

| ಡಾ. ಸರಸ್ವತಿ ಹೆಗಡೆ
ಕರೊನಾದಿಂದಾಗಿ ಬಹುತೇಕ ಎಲ್ಲರೂ ಮನೆಯಲ್ಲಿ ಬಂಧಿತರಾಗಿರುವ ಕಾರಣ, ಸಹಜವಾಗಿಯೇ ಮೊಬೈಲ್ ಫೋನ್, ಟ್ಯಾಬ್ ಇತ್ಯಾದಿ ಸ್ಕ್ರೀನ್ ಬಳಕೆ ಮೊದಲಿಗಿಂತ ಹೆಚ್ಚಾಗಿದೆ. ಮಕ್ಕಳಿಗೆ ಹೊರಾಂಗಣ ಆಟೋಟಗಳಿಗೆ ಅವಕಾಶ ಕಮ್ಮಿ ಆಗಿರುವುದರಿಂದ ಅವರನ್ನು ಸಮಾಧಾನಪಡಿಸಿ ಸುಮ್ಮನಿರಿಸಲು, ಹಿರಿಯರು ತಮ್ಮ ಕೆಲಸದಲ್ಲಿ ತಲ್ಲೀನರಾಗಲು ಇವೆಲ್ಲಾ ಬಹಳಷ್ಟು ಕುಟುಂಬಗಳಲ್ಲಿ ಅನಿವಾರ್ಯದಂತಾಗಿದೆ.ಈ ಹಿನ್ನೆಲೆಯಲ್ಲಿ ನಿಧಾನವಾಗಿ ಮಕ್ಕಳು ಸ್ಕ್ರೀನ್ ಅಡಿಕ್ಷನ್ಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಊಟ, ನಿದ್ರೆ ಇತ್ಯಾದಿ ದೈನಂದಿನ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಆಗುತ್ತಿದೆ.
ಹಸುಳೆಗಳ ಮೇಲೆ ವಿದ್ಯುನ್ಮಾನ ಪರಿಕರಗಳ ಪರಿಣಾಮ ಬಹಳ ತೀವ್ರತರದಲ್ಲಿ ನಡೆಯುತ್ತದೆ. ಅಂದರೆ ಪರದೆಯ ಮೇಲೆ ಬೆಳಕಿನ ವ್ಯತ್ಯಾಸ ಕಣ್ಣುಗಳ ಮುಖಾಂತರ ಮಿದುಳಿನ ಮೇಲೆ ಅತಿಯಾದ ಪ್ರಚೋದನೆಯನ್ನು ನೀಡುತ್ತದೆ. ಅದೇ ರೀತಿ ಇತರ ಇಂದ್ರಿಯಗಳ ಮೇಲೂ ಪರಿಣಾಮ ಬೀರುತ್ತದೆ. ಪ್ರಚೋದನೆಗೆ ಪ್ರತಿಸ್ಪಂದಿಸಲು ಮಿದುಳು ಹಾಗೂ ನರ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚುತ್ತದೆ. ಅತಿಯಾದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಇದು ಮಗುವು ಎಷ್ಟು ಹೊತ್ತು ಅಂತಹ ವಿದ್ಯಮಾನಗಳ ಮೇಲೆ ಅವಲಂಬಿತವಾಗುತ್ತದೆ ಎನ್ನುವುದರ ಮೇಲೆ ಮಿದುಳು ಮತ್ತು ನರವ್ಯವಸ್ಥೆ ಮೇಲಿನ ಒತ್ತಡ ಹಾಗೂ ಅದರ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚುತ್ತಾ ಹೋಗುತ್ತದೆ.
ಅಮೆರಿಕದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸ್ಕ್ರೀನ್ ಅಡಿಕ್ಷನ್ನಿಗೆ ಒಳಗಾದ ಮಕ್ಕಳ ಮಿದುಳು ಹಾಗೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದ ವ್ಯಕ್ತಿಯ ಮಿದುಳು ಒಂದೇ ತರಹದ ಪರಿಣಾಮ ಎದುರಿಸುತ್ತಿರುತ್ತದೆ. ಪಂಚೇಂದ್ರಿಯಗಳು ಮಕ್ಕಳ ಕಲಿಯುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸ್ಕ್ರೀನ್ ಆಡಿಕ್ಷನ್ಗೆ ಒಳಗಾದಾಗ ಮಕ್ಕಳು ಎಲ್ಲಾ ಚಟುವಟಿಕೆಗಳನ್ನು ಬಿಟ್ಟು ಒಂದು ಕಡೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದರಿಂದ ಮಿದುಳಿನಲ್ಲಿ ಆಗಬೇಕಾದ ಸರ್ವತೋಮುಖ ಬೆಳವಣಿಗೆಯ ಬದಲು ಏಕಮುಖವಾಗುತ್ತದೆ. ಸಮಗ್ರ ಕಲಿಯುವಿಕೆ ಸಾಧ್ಯವಾಗುವುದಿಲ್ಲ. ಎಲ್ಲ ಪ್ರಗತಿಯೂ ಕುಂಠಿತಗೊಳ್ಳುತ್ತದೆ. ಮಕ್ಕಳು ಸ್ವತಃ ತಮ್ಮ ಮೇಲಿನ ಹಿಡಿತ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಒಂದು ದಶಕದಲ್ಲಿ ಮಕ್ಕಳ ಮಾನಸಿಕ ಅಸ್ವಸ್ಥತೆಯ ವಿವಿಧ ರೋಗನಿರ್ಣಯಗಳನ್ನು ಲಾಸ್ ಏಂಜಲೀಸ್ನ ಡಾ. ವಿಕ್ಟೋರಿಯಾ ಡಂಕ್ಲೆ ಅಧ್ಯಯನ ಮಾಡುತ್ತಿದ್ದಾರೆ. ಅವರು ‘ಎಲೆಕ್ಟ್ರಾನಿಕ್ ಸ್ಕ್ರೀನ್ ಸಿಂಡ್ರೋಮ್ ಅಥವಾ ಇಎಸ್ಎಸ್ ಎಂಬ ಪದವನ್ನು ಪರಿಚಯಿಸಿದರು. ನಡವಳಿಕೆ, ಮನಸ್ಥಿತಿ ಮತ್ತು ಗಮನದ ಮೇಲೆ ಪ್ರಭಾವ ಬೀರುವ ಅತಿಯಾದ ಸ್ಕ್ರೀನ್ ಟೈಮ್ಂದ ಉಂಟಾಗುವ ಮಗುವಿನ ನರಮಂಡಲದ ಪ್ರಚೋದನೆಯನ್ನು ಸಿಂಡ್ರೋಮ್ ಸೂಚಿಸುತ್ತದೆ. ಇದು ಡಿಜಿಟಲ್ ಸಾಧನಗಳ ಗೀಳನ್ನು ಹೊಂದಿರುವ ಹದಿಹರೆಯದವರಿಗೆ ಮಾತ್ರವಲ್ಲದೆ ಅಂಬೆಗಾಲಿಡುವವರಿಗೂ ಅನ್ವಯವಾಗುತ್ತದೆ ಎನ್ನುವುದು ಅವರ ಅಧ್ಯಯನದಿಂದ ತಿಳಿದುಬಂದಿದೆ.
ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಮಗುವೊಂದು ತೀರಾ ಅಸ್ವಸ್ಥವಾಗಿದ್ದು, ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿತ್ತು. ಆ ಮಗುವನ್ನು ಆಕೆಯ ತಾಯಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಮಗುವಿನ ಕೈಗಳನ್ನು ಬ್ಯಾಂಡೇಜ್ನಿಂದ ಸುತ್ತಲಾಗಿತ್ತು. ಮಗು ನಿದ್ರಾವಸ್ಥೆಗೆ ಜಾರಿತ್ತು. ಆದರೆ ನಿದ್ದೆಯಲ್ಲಿಯೂ ಮಗು ಮೊಬೈಲ್ನ ಮೇಲೆ ಬೆರಳಾಡಿಸುವಂತೆ ಬೆರಳುಗಳನ್ನು ಆಡಿಸುತ್ತಿತ್ತು! ಆ ಮಗು ಮೊಬೈಲ್ಫೋನ್ಗೆ ಅಷ್ಟೊಂದು ಅಡಿಕ್ಟ್ ಆಗಿರುವ ಬಗ್ಗೆ ಮಹಿಳೆ ವೈದ್ಯರ ಬಳಿ ಮಾತನಾಡುವುದೂ ಆ ವಿಡಿಯೋದಲ್ಲಿ ಕೇಳಿಸುತ್ತಿತ್ತು. ಮಕ್ಕಳನ್ನು ಮೊಬೈಲ್ ಫೋನ್ನಿಂದ ಏಕೆ ದೂರ ಇಡಬೇಕು ಎಂಬುದಕ್ಕೆ ಈ ವಿಡಿಯೋ ನಿದರ್ಶನ.
ಮಕ್ಕಳ ಮಿದುಳು ಪಂಚೇಂದ್ರಿಯಗಳ ಮುಖಾಂತರ ಹೊರಗಿನ ಪ್ರಪಂಚದಿಂದ ಪಡೆದುಕೊಳ್ಳುವ ಮಾಹಿತಿಗಳನ್ನು ನಿಧಾನವಾಗಿ ಅರ್ಥ ಮಾಡಿಕೊಂಡು ತಾನು ಅಂತಹ ಸಾಮರ್ಥ್ಯನ್ನು ಪಡೆಯಲು ನಿಧಾನವಾಗಿ ಸಿದ್ಧಗೊಳ್ಳುತ್ತದೆ. ಈ ಪ್ರಕ್ರಿಯೆ ವ್ಯಕ್ತಿ ಪ್ರಬುದ್ಧ ಅವಸ್ಥೆಗೆ ಬರುವವರೆಗೂ/ ಹದಿವಯಸ್ಸು ಮುಗಿಯುವವರೆಗೂ ನಡೆಯುತ್ತದೆ. ಈ ಹಂತದಲ್ಲಿ ಕೈ, ಕಣ್ಣು, ಮನಸ್ಸು, ಮಾತು ಇವೆಲ್ಲದರ ಸಮನ್ವಯ ಸಮರ್ಪಕವಾಗಿ ನಿಮಾಣಗೊಳ್ಳಬೇಕಾಗುತ್ತದೆ. ಇದರ ಮುಖಾಂತರ ವ್ಯಕ್ತಿ ಹೊರಗಿನ ಸ್ಪಂದನೆಗಳಿಗೆ ಇಂದ್ರಿಯಗಳ ಮುಖಾಂತರ ಪ್ರತಿಸ್ಪಂದನ ಮಾಡುವ ಪ್ರಕ್ರಿಯೆ ಬೆಳೆಯುತ್ತದೆ, ವ್ಯಕ್ತಿತ್ವವನ್ನು ರೂಪಿಸುತ್ತದೆ.
ಕರೊನಾದಿಂದ ಯಾರನ್ನು ಬೇಕಾದರೂ ಐಸೋಲೇಷನ್ ಮಾಡಲು ಕಲಿತ ಸಮಾಜಕ್ಕೆ ಮಕ್ಕಳ ಆರೋಗ್ಯಕ್ಕಾಗಿ ಮೊಬೈಲ್ಗಳನ್ನೂ ದೂರ ಮಾಡುವುದು ಕಷ್ಟವಾಗಲಾರದು. ಅವರವರ ಮನೆ, ಮನಸ್ಸು, ಸ್ವಭಾವಕ್ಕೆ ಅನುಗುಣವಾಗಿ ನಡೆಸಿರುವ ಯಶಸ್ವಿ ಪ್ರಯೋಗಗಳ ಕುರಿತ ಮಾಹಿತಿ ಇಲ್ಲಿದೆ.
2. ಮಗು ಮಲಗಿರುವ ಸಮಯದಲ್ಲಿ ಇಂಟರ್ನೆಟ್ನಿಂದ ಬೇರೆಬೇರೆ ಕಥೆಗಳನ್ನು ತಿಳಿದುಕೊಂಡು ಹೇಳುವುದು ಹಾಗೂ ಮಗುವಿನ ಜತೆ ಮಾತುಕತೆ ನರ್ತನ ಮಾಡುತ್ತಾ ಮನಸ್ಸನ್ನು ಉಲ್ಲಾಸವಾಗಿಟ್ಟು ಕೊಳ್ಳುವುದು. ಮಕ್ಕಳ ಜತೆ ಸೃಜನಾತ್ಮಕವಾಗಿ ಸಂತೋಷಪಡಲು ಸನ್ನದ್ಧರಾದವರಿಗೆ ಇದು ಸಾಧ್ಯ.
3. ಅಡುಗೆ ಮತ್ತು ಮನೆ ಕೆಲಸಗಳಲ್ಲಿ ಮಕ್ಕಳನ್ನು ಸೇರಿಸಿಕೊಂಡು ಆಟದಂತೆ ಪರಿವರ್ತಿಸಿ ಕೊಳ್ಳುವುದು. ಇದಕ್ಕೆ ಮೊದಲು ಹಿರಿಯರ ನಡವಳಿಕೆಯಲ್ಲಿ ಬದಲಾವಣೆ ಬರಬೇಕಾಗುತ್ತದೆ.
4. ತಾನು ಬಾಲ್ಯದಲ್ಲಿ ಕಲಿತ ಸಂಗೀತ, ನರ್ತನ, ನಟನೆಯ ಅಭ್ಯಾಸಗಳನ್ನು ಮಗುವಿನ ಜತೆಯಲ್ಲಿ ಮತ್ತೆ ಪ್ರಾರಂಭಿಸುವುದು. ಮನಸ್ಸಿನಲ್ಲಿ ಹೊಸತನ, ಕಲಿಯುವ ಹಂಬಲ, ಮಕ್ಕಳ ಜತೆಯಲ್ಲಿ ಮಕ್ಕಳಾಗುವ ಲವಲವಿಕೆ ಬೇಕಾಗುತ್ತದೆ.
5. ಹಿಂದಿನ ತಲೆಮಾರಿನವರು ಆಡುತ್ತಿದ್ದ ಪಗಡೆ, ಚೆಸ್, ಕುಂಟೆಬಿಲ್ಲೆ, ಜೂಟಾಟ ಇತ್ಯಾದಿಗಳನ್ನು ಮಾಡಬಹುದು. ತನ್ನ ಶಾರೀರಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಮಗುವಿನ ಜತೆ ಮೖಮರೆತು ಆಡುವ ಮನಸ್ಥಿತಿ ಇದಕ್ಕೆ ಬೇಕು.
(ಲೇಖಕರು ಮಕ್ಕಳ ನಡವಳಿಕೆ ಚಿಕಿತ್ಸಕರು, ಬೆಂಗಳೂರು)