ಮಿಶ್ರ ಬೇಸಾಯದಿಂದ ಬದುಕು ಹಸನು

MISHRA BESAYA
Published on

ವ್ಯವಸಾಯ ಎಂದರೆ ಮೂಗು ಮುರಿಯುವ ಜನರಿಗೆ ಇಲ್ಲೊಬ್ಬ ರೈತ 30 ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಮಾಡುವುದರ ಮೂಲಕ ಉತ್ತರ ನೀಡಿದ್ದಾರೆ. ಜಿಲ್ಲೆಯ ಪ್ರಗತಿಪರ ರೈತ ಪ್ರಶಸ್ತಿಯ ಜತೆಗೆ ಉತ್ತಮ ಲಾಭವನ್ನೂ ಕಂಡುಕೊಂಡಿದ್ದಾರೆ.

ತುಂಗಭದ್ರಾ ಎಡದ ನಾಲೆಯ ವ್ಯಾಪ್ತಿಯ ಬಹುತೇಕ ರೈತರು ಬಹು ಭಾಗ ಭತ್ತ ನಾಟಿ ಮಾಡಿದರೆ. ಇನ್ನು ಕೆಲವರು ಹತ್ತಿ, ಮೆಣಸಿನಕಾಯಿ, ತೊಗರಿ ಬಿತ್ತನೆ ಮಾಡುತ್ತಾರೆ. ಕೇವಲ ಒಂದೇ ಬೆಳೆಗೆ ಸೀಮಿತವಾಗಿ ಕೆಲವು ಸಂದರ್ಭದಲ್ಲಿ ಇಳುವರಿ ಕುಂಠಿತ ಮತ್ತಿತರ ಸಮಸ್ಯೆಗಳಿಂದ ಬೆಳೆ ಬರದೆ ಕೈ ಸುಟ್ಟುಕೊಂಡ ಘಟನೆಗಳು ಸಾಕಷ್ಟಿವೆ.

ಇವರ ಮಧ್ಯೆ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ಅಮರೇಶ ಕೋಟೆ ಎಂಬ ಯುವ ರೈತ ಭಿನ್ನವಾಗಿ ಕಾಣುತ್ತಾರೆ. 30 ಎಕರೆ ಜಮೀನಿನಲ್ಲಿ 6 ಎಕರೆ ತೊಗರಿ, 10 ಎಕರೆ ಹತ್ತಿ, 7 ಎಕರೆ ಮೆಣಸಿನಕಾಯಿ, 3 ಎಕರೆ ಕಡಲೆಕಾಯಿ, 1 ಎಕರೆ ಭತ್ತ ನಾಟಿ ಮಾಡಿದ್ದಾರೆ. 10 ಎಕರೆಯಲ್ಲಿ ಹತ್ತಿ ಮತ್ತು ಮೆಣಸಿನಕಾಯಿಗೆ ತೋಟಗಾರಿಕೆ ಇಲಾಖೆ ಸಹಾಯದೊಂದಿಗೆ ನೀರಿನ ಸಮಸ್ಯೆಯಾಗದಂತೆ ಹನಿ ನೀರಾವರಿ ಅಳವಡಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ.

6 ಎಕರೆ ತೊಗರಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಒಂದು ಎಕರೆ ಸಜ್ಜೆ ಬೆಳೆದು 25 ಸಾವಿರಕ್ಕೂ ಹೆಚ್ಚು ಲಾಭ ತೆಗೆದಿದ್ದಾರೆ. 10 ಗುಂಟೆ ಭೂಮಿಯಲ್ಲಿ 2 ಕ್ವಿಂಟಾಲ್ ನವಣೆ ಬೆಳೆದಿದ್ದಾರೆೆ. ಹತ್ತಿ, ಮೆಣಸಿನಕಾಯಿ, ತೊಗರಿ ಮತ್ತಿತರ ಬೆಳೆಗಳಿಗೆ ರಸಗೊಬ್ಬರ ಬಿತ್ತನೆಗೆ ತಾವೇ ಸ್ವತಃ 6 ಸಾವಿರ ರೂ. ಖರ್ಚು ಮಾಡಿ ಯಂತ್ರವನ್ನು (ರಸಗೊಬ್ಬರ ಬಿತ್ತುವ ಎತ್ತಿನ ಎಡೆ ಕುಟ್ಟೆ) ತಯಾರಿಸಿದ್ದಾರೆ. ಇದರಿಂದ ಕೂಲಿಕಾರ್ವಿುಕರ ಸಮಸ್ಯೆಯನ್ನು ನೀಗಿಸಿಕೊಂಡಿದ್ದಾರೆ. ಒಂದು ದಿನದಲ್ಲಿ ಸುಮಾರು 5 ರಿಂದ 7 ಎಕರೆ ಗೊಬ್ಬರ ಬಿತ್ತನೆ ಮಾಡಬಹುದು ಎನ್ನುತ್ತಾರೆ.

ಕುರಿ ಸಾಕಾಣಿಕೆಯೂ ಇದೆ. 10 ಮರಿಯಿಂದ ಪ್ರಾರಂಭ ಮಾಡಿದ್ದು ಇಂದು 30ರಷ್ಟಾಗಿವೆ. ಇವುಗಳನ್ನು ಸುಮಾರು 3 ರಿಂದ 5 ತಿಂಗಳ ಒಳ್ಳೆಯ ಆಹಾರ ನೀಡಿ ಸಾಕಿದರೆ ಉತ್ತಮ ಬೆಲೆಗೆ ಮಾರಿ ಲಾಭ ಪಡೆಯಬಹುದು. ಕುರಿಗಳಿಗಾಗಿ ಶೇಂಗಾ ಮತ್ತು ಕೋಸ್ಟ್ 29 ಎಂಬ ಮೇವು ಬೆಳೆದಿದ್ದಾರೆ. ಇದರ ಜತೆಗೆ ಜೇನು ಸಾಕಾಣಿಕೆ ತರಬೇತಿ ಪಡೆದು ಪ್ರಾರಂಭ ಮಾಡಿದ್ದಾರೆ.

ಬೇಸಿಗೆ ಬೆಳೆಗಳನ್ನು ತೆಗೆದ ನಂತರ ಹನಿ ನೀರಾವರಿ ಪೈಪ್​ಗಳನ್ನು ಹಾಳಾಗದಂತೆ ತೆಗೆದು ಸುತ್ತುವುದಕ್ಕೆ ತಾವೇ ಸ್ವಂತ 10 ಸಾವಿರ ರೂ. ಖರ್ಚು ಮಾಡಿ ಯಂತ್ರವನ್ನು ತಯಾರಿಸಿದ್ದಾರೆ. ಇದೆಲ್ಲದರ ಜತೆಗೆ ಸಾವಯವ ಕೃಷಿಗೆ ಮಹತ್ವ ನೀಡುತ್ತಿದ್ದಾರೆ. ತಾವೇ ಎರೆಹುಳ ಗೊಬ್ಬರ ತಯಾರಿಗೆ ಮಾಡಿಕೊಳ್ಳುವುದು, ನಿರುಪಯುಕ್ತ ಕಸದಿಂದ ಗೊಬ್ಬರ ಮಾಡುವುದು ಮುಂತಾದ್ದರಲ್ಲಿ ನಿರತರಾಗಿದ್ದಾರೆ. ಅಮರೇಶ ಕೋಟೆ ಅವರ ಎಲ್ಲಾ ಕೃಷಿ ಚಟುವಟಿಕೆಗಳನ್ನು ಗುರುತಿಸಿ ಕೃಷಿ ವಿಶ್ವವಿದ್ಯಾಲಯ ರಾಯಚೂರು ಇವರು ಕೃಷಿ ಮೇಳದಲ್ಲಿ ಜಿಲ್ಲೆಯ ಶ್ರೇಷ್ಠ ಕೃಷಿಕ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಹಿಂದೆ ಕೇವಲ ಒಂದೇ ಬೆಳೆ ಬಿತ್ತನೆ ಮಾಡುತ್ತಿದ್ದೆವು. ಕೃಷಿ ಬೆಲೆ ಆಯೋಗದವರ ಮಾಹಿತಿ ಮತ್ತು ತರಬೇತಿಯಿಂದ ಈ ರೀತಿ ಮಿಶ್ರ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ. ಲಾಭವೂ ಬರುತ್ತಿದೆ. | ಅಮರೇಶ ಕೋಟೆ ಪ್ರಗತಿ ಪರ ರೈತ

| ವೀರೇಶ ಹರಕಂಚಿ ಸಿರವಾರ (ರಾಯಚೂರು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net