ಹಿರಿಯ ಅಧಿಕಾರಿಯ ದುರ್ವ್ಯವಹಾರ: ಆ ಕ್ಷಣ.. ಅಂಕಣ...

A kshana Ankana
Published on
ಐವತ್ತೊಂದು ವರ್ಷದ ಧಮೇಂದ್ರ ಉತ್ತರ ಭಾರತದ ಜಿಲ್ಲೆಯೊಂದರಲ್ಲಿ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ. ಆತ ತನ್ನ ಕುಟುಂಬವನ್ನು ಬೇರೊಂದು ನಗರದಲ್ಲಿ ಬಿಟ್ಟು ಒಬ್ಬಂಟಿಗನಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಪ್ರತಿ ಶುಕ್ರವಾರ ರಾತ್ರಿ ಊರಿಗೆ ಹೋಗಿ ಕುಟುಂಬದೊಡನೆ ಸಮಯ ಕಳೆದು ಸೋಮವಾರ ಬೆಳಗ್ಗೆ ಮರಳುತ್ತಿದ್ದ. ಧಮೇಂದ್ರ ಪ್ರತಿ ಮುಂಜಾನೆ ಮತ್ತು ಸಂಜೆ ತನಗಿಷ್ಟವಾದ ಬ್ಯಾಡ್ಮಿಂಟನ್ ಆಟವನ್ನು ಮನೆಯ ಬಳಿಯಲ್ಲಿಯೇ ಇದ್ದ ಖಾಸಗಿ ಕ್ಲಬ್​ವೊಂದರಲ್ಲಿ ಆಡುತ್ತಿದ್ದ. ಅದೇ ಕ್ಲಬ್​ನಲ್ಲಿ ಬ್ಯಾಡ್ಮಿಂಟನ್ ಆಟವಾಡಲು ಬಾಲಕೃಷ್ಣ ಎನ್ನುವ 9ನೆಯ ತರಗತಿಯ ವಿದ್ಯಾರ್ಥಿ ಬರುತ್ತಿದ್ದ. ಬಾಲಕೃಷ್ಣನ ತಂದೆ ರೋಹಿತ್, ಕೊಲ್ಲಿ ರಾಷ್ಟ್ರವೊಂದರಲ್ಲಿ ದೊಡ್ಡ ಉದ್ಯೋಗದಲ್ಲಿದ್ದ. ರೋಹಿತ್​ನ ಪತ್ನಿ ಸರಿತಾ ಒಬ್ಬನೇ ಮಗನ ವಿದ್ಯಾಭ್ಯಾಸದ ಕಾರಣ ಗಂಡನ ಜತೆಗೆ ಹೋಗಲಿಲ್ಲ. ತಾಯಿ-ಮಗ ಇಬ್ಬರೇ ಅಪಾರ್ಟ್​ವೆುಂಟಿನಲ್ಲಿ ವಾಸಿಸುತ್ತಿದ್ದರು. ಎತ್ತರವಾಗಿದ್ದು ಆಕರ್ಷಕ ಮೈಕಟ್ಟನ್ನು ಹೊಂದಿದ್ದ ಬಾಲಕೃಷ್ಣ ಆ ಜಿಲ್ಲೆಯ ಜ್ಯೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ.

ಒಂದು ಸಂಜೆ ಧಮೇಂದ್ರ ಕ್ಲಬ್​ಗೆ ಹೋದಾಗ ಬೇರೆ ಯಾವ ಆಟಗಾರರೂ ಬಂದಿರದಿದ್ದ ಕಾರಣ, ಜತೆಗಾರರಿಗಾಗಿ ಕಾಯುತ್ತಿದ್ದ. ಕೆಲ ಸಮಯದ ನಂತರ ಬಾಲಕೃಷ್ಣ ಬಂದ. ‘ನನ್ನ ಜೊತೆ ಒಂದು ಆಟ ಆಡುವೆಯಾ’ ಎಂದು ಧಮೇಂದ್ರ ಕೇಳಿದಾಗ ಒಪ್ಪಿದ ಆ ಬಾಲಕ ಆಟದಲ್ಲಿ ಧಮೇಂದ್ರನನ್ನು ಸೋಲಿಸಿದ. ಅಂದು ಆದ ಪರಿಚಯ ಮುಂದೆ ಬೆಳೆಯುತ್ತಾ ಹೋಯಿತು.

ಒಂದು ದಿನ ಧಮೇಂದ್ರ ಬಾಲಕೃಷ್ಣನನ್ನು ಚಹಾ ಕುಡಿಯಲು ತನ್ನ ಮನೆಗೆ ಆಹ್ವಾನಿಸಿ, ಆತನ ಪೂವೋತ್ತರಗಳನ್ನೆಲ್ಲಾ ಅರಿತ. ಅವನ ತಂದೆ ಬೇರೆ ಊರಿನಲ್ಲಿದ್ದು, ತಾಯಿ ಮಾತ್ರ ಜೊತೆಯಿರುವುದಾಗಿ ತಿಳಿದ ಧಮೇಂದ್ರನ ಮನಸ್ಸಿನಲ್ಲಿ ದುರ್ಯೋಚನೆಯೊಂದು ಆಗಲೇ ಮೂಡಿತು. ಮುಂದಿನ ವಾರವೂ ಚಹಾ ಸೇವಿಸುವ ನೆವದಿಂದ ಬಾಲಕೃಷ್ಣನನ್ನು ಮನೆಗೆ ಕರೆದ ಧಮೇಂದ್ರ, ತಂಪು ಪಾನೀಯ ನೀಡಿದ. ಅದನ್ನು ಕುಡಿದ ಕೆಲವೇ ನಿಮಿಷಗಳಲ್ಲಿ ಬಾಲಕೃಷ್ಣನಿಗೆ ಮತ್ತು ಬಂದಂತಾಗಿ ನಿದ್ರೆಗೆ ಜಾರಿದ. ಒಂದು ಗಂಟೆಯ ತರುವಾಯ ಎಚ್ಚರಗೊಂಡಾಗ ಅಪರಿಚಿತ ಕೋಣೆಯಲ್ಲಿ ತಾನು ಹಾಸಿಗೆಯ ಮೇಲೆ ಮಲಗಿದ್ದು ಸೊಂಟದಿಂದ ಕೆಳಗಿನವರೆಗೆ ವಿವಸ್ತ್ರನಾಗಿದ್ದನ್ನು ಕಂಡು ಹೌಹಾರಿದ. ಆತನಿಗೆ ತನ್ನ ಪೃಷ್ಠ ಭಾಗದಲ್ಲಿ ನೋವಾಗುತ್ತಿರುವುದು ಅರಿವಾಯಿತು. ಇದಲ್ಲದೇ ಮೈಮೇಲೆ ಉಗುರಿನ ಗುರುತುಗಳಿದ್ದನ್ನು ಕಂಡು ಹೆದರಿದ ಬಾಲಕೃಷ್ಣ ಅವಸರವಸರವಾಗಿ ಬಟ್ಟೆ ಧರಿಸಿ ಕೋಣೆಯಿಂದ ಹೊರಗೆ ಬಂದಾಗ ಅವನಿಗೆ ಧಮೇಂದ್ರನ ಕಚೇರಿಯ ಸ್ಟೆನೋಗ್ರಾಪರ್ ಭೇಟಿಯಾದ. ತಾನು ಹೇಗೆ ಬೆಡ್​ರೂಂಗೆ ಹೋದೆನೆಂದು ಬಾಲಕೃಷ್ಣ ಅವನನ್ನು ವಿಚಾರಿಸಿದಾಗ, ಆಟವಾಡಿ ಸುಸ್ತಾಗಿದ್ದ ಕಾರಣ ಉಪಾಹಾರವಾದ ಕೂಡಲೇ ನಿನಗೆ ನಿದ್ದೆ ಬಂದಿತು. ನಿನಗೆ ಮೈ ಸರಿಯಿಲ್ಲವೆಂದು ಬೆಡ್ ರೂಮಿಗೆ ಕರೆದೊಯ್ದು ಮಲಗಿಸಿದೆವು. ಸಾಹೇಬರು ಕಚೇರಿಗೆ ಹೋದರು ಎಂದು ಹೇಳಿ ತನ್ನ ಸ್ಕೂಟರ್​ನಲ್ಲಿ ಬಾಲಕೃಷ್ಣನನ್ನು ಅವನ ಮನೆಗೆ ಬಿಟ್ಟ.

ಕೆಲದಿನಗಳ ನಂತರ ಇದೇ ಘಟನೆಯ ಪುನರಾವರ್ತನೆಯಾಯಿತು. ಆ ದಿನ ಬಾಲಕೃಷ್ಣ ಮಂಪರಿನಿಂದ ಎಚ್ಚೆತ್ತಾಗ ಧಮೇಂದ್ರ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದುದನ್ನು ಕಂಡು ಜೋರಾಗಿ ಅರಚಿದ. ಧಮೇಂದ್ರನನ್ನು ನೂಕಿ ಮಂಚದಿಂದ ಮೇಲೆದ್ದು ಮನೆಗೆ ಹೋಗಲು ತಯಾರಾದ. ಆಗ ಅವನನ್ನು ತಡೆದ ಧಮೇಂದ್ರ, ‘ಈ ವಿಷಯವನ್ನು ನಿನ್ನ ತಂದೆ, ತಾಯಿ, ಸ್ನೇಹಿತರು ಯಾರಿಗಾದರೂ ಹೇಳಿದರೆ ನಮ್ಮಿಬ್ಬರ ನಡುವೆ ನಡೆದ ಕ್ರಿಯೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವೆ, ಆಗ ನಿನ್ನ ಭವಿಷ್ಯ ಹಾಳಾಗುತ್ತದೆ ಹುಷಾರ್ ’ಎಂದು ಹೆದರಿಸಿದ. ತೀರಾ ಹೆದರಿದ ಆ ಬಾಲಕ ಯಾರಿಗೂ ವಿಷಯ ತಿಳಿಸದೆ ಕೆಲ ಕಾಲ ಖಿನ್ನತೆಗೆ ಜಾರಿದ. ಆದರೆ ಆಟದಲ್ಲಿ ಮಗ್ನನಾಗಿ ಘಟನೆಯನ್ನು ಮರೆಯಲೆತ್ನಿಸಿದ.

ಮುಂದಿನ ಬಾರಿ ಬಾಲಕೃಷ್ಣನನ್ನು ಕಾಮತೃಷೆಗೆ ಬಳಸಿ ಕೊಂಡ ಧಮೇಂದ್ರ ಆನಂತರ ಅವನನ್ನು ತನ್ನ ಕಾರಿನಲ್ಲಿಯೇ ಅವನ ಮನೆಗೆ ಬಿಟ್ಟ. ಬಾಲಕೃಷ್ಣನನ್ನು ಕಾರಿನಿಂದ ಇಳಿಸಿದ ನಂತರ ತಾನೂ ಇಳಿದು ಅವನನ್ನು ಅಪ್ಪಿಕೊಂಡು ತುಟಿಗೆ ಮುತ್ತುಕೊಟ್ಟ. ಅಕಸ್ಮಾತ್ತಾಗಿ ಈ ದೃಶ್ಯವನ್ನು ಸರಿತಾ ನೋಡಿದಳು. ಬಾಲಕೃಷ್ಣ ಮನೆಯೊಳಗೆ ಬಂದೊಡನೆ, ಇದೇನಿದು ಆ ವ್ಯಕ್ತಿ ನಿನ್ನನ್ನು ಅಪ್ಪಿಕೊಂಡು ಮುತ್ತುಕೊಟ್ಟ, ಇದು ಅಸಹ್ಯ ಎಂದು ಮೂದಲಿಸಿದಾಗ ಅಲ್ಲಿಯವರೆಗೆ ಅದುಮಿಟ್ಟುಕೊಂಡ ಭಾವನೆಗಳನ್ನು ತಡೆಯಲಾಗದೆ ಬಾಲಕೃಷ್ಣ ಅಳತೊಡಗಿದ. ಕೆಲವು ವಾರಗಳಿಂದ ಅನುಭವಿಸುತ್ತಿರುವ ಕಷ್ಟವನ್ನು ತಾಯಿಯ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟ. ಸರಿತಾ ಗಾಬರಿಯಾದಳು. ಮುಂದೇನು ಮಾಡಬೇಕೆನ್ನುವುದೇ ತೋಚಲಿಲ್ಲ. ಕೂಡಲೇ ಆಕೆ ಮಗನನ್ನು ಕರೆದುಕೊಂಡು ಸಮೀಪದ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಳು. ಅವಳನ್ನು ಗದರಿದ ಪೊಲೀಸರು, ‘ಮೇಡಂ, ನೀವು ಯಾರ ಮೇಲೆ ದೂರು ಕೊಡಲು ಬಂದಿದ್ದೀರಿ ತಿಳಿದಿದಿಯೇ? ಅವರು ಈ ಜಿಲ್ಲೆಯ ಒಬ್ಬ ಹಿರಿಯ ಅಧಿಕಾರಿ, ಅವರ ಮೇಲೆ ಸುಳ್ಳು ದೂರು ಕೊಟ್ಟರೆ ನಿಮ್ಮಿಬ್ಬರನ್ನೂ ಬಂಧಿಸಬೇಕಾಗುತ್ತದೆ’ ಎಂದರು. ಇದರಿಂದ ಹೆದರಿದ ಸರಿತಾ ದೂರನ್ನು ನೀಡದೇ ವಾಪಸ್ ಬಂದಳು. ಆಕೆ ಅದೇ ಸಂಜೆ ವಿಷಯವನ್ನು ಗಂಡ ರೋಹಿತ್​ಗೆ ತಿಳಿಸಿದಳು. ರೋಹಿತ್ ತನ್ನ ಗೆಳೆಯರನ್ನು ಸಂರ್ಪಸಿ ಅವರ ಸಲಹೆಯ ಮೇರೆಗೆ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸರಿತಾಗೆ ಸೂಚಿಸಿದ. ಆಕೆ ಬಾಲಕೃಷ್ಣನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅವನ ತಪಾಸಣೆ ನಡೆಸಿದ ವೈದ್ಯರು ಬಾಲಕನ ಮೇಲೆ ಅತ್ಯಾಚಾರವಾಗಿರುವುದಾಗಿ ದೃಢೀಕರಿಸಿದರು. ಕಾನೂನಿನ ಅನ್ವಯ ಅವರು ತಮ್ಮ ವರದಿಯನ್ನು ಸಮೀಪದ ಪೊಲೀಸ್ ಠಾಣೆಗೆ ಕಳುಹಿಸಿದರು. ಆಗ ಪೊಲೀಸರು ಅನಿವಾರ್ಯವಾಗಿ ಅತ್ಯಾಚಾರ ಪ್ರಕರಣವನ್ನು ದಾಖಲು ಮಾಡಿದರೂ ಆರೋಪಿತ ಅಧಿಕಾರಿಯ ಹೆಸರನ್ನು ಎಫ್​ಐಆರ್​ನಲ್ಲಿ ನಮೂದಿಸಲು ಹಿಂದುಮುಂದು ನೋಡಿದರು.

ಆರೋಪಿಯ ಹೆಸರನ್ನು ಬರೆಯದಿದ್ದರೆ ತಾನು ಠಾಣೆಯ ಮುಂದೆ ಉಪವಾಸ ಮಾಡುವುದಾಗಿ ಸರಿತಾ ಹೇಳಿದಾಗ ಧಮೇಂದ್ರನ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಲಮುಗಳಡಿಯಲ್ಲಿ ಪ್ರಕರಣ ದಾಖಲಾಯಿತು. ಧಮೇಂದ್ರ ತನ್ನ ಕಡೆಯವರನ್ನು ಸರಿತಾಳ ಮನೆಗೆ ಕಳುಹಿಸಿ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಿದ. ಅವಳನ್ನು ನಾನಾ ರೀತಿಯಾಗಿ ಬೆದರಿಸಿದ. ಸರಿತಾ ಮಣಿಯಲಿಲ್ಲ. ‘ನಿನ್ನ ಮಗನ ಮೇಲಿನ ಅತ್ಯಾಚಾರದ ವಿಡಿಯೋ ಹೊರಬಿಡುತ್ತೇನೆ’ ಎಂದಾಗ, ‘ಕೂಡಲೇ ಬಿಡು, ಅದರ ಮೂಲಕವೇ ನಿನ್ನ ನೀಚಕೃತ್ಯದ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗುತ್ತದೆ’ ಎಂದಳು. ಆನಂತರ ಪೊಲೀಸರು ಧಮೇಂದ್ರನ ಮನೆಯ ಸೇವಕರು ಹಾಗೂ ಸ್ಟೆನೋವನ್ನು ಕರೆದು ವಿಚಾರ ಮಾಡಿದಾಗ ಧಮೇಂದ್ರ ಸಲಿಂಗಕಾಮಿಯಾಗಿದ್ದು, ಮನೆಗೆ ಹಲವಾರು ಪುರುಷ ವೇಶ್ಯೆಯರನ್ನು ಕರೆಸಿಕೊಳ್ಳುತ್ತಿದ್ದನೆಂದು ತಿಳಿಯಿತು. ಏತನ್ಮಧ್ಯೆ ಮಾಧ್ಯಮಗಳಲ್ಲಿ ವರದಿಗಳು ಬರತೊಡಗಿ ಆರೋಪಿಯು ಹಿರಿಯ ಸರ್ಕಾರಿ ಆಧಿಕಾರಿಯಾಗಿರುವ ಕಾರಣ ಪೊಲೀಸರು ಆತನನ್ನು ಬಂಧಿಸಿಲ್ಲ ಎಂಬ ಟೀಕೆಗಳು ಬರತೊಡಗಿದವು. ಆಗ ಸರ್ಕಾರ ಅವನನ್ನು ಸೇವೆಯಿಂದ ಅಮಾನತು ಮಾಡಿತು.

ಕೂಡಲೇ ಪೊಲೀಸರು ಧಮೇಂದ್ರ್ರನ್ನು ಬಂಧಿಸಿದರು. ಆತ ತನ್ನ ಮೊಬೈಲ್ ಫೋನಿನಲ್ಲಿ ಬಾಲಕನ ಜತೆ ಅತ್ಯಾಚಾರದ ಕೃತ್ಯವನ್ನು ಚಿತ್ರೀಕರಿಸಿದ್ದ ಕಾರಣ ಆ ಫೋನನ್ನು ಹುಡುಕತೊಡಗಿದರು. ಧಮೇಂದ್ರ ಆ ಫೋನನ್ನು ತನ್ನ ತವರು ಜಿಲ್ಲೆಯಲ್ಲಿ ಮಾರಾಟ ಮಾಡಿ ಹೊಸ ಫೋನ್ ಖರೀದಿಸಿದ್ದಾಗಿ ತಿಳಿಯಿತು. ನೆರೆರಾಜ್ಯದ ಅಂಗಡಿಯಲ್ಲಿ ವಿಚಾರಿಸಿದಾಗ ಅಂಗಡಿಯಾತ ಅಧಿಕಾರಿಯ ಫೋನಿನಲ್ಲಿದ್ದ ಡಾಟಾವನ್ನು ಸಂಪೂರ್ಣವಾಗಿ ಅಳಿಸಿ ಅದನ್ನು ಬೇರೆಯವರಿಗೆ ಮಾರಿದ್ದೇವೆ ಎಂದ. ಈ ಪ್ರಕರಣದಲ್ಲಿ ಧಮೇಂದ್ರನಿಗೆ ಸಹಕರಿಸಿದ ಅವನ ಸೇವಕನ ಹೇಳಿಕೆಯ ಮೇರೆಗೆ ಪೊಲೀಸರು ಧಮೇಂದ್ರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ‘ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಸರಿತಾ ನನಗೆ 9 ಲಕ್ಷ ರೂ. ಕೊಡಲು ಒತ್ತಾಯ ಮಾಡಿದ್ದಳು. ಅದನ್ನು ಕೊಡದಿದ್ದಾಗ ಪ್ರಕರಣ ದಾಖಲಿಸಿದ್ದಾಳೆ’ ಎಂದು ಆತ ಹೇಳಿದ. ಅದನ್ನು ಪರಿಗಣಿಸದ ನ್ಯಾಯಾಧೀಶರು ಅವನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು. ಪ್ರಕರಣದ ತನಿಖೆ ಮುಗಿಸಿದ ಪೊಲೀಸರು, ಧಮೇಂದ್ರ ಮತ್ತು ಅವನ ಸ್ಟೆನೋಗ್ರಾಫರ್ ವಿರುದ್ಧ ಅತ್ಯಾಚಾರ, ಸಾಕ್ಷ್ಯನಾಶ, ದೂರುದಾರನಿಗೆ ಬೆದರಿಕೆ, ಮುಂತಾದ ಆರೋಪಗಳನ್ನು ಹೊರೆಸಿ ಆರೋಪಪಟ್ಟಿಯನ್ನು ಸಲ್ಲಿಸಿದರು. ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಧಮೇಂದ್ರ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ‘ತನ್ನ ಅಪರಾಧವು ಬಯಲಾಗಬಾರದೆಂದು ಅತ್ಯಾಚಾರಿಯು ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆಯುವುದಲ್ಲದೇ ಸಂತ್ರಸ್ತೆ ಸುಳ್ಳು ಹೇಳುತ್ತಿರುವವಳೆಂದು ಪ್ರತಿಪಾದಿಸುತ್ತಾನೆ. ಸಂತ್ರಸ್ತೆಯ ಬಗ್ಗೆ ಮಿಥ್ಯಾರೋಪ ಮಾಡಿ ಅವಳ ಮಾತುಗಳನ್ನು ಇತರರು ಪರಿಗಣಿಸದಿರುವಂತೆ ಮಾಡುತ್ತಾನೆ. ಅತ್ಯಾಚಾರಿ ಎಷ್ಟು ಬಲಾಢ್ಯನೋ ಅಷ್ಟೇ ಪ್ರಮಾಣದಲ್ಲಿ ಆತನ ವಾದಗಳೇ ಮೇಲುಗೈ ಸಾಧಿಸುತ್ತವೆ’ ಎನ್ನುತ್ತಾಳೆ ಅಮೆರಿಕದ ಮನಶ್ಶಾಸ್ತ್ರಜ್ಞೆ ಜುಡಿತ್ ಲೂಯಿಸ್ ಹರ್ಮನ್. ಈ ಪ್ರಕರಣದಲ್ಲಿನ ಆರೋಪಿಯೂ ಪ್ರಭಾವಿಯಾಗಿರುವ ಕಾರಣ, ಬಾಲಕ ಬಾಲಕೃಷ್ಣನಿಗೆ ನ್ಯಾಯ ದೊರೆಯುತ್ತದೆಯೇ ಎಂದು ಸಾರ್ವಜನಿಕರು ರ್ಚಚಿಸುತ್ತಿದ್ದಾರೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net