

ನೆನಪಿನ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಳ್ಳುವುದು ಶುದ್ಧ ದೇಸಿ ಹಸುವಿನ ತುಪ್ಪ. ಹಾಗಾಗಿ ಮಕ್ಕಳಿಗೆ ನಿತ್ಯವೂ 1-2 ಚಮಚವಾದರೂ ತುಪ್ಪವನ್ನು ಉಳಿದ ಆಹಾರದ ಜೊತೆಗೆ ಕೊಡಬೇಕು. ವಾಲ್ನಟ್, ಬಾದಾಮಿ, ಗೋಡಂಬಿಯಂಥವು ನೆನಪಿನ ಶಕ್ತಿಯನ್ನು ಹೆಚ್ಚಿಸು ವಲ್ಲಿ ತುಂಬಾ ಸಹಕಾರಿ. ಬೂದುಗುಂಬಳ ಕಾಯಿಯ ಹಲ್ವಾ ಅಥವಾ ಲೇಹ್ಯ ಮಾಡಿ ನಿತ್ಯವೂ ಮಕ್ಕಳಿಗೆ ಕೊಡಬಹುದು. ನಿತ್ಯವೂ ಬ್ರಾಹ್ಮಿ ಅಥವಾ ಒಂದೆಲಗದ ಜ್ಯೂಸನ್ನು ಅರ್ಧ ಲೋಟದಷ್ಟು ಕೊಡಬಹುದು. ಒಂದೆಲಗದ ನಾಲ್ಕೈದು ಎಲೆಗಳಿಗೆ ಸ್ವಲ್ಪ ನೀರು ಹಾಕಿ ರುಬ್ಬಿ ರಸ ತೆಗೆದು ಅದಕ್ಕೆ ಹಾಲು ಬೆರೆಸಿ ಅರ್ಧದಿಂದ ಒಂದು ಚಮಚ ಶುದ್ಧ ಜೇನುತುಪ್ಪ ಹಾಕಿ ದಿನಕ್ಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಕೊಟ್ಟರೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಆದರೆ ವೈದ್ಯರ ಸಲಹೆ ಇಲ್ಲದೇ ಒಂದು ದಿನದಲ್ಲಿ ಐದಕ್ಕಿಂತ ಹೆಚ್ಚು ಎಲೆಗಳನ್ನು ಕೊಡುವುದು ಬೇಡ. ದಿನಕ್ಕೆ ಕನಿಷ್ಠ 20 ನಿಮಿಷಗಳ ಕಾಲ ಆಸನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವಂತೆ ಮಕ್ಕಳಿಗೆ ಹೇಳಬೇಕು. ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ ಚಿನ್ಮುದ್ರೆಯನ್ನು ದಿನದಲ್ಲಿ ಹತ್ತೇ ನಿಮಿಷ ಹಾಕಿ ಕುಳಿತುಕೊಂಡರೂ ನೆನಪಿನ ಶಕ್ತಿ ಹೆಚ್ಚುತ್ತದೆ. ಯಾವುದೇ ಕಾರಣಕ್ಕೂ ನೆನಪಿನ ಶಕ್ತಿ ಎಷ್ಟಿದೆ ಎಂದು ಪರೀಕ್ಷೆ ಮಾಡಬಾರದು. ನಿಮ್ಮ ಮಕ್ಕಳ ಎದುರಿಗೆ ಅಥವಾ ಯಾರದಾದರೂ ಜೊತೆ ಮಾತನಾಡುವಾಗ ನನ್ನ ಮಗ ಅಥವಾ ಮಗಳಿಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಯಾವುದೇ ಕಾರಣಕ್ಕೂ ಹೇಳಬೇಡಿ. ಮಕ್ಕಳು ಕನಿಷ್ಠ ಏಳು ತಾಸು ನಿದ್ದೆ ಮಾಡಲೇಬೇಕು. ಮನೆಯ ವಾತಾವರಣ ಸಾಧ್ಯವಾದಷ್ಟು ಶಾಂತಿಯಿಂದ ಇರುವಂತೆ ನೋಡಿಕೊಳ್ಳಬೇಕು. ನೆನಪಿನ ಶಕ್ತಿ ಅಥವಾ ಏಕಾಗ್ರತೆಯನ್ನು ಹಾಳು ಮಾಡುವ ಅತ್ಯಂತ ದೊಡ್ಡ ಅಸ್ತ್ರವೆಂದರೆ ಗಮನಭಂಗ. ಅಂದರೆ ಹೋಂವರ್ಕ್ ಅಥವಾ ಅಭ್ಯಾಸ ಮಾಡುವಾಗ ಗಮನ ಬೇರೆ ಕಡೆ ಹೋಗದೇ ಇರುವಂತೆ ಟಿವಿ ಅಥವಾ ಮೊಬೈಲುಗಳ ಬಳಕೆ ಮಾಡಬೇಡಿ. ಹಾಗಾಗಿ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡಲು ಸಮಯ ನಿರ್ಧಾರ ಮಾಡಿ. ಅಧ್ಯಯನದ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ಇರಬಾರದು.
ಎಷ್ಟೋ ರೀತಿಯ ಔಷಧಗಳು ಅಥವಾ ಆಹಾರೌಷಧಗಳು ನೆನಪಿನ ಶಕ್ತಿ ಹೆಚ್ಚಾಗಲು ಅನುಕೂಲ ಮಾಡಿಕೊಡುತ್ತವೆ. ಉದಾಹರಣೆಗೆ ನಾವು ನಿಸರ್ಗ ಮನೆಯಲ್ಲಿ ಕೊಡುವ ಇಪಿಎ ಮತ್ತು ಡಿಎಚ್ಎಗಳನ್ನು ಹೊಂದಿರುವ ಸ್ಮಾರ್ಟ್ 3 ಮಾತ್ರೆಯನ್ನು ದಿನಕ್ಕೆರಡು ಬಾರಿಯಂತೆ ಮೂರು ತಿಂಗಳುಗಳ ಕಾಲ ಸೇವಿಸಿದರೆ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಲು ಅನುಕೂಲವಾಗುತ್ತದೆ. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಉಗುರು ಬೆಚ್ಚಗಿನ ನೀರಿನ ಸ್ನಾನ, ಹೊಟ್ಟೆಯ ಮುಕ್ಕಾಲು ಭಾಗ ಮಾತ್ರ ಊಟ ಮಾಡುವುದು, ಸಾಧ್ಯವಾದಷ್ಟು ಹಾಲು, ತುಪ್ಪ, ಹಣ್ಣು, ಒಣಹಣ್ಣು ಹೆಚ್ಚಾಗಿ ಸೇವಿಸುವುದು, ಪ್ರಾಮುಖ್ಯತೆಗೆ ಅನುಗುಣವಾಗಿ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಮುಗಿಸುವುದು, ರಾತ್ರಿಯ ಊಟವನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮತ್ತು ಸಾಧ್ಯವಾದಷ್ಟು ಬೇಗ ಮುಗಿಸುವುದು, ಇವೆಲ್ಲಾ ನಮ್ಮ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಲು ಅನುಕೂಲ ಮಾಡಿಕೊಡುತ್ತವೆ.