ಕನಿಷ್ಠ ಬ್ಯಾಲೆನ್ಸ್ ಶುಲ್ಕ; ಅಂಚೆ ಕಚೇರಿಗಳದೂ ಬ್ಯಾಂಕುಗಳ ಹಾದಿ...

POST
Published on

ಸದ್ಯ ಅಂಚೆ ಕಚೇರಿ ತನ್ನ ಕೆಲವು ಬ್ಯಾಂಕಿಂಗ್ ಸೇವೆಗಳ ಶುಲ್ಕವನ್ನು ಮಾತ್ರ ಹೆಚ್ಚಿಸಿದೆ. ಹಣದುಬ್ಬರದ ಈ ದಿನಗಳಲ್ಲಿ ಇನ್ನುಳಿದ ಸೇವೆಗಳ ಶುಲ್ಕವನ್ನೂ ಹೆಚ್ಚು ಮಾಡಿ ತನ್ನ ಖರ್ಚು ವೆಚ್ಚವನ್ನು ಸಮೀಕರಿಸಿದರೆ ಆಶ್ಚರ್ಯವಿಲ್ಲ. ಇಲಾಖೆಗಳು ತಮ್ಮ ಖರ್ಚು ವೆಚ್ಚವನ್ನು ತಾವೇ ನಿರ್ವಹಿಸಬೇಕು ಎನ್ನುವ ಚಿಂತನೆಯನ್ನು ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದ್ದು, ಅಂಚೆ ಇಲಾಖೆಯೂ ಈ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಬಜೆಟ್ ಅನುದಾನದ ಮೇಲೆ ಇಲಾಖೆಯನ್ನು ನಿರ್ವಹಿಸುವ ಕಾಲ ಸದ್ಯದಲ್ಲೇ ಇತಿಹಾಸದ ಪುಟ ಸೇರಿದರೂ ಆಶ್ಚರ್ಯವಿಲ್ಲ.

ಬ್ಯಾಂಕುಗಳಲ್ಲಿ ಗ್ರಾಹಕರು ತಮ್ಮ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಇರಿಸಲೇಬೇಕು ಎಂಬುದು ನಿಯಮ. ಈ ಕನಿಷ್ಠ ಬ್ಯಾಲೆನ್ಸ್ ಬ್ಯಾಂಕ್​ನಿಂದ ಬ್ಯಾಂಕ್​ಗೆ ಬೇರೆ ಬೇರೆ ಇರುತ್ತದೆ. ಶಾಖೆಗಳು ಇರುವ ಸ್ಥಳಗಳ ಮೇಲೆಯೂ ಇದು ಅವಲಂಬಿಸಿರುತ್ತದೆ.

ಉದಾಹರಣೆಗೆ, ಮೆಟ್ರೋಪಾಲಿಟನ್ ಸಿಟಿ, ನಗರ, ಪಟ್ಟಣ ಮತ್ತು ಗ್ರಾಮಾಂತರ ಹೀಗೆ. ಈ ಕನಿಷ್ಠ ಬ್ಯಾಲೆನ್ಸ್ ಇರಿಸದ ಗ್ರಾಹಕರಿಗೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಈ ದಂಡದ ಪ್ರಮಾಣ ಕೂಡ ಶಾಖೆ ಇರುವ ಸ್ಥಳದ ಮೇಲೆ ಅವಲಂಬಿಸಿರುತ್ತದೆ. ಈ ರೀತಿ ಸಂಗ್ರಹಿಸಿದ ಮೊತ್ತ ಗಣನೀಯವಾಗಿದ್ದು ಬ್ಯಾಂಕುಗಳಿಗೆ ಇದೇ ಬಡ್ಡಿಯೇತರ ಆದಾಯವಾಗಿದೆ. ಇತ್ತೀಚೆಗೆ ರಾಜ್ಯಸಭೆಯ ಪ್ರಶ್ನೋತ್ತರ ಸಮಯದಲ್ಲಿ ಕೇಂದ್ರ ಸರ್ಕಾರ ತಿಳಿಸಿದ ಮಾಹಿತಿಯಂತೆ, ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ರಂಗದ 18 ಬಾುಂಕುಗಳು ಒಟ್ಟು 6155 ಕೋಟಿ ರೂ. ಮತ್ತು 4 ಖಾಸಗಿ ಬ್ಯಾಂಕುಗಳು 3657 ಕೋಟಿ ರೂ. ದಂಡವನ್ನು ಈ ಮೂಲದಿಂದಲೇ ಸಂಗ್ರಹಿಸಿವೆ!

ಈ ರೀತಿ ದಂಡ ರೂಪದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಸಂಗ್ರಹಿಸುವುದಕ್ಕೆ ಗ್ರಾಹಕರಿಂದ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಹಲವರು ಹಗಲು ದರೋಡೆ ಎಂದೂ ಬಣ್ಣಿಸಿದ್ದರು.

ಹೊಸ ವಿಚಾರವೆಂದರೆ ಈಗ ಅಂಚೆ ಇಲಾಖೆಯೂ ಇದೇ ದಾರಿಯನ್ನು ತುಳಿಯಲು ಹೊರಟಿದೆ. ಈ ಮೊದಲು ಖಾತೆ ತೆರೆಯಲು ರೂ. 20, ಚೆಕ್​ರಹಿತ ಖಾತೆಗೆ ರೂ. 50, ಚೆಕ್ ಸೌಲಭ್ಯ ಇರುವ ಖಾತೆಗೆ ರೂ. 500 ಆಕರಿಸುತ್ತಿತ್ತು. ಇದೀಗ ಕನಿಷ್ಠ ಬ್ಯಾಲೆನ್ಸ್​ಗೆ ಸಂಬಂಧಿಸಿದ ತನ್ನ ನಿಯಮಾವಳಿಯನ್ನು ಅದು ಬದಲಾಯಿಸಿದೆ. ತನ್ನ ಉಳಿತಾಯ ಖಾತೆಯ ಕನಿಷ್ಠ ಬ್ಯಾಲೆನ್ಸನ್ನು 500 ರೂ.ಗೆ ಪರಿಷ್ಕರಿಸಲು ನಿರ್ಧರಿಸಿದೆ. ಒಂದು ವೇಳೆ ಖಾತೆದಾರ ಕನಿಷ್ಠ ಮೊತ್ತವನ್ನು ಉಳಿಸಿಕೊಳ್ಳಲು ವಿಫಲನಾದರೆ, ಹಣಕಾಸು ವರ್ಷದ ಕೊನೆಯ ಕೆಲಸದ ದಿನದಂದು ದಂಡವಾಗಿ 100 ರೂ.ಗಳನ್ನು ಖಾತೆಯಿಂದ ಕಡಿತ ಮಾಡಲಾಗುತ್ತದೆ.

ಉಳಿತಾಯ ಖಾತೆಯಲ್ಲಿ ಮೂರು ವರ್ಷದವರೆಗೆ ಶೂನ್ಯ ಬ್ಯಾಲೆನ್ಸ್ ಮೊತ್ತ ಹೊಂದಿದ್ದರೆ, ಆ ಖಾತೆ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಉಳಿತಾಯ ಖಾತೆಯಲ್ಲಿ ಹಣಕಾಸು ವರ್ಷದ ಕೊನೆಯ ಕೆಲಸದ ದಿನ ಜೀರೋ ಬ್ಯಾಲೆನ್ಸ್ ಇದ್ದರೆ ಆ ಖಾತೆ ರದ್ದಾಗುತ್ತದೆ. ಖಾತೆದಾರ ಹಣಕಾಸು ವರ್ಷದಲ್ಲಿ ಕನಿಷ್ಠ ಒಂದಾದರೂ ವಹಿವಾಟು ನಡೆಸಲೇಬೇಕು. ಈ ರೀತಿ ದಂಡ ಹಾಕುವುದರಿಂದ ಎಷ್ಟು ಆದಾಯ ಕ್ರೋಡೀಕರಣ ಆಗಬಹುದು ಎನ್ನುವ ಬಗ್ಗೆ ಇನ್ನೂ ಲೆಕ್ಕ ಹಾಕಬೇಕಾಗಿದೆ. ಗಣನೀಯ ಪ್ರಮಾಣದಲ್ಲಿ ಆದಾಯ ಬರಬಹುದು ಎನ್ನುವ ಚಿಂತನೆಯಲ್ಲಿ ಅಂಚೆ ಇಲಾಖೆ ಇದೆ. ಇದನ್ನು ಇಲಾಖೆ ಹೊಸ ಅದಾಯದ ಮೂಲ ಎಂದು ತಿಳಿದಿರುವುದು ಸೋಜಿಗವಾದರೂ ಸತ್ಯ.

ಅಂಚೆ ಇಲಾಖೆ ಇದೀಗ ಉಳಿತಾಯ ಖಾತೆಯಲ್ಲಿ ಚೆಕ್​ಲೀಫ್​ಗಳ ಸಂಖ್ಯೆಯನ್ನು 10ಕ್ಕೆ ಸೀಮಿತಗೊಳಿಸಿದೆ. ಒಂದು ವೇಳೆ ಹೆಚ್ಚುವರಿ ಚೆಕ್ ಲೀಫ್ ಬೇಕಿದ್ದರೆ ಪ್ರತಿ ಚೆಕ್ ಲೀಫ್​ಗೆ 2 ರೂ. ಶುಲ್ಕ ಪಾವತಿಸಬೇಕಾಗುತ್ತದೆ.ಚೆಕ್​ಗಳನ್ನು ಸೆಕ್ಯುರಿಟಿ ಪೇಪರ್​ಗಳಲ್ಲಿ ಮುದ್ರಿಸುವುದರಿಂದ ಅದನ್ನು ಉಚಿತವಾಗಿ ನೀಡುವುದು ಅಂಚೆ ಕಚೇರಿಗಳಿಗೆ ಕಷ್ಟ ಎನ್ನುವ ವಾದವನ್ನು ಮುಂದಿಡಲಾಗುತ್ತಿದೆ.

ಯಾವ ಸೇವೆಯೂ ಉಚಿತವಾಗಿ ದೊರಕುವುದಿಲ್ಲ ಎನ್ನುವ ಮನೋಭಾವ ಇದೀಗ ಅಂಚೆ ಇಲಾಖೆಯಿಂದಲೂ ವ್ಯಕ್ತವಾಗುತ್ತಿದೆ. ಉದಾರೀಕರಣ, ಜಾಗತೀಕರಣ ಮತ್ತು ಅರ್ಥಿಕ ಸುಧಾರಣೆಯ ನಂತರ ಬ್ಯಾಂಕುಗಳಂತೆ ಅಂಚೆ ಕಚೇರಿಯಲ್ಲೂ ಹಲವು ರೀತಿಯ ಶುಲ್ಕಗಳನ್ನು ಆಕರಿಸಲಾಗುತ್ತಿದೆ. ಆದರೆ, ಅವು ಬ್ಯಾಂಕುಗಳಷ್ಟು ತ್ವರಿತವಾಗಿ ಪರಿಷ್ಕರಣೆ ಆಗುವುದಿಲ್ಲ ಎನ್ನುವದಷ್ಟೇ ಸಮಾಧಾನಕರ ಅಂಶ.

ದೇಶದ 1.50 ಲಕ್ಷ ಅಂಚೆ ಕಚೇರಿಗಳಲ್ಲಿ ಸುಮಾರು 9 ಕೋಟಿ ಅಂಚೆ ಉಳಿತಾಯ ಬ್ಯಾಂಕ್ ಖಾತೆಗಳಿದ್ದು ಸುಮಾರು 500 ಕೋಟಿ ರೂ. ಠೇವಣಿ ಇದೆ. ಈ ಎಲ್ಲಾ ಖಾತೆಗಳಿಗೆ ಸರ್ವೀಸ್ ನೀಡಲು ಕನಿಷ್ಠ ಬ್ಯಾಲೆನ್ಸ್ ಶುಲ್ಕ ಅನಿವಾರ್ಯ ಎಂದು ಅಂಚೆ ಇಲಾಖೆ ಸಮಜಾಯಿಷಿ ಕೊಡುತ್ತಿದೆ. ಇದರಲ್ಲಿ ಅರ್ಥವೂ ಇದೆ. ಖಾತೆಗಳಲ್ಲಿ ಠೇವಣಿ ಮೊತ್ತ ಗಮನಾರ್ಹವಾಗಿದ್ದರೆ ಆ ಮಾತು ಬೇರೆ. ಬ್ಯಾಂಕುಗಳಿಗೆ ಹೋಲಿಸಿದರೆ ಮೊತ್ತ ಕಡಿಮೆ ಇರುತ್ತದೆ ಎನ್ನುವುದು ನಿಜ. ಅಂತೆಯೇ ಕನಿಷ್ಠ ಬ್ಯಾಲೆನ್ಸ್ ಶುಲ್ಕ ನಿಗದಿಪಡಿಸದಿರುವುದರಿಂದ ಅಂಚೆ ಇಲಾಖೆಗೆ ಪ್ರತಿ ವರ್ಷ 2800 ಕೋಟಿ ನಷ್ಟವಾಗುತ್ತಿದೆಯಂತೆ. ಅಂಚೆ ಇಲಾಖೆಯಲ್ಲಿ ಪತ್ರಗಳ ಸಂಗ್ರಹ, ಸಾಗಾಣಿಕೆ ಮತ್ತು ವಿತರಣೆಗೆ ಗಣನೀಯ ವೆಚ್ಚವಾಗುತ್ತಿದೆ. ಬ್ಯಾಗ್ ತುಂಬ ಪತ್ರಗಳಿರಲಿ, ಇಲ್ಲದಿರಲಿ ಸಾಗಾಣಿಕೆ ವೆಚ್ಚ ಅಷ್ಟೇ ಇರುತ್ತದೆ.

ದೇಶದಲ್ಲಿ ಕೊರಿಯರ್ ವ್ಯವಸ್ಥೆ ಬಂದ ಮೇಲೆ, ತಂತಿ ಇಲಾಖೆಯನ್ನು ಅಂಚೆ ಇಲಾಖೆಯಿಂದ ಬೇರ್ಪಡಿಸಿದ ಮೇಲೆ, ಇಂಟರ್ನೆಟ್ ಅನಾವರಣವಾದ ಮೇಲೆ, ಟೆಲಿಗ್ರಾಮ್ ಸೇವೆ ನಿಂತ ಮೇಲೆ ಅಂಚೆ ಇಲಾಖೆಯ ಆದಾಯದ ಮೇಲೆ ದೊಡ್ಡ ಪರಿಣಾಮ ಆಗಿದೆ. ದೇಶದ ಮೂಲೆ ಮೂಲೆಯಲ್ಲಿ ಪಸರಿಸಿರುವ ಸುಮಾರು 1.56 ಲಕ್ಷ ಕಚೇರಿಗಳನ್ನು ಹೊಂದಿರುವ ಅಂಚೆ ಇಲಾಖೆಯ ನಿರ್ವಹಣೆ ಚಾಲೆಂಜಿಂಗ್ ಆಗಿದ್ದು ಆದಾಯ ಕ್ರೋಡೀಕರಣವೆಂಬುದು ಇಲಾಖೆಗೆ ದೊಡ್ಡ ತಲೆನೋವಾಗಿದೆ.

ಅಂಚೆ ಇಲಾಖೆ ಸೇವಾ ವಲಯವಾಗಿದ್ದು, ಆದಾಯ ಕ್ರೋಡೀಕರಣ ಕಷ್ಟಕರವಾಗಿದೆ. ಕೊರಿಯರ್ ವ್ಯವಸ್ಥೆ ಅಂಚೆ ಬ್ಯಾಗನ್ನು ಸಣ್ಣದಾಗಿಸಿದರೆ, ಇಂಟರ್ನೆಟ್​ನಿಂದಾಗಿ ವೈಯಕ್ತಿಕ ಪತ್ರ ವ್ಯವಹಾರ ಬಹುತೇಕ ನಿಂತುಹೋಗಿದೆ. ಇಲಾಖೆಗೆ ಬೃಹತ್ ಆದಾಯವನ್ನು ತಂದು ಕೊಡುತ್ತಿದ್ದ ಗ್ರೀಟಿಂಗ್ಸ್ ಮೇಲ್​ಗಳೂ ಈಗ ಇಲ್ಲ. ಒಂದು ಕಾಲಕ್ಕೆ ಗಣನೀಯ ಆದಾಯ ನೀಡುತ್ತಿದ್ದ ಅಂಚೆ ಸೇವಿಂಗ್ಸ್ ಸರ್ಟಿಫಿಕೇಟ್​ಗಳಿಗೆ ಈಗ ಹಿಂದಿನ ಮೆರುಗು ಇಲ್ಲ. ತನ್ನ ನಿರ್ವಹಣೆಗೆ ಬದಲಿ ಆದಾಯವನ್ನು ಇಲಾಖೆ ಹುಡುಕುತ್ತಿದೆ. ಅಂಚೆ ಕಚೇರಿಯಲ್ಲಿ ಮಾರಾಟ ಮಾಡುವ ಪೋಸ್ಟ್ ಕಾರ್ಡ್, ಅಂತರ್ದೇಶೀಯ ಪತ್ರಗಳು, ಕವರ್​ಗಳು, ಸ್ಟಾ್ಯಂಪ್​ಗಳು ವಾಸ್ತವದಲ್ಲಿ ಇಲಾಖೆಗೆ ಹೆಚ್ಚಿನ ಆರ್ಥಿಕ ಕೊಡುಗೆಯನ್ನೇನೂ ನೀಡುವುದಿಲ್ಲ.

ಅವುಗಳ ಮುಖಬೆಲೆಗಿಂತ ಅವುಗಳಿಗೆ ಮಾಡುವ ವೆಚ್ಚವೇ ಅಧಿಕ ಎನ್ನುವ ಅಭಿಪ್ರಾಯವೂ ಇದೆ. ಕೊರಿಯರ್ ಮತ್ತು ಇಂಟರ್​ನೆಟ್ ಸೇವೆ ಕೆಲ ಗ್ರಾಮಾಂತರ ಪ್ರದೇಶವನ್ನು ಇನ್ನೂ ತಲುಪಬೇಕಾಗಿರುವುದರಿಂದ ಮತ್ತು ಕೆಲವು ಗ್ರಾಮೀಣ ಪ್ರದೇಶದವರು ಇನ್ನೂ ಅಂಚೆ ಇಲಾಖೆಯನ್ನು ನೆಚ್ಚಿಕೊಳ್ಳುವ ಪರಿಸ್ಥಿತಿ ಇರುವುದರಿಂದ, ಅಂಚೆ ಇಲಾಖೆ ಪೂರ್ಣವಾಗಿ ನಶಿಸಿಲ್ಲ.

| ರಮಾನಂದ ಶರ್ಮಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net