ ‘ನನ್ನ ಹಣ ಮರಳಿ ಬರುವುದಿಲ್ಲವೇ?’ ಎಂದಳು. ‘ನಿಮ್ಮ ಹಣ ವಾಪಸ್ ಬರುವುದು ಕಷ್ಟ. ಏಕೆಂದರೆ ಅವಳಿಗೆ ಸಾಲವಾಗಿ ಹಣ ಕೊಟ್ಟಿದ್ದೀರಿ ಎನ್ನಲು ಸರಿಯಾದ ದಾಖಲೆಗಳಿಲ್ಲ. ಆದರೂ ನನ್ನ ಪರಿಚಿತ ಪೊಲೀಸರ ಜೊತೆ ಮಾತನಾಡಿ ನಿಮಗೇನಾದರೂ ಸಹಾಯ ಮಾಡಬಹುದೇ ನೋಡುತ್ತೇನೆ’ ಎಂದಳು ಕಲ್ಯಾಣಿ.

‘ತಿಂಗಳ ಹಿಂದೆಯೇ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದೆ, ಅಲ್ಲಿನ ಅಧಿಕಾರಿಗಳು ಇದು ಸಿವಿಲ್ ಕೇಸೆಂದು ಹೇಳಿ ಈ ದೂರನ್ನು ದಾಖಲಿಸಲು ಬರುವುದಿಲ್ಲ, ನ್ಯಾಯಾಲಯದಲ್ಲಿ ದಾವೆ ಹೂಡಲು ತಿಳಿಸಿದರು’ ಎಂದಳು ಶಾಂತಮ್ಮ. ‘ನನಗೆ ಹಿರಿಯ ಪೊಲೀಸ್ ಅಧಿಕಾರಿಗಳ ಪರಿಚಯವಿದೆ, ಅವರಿಗೆ ಹೇಳಿ ನಿಮಗೆ ಪರಿಹಾರ ಕೊಡಿಸುತ್ತೇನೆ’ ಎಂದು ಹೇಳಿದಳು ಕಲ್ಯಾಣಿ.

ಹತ್ತು ದಿನದ ನಂತರ ಶಾಂತಮ್ಮನ ಮನೆಗೆ ಬಂದ ಕಲ್ಯಾಣಿ, ‘ನನ್ನ ಪರಿಚಯವಿರುವ ಒಬ್ಬ ಪೊಲೀಸ್ ಅಧಿಕಾರಿಗೆ ನಿಮ್ಮ ಸಮಸ್ಯೆ ಹೇಳಿದ್ದೇನೆ, ಆದರೆ ಆತ ಪೂರ್ತಿ ಹಣವನ್ನು ವಸೂಲಿ ಮಾಡಿಕೊಡಬೇಕಾದರೆ ಲಂಚ ಕೇಳುತ್ತಿದ್ದಾನೆ, ಇದಕ್ಕೆ ಒಪು್ಪವುದಾದರೆ ಅವನಿಗೆ ಮುಂದುವರಿಯಲು ಹೇಳುತ್ತೇನೆ’ ಎಂದಳು. ಶಾಂತಮ್ಮ, ‘ಇದೇನಮ್ಮಾ ನನ್ನ ಹಣ ನಾನು ವಾಪಸ್ ಪಡೆಯಬೇಕಾದರೆ ಏಕೆ ಲಂಚ ಕೊಡಬೇಕು, ಇದು ಆಗದ ಮಾತು’ ಎಂದಳು. ‘ನೋಡಿ ಶಾಂತಮ್ಮ ಇದು ಪೊಲೀಸ್ ಕೇಸ್ ಆಗುವುದಿಲ್ಲವೆಂದು ನಿಮಗೂ ತಿಳಿದಿದೆ, ಆ ಅಧಿಕಾರಿ ಕೇಳುವ ಒಂದಷ್ಟು ಹಣ ನೀಡಿ ಪ್ರಕರಣ ಮುಗಿಸಿಕೊಳ್ಳಿ’ ಎಂದಾಗ, ಶಾಂತಮ್ಮ ಒಪ್ಪಿದಳು.

ಮಾರನೆಯ ದಿನವೇ ಶಾಂತಮ್ಮನನ್ನು ಕಲ್ಯಾಣಿ ಅದೇ ನಗರದ ಪೊಲೀಸ್ ಕಮೀಷನರ್ ಕಚೇರಿ ಬಳಿ ಕರೆದುಕೊಂಡು ಹೋದಳು. ಶಾಂತಮ್ಮಳನ್ನು ಕಚೇರಿ ಕಾಂಪೌಂಡಿನಲ್ಲಿ ನಿಲ್ಲಲು ಹೇಳಿ ಕಚೇರಿಯ ಒಳಗೆ ಹೋದಳು. ಕಾಲು ಗಂಟೆಯ ನಂತರ ಆಕೆ ಒಬ್ಬ ವ್ಯಕ್ತಿಯೊಡನೆ ಬಂದಳು. ಆತ ದಷ್ಟಪುಷ್ಟವಾಗಿದ್ದು ಖಾಕಿ ಪ್ಯಾಂಟಿನ ಮೇಲೆ ಬಿಳಿಯ ಷರಟನ್ನು ತೊಟ್ಟು, ಕಂದು ಬಣ್ಣದ ಬೂಟುಗಳನ್ನು ಧರಿಸಿದ್ದ. ಆತನನ್ನು ಪೊಲೀಸ್ ಇನ್​ಸ್ಪೆಕ್ಟರ್ ಶ್ರೀಧರ್ ಎಂದು ಪರಿಚಯಿಸಿದ ಕಲ್ಯಾಣಿ, ‘ಇವರು ಕಮೀಷನರ್ ಕಚೇರಿಯ ಕ್ರೖೆಂ ವಿಭಾಗದ ಮುಖ್ಯಸ್ಥರು, ಹೀಗಾಗಿ ಸಮವಸ್ತ್ರ ಧರಿಸುವುದಿಲ್ಲ. ಇವರಿಗೆ ನಿಮ್ಮ ಸಮಸ್ಯೆ ಹೇಳಿದ್ದೇನೆ’ ಎಂದಳು.

ಆತ ಶಾಂತಮ್ಮಳನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ‘ನಿಮ್ಮ ಸಮಸ್ಯೆ ಹೇಳಿ’ ಅಂದ. ತನ್ನ ಸಮಸ್ಯೆಯನ್ನು ಶಾಂತಮ್ಮ ವಿವರಿಸಿದಳು. ‘ಕಲ್ಯಾಣಿ ನಿಮಗೆ ಏನಾದರೂ ಹೇಳಿದ್ದಾರೆಯೇ?’ ಎಂದ. ಅದಕ್ಕೆ ‘ಹೌದು ಕೆಲಸ ಮಾಡಲು ಹಣ ಕೊಡಬೇಕಾಗುತ್ತದೆ ಎಂದರು’ ಎಂದುತ್ತರಿಸಿದಳು ಶಾಂತಮ್ಮ. ‘ಈ ಕೆಲಸ ಮಾಡಲು ಐದು ಲಕ್ಷ ರೂಪಾಯಿ ಕೊಡಬೇಕಾಗುತ್ತದೆ’ ಎಂದು ಆತ ಹೇಳಿದಾಗ ಶಾಂತಮ್ಮ ಗಾಬರಿಯಾದಳು. ‘ನೋಡಿ ನಾನೊಬ್ಬ ದಿಕ್ಕಿಲ್ಲದ ವಿಧವೆ. ಸ್ವಲ್ಪ ಕಡಿಮೆ ಹಣದಲ್ಲಿ ಮಾಡಿಕೊಡಿ’ ಎಂದು ಆಕೆ ಹೇಳಿದಾಗ, ‘ಮೇಡಂ, ಇದು ಚೌಕಾಸಿ ಮಾಡುವ ವ್ಯವಹಾರವಲ್ಲ, ಸಿವಿಲ್ ಕೇಸನ್ನು ನಾವು ಹಿಡಿಯಲು ಬರುವುದಿಲ್ಲ, ಆದರೂ ನಿಮಗೆ ಸಹಾಯ ಮಾಡಲು ಬಂದಿದ್ದೇನೆ, ನಿಮಗೆ ಐದು ಲಕ್ಷ ಕೊಡಲಾಗದಿದ್ದರೆ ಬೇರೆ ಯಾರನ್ನಾದರೂ ನೋಡಿ’ ಎಂದು ಹೊರಡತೊಡಗಿದ.

ಆಗ ಮಧ್ಯಪ್ರವೇಶಿಸಿದ ಕಲ್ಯಾಣಿ, ಶಾಂತಮ್ಮಳಿಗೆ ‘ಐದು ಲಕ್ಷ ಉಳಿಸಲು ಹೋಗಿ ಇಪ್ಪತ್ತು ಲಕ್ಷ ಕಳೆದುಕೊಳ್ಳುತ್ತಿರುವಿರಲ್ಲ, ಸುಮ್ಮನೆ ಅವರ ಮಾತುಗಳಿಗೊಪ್ಪಿ’ ಎಂದಾಗ ಶಾಂತಮ್ಮ ಸರಿ ಎಂದಳು. ಆಗ ಆ ವ್ಯಕ್ತಿ, ‘ನಮ್ಮ ಖರ್ಚಿಗಾಗಿ ಒಂದು ಲಕ್ಷ ರೂ. ಅಡ್ವಾನ್ಸ್ ಕೊಡಿ, ನಾಳೆ ಕಲ್ಯಾಣಿ ಕೈಯಲ್ಲಿ ಹಣ ಕೊಟ್ಟುಕಳಿಸಿ, ಅದು ಮುಟ್ಟಿದ ನಂತರ ಕೆಲಸ ಪ್ರಾರಂಭ ಮಾಡುತ್ತೇನೆ’ ಎಂದ.

ಶಾಂತಮ್ಮಳಿಂದ ಒಂದು ಲಕ್ಷ ರೂಪಾಯಿ ಪಡೆದ ನಂತರ ಕಲ್ಯಾಣಿ ನಾಪತ್ತೆಯಾದಳು. ಶಾಂತಮ್ಮ ಆಕೆಯ ಮೊಬೈಲ್ ನಂಬರ್​ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿತ್ತು. ಆಕೆಯ ಮನೆಯ ವಿಳಾಸ ಮತ್ತಿತರ ವಿವರಗಳು ಗೊತ್ತಿರಲಿಲ್ಲ. ಟಿವಿ ವಾಹಿನಿಯ ಕಚೇರಿಗೆ ಹೋಗಿ ವಿಚಾರಿಸಿದಾಗ ಕಲ್ಯಾಣಿ ಎನ್ನುವಾಕೆ ಅಲ್ಲಿ ಕೆಲಸ ಮಾಡುತ್ತಿಲ್ಲವೆಂದು ತಿಳಿದು ಬಂತು. ನಂತರ ಶಾಂತಮ್ಮ ಪೊಲೀಸ್ ಕಮೀಷನರರನ್ನು ಭೇಟಿಯಾಗಿ ನಡೆದ ಎಲ್ಲ ವಿಚಾರ ತಿಳಿಸಿದಳು. ತಮ್ಮ ಕಚೇರಿಯಲ್ಲಿ ಶ್ರೀಧರ್ ಎನ್ನುವವರು ಯಾರೂ ಇಲ್ಲವೆಂದು ತಿಳಿಸಿದ ಅವರು ಕಚೇರಿಯ ಎಲ್ಲ ಸಿಬ್ಬಂದಿಯನ್ನೂ ಆಕೆಯ ಮುಂದೆ ಹಾಜರು ಪಡಿಸಿದರು. ಆದರೆ ಅವರಲ್ಲಿ ಶಾಂತಮ್ಮಳನ್ನು ಭೇಟಿಯಾಗಿದ್ದ ವ್ಯಕ್ತಿಯಿರಲಿಲ್ಲ.

ಈ ವೃದ್ಧೆಗೆ ಯಾರೋ ಮೋಸ ಮಾಡಿದ್ದಾರೆ ಎಂದು ಕಮೀಷನರ್​ಗೆ ಅರ್ಥವಾಗಿ ಆಕೆಯ ಮೇಲೆ ಕನಿಕರಗೊಂಡು ಮೋಸದ ದೂರು ದಾಖಲಿಸಲು ಸೂಚಿಸಿದರು. ಶಾಂತಮ್ಮ ಕೊಟ್ಟ ವಿವರಗಳ ಮೇರೆಗೆ ಪೊಲೀಸರು ಶ್ರೀಧರ್ ಮತ್ತು ಕಲ್ಯಾಣಿ ಎಂಬ ಸತಿಪತಿಯರನ್ನು ಪತ್ತೆ ಮಾಡಿದರು. ಅವರಿಬ್ಬರೂ ಪೊಲೀಸ್ ಮತ್ತು ಪತ್ರಕರ್ತರ ಸೋಗಿನಲ್ಲಿ ಹಲವಾರು ಜನರಿಗೆ ಮೋಸ ಮಾಡಿದ್ದಾಗಿ ತಿಳಿದುಬಂತು. ನ್ಯಾಯಾಲಯದಲ್ಲಿ ಅವರಿಬ್ಬರಿಗೂ ಎರಡು ವರ್ಷ ಶಿಕ್ಷೆಯಾಯಿತು. ಆದರೆ ಶಾಂತಮ್ಮ ಕಳೆದುಕೊಂಡ ಹಣ ಮಾತ್ರ ಆಕೆಗೆ ವಾಪಸ್ ಬರಲಿಲ್ಲ.

ವಿಶೇಷವಾಗಿ ವೃದ್ಧರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಬೇರೆಯವರಿಗೆ ಸಾಲ ಕೊಡದೆ, ಇಲ್ಲವೇ ಹೆಚ್ಚಿನ ಬಡ್ಡಿಯಾಸೆಗಾಗಿ ಅನಧಿಕೃತ ಹಣಕಾಸು ಸಂಸ್ಥೆಗಳಲ್ಲಿ ಹೂಡದೇ, ಚಿಟ್​ಫಂಡ್​ಗಳಲ್ಲಿ ತೊಡಗಿಸದೇ, ಚೈನ್ ಸ್ಕೀಮುಗಳಿಗೆ ಹಾಕದೇ ಅಂಚೆ ಕಚೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಡುವುದು ಒಳ್ಳೆಯದೆಂದು ತಿಳಿದಿದ್ದರೂ ಮೋಸಹೋಗುತ್ತಲೇ ಇದ್ದಾರೆ. ಡಿವಿಜಿ ಹೇಳುವಂತೆ ‘ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದಂ, ಆಭಾಸವನು ಸತ್ಯವೆಂದು ಭೆಮಿಸುವುದುಂ, ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದಂ, ಅಭಿಷಾಪ ನರಕುಲಕೆ ಮಂಕುತಿಮ್ಮ’.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net