

ನಿಮ್ಮಲ್ಲಿ ಅನೇಕರಿಗೆ ಗಣಿತ ವಿಷಯ ಎಂದರೆ ಭಯ ಅಲ್ಲವೆ? ಈ ವಿಷಯದಲ್ಲಿ ಫೇಲ್ ಆಗಿಬಿಟ್ಟರೆ ಎಂಬ ಆತಂಕವೆ? ಈ ಆತಂಕ ಬಿಟ್ಟಾಕಿ. ಗಣಿತ ಪರೀಕ್ಷೆಯಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ಸರಳವಾದ ಕೆಲವೊಂದು ಟಿಪ್ಸ್ ಕೊಡಲಾಗಿದೆ. ಅದನ್ನು ಪಾಲಿಸಿ ಸಾಕು.
‘ಪರೀಕ್ಷೆ ಹತ್ತಿರ ಬಂದೇ ಬಿಟ್ಟಿತಲ್ಲಪ್ಪಾ’ ಎಂದು ಭಯ ಪಟ್ಟುಕೊಳ್ಳುತ್ತಿದ್ದೀರಾ. ಭಯವನ್ನು ಮೊದಲು ಬಿಡಿ. ಯಾವುದೋ ಹಬ್ಬ ಹತ್ತಿರವಿದೆ ಎಂಬಂತೆ ಖುಷಿ ಪಡಿ. ಹಬ್ಬಕ್ಕೆ ನೀವು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರೋ, ಹಾಗೆಯೇ ಪರೀಕ್ಷಾ ಹಬ್ಬಕ್ಕೂ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ.
ನಿಮ್ಮಲ್ಲಿ ಹೆಚ್ಚಿನವರು ಗಣಿತ ಎಂದರೆ ಕಬ್ಬಿಣದ ಕಡಲೆ ಎಂದೇ ಅಂದುಕೊಂಡುಬಿಟ್ಟಿದ್ದೀರಿ ಅಲ್ಲವೆ? ಅದು ಶುದ್ಧ ತಪ್ಪು ಗೊತ್ತಾ? ಗಣಿತವು ಕಬ್ಬಿಣದ ಕಡಲೆಯಲ್ಲ, ಬದಲಾಗಿ ಅದೊಂದು ಮನರಂಜನಾತ್ಮಕ ವಿಷಯ ಎಂಬುದನ್ನು ಅರಿತುಕೊಳ್ಳಿ. ಆಡುತ್ತಲೇ ಮಾಡುವ ಮತ್ತು ಕಲಿಯುವ ವಿಷಯವೇನಾದರೂ ಇದ್ದರೆ ಅದು ಗಣಿತ ಮಾತ್ರ.
ಸಂಖ್ಯೆಗಳೊಂದಿಗಿನ ಆಟವೇ ಗಣಿತ ಆಗಿರುವುದರಿಂದ ಇದನ್ನು ಮನಸಾರೆ ಅನುಭವಿಸಿ, ಆನಂದಿಸಿ. ಹೆಚ್ಚಿನ ವಿದ್ಯಾರ್ಥಿಗಳದ್ದು ಒಂದೇ ಮಾತು, ‘ಉಳಿದ ವಿಷಯಗಳನ್ನು ಏನಾದರೂ ಮಾಡಿ ಪಾಸಾಗುತ್ತೇನೆ. ಆದರೆ ಗಣಿತ ನನ್ನ ತಲೆ ಕೊರೆಯುತ್ತಿದೆ. ಹೇಗೆ ಬಿಡಿಸಬೇಕೆಂಬುದೇ ಹೊಳೆಯುವುದಿಲ್ಲ. ಟೀಚರ್ ಹೇಳುವಾಗ ಸುಲಭವೆನ್ನಿಸುತ್ತದೆ. ಮನೆಗೆ ಬಂದು ಬಿಡಿಸಲು ನೋಡಿದಾಗ ಅದು ಪೆಡಂಭೂತವಾಗಿ ಕಾಡುತ್ತದೆ. ಹೀಗಾಗಿ ನನಗೆ ಗಣಿತವೆಂದರೆ ಭಯ ಮತ್ತು ಅಲರ್ಜಿ...’
ಹೀಗೆ ಅಂದುಕೊಂಡೇ ನೀವು ಗಣಿತದ ಬಗ್ಗೆ ಇನ್ನಷ್ಟು ಭಯ ಹುಟ್ಟಿಸಿಕೊಳ್ಳುತ್ತಿದ್ದೀರಿ. ಆದರೆ ನಿಜವಾಗಿ ನಿಮಗೆ ಗೊತ್ತಾ? ಗಣಿತ ಎನ್ನುವುದು ಪಾಪು ಇದ್ದ ಹಾಗೆ. ನೀವು ಯಾವುದೇ ಪಾಪು ನೋಡಿದಾಗ ಅದನ್ನು ಎತ್ತಿಕೊಳ್ಳುವ ಮನಸ್ಸಾಗುತ್ತದೆ. ಆದರೆ ಮೊದಲಿಗೆ ಆ ಪಾಪು ನೀವು ಕರೆದರೆ ಬರುವುದಿಲ್ಲ.
ಆದರೆ ಅದನ್ನು ರಮಿಸಿ ಕರೆದುಕೊಂಡು ಮುದ್ದಿಸಿದರೆ ನಿಮ್ಮನ್ನು ಬಿಟ್ಟೇ ಹೋಗುವುದಿಲ್ಲ ಅಲ್ಲವೆ? ಗಣಿತವೂ ಹಾಗೆಯೆ. ‘ಇದು ನನ್ನ ವಿಷಯ. ಇದನ್ನು ಪಾಸಾಗದೆ ಉಳಿದವೆಲ್ಲವನ್ನು ಪಾಸಾದರೂ ನನ್ನ ಫಲಿತಾಂಶಕ್ಕೆ ಏನೂ ಅರ್ಥವಿಲ್ಲ’ ಎಂಬುದನ್ನು ನಿರ್ಧರಿಸಿಕೊಳ್ಳಿ. ಅದರ ಬಗೆಗಿನ ಭಯಕ್ಕೆ ಗಟ್ಟಿ ಮನಸ್ಸು ಮಾಡಿ ಬೈ ಹೇಳಿಬಿಡಿ. ಮಗುವನ್ನು ಮುದ್ದಿಸುವಂತೆ ಇಂದಿನಿಂದ ಗಣಿತವನ್ನು ಪ್ರೀತಿಸಿ ಮುದ್ದಿಸಲು ಆರಂಭಿಸಿ. ಗಣಿತ ಅದ್ಹೇಗೆ ನಿಮ್ಮ ಕೈವಶ ಆಗುತ್ತದೆಯೋ ನೀವೇ ನೋಡಿ.
ನೀವು 10ನೇ ಕ್ಲಾಸಾ?
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳೇ, ಇಲ್ಲಿ ಕೇಳಿ. ಈ ಬಾರಿ ಗಣಿತ ಪ್ರಶ್ನೆ ಪತ್ರಿಕೆಯ ಸ್ವರೂಪವು ಬದಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಕೇವಲ 38 ಪ್ರಶ್ನೆಗಳಲ್ಲಿ 80 ಅಂಕಗಳನ್ನು ಪಡೆಯುವ ಅನುಕೂಲತೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಒದಗಿಸಿದೆ.
ಇದರಲ್ಲಿ 8 ಪ್ರಶ್ನೆಗಳು ಬಹು ಆಯ್ಕೆ ಪ್ರಶ್ನೆಗಳು, ಅಂಕಗಳು 8 (ಪ್ರತಿ ಪ್ರಶ್ನೆಗೆ 1 ಅಂಕ). ಅತಿ ಲಘು ಉತ್ತರದ ಪ್ರಶ್ನೆಗಳು 8, ಅಂಕಗಳು 8 (ಪ್ರತಿ ಪ್ರಶ್ನೆಗೆ 1 ಅಂಕ). ಲಘು ಉತ್ತರದ ಪ್ರಶ್ನೆಗಳು 8, ಅಂಕಗಳು 16 (ಪ್ರತಿ ಪ್ರಶ್ನೆಗೆ 2 ಅಂಕ). ದೀರ್ಘ ಉತ್ತರದ ಪ್ರಶ್ನೆಗಳು 9, ಅಂಕಗಳು 27 (ಪ್ರತಿ ಪ್ರಶ್ನೆಗೆ 3 ಅಂಕ). ದೀರ್ಘ ಉತ್ತರದ ಪ್ರಶ್ನೆಗಳು 4, ಅಂಕಗಳು 16 (ಪ್ರತಿ ಪ್ರಶ್ನೆಗೆ 4 ಅಂಕ) ಮತ್ತು ದೀರ್ಘ ಉತ್ತರದ ಪ್ರಶ್ನೆ 1, ಅಂಕಗಳು 5 (ಈ ಪ್ರಶ್ನೆಗೆ 5 ಅಂಕ) ಹೀಗೆ ಒಟ್ಟು 80 ಅಂಕಗಳನ್ನು 38 ಪ್ರಶ್ನೆಗಳಿಗೆ ನಿಗದಿಗೊಳಿಸಲಾಗಿದೆ. 38 ಪ್ರಶ್ನೆಗಳಿಗೆ ಉತ್ತರಿಸಲು ಸಾಕಷ್ಟು ಸಮಯವನ್ನೂ ಮಂಡಳಿ ನೀಡಿದೆ.
ಒಟ್ಟು 3 ಗಂಟೆ 15 ನಿಮಿಷಗಳ ದೀರ್ಘಾವಧಿಯನ್ನು ಪರೀಕ್ಷೆ ಬರೆಯಲು ನೀಡಲಾಗಿದ್ದು, ಇದರಲ್ಲಿ 15 ನಿಮಿಷಗಳನ್ನು ನೀವುಗಳು ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಲು ಕಡ್ಡಾಯವಾಗಿ ಬಳಸಿಕೊಳ್ಳಲೇಬೇಕು. ಗಣಿತ ಪರೀಕ್ಷೆ ಕಬ್ಬಿಣದ ಕಡಲೆ ಎಂದುಕೊಂಡವರಿಗೆ ಸುಲಭವಾಗಿ ಉತ್ತರ ಬರೆದು ಪಾಸಾಗಲು, ಅದೂ 28 ಅಂಕಗಳನ್ನು ಅನಾಯಾಸವಾಗಿ ಪಡೆಯಬಹುದು.
ಇಲ್ಲಿದೆ ನೋಡಿ ಕೆಲವು ಸಲಹೆ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಎಕ್ಸ್ಟ್ರಾ ಟಿಪ್ಸ್
| ಅರುಣ ಬಿ ಕುಲಕರ್ಣಿ (ಲೇಖಕರು ಗದಗದ ಶ್ರೀ ಸೋಮೇಶ್ವರ ಪ್ರೌಢಶಾಲೆ, ಕೋಟುಮಚಗಿಯ ಗಣಿತ ಶಿಕ್ಷಕರು)