ಈಡೇರಲಿ ನಾಡಪ್ರಭುವಿನ ಸದಾಶಯ

4-685d884addcc5
Published on
ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆ ನಗರವನ್ನು ಭಯಾನಕ ಎಂದು ಚಿತ್ರಿಸಿಬಿಟ್ಟಿತ್ತು. ಐಟಿ ಕೇಂದ್ರಗಳು ನೀರಿನಲ್ಲಿ ಮುಳುಗಿ ಉದ್ಯೋಗಿಗಳು ಕಚೇರಿಗೆ ಹೋಗಲಾರದೆ ಪರದಾಡಿದ್ದರು. ಜನರು ನೀರು ತುಂಬಿದ ಗುಂಡಿಗಳಲ್ಲಿ ವಾಹನಗಳನ್ನು ಚಲಾಯಿಸಿ ಬಿದ್ದು ಗಾಯ ಮಾಡಿಕೊಂಡರು. ಬಸ್ಸುಗಳು ನೀರು ತುಂಬಿದ ರಸ್ತೆಗಳಲ್ಲಿ ಒಂಟಿಯಾಗಿ ನಿಂತುಕೊಂಡವು. ಇಂತಹ ಘಟನೆಗಳು ನಡೆದಾಗಲೆಲ್ಲ ರಾಜಧಾನಿ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ. ಇದೇನಾ ‘ಬ್ರ್ಯಾಂಡ್ ಬೆಂಗಳೂರು’ ಎಂದು ಪ್ರಶ್ನೆ ಕೇಳಿಕೊಳ್ಳುವ ಮಟ್ಟಿಗೆ ಬೇಸರವಾಗುತ್ತದೆ.

ಈ ಎಲ್ಲ ಸಂಗತಿಗಳು ನಾಡಪ್ರಭು ಕೆಂಪೇಗೌಡರ ಜಯಂತಿಯ ದಿನದಂದೇ ನನಗೆ ನೆನಪಾಗಿದೆ. ಒಂದು ಕಾಲದಲ್ಲಿ ಹಳ್ಳಿಯಾಗಿದ್ದ ಬೆಂಗಳೂರು ಇಂದು ಮಹಾನಗರವಾಗಿ ಬೆಳೆದಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಕೇಂದ್ರಸ್ಥಾನವಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕೇಂದ್ರಗಳ ತಾಣವಾಗಿದೆ. ಲಕ್ಷಾಂತರ ಜನರಿಗೆ ಬದುಕು ನೀಡಿರುವ ಜಾಗವಾಗಿದೆ. ಸುಮಾರು ಐನೂರು ವರ್ಷಗಳ ಹಿಂದೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರು ಇದನ್ನು ಕೋಟ್ಯಂತರ ಜನರು ಜೀವಿಸುವಂತಹ ಮನೆಯಾಗಿಸಿದ್ದರು. ಆದರೀಗ ಬೆಂಗಳೂರು ಒಡೆದ ಮನೆಯಾಗಿದೆ ಎಂದು ಚಿಂತಿಸುವಂತಾಗಿದೆ. ನಾಡಪ್ರಭು ಕೆಂಪೇಗೌಡರ ಜಯಂತಿ ಎಲ್ಲೆಡೆ ಆಚರಣೆಯಾಗುತ್ತಿದೆ. ಆದರೆ ಆಚರಣೆಯೊಂದೇ ಸಾಕೆ? ಅವರ ಆಶಯಗಳನ್ನು ನೆರವೇರಿಸುವುದು ಬೇಡವೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ಸಕಾಲ.

ಬೆಂಗಳೂರು ಅಂದು-ಇಂದು: ಜನಜೀವನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರು ಐನೂರು ವರ್ಷಗಳ ಹಿಂದೆಯೇ ನೀಲಿನಕ್ಷೆಯನ್ನು ರೂಪಿಸಿ ಭವ್ಯ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ್ದರು. ಜಗತ್ತಿನ ಯಾವುದೇ ನಗರದ ಉದಾಹರಣೆ ತೆಗೆದುಕೊಂಡರೂ ಅಲ್ಲಿ ನಾಗರಿಕತೆ ಬೆಳೆದಿದ್ದು ನದಿಮೂಲದಿಂದ ಎಂದು ತಿಳಿದುಬರುತ್ತದೆ. ದೆಹಲಿ, ಆಗ್ರಾ, ಪಟನಾ, ಕೋಲ್ಕತ್ತ, ಅಹಮದಾಬಾದ್ ಮೊದಲಾದ ನಗರಗಳು ಇದಕ್ಕೆ ಉದಾಹರಣೆ. ಆದರೆ ಬೆಂಗಳೂರಿಗೆ ಅಂತಹ ಅದೃಷ್ಟವಿರಲಿಲ್ಲ.

ಸರಿಯಾದ ಜಲಮೂಲವನ್ನು ನೀಡದೇ ಹೋದರೆ, ಇಲ್ಲಿ ಜನರು ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂದು ಮನಗಂಡ ಕೆಂಪೇಗೌಡರು, ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಿಸಿದರು. ಧರ್ವಂಬುಧಿ, ಕೆಂಪಾಂಬುಧಿ, ಹಲಸೂರು ಸೇರಿದಂತೆ ನೂರಾರು ಕೆರೆ ಕಟ್ಟೆಗಳನ್ನು ಕೆಲವೇ ವರ್ಷಗಳಲ್ಲಿ ನಿರ್ವಿುಸಿದರು. ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ 1,300ಕ್ಕೂ ಅಧಿಕ ಕೆರೆಗಳಿದ್ದವು. ಕಾಲಕ್ರಮೇಣ ಇವು ಮರೆಯಾಗಿವೆ. ಇರುವ ಕೆರೆಗಳನ್ನು ರಕ್ಷಣೆ ಮಾಡಲು ಯೋಜನೆ ರೂಪಿಸಬೇಕಾದ ಹೊಣೆ ಜವಾಬ್ದಾರಿಯುತ ಸರ್ಕಾರದ ಮೇಲಿದೆ. ಆದರೆ ಕಳೆದೆರಡು ವರ್ಷಗಳಿಂದ ಬ್ರಾ್ಯಂಡ್ ಬೆಂಗಳೂರಿನ ಜಪ ಕೇಳಿದ್ದೇನೆಯೇ ಹೊರತು, ಇಂತಹ ಬದ್ಧತೆ ಅಥವಾ ಯೋಜನೆಗಳನ್ನು ನೋಡಿಯೇ ಇಲ್ಲ. ಈಗ ರಸ್ತೆಗಳಲ್ಲೇ ಕೆರೆಗಳು ಸೃಷ್ಟಿಯಾಗಿವೆ. ಪ್ರತಿ ದಿನ ಲಕ್ಷಾಂತರ ವಾಹನಗಳು ಸಂಚರಿಸುವ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತಿಲ್ಲ ಎಂದರೆ ಕೆಂಪೇಗೌಡರ ಆಡಳಿತವನ್ನು ಸ್ಮರಿಸುವುದು ಕೂಡ ತಪ್ಪಾಗುತ್ತದೆ.

ಕೆಂಪೇಗೌಡರು ಕೆರೆಗಳನ್ನು ನಿರ್ವಿುಸಿದ್ದು ಕೃಷಿ ಮತ್ತು ಕುಡಿಯುವ ನೀರಿಗಾಗಿ. ಜಲಮೂಲವೇ ಇಲ್ಲದ, ತಂತ್ರಜ್ಞಾನಗಳು ಕಡಿಮೆ ಇದ್ದ ಅಂದಿನ ಕಾಲದಲ್ಲಿ ಬೆಂಗಳೂರಿನ ಜನರು ನೀರಿಗೆ ಪರಿತಪಿಸುತ್ತಿರಲಿಲ್ಲ. ಕೆಲವೇ ತಿಂಗಳ ಹಿಂದೆ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರಿಲ್ಲ ಎಂಬ ಹಾಹಾಕಾರ ಮುಗಿಲು ಮುಟ್ಟಿತ್ತು. ನಗರದಲ್ಲಿ ಟ್ಯಾಂಕರ್ ಮಾಫಿಯಾ ಬೆಳೆಯಲು ಸರ್ಕಾರ ಸಂಪೂರ್ಣ ಉತ್ತೇಜನ ನೀಡಿತ್ತು. ಜನರು ಮೂರು ನಾಲ್ಕು ಪಟ್ಟು ಹೆಚ್ಚು ಹಣ ನೀಡಿ ಟ್ಯಾಂಕರ್ ನೀರು ಖರೀದಿಸುತ್ತಿದ್ದರು. ನ್ಯಾಯವಾಗಿ ನಮಗೆ ಸಿಗಬೇಕಾದ ಕಾವೇರಿ ನೀರು ತಮಿಳುನಾಡಿನ ಪಾಲಾಗಿತ್ತು.

ಕೆಂಪೇಗೌಡರು ಇಲ್ಲಿನ ಸಂಸ್ಕೃತಿ, ಪರಂಪರೆ ಹಾಗೂ ಧರ್ಮವನ್ನು ಬೆಳೆಸಿದರು. ದೊಡ್ಡಗಣಪತಿ, ಗವಿಗಂಗಾಧರೇಶ್ವರ, ಹಲಸೂರು ಸೋಮೇಶ್ವರ ಸೇರಿದಂತೆ ಅನೇಕ ದೇವಸ್ಥಾನಗಳ ಜೀಣೋದ್ಧಾರ ಹಾಗೂ ನಿರ್ಮಾಣ ಮಾಡಿದ್ದರು. ಧರ್ಮ ಹಾಗೂ ಪರಂಪರೆಯಿಂದಾಗಿ ಆರ್ಥಿಕ ವ್ಯವಸ್ಥೆಯ ಪುನಶ್ಚೇತನ ಸಾಧ್ಯ ಎಂದು ಅವರು ಅರಿತಿದ್ದರು. ಆದರೆ ಈಗ ಧರ್ಮ, ಸಂಸ್ಕೃತಿಗೆ ಬೆಲೆಯೇ ಇಲ್ಲವಾಗಿದೆ. ಶಕ್ತಿ ಯೋಜನೆಯಿಂದಾಗಿ ಧಾರ್ವಿುಕ ಪ್ರವಾಸೋದ್ಯಮ ಬೆಳೆದಿದೆ ಎನ್ನಲಾಗುತ್ತಿದೆ. ಅದರಿಂದ ಬಂದ ಹಣವನ್ನು ಸರ್ಕಾರ ಯಾವುದಕ್ಕಾಗಿ ಖರ್ಚು ಮಾಡುತ್ತಿದೆ, ಎಷ್ಟು ದೇವಾಲಯಗಳ ಅಭಿವೃದ್ಧಿ ಕಾರ್ಯ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಗ್ರೇಟರ್ ಬೆಂಗಳೂರೆಂಬ ಭೂತ: ಬಿಬಿಎಂಪಿಗೆ ಸಕಾಲದಲ್ಲಿ ಚುನಾವಣೆ ನಡೆಸಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ದಾರಿ ಮಾಡಬೇಕಿದ್ದ ಸರ್ಕಾರ, ನಾಡಪ್ರಭು ಕೆಂಪೇಗೌಡರ ಆಶಯವನ್ನು ಮಣ್ಣು ಪಾಲು ಮಾಡಿ ನಗರವನ್ನು ಒಡೆದಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಎಂಬ ಹೆಸರಲ್ಲಿ ಇಡೀ ಬೆಂಗಳೂರನ್ನು ವಿಭಾಗಗಳನ್ನಾಗಿ ಮಾಡಲಾಗಿದೆ. ಇದು ಮೇಲ್ನೋಟಕ್ಕೆ ಆಡಳಿತದಲ್ಲಿ ತಂದ ಸುಧಾರಣೆ ಎಂದು ಅನ್ನಿಸಬಹುದು. ಅದರಿಂದಾಗಿ ಕಸದ ಸಮಸ್ಯೆ, ಪ್ರವಾಹ, ರಸ್ತೆಗುಂಡಿ ಸಮಸ್ಯೆಗಳು ನಿವಾರಣೆಯಾಗಿಲ್ಲ. ಹೊಸ ವ್ಯವಸ್ಥೆಯಿಂದ ಇನ್ನಷ್ಟು ಸಮಸ್ಯೆಗಳು, ಅದರಲ್ಲೂ ಭಾಷಾಧಾರಿತ ಸಮಸ್ಯೆಗಳು ಹೆಚ್ಚುತ್ತವೆ. ಜೊತೆಗೆ ಅಧಿಕಾರಿಗಳ ಆಡಳಿತವೇ ಹೆಚ್ಚಾಗಲಿದೆ. ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿರುವುದರಿಂದ ಇದನ್ನು ವಿಕೇಂದ್ರೀಕರಣ ಎನ್ನುವುದೇ ತಪ್ಪಾಗುತ್ತದೆ. ಇಂತಹ ಅವ್ಯವಸ್ಥೆಯಿಂದ ಮಹಾನಗರ ಇನ್ನಷ್ಟು ಅಧೋಗತಿಗೆ ಹೋಗಲಿದೆ.

ಬ್ರ್ಯಾಂಡ್​ ಎಲ್ಲಿದೆ?: ನಾಡಪ್ರಭು ಕೆಂಪೇಗೌಡರು ಅಂದು ಕಟ್ಟಿದ್ದ ಬೆಂಗಳೂರೇ ನಿಜವಾದ ಬ್ರಾ್ಯಂಡ್. ಇಂದು ಬ್ರ್ಯಾಂಡ್​ ಎಂಬ ಹೆಸರು ಇದೆಯೇ ಹೊರತು ಅಭಿವೃದ್ಧಿ ಕಾರ್ಯಗಳು ಎಲ್ಲೂ ನಡೆಯುತ್ತಿಲ್ಲ. ಸುರಂಗ ರಸ್ತೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಪ್ರಸ್ತಾಪವಾಗಿದೆಯೇ ಹೊರತು, ಅವುಗಳ ಪ್ರಗತಿ ಏನಾಗಿದೆ ಎಂಬ ಮಾಹಿತಿಯೇ ಇಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕೆಂದು ಮನವಿ ಪತ್ರ ಸಲ್ಲಿಸಲಾಗಿದೆ.

ಈ ಹಿಂದೆ ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಗೆ ವಿಶೇಷ ಅನುದಾನಗಳನ್ನು ನೀಡಲಾಗಿತ್ತೇ ಹೊರತು, ಅದಕ್ಕಾಗಿ ಕೇಂದ್ರದ ಸಹಕಾರಕ್ಕಾಗಿ ಕಾಯುತ್ತ ಕೂತಿರಲಿಲ್ಲ. ಆರ್ಥಿಕ ಅವ್ಯವಸ್ಥೆಯಿಂದಾಗಿ ಅನುದಾನದ ಕೊರತೆ ಇರುವುದರಿಂದ ಬೆಂಗಳೂರಿನ ಅಭಿವೃದ್ಧಿಗೂ ಸರ್ಕಾರದ ಬಳಿ ಹಣವಿಲ್ಲ. ಈ ತಪ್ಪನ್ನು ಮುಚ್ಚಿಡಲು ಕೇವಲ ಬ್ರಾ್ಯಂಡ್ ಎಂಬ ಹೆಸರನ್ನು ಆಗಾಗ್ಗೆ ತೇಲಿ ಬಿಡಲಾಗುತ್ತಿದೆ. ನಗರದ ಸ್ಥಿತಿ ಹೀಗಿರುವಾಗ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವುದರಿಂದ ಯಾವುದೇ ಲಾಭವಿಲ್ಲ. ಕೆಂಪೇಗೌಡರ ಆಶಯದಂತೆಯೇ ನಗರವನ್ನು ಎಲ್ಲ ಆಯಾಮಗಳಿಂದ ಸುಧಾರಣೆ ಮಾಡುವುದೇ ಅವರ ಜಯಂತಿಯ ಅರ್ಥಪೂರ್ಣವಾದ ಆಚರಣೆ. (ಲೇಖಕರು ವಿಧಾನಸಭೆಯ ಪ್ರತಿಪಕ್ಷ ನಾಯಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net