ಕನ್ನಡವೇ ಉಸಿರಾಗಿದ್ದ ಮಾಸ್ತಿ

5-6841db0ecfd10-6841db180d47b
Published on
ಸಾಹಿತ್ಯದ ಮೂಲಕ ಕನ್ನಡಕ್ಕೊಂದು ಘನತೆ ಗೌರವ ತಂದುಕೊಟ್ಟವರಲ್ಲಿ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಪ್ರಮುಖರು. ಪೂರ್ವದ ಜಗತ್ತು ಮತ್ತು ಪಶ್ಚಿಮದ ಜಗತ್ತು ಎರಡನ್ನೂ ಆಳವಾಗಿ ತಿಳಿದುಕೊಂಡಿದ್ದ ಅವರ ಲೋಕ ದರ್ಶನ ಬೆರಗುಗೊಳಿಸುವಂಥದು. ಮಾಸ್ತಿಯವರ ಕನ್ನಡವಂತೂ ತಿಳಿನೀರಿನ ಹಾಗಿದೆ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿಯೂ ಅವರು ಬರೆದರು. ಇಂದು ಅವರ ಜನ್ಮದಿನ. ಅವರು ನಿಧನರಾದುದೂ ಜೂನ್ 6 ರಂದೇ. ಈ ಸಂದರ್ಭದಲ್ಲಿ ಮಾಸ್ತಿಯವರ ವ್ಯಕ್ತಿತ್ವದ ಒಂದು ಮೆಲುಕು.

|ಡಾ. ಸರಜೂ ಕಾಟ್ಕರ್

ಕನ್ನಡದಲ್ಲಿ ಸಣ್ಣ ಕಥಾ ಪ್ರಕಾರಕ್ಕೆ ಸುನಿಶ್ಚಿತವಾದ ರೂಪ ಕೊಟ್ಟು ಅದನ್ನೊಂದು ಸಾಹಿತ್ಯ ಪ್ರಕಾರವಾಗಿ ಬೆಳೆಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಮಾಸ್ತಿಯವರ ಹುಟ್ಟೂರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹೊಂಗೇನಹಳ್ಳಿ. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ತಂದೆ-ತಾಯಿ ಮಾಸ್ತಿಯವರನ್ನು ಕರೆದದ್ದು ವೆಂಕಟೇಶ ಎಂದು. ಅವರ ಮೂಲ ಮನೆತನದ ಊರು ಮಾಸ್ತಿ. ಮೂಲ ಮನೆತನದ ಹೆಸರನ್ನು ತಮ್ಮ ಹೆಸರಿಗೆ ಶಾಶ್ವತವಾಗಿ ಅಂಟಿಸಿಕೊಂಡ ರಾಮಸ್ವಾಮಿ ಅಯ್ಯಂಗಾರ್ ಅವರ ಮಗ ವೆಂಕಟೇಶ ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರಾದರು. ಚುಟುಕಾಗಿ ‘ಮಾಸ್ತಿ’ಯಾದರು.

1980ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅತಿಥಿಯಾಗಿ ಮಾಸ್ತಿಯವರು ಬೆಳಗಾವಿಗೆ ಬಂದಿದ್ದರು. 1929ರಲ್ಲಿ ಬೆಳಗಾವಿಯಲ್ಲೇ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಮಾಸ್ತಿಯವರೇ. 1980ರಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು. ಮಾಸ್ತಿ ಹಾಗೂ ಕಟ್ಟೀಮನಿಯವರು ಸ್ನೇಹಿತರಾಗಿದ್ದರೂ ಮಾಸ್ತಿಯವರ ‘ಚಿಕವೀರ ರಾಜೇಂದ್ರ’ ಕಾದಂಬರಿಯನ್ನು ಕಟ್ಟೀಮನಿಯವರು ಬಲು ತೀಕ್ಷ ್ಣವಾಗಿ ಟೀಕಿಸಿದ್ದರು.

ಬದುಕಿನಲ್ಲಿ ಸ್ನೇಹಕ್ಕೆ ಗೌರವ ಮತ್ತು ಬೆಲೆಯನ್ನು ನೀಡುತ್ತಿದ್ದ ಮಾಸ್ತಿ, ಕಟ್ಟೀಮನಿಯವರು ತಮ್ಮ ಕಾದಂಬರಿಯ ಬಗ್ಗೆ ಮಾಡಿದ ಟೀಕೆಯನ್ನು ಮರೆತು ಗೆಳೆಯನ ಅಧ್ಯಕ್ಷತೆಯ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಕಟ್ಟೀಮನಿಯವರ ಬಗ್ಗೆ ಅವರು ಆಡಿದ ಮಾತು ಸಾಹಿತ್ಯ ಕ್ಷೇತ್ರದಲ್ಲಿ ಚಿರಂತನವಾಗಿ ಉಳಿಯುವಂತಹುದು. ‘ಈ ಕಟ್ಟೀಮನಿಯ ಕೈಯಲ್ಲಿ ಇರೋದು ಲೆಕ್ಕಣಿಕೆಯಲ್ಲ, ಅದು ಕುಡುಗೋಲು ಅಥವಾ ಖಡ್ಗ. ಈ ಖಡ್ಗದಿಂದ ಕಟ್ಟೀಮನಿ ಸಮಾಜದಲ್ಲಿ ಪಸರಿಸಿರುವ ಅಸಮಾನತೆ, ಮೌಢ್ಯಗಳನ್ನು ಕಚಕಚನೆ ತುಂಡರಿಸಿ ಒಗೆಯುತ್ತಾರೆ. ಸಮಸಮಾಜದ ರಚನೆಗೆ ಕಟ್ಟೀಮನಿಯವರ ಸಾಹಿತ್ಯ ಪೂರಕವಾದುದು’ ಎಂದು ಹೇಳಿ ‘ಉತ್ತರ ಕರ್ನಾಟಕದ ಈ ನನ್ನ ತಮ್ಮನನ್ನು ದಕ್ಷಿಣ ಕರ್ನಾಟಕದ ಈ ಅಣ್ಣ ಆಶೀರ್ವದಿಸುತ್ತಾನೆ’ ಎಂದು ಹೇಳಿ ವೇದಿಕೆಯಲ್ಲೇ ಅವರನ್ನು ಅಪ್ಪಿಕೊಂಡರು. ಅವರಿಬ್ಬರ ಈ ಅಪೂರ್ವವಾದ ಮಿಲನ ಸಭಿಕರ ಕಣ್ಣು ತೋಯಿಸಿದ್ದವು.

1980ರಲ್ಲಿ ನಾನು ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಬೆಳಗಾವಿ ಜಿಲ್ಲಾ ವರದಿಗಾರನಾಗಿದ್ದೆ. ಆಗ ಪತ್ರಿಕೆಗಾಗಿ ಮಾಸ್ತಿ ಅವರ ಸಂದರ್ಶನವನ್ನು ಮಾಡಿದ್ದೆ. ಆಗ ತಾನೆ ಕನ್ನಡ ಸಾಹಿತ್ಯದಲ್ಲಿ ಬಂಡಾಯ ಪ್ರಜ್ಞೆ, ದಲಿತ ಪ್ರಜ್ಞೆ ರಭಸದಿಂದ ಬಂದು ಅಪ್ಪಳಿಸಿತ್ತು. ಸಾಹಿತ್ಯದ ಈ ಹೊಸ ಬೆಳವಣಿಗೆಯ ಬಗ್ಗೆ ಮಾಸ್ತಿಯವರು, ‘‘ಸಾಹಿತ್ಯ ಯಾವಾಗಲೂ ಹೊಚ್ಚಹೊಸದಾಗಿಯೇ ಇರುತ್ತದೆ. ಕಾಳಿದಾಸನೇ ತನ್ನ ಮಹಾಕಾವ್ಯವನ್ನು ನವೋನ್ಮೇಷ ಎಂದು ಕರೆದ. ಆ ಕಾಲದಲ್ಲಿ ಅವನ ಕಾವ್ಯ ಆಧುನಿಕವಾಗಿತ್ತು. ಯುಗಧರ್ಮಕ್ಕಿಂತ ಮುಂದಿತ್ತು. ಹಾಗೆಯೇ ಸಾಹಿತ್ಯ ಯಾವಾಗಲೂ ಹೊಚ್ಚ ಹೊಸದಾಗಿಯೇ ಇರಬೇಕು. ನಾನು ‘ಮೊಸರಿನ ಮಂಗಮ್ಮ’ ಎಂದು ಕಥೆ ಬರೆದಾಗ ಅನೇಕರು ‘ಇದು ಕಥೆಯಾ?’ ಎಂದು ಕೇಳಿದ್ದರು. ಅನಂತರ ಅವರೇ ನನ್ನನ್ನು, ನನ್ನ ಕಥೆಯನ್ನು ಒಪ್ಪಿಕೊಂಡರು’ ಎಂದು ಹೇಳಿದ್ದರು.

ಮಾಸ್ತಿಯವರು ಸಾಹಿತಿಗಳಾಗಿರುವಂತೆ ಪತ್ರಕರ್ತರೂ ಆಗಿದ್ದರು. ‘ಜೀವನ’ ಮಾಸಪತ್ರಿಕೆಯ ಸಂಪಾದಕರಾಗಿ ಅದನ್ನು 21 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದರು. ‘ಜೀವನ’ ಧಾರವಾಡದಲ್ಲಿ ಆರಂಭವಾಗಿ ಅನಿಯಮಿತವಾಗಿ ಪ್ರಕಟವಾಗುತ್ತಿತ್ತು. 1944ರಲ್ಲಿ ಮಾಸ್ತಿಯವರು ಪತ್ರಿಕೆಯನ್ನು ಬೆಂಗಳೂರಿಗೆ ತಂದು ಅದನ್ನು ನಿಯಮಿತವಾಗಿ 21 ವರ್ಷಗಳ ಕಾಲ ಪ್ರಕಟಿಸಿದರು. ತಮ್ಮ ಮನೆಯನ್ನೇ ‘ಜೀವನ’ ಪತ್ರಿಕೆಯ ಕಾರ್ಯಾಲಯವನ್ನಾಗಿಸಿದರು. ಆ ಕಾಲದ ಯುವ ಬರಹಗಾರರಾಗಿದ್ದ ಅನೇಕರನ್ನು ಪತ್ರಿಕೆಯ ಮೂಲಕ ಬೆಳಕಿಗೆ ತಂದರು. ಡಾ. ದ.ರಾ. ಬೇಂದ್ರೆ, ರಂಗನಾಥ ದಿವಾಕರ, ಎ.ಆರ್. ಕೃಷ್ಣಶಾಸ್ತ್ರೀ, ನವರತ್ನ ರಾಮರಾಯ, ವಿಶ್ವೇಶ್ವರಯ್ಯ ಮುಂತಾದವರ ಬಗ್ಗೆ ವಿಶೇಷ ಸಂಚಿಕೆಗಳನ್ನು ಹೊರತಂದು ಒಂದು ಹೊಸ ಸಂಪ್ರದಾಯವನ್ನೇ ಹಾಕಿದರು.

ಕನ್ನಡ ಸಣ್ಣ ಕಥೆಗಳ ಜನಕ: ಮಾಸ್ತಿಯವರು ಸಣ್ಣ ಕಥೆಗಳನ್ನು ಬರೆದರು; ಕಾದಂಬರಿಗಳನ್ನು ಬರೆದರು; ಕವಿತೆಗಳನ್ನು ಬರೆದರು; ನಾಟಕಗಳನ್ನೂ ಬರೆದರು. ಕಥೆಗಳನ್ನು ಬರೆದು ‘ಕನ್ನಡ ಸಣ್ಣ ಕಥೆಗಳ ಜನಕ’ ಎಂಬ ಬಿರುದಿಗೂ ಪಾತ್ರರಾದರು. ಅವರ ಕಥೆಗಳು ಅವರು ದಿನಪ್ರತಿ ನೋಡಿದ, ಅನುಭವಿಸಿದ ಘಟನೆಗಳೇ ಆಗಿವೆ. ಅವರ ಕಥಾಶೈಲಿ ತುಂಬ ಸರಳವಾದುದು; ಅಲ್ಲಿ ಸಂಕೀರ್ಣತೆಗೆ ಆಸ್ಪದವಿಲ್ಲ. ಸಣ್ಣ ಘಟನೆಯನ್ನು ಆಕರ್ಷಕವಾದ ಕಥಾಸೂತ್ರದಲ್ಲಿ ಅಳವಡಿಸುವ ಅದ್ಭುತ ಸಾಹಿತ್ಯ ಪ್ರತಿಭೆ ಅವರಲ್ಲಿತ್ತು.

ಆಡಳಿತಕ್ಕೆ ಸಾಹಿತ್ಯ ಸ್ಪರ್ಶ: ಮಾಸ್ತಿಯವರು 1913ರಲ್ಲಿಯೇ ಇಂಡಿಯನ್ ಸಿವಿಲ್ ಸರ್ವಿಸ್ (ಈಗ ಅದನ್ನು ಐಎಎಸ್ ಎಂದು ಕರೆಯಲಾಗುತ್ತದೆ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡಿದರು. ಅವರ ಆಡಳಿತ ಜನಪರವಾಗಿತ್ತು. ಬಡವರ ಬಗ್ಗೆ, ದೀನ ದಲಿತರ ಬಗ್ಗೆ ಅವರ ಹೃದಯ ಸದಾ ಸ್ಪಂದಿಸುತ್ತಿತ್ತು. ಆಡಳಿತಕ್ಕೆ ಸಾಹಿತ್ಯದ ಸ್ಪರ್ಶ ನೀಡಿದವರು ಮಾಸ್ತಿ. ಅವರ ಕಥೆಗಳಲ್ಲಿ ಸಾಮಾಜಿಕ ಸಂಘರ್ಷದ ಅನೇಕ ಪ್ರಸಂಗಗಳು ಬರುತ್ತವೆ. ಅವರ ಕಥೆಗಳು ಬಡವರ ಪರವಾಗಿ, ಶೋಷಿತರ ಪರವಾಗಿ ನಿಲ್ಲುತ್ತವೆ. ಸನಾತನಿಯಾಗಿದ್ದರೂ ಅವರ ವಿಚಾರಗಳು ಕ್ರಾಂತಿಕಾರಿಯಾಗಿದ್ದವು. ಅವರ ಮಾತೃಭಾಷೆ ತಮಿಳು ಆಗಿದ್ದರೂ ಕನ್ನಡವೇ ಅವರ ಉಸಿರಾಗಿತ್ತು. (ಲೇಖಕರು ಹಿರಿಯ ಸಾಹಿತಿ, ಪತ್ರಕರ್ತ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net