ಶಾಲಾ ಬಾಲಕಿಯರ ಅಚಾತುರ್ಯ...

Aa kshana
Published on
ಅದು ಮಹಾನಗರವೊಂದರಿಂದ ಸುಮಾರು 25 ಕಿಮೀ ದೂರದಲ್ಲಿನ ಹೆದ್ದಾರಿಯ ಸನಿಹದ ಒಂದು ಗ್ರಾಮ. ಅಲ್ಲಿನ ನಿವಾಸಿಯೊಬ್ಬ ಮುಂಜಾನೆಯ ಶೌಚಕ್ಕೆಂದು ಹೊಲಕ್ಕೆ ಹೋಗುವಾಗ ಟಾರ್ಚ್ ಬೆಳಕಿನಲ್ಲಿ ನೆಲದ ಮೇಲೆ ಕೆಲವು ಹಲ್ಲುಗಳು ಬಿದ್ದಿರುವುದನ್ನು ಕಂಡ. ಕುತೂಹಲಗೊಂಡ ಆತ ಸೂರ್ಯೋದಯದ ನಂತರ ಅಲ್ಲಿಗೆ ಬಂದ. ಆ ರಕ್ತಸಿಕ್ತ ಹಲ್ಲುಗಳು ಮಾನವನದಾಗಿದ್ದು ಅದರ ಸುತ್ತಲಿನ ಮಣ್ಣು ರಕ್ತಮಯವಾಗಿದ್ದನ್ನು ಗಮನಿಸಿದ. ಯಾರನ್ನೋ ಎಳೆದಾಡಿದ್ದ ಕುರುಹುಗಳೂ ಕಂಡು ಗಾಬರಿಗೊಂಡ ಆತ ಪೊಲೀಸರಿಗೆ ಫೋನ್ ಮಾಡಿದ. ಸ್ಥಳಕ್ಕೆ ಬಂದ ಪೊಲೀಸರು ಶ್ವಾನದಳವನ್ನು ಕರೆಸಿದರು. ಹಲ್ಲುಗಳನ್ನು ಮೂಸಿ ನೋಡಿದ ಶ್ವಾನಗಳು ಹತ್ತಿರದಲ್ಲಿದ್ದ ಪ್ಲಾಂಟೇಷನ್​ಗೆ ಧಾವಿಸಿದವು. ಅಲ್ಲಿ ಹೊಸದಾಗಿ ಮಣ್ಣು ಮುಚ್ಚಿದ್ದ ಹಳ್ಳವೊಂದರ ಮುಂದೆ ನಿಂತು ಜೋರಾಗಿ ಬೊಗಳತೊಡಗಿದವು. ಆ ಗುಂಡಿಯನ್ನು ತೆಗೆದಾಗ ಅಲ್ಲಿ ಒಬ್ಬ ಯುವಕನ ಶವವಿತ್ತು.

ಮೃತನು ಸುಮಾರು 23ರಿಂದ 25 ವರ್ಷದವನಾಗಿದ್ದು ಐದೂವರೆ ಅಡಿ ಎತ್ತರವಿದ್ದ. ಮಧ್ಯಮ ವರ್ಗದ ಕುಟುಂಬದವನಂತೆ ಕಂಡ ಆ ಯುವಕ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಕಾಲಿಗೆ ಸ್ಪೋರ್ಟ್ ಶೂಗಳನ್ನು ಧರಿಸಿದ್ದ. ಅವನ ಕುತ್ತಿಗೆಯಲ್ಲಿ ತಾಯಿತವಿತ್ತು. ಅವನ ಮುಖದ ಮೇಲೆ ಹಲವಾರು ಜಜ್ಜಿದ ಗಾಯಗಳಿದ್ದು ಮುಖವು ಊದಿಕೊಂಡಿತ್ತು. ಮೇಲುದವಡೆಯ ಹಲ್ಲುಗಳು ಮುರಿದಿದ್ದವು. ಎದೆ ಮತ್ತು ಬೆನ್ನಿನ ಮೇಲೆ ಕೋಲಿನಿಂದ ಹೊಡೆದ ಗಾಯಗಳಿದ್ದವು. ಮೇಲ್ನೋಟಕ್ಕೇ ದ್ವೇಷದಿಂದಾದ ಕೊಲೆ ಎಂದು ಕಂಡುಬರುತ್ತಿತ್ತು. ಮೃತನನ್ನು ಗುರುತು ಹಿಡಿಯುವಂತಹ ಯಾವ ವಸ್ತುವೂ ದೇಹದ ಮೇಲಿರಲಿಲ್ಲ. ಮೃತನು ತಮ್ಮ ಗ್ರಾಮದವನಲ್ಲ ಎಂದು ಸ್ಥಳೀಯರು ಹೇಳಿದರು. ಕೊಲೆ ಮತ್ತು ಸಾಕ್ಷ್ಯನಾಶದ ಕೇಸನ್ನು ದಾಖಲು ಮಾಡಿಕೊಂಡ ಪೊಲೀಸರು ಮೃತನ ಫೋಟೋಗಳನ್ನು ತೆಗೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮೃತನು ಸುಮಾರು 21 ವರ್ಷದ ಯುವಕನಾಗಿದ್ದು, ಆತನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಹಾಗೂ ಸಾಯುವ ಮೊದಲು ಕೈ ಮತ್ತು ಕೋಲುಗಳಿಂದ ಥಳಿಸಲಾಗಿದೆ, ಇದರ ಪರಿಣಾಮವಾಗಿ ಆತನ ಹಲ್ಲುಗಳು ಮತ್ತು ಪಕ್ಕೆಲುಬುಗಳು ಮುರಿದಿವೆ ಎಂದು ವೈದ್ಯರು ವರದಿ ಮಾಡಿದರು. ಮೃತನ ಗುರುತನ್ನು ಪತ್ತೆ ಮಾಡಲು ದೇಹದ ಫೋಟೋಗಳನ್ನು ಸುತ್ತಮುತ್ತಲಿನ ಠಾಣೆಗಳಿಗೆ ಕಳುಹಿಸಿದ ತನಿಖಾಧಿಕಾರಿ ಯುವಕ ಕಾಣೆಯಾಗಿರುವ ಪ್ರಕರಣಗಳು ಇತ್ತೀಚೆಗೆ ಯಾವುದಾದರೂ ಠಾಣೆಯಲ್ಲಿ ದಾಖಲಾಗಿದೆಯೇ ಎಂದು ವಿಚಾರಿಸಿದರು. ಕೆಲದಿನಗಳ ನಂತರ ಮಹಾನಗರದ ಪೊಲೀಸ್ ಠಾಣೆಯೊಂದಕ್ಕೆ ಒಬ್ಬ ವ್ಯಕ್ತಿ ಬಂದು ತನ್ನ 22 ವರ್ಷದ ಮಗ ಅರುಣ್ ಕುಮಾರ್ ಐದು ದಿನಗಳ ಹಿಂದೆ ಕಾಲೇಜಿಗೆ ಹೋದವನು ಇನ್ನೂ ವಾಪಸಾಗಿಲ್ಲ ಎಂದು ದೂರಿದ. ಮೊಬೈಲ್ ಫೋನ್ ಮೂಲಕ ಸಂರ್ಪಸುವ ಪ್ರಯತ್ನವನ್ನು ಮಾಡಿದಿರಾ ಎಂದು ಕೇಳಿದಾಗ, ಅಂದು ಅರುಣ್ ಮೊಬೈಲನ್ನು ಮನೆಯಲ್ಲಿಯೇ ಬಿಟ್ಟಿದ್ದ ಎಂದ. ನೆರೆಯ ಠಾಣೆಯಿಂದ ಸ್ವೀಕರಿಸಿದ್ದ ಮೃತ ಯುವಕನ ಫೋಟೋವನ್ನು ತೋರಿಸಿದಾಗ ಆತನೇ ತನ್ನ ಮಗನೆಂದು ಗುರುತಿಸಿ ಅವನಿಗೆ ಯಾರೂ ವೈರಿಗಳಿರಲಿಲ್ಲ ಎಂದು ಬಿಕ್ಕಿ ಬಿಕ್ಕಿ ಆತ ಅತ್ತ. ಅವನನ್ನು ತನಿಖಾಧಿಕಾರಿಯ ಬಳಿ ನಗರದ ಪೊಲೀಸರು ಕಳುಹಿಸಿದರು.

ತನಿಖಾಧಿಕಾರಿ ಅರುಣ್​ನ ತಂದೆಯನ್ನು ವಿಚಾರಿಸಿದ ನಂತರ ಅರುಣನ ಮೊಬೈಲ್ ಫೋನನ್ನು ಠಾಣೆಗೆ ತರಿಸಿಕೊಂಡರು. ಅರುಣ್ ಕಳೆದ ನಾಲ್ಕೈದು ತಿಂಗಳಿಂದ ಎರಡು ನಂಬರ್​ಗಳನ್ನು ಪದೇಪದೆ ಸಂರ್ಪಸುತ್ತಿದ್ದುದನ್ನು ಗಮನಿಸಿ ಅವೆರಡೂ ನಂಬರ್​ಗಳ ಬಗ್ಗೆ ಮಾಹಿತಿ ಪಡೆದರು. ಅವು ಉಮಾ ಮತ್ತು ರಮಾ ಎನ್ನುವ ಬಾಲಕಿಯರದಾಗಿದ್ದವು. ಅರುಣನ ಫೋನಿನಲ್ಲಿ ಹಲವಾರು ಯುವತಿಯರ ಬೆತ್ತಲೆ ಚಿತ್ರಗಳು, ಸೆಕ್ಸ್ ವಿಡಿಯೋಗಳೂ ಇದ್ದವು.

ಉಮಾಳ ಮನೆಗೆ ಮಹಿಳಾ ಪೊಲೀಸರು ಹೋದಾಗ ಆಕೆ ಶ್ರೀಮಂತ ಕುಟುಂಬದವಳಾಗಿದ್ದು ಮಹಾನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಹತ್ತನೆಯ ತರಗತಿಯಲ್ಲಿದ್ದಳೆಂಬುದು ತಿಳಿಯಿತು. ಅವಳನ್ನು ಅರುಣನ ಬಗ್ಗೆ ಪ್ರಶ್ನಿಸಿದಾಗ, ಗಾಬರಿಯಾಗಿ ಅಳತೊಡಗಿದಳು. ಅವಳನ್ನು ಸಮಾಧಾನ ಮಾಡಿ ವಿಚಾರಿಸಿದಾಗ ಹೀಗೆಂದಳು: ‘ಕೆಲವು ತಿಂಗಳುಗಳ ಹಿಂದೆ ನಮ್ಮ ಶಾಲೆಯ ಬಳಿಯಲ್ಲಿರುವ ಚಾಟ್ ಅಂಗಡಿಯಲ್ಲಿ ನನಗೆ ಅರುಣ್​ಕುಮಾರ್​ನ ಪರಿಚಯವಾಯಿತು. ಆತ ಸಮೀಪದ ಕಾಲೇಜೊಂದರಲ್ಲಿ ಎರಡನೇ ವರ್ಷದ ಬಿಕಾಂ ಕಲಿಯುತ್ತಿದ್ದ. ಕಾಲಕ್ರಮೇಣ ನಮ್ಮ ಪರಿಚಯ ಪ್ರೇಮಕ್ಕೆ ತಿರುಗಿತು, ನಾವು ಪಾರ್ಕ, ಸಿನಿಮಾಗಳಿಗೆ ಹೋಗುತ್ತಿದ್ದೆವು. ನನ್ನನ್ನು ಮಾಡೆಲ್ ಮಾಡಿಸುವುದಾಗಿ ಹೇಳಿದ ಅರುಣ್ ನಾನು ಬೆತ್ತಲೆಯಾಗಿರುವ ಚಿತ್ರವನ್ನು ತೆಗೆದ. ನಂತರ ಆ ಚಿತ್ರವನ್ನು ನನ್ನ ತಂದೆಗೆ ಕಳುಹಿಸುವುದಾಗಿ ಹೇಳಿ ಚಿತ್ರವನ್ನು ಡಿಲೀಟ್ ಮಾಡಲು 50 ಸಾವಿರ ರೂ ಕೇಳಿದ. ನನ್ನ ಸರವನ್ನು ಅಡವಿಟ್ಟು 10ಸಾವಿರ ರೂ ನೀಡಿದೆ. ಉಳಿದ ಹಣ ಕೊಡದಿದ್ದರೆ ನನ್ನ ಮನೆಗೇ ಬರುವುದಾಗಿ ಬೆದರಿಸಿದ. ನನಗೆ ಏನು ಮಾಡಬೇಕೆಂದು ತೋಚದಾಯಿತು. ಅರುಣ ನಮ್ಮ ಶಾಲೆಯ ರಮಾ ಎನ್ನುವವಳ ಸ್ನೇಹಿತನೆಂದು ತಿಳಿದಾಗ ಅವಳನ್ನು ಸಂರ್ಪಸಿದೆ. ಅರುಣ ತನ್ನ ಸ್ನೇಹವನ್ನೂ ಗಳಿಸಿ ತನ್ನ ಬೆತ್ತಲೆ ಫೋಟೋಗಳನ್ನೂ ತೆಗೆದು ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದಾನೆಂದು ಅವಳು ತಿಳಿಸಿದಳು. ಮುಂದೇನು ಮಾಡುವುದು ಎಂದು ರ್ಚಚಿಸಿದಾಗ, ರಮಾ ಕಾಲೇಜಿನಲ್ಲಿ ಕಲಿಯುತ್ತಿರುವ ತನ್ನ ಸೋದರಿ ಪೂನಂಳನ್ನು ಸಂರ್ಪಸೋಣ ಎಂದಳು. ಪೂನಂ, ‘ನೀವೇನೂ ಹೆದರಬೇಡಿ, ನನ್ನ ಬಾಯ್ಫ್ರೆಂಡ್ ಜಯರಾಂ ದೊಡ್ಡ ರೌಡಿ. ಅವನ ಮೂಲಕ ಅರುಣನನ್ನು ಬೆದರಿಸಿ ಫೋಟೋಗಳನ್ನು ಡಿಲೀಟ್ ಮಾಡಿಸೋಣ’ ಎಂದಳು.

ಮಾರನೆಯ ದಿನ ಜಯರಾಂನನ್ನು ಭೇಟಿಯಾದೆವು. ಅರುಣ್​ಕುಮಾರ್​ಗೆ ಫೋನ್ ಮಾಡಿ ಹೆದ್ದಾರಿಯ ಬಳಿಯಿರುವ ಮಾಲ್​ಗೆ ಕರೆಸಲು ಆತ ನಮಗೆ ಸೂಚಿಸಿದ. ಅಂತೆಯೇ ಉಮಾ ಅರುಣನಿಗೆ ಫೋನ್ ಮಾಡಿ ಮಾಲ್​ಗೆ ಬಂದರೆ ಹಣ ಕೊಡುವುದಾಗಿ ತಿಳಿಸಿದಳು. ನಮ್ಮ ಫೋಟೋ ಡಿಲೀಟ್ ಮಾಡಲು ಅವನಿಗೆ ಹೇಳಿದಾಗ ಹಣ ಕೊಟ್ಟರೆ ಮಾತ್ರ ಮಾಡುವುದಾಗಿ ಹೇಳಿದ. ಆಗ ನಮ್ಮ ಸನ್ನೆಯ ಮೇರೆಗೆ ಅಲ್ಲಿಯೇ ಇದ್ದ ಜಯರಾಂ ತನ್ನ ಸ್ನೇಹಿತರೊಡನೆ ಬಂದು ಅರುಣನನ್ನು ಬೆದರಿಸಿ ಅವನ ಮೊಬೈಲ್ ಫೋನನ್ನು ಕೊಡಲು ಹೇಳಿದ. ಅರುಣ ಫೋನನ್ನು ಮನೆಯಲ್ಲಿಯೇ ಬಿಟ್ಟು ಬಂದೆ ಎಂದ. ಸರಿ ಹಾಗಾದರೆ, ನಿನ್ನ ಮನೆಗೇ ಹೋಗೋಣ ಎಂದ ಜಯರಾಂ ತನ್ನ ಸಂಗಡಿಗರ ಜತೆಗೂಡಿ ಅರುಣನನ್ನು ಕಾರಿನಲ್ಲಿ ಕೂರಿಸಿಕೊಂಡ. ಕಾರು ಎಲ್ಲಿಯೋ ಹೊರಟುಹೋಯಿತು. ನಿನ್ನ ತಂಗಿ ಇನ್ನು ಮುಂದೆ ಹೆದರಬೇಕಾದ್ದಿಲ್ಲ ಎಂದು ಜಯರಾಂ ಮಾರನೆಯ ದಿನ ಪೂನಂಗೆ ಹೇಳಿದನಂತೆ. ಇದರ ಹೊರತಾಗಿ ನನಗೇನೂ ಗೊತ್ತಿಲ್ಲ.’

ಉಮಾ ಹೇಳಿದ್ದನ್ನೇ ರಮಾ ಮತ್ತು ಪೂನಂ ಸ್ಪಷ್ಟೀಕರಿಸಿದರು. ಅರುಣನ ಮೊಬೈಲಿನಲ್ಲಿದ್ದ ಚಿತ್ರಗಳಲ್ಲಿ ತಮ್ಮ ಚಿತ್ರ ಹಾಗೂ ವಿಡಿಯೋಗಳನ್ನು ಇಬ್ಬರೂ ಬಾಲಕಿಯರು ಗುರುತಿಸಿದರು. ಜಯರಾಂನನ್ನು ಠಾಣೆಗೆ ಕರೆಸಿದಾಗ ಆತ ಹೀಗೆಂದ: ‘ಅರುಣ್​ಕುಮಾರ್​ಗೆ ಬೆದರಿಸಿ ತನ್ನ ಸೋದರಿಯ ಫೋಟೋ ಡಿಲೀಟ್ ಮಾಡಿಸಲು ನನ್ನ ಸಹಾಯವನ್ನು ಪೂನಂ ಕೋರಿದಾಗ ನಾನು ಅರುಣನನ್ನು ಮಾಲ್​ನಲ್ಲಿ ಭೇಟಿಯಾದೆ. ತನ್ನ ಬಳಿ ಸೆಲ್ ಫೋನ್ ಇಲ್ಲ ಎಂದು ಆತ ನಾಟಕವಾಡಿದಾಗ ನಾನು ನನ್ನ ಗೆಳೆಯರಾದ ಇಬ್ರಾಹಿಂ, ರಜನಿ, ಮುತ್ತು, ಇವರ ಸಹಾಯದಿಂದ ಅರುಣನನ್ನು ಬಲವಂತವಾಗಿ ನಮ್ಮ ಕಾರಿನಲ್ಲಿ ಕೂರಿಸಿಕೊಂಡು ತನ್ನ ಮನೆಗೆ ನಮ್ಮನ್ನು ಕರೆದುಕೊಂಡು ಹೋಗಿ ಫೋನನ್ನು ಕೊಡಲು ಸೂಚಿಸಿದೆ. ಆದರೆ ಆತ ನಮ್ಮನ್ನು ಊರೆಲ್ಲಾ ಸುತ್ತಿಸಿದರೂ ತನ್ನ ಮನೆಯನ್ನು ತೋರಿಸಲಿಲ್ಲ. ಕೋಪಗೊಂಡ ನಾವು ಅವನಿಗೆ ಪಾಠ ಕಲಿಸಬೇಕೆಂದು ಹೆದ್ದಾರಿಯಲ್ಲಿ ಹೊರಟು ನಗರದ ಹೊರವಲಯದಲ್ಲಿರುವ ನಿರ್ಜನ ಅರಣ್ಯದ ಬಳಿ ಕಾರನ್ನು ನಿಲ್ಲಿಸಿದೆವು. ಎಲ್ಲರೂ ಇಳಿದು ಗಾಂಜಾ ಸೇವಿಸಿದೆವು. ಅರುಣನನ್ನು ಕೋಲಿನಿಂದ ಥಳಿಸಿ ಉಮಾ ಮತ್ತು ರಮಾರಿಂದ ಪಡೆದಿದ್ದ ಹಣವನ್ನು ಮರಳಿಸಿ ಫೋಟೋಗಳನ್ನು ಡಿಲೀಟ್ ಮಾಡಲು ಹೇಳಿದೆವು. ಆತ ತನ್ನ ಬಳಿ ಹಣವಿಲ್ಲವೆಂದ. ಕೋಪಗೊಂಡ ನಾವು ಅವನ ಕತ್ತನ್ನು ಹಿಸುಕಿ ಕೊಲೆ ಮಾಡಿದೆವು. ನಂತರ ಅವನ ಜೇಬಿನಲ್ಲಿದ್ದ ಹಣ ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಸಮೀಪದಲ್ಲಿದ್ದ ಹೊಲದಲ್ಲಿ ಗುಂಡಿ ತೋಡಿ ಶವವನ್ನು ಹೂತೆವು.’

ಜಯರಾಂನ ಹೇಳಿಕೆಯ ಮೇರೆಗೆ ಅವನ ಮೂರೂ ಸಹಚರರನ್ನೂ ಬಂಧಿಸಲಾಯಿತು. ಕೊಲೆಯಾದ ದಿನ ಮತ್ತು ಸಮಯದಲ್ಲಿ ಅವರೆಲ್ಲರೂ ಕೊಲೆಯಾದ ಸ್ಥಳದಲ್ಲಿದ್ದ ಬಗ್ಗೆ ಅವರ ಸೆಲ್ ಫೋನ್ ಲೊಕೇಷನ್​ಗಳ ಮೂಲಕ ಸಾಬೀತಾಯಿತು. ಇದಲ್ಲ್ಲೆ ಅವರ ಕಾರು ಹೆದ್ದಾರಿಯ ಟೋಲ್​ಗೇಟ್ ದಾಟಿದ ಬಗ್ಗೆ ಸಿಸಿಟಿವಿ ಫುಟೇಜ್ ಲಭ್ಯವಾಯಿತು. ಆರೋಪಿಗಳಲ್ಲೊಬ್ಬ ಸರ್ಕಾರಿ ಸಾಕ್ಷಿಯಾದ. ಮೂರೂ ಯುವತಿಯರ ಮೇಲೆ ಕೊಲೆಗೆ ಪ್ರಚೋದನೆ ಮಾಡಿದ ಬೇರೆ ಪ್ರಕರಣ ದಾಖಲಾಯಿತು. ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ.

‘ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು, ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳಾ, ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗೆಲಸಗಳನು, ತೊಡಗಾತ್ಮ ಬಲಿತೆಂದು ಮಂಕುತಿಮ್ಮ’ ಎನ್ನುವಂತೆ ನೊಂದ ಶಾಲಾಬಾಲಕಿಯರು ತಮ್ಮ ಅಚಾತುರ್ಯದ ಬಗ್ಗೆ ಮಾತಾಪಿತರಿಗೆ ತಿಳಿಸಿ ಆನಂತರ ಪೊಲೀಸರಿಗೆ ತಿಳಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಅದರ ಬದಲಾಗಿ ರೌಡಿಗಳ ಮೊರೆಹೋಗಿ ಕೊಲೆ ಪ್ರಚೋದನೆಯ ಆರೋಪಕ್ಕೆ ಗುರಿಯಾದರು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net