

ಬಸ್ಸಿನಲ್ಲಿ ಉಪ್ಪರಿಗೆಯಲ್ಲಿ ಅಂದರೆ ಮೇಲಿನ ಮಹಡಿಯಲ್ಲಿ ಕುಳಿತೆವು. ಕಾರಿನಲ್ಲಿ ಸುಮಾರು 45 ನಿಮಿಷ ಪ್ರಯಾಣದ ದಾರಿ, ಅಲ್ಲಲ್ಲಿ ನಿಂತು ಪ್ರಯಾಣಿಕರನ್ನು ಕರೆದೊಯ್ಯುವ ಕಾರಣ ಡಬಲ್ಡೆಕ್ಕರ್ ಬಸ್ಸಿನಲ್ಲಿ ಒಂದೂವರೆ ತಾಸಿನ ಪ್ರಯಾಣವಾಯಿತು. ಆದರೆ ಅವರಿಗೆ ಸ್ವಲ್ಪವೂ ಬೇಜಾರೆನಿಸಲಿಲ್ಲ. ಕಾರಣವೇನೆಂದರೆ ಅವರಿಗೂ ವಾಹನಗಳ ಮೇಲಿದ್ದ ಆಸಕ್ತಿ. ಬಸ್ಸಿನ ಮೇಲಿನ ಮಹಡಿಯಿಂದ ರಸ್ತೆಯಲ್ಲಿ ಇತರೆ ವಾಹನಗಳ ಸವಾರರು, ವಾಹನಗಳು ಸಣ್ಣದಾಗಿ ಕಂಡು ಸೋಜಿಗವಾಗುತ್ತಿತ್ತು. ಈ ಘಟನೆ ನಡೆದ ಸುಮಾರ 55 ವರ್ಷಗಳ ನಂತರ ಮುಂಬೈನಲ್ಲಿ ಗುಜರಿಗೆ ಹಾಕುವ ಸಲುವಾಗಿ ಡಬಲ್ಡೆಕ್ಕರ್ ಬಸ್ಸುಗಳನ್ನು ಹರಾಜು ಮಾಡುತ್ತಾರೆ ಎಂಬ ಸುದ್ದಿ ತಿಳಿದು ಬಂತು. ಆ ಬಸ್ಸುಗಳನ್ನು ತಂದು ಶ್ರೀಕ್ಷೇತ್ರದ ವಾಹನ ಸಂಗ್ರಹಾಲಯದಲ್ಲಿ ಯಾಕೆ ಪ್ರದರ್ಶನಕ್ಕೆ ಇಡಬಾರದು ಎಂದೆನಿಸಿತು. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದೆ. ಅವರು ಮುಂಬೈಗೆ ಹೋಗಿ ಸಂಸ್ಥೆಯನ್ನು ಸಂರ್ಪಸಿ ಹರಾಜಿನ ಪ್ರಕ್ರಿಯೆ ತಿಳಿದುಕೊಂಡರು.
ಹರಾಜಿನ ಕರಾರಿನಲ್ಲಿದ್ದಂತೆ ಆ ಬಸ್ಸುಗಳನ್ನು ಹಾಗೆಯೇ ತರುವಂತಿರಲಿಲ್ಲ. ಅಲ್ಲೇ ಒಡೆದು ಗುಜರಿಯ ಕಬ್ಬಿಣವನ್ನು ಮಾತ್ರ ಹೊರತರಲು ಅವಕಾಶವಿತ್ತು. ಆದರೆ ನಮಗೆ ಬೇಕಾದದ್ದು ಕಬ್ಬಿಣದ ಚೂರುಗಳಲ್ಲ. ಇಡಿಯ ವಾಹನ ಹೇಗಿದೆಯೋ ಹಾಗೇ ಬೇಕಿತ್ತು. ಅಲ್ಲಿಯ ಶಾಸಕರು, ಮತ್ತಿತರ ಕ್ಷೇತ್ರದ ಭಕ್ತರನ್ನು ಸಂರ್ಪಸಿದಾಗ ಹೇಗೋ ಎರಡು ಬಸ್ಸುಗಳನ್ನು ಇದ್ದ ಸ್ಥಿತಿಯಲ್ಲೇ ತರುವ ಅನುಮತಿ ದೊರೆಯಿತು.
ಅವು ಚಾಲನಾ ಸ್ಥಿತಿಯಲ್ಲಿರಲಿಲ್ಲ. ಬಸ್ಸನ್ನು ಧರ್ಮಸ್ಥಳಕ್ಕೆ ತರಬೇಕಿದ್ದರೆ ಸುಮಾರು 750 ಕಿ.ಮೀ. ಕ್ರಮಿಸಬೇಕಿತ್ತು. ಅದನ್ನು ತರುವ ವ್ಯವಸ್ಥೆ ಹೇಗೆ ಎಂದು ಯೋಚಿಸುತ್ತಿದ್ದಾಗ ತಕ್ಷಣ ನೆನಪಾದದ್ದು ವಿಆರ್ಎಲ್ ಸಂಸ್ಥೆಯ ಅಧ್ಯಕ್ಷರಾದ ವಿಜಯ ಸಂಕೇಶ್ವರರು. ನಾನು ಅವರನ್ನು ಸಂರ್ಪಸಿ ವಿಷಯ ವಿವರಿಸಿದೆ. ಆಗ ಅವರು ‘ಶ್ರೀಕ್ಷೇತ್ರಕ್ಕೆ ವಾಹನವನ್ನು ತಲುಪಿಸುವ ಜವಾಬ್ದಾರಿ ನಮ್ಮದು, ನಮ್ಮ ಸಂಸ್ಥೆಯ ವತಿಯಿಂದಲೇ ಈ ವೆಚ್ಚವನ್ನೂ ಭರಿಸುತ್ತೇವೆ’ ಎಂದರು. ಎರಡು ಡಬಲ್ಡೆಕ್ಕರ್ ಬಸ್ಸುಗಳನ್ನು ವಿಆರ್ಎಲ್ ಸಂಸ್ಥೆಯವರು ಧರ್ಮಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಿದರು.
ಡಬಲ್ಡೆಕ್ಕರ್ ಬಸ್ಸಿನಲ್ಲಿ ಒಂದು ಮಹಡಿಯದು ಮಾತ್ರವಲ್ಲ ಎರಡು ಮೂರು ಅಂತಸ್ತು (ಉಪ್ಪರಿಗೆ) ಇರುವ ಬಸ್ಸುಗಳೂ ಇದ್ದವು. ಆದರೆ ಎರಡು-ಮೂರು ಉಪ್ಪರಿಗೆ ಇರುವ ಬಸ್ಸುಗಳು ಸಂಚಾರಕ್ಕೆ ಯೋಗ್ಯವಲ್ಲ ಎಂದು ಅವುಗಳ ಬಳಕೆ ಮಾಡುತ್ತಿರಲಿಲ್ಲ.
ವಿದೇಶಗಳಲ್ಲಿ ಸಾಮಾನ್ಯವಾಗಿ ಎರಡು ರೀತಿಯ ವಾಹನಗಳು ಇರುತ್ತವೆ. ಒಂದು- ತೆರೆದ ಮಹಡಿ(ಉಪ್ಪರಿಗೆ) ಇರುವ ವಾಹನ. ಇದರಲ್ಲಿ ಕುಳಿತುಕೊಂಡು ನಾಲ್ಕು ದಿಕ್ಕಿಗೂ ನೋಡಬಹುದಲ್ಲದೆ ಪ್ರಕೃತಿ, ನಗರದ ಸೌಂದರ್ಯ ಸವಿಯಬಹುದು. ಶ್ರೀಕ್ಷೇತ್ರಕ್ಕೆ ಬಂದ ಎರಡು ಬಸ್ಸುಗಳಲ್ಲಿ ಒಂದು ನಗರ ಸಂಚಾರಿ ಅಂದರೆ ತೆರೆದ ಮಹಡಿಯ ಬಸ್ಸು. ಮತ್ತೊಂದು ಪೂರ್ತಿ ಉಪ್ಪರಿಗೆಯನ್ನು ಮುಚ್ಚಲಾದ ಬಸ್ಸು.
2012-13ರಲ್ಲಿ ನಾನು ಲಂಡನ್ಗೆ ಹೋಗಿದ್ದೆ. ಅಲ್ಲಿ ಸಾರ್ವಜನಿಕ ಉದ್ಯಾನದ ಬಳಿ ಡಬಲ್ಡೆಕ್ಕರ್ ಬಸ್ಸು ನಿಂತಿತ್ತು. ನಾನು ಡ್ರೈವರ್ ಬಳಿ ಮಾತನಾಡತೊಡಗಿದೆ. ‘ಈ ಬಸ್ಸು ಸುಂದರವಾಗಿದೆ. ಹೊಸ ಬಸ್ಸಿನಂತೆ ಕಾಣುತ್ತಿಲ್ಲ, ಹಳೇ ಬಸ್ಸಿನ ಮಾದರಿಯಂತಿದೆ. ಇಂಜಿನ್, ಬ್ರೇಕ್ ವ್ಯವಸ್ಥೆ ಇತ್ಯಾದಿ ಗಮನಿಸಿದರೆ ಓಡಾಡಲು ಯೋಗ್ಯವೇ, ಇದರ ಸಂಚಾರಕ್ಕೆ ಸರ್ಕಾರ ಅನುಮತಿ ನೀಡುತ್ತಿದೆಯೇ’ ಎಂದು ಆತನಲ್ಲಿ ಕೇಳಿದೆ. ಆತ ಬಸ್ಸಿನ ಇಂಜಿನ್ ಭಾಗದ ಬಾನೆಟ್ ತೆಗೆದು ತೋರಿಸಿ ‘ಇದರ ಒಳಗೆ ಇರುವುದು ಹೊಸ ಇಂಜಿನ್. ಬ್ರೇಕಿಂಗ್ ವ್ಯವಸ್ಥೆಯನ್ನು ಆಧುನೀಕರಿಸಿದ್ದಾರೆ. ಆದರೆ ನೋಡುಗರಿಗೆ ಹಳೇ ಬಸ್ಸಿನಂತೆ ಕಾಣಬೇಕು ಎಂದು ಇದರ ಹೊರಗಿನ ಬಾಡಿ, ಮತ್ತು ಆಸನಗಳ ವ್ಯವಸ್ಥೆಯನ್ನು ಹಳೆಯ ಕಾಲದಲ್ಲಿ ಇದ್ದಂತೆಯೇ ಮಾಡಿದ್ದಾರೆ’ ಎಂದ. ಅಲ್ಲಿಯೂ ಹಳೆಯ ವಾಹನಗಳ ಶೈಲಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಗಮನಕ್ಕೆ ಬಂತು.
ಶ್ರೀಕ್ಷೇತ್ರದಲ್ಲಿರುವ ಎರಡು ಡಬಲ್ಡೆಕ್ಕರ್ ಬಸ್ಸಲ್ಲಿ ಒಂದನ್ನು ವಿಶೇಷ ವಿನ್ಯಾಸ ಮೂಲಕ ಹಸಿರು ಬಸ್ಸನ್ನಾಗಿ ಪರಿವರ್ತಿಸಿ, ಈ ಮೂಲಕ ‘ಇರುವುದು ಒಂದೇ ಭೂಮಿ. ಅದನ್ನು ಚೆನ್ನಾಗಿ ಉಳಿಸಿಕೊಳ್ಳಬೇಕು’ ಎಂಬ ಅರಿವು ನೀಡುತ್ತಿದ್ದೇವೆ. ವನ ಸಂರಕ್ಷಣೆಯ ಜಾಗೃತಿ ಬೋರ್ಡ್ ಗಳನ್ನು ಹಾಕಿದ್ದೇವೆ. ಮತ್ತೊಂದು ಕೆಂಪು ಬಸ್. ಅದನ್ನು ಅದರ ಮೂಲ ವಿನ್ಯಾಸದಲ್ಲೇ ರಕ್ಷಣೆ ಮಾಡಿದ್ದೇವೆ. ಮತ್ತು ಇಲ್ಲಿಯ ತಾಂತ್ರಿಕ ಪರಿಣತರಲ್ಲಿ ದುರಸ್ತಿ ಮಾಡಿಸಿ ಚಾಲನಾ ಸ್ಥಿತಿಯಲ್ಲಿರಿಸಲಾಗಿದೆ.
ಈ ಬಸ್ ಕ್ಷೇತ್ರಕ್ಕೆ ಬಂದು ಮೂರು ನಾಲ್ಕು ತಿಂಗಳು ಆಗಿತ್ತು. ಮಹಿಳೆಯೊಬ್ಬರು ಬಸ್ಸನ್ನು ತದೇಕ ಚಿತ್ತದಿಂದ ವೀಕ್ಷಿಸಿ ಸವರಲು ಪ್ರಾರಂಭಿಸಿದರು. ಆಗ ಅಲ್ಲಿದ್ದ ಸಿಬ್ಬಂದಿ ಅವರಲ್ಲಿ ‘ನೀವು ಏನು ಮಾಡ್ತಿದ್ದೀರಿ ಅಮ್ಮ’ ಎಂದು ಕೇಳಿದರು. ಆಗ ಆಕೆ ‘ನಾನು ಇದೇ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದೆ, ನನ್ನ ಜೀವನಕ್ಕೆ ಆಧಾರವಾಗಿದ್ದ ಈ ಬಸ್ಸನ್ನು ನೋಡಿ ತುಂಬಾ ಸಂತೋಷವಾಯಿತು. ಈ ಬಸ್ಸು ಗುಜರಿ ಸೇರುವ ಬದಲು ಧರ್ಮಸ್ಥಳದಲ್ಲಿ ರಕ್ಷಣೆಯಾಗಿದ್ದು ಮತ್ತಷ್ಟು ಖುಷಿ ನೀಡಿತು’ ಎಂದರು.
1820ರ ದಶಕದಿಂದ ಕುದುರೆ ಸಾರೋಟಿನಲ್ಲಿ ಸಣ್ಣ ರೀತಿಯ ಡಬಲ್ಡೆಕ್ಕರ್ ಆರಂಭಿಸಲಾಗಿತ್ತು. ನಂತರ 1830ರ ದಶಕದಲ್ಲಿ ಸ್ಟೀಮ್ ಬಸ್ಗಳು ಮತ್ತು 1882ರಲ್ಲಿ ಎಲೆಕ್ಟ್ರಿಕ್ ಟ್ರಾಲಿಬಸ್ಗಳನ್ನು ಬಳಸಲಾಯಿತು. ಮೊದಲ ಆಂತರಿಕ ದಹನಕಾರಿ ಎಂಜಿನ್ ಬಸ್ಗಳು ಅಥವಾ ಮೋಟಾರು ಬಸ್ಗಳನ್ನು 1895ರಲ್ಲಿ ಬಳಸಲಾಯಿತು. ಇತ್ತೀಚೆಗೆ ಇಂಧನ ಚಾಲಿತ ಬಸ್ಗಳಲ್ಲದೆ ಎಲೆಕ್ಟ್ರಿಕ್ ಬಸ್ಗಳು, ಹೈಬ್ರಿಡ್ ಎಲೆಕ್ಟ್ರಿಕ್ ಬಸ್ಗಳು, ಜೈವಿಕ ಡೀಸೆಲ್ನಿಂದ ಚಾಲಿತವಾಗುವ ಬಸ್ಗಳ ಬಳಕೆಯಿದೆ.
ಕೊಲ್ಕತ್ತಾದಲ್ಲಿ 1922ರಲ್ಲೇ ವಾಲ್ಪೋರ್ಡ್ ಎಂಡ್ ಕಂಪನಿ ತಯಾರಿಸಿದ ಡಬಲ್ಡೆಕ್ಕರ್ ಬಸ್ ಅನ್ನು ಕೊಲ್ಕತ್ತಾ ಟ್ರಾ್ಯಮ್ೇಸ್ ಕಂಪನಿ ಮೊದಲು ಪರಿಚಯಿಸಿತು. 1926ರಲ್ಲಿ ಆ ಬಸ್ಸುಗಳು ರಸ್ತೆಗಿಳಿದವು. ಎಸ್.ಎನ್. ಪೆಂಡ್ಸೆಯವರ ಪುಸ್ತಕ ದಿ B.E.S.T ಸ್ಟೋರಿ’ ಪ್ರಕಾರ, 1937ರಲ್ಲಿ ಮುಂಬೈನಲ್ಲಿ ಡಬಲ್ ಡೆಕ್ಕರ್ ಪರಿಚಯಿಸಲಾಯಿತು. ಇದಕ್ಕಿಂತ 11 ವರ್ಷಗಳ ಹಿಂದೆಯೇ ಇಂಧನ ಚಾಲಿತ ವಾಹನಗಳು ರಸ್ತೆಗಿಳಿದಿದ್ದವು. ನಂತರ ಹೆಚ್ಚುತ್ತಿರುವ ಟ್ರಾಫಿಕ್ ನಿಭಾಯಿಸುವ ಸಲುವಾಗಿ ಡಬಲ್ ಡೆಕ್ಕರ್ ಬಸ್ಸುಗಳನ್ನು ಪರಿಚಯಿಸಲಾಯಿತು. ಸಿಂಗಲ್-ಡೆಕ್ ವಾಹನವು 36 ಪ್ರಯಾಣಿಕರನ್ನು ಹೊತ್ತೊಯ್ದರೆ; ಡಬಲ್ ಡೆಕ್ಕರ್ 58 ಪ್ರಯಾಣಿಕರನ್ನು ಸಾಗಿಸಬಹುದಿತ್ತು. ಅದು ತನ್ನ ಗಾತ್ರ ಹಾಗೂ ಹೊರನೋಟದ ಕಾರಣದಿಂದಾಗಿ ಜನರ ಗಮನ ಸೆಳೆಯುವಂತಿತ್ತು. ಲಂಡನ್ನಲ್ಲಿ ಬಳಕೆಯಲ್ಲಿದ್ದ ಡಬಲ್ಡೆಕ್ಕರ್ ಬಸ್ ರೂಟ್ವಾಸ್ಟರ್ನ ತದ್ರೂಪಿಗಳಂತೆ ಕಾಣುತ್ತಿದ್ದ ಇವು ಸಿಂಗಲ್ ಬ್ಲಿಂಕ್ ಕ್ಯಾಬಿನ್ ಮತ್ತು ಇಳಿಜಾರಾದ ಎಂಜಿನ್ ಕವರ್ಗಳನ್ನು ಹೊಂದುವುದರೊಂದಿಗೆ ಪ್ರಾರಂಭವಾಗಿ ಕ್ರಮೇಣ ವಿನ್ಯಾಸ ಬದಲಾವಣೆಗಳಿಗೆ ಒಳಗಾಯಿತು. ಒಂದು ಕಾಲದಲ್ಲಿ ಕೋಲ್ಕತ್ತಾ, ಬೆಂಗಳೂರು, ದೆಹಲಿ, ತಿರುವನಂತಪುರಂ ಮತ್ತು ಚೆನ್ನೈ ಅಹ್ಮದಾಬಾದ್ ಮತ್ತು ಇತರ ನಗರಗಳಲ್ಲಿ ಡಬಲ್ಡೆಕ್ಕರ್ ಬಸ್ಗಳು ಚಾಲ್ತಿಯಲ್ಲಿದ್ದವು. ಪ್ರಸ್ತುತ ಮುಂಬೈಯಲ್ಲಿ ಮಾತ್ರ ಬಳಕೆ ಇದೆ. ಹಾಲಿ ಅಲ್ಲಿ ಸುಮಾರು 50 ಡಬಲ್ಡೆಕ್ಕರ್ಗಳಿದ್ದು ನಗರದ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿವೆ ಮತ್ತು ಪ್ರವಾಸಿಗರ ಪಾರಂಪರಿಕ ಪ್ರವಾಸಕ್ಕೆ ಬಳಸಲಾಗುತ್ತದೆ.
Pendsay ಪುಸ್ತಕದ ಪ್ರಕಾರ, 1967ರಲ್ಲಿ, BEST (ಬೃಹತ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ಪೋರ್ಟ್) ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ಸ್ಪಷ್ಟವಾದ ಡಬಲ್ ಡೆಕ್ಕರ್ ಬಸ್ಗಳನ್ನು ಪರಿಚಯಿಸಿತು. BEST ಸಂಸ್ಥೆಯು 1990ರಲ್ಲಿ ಅತಿ ಹೆಚ್ಚು ಡಬಲ್ಡೆಕ್ಕರ್ ಬಸ್ಗಳನ್ನು ಹೊಂದಿತ್ತು, 1995ರ ನಂತರ ನಷ್ಟ ಹಾಗೂ ನಿರ್ವಹಣಾ ವೆಚ್ಚದಿಂದಾಗಿ ಬಸ್ಗಳ ಸಂಖ್ಯೆಯಲ್ಲಿ ಕುಸಿತ ಕಂಡು 2006ರ ಹೊತ್ತಿಗೆ, 225 ಡಬಲ್ ಡೆಕ್ಕರ್ಗಳನ್ನು ಹೊಂದಿತ್ತು. ಒಂದು ಕಿ.ಮೀ ಗೆ 150ರೂ ವರೆಗೆ ಓಡಿಸುವ ವೆಚ್ಚ ಬರುತ್ತಿದ್ದ ಕಾರಣ ನಿರ್ವಹಣ ವೆಚ್ಚ ಸೇರಿದಾಗ ನಷ್ಟ ಉಂಟಾಗುತ್ತಿತ್ತು. ಜತೆಗೆ, ವೈಯಕ್ತಿಕ ವಾಹನಗಳತ್ತಲೂ ಜನರು ಉತ್ಸುಕರಾಗಿದ್ದರು.
ಇದೀಗ ಡಬಲ್ಡೆಕ್ಕರ್ ಬಸ್ಗಳನ್ನೂ ಆಧುನಿಕತೆಗೆ ತಕ್ಕಂತೆ ಮಾರ್ಪಾಡು ಮಾಡಲಾಗಿದೆ. ಇದೇ ವರ್ಷ ಮುಂಬೈನಲ್ಲಿ ಹೊಸ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ ಸೆಮಿ ಲೋ ಫ್ಲೋರ್, ಹವಾನಿಯಂತ್ರಿತ ಮತ್ತು ಹಿಂಭಾಗದ ಓವರ್ಹ್ಯಾಂಗ್ನಲ್ಲಿ ವಿಶಾಲವಾದ ಬಾಗಿಲು ಮತ್ತು ಹಿಂಭಾಗದ ಮೆಟ್ಟಿಲು ಹಾಗೂ ಹಗುರವಾದ ಅಲ್ಯೂಮಿನಿಯಂ ದೇಹ ನಿರ್ಮಾಣ ಹೊಂದಿದ ಹಾಗೂ ಸಿಸಿಟಿವಿ, ಫೋನ್ ಚಾರ್ಜರ್ ಸೌಲಭ್ಯವುಳ್ಳ ಬಸ್ಗಳನ್ನು ರಸ್ತೆಗಿಳಿಸಲಾಗಿದೆ. ಇವು ಬೆಸ್ಟ್ ಖಾಸಗಿ ಸಂಸ್ಥೆ ಮೂಲಕ ಕಾರ್ಯನಿರ್ವಹಿಸಲಿದ್ದು, 2023ರ ವೇಳೆ ಬಸ್ಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಬಹುದೆಂದು ಅಧಿಕಾರಿಗಳು ಹೇಳಿದ್ದಾರೆ. 100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗುವದಲ್ಲದೆ ವಾಹನ ಚಾಲನೆಯ ವೆಚ್ಚ ಕಿಲೋ ಮೀಟರ್ಗೆ 80 ರೂ. ಬರಬಹುದು ಎಂದು ಅಂದಾಜಿಸಲಾಗಿದೆ. ಡಬಲ್ ಡೆಕ್ಕರ್ ಬಸ್ಗಳು ಏಕಕಾಲಕ್ಕೆ ಹೆಚ್ಚು ಪ್ರಯಾಣಿಕರನ್ನು ಸಾಗಿಸಬಲ್ಲವು.
ರಾಷ್ಟ್ರದಲ್ಲಿ ಅತಿಯಾದ ವಾಯುಮಾಲಿನ್ಯವಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರವು ಆದಷ್ಟು ಸಾರ್ವಜನಿಕ ಸಂಪರ್ಕ ಸಾರಿಗೆ ಬಳಸಲು ಕರೆನೀಡಿದೆ. ಈ ಅಂಶಗಳನ್ನು ಗಮನಿಸಿದಾಗ ಡಬಲ್ಡೆಕ್ಕರ್ ಬಸ್ ಪ್ರಯೋಜನಕಾರಿಯಾಗಿದೆ. ಪ್ರವಾಸಿ ಪ್ರಯಾಣಗಳಿಗೆ ಮಾತ್ರವಲ್ಲದೆ ನಿತ್ಯ ಸಂಚಾರಕ್ಕೂ ಇಂತಹ ಬಸ್ಗಳು ಬಂದಲ್ಲಿ ಸರ್ಕಾರದ ಆರ್ಥಿಕ ಹೊರೆಯೂ ಕೊಂಚಮಟ್ಟಿಗೆ ತಗ್ಗಬಹುದು. ವಾಹನದಟ್ಟಣೆ, ವಾಯುಮಾಲಿನ್ಯ ಕಡಿಮೆ ಮಾಡಬಹುದು. ಮುಂಬೈನಲ್ಲಿರುವ ಡಬಲ್ ಡೆಕ್ಕರ್ ಸಾರಿಗೆ ವ್ಯವಸ್ಥೆ ದೇಶದ ಇತರ ನಗರಗಳಿಗೂ ವ್ಯಾಪಿಸಲಿ ಎಂದು ಆಶಿಸೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)