

ಸಾಹಿತ್ಯ ಕ್ಷೇತ್ರದ ಸುಪ್ರಸಿದ್ಧ ನೊಬೆಲ್ ವಿಜೇತ (1946ರಲ್ಲಿ ಭಾಜನ) ಹರ್ಮನ್ ಹಸ್ಸಿ ಹುಟ್ಟಿನಿಂದ ಜರ್ಮನ್ ; ನೆಲೆಸಿದ್ದು ಸ್ವಿಜರ್ಲೆಂಡ್. ಬಹುಶೃತ ‘ಸಿದ್ಧಾರ್ಥ’ ಈತನ ಕೃತಿಯೇ. ಇದು ಚಲನಚಿತ್ರವಾಗಿ ರೂಪಗೊಂಡು ವಿಶ್ವದಾದ್ಯಂತ ಹೆಸರು ಮಾಡಿದ್ದರ ನೆನಪು (70ರ ದಶಕದಲ್ಲಿ) ಇನ್ನೂ ಹಸಿರು. ಭಾರತವನ್ನು ಕುರಿತ ಇವನ ಹೇಳಿಕೆ ನವಿರೇಳಿಸುವಂಥದ್ದು. ನಿಜಕ್ಕೂ ಭಾರತವನ್ನು ಸರಿಯಾಗಿ ಅರಿತವರು ಪಾಶ್ಚಾತ್ಯ ಚಿಂತಕರೇ. ಪೂರ್ವಗ್ರಹರಹಿತ, ಸತ್ಯಾನ್ವೇಷಣೆ, ವೈಜ್ಞಾನಿಕಮನೋಭಾವಗಳ ಯಾವುದೇ ಪಾಶ್ಚಾತ್ಯ ಚಿಂತಕ ಭಾರತವನ್ನು ಸ್ಮರಿಸಿಕೊಂಡಾಗ ಭಾವಪರವಶನಾಗುತ್ತಾನೆ, ವಿಸ್ಮಿತನಾಗುತ್ತಾನೆ! ಹಸ್ಸಿ ಹೇಳುವುದು ಹೀಗೆ ‘India is not only a country and Something geographical, but the home and youth of the soul! The everywhere and nowhere , the oneness of all times’. ಆನಂದೋದ್ರೇಕದಿಂದ ಪರವಶನಾದ ತೈತ್ತರೀಯ ಉಪನಿಷತ್ತಿನ ಋಷಿಯ ಉದ್ಗಾರದಂತಿದೆ ಈ ಮಾತು! ಭಾರತದಲ್ಲಿ ಅಂಥದ್ದೇನನ್ನು ಕಂಡ! ಇರುವುದನ್ನೇ ಕಂಡ!
ಇಡೀ ತನ್ನ ಅಸ್ತಿತ್ವದ ಪ್ರಧಾನಭಾಗವನ್ನು ಭಾರತ ಮೀಸಲಾಗಿಟ್ಟಿದ್ದು ಮನುಷ್ಯನನ್ನು ಅಧ್ಯಯನ ಮಾಡುವುದಕ್ಕಾಗಿ. ಆದರೆ ಅದು ಘಟಿಸಿದ್ದು ಬಾಹ್ಯ ಪ್ರಕೃತಿಯ ಸಂಶೋಧನೆಯಲ್ಲಿ ಶತಶತಮಾನಗಳಷ್ಟು ತೊಡಗಿದ ನಂತರವೇ ; ಗ್ರೀಕೋರೋಮನ್ ಜನಾಂಗ ಅಥವಾ ಅದರ ಮುಂದುವರಿದ ಆವೃತ್ತಿಯಾದ ಆಧುನಿಕ ಪಾಶ್ಚಾತ್ಯರಂತೆ. ಇದರ ಫಲಶ್ರುತಿಯೇ ಬಾಹ್ಯ ಪ್ರಾಕೃತಿಕ ಶಕ್ತಿಗಳು ಚೈತನ್ಯಪೂರ್ಣ ; ಹಾಗೆಯೇ ಅವನ ಆಂತರ್ಯದಲ್ಲಿ ಅಡಗಿರುವ ಶಕ್ತಿಗಳು ಕೂಡ ; ಮತ್ತು ಅವು ಪರಸ್ಪರ ಸಂಬಂಧವುಳ್ಳದ್ದು, ಅಷ್ಟೇ ಅಲ್ಲ, ಒಂದೇ ಶಕ್ತಿಯ ಭಿನ್ನ ಭಿನ್ನ ಆಯಾಮಗಳಂತೆ ಬೇರೆ ಬೇರೆ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ ಸೂರ್ಯ ಮತ್ತು ಕಣ್ಣು; ಆಕಾಶ ಮತ್ತು ಕಿವಿ ಇತ್ಯಾದಿ ಎಂಬ ಅದ್ಭುತ ರಹಸ್ಯವನ್ನು ಅನಾವರಣ ಮಾಡಿದ್ದು. ಆದರೆ ಬಾಹ್ಯ ಶಕ್ತಿ ನಮ್ಮ ನಿಯಂತ್ರಣವನ್ನು ಮೀರಿದ್ದು. ಅದರ ಆಂತರಿಕ ಪ್ರತಿವಾದಿ (internal counterpart) ನಮ್ಮ ನಿಯಂತ್ರಣದಲ್ಲೇ ಇರುವಂಥದ್ದು. ಈ ಎಲ್ಲ ಆಂತರಿಕ ಶಕ್ತಿಗಳ ಮೂಲ ಮನಸ್ಸಾದರೆ ಬಾಹ್ಯ ಶಕ್ತಿಗಳ ಮೂಲವೇ ಸೃಷ್ಟಿಕರ್ತ ಅಥವಾ ‘ಮಹತ್’.
ಮನಸ್ಸಿನ ನಿಯಂತ್ರಣದಿಂದ ಬಾಹ್ಯಪ್ರಕೃತಿಯ ನಿಯಂತ್ರಣವಾಗುವುದಾದರೆ ಮತ್ತು ಮನಸ್ಸು ನಿರಂತರ ನಮಗೆ ಎಟುಕುವ, ನಮ್ಮೊಳಗೇ ಇರುವ ವಸ್ತುವಾದರೆ ಅದರ ಅಧಿಪತ್ಯವನ್ನು ಸಾಧಿಸುವುದಕ್ಕಿಂತ ಮಹತ್ವಪೂರ್ಣ ಕಾರ್ಯ ಮನುಷ್ಯನಿಗೆ ಯಾವುದಿದೆ? ಈ ಪ್ರಶ್ನೆ ಪ್ರಸ್ತುತ ಮತ್ತೂ ಅರ್ಥಪೂರ್ಣ. ಆದರೆ ಮನೋನಿಗ್ರಹ ಕ್ಲಿಷ್ಟವಾದ ವಿಷಯ; ಅಸಾಧ್ಯವಾದದ್ದೇನಲ್ಲ. ಹಲವಾರು ರೀತಿಯಲ್ಲಿ ಇದನ್ನು ಸಾಧಿಸಬಹುದಾದರೂ ಶ್ರೀಕೃಷ್ಣ ಗೀತೆಯಲ್ಲಿ ಸೂಚಿಸಿದ ವಿಧಾನವೇ ಸೂಕ್ತ. ಅವನು ಹೇಳುತ್ತಾನೆ. ವಸ್ತುಗಳಿಗಿಂತ ಇಂದ್ರಿಯಗಳು ಶ್ರೇಷ್ಠ (ಮುಖ್ಯ) ಇಂದ್ರಿಯಗಳಿಗಿಂತ ಮನಸ್ಸು, ಮನಸ್ಸಿಗಿಂತ ಬುದ್ಧಿ ಮತ್ತು ಬುದ್ಧಿಗಿಂತ ಆತ್ಮ. ಆತ್ಮನಿಗಿಂತಲೂ ಶ್ರೇಷ್ಠ, ಮುಖ್ಯವಾದದ್ದು ಯಾವುದೂ ಇಲ್ಲ. ಇದು ಕಠೋಪನಿಷತ್ತಿನ ಪ್ರತಿಧ್ವನಿ. ಇದರ ಅರ್ಥ ಇಂದ್ರಿಯಗಳಲ್ಲಿ ಪಟುತ್ವ (ಸಂತೃಪ್ತಿಗೊಳಿಸುವ ಸಾಮರ್ಥ್ಯ)ವಿಲ್ಲದಿದ್ದಲ್ಲಿ ಅರ್ಥಾತ್ ಮನುಷ್ಯ ಇಂದ್ರಿಯಗಳನ್ನು ಹಾಳುಗೆಡಹುವಷ್ಟು ಭೋಗಿಯಾದರೆ ಯಾವ ಭೋಗವಸ್ತುವಿನಿಂದ ಏನು ಪ್ರಯೋಜನ? ಇಂದ್ರಿಯಗಳ ಹಂಗಿನಲ್ಲಿ ವಸ್ತುವಿದೆ ಮತ್ತು ವಸ್ತುವನ್ನು ಇಂದ್ರಿಯ ಆಳುತ್ತದೆ ; ಇದೇ ವಾದ ಮುಂದುವರಿದು ಮನಸ್ಸು ಇಂದ್ರಿಯಗಳನ್ನು ಆಳುತ್ತದೆ ಹಾಗೆಯೇ ಬುದ್ಧಿ ಮನಸ್ಸನ್ನು ಮತ್ತು ಆತ್ಮ ಬುದ್ಧಿಯನ್ನು ಆಳುತ್ತದೆ. ಇನ್ನೂ ಸೂಕ್ಷಾ್ಮರ್ಥವೇನೆಂದರೆ ಭೋಗದ ನಿಯಂತ್ರಣದಿಂದ ಇಂದ್ರಿಯಗಳ ಶಕ್ತಿ ಜಾಸ್ತಿಯಾದರೆ, ಇಂದ್ರಿಯಗಳ ನಿಯಂತ್ರಣದಿಂದ ಮಾನಸಿಕಶಕ್ತಿ, ಮನಸ್ಸಿನ ನಿಯಂತ್ರಣದಿಂದ ಬುದ್ಧಿಶಕ್ತಿ ಮತ್ತು ಬುದ್ಧಿಯ ಸದುಪಯೋಗದಿಂದ ಆತ್ಮಶಕ್ತಿ ಇಲ್ಲವೇ ಆತ್ಮಜಾಗೃತಿ ಉಂಟಾಗುತ್ತದೆ. ಇದನ್ನೇ ತಪಸ್ಸು ಎನ್ನುವುದು.
ಈ ವಿಶ್ಲೇಷಣೆಯಿಂದ ತಿಳಿಯುವುದೇನೆಂದರೆ ಆತ್ಮಜಾಗೃತಿಯನ್ನೇ ನೇರವಾಗಿ ಗುರಿಯಿಟ್ಟುಕೊಂಡು ಅದನ್ನು ಸಾಧಿಸಿದಲ್ಲಿ ತನ್ಮೂಲಕ ಬುದ್ಧಿ, ಬುದ್ಧಿಯ ಪ್ರಚೋದನೆಯಿಂದ ಮನಸ್ಸು ಮತ್ತು ಮನಸ್ಸಿನ ನಿಯಂತ್ರಣದಿಂದ ಬಾಹ್ಯ ಪ್ರಕೃತಿ ಎಲ್ಲವೂ ಅಧೀನಕ್ಕೆ ಬರುವಂತಾಗುತ್ತದೆ. ಇದು ಏನೋ ಒಂದು ವಿಚಾರಧಾರೆ ಎಂದು ಹಗುರವಾಗಿ ಭಾವಿಸಬಾರದು! ಕೇವಲ ಮನಸ್ಸನ್ನು ಅಧ್ಯಯಿನಿಸಿ ಇಂದು ಭಾರತ ಖಗೋಳಶಾಸ್ತ್ರ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಸಂಶೋಧನೆಗಳನ್ನು ಮಾಡಿದೆ. ಇದಕ್ಕಾಗಿ ಪರಿಪೂರ್ಣ, ಸುವ್ಯವಸ್ಥಿತ ವಿಜ್ಞಾನವನ್ನೇ ನಿರ್ಮಾಣ ಮಾಡಿದೆ. ಈ ವಿಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿಯ ಪಠ್ಯವೇ ಆಗಬೇಕಿತ್ತು ಅದೇ ರಾಜಯೋಗ. ರಾಜಯೋಗದ ಪ್ರಾರಂಭಿಕ ಪಾಠಗಳೇ ಯೋಗಾಸನ ಮತ್ತು ಪ್ರಾಣಾಯಾಮ.
ಹರ್ಮನ್ ಹಸ್ಸಿಯ ಭಾವಪರವಶತೆಯನ್ನು ನೆನಪಿಸಿಕೊಳ್ಳಿ, ಪರಕೀಯನಾದ ಅವನು ಹಾಗೇಕೆ ಉದ್ವೇಗಗೊಂಡ. ಮನುಷ್ಯನ ಉದ್ಧಾರಕ್ಕೆ ಭಾರತದ ಶ್ರಮ ಎಷ್ಟು! ಭಾರತದ ಕೊಡುಗೆ ಎಷ್ಟು!!
ಈ ಆತ್ಮಜಾಗೃತಿಯ ಮಹತ್ವವನ್ನು ಅರಿತ ಭಾರತ ಇದನ್ನೇ ಪ್ರತಿಯೊಬ್ಬನ ಉದ್ಧಾರಕ್ಕೆ ಇರುವ ರಾಜಮಾರ್ಗವನ್ನಾಗಿ ಗುರುತಿಸಿತು. ಯಾವುದೇ ಸಾಧನೆ, ಅಧಿಕಾರ ಹಾಗೂ ವಿದ್ವತ್ತು ಮನೋಬುದ್ಧಿಗಳ ವಲಯಕ್ಕೇ ಸೇರಿದ್ದು, ಅವುಗಳ ನಿಯಂತ್ರಣದಲ್ಲೇ ಇರುವಂಥದ್ದು ಮತ್ತು ಇಲ್ಲಿ ಮೋಸ ಹೋಗುವ ಸಾಧ್ಯತೆಯೇ ಇಲ್ಲ. ಪಶ್ಚಾತ್ತಾಪಕ್ಕೆ ಎಡೆಯೇ ಇಲ್ಲ. ಪ್ರಜ್ಞಾವಂತ ಮನುಷ್ಯನ ಗುರಿ ಇರಬೇಕಾದ್ದೇ ಇಲ್ಲಿ. ಈ ನಿಟ್ಟಿನಲ್ಲಿರುವ ಎಲ್ಲ ಮಾರ್ಗಗಳನ್ನೂ ಒಟ್ಟಿಗೆ ಸೇರಿಸಿ ಅದಕ್ಕೆ ‘ಧರ್ಮ’ ಎಂದು ಕರೆದರೆ ಅದರ ನಾಲ್ಕು ಪ್ರಧಾನ ಅಂಶಗಳನ್ನು ‘ಯೋಗ’ ಎಂದು ಕರೆಯಿತು. ಈ ನಾಲ್ಕು ಯೋಗಗಳಲ್ಲಿ ಎಲ್ಲರಿಗೂ ಎಟುಕುವ ಸ್ವಭಾವ ಸಹಜವಾದ ಸರಳಮಾರ್ಗವೇ ಭಕ್ತಿಯೋಗ. ಇಲ್ಲಿ ಮನಸ್ಸಿಗೆ, ಇಂದ್ರಿಯಗಳಿಗೆ ಎಂದಿಗೂ ಸವಾಲಾಗಿಯೇ ಉಳಿದಿರುವ ನಿಗ್ರಹ ಅಥವಾ ನಿಯಂತ್ರಣ ಗೌಣ. ಆದರೆ ಮನಸ್ಸಿನ ಭಾವನೆಗಳೆಲ್ಲ ಹರಿಯಬೇಕಾದ್ದು ತನ್ನದೇ ಆತ್ಮನೆಡೆಗೆ ಇಲ್ಲವೇ ಈ ಆತ್ಮನ ವರ್ಣರಂಜಿತ, ಬಹು ಆಕರ್ಷಣೀಯ ಇನ್ನೊಂದು ರೂಪವೇ ಆದ ಪರಮಾತ್ಮನೆಡೆಗೆ ಅಥವಾ ಭಗವಂತನೆಡೆಗೆ. ವೇದಗಳಲ್ಲಿ ಬರುವ ಇಂದ್ರಾದಿ ದೇವತೆಗಳು ಪುರಾಣಗಳಲ್ಲಿ ಬರುವ ಬಹುಸಂಖ್ಯೆಯ ದೇವ-ದೇವಿಯರು ಈ ಆತ್ಮತತ್ತ್ವ ಅಥವಾ ಚರಮಸತ್ಯದ ಬೇರೆ ಬೇರೆ ರೂಪಗಳು. ಸನಾತನ ಧರ್ಮವು ‘ಬಹುದೇವೋಪಾಸನೆಗೆ’ ಎಡೆಮಾಡಿದೆ ಎಂದು ದೂರುವವರಿದ್ದಾರೆ. ಅದು ‘ಬಹುದೇವೋಪಾಸನೆ’ ಅಲ್ಲ ‘ಬಹುರೂಪೋಪಾಸನೆ’ ಮಾತ್ರ ಅಲ್ಲಿರುವುದು ಏಕಮೇವಾದ್ವಿತೀಯವಾದ ನಿರ್ಗಣ ನಿರಾಕಾರ ಬ್ರಹ್ಮ ಅಥವಾ ಪರಮಾತ್ಮ. ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ (ಒಂದೇ ಸತ್ಯವನ್ನು, ಅರಿತವರು ಬಹು ಹೆಸರುಗಳಿಂದ ಕರೆಯುತ್ತಾರೆ). ಇದು ವೇದದ ಘೊಷಣೆ. ಸ್ವಾಮಿ ವಿವೇಕಾನಂದರು ಇದನ್ನು ಆಧ್ಯಾತ್ಮಿಕ ಲೋಕದ ‘ಮ್ಯಾಗ್ನಕಾರ್ಟ’ ಎಂದು ಕರೆಯುತ್ತಾರೆ. ಇರುವ ಒಂದೇ ದೇವತೆ ನಮಗಿಷ್ಟವಾಗುವ ರೂಪ ಮತ್ತು ಹೆಸರನ್ನು ಪಡೆಯಲು
ಸಿದ್ಧನಿದ್ದಾನೆ. ಈಗಿರುವ ಯಾವ ರೂಪವೂ ನಾಮವೂ ಹಿಡಿಸದಿದ್ದಲ್ಲಿ ನಮ್ಮದೇ ಆದ ಹೊಸರೂಪ, ಹೊಸನಾಮವನ್ನು ಸೃಷ್ಟಿಸಿಕೊಳ್ಳಬಹುದು.
ಈ ಸ್ವಾತಂತ್ರ್ಯ ನಮ್ಮ ಧರ್ಮದಲ್ಲಿ ಮಾತ್ರ ಇದೆ. ಸನಾತನ ಧರ್ಮದ ಈ ಹೆಗ್ಗಳಿಕೆಯನ್ನು ಸ್ವಾಮಿ ವಿವೇಕಾನಂದರು ತಮ್ಮ ಮೊಟ್ಟಮೊದಲ ಷಿಕಾಗೋ ಭಾಷಣದಲ್ಲೇ ಪ್ರಸ್ತಾಪಿಸಿದ್ದಾರೆ (ಯೇ ಯಥಾ ಮಾಂ ಪ್ರಪದ್ಯಂತೇ..).
ಇದೇ ಸನಾತನ ಧರ್ಮದ ಹೆಗ್ಗಳಿಕೆ ಮತ್ತು ಅಂತರ್ಧರ್ವಿುೕಯ ಘರ್ಷಣೆಗಳು ಸಂಭವಿಸಬಾರದು ಎಂದರೆ ಇದರ ಮಹತ್ವವನ್ನು ತಿಳಿಯಬೇಕಾದ್ದು ಅನಿವಾರ್ಯ. ತಾತ್ಪರ್ಯವೇನೆಂದರೆ ಮನುಷ್ಯನಿಗೆ ನಿರಂತರ ಗಮನ ಇರಬೇಕಾದ್ದು ಆತ್ಮಜಾಗೃತಿಯೆಡೆಗೆ. ಈ ನಿಟ್ಟಿನಲ್ಲಿ ಸ್ವಲ್ಪ ಸಾಧನೆ ಕೂಡ ಮಹತ್ತರವಾದ ಅಭಿವೃದ್ಧಿಯನ್ನು ಕೊಡುತ್ತದೆ ಎಂದು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟವಾಗಿ ಸಾರಿದ್ದಾನೆ. ‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’ ಎಂದರೆ ಇದೇ ಅರ್ಥ. ಈ ಕಾರಣದಿಂದಲೇ ಸನಾತನ ಸಂಸ್ಕೃತಿ ‘ಧರ್ಮ’ವನ್ನು ಈ ದೇಶದ ಉಸಿರನ್ನಾಗಿಸಿದ್ದು. ಯಾವ ಕಾರಣಕ್ಕಾಗಿಯೂ, ಯಾವ ಲಾಭಕ್ಕಾಗಿಯೂ ಧರ್ಮವನ್ನು ತ್ಯಜಿಸಬೇಡ ಎಂದು ಸಾರಿಸಾರಿ ಮೊಳಗಿದ್ದು. ಈ ಪ್ರವೃತ್ತಿಯನ್ನು ಮನುಷ್ಯನಲ್ಲಿ ನಖಶಿಖಾಂತ ಬೆಳೆಸುವು ದಕ್ಕಾಗಿ ಭಾರತ ಅನಾದಿಕಾಲದಿಂದಲೂ ಪ್ರಯತ್ನವನ್ನು ಮಾಡಿಕೊಂಡೇ ಬರುತ್ತಿದೆ. ಅದರ ಒಂದು ಅಂಶವೇ ಹಬ್ಬಗಳು.
ಪೂಜೆ, ಜಪ, ಪಾರಾಯಣ, ಉತ್ತಮ ಗ್ರಂಥಗಳ ಅಧ್ಯಯನ, ಸತ್ಸಂಗ, ತೀರ್ಥಯಾತ್ರೆ, ಧ್ಯಾನ, ಮೌನ, ಸಾಧುಸಂಗ, ಸೇವಾಕಾರ್ಯಗಳು ಇವೆಲ್ಲ ಈ ಕಾರಣಕ್ಕಾಗಿಯೇ ನಿರ್ವಿುತವಾದದ್ದು. ವರ್ಷಪೂರ್ತಿ ಮನಸ್ಸು ಆತ್ಮಜಾಗೃತಿಯಲ್ಲಿ ತೊಡಗಲಿ ಎಂಬ ಉದ್ದೇಶದಿಂದ. ಚೈತ್ರಮಾಸದಿಂದ ಫಾಲ್ಗುಣದವರೆಗೆ ಹರಡಿರುವ ಹಬ್ಬಗಳ ಸೂಕ್ಷ್ಮ ಅವಲೋಕನ ಅವುಗಳ ಹಿಂದಿನ ಸುವ್ಯವಸ್ಥಿತ ಹಾಗೂ ಸುದೀರ್ಘ ಅಧ್ಯಯನವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಅವಲೋಕಿಸುವ ವ್ಯವಧಾನ ಮತ್ತು ಸೂಕ್ಷ್ಮಗ್ರಾಹಿತ್ವ ಇರಬೇಕಷ್ಟೇ.
ಯುಗಾದಿಯ ಬೇವು-ಬೆಲ್ಲಗಳ ಸೇವನೆ ಜೀವನದ ಶ್ರೇಯಸ್ಸು ಪ್ರೇಯಸ್ಸು ; ಸುಖ ದುಃಖಗಳೆರೆಡೂ ಜೀವನವನ್ನು ರೂಪಿಸುವ, ಗಟ್ಟಿಗೊಳಿಸುವ ತತ್ತ್ವವನ್ನು ಮನದಟ್ಟು ಮಾಡಿಕೊಟ್ಟು ರಾಮನ ಆದರ್ಶಗಳು, ಸಮಷ್ಟಿ ಪ್ರಜ್ಞೆಗಳ ಮಹತ್ವವನ್ನು ಕಣ್ಮುಂದೆ ನಿಲ್ಲಿಸುತ್ತದೆ. ಮುಂದೆ ಬರುವುದು ಯೋಗ್ಯ ಗುರುವಿನ ಅವಶ್ಯಕತೆ. ಇದೇ ಗುರುಪೂರ್ಣಿಮೆಯ ಸಂದೇಶ. ಗುರುವಿನ ಗುರಿಯೇ ಸರ್ಪದೋಪಾದಿಯಲ್ಲಿ ನಮ್ಮಲ್ಲಿ ಹುದುಗಿರುವ ಕುಂಡಲಿನಿಯನ್ನು ಜಾಗೃತಗೊಳಿಸುವುದು. ನಮ್ಮ ಜೀವನ ಒಂದು ಜನ್ಮಕ್ಕೆ ಸೀಮಿತವಲ್ಲ ಎಂದು ಜೀವನದ ಸಮಗ್ರ ದೃಷ್ಟಿಯನ್ನು ತೆಗೆದುಕೊಂಡಾಗ ಮನಸ್ಸು ತನ್ನ ಸಮತ್ವವನ್ನು ಸಹಜವಾಗಿಯೇ ಸಾಧಿಸುತ್ತದೆ ಮತ್ತು ಇದು ಯೋಗಸಾಧನೆಗಷ್ಟೇ ಅವಶ್ಯಕವಲ್ಲ ಜೀವನದ ಯಾವ ಸಾಧನೆಗೂ ಅಡಿಗಲ್ಲು ಎಂಬ ತತ್ತ್ವವನ್ನು ಮನಗಾಣಿಸಲು ಶ್ರೀಕೃಷ್ಣ ಅಷ್ಟಮಿಯಂದೇ ನಮ್ಮ ಜೊತೆಗೂಡುತ್ತಾನೆ. ಅಷ್ಟಮಿಯ ಚಂದ್ರ ಸಮತ್ವದ ಸಂಕೇತ. ಶುಕ್ಲಪಕ್ಷ-ಕೃಷ್ಣಪಕ್ಷಗಳೆರಡರಲ್ಲೂ ಅಷ್ಟಮಿಯಂದು ಮಾತ್ರ ಚಂದ್ರ ಒಂದೇ ಸ್ಥಿತಿಯಲ್ಲಿರುತ್ತಾನೆ. ಹಾಗೆಯೇ ನಮ್ಮ ಜೀವನದ ಶುಕ್ಲ ಮತ್ತು ಕೃಷ್ಣ ಪಕ್ಷಗಳು ಕೂಡ ಇರಬೇಕಾದ್ದು.
ಮತ್ತೆ ಕುಂಡಲಿನಿಯೋಗದೆಡೆಗೆ ಗಮನ ಸೆಳೆಯಲ್ಪಟ್ಟು ಮೂಲಾಧಾರದ ಗಣಪತಿ ಆರಾಧನೆ ಮೂಲಕ ದೇವಿ ಮಹಾತ್ಮೆಯನ್ನು ಸಾರುವ ನವರಾತ್ರಿಯನ್ನು ಪ್ರವೇಶಿಸುತ್ತೇವೆ ; ನವರಾಕ್ಷಸರ ಸಂಹಾರದ ಪ್ರಸ್ತುತತೆ ಮನಗಾಣುತ್ತೇವೆ. ರಾಕ್ಷಸರು ಹುಟ್ಟುವುದೇ ರಾತ್ರಿಯಲ್ಲಿ ಅರ್ಥಾತ್ ದೌರ್ಬಲ್ಯಗಳ ತಾಯಿ ಅಜ್ಞಾನವೇ; ಕತ್ತಲೆಯೇ. ಈ ಎಲ್ಲ ಸಮಸ್ಯೆಗಳ ಮೂಲ ಮತ್ತು ನಿಗೂಢತೆ ಅವುಗಳ ಪರಿಹಾರಕ್ಕಾಗಿ ಬಳಸಬೇಕಾದ ಶಕ್ತಿಗಳ ಪ್ರಯೋಗ, ಆಯುಧಗಳ ಸಂಯೋಜನೆ ಇವುಗಳ ಅರಿವು ಮಾತ್ರ ನಮಗೆ ವಿಜಯವನ್ನು ತಂದು ಕೊಡಬಲ್ಲದು. ಹೀಗೆಯೇ ಮುಂದುವರಿದ ಯಾತ್ರೆ ಯೋಗಿಗಳ ಪ್ರಧಾನ ಲಕ್ಷಣವಾದ ರಾತ್ರಿಗಳನ್ನು ಮಂಗಳಕರವಾಗಿ ಕಳೆಯುವುದು ಹೇಗೆ? ರಾತ್ರಿಗಳಿಂದ ಪ್ರಮಾದಗಳು ಘಟಿಸದಂತೆ ‘ಜಾಗೃತಿ’ ನೆಲೆಗೊಳ್ಳಲು ಮಾರ್ಗವೇನು ಎಂದು ತಿಳಿಯಹೊರಟಾಗ ಮನಸ್ಸಿನ ಆರು ಶತ್ರುಗಳಲ್ಲಿ ಪ್ರಬಲವಾದ ಕಾಮವನ್ನು ಸುಡುವುದರ ಅನಿವಾರ್ಯತೆ ಗೋಚರಿಸುತ್ತದೆ, ಈ ಎಲ್ಲ ಪ್ರಕ್ರಿಯೆಗಳು ಸಾಂಗಗೊಂಡರೆ ಅದು ಜೀವನವಸಂತವೇ ಹೌದು. ಅದೇ ವಸಂತೋತ್ಸವ ; ಅದೇ ನಿತ್ಯೋತ್ಸವ!
ನಮ್ಮ ಜೀವನ ನಿತ್ಯೋತ್ಸವದಂತೆಯೇ ಇರಬೇಕು. ಸ್ವಭಾವದಲ್ಲಿ ನಾವೆಲ್ಲ ಆನಂದಸ್ವರೂಪರು. ನಿರಾನಂದ ನಮಗೆ ಹೇಳಿಮಾಡಿಸಿದ್ದಲ್ಲ. ಇದನ್ನು
ಮನಗಾಣಿಸಲು ಸನಾತನ ಸಂಸ್ಕೃತಿ ನೂರು ಭಾಷೆಯನ್ನು ಬಳಸುತ್ತದೆ ಮತ್ತು ಸಾಧಿಸಲು ನೂರು ಮಾರ್ಗಗಳನ್ನು ಸಂಶೋಧಿಸಿದೆ ; ತೆರೆದಿಟ್ಟಿದೆ. ಇದನ್ನೆಲ್ಲ ನಾವು ಅರಿಯಬೇಕು. ಅರಿತು ಬಾಳಬೇಕು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)