ವಿಪತ್ತಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸೇವೆ ಅತ್ಯಗತ್ಯ

ವಿಜಯವಾಣಿ (5)
Published on

ವಿಶ್ವಾದ್ಯಂತ ಅ.10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ಘೋಷವಾಕ್ಯ ಹೀಗಿದೆ: ದುರಂತ ಮತ್ತು ತುರ್ತು ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸೇವೆಯ ಲಭ್ಯತೆ. ನಿಜ, ಜಗತ್ತಿನಲ್ಲಿ ಅನೇಕ ಅವಘಡಗಳು ಜರುಗುತ್ತಲಿವೆ. ಉದಾ: ಪ್ರವಾಹ, ಯುದ್ಧ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಮನೆ, ಹೊಲಗಳಿಗೆ ಬೆಂಕಿ ಇತ್ಯಾದಿ.

ಇಂತಹ ಘಟನೆಗಳು ಜರುಗಿದಾಗ ಅನೇಕರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹಲವರಿಗೆ ಮನೋ ಕಾಯಿಲೆಗಳಾದ ಆತಂಕ, ಖಿನ್ನತೆ, ನಿದ್ರಾಹೀನತೆ ಕಾಡಬಹುದು. ಇವರಿಗೆ ಮಾನಸಿಕ ಬೆಂಬಲ, ಚಿಕಿತ್ಸೆ, ಕೌನೆ್ಸಲಿಂಗ್ ಅತಿ ಅಗತ್ಯ. ನೈಸರ್ಗಿಕ ವಿಪತ್ತುಗಳು ಜರುಗಿದಾಗ ಬರೀ ಔಷಧಿ, ಶಾರೀರಿಕ ಚಿಕಿತ್ಸೆ ನೀಡಿದರೆ ಸಾಲದು. ಈ ಜನರ ಮನೋ ಕಾಯಿಲೆಗೂ ಚಿಕಿತ್ಸೆ ನೀಡು ವುದು ಪ್ರಾಯಶಃ ಇನ್ನೂ ಹೆಚ್ಚು ಮುಖ್ಯ ಮತ್ತು ಅವಶ್ಯಕ. ನೈಸರ್ಗಿಕ ವಿಪತ್ತು ಘಟಿಸಿದಾಗ ಅನೇಕರಿಗೆ ಭಯ, ಹೆದರಿಕೆ, ಜರ್ಜರಿತವಾದ ಮನಸ್ಸು, ಜಿಗುಪ್ಪೆ, ಮೈ ಕೈ ನೋವು, ನಿದ್ರಾಹೀನತೆ, ಎಲ್ಲದರಲ್ಲಿಯೂ ನಿರುತ್ಸಾಹ ಕಾಣಬಹುದು.

ಹಲವರು ತಮ್ಮ ಹಸಿವನ್ನೇ ಲೆಕ್ಕಿಸದೇ ವಿಪತ್ತಿನಲ್ಲಿ ಕಳೆದುಕೊಂಡವರ ಬಗ್ಗೆ ದುಃಖಿಸುತ್ತ ತಾವು ಕೂಡಾ ಮನೋ ಕಾಯಿಲೆಗೆ ಜಾರಬಹುದು. ಹಲವು ಮಕ್ಕಳು ಶಾಲೆಗೆ ಹೋಗಲು ನಿರಾಕರಿಸಬಹುದು. ಇಂತಹ ಸಂದರ್ಭಗಳಲ್ಲಿ ಸ್ಕೂಲ್ ಫೋಬಿಯಾ ಕಾಣಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಪಾಠ, ಪಠ್ಯಗಳನ್ನೇ ಕಡೆಗಣಿಸಬಹುದು. ಇದರಿಂದ ಅವರ ಪಾಲಕರಿಗೆ ಇನ್ನೂ ಹೆಚ್ಚಿನ ಆತಂಕ ವಾಗಿ ಅವರು ಕೂಡ ಮನೋ ಕಾಯಿಲೆಗೆ ತುತ್ತಾಗಬಹುದು. ಕೆಲವು ಮಕ್ಕಳು ಅಳುವುದು, ಮೌನಕ್ಕೆ ಜಾರುವದು, ಶೀಘ್ರಕೋಪಿಗಳಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಜನರಿಗೆ ಮಾನಸಿಕ ಸಹಾಯ, ಬೆಂಬಲ, ಆಶ್ರಯ ಅಗತ್ಯ.

ಉಚಿತ ಶಿಬಿರಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಮನೋ ವೈದ್ಯರು ಅಥವಾ ಸಾಮಾಜಿಕ ಕಾರ್ಯಕರ್ತರು ಮುಂದಾಳತ್ವ ವಹಿಸಿ ಅಗತ್ಯ ಇದ್ದವರಿಗೆ ಸಮಾಧಾನ, ಚಿಕಿತ್ಸೆ ನೀಡಬೇಕಾಗುತ್ತದೆ. ಹಲವು ಬಾರಿ ತೀವ್ರ ತರಹದ ಖಿನ್ನತೆ, ಆತ್ಮ ಹತ್ಯೆ ಯಂಥ ವಿಚಾರ ತಲೆದೋರಿದಾಗ ಅಂತಹವರನ್ನು ಮನೋ ವೈದ್ಯರು ಒಳರೋಗಿಗಳಾಗಿ ದಾಖಲಿಸಿ ತ್ವರಿತ ಚಿಕಿತ್ಸೆ ನೀಡುವುದು ಕಡ್ಡಾಯ. ಈ ದಿಶೆಯಲ್ಲಿ ಕುಟುಂಬ ಮತ್ತು ಸಮುದಾಯದ ಪಾತ್ರವನ್ನು ಕಡೆಗಣಿಸಲಾಗದು. ವ್ಯಕ್ತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅವನ ನೋವನ್ನು ಆಲಿಸಿ, ಸಹಾನುಭೂತಿ ವ್ಯಕ್ತಪಡಿಸಿ ಪೋ›ತ್ಸಾಹ, ಧೈರ್ಯ ಹೇಳುವುದು ಮುಖ್ಯ. ಆ ಸಂದರ್ಭದಿಂದ ಹೊರಬರಲು ಇಂತಹ ಮಾರ್ಗಗಳು ಬಹಳ ಸೂಕ್ತ ಮತ್ತು ಪರಿಣಾಮಕಾರಿ. ಹಲವು ಸಂದರ್ಭಗಳಲ್ಲಿ ಪೂರಕ ಮಾನಸಿಕ ಚಿಕಿತ್ಸೆ ಬಹಳ ಆವಶ್ಯಕ ಹಾಗೂ ಅಂತ್ಯತ ಪರಿಣಾಮಕಾರಿ. ಪೂರಕ ಚಿಕಿತ್ಸೆ ಏನು ಮಾಡಬೇಕು. ಮುಂದಿನ ಅಂಶಗಳನ್ನು ಗಮನಿಸಿ.

  • ತಾಳ್ಮೆಯಿಂದ ಅವರ ಕಷ್ಟವನ್ನು, ಅನುಭವ ಗಳನ್ನು ಅಲಿಸುವುದು.
  • ಬೆಂಬಲ, ಧೈರ್ಯ, ಸಹಾಯ ನೀಡುವುದು.
  • ತ್ವರಿತವಾಗಿ ಅವರಿಗೆ ಅಗತ್ಯ ಇರುವ ಎಲ್ಲ ಮಾಹಿತಿ ಪೂರೈಸುವುದು- ಉದಾ: ಅವರ ಸಂಬಂಧಿಕರು ಎಲ್ಲಿ ಸಿಲುಕಿಕೊಂಡಿದ್ದಾರೆ, ಅವರ ಸ್ಥಿತಿ ಹೇಗಿದೆ ಇತ್ಯಾದಿ.
  • ಸಾಮಾಜಿಕ, ಆರ್ಥಿಕ, ಮಾನಸಿಕ ಬೆಂಬಲ ನೀಡುವುದು.
  • ತಿಕೂಲ ಭಾವನೆ ನಿರ್ವಹಣೆಗಳ ಬಗ್ಗೆ ತರಬೇತಿ ನೀಡುವುದು.

ಇಂಥ ಕೌಶಲಗಳಿಂದ ವ್ಯಕ್ತಿಗಳ ಮನೋ ಕಾಯಿಲೆ, ಭಯ, ಹೆದರಿಕೆ ಕಡಿಮೆ ಆಗಿ ಅವರಿಗೂ ಜೀವನದಲ್ಲಿ ಭರವಸೆ, ಸಂತೋಷ ಮೂಡುತ್ತದೆ. ಸಂತ್ರಸ್ತರು ಇಂತಹ ಭರವಸೆಯಿಂದ ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ದ್ವಿಗುಣಗೊಳಿಸ ಬಲ್ಲರು. ಅಲ್ಲದೆ, ಆತ್ಮಹತ್ಯೆಯ ಯೋಚನೆ ಮಾಯವಾಗಿ ಜೀವನದಲ್ಲಿ ಹೊಸಉತ್ಸಾಹವನ್ನು ಕಂಡುಕೊಂಡಾರು.

ಇತ್ತೀಚಿನ ದಿನಗಳಲ್ಲಿ ಪ್ರವಾಹ, ಬರ, ಅತಿವೃಷ್ಟಿ, ರೈತರ ಆತ್ಮ ಹತ್ಯೆ ಮುಂತಾದವುಹೆಚ್ಚಿರುವುದು ದುರ್ದೈವದ ಸಂಗತಿ. ಇಂಥ ಸಂದರ್ಭಗಳಲ್ಲಿ ಬರೀ ಹಣಕಾಸಿನ ಸಹಾಯ ಹಸ್ತ ಚಾಚಿದರೆ ಸಾಲದು. ಅವರಿಗೆ ಅಗತ್ಯವಿರುವ ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯಗಳನ್ನು ತಂದು ಕೊಡಲು ಮುಂದಾಗಬೇಕು. ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದು ನಾವು ಸದಾ ನೆನಪಿನಲ್ಲಿರಬೇಕಾದ ಸಂಗತಿಗಳತ್ತ ಗಮನಹರಿಸೋಣ.

ನೆನಪಿನಲ್ಲಿ ಇಡಬೇಕಾದ ಅಂಶಗಳು

  1. 1. ಯಾವುದೇ ಆಪತ್ತು ಬಂದರೂ ಮಾನಸಿಕ ಶಕ್ತಿ, ಧೈರ್ಯ ಕಳೆದುಕೊಳ್ಳುವುದು ಬೇಡ. ಮನೋ ಧೃಡತೆಯಿಂದ ವಿಶ್ವವನ್ನೇ ಗೆದ್ದ ಅನೇಕರಿದ್ದಾರೆ.
  2. ಶಾರೀರಿಕ ತುರ್ತಚಿಕಿತ್ಸೆಯ ಜೊತೆಗೆ ಮಾನಸಿಕ ಚಿಕಿತ್ಸೆಯು ಸೂಕ್ಷ್ಮ ಮತ್ತು ಆವಶ್ಯಕ.
  3. ಸಮಾಜದ ಬೆಂಬಲದಿಂದ ಇಂತಹ ಜರ್ಜರಿತರು ಹೊಸ ಬದುಕನ್ನು ಕಂಡುಕೊಳ್ಳಲು ನೆರವಾಗೋಣ.

-ಡಾ. ವಿನೋದ ಜಿ. ಕುಲಕರ್ಣಿ, ಹುಬ್ಬಳ್ಳಿ (ಲೇಖಕರು ನರ ಹಾಗೂ ಮನೋರೋಗ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net