ಸೌಭಾಗ್ಯದಾಯಿನಿ ಸ್ವರ್ಣಗೌರಿ; ಸಕಲ ಸಮಸ್ಯೆಗಳಿಗೂ ಗೌರಿ ಪೂಜೆ ಪರಿಹಾರ

asdasdad
Published on
ಶ್ರಾವಣ ಬಂತೆಂದರೆ ಮಹಿಳೆಯರಲ್ಲಿ ಮನೆ ಮಾಡುವ ಸಂಭ್ರಮ ಗೌರಿ ಹಬ್ಬ ಆಚರಣೆವರೆಗೂ ಮುಂದುವರಿಯುತ್ತದೆ. ಪಾರ್ವತಿಯ ಅವತಾರವಾದ ಸ್ವರ್ಣಗೌರಿಯನ್ನು ಮನೆಯಲ್ಲೇ ಪ್ರತಿಷ್ಠಾಪಿಸಿ, ಮುತ್ತೈದೆಯರಿಗೆ ಬಾಗಿನ ಅರ್ಪಿಸಿ ಕುಟುಂಬಕ್ಕೆ ಒಳಿತಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುವುದು ವಾಡಿಕೆ. ಈ ಗೌರಿ ಹಬ್ಬ ಆಚರಣೆ, ಹಬ್ಬದ ಹಿನ್ನೆಲೆ ಬಗ್ಗೆ ಇಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ...

|ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಭಾದ್ರಪದ ಮಾಸ ಶುಕ್ಲಪಕ್ಷದ ತೃತೀಯ ದಿನದಂದು ಈ ಸ್ವರ್ಣಗೌರಿ ವ್ರತ ಆಚರಿಸಬೇಕು. ಈ ಗೌರಿ ವ್ರತಾಚರಣೆಯಿಂದ ಪುತ್ರಪೌತ್ರಾದಿ ಸಕಲ ವಿಧವಾದ ಸಂಪತ್ತು- ಸೌಭಾಗ್ಯ ಲಭಿಸುತ್ತದೆ. ಸುವರ್ಣ ಅಥವಾ ಸ್ವರ್ಣ ಎಂದರೆ ಚಿನ್ನ ಅಥವಾ ಬಂಗಾರ ಎಂದು ಅರ್ಥ. ಆದರೆ ವರ್ಣ ಎಂದರೆ ಅಕ್ಷರಗಳು. ಪಾರ್ವತಿ ದೇವಿಯು ವಾಗಭಿಮಾನಿ. ಮಾತುಗಳಿಗೆ ಮೂಲ ಅಕ್ಷರಗಳು. ಅಂತಹ ಅಕ್ಷರ ಮತ್ತು ಮಾತುಗಳಿಗೆ ಅಭಿಮಾನಿನಿಯಾದ ಪಾರ್ವತಿದೇವಿಯ ಪೂಜೆಯೇ ಈ ಸ್ವರ್ಣಗೌರೀವ್ರತ.

ಪೌರಾಣಿಕ ಹಿನ್ನೆಲೆ: ಪರ್ವತರಾಜನ ಮಗಳಾದ ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂದು ಶಿವನ ಆರಾಧ್ಯ ದೈವನಾದ ಶ್ರೀರಾಮಸೀತೆಯರನ್ನು 12 ವರ್ಷಗಳ ಕಾಲ ಆಹಾರವನ್ನು ತ್ಯಜಿಸಿ ಕೇವಲ ಗಾಳಿಯನ್ನು ಸ್ವೀಕರಿಸಿ ನಿಷ್ಠೆಯಿಂದ ಪೂಜಿಸುತ್ತಾಳೆ. ಇದನ್ನು ತಿಳಿದ ತಂದೆ ಪರ್ವತರಾಜ ಪಾರ್ವತಿಯನ್ನು ನಾರಾಯಣನಿಗೆ ಕೊಡಬೇಕೆಂದು ನಿಶ್ಚಯಿಸುತ್ತಾನೆ. ಇದೇನು ಘೊರ ಅನ್ಯಾಯವಾಗುತ್ತಿದೆ ಎಂದು ತಿಳಿದು ಪಾರ್ವತಿ ಅರಮನೆಯನ್ನು ತ್ಯಜಿಸಿ ಕಾಡಿಗೆ ಹೋಗುತ್ತಾಳೆ. ಅಲ್ಲಿ ಮರಳಿನಿಂದ ಶಿವಲಿಂಗ ಮಾಡಿ ಅಖಂಡವಾಗಿ ಉಪವಾಸವಿದ್ದು ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾಳೆ. ಅವಳ ತಪಸ್ಸು ಮತ್ತು ಭಕ್ತಿಗೆ ಮೆಚ್ಚಿ ಶಿವ ಒಲಿಯುತ್ತಾನೆ. ಶಿವನು ಪಾರ್ವತಿಗೆ ಒಲಿದ ಆ ದಿನವೇ ಭಾದ್ರಪದ ಶುಕ್ಲ ತೃತೀಯ ಎಂದು ಅನೇಕ ಪುರಾಣಗಳಲ್ಲಿ ಉಲ್ಲಿಖಿತವಾಗಿದೆ. ಮಗಳ ಈ ವೃತ್ತಾಂತವನ್ನು ತಿಳಿದ ಪರ್ವತರಾಜ ಶಿವ ಮತ್ತು ಪಾರ್ವತಿಯ ವಿವಾಹವನ್ನು ವೈಭವದಿಂದ ನೆರವೇರಿಸುತ್ತಾನೆ. ಪಾರ್ವತಿ ಶಿವನನ್ನು ವರಿಸಿ ಅಖಂಡ ಸೌಭಾಗ್ಯ ಪಡೆದ ದಿನವಾದ್ದರಿಂದ ಅಂದಿನ ದಿನವೇ ಈ ವ್ರತವನ್ನು ಮಾಡಬೇಕೆಂಬ ಆಚರಣೆಯು ಬೆಳೆದು ಬಂದಿದೆ. ಗೌರಿಯು ಮಾಡಿದ ಈ ವ್ರತವು ಗೌರಿಹಬ್ಬವೆಂದು ಪ್ರಸಿದ್ಧಿ ಪಡೆಯಿತು.

ಆಚರಣೆಯ ವಿಧಾನ

ಸ್ತ್ರೀಯರು ಪ್ರಾತಃ ಎಣ್ಣೆಸ್ನಾನ ಮಾಡಿ ಕುಲದೇವರನ್ನು ಸ್ಮರಿಸಿ ದೀಪಗಳನ್ನು ಪ್ರಜ್ವಲಿಸಿ ಪೂಜೆ ಪ್ರಾರಂಭಿಸಬೇಕು. ಎಲ್ಲ ವಿಧವಾದ ವಿಘ್ನಗಳ ಪರಿಹಾರಕ್ಕೆ ಆದಿಯಲ್ಲಿ ಮಹಾಗಣಪತಿಯನ್ನು ಪೂಜಿಸಿ, ಮಾಡುವ ವ್ರತವು ನಿರ್ವಿಘ್ನವಾಗಿ ಸಾಗಲಿ ಎಂದು ಪ್ರಾರ್ಥಿಸಬೇಕು. ನಂತರ ಕಲಶ, ಪೀಠಪೂಜೆ ಮಾಡಿ ಮಣ್ಣಿನ ಗೌರಿಯ ಪ್ರತಿಮೆಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಕಲ್ಲು, ಮಣ್ಣು, ಕಲಶ ಇತ್ಯಾದಿಗಳಲ್ಲಿ ದೇವರನ್ನು ಕಾಣುವ ಒಂದು ವಿಶೇಷತೆ ನಮ್ಮ ಹಿಂದು ಧರ್ಮದಲ್ಲಿದೆ. ಎಲ್ಲ ಪ್ರತಿಮೆಗಳಲ್ಲಿ ಪೂಜೆ ಪ್ರಾರಂಭಿಸುವಾಗ ಪ್ರಾಣ ಪ್ರತಿಷ್ಠಾಪನೆ ಧ್ಯಾನ ಆವಾಹನಾದಿಗಳನ್ನು ಮಾಡುವುದು ಪ್ರತಿಮೆಯಲ್ಲಿ ಸಾನ್ನಿಧ್ಯವನ್ನು ತಂದುಕೊಡುತ್ತವೆ. ನಂತರ ಹದಿನಾರು ಗಂಟುಗಳಿಂದ ಕೂಡಿದ ಹದಿನಾರು ಎಳೆಯ ದಾರವನ್ನು ಗೌರಿಯ ಮುಂದೆ ಇಡಬೇಕು. ಆಚಮನ, ಪಂಚಾಮೃತ ಸ್ನಾನ, ಅಭಿಷೇಕ, ವಿಧಿವತ್ತಾಗಿ ಮಾಡಬೇಕು. ನಂತರ ಗೌರಿಗೆ ಗೆಜ್ಜೆವಸ್ತ್ರ, ಅರಿಶಿಣ-ಕುಂಕುಮ, ಕಾಡಿಗೆ, ಗಂಧ, ವಸ್ತ್ರ, ಮಂಗಳಸೂತ್ರ ಮೊದಲಾದ ಎಲ್ಲ ವಿಧವಾದ ಮಂಗಳದ್ರವ್ಯಗಳನ್ನು ಸಮರ್ಪಿಸಬೇಕು. ನಂತರ ಹೂವು, ಪತ್ರ, ಗರಿಕೆ ಸಮರ್ಪಿಸಿ ಗೌರಿದಾರಕ್ಕೆ ಪೂಜಿಸಬೇಕು. ಗೌರಿಯ ಹದಿನಾರು ನಾಮಗಳಿಂದ ಹದಿನಾರು ಗಂಟುಗಳಿಂದ ಕೂಡಿದ ಆ ದಾರಕ್ಕೆ ಅಕ್ಷತೆ ಮತ್ತು ಅರಿಶಿಣ ಕುಂಕುಮದಿಂದ ಪೂಜಿಸಬೇಕು. ಎಲ್ಲ ವಿಧವಾದ ಹಣ್ಣು ಭಕ್ಷ್ಯ ಭೋಜನಗಳನ್ನು ಗೌರಿಗೆ ನಿವೇದಿಸಿ ಆರತಿ ಮಾಡಬೇಕು. ಕೆಲವರು ಐದು ಬತ್ತಿಗಳ ಆರತಿ ಮತ್ತು ಕೆಲವರು ಹದಿನಾರು ಬತ್ತಿಗಳ ಆರತಿ ಮಾಡುತ್ತಾರೆ.

ಪ್ರಾರ್ಥನೆ

ಕರಿಷ್ಯಾಮಿ ವ್ರತಂ ದೇವಿ ತ್ವದ್ಭಕ್ತಯ ತ್ವತ್ಪರಾಯಣಾ |

ವಾಂಛಿತಂ ದೇಹಿ ಮೇ ನಿತ್ಯಂ ತ್ವಯಿ ಭಕ್ತಿಮಚಂಚಲಾಮ್|

ಪುತ್ರಾನ್ ದೇಹಿ ಧನಂ ದೇಹಿ ಸೌಭಾಗ್ಯಂ ದೇಹಿ ಸುವ್ರತೇ |

ಅನ್ಯಾಂಶ್ಚ ಸರ್ವಕಾಮಾಂಶ್ಚ ದೇಹಿ ದೇವಿ ನಮೋಸ್ತು ತೇ ||

ಎಂಬ ಮಂತ್ರದಿಂದ ಪ್ರಾರ್ಥಿಸಿ ಗೌರಿಯ ದಾರವನ್ನು ಮುತ್ತೈದೆಯರಿಂದ ಇಲ್ಲವೇ ಪತಿಯಿಂದ ಬಲಗೈಗೆ ಕಟ್ಟಿಸಿಕೊಳ್ಳಬೇಕು. ಕೆಲವರು ಈ ದಾರವನ್ನು ಕೊರಳಲ್ಲಿಯೂ ಧರಿಸುತ್ತಾರೆ.

ಸಕಲ ಸಮಸ್ಯೆಗೂ ಗೌರಿ ಪೂಜೆ ಪರಿಹಾರ

ಹಿಂದೆ ಸರಸ್ವತಿ ನದಿ ತೀರದಲ್ಲಿ ವಿಮಲಾ ಎಂಬ ನಗರವಿದ್ದಿತು. ಅಲ್ಲಿಯ ಮಹಾರಾಜ ಚಂದ್ರಪ್ರಭ. ಅವನಿಗೆ ಮಹಾದೇವಿ ಮತ್ತು ಬಲಾದೇವಿ ಎಂಬ ಇಬ್ಬರು ಪತ್ನಿಯರಿದ್ದರು. ಹಿರಿಯ ಹೆಂಡತಿಯಾದ ಮಹಾದೇವಿ ರಾಜನ ಮೆಚ್ಚಿನ ಪತ್ನಿಯಾಗಿದ್ದಳು. ಆ ಗರ್ವದಿಂದ ಮಹಾದೇವಿಯು ಕಿರಿಯ ಪತ್ನಿಯಾದ ಬಲಾದೇವಿಯನ್ನು ಬಹಳೇ ತಾತ್ಸಾರದಿಂದ ಕಾಣುತ್ತಿದ್ದಳು.

ಒಮ್ಮೆ ರಾಜನು ಬೇಟೆಗೆಂದು ಕಾಡಿಗೆ ಹೋದಾಗ ಕಾಡಿನಲ್ಲಿ ಬಹಳ ಬಾಯಾರಿಕೆಯಿಂದ ಬಳಲಿದನು. ಎಲ್ಲಿಯಾದರೂ ನೀರು ಸಿಗಬಹುದೇ ಎಂದು ಹುಡುಕಿಕೊಂಡು ಹೊರಟ. ಕಾಡಿನ ಮಧ್ಯದಲ್ಲಿ ನದಿ ತೀರದಲ್ಲಿ ಅನೇಕ ದೇವತಾ ಸ್ತ್ರೀಯರು ಬಹಳ ಶ್ರದ್ಧೆಯಿಂದ ಯಾವುದೋ ಒಂದು ಪೂಜೆಯಲ್ಲಿ ತೊಡಗಿದ್ದನ್ನು ಕಂಡನು. ತಕ್ಷಣ ಆ ಸ್ತ್ರೀಯರ ಬಳಿಗೆ ಬಂದು ಕುತೂಹಲದಿಂದ ಪ್ರಶ್ನಿಸಿದ. ಮಾತೆಯರೇ, ನೀವು ಮಾಡುತ್ತಿರುವ ಪೂಜೆ ಯಾರದ್ದು? ಈ ವ್ರತ ಯಾವುದು? ಎಂದು. ಆಗ ಆ ಸ್ತ್ರೀಯರು ರಾಜನೆ ಕೇಳು, ಇದು ಸ್ವರ್ಣಗೌರಿವ್ರತ. ಸಮಸ್ತ ಸೌಭಾಗ್ಯಾದಿಗಳನ್ನು ಕೊಟ್ಟು ಇಷ್ಟಾರ್ಥ ಸಿದ್ಧಿಗೊಳಿಸುವ ವ್ರತ. ಗೌರಿಯನ್ನು ಧ್ಯಾನ ಆವಾಹನಾದಿಗಳಿಂದ ಷೋಡಶೋಪಚಾರ ಪೂಜೆಯನ್ನು ಮಾಡಿ ಹದಿನಾರು ಗಂಟುಗಳಿಂದ ಕೂಡಿದ ಹದಿನಾರು ಎಳೆಗಳ ದಾರವನ್ನು ಪೂಜಿಸಿ ನಂತರ ಆ ಗೌರಿ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ಮುತೆôದೆಯರಿಗೆ ಮರದ ಬಾಗಿಣ ಕೊಡಬೇಕು ಎಂದು ಪೂಜೆಯ ವಿಧಾನವನ್ನು ವಿವರಿಸಿದಾಗ ಒಂದು ಗೌರಿದಾರವನ್ನು ರಾಜ ಸಹ ತನ್ನ ಕೈಗೆ ಕಟ್ಟಿಸಿಕೊಂಡು ಅರಮನೆಗೆ ಹಿಂದಿರುಗುತ್ತಾನೆ.

ರಾಜನ ಕೈಯಲ್ಲಿರುವ ದಾರ ನೋಡಿದ ಹಿರಿಯ ಮಹಾರಾಣಿ ಇದು ಕಿರಿಯ ಮಹಾರಾಣಿ ರಾಜನನ್ನು ವಶಪಡಿಸಿಕೊಳ್ಳಬೇಕೆಂದು ಕಟ್ಟಿದ ಮಂತ್ರಿಸಿದ ದಾರವಿರಬಹುದೆಂದು ತಿಳಿದು ರಾಜ ನಿದ್ರಿಸಿದಾಗ ಆ ಗೌರಿದಾರ ತೆಗೆದು ಹೊರಗೆ ಎಸೆದಳು. ಆ ಗೌರಿದಾರ ಒಣಗಿದ ಗಿಡ ಒಂದರಮೇಲೆ ಬೀಳುತ್ತದೆ. ಆ ಗೌರಿದಾರದ ಸಾನ್ನಿಧ್ಯದಿಂದ ಕೆಲವೇ ದಿನಗಳಲ್ಲಿ ಒಣಗಿದ ಗಿಡವು ಚಿಗುರಿ ಫಲಪುಷ್ಪಗಳನ್ನು ಕೊಡುತ್ತದೆ. ಇದನ್ನೆಲ್ಲ ಗಮನಿಸಿದ ಕಿರಿಯ ರಾಣಿ ಆ ದಾರದ ಮಹಿಮೆಯನ್ನರಿತು ಭಕ್ತಿಯಿಂದ ಆ ದಾರವನ್ನು ತನ್ನ ಕೈಗೆ ಕಟ್ಟಿಕೊಳ್ಳುತ್ತಾಳೆ. ಸದಾ ತಾತ್ಸಾರಕ್ಕೊಳಗಾದ ಅವಳು ಅಂದಿನಿಂದ ರಾಜನಿಗೆ ಬಹಳ ಪ್ರಿಯಳಾದಳು. ಗೌರಿದಾರವನ್ನು ಅವಮಾನಿಸಿದ್ದರ ಫಲವಾಗಿ ರಾಜನ ಪ್ರೀತಿಯಿಂದ ವಂಚಿತಳಾದ ಹಿರಿಯ ಮಹಾರಾಣಿಯನ್ನು ರಾಜನು ಅರಮನೆಯಿಂದ ಹೊರಹಾಕುತ್ತಾನೆ. ಗೌರಿಗೆ ಎಸಗಿದ ಅಪಚಾರವನ್ನು ನೆನೆದು ಬಹಳ ಪಶ್ಚಾತ್ತಾಪ ಪಡುತ್ತಾಳೆ. ಭಕ್ತಿಯಿಂದ ಗೌರಿಪೂಜೆ ಮಾಡಿ ದಾರವನ್ನು ಧರಿಸಿ ರಾಜನಿಂದ ಪುನಃ ಪುರಸ್ಕೃತಳಾಗುತ್ತಾಳೆ. ಹೀಗೆ ಗೌರಿಪೂಜೆಯನ್ನು ಭಕ್ತಿಯಿಂದ ಮಾಡಿ ದಾರವನ್ನು ಧರಿಸಿ ಸಕಲ ಸುಖ-ಸೌಭಾಗ್ಯ ಹೊಂದುತ್ತಾರೆ. ದಾಂಪತ್ಯದ ಸಕಲವಿಧವಾದ ಸಮಸ್ಯೆಗಳಿಗೂ ಈ ಗೌರಿ ಪೂಜೆಯೆ ಪರಿಹಾರ.

ಬಾಗಿನ ದಾನ

ಬಾಗಿನದಲ್ಲಿ ಯಥಾಶಕ್ತಿಯಾಗಿ ಅಕ್ಕಿ, ಬೇಳೆ, ಬೆಲ್ಲ, ತುಪ್ಪ, ತೆಂಗಿನಕಾಯಿ ಮತ್ತು ಹುಣಿಸೆ ಹಣ್ಣು ಮುಂತಾದ ಮಸಾಲೆ ಪದಾರ್ಥಗಳು, ಸೌಮಾಂಗಲ್ಯ ಸೂಚಕಗಳಾದ ಅರಿಶಿಣ-ಕುಂಕುಮ, ಬಳೆ, ಸೀರೆ, ಖಣ, ಕನ್ನಡಿ, ಬಾಚಣಿಕೆ, ಮಾಂಗಲ್ಯ ಕಾಲುಂಗುರ ಯಥಾಯೋಗ್ಯವಾಗಿ ಇಟ್ಟು ತಾಂಬೂಲ ದಕ್ಷಿಣೆಯೊಂದಿಗೆ ಒಂದು ಮೊರದಲ್ಲಿ ಜೋಡಿಸಬೇಕು. ಮೇಲೆ ಇನ್ನೊಂದು ಮೊರವನ್ನು ವಿರುದ್ಧ ದಿಕ್ಕಿನಲ್ಲಿ ಮುಚ್ಚಿ ಆ ಬಾಗಿನವನ್ನು ಮೊದಲು ಗೌರಿಗೆ ಸಮರ್ಪಿಸಿ, ನಂತರ ಮರವನ್ನು ಸೆರಗಿನಿಂದ ಮುಚ್ಚಿ, ತೂಗಿ, ಬಾಗಿನವನ್ನು ಮುತೆôದೆಯರಿಗೆ ನೀಡಬೇಕು. ನಮ್ಮ ವಂಶದಲ್ಲಿ ಎಲ್ಲರೂ ನಿರಂತರವಾಗಿ ತೊಟ್ಟಿಲು ತೂಗುವ ಭಾಗ್ಯವನ್ನು ಕರುಣಿಸು ಎಂಬುದು ಇದರ ಸಾಂಕೇತಿಕ ಅರ್ಥ. ಮಂಗಳವಾರ ಮತ್ತು ಶುಕ್ರವಾರ ಗೌರಿಯನ್ನು ವಿಸರ್ಜಿಸಬಾರದು. ಈ ಗೌರಿವ್ರತಾಚರಣೆಯಿಂದ ಸುಖದಾಂಪತ್ಯ, ಪುತ್ರಪೌತ್ರಸಕಲವಿಧವಾದ ಸಂಪತ್ತು- ಸೌಭಾಗ್ಯವು ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net