ಸಂಪಾದಕೀಯ: ಶೀಘ್ರ ಜಾರಿಯಾಗಲಿ

-687fd22d29bc9
Published on

ಸರ್ಕಾರದ ಯೋಜನೆಗಳು ಕೆಲವೊಮ್ಮೆ ನಿಯಮಗಳ ಗೋಜಲಿನಲ್ಲಿ ಸಿಲುಕಿ, ಯೋಜನೆಯ ಮೂಲ ಉದ್ದೇಶ ಪೂರ್ಣವಾಗಿ ಈಡೇರುವುದಕ್ಕೆ ಅಡ್ಡಿಯಾಗುತ್ತದೆ. ಇದರರ್ಥ ನಿಯಮಗಳೇ ಬೇಡ ಎಂದಲ್ಲ. ಏಕೆಂದರೆ ಯಾವುದೇ ಯೋಜನೆಗೆ ನೀತಿನಿಯಮಗಳ ಚೌಕಟ್ಟು ಇಲ್ಲದಿದ್ದರೆ ಅತಂತ್ರ ಸ್ಥಿತಿ ನಿರ್ವಣವಾಗುತ್ತದೆ. ರಾಜ್ಯದಲ್ಲಿ ಸರ್ಕಾರದ ಆರೋಗ್ಯ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳ ಶಿಫಾರಸು ಪತ್ರ (ರೆಫರಲ್) ಬೇಕು ಎಂಬ ನಿಯಮ ಜಾರಿಯಲ್ಲಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯವಿದ್ದರೂ, ಖಾಸಗಿ ಆಸ್ಪತ್ರೆಗೆ ಹೋಗಬಾರದು ಎಂಬ ಕಾರಣಕ್ಕೆ ಈ ನಿಯಮ ಮಾಡಲಾಗಿದೆ. ಆದರೆ ತುರ್ತು ಸಂದರ್ಭದಲ್ಲಿ ರೋಗಿಗಳು ಸವಲತ್ತು ಇರುವ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಇದರಿಂದ ತೊಂದರೆಯಾಗುತ್ತಿದೆ ಎಂಬ ಆಕ್ಷೇಪ ಬಹಳ ದಿನಗಳಿಂದ ಇತ್ತು. ‘ಸರ್ಕಾರವು ಜಾರಿಮಾಡಿರುವ ವಿವಿಧ ಯೋಜನೆಗಳಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ತಾಲೂಕು ಅಥವಾ ಜಿಲ್ಲಾಸ್ಪತ್ರೆಗಳ ರೆಫರಲ್ ಪತ್ರ ಕಡ್ಡಾಯಗೊಳಿಸಲಾಗಿತ್ತು. ಇದರಿಂದ ಕೆಲವರಿಗೆ ಅನನುಕೂಲವಾಗಿದ್ದು ಚಿಕಿತ್ಸೆ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ನಿಯಮದಲ್ಲಿ ಮಾರ್ಪಾಡು ಮಾಡಿ, ವೈದ್ಯಕೀಯ ಕಾಲೇಜು ಮತ್ತು ಕೆಲ ಖಾಸಗಿ ಆಸ್ಪತ್ರೆಗಳನ್ನು 3 ಹಂತದಲ್ಲಿ ಪಟ್ಟಿ ಮಾಡಲಾಗಿದೆ. ಅಂತಹ ವೈದ್ಯಕೀಯ ಕಾಲೇಜು ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಆಸ್ಪತ್ರೆಯ ರೆಫರಲ್ ಪತ್ರವಿಲ್ಲದೆ ನೇರವಾಗಿ ಚಿಕಿತ್ಸೆ ಪಡೆಯುವ ರೀತಿಯಲ್ಲಿ ನಿಯಮದಲ್ಲಿ ಬದಲಾವಣೆ ತರಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ತಡವಾದರೂ ಇದು ಉತ್ತಮ ನಿರ್ಧಾರ ಎಂದು ಹೇಳಬಹುದು.

ಏಕೆಂದರೆ ಕೆಲವೊಮ್ಮೆ ತುರ್ತು ವೈದ್ಯಕೀಯ ಅಗತ್ಯದ ಸಂದರ್ಭದಲ್ಲಿ ಚಿಕಿತ್ಸೆ ನೀಡುವುದು ಮುಖ್ಯವೇ ಹೊರತು ನಿಯಮಕ್ಕೆ ಅಂಟಿಕೊಂಡು ಕೂತರೆ ರೋಗಿಗೆ ತೊಂದರೆಯ ಸಾಧ್ಯತೆ ಇರುತ್ತದೆ. ಅದೇ ವೇಳೆ, ಸರ್ಕಾರದ ಯೋಜನೆಗಳಿಗೆ ನಿಯಮ-ನಿರ್ಬಂಧ ಇಲ್ಲದಿದ್ದರೆ ದುರುಪಯೋಗಕ್ಕೂ ಆಸ್ಪದವಾಗುವ ಸಂಭವ ಇರುತ್ತದೆ. ಆದರೆ ನಿಯಮಗಳು ಸಕಾರಣವಾಗಿರಬೇಕು ಮತ್ತು ಅಗತ್ಯ ಬಿದ್ದಾಗ ತಿದ್ದುಪಡಿಯಾಗಬೇಕು. ಆಗ ಮಾತ್ರ ಜನರಿಗೂ ಅನುಕೂಲವಾಗುತ್ತದೆ. ಆರೋಗ್ಯ ಸಚಿವರು ಆದಷ್ಟು ಬೇಗ ಈ ನಿಯಮ ಬದಲಾವಣೆ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಇದಲ್ಲದೆ, ಸವಲತ್ತು ಪಡೆಯಲು ಷರತ್ತುಗಳ ಭಾರವೇ ಅತಿಯಾಗದಂತೆಯೂ ಗಮನಹರಿಸಬೇಕು. ಹಿಂದೆ ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಯಲ್ಲಿತ್ತು. ಜನಸಾಮಾನ್ಯರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು. ನಂತರ ಆಯುಷ್ಮಾನ್ ಯೋಜನೆ ಬಂದಾಗ ಯಶಸ್ವಿನಿ ಯೋಜನೆಯನ್ನು ರದ್ದುಪಡಿಸಲಾಗಿತ್ತು.

ಆದರೆ ಜನರ ಬೇಡಿಕೆ ಹಿನ್ನೆಲೆಯಲ್ಲಿ ಮತ್ತೆ ಜಾರಿಮಾಡಲಾಗಿದೆ. ಯಾವುದೇ ಯೋಜನೆಯು ಜನರನ್ನು ಎಷ್ಟರಮಟ್ಟಿಗೆ ತಲುಪಿದೆ ಮತ್ತು ಯಾವ ರೀತಿಯ ಪರಿಣಾಮ ತಂದಿದೆ ಎಂಬುದರ ಆಧಾರದ ಮೇಲೆ ಯಶಸ್ಸು ನಿರ್ಧರಿತವಾಗುತ್ತದೆ. ಅದರಲ್ಲೂ, ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವ, ವಯಸ್ಸಲ್ಲದ ವಯಸ್ಸಿನಲ್ಲಿ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ, ಇಂದಿನ ದುಬಾರಿ ಕಾಲದಲ್ಲಿ ಜನಸ್ನೇಹಿ ಆರೋಗ್ಯ ಯೋಜನೆಗಳಿಂದಾಗುವ ಪ್ರಯೋಜನ ದೊಡ್ಡದು. ಎಲ್ಲರೂ ಖಾಸಗಿ ಆರೋಗ್ಯ ವಿಮೆ ಹೊಂದಿರದ ಭಾರತದಂತಹ ದೇಶದಲ್ಲಿ ಈ ಅಗತ್ಯ ಇನ್ನಷ್ಟು ಹೆಚ್ಚು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net