ವಿಶ್ವಧರ್ಮ ಸಮ್ಮೇಳನ ನೀಡಿದ ಸಂದೇಶ

Untitled design (11)
Published on
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಇತ್ತೀಚೆಗೆ ಸಂಬಂಧಿಸಿದಂತೆ ಮಾನವನ ಇತಿಹಾಸದಲ್ಲಿ ಸೆಪ್ಟೆಂಬರ್ 11ಕ್ಕೆ ಇರುವ ಪ್ರಾಧಾನ್ಯ ಮತ್ತಾವ್ಯ ದಿನಕ್ಕೂ ಇರಲಾರದು. 132 ವರ್ಷಗಳ ಹಿಂದೆ ಇದೇ ದಿನದಂದು ಭಾರತೀಯ ಯುವ ವೇದಾಂತಿ, ಮಹಾ ಸಂನ್ಯಾಸಿ ಈ ನಾಡು ಅನಾದಿಕಾಲದಿಂದ ತಾನು ನಂಬಿ ಪೋಷಿಸಿಕೊಂಡು ಬರುತ್ತಿರುವ ಅದ್ಭುತ ಸತ್ಯಗಳನ್ನು ಆಧುನಿಕ ವೈಭವಗಳ, ಭೋಗ ಭಾಗ್ಯಗಳ ಉತ್ಸುಂಗದಲ್ಲಿದ್ದು ಭೂಮಿಯ ಮೇಲಿನ ಸ್ವರ್ಗವೋ, ಗಂಧರ್ವಲೋಕವೋ ಎಂದು ಜನ ಆಶ್ಚರ್ಯಗೊಳ್ಳುತ್ತಿದ್ದ, ಅಮೆರಿಕೆಯಲ್ಲಿ ತನ್ನ ಸಿಂಹವಾಣಿಯಿಂದ ಬಿತ್ತರಿಸಿ ಅವರಿಗೆಲ್ಲ ಒಂದು ಹೊಸ ದಿಗಂತವನ್ನೇ, ಹೊಸ ಸಂಜೀವಿನಿಯನ್ನೇ ಪರಿಚಯಿಸಿದ ದಿನ ಇದು. ಇತ್ತ ಭರತಭೂಮಿ- ಆ ಸನಾತನ ಚಿಂತನೆಗಳ ಪ್ರಯೋಗಶಾಲೆ- ತನ್ನ ವಿಸ್ಮೃತಿಯನ್ನು ಕೊಡವಿಕೊಂಡು ಮತ್ತೊಮ್ಮೆ ವಿಶ್ವಗುರುವಾಗುವತ್ತ ಅಣಿಯಾಗಲೆತ್ನಿಸಿದ ದಿನವೂ ಹೌದು!

ಅಮೆರಿಕದ ಜನತೆ ತಮ್ಮ ದೇಶವನ್ನು ಕೊಲಂಬಸ್ 1493ರಲ್ಲಿ ಕಂಡುಹಿಡಿದ 400ನೇ ವರ್ಧಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ ಪರಿಣಾಮವೇ ಬೃಹತ್ ಕೊಲಂಬಿಯನ್ ಮೇಳ. ಅದರ ಒಂದು ಭಾಗವಾಗಿ ವಿಶ್ವ ಧಾರ್ವಿುಕ ಸಮ್ಮೇಳನ. ಎಲ್ಲರಿಗೂ ಭಾಗವಹಿಸಲು ಅನುಕೂಲವಾಗಲೆಂದು ಬೃಹತ್ ಅಮೆರಿಕದ ಸ್ವಲ್ಪ ಹೆಚ್ಚು ಕಡಿಮೆ ಮಧ್ಯಭಾಗದಲ್ಲಿರುವ ಮತ್ತು ಅಂದಿನ ಸರ್ವರೀತಿಯಲ್ಲೂ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿದ್ದ ಷಿಕಾಗೋ ನಗರವನ್ನು ಅದಕ್ಕೆ ವೇದಿಕೆಯಾಗಿ ಆರಿಸಲಾಗಿತ್ತು. ಕ್ರಿ.ಶ.1417ರಲ್ಲಿ ಮಾರ್ಟಿನ್ ಲೂಥರ್ ತನ್ನ ಉಗ್ರ ಭಾಷಣ ಮತ್ತು ಪ್ರಕಟಣೆಗಳ ನೆರವಿನಿಂದ ಕ್ರಿಶ್ಚಿಯನ್ ಧರ್ಮದ ಇಬ್ಭಾಗಕ್ಕೆ ಕಾರಣವಾಗಿ ಈ ಬೃಹತ್ ಆಘಾತದಿಂದ ತತ್ತರಿಸಿ ಹೋದ ಕ್ಯಾಥೋಲಿಕ್ ಪಂಥ ತನ್ನನ್ನು ಮತ್ತೊಮ್ಮೆ ಸದೃಢಗೊಳಿಸಿಕೊಳ್ಳುವತ್ತ ಇನ್ನಿಲ್ಲದ ಸಾಹಸ ಮಾಡುತ್ತಿತ್ತು.

ಇಗ್ನೇಷಿಯಸ್ ಲಯೋಲಾ ಬೇಗನೆ ಎಚ್ಚೆತ್ತು ತನ್ನ counter reformation ಪ್ರಾರಂಭಿಸಿ ಈ ಮರ್ವಘಾತಕ್ಕೆ ಸ್ವಲ್ಪ ಮಟ್ಟಿಗೆ ಪುನಶ್ಚೇತನ ನೀಡಿರದಿದ್ದಲ್ಲಿ ಕ್ರಿಶ್ಚಿಯನ್ ಚರ್ಚ್ ರಸಾತಲಕ್ಕೆ ಕುಸಿಯಬೇಕಾಗುತ್ತಿತ್ತು. ಮುಂದೆ ಒಂದಾದ ಮೇಲೊಂದರಂತೆ ಬರುತ್ತಲೇ ಇದ್ದ ಕೂಪರ್ನಿಕಸ್, ಗೆಲಿಲಿಯೋ ಮುಂತಾದ ವಿಜ್ಞಾನಿಗಳ ಸಂಶೋಧನೆಗಳು ಬೈಬಲ್ ಸಿದ್ಧಾಂತದ ವಿರುದ್ಧವಿದ್ದುದರಿಂದ ಅವುಗಳ ಹೊಡೆತಗಳು, ಅವುಗಳಿಗೆ ಸಿಗುತ್ತಿದ್ದ ಸಾರ್ವಜನಿಕ ಬೆಂಬಲಗಳೂ ಚರ್ಚ್ ಬೆಂಬಲಿಗರನ್ನು ಚಿಂತೆಗೀಡು ಮಾಡತೊಡಗಿದವು. ತಡೆಯಲಾಗದ ಮರ್ಮಾಘಾತ ಬಂದಿದ್ದು ಚಾರ್ಲ್ಸ್ ಡಾರ್ವಿನ್ 1850ರ ದಶಕದಲ್ಲಿ ಪ್ರಕಟಿಸಿದ ವಿಕಾಸವಾದದಿಂದ. ಇದರ ಕುರಿತು ಸಾರ್ವಜನಿಕವಾಗಿಯೇ ಲಂಡನ್​ನಂಥ ಮಹಾನಗರದಲ್ಲಿ ಕ್ರಿಶ್ಚಿಯನ್ ಪಾದ್ರಿ ವಿಲ್ಬರ್ ಫೋರ್ಸ್ ಮತ್ತು ಡಾರ್ವಿನ್​ನ ನಿಕಟವರ್ತಿ ಥಾಮಸ್ ಹಕ್ಸ್ಲಿ ನಡುವೆ ನಗರದ ಜನಜನಿತ ಪ್ರದೇಶದಲ್ಲಿ ಸಾರ್ವಜನಿಕ ಚರ್ಚೆಯೇ ನಡೆದು, ಬಳಸಿದ ಭಾಷೆ ಸಭ್ಯತೆಯ ಮೇರೆಯನ್ನೂ ದಾಟಿಹೋಗಿತ್ತು.

ಧರ್ಮ ಸಮ್ಮೇಳನ ನಡೆದಿದ್ದು 1893ರ ಸೆಪ್ಟೆಂಬರ್ 11ರಿಂದ 27ರವರೆಗೆ 17 ದಿನಗಳ ಕಾಲ. ಇಲ್ಲಿ ವಿವೇಕಾನಂದರು ಕೊಟ್ಟಿದ್ದು ಆರು ಉಪನ್ಯಾಸಗಳನ್ನು. ಅವೇ Response to Welcome (ಸ್ವಾಗತಕ್ಕೆ ಉತ್ತರ), Why We Disagree (ನಾವು ಏಕೆ ಭಿನ್ನವಾಗಿದ್ದೇವೆ),Paper on Hinduism (ಹಿಂದೂಧರ್ಮ), Religion Not the Crying Need of India, (ಭಾರತಕ್ಕೆ ಅಗತ್ಯವಿರುವುದು ಧರ್ಮವಲ್ಲ ), Buddhism The Fulfillment of Hinduism (ಬೌದ್ಧ ಧರ್ಮ ಹಿಂದೂ ಧರ್ಮದ ಪರಿಪೂರ್ಣತೆ), Address at the Final Session (ಅಂತಿಮ ಅಧಿವೇಶನದಲ್ಲಿ ಮಾಡಿದ ಭಾಷಣ) ಈ ಆರೂ ಉಪನ್ಯಾಸಗಳು ಒಂದೊಂದೂ ಒಂದೊಂದು ರೀತಿಯ ರತ್ನಮಾಲೆ, ಸುಪ್ರಸಿದ್ಧ ವೃತ್ತಪತ್ರಿಕೆಯೊಂದು ಒಕ್ಕಣಿಸಿದಂತೆ Ornaments of the English language.

ಅಲ್ಲಿಯ ಪದಪ್ರಯೋಗ, ಭಾಷಾ ಸರಳತೆ, ಲಘುಹಾಸ್ಯ, ರ್ತಾಕ ನಿರೂಪಣೆ ಒಂದೊಂದೂ ಅಮೆರಿಕನ್ನರನ್ನು ದಂಗು ಬಡಿಸಿದವು. ಮೂರನೇ ಉಪನ್ಯಾಸವನ್ನು ಕೊಡಲೆಂದೇ ಸ್ವಾಮೀಜಿ ಸಾವಿರಾರು ಕಿಲೋಮೀಟರ್ ಕ್ರಮಿಸಿ ತಮ್ಮ ತಾಯ್ನಾಡಿನಿಂದ ಪಯಣಿಸಿದ್ದು. ಅವರು ಉಳಿದುಕೊಂಡಿದ್ದೆಲ್ಲಿ? ಪಾರ್ಲಿಮೆಂಟ್ (ಸಮ್ಮೇಳನ) ನಡೆದ ಜಾಗದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿದ್ದ ಲಿಯಾನ್ ದಂಪತಿ ಮನೆಯಲ್ಲಿ. ಅವರ ಮೊಮ್ಮಗಳು ಎಂಟು ವರ್ಷ ವಯಸ್ಸಿನ ಕಾರ್ನೀಲಿಯಾ ವಿವೇಕಾನಂದರಿಂದ ಅದೆಷ್ಟು ಪ್ರಭಾವಿತಳಾಗಿದ್ದಳೆಂದರೆ ಎಷ್ಟೋ ವರ್ಷಗಳ ನಂತರ ಭಾರತಕ್ಕೆ ಬಂದು ಬೇಲೂರು ಮಠವನ್ನು ಸಂದರ್ಶಿಸಿ ತನ್ನ ಬಾಲ್ಯದ ನೆನಪುಗಳೆಲ್ಲ ನಿನ್ನೆ ನಡೆದಿದೆಯೇನೋ ಎನ್ನುವಷ್ಟು ನಿಖರವಾಗಿ ಅಂದಿನ ಅಧ್ಯಕ್ಷ ಸ್ವಾಮಿ ಶಂಕರಾನಂದರ ಮುಂದೆ ಹೇಳಿಕೊಂಡು ಆನಂದಭಾಷ್ಪಗಳನ್ನು ಸುರಿಸಿದ್ದಳು.

ಮೊದಲನೇ ಉಪನ್ಯಾಸದಲ್ಲೇ, ಎರಡನೇ ವಾಕ್ಯದಲ್ಲೇ ವಿವೇಕಾನಂದರು ತನ್ನ ಧರ್ಮವೇ ವಿಶ್ವದ ಅತ್ಯಂತ ಪ್ರಾಚೀನ ಸಂನ್ಯಾಸಿಗಳ ಸಂಘ ಮತ್ತು ಬೇರೆಲ್ಲ ಧರ್ಮಗಳ ತಾಯಿ ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ವಾಕ್ಯಗಳಲ್ಲಿ ನಾವು ಕಾಣುವುದು ತಮ್ಮ ದೇಶ ಹಾಗೂ ಧರ್ಮಗಳ ಬಗೆಗಿನ ಅವರ ಹೆಮ್ಮೆ. ಐ ಚಞ ಟ್ಟಟ್ಠಛ ಎನ್ನುವುದು ಮತ್ತೆ ಮತ್ತೆ ಅನುರಣಿತವಾಗುತ್ತದೆ. ಅವರ ಆ ಹೆಮ್ಮೆಗೆ ಕಾರಣ ಒಣ ಜಂಬವಲ್ಲ. ಬದಲಾಗಿ ಯಾವ ಘನ ಅಂತರಧರ್ವಿುಯ ಸೌಹಾರ್ದವನ್ನು ಈ ಸಮ್ಮೇಳನ ತನ್ನ ಉದ್ದೇಶವಾಗಿಟ್ಟುಕೊಂಡಿದೆಯೋ ಆ ತತ್ವವನ್ನು ಪ್ರತಿನಿತ್ಯ ಹಿಂದೂ ಬಾಲಕ ತನ್ನ ಸಂಧ್ಯಾವಂದನೆಯ ಕಾಲದಲ್ಲಿ (ಆಕಾಶಾತ್ ಪತಿತಂ ತೋಯಂ.) ಮತ್ತು ಭಗವಾನ್ ಶ್ರೀಕೃಷ್ಣ ಅಂದೇ ಭಗವದ್ಗೀತೆಯಲ್ಲಿ ಸಾರಿರುವುದು! ಇದಕ್ಕೆ ಹೋಲಿಸಿದರೆ ಬೇರೆ ದೇಶಗಳು, ಧರ್ಮಗಳು ಹೇಗೆ ಅನ್ಯ ಧರ್ಮಗಳನ್ನು ತಮ್ಮ ನಾಡಿನಿಂದ ಹೊರದಬ್ಬಿದ್ದವು ಮತ್ತು ಅಂಥ ಸಂದರ್ಭಗಳಲ್ಲೆಲ್ಲ ಭಾರತ ಹೇಗೆ ಮುಂದೆ ಬಂದು ಆಶ್ರಯ ನೀಡಿ ಸಂರಕ್ಷಿಸಿತು ಎಂಬುದನ್ನೂ ಸ್ಪಷ್ಟಪಡಿಸುತ್ತ, ‘ಇಂದಿನ ಸಮಾರಂಭ ಅಂಥ ಸಂಕುಚಿತ ಭಾವನೆಗಳಿಗೆ ಮೃತ್ಯುಘಾತವನ್ನೀಯಲಿ ಎಂದು ಹೃತ್ಪೂರ್ವಕವಾಗಿ ಭಾವಿಸುತ್ತೇನೆ’ ಎಂಬ ತಮ್ಮ 471 ಪದಗಳ ಸಂಕ್ಷಿಪ್ತ ಭಾಷಣ ತಾವು ಕನಸಿನಲ್ಲೂ ಊಹಿಸದಿದ್ದ ಪ್ರಭಾವವನ್ನು ಬೀರಬಲ್ಲ ಅದ್ಭುತ ಶಕ್ತಿ ಪ್ರವಾಹವೇ ಆಗಿತ್ತು ಎಂಬುದು ಅವರಿಗೆ ಅರ್ಥವಾಗಿದ್ದೇ ಮಾರನೇ ದಿನ ಅವರು ವೃತ್ತಪತ್ರಿಕೆಗಳನ್ನು ನೋಡಿದಾಗ!

ಮುಂದಿನದ್ದೆಲ್ಲ ಇತಿಹಾಸ. ನಾನು ಈಗಾಗಲೇ ಪ್ರಸ್ತಾಪಿಸಿದಂತೆ ಅವರ ಆರೂ ಭಾಷಣಗಳು ಅದ್ಭುತಗಳೇ. ಆದರೂ ಹಿಂದೂಧರ್ಮವನ್ನು ಕುರಿತ ಉಪನ್ಯಾಸವನ್ನು ಬಿಟ್ಟರೆ ಬೇರೆಲ್ಲ ಸಂಕ್ಷಿಪ್ತ. ಬೇರೆ ಧಾರ್ವಿುಕ ಪ್ರತಿನಿಧಿಗಳ ತಲೆ ಚಿಟ್ಟು ಹಿಡಿಸುವ ಉಪನ್ಯಾಸಗಳಿಂದ ಬೇಸತ್ತು ಜನ ಎದ್ದು ಹೋಗಲು ಉಪಕ್ರಮಿಸಿದಾಗ ಅವರನ್ನೆಲ್ಲ ಹಿಡಿದಿಡಲು ವ್ಯವಸ್ಥಾಪಕರು ಬಳಸುತ್ತಿದ್ದ ಉಪಾಯ ಎಂದರೆ ಕೊನೆಗೆ ವಿವೇಕಾನಂದರು ಮಾತನಾಡುತ್ತಾರೆ ಎಂದು ಘೊಷಿಸುತ್ತಿದ್ದುದು. ಇದನ್ನು ಗೌರವಿಸಲು ಸ್ವಾಮೀಜಿ ಕೊನೆಗೆ ಒಂದು ಪುಟ್ಟ ಭಾಷಣ ಮಾಡಬೇಕಾದ ಅನಿವಾರ್ಯತೆಯುಂಟಾಗುತ್ತಿತ್ತು. ‘ಕ್ರಿಶ್ಚಿಯನ್ ರಾಷ್ಟ್ರಗಳು ಶ್ರೀಮಂತವಾಗಿವೆ. ಆದ್ದರಿಂದ ಎಲ್ಲರೂ ಅದೇ ಧರ್ಮವನ್ನು ಅನುಸರಿಸಬೇಕು’ ಎಂಬಂಥ ತಲೆಯಿಲ್ಲದ ಹೇಳಿಕೆಗಳೂ ಕೆಲಪಾದ್ರಿಗಳಿಂದ ಹೊರಬಂದವು. ಅಲ್ಲಿ ಇದನ್ನೆಲ್ಲ ಕೇಳಿಸಿಕೊಂಡು ಸುಮ್ಮನೆ ಕೂಡುವ ಜಾಯಮಾನದವರೇ ಸ್ವಾಮೀಜಿ? ‘ನಿಮ್ಮ ಶ್ರೀಮಂತಿಕೆಗೆ ಕಾರಣ ನೀವು ಪರರಾಷ್ಟ್ರಗಳ ಕುತ್ತಿಗೆಯ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಅವರನ್ನು ದೋಚುತ್ತಿರುವುದು.

ಒಬ್ಬ ಹಿಂದೂ ಹೀಗೆ ಎಂದೂ ಬದುಕಲೆತ್ನಿಸುವುದಿಲ್ಲ’ ಎಂದು ಕಪಾಳಮೋಕ್ಷ ಮಾಡಿ ಅಲ್ಲಿಯೇ ಒಬ್ಬ ನಿಜ ಹಿಂದೂವಿನ ಪರಿಚಯ ಮಾಡಿಕೊಟ್ಟರು. ಜಗತ್ತಿನ ಬೇರೆಲ್ಲ ಧರ್ಮಗಳಿಗೂ ಒಂದೇ ಧರ್ಮ ಆಧಾರವಾಗಿರಬೇಕು ಎಂದು ಪರೋಕ್ಷವಾಗಿ ಕ್ರೖೆಸ್ತಧರ್ಮವನ್ನು ಮುಂದೊಡ್ಡಲು ನಡೆಸಿದ ಪ್ರಯತ್ನಕ್ಕೆ ನಿಜವಾಗಿಯೂ ಅಂಥ ಧರ್ಮ ಹೇಗಿರುತ್ತೆ ಎಂಬ ಚಿತ್ರಣಕೊಟ್ಟು ಆ ವಕ್ತಾರನನ್ನು ಮೌನವಾಗಿಸಿದರು. ಸ್ವಾಮೀಜಿಯ ಎಲ್ಲ ಚಿಂತನೆಗಳಲ್ಲೂ ಕಾಣುತ್ತಿದ್ದುದು ಮನುಷ್ಯನ ಒತ್ತು ಸತ್ಯದೆಡೆಗೆ ಮಾತ್ರ ಇರಬೇಕು. ನಿರ್ಭಿಡೆಯಿಂದ ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸಬೇಕು, ಅನುಭವವೇ ಸ್ವೀಕೃತಿಗೆ ಆಧಾರವಾಗಿರಬೇಕು. ನಾವು ಬೋಧಿಸುವ ಧರ್ಮ ನಿಜಕ್ಕೂ ಸತ್ಯವೇ ಆಗಿದ್ದರೆ ಅದು ಕಾಲ, ದೇಶ, ಭಾಷೆಗಳನ್ನು ಮೀರಿರಬೇಕು. ಅದಕ್ಕೆ ಅನಂತ ಮುಖಗಳಿರಬೇಕು. ಪ್ರತಿಯೊಂದನ್ನೂ, ಪ್ರತಿಯೊಂದು ಮಾರ್ಗವನ್ನೂ ಪುರಸ್ಕರಿಸಿ ಸ್ವೀಕರಿಸುವಂತಿರಬೇಕು. ಸತ್ಯದ ಪ್ರತಿ ಆಯಾಮಕ್ಕೂ, ಪ್ರತಿ ಅಭಿವ್ಯಕ್ತಿಗೂ ಅಲ್ಲಿ ಅವಕಾಶವಿರಬೇಕು ಎಂಬುದೇ ಆಗಿತ್ತು. ಸ್ವಯಂ ಸ್ವಾಮೀಜಿಯೇ ಅಧ್ಯಾತ್ಮದ ಅತ್ಯುನ್ನತ ಅನುಭವವಾದ ನಿರ್ವಿಕಲ್ಪ ಸಮಾಧಿಯಲ್ಲಿ ಚರಮಸತ್ಯದ ಸಂಪೂರ್ಣ ಅನುಭವವನ್ನು ಹಲವು ಬಾರಿ ತಾವೇ ಪಡೆದುಕೊಂಡಿದ್ದರಲ್ಲ!

ಅಮೆರಿಕದ ಜನತೆಗೆ ಈ ಧರ್ಮಸಮ್ಮೇಳನದಿಂದ ಆದ ಪ್ರಯೋಜನ ಅಷ್ಟಿಷ್ಟಲ್ಲ. ‘ಅವರ ಉಪನ್ಯಾಸಗಳನ್ನೆಲ್ಲ ಕೇಳಿ ನನ್ನಲ್ಲಾದ ಬದಲಾವಣೆ ಎಂದರೆ ನನ್ನ ಧರ್ಮದ ಬಗ್ಗೆ ನನಗಿದ್ದ ಗೌರವ ಜಾಸ್ತಿಯಾಗಿದ್ದು’ ಎಂದು ಒಬ್ಬ ವ್ಯಕ್ತಿ ವೃತ್ತಪತ್ರಿಕೆಯಲ್ಲಿ ಒಕ್ಕಣಿಸಿದ್ದ. ಸ್ವಯಂ ವಿವೇಕಾನಂದರಿಗೆ ಇದೇ ಬೇಕಿತ್ತು. ತಮ್ಮ ಕೊನೆಯ ಭಾಷಣದಲ್ಲಿ ಅವರು ಇದನ್ನೇ ಹೇಳಿದ್ದರು. ‘ಹಿಂದೂವೊಬ್ಬ ಮುಸಲ್ಮಾನನೋ ಕ್ರೖೆಸ್ತನೋ ಆಗಬೇಕಿಲ್ಲ. ಹಾಗೆಯೇ ಕ್ರೖೆಸ್ತ ಮುಸಲ್ಮಾನನೋ, ಮುಸಲ್ಮಾನ ಹಿಂದೂವೋ ಆಗಬೇಕಾಗಿಲ್ಲ. ಬೇರೆಲ್ಲ ಧರ್ಮಗಳಲ್ಲಿರುವ ಉತ್ತಮ ಅಂಶಗಳನ್ನು ಸ್ವೀಕರಿಸಿ ಪ್ರತಿಯೊಬ್ಬನೂ ತನ್ನ ಧರ್ಮಕ್ಕೇ ಸೇರಿದ ಉತ್ತಮ ಅನುಯಾಯಿಯಾಗಬೇಕೇ ಹೊರತು ತನ್ನ ಮತವನ್ನೇ ಬದಲಿಸಿಕೊಂಡು ಬಿಡುವುದಲ್ಲ’. ಸ್ವಾಮೀಜಿ ಬೋಧಿಸಿದ ಪ್ರತಿ ವಾಕ್ಯವೂ ಈಗಾಗಲೇ ವೇದಾಂತ ಚಿಂತನೆಯಲ್ಲಿ ಲೆಕ್ಕವಿಲ್ಲದಷ್ಟು ಪುನರುಚ್ಚರಿತಗೊಂಡ ಸತ್ಯಗಳೇ. ಅವರೇ ಹೇಳಿರುವಂತೆ ಉಪನಿಷತ್ತುಗಳನ್ನು ಬಿಟ್ಟು ಅವರು ಬೇರೆನನ್ನೂ ಉಪದೇಶಿಸಲೇ ಇಲ್ಲ. ಇದೇ ಭಾರತೀಯ ತತ್ವ, ಭಾರತೀಯ ಚಿಂತನೆ, ಭಾರತೀಯ ಬೆಳಕು. ಈ ಬೆಳಕಿನ ಸೂರ್ಯನನ್ನೇ ಸ್ವಾಮಿ ವಿವೇಕಾನಂದರು ಪಾಶ್ಚಾತ್ಯರಿಗೆ ಪರಿಚಯಿಸಿದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net