

| ಉಮೇಶ್ ಕುಮಾರ್ ಶಿಮ್ಲಡ್ಕ
ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಸ್ಥಾಪನೆಯಾದಾಗ ಅದು ಈ ರೀತಿ ಮಾನವ ಜಗತ್ತಿನ ಸಂವಹನ ಕೊಂಡಿಯಾಗಿ, ಸಂಪರ್ಕ ಬೆಸೆಯುವ ಬೃಹತ್ ವೇದಿಕೆಯಾಗಿ ರೂಪುಗೊಳ್ಳುವುದೆಂಬ ಅಂದಾಜು ಇರಲಿಲ್ಲ. ಇದೇ ರೀತಿ ಈಗ, ಭ್ರಾಮಕ ಮತ್ತು ಭೌತಿಕ ಜಗತ್ತು ಒಟ್ಟಾಗಿ ಸೇರುವ ಒಂದು ಅದ್ಭುತ ಲೋಕದ ಪ್ರವೇಶದ್ವಾರದಲ್ಲಿ ಜಗತ್ತು ನಿಂತಿದೆ. ಕೆಲವರು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದು, ಆ ಲೋಕವನ್ನು ಇನ್ನಷ್ಟು ಸುಂದರಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಅನೇಕರು ಈ ಕೆಲಸಕ್ಕೆ ಕೈ ಸೇರಿಸಲು ಮುಂದಾಗಿದ್ದಾರೆ. ಇದೊಂದು ಅದ್ಭುತ ಲೋಕ. ನಾವಿರುವಲ್ಲಿಂದಲೇ ಬ್ರಹ್ಮಾಂಡದ ಮೂಲೆಮೂಲೆ ಸುತ್ತಾಡಿದ, ಸುತ್ತಾಡುವ ಅತ್ಯದ್ಭುತ ಅನುಭವ ಕೊಡುವ ಪ್ರಪಂಚ. ಭ್ರಾಮಕ ಮತ್ತು ಭೌತಿಕ ಜಗತ್ತಿಗೆ ಹೆಚ್ಚೇನೂ ಅಂತರವಿಲ್ಲದ ಒಂದು ವಿಶ್ವ. ಸರಳವಾಗಿ ಹೇಳುವುದಾದರೆ, ದೂರದ ಯಾವುದೋ ಒಂದು ಊರಿನಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು. ಇನ್ಯಾವುದೋ ಊರಿನಲ್ಲಿ ಇರುವ ಪಾಲಕರು. ಇಂತಹ ಕುಟುಂಬಕ್ಕೆ ಪರಸ್ಪರ ಸಾಮೀಪ್ಯದ ಉಪಸ್ಥಿತಿಯನ್ನು ನೀಡಬಲ್ಲ ವ್ಯವಸ್ಥೆಯೇ ‘ಮೆಟಾವರ್ಸ್’!
ಇನ್ನೂ ಸರಳವಾಗಿ ಹೇಳಬೇಕು ಎಂದರೆ ಒಂಬತ್ತು ವರ್ಷ ಹಿಂದಕ್ಕೆ ಹೋಗಬೇಕು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ. ದೇಶದಲ್ಲಿ ಮೊದಲ ಬಾರಿಗೆ 2012ರ ಗುಜರಾತ್ ಚುನಾವಣೆಯ ಪ್ರಚಾರಕ್ಕೆ ಅವರು 3ಡಿ ಹೋಲೊಗ್ರಾಮ್ ತಂತ್ರಜ್ಞಾನ ಬಳಸಿ ಗಮನಸೆಳೆದಿದ್ದರು. ಅವರು ಒಂದು ವೇದಿಕೆಯಲ್ಲಿ ನಿಂತು ಭಾಷಣ ಮಾಡಿದ್ದರು. ರಾಜ್ಯದ ಹಲವು ಕಡೆ ವೇದಿಕೆಗಳಲ್ಲಿ ಏಕಕಾಲದಲ್ಲಿ ಅವರೇ ನಿಂತು ಭಾಷಣ ಮಾಡಿದಂತೆ ಪ್ರೇಕ್ಷಕರಿಗೆ ಅನುಭವ ನೀಡಿತ್ತು ಈ ತಂತ್ರಜ್ಞಾನ. ಬಹುವೇದಿಕೆಗಳಲ್ಲಿ ಕಾಣಿಸಿಕೊಂಡದ್ದು ಮೋದಿ ಅವರ ‘ಅವತಾರ’ ವಾಗಿತ್ತು. ಭ್ರಾಮಕ (ವರ್ಚುವಲ್) ಜಗತ್ತಿನಲ್ಲಿ ‘ಅವತಾರ’ ನಮ್ಮ ಪ್ರತಿರೂಪ.
ವರ್ಚುವಲ್ ಪರಿಸರದ ಪ್ರಪಂಚ ಈ ಮೆಟಾವರ್ಸ್. ವ್ಯಾಖ್ಯಾನಗಳನ್ನು ಗಮನಿಸುವುದಾದರೆ, ವರ್ಚುವಲ್ ಪರಿಸರವನ್ನು ಸಾಮೂಹಿಕವಾಗಿ ಹಂಚಿಕೊಂಡಿರುವ ವ್ಯವಸ್ಥೆ. ಇದನ್ನು ಭೌತಿಕ ಜಗತ್ತಿಗೆ ಸಾಮೀಪ್ಯವೆನಿಸುವಂತೆ ಸೃಷ್ಟಿಸಲಾಗಿದ್ದು, ವರ್ಚುವಲ್ ಜಗತ್ತು, ಆಗ್ಯುಮೆಂಟೆಡ್ ರಿಯಾಲಿಟಿ, ಇಂಟರ್ನೆಟ್ಗಳನ್ನು ಒಳಗೊಂಡಿದೆ ಎನ್ನುತ್ತದೆ ವಿಕಿಪೀಡಿಯಾ. ಮೆಟಾವರ್ಸ್ ಎಂಬುದು ವರ್ಚುವಲ್ ರಿಯಾಲಿಟಿ ಪ್ರಪಂಚವಾಗಿದ್ದು, ಇಲ್ಲಿ ಕಂಪ್ಯೂಟರ್ ಸೃಷ್ಟಿತ ಪರಿಸರದಲ್ಲಿ ಬಳಕೆದಾರರು ಇತರೆ ಬಳಕೆದಾರರೊಂದಿಗೆ ಸಂವಹನ, ಮಾತುಕತೆ ನಡೆಸುವುದು ಸಾಧ್ಯವಿದೆ ಎಂಬ ವ್ಯಾಖ್ಯಾನ ನೀಡುತ್ತದೆ ವರ್ಸ್ ಆಂಡ್ ಡೈಮೆನ್ಶನ್ಸ್ ವಿಕಿ. ಸರಳವಾಗಿ ಹೇಳುವುದಾದರೆ, ಮೆಟಾವರ್ಸ್ ಎಂಬುದು ಸೈಬರ್ ಪ್ರಪಂಚದ ಸೃಷ್ಟಿ. ಮೆಟಾ ಎಂದರೆ ವ್ಯಾಪ್ತಿ ಮೀರಿದ, ಊಹೆ, ಕಲ್ಪನೆ ಎಂಬಿತ್ಯಾದಿ ಅರ್ಥವೂ ಇದೆ. ವರ್ಸ್ ಎಂಬುದು ಯೂನಿವರ್ಸ್ ಎಂಬುದರ ಆಡುಮಾತಿನ ಬಳಕೆಯ ಸಂಕ್ಷಿಪ್ತ ರೂಪ. ಹೊರಗಿನವರಿಗೆ ಇದು ವರ್ಚುವಲ್ ರಿಯಾಲಿಟಿ (ವಿಆರ್)ನ ಮುಂದುವರಿದ ಭಾಗವೆಂಬಂತೆ ಭಾಸವಾದೀತು. ಆದರೆ, ಕೆಲವರ ಪ್ರಕಾರ ಇದು ಡಿಜಿಟಲ್ ಜಗತ್ತಿನ ಮುಂದುವರಿದ ಭಾಗ.
ಮೆಟಾವರ್ಸ್ ಎಂಬುದು ಪರ್ಯಾಯ ಪ್ರಪಂಚ. ಭೌತಿಕ ಜಗತ್ತಿನಲ್ಲಿ ಏನೇನು ಇರಲಿವೆಯೋ ಅವೆಲ್ಲವೂ ಈ ಭ್ರಾಮಕ ಜಗತ್ತಿನಲ್ಲಿ ಇರಲಿದೆ. ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನ, ಹೋಲೊಗ್ರಾಫಿಕ್ ತಂತ್ರಜ್ಞಾನ, ಬ್ಲಾ್ಯಕ್ಚೈನ್ ತಂತ್ರಜ್ಞಾನ (ಬ್ಯಾಂಕಿಂಗ್, ಕಾರ್ಪೆರೇಟ್ ವಲಯದಲ್ಲಿ ಬಳಕೆ, ವಿಶೇಷವಾಗಿ ಕ್ರಿಪ್ಟೋಕರೆನ್ಸಿ ಮೂಲಕ ಪ್ರಚಲಿತದಲ್ಲಿ ಗಮನಸೆಳೆದ ತಂತ್ರಜ್ಞಾನ) ಮತ್ತು ಇತರೆ ಅತ್ಯಾಧುನಿಕ ತಂತ್ರಜ್ಞಾನಗಳು ಇಲ್ಲಿ ಬಳಕೆಯಾಗಲಿವೆ. ಮನುಷ್ಯರೆಲ್ಲರೂ ಇಲ್ಲಿ ‘ಅವತಾರ’ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಇದು ಬಳಕೆಯಲ್ಲಿದೆ. ವರ್ಚುವಲ್ ರಿಯಾಲಿಟಿ ಜಗತ್ತಿನಲ್ಲಿ ವಿಆರ್ ತಂತ್ರಜ್ಞಾನವನ್ನು ಜನಸಾಮಾನ್ಯರು ಬಹುತೇಕ ಗೇಮಿಂಗ್ ಕ್ಷೇತ್ರದಲ್ಲಿ ಬಳಸುತ್ತಿದ್ದಾರೆ. ಇನ್ನುಳಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರ, ಕಾರ್ಪೆರೇಟ್, ಸಿನಿಮಾ ಮುಂತಾದವುಗಳಲ್ಲೂ ಬಳಸಲಾರಂಭಿಸಿದ್ದಾರೆ.
ಫೇಸ್ಬುಕ್ ಮೆಟಾ: ಮೆಟಾವರ್ಸ್ಗೆ ಪೂರಕವಾಗಿ ಈಗಾಗಲೇ ಫೇಸ್ಬುಕ್ ವಿಆರ್ ಮೀಟಿಂಗ್ ಆಪ್ ‘ವರ್ಕ್ ಸ್ಪೇಸ್’, ಸೋಷಿಯಲ್ ಸ್ಪೇಸ್ ‘ಹ್ಯಾರಿಝೋನ್ಸ್’ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಎರಡು ಕೂಡ ಅವುಗಳ ವರ್ಚುವಲ್ ಅವತಾರ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿವೆ. ಕ್ವೆಸ್ಟ್ ಫೇಸ್ಕವರ್ ಇಲ್ಲಿ ಮುಖ್ಯ. ಇದೇ ರೀತಿ ವಿಆರ್ ಆಪ್, ವಿಆರ್ಚ್ಯಾಟ್ಗಳು ಸಂಪೂರ್ಣವಾಗಿ ಆನ್ಲೈನ್ ಹ್ಯಾಂಗಿಂಗ್ ಔಟ್ ಮತ್ತು ಚಾಟಿಂಗ್ಗೆ ಸೀಮಿತವಾಗಿವೆ. ಇವುಗಳಿಗೆ ಜನರ ಭೇಟಿ, ಪರಿಸರ ಶೋಧದ ಹೊರತು ಬೇರಾವ ಉದ್ದೇಶ ಇಲ್ಲ. ಇನ್ನಷ್ಟು ಆಪ್ಗಳು ಅಭಿವೃದ್ಧಿ ಹಂತದಲ್ಲಿವೆ.
ರೋಬ್ಲೊಕ್ಸ್: ವಿಡಿಯೋ ಗೇಮ್ ಪ್ಲಾಟ್ಫಾರಂ ರೊಬ್ಲೊಕ್ಸ್ ಕಾರ್ಪೆರೇಶನ್ ಪ್ರಕಾರ ಮೆಟಾವರ್ಸ್ ಅಂದರೆ ಜನರಿಗೆ 3ಡಿ ಅನುಭವ ನೀಡುವ ಪ್ರಪಂಚ. ಇಲ್ಲಿ ಕಲಿಕೆ, ವೃತ್ತಿ, ಆಟ, ರಚನೆ ಮತ್ತು ಸಾಮಾಜಿಕ ಬಳಕೆಗೆ ಒದಗಿಸುವ ಕಾರ್ಯವನ್ನು ಕೋಟ್ಯಂತರ ಜನರು ಒಟ್ಟಾಗಿ ಮಾಡಬಹುದಾಗಿದೆ. ಡಿಜಿಟಲ್ ಜಗತ್ತನ್ನು ರಚಿಸಲು ಡೆವಲಪರ್ಗಳು ಮತ್ತು ಬಳಕೆದಾರರು ಒಂದಾಗುವುದಕ್ಕೆ ರೋಬ್ಲೊಕ್ಸ್ ವೇದಿಕೆ ಒದಗಿಸಲಿದೆ. ಈ ಜಗತ್ತಿನ ವರ್ಚುವಲ್ ಅರ್ಥವ್ಯವಸ್ಥೆ ರೋಬಕ್ಸ್ ಕರೆನ್ಸಿಯಲ್ಲಿ ನಡೆಯಲಿದೆ.
ಮೈಕ್ರೊಸಾಫ್ಟ್ ಮೆಶ್: ಮೈಕ್ರೋಸಾಫ್ಟ್ ಕಂಪನಿಯು ‘ಎಂಟರ್ಪ್ರೖೆಸ್ ಮೆಟಾವರ್ಸ್’ ಕಟ್ಟಲು ಹೊರಟಿದೆ. ಇಲ್ಲಿ ಡಿಜಿಟಲ್ ಮತ್ತು ಭೌತಿಕ ಜಗತ್ತುಗಳು ಹೊಂದಿಕೊಂಡು ಇರಲಿವೆ. ಜನರ ಅವತಾರಗಳು ಇಲ್ಲೂ ಇರಲಿದ್ದು, ವಾಣಿಜ್ಯ ವಹಿವಾಟುಗಳ ನಿರ್ವಹಣೆ, ಕಾರ್ಪೆರೇಟ್ ಮೀಟಿಂಗ್, ಮನರಂಜನೆಗಳು ಇರಲಿವೆ. ಇದಕ್ಕೆ ಮೆಶ್ ಎಂದು ಹೆಸರಿಡಲಾಗಿದ್ದು, ಇದನ್ನು ಇನ್ನಷ್ಟು ಅಂದಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಎಕ್ಸ್ಬಾಕ್ಸ್ ಮತ್ತು ಮೈನ್ಕ್ರಾಫ್ಟ್ ಎಂಬ ಆಪ್ಗಳನ್ನು ಮೈಕ್ರೋಸಾಫ್ಟ್ ಹೊಂದಿದೆ. ಮೆಟಾವರ್ಸ್ ಅಥವಾ ಮಿಕ್ಸೆಡ್ ರಿಯಾಲಿಟಿ ಕನ್ಸ್ಟ್ರಕ್ಟ್ ಇದೆಂದು ಮೈಕ್ರೋಸಾಪ್ಟ್ ಪ್ರತಿಪಾದಿಸಿದೆ. ಹೊಲೊಲೆನ್ಸ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಎನ್ವಿಡಿಯಾ: ಕಂಪ್ಯೂಟರ್ ಚಿಪ್ ನಿರ್ವಪಕ ಸಂಸ್ಥೆ ಎನ್ವಿಡಿಯಾ ಕಾರ್ಪೆರೇಶನ್ ತನ್ನ ಆಮ್ನಿವರ್ಸ್ ಪ್ಲಾಟ್ಫಾರಂ ಸಿದ್ಧಪಡಿಸಿದೆ. ಇದರಲ್ಲಿ 3ಡಿ ಜಗತ್ತನ್ನು ಶೇರ್ ಮಾಡಿಕೊಂಡ ವರ್ಚುವಲ್ ಯೂನಿವರ್ಸ್ ಮೂಲಕ ಜೋಡಿಸಲಾಗಿದೆ. ನಿಜಜಗತ್ತಿನ ಕಟ್ಟಡಗಳು, ಫ್ಯಾಕ್ಟರಿಗಳ ನೇರ ಅನುಭವವನ್ನು ಬಳಕೆದಾರರಿಗೆ ಕೊಡುವಂಥದ್ದು. ಇದರ ಪ್ಲಂಬಿಂಗ್ ಕಾರ್ಯ ಮೆಟಾವರ್ಸ್ಗಳ ನಿರ್ವಣದಲ್ಲಿ ಬೇಕು ಎನ್ನುತ್ತದೆ ಎನ್ವಿಡಿಯಾ.
ಯೂನಿಟಿ: ವಿಡಿಯೋ ಗೇಮ್್ಸ ವಿನ್ಯಾಸಗೊಳಿಸುವ ತಂತ್ರಾಂಶ ಅಭಿವದ್ಧಿ ಸಂಸ್ಥೆ ಯೂನಿಟಿ ಸಾಫ್ಟ್ವೇರ್. ಇದು ಕೂಡ ಮೆಟಾವರ್ಸ್ ರಚನೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುತ್ತದೆ.
ಸ್ನ್ಯಾಪ್: ಸ್ನ್ಯಾಪ್ಚಾಟ್ ಮಾಲೀಕತ್ವ ಈ ಕಂಪನಿಯದ್ದು. ನಿಜಜೀವನದಲ್ಲಿ ಡಿಜಿಟಲ್ ಫೀಚರ್ಗಳನ್ನು ಒದಗಿಸಿ ಬಳಕೆದಾರರಿಗೆ ಅವರದ್ದೇ ಆದ ಅವತಾರಗಳನ್ನು ಸೃಷ್ಟಿಸುವುದಕ್ಕೆ ಆಗ್ಯುಮೆಂಟೆಡ್ ರಿಯಾಲಿಟಿ ಬಳಸಲು ಅವಕಾಶ ನೀಡಿದೆ. ಆಗ್ಯುಮೆಂಟೆಡ್ ರಿಯಾಲಿಟಿ ಫೀಚರ್ಗಳನ್ನು ಕಣ್ಣಡಕಗಳಲ್ಲಿ ಅಳವಡಿಸಿ ಅದರ ವಿಶೇಷ ಅನುಭವಗಳನ್ನು ಬಳಕೆದಾರರಿಗೆ ನೀಡಿದೆ. ಮೆಟಾವರ್ಸ್ನಲ್ಲಿ ಈ ಕಣ್ಣಡಕಗಳ ಪಾತ್ರ ಮಹತ್ವದ್ದು.
ಇತರೆ ಕಂಪನಿಗಳು: ಆಟೋಡೆಸ್ಕ್, ಟೆನ್ಸೆಂಟ್, ಎಪಿಕ್ ಗೇಮ್್ಸ, ಅಮೆಜಾನ್ ಮುಂತಾದ ಕಂಪನಿಗಳೆಲ್ಲ ಮೆಟಾವರ್ಸ್ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.
ಮೆಟಾವರ್ಸ್ ಮೂಲಕ ಹೊಸ ಪ್ರಪಂಚವೊಂದು ಸೃಷ್ಟಿಯಾಗುತ್ತಿದೆ. ಇದು ಇನ್ನೂ ಬೆಳವಣಿಗೆ ಹಂತದಲ್ಲಿ ಇರುವ ಕಾರಣ ‘ಕಲ್ಪನೆ’ ಎಂದು ಹೇಳಬಹುದು. ಇದುವರೆಗೂ ಟೆಕ್ಸ್ ್ಟ ಆಧಾರಿತ ಸಾಮಾಜಿಕ ವೇದಿಕೆಗಳು ಚಾಲ್ತಿಯಲ್ಲಿದ್ದು, ಧ್ವನಿ ಆಧಾರಿತ ಸಾಮಾಜಿಕ ವೇದಿಕೆಗಳು ಪ್ರವರ್ಧಮಾನಕ್ಕೆ ಬರತೊಡಗಿವೆ. ಡಿಜಿಟಲ್ ಜಗತ್ತಿನ ಭವಿಷ್ಯ ಧ್ವನಿ ಆಧಾರಿತವಾಗಿರಲಿದೆ. ಸಹಸ್ರಮಾನದ ಹಿಂದಿನ ಘಟನೆಗಳನ್ನು ಪುನರ್ ರೂಪಿಸುವುದು ಇನ್ನು ಸಾಧ್ಯವಾಗಲಿದೆ. ಅದೇ ರೀತಿ, ಬಾಹ್ಯಾಕಾಶಯಾನದ ಅನುಭವವನ್ನು ತಾವಿರುವ ಜಾಗದಿಂದಲೇ ಪಡೆಯುವುದು ಸಾಧ್ಯವಾಗಲಿದೆ.
ಈ ವ್ಯವಸ್ಥೆ ಬಹುಆಯಾಮದ ಅನುಭವವನ್ನು ಜನರಿಗೆ ನೀಡಲಿದೆ. ಡಿಜಿಟಲ್ ಮತ್ತು ಭೌತಿಕ ಜಗತ್ತಿನ ಅಂತರ ನೀಗಿಸುವ ಈ ವ್ಯವಸ್ಥೆ ನಿರ್ವಿುಸಲು ಈಗಾಗಲೇ ಅನೇಕ ಕಂಪನಿಗಳು ಕೆಲಸ ಮಾಡುತ್ತಿವೆ. ಕೋಟ್ಯಂತರ ಉದ್ಯೋಗ ಸೃಜನೆಯಾಗುತ್ತಿದೆ. 5ಜಿ ಇಂಟರ್ನೆಟ್ ಲಭ್ಯ ಆಗಲಿರುವ ಕಾರಣ ನಗರ-ಗ್ರಾಮೀಣ ಕಂದಕ ಕೂಡ ದೂರವಾಗಲಿದೆ. ಯಾರೂ ಈ ಪ್ರಪಂಚದಿಂದ ಹೊರತಾಗಿರಲು ಸಾಧ್ಯವಿಲ್ಲ. ಇದು ಇಂಜಿನಿಯರ್ಗಳಿಗೆ ಮಾತ್ರ ಸಂಬಂಧಿಸಿದ್ದು, ನಮಗಲ್ಲ ಎಂದು ಸಾಮಾನ್ಯ ಶಿಕ್ಷಣ ಪಡೆದವರು ದೂರ ಉಳಿಯುವಂತಿಲ್ಲ. ಅವರೂ ಈ ಜಗತ್ತಿನ ಭಾಗವಾಗಿರಲಿದ್ದಾರೆ. ಅಲ್ಲೂ ಶಿಕ್ಷಣ ವ್ಯವಸ್ಥೆ, ಕಾನೂನು ವ್ಯವಸ್ಥೆ, ಅರ್ಥವ್ಯವಸ್ಥೆ ಇರಲಿದೆ. ಎಲ್ಲರಿಗೂ ಇಲ್ಲಿ ಉದ್ಯೋಗಾವಕಾಶ ಸೃಜನೆಯಾಗಲಿದೆ. ಇದನ್ನು ಬಳಸಿಕೊಳ್ಳಲು ಎಲ್ಲರೂ ಸಿದ್ಧರಾಗಬೇಕು. ಭೌತಿಕ ಜಗತ್ತಿನಲ್ಲಿರುವಂತೆ ಇಲ್ಲೂ ಅಕ್ರಮ, ಅಪರಾಧಗಳಾಗಬಹುದು. ಅದನ್ನು ತಡೆಯುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಈಗಿಂದಲೇ ಇದಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟಿನೊಳಗೆ ಮೆಟಾವರ್ಸ್ ಶಿಕ್ಷಣವನ್ನೂ ಸೇರಿಸಿಕೊಳ್ಳಬೇಕು. ಶಿಕ್ಷಕರಿಗೆ ಇದರಲ್ಲಿ ಹೆಚ್ಚಿನ ಅವಕಾಶವಿದೆ.
| ಡಾ. ಉದಯ ಶಂಕರ ಪುರಾಣಿಕ ಮಾಹಿತಿ ತಂತ್ರಜ್ಞಾನ ತಜ್ಞ