

|ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಈಗ ರಾಜಕೀಯ ಮೇಲಾಟದ ವೇದಿಕೆಯಾಗಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೊಂದು ಕಾನೂನು ಹೋರಾಟಕ್ಕೂ ಕಾರಣವಾಗುವುದು ನಿಚ್ಚಳವಾಗಿದೆ. ಮೇಕೆದಾಟು ಯೋಜನೆಯ ಚರ್ಚೆ ಆರಂಭವಾಗಿದ್ದು 1848ರಿಂದ. ಆದರೆ ಅದು ಹೆಚ್ಚು ಚರ್ಚೆಗೆ ಬಂದಿರುವುದು ಕಾವೇರಿ ನ್ಯಾಯಮಂಡಳಿಯ ಐತೀರ್ಪ ಹೊರಬಿದ್ದ ಮೇಲೆ. ಈಗ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಎರಡು ರಾಜ್ಯಗಳ ನಡುವಿನ ವಿವಾದವಾಗಿದ್ದರೂ ರಾಜ್ಯದೊಳಗೆ ರಾಜಕೀಯ ಸ್ವರೂಪ ಪಡೆದಿರುವ ಈ ಯೋಜನೆಯಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಇದರಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿರುವುದು ಗೊತ್ತಿರುವ ಸಂಗತಿಯೇ. ಆದ್ದರಿಂದಲೇ ಮೇಕೆದಾಟು ಯೋಜನೆ ಜಾರಿಗಿಂತ ಮತಗಳಿಕೆಯತ್ತ ಹೆಚ್ಚಿನ ಚಿತ್ತ ಹರಿದಿದೆ.
ರಾಜಕೀಯ ಹೇಗೆ?: ಯಾವುದೇ ಪಾದಯಾತ್ರೆಗಳು ಆಯಾ ಪಕ್ಷಕ್ಕೆ ರಾಜಕೀಯವಾಗಿ ಶಕ್ತಿ ತುಂಬಿರುವುದನ್ನು ಇತಿಹಾಸದಲ್ಲಿ ಗಮನಿಸಬಹುದಾಗಿದೆ. ಪಕ್ಷಗಳ ಗಟ್ಟಿಯಾದ ಮತಗಳು ಚದುರದಿದ್ದರೂ ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಮತದಾರ ಪಾದಯಾತ್ರೆ ನಡೆಸಿದ ಪಕ್ಷದ ಕಡೆ ಒಲವು ತೋರುತ್ತಾನೆ. ಪಾದಯಾತ್ರೆ ಹಾಗೂ ಅದರ ಉದ್ದೇಶ ಮತಗಳಾಗಿ ಪರಿವರ್ತನೆಯಾಗಿರುವ ಉದಾಹರಣೆಗಳು ಸಾಕಷ್ಟು ಇವೆ. ಪಾದಯಾತ್ರೆ ನಡೆಸಿದ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸುವುದು ಸಹಜ. ಆದ್ದರಿಂದಲೇ ಬಿಜೆಪಿ ಹಾಗೂ ಜೆಡಿಎಸ್ ತಲೆಬಿಸಿ ಮಾಡಿಕೊಂಡಿವೆ.
ಲಾಭದ ನಿರೀಕ್ಷೆಯಲ್ಲಿ ಕಾಂಗ್ರೆಸ್: ಮೇಕೆದಾಟು ಯೋಜನೆ ಬರುವ ಪ್ರದೇಶದಲ್ಲಿ ಜೆಡಿಎಸ್ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಇಲ್ಲಿ ಕಾಂಗ್ರೆಸ್ಗೂ ಶಕ್ತಿ ಇದೆ. ಆದರೆ ಜೆಡಿಎಸ್ ಇತ್ತೀಚೆಗೆ ದಿನೇದಿನೇ ದುರ್ಬಲವಾಗುತ್ತಿರುವುದರಿಂದ ಅದರ ಸಂಪೂರ್ಣ ಲಾಭವನ್ನು ಪಡೆಯುವುದು ಕಾಂಗ್ರೆಸ್ನ ಉದ್ದೇಶವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಾದಯಾತ್ರೆ ಬೆಂಗಳೂರು ನಗರದಲ್ಲಿಯೂ ನಡೆಯುವುದರಿಂದ ಇಲ್ಲಿಯೂ ರಾಜಕೀಯ ಸಮೀಕರಣ ಬದಲಾಗಬಹುದೆಂಬ ಆತಂಕ ಬಿಜೆಪಿಗೆ ಇದ್ದೇ ಇದೆ.
ಯೋಜನೆ ವಿವರ:
ತಮಿಳುನಾಡಿನಲ್ಲಿಯೂ ಸಂಚಲನ:
ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಲು ಯತ್ನಿಸುತ್ತಿದೆ. ಈ ಯೋಜನೆಯನ್ನು ಅಲ್ಲಿನ ಘಟಕ ವಿರೋಧಿಸುವ ಮೂಲಕ ನೆಲೆಯೂರಲು ಬಳಸಿಕೊಳ್ಳುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಯೋಜನೆಯನ್ನು ವಿರೋಧಿಸಿದ್ದರೂ ರಾಜಕೀಯವಾಗಿ ಯಾವ ನಿಲುವು ತೆಗೆದುಕೊಳ್ಳಬಹುದು ಎಂಬ ಕುತೂಹಲ ಇದ್ದೇ ಇದೆ.
ಬಿಜೆಪಿಗೇಕೆ ಭಯ?:
ಪಾದಯಾತ್ರೆಯಿಂದ ರಾಜಕೀಯ ಲಾಭ ಕಾಂಗ್ರೆಸ್ಗೆ ಆದರೆ ಮುಂದಿನ ಚುನಾವಣೆಯ ಫಲಿತಾಂಶದಲ್ಲಿ ಏರುಪೇರಾಗಬಹುದು ಎಂಬ ಭಯ ಬಿಜೆಪಿಗೆ ಕಾಡುತ್ತಿದೆ. ಅದು ಪಾದಯಾತ್ರೆ ತಡೆಯುವುದಕ್ಕೆ ಮೊದಲಿನಿಂದಲೂ ಶತಾಯಗತಾಯ ಪ್ರಯತ್ನ ಮಾಡಿದೆ. ಇಷ್ಟು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಏನೂ ಮಾಡಲಿಲ್ಲ, ಈಗ ನಾಟಕವಾಡುತ್ತಿದೆ ಎಂಬುದನ್ನು ಬಿಂಬಿಸಲು ಮುಂದಾಗಿದೆ. ಆದರೆ ಅದಕ್ಕೆ ತಕ್ಕಂತೆ ಹಳೆಯ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬೇಕಾದ ಯೋಜನೆ ಬಿಜೆಪಿಯ ಬಳಿ ಸದ್ಯಕ್ಕೆ ಯಾವುದೂ ಕಂಡುಬರುತ್ತಿಲ್ಲ.
ಯೋಜನೆಯ ಸ್ವರೂಪ:
ಮೇಕೆದಾಟು ಯೋಜನೆ 1948ರಲ್ಲಿಯೇ ಪ್ರಸ್ತಾಪವಾಯಿತು. 1956ರ ರಾಜ್ಯಗಳ ಪುನರ್ವಿಂಗಡಣೆ ನಂತರವೂ ಚರ್ಚೆಯಲ್ಲಿತ್ತು. 1960ರಲ್ಲಿ ಕಾವೇರಿ ಜಲವಿವಾದ ಪ್ರಾರಂಭವಾದ ನಂತರ ಮೇಕೆದಾಟು ಮರೆಯಾಯಿತು. ಮೇಕೆದಾಟು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ. ಅಲ್ಲೊಂದು ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಮೂಲಕ 67.16 ಟಿಎಂಸಿ ನೀರು ಸಂಗ್ರಹ ಮಾಡುವುದು, ಬೆಂಗಳೂರಿಗೆ 4.75 ಟಿಎಂಸಿ ನೀರು ಪೂರೈಸುವುದು ಹಾಗೂ 440 ಮೆ.ವಾ. ವಿದ್ಯುತ್ ಉತ್ಪಾದನೆ ಮಾಡುವುದು ಈ ಯೋಜನೆಯ ಉದ್ದೇಶ. ಕೆಆರ್ಎಸ್ನಿಂದ ಹರಿಯುವ ನೀರಿಗೆ ತಡೆ ಹಾಕಲಾಗುತ್ತಿದೆ ಎಂಬುದು ತಮಿಳುನಾಡಿನ ವಿರೋಧವಾಗಿದೆ. ರಾಜ್ಯದ ಪಾಲಿನ ನೀರನ್ನು ಮಾತ್ರ ಬಳಸಲಾಗುತ್ತದೆ ಹೊರತು ತಮಿಳುನಾಡಿನ ಪಾಲಿನ ನೀರನ್ನು ಬಳಸುತ್ತಿಲ್ಲ. ಹರಿದು ಹೋಗುವ ಸುಮಾರು 45 ಟಿಎಂಸಿಯಷ್ಟು ನೀರು ಲಭ್ಯವಾಗುತ್ತದೆ ಎಂಬುದು ಕರ್ನಾಟಕದ ಸಮರ್ಥನೆ. ತಮಿಳುನಾಡು ಮೆಟ್ಟೂರು ಜಲಾಶಯದಿಂದ ಮುಂದೆ ಮೂರು ಜಲಾಶಯ ಕಟ್ಟಿ ನೀರು ಸಂಗ್ರಹ ಮಾಡುತ್ತಿದೆ. ಹೋಗೆನಕಲ್ ಯೋಜನೆ ಮಾಡಿಕೊಂಡಿದೆ. ಆದರೆ ಬೆಂಗಳೂರಿನ ಕುಡಿಯುವ ನೀರು ಯೋಜನೆಗೆ ಮಾತ್ರ ವಿರೋಧ ಮಾಡುತ್ತಿದೆ. ಬೆಂಗಳೂರಿಗೆ ಈಗ 1450 ಮಿಲಿಯನ್ ಲೀಟರ್ ಪ್ರತಿನಿತ್ಯ ಬೇಕಾಗಿದೆ. 2030ಕ್ಕೆ 2285 ಮಿಲಿಯನ್ ಲೀಟರ್ ಬೇಕಾಗುತ್ತದೆ. ಯೋಜನೆ ರೂಪಿಸದಿದ್ದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈಗಲೇ ಬೆಂಗಳೂರಿನ ಶೇಕಡ 30ರಷ್ಟು ಭಾಗಕ್ಕೆ ಕಾವೇರಿ ನೀರು ಸಿಗುತ್ತಿಲ್ಲ.
ಏನೇನು ಆಗಿದೆ?:
ಜೆಡಿಎಸ್ಗೂ ಆತಂಕ:
ಜೆಡಿಎಸ್ ಸಹ ಕಾಂಗ್ರೆಸ್ ಪಾದಯಾತ್ರೆಯಿಂದ ಆತಂಕಕ್ಕೆ ಒಳಗಾಗಿದೆ. ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳೇ ಆ ಪಕ್ಷಕ್ಕೆ ಹಳೆ ಮೈಸೂರು ಭಾಗದಲ್ಲಿ ಬುಡವೇ ಅಲುಗಾಡುತ್ತಿರುವ ಆತಂಕ ತಂದಿದೆ ಎಂದು ರಾಜಕೀಯ ವಿಶ್ಲೇಷಕರು ಗುರುತಿಸುತ್ತಾರೆ. ಆದರೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ಈಗಲೇ ರಾಜಕೀಯ ಲಾಭದ ಒಳಹೊರಗುಗಳನ್ನು ಗುರುತಿ ಸುವುದು ಕಷ್ಟ.