ಶಿವಾರ್ಜುನ ಚಿತ್ರದ ರೊಮ್ಯಾಂಟಿಕ್​ ಗೀತೆಗೆ ಮೇಘನಾ ದನಿ

Shivarjuna 1 March 20
Published on

ಬೆಂಗಳೂರು: ಈ ಹಿಂದೆ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ ‘ಸಿಂಗ’ ಸಿನಿಮಾದಲ್ಲಿ ‘ವಾಟ್ ಎ ಬ್ಯೂಟಿಫುಲ್ಲು..’ ಹಾಡಿಗೆ ಚಿರು ಪತ್ನಿ ಮೇಘನಾ ರಾಜ್, ಮೊದಲ ಬಾರಿಗೆ ದನಿ ನೀಡುವ ಮೂಲಕ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು. ಇದೀಗ ಮತ್ತೊಂದು ಚಿತ್ರದ ಗೀತೆಗೆ ಧ್ವನಿ ನೀಡಿದ್ದಾರೆ. ಆ ಚಿತ್ರವೂ ಚಿರಂಜೀವಿ ಸರ್ಜಾ ಅವರದ್ದೇ ಎಂಬುದು ವಿಶೇಷ. ಹೌದು, ಇನ್ನೇನು ಬಿಡುಗಡೆಗೆ ಹತ್ತಿರದಲ್ಲಿರುವ ‘ಶಿವಾರ್ಜುನ’ ಚಿತ್ರದ ರೊಮ್ಯಾಂಟಿಕ್ ಗೀತೆಗೆ ಮೇಘನಾ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ ಅವರ ಆಸೆಯೊಂದನ್ನೂ ಈ ಹಾಡಿನ ಮೂಲಕ ಈಡೇರಿಸಿಕೊಂಡಿದ್ದಾರಂತೆ.

‘ನನಗೆ ಸಂಚಿತ್ ಹೆಗಡೆ ಗಾಯನ ತುಂಬ ಅಚ್ಚುಮೆಚ್ಚು. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲೂ ಅವರು ಹಾಡಿದ್ದರು. ಈಗ ಅವರ ಜತೆಯಲ್ಲಿಯೇ ‘ಶಿವಾರ್ಜುನ’ ಸಿನಿಮಾದಲ್ಲಿ ಹಾಡಿದ್ದೇನೆ. ತುಂಬ ದಿನಗಳ ಆಸೆಯೊಂದು ಈಡೇರಿದಂತಾಗಿದೆ’ ಎನ್ನುವ ಮೇಘನಾ, ಹಾಡಿನ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ‘ಇದು ಸಹಜವಾದ ಹಾಡಲ್ಲ. ಪಾಶ್ಚಾತ್ಯ ಶೈಲಿಯಲ್ಲಿ ಕಂಪೋಸ್ ಮಾಡಲಾಗಿದೆ, ಅಷ್ಟೇ ಚಾಲೆಂಜಿಂಗ್ ಸಹ ಇತ್ತು. ಹಾಗಾಗಿ ಚೆನ್ನಾಗಿದೆ ಅನಿಸಿದರೆ ಮಾತ್ರ ಬಳಸಿಕೊಳ್ಳಿ ಎಂದಿದ್ದೆ. ಮೊನ್ನೆಯಷ್ಟೇ ರೆಕಾರ್ಡಿಂಗ್ ಮಾಡಿದೆ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ. ‘ಸಿಂಗ’ ಮತ್ತು ‘ಶಿವಾರ್ಜುನ’ ಸಿನಿಮಾದಲ್ಲಿ ಗಾಯಕಿ ಆಗಿರುವ ಮೇಘನಾ ಅವಕಾಶ ಸಿಕ್ಕರೆ ಬೇರೆ ಸಿನಿಮಾಗಳಿಗೂ ಹಾಡುತ್ತೇನೆ ಎನ್ನುತ್ತಾರೆ. ‘ಆ ರೀತಿ ಬೇರೆ ಸಿನಿಮಾಗಳಿಗೆ ಹಾಡಲು ಯಾರೂ ಅಪ್ರೋಚ್ ಮಾಡಿಲ್ಲ. ಒಂದು ವೇಳೆ ಹಾಡಿ ಎಂದರೆ ಖಂಡಿತ ಧ್ವನಿ ನೀಡುತ್ತೇನೆ’ ಎಂದು ನಗು ಉಕ್ಕಿಸುತ್ತಾರೆ. ಸದ್ಯ ಉಪೇಂದ್ರ ನಾಯಕತ್ವದ ‘ಬುದ್ಧಿವಂತ 2’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ಬಿಡುಗಡೆಗೂ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net