ನಂಗಾ ಇರೋದು ಹುಲ್ಲಮನೇಲಿ, ನಂಗಾ ಇರೋದು ಕಟ್ಟೆಗೂಡಲಿ...

Masth 2
Published on
| ಶಿವು ಹುಣಸೂರು

ನಂಗಾ ಇರೋದು ಹುಲ್ಲಮನೇಲಿ/ನಂಗಾ ಇರೋದು ಕಟ್ಟೆಗೂಡಲಿ

ನಾ ನಿನ್ನಗಾ ಸಂದಾ ಕಾಣಿಯ್ಯಾ/ನಿನ್ನ ನಾ ಕೂಟದಿರಯ್ಯ.....

ಕಿವಿಗೆ ಇಂಪಾದ ಈ ಹಾಡು ಆದಿವಾಸಿಗಳ ಜೀವನ, ನೋವು-ನಲಿವು, ಪ್ರೀತಿ-ಪ್ರೇಮ, ಭಕ್ತಿ-ಭಾವ, ವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತದೆ. ಅದೇ ರೀತಿ ತಮ್ಮ ಭೂಮಿಯ ಹಕ್ಕಿಗಾಗಿ ದಿಟ್ಟವಾಗಿ ಕೇಳುವ ದನಿಯೂ ಈ ಹಾಡಿನಲ್ಲಿ ಪ್ರತಿಧ್ವನಿಸುತ್ತಿದೆ. ಈ ಹಾಡನ್ನು ಹಾಡುವ ತಂಡ ಹೊರಗಿನವರದ್ದಲ್ಲ; ಆದಿವಾಸಿಗಳದ್ದೇ. ಹೀಗಾಗಿ ಅವರ ಅಭಿವ್ಯಕ್ತಿಯಲ್ಲಿ ಒಂದು ಮೊನಚು ಕೂಡ ಇದೆ. ಇದರಲ್ಲಿ ಗಾಯಕರ ತಂಡಕ್ಕೆ ಸಾಥ್ ನೀಡುವ ಹಿಮ್ಮೇಳದಲ್ಲಿರುವ ಸಲಕರಣೆಗಳನ್ನು ನೋಡಿದ್ರೆ ನೀವು ಹುಬ್ಬೇರಿಸೋದು ಗ್ಯಾರೆಂಟಿ. ಮರದ ಕೋಲು ಕೈಗೆ ಸಿಕ್ಕರೆ ನೀರಿನ ಡ್ರಮ್ ಇವರ ಪಾಲಿಗೆ ಡೋಲು, ಇಲ್ಲಾಂದ್ರೆ ತಬಲಾ. ಇವರ ಆರಾಧ್ಯ ದೇವರನ್ನೊಮ್ಮೆ ಗಮನಿಸಿದರೆ, ಅಲ್ಲಿ ಗೆಜ್ಜೇವರು, ನಡುಮನೆ ತಾಯಿ, ಮೂರಟ್ಟಿ ಕಕ್ಕೇರಿ, ಒಡ್ತೇರು, ಅಮ್ಮಾಳೆಮ್ಮ ಹೀಗೆ 101 ದೇವರ ಹೆಸರುಗಳು ಕೇಳಿಬರುತ್ತವೆ. ಆ ದೇವರುಗಳ ಹೆಸರಿನಲ್ಲಿ ಹಾಡುಕಟ್ಟಿ ಹಾಡು ತ್ತಾರೆ. ಕೋಲಾಟ, ಸುಗ್ಗಿ ಕುಣಿತಕ್ಕೂ ಬರವಿಲ್ಲ.

ಈ ನೆಲದ ಮೂಲನಿವಾಸಿಗಳೆಂದು ಕರೆಯಲ್ಪಡುವ ಆದಿವಾಸಿ ಸಮುದಾಯದ ಭವ್ಯ ಪರಂಪರೆ ಇದು. ಇದನ್ನು ಮುಂದುವರಿಸುವಲ್ಲಿ ಮೂರನೇ ತರಗತಿ ಕಲಿತ ಆದಿವಾಸಿ ಯುವಕ ಕೊಡಗಿನ ಪೊನ್ನಂಪೇಟೆಯ ನಾಣಾಚ್ಚಿ ಗದ್ದೆ ಹಾಡಿಯ ರಮೇಶ್ ನಾಣಾಚ್ಚಿ ಅವರ ಶ್ರಮ ಎದ್ದು ಕಾಣುವಂಥದ್ದು. ಸತತ 17 ವರ್ಷಗಳಿಂದ ತನ್ನ ಪಾಡಿಗೆ ತಾನು ಆದಿವಾಸಿ ಸಮುದಾಯದ ಭವ್ಯ ಪರಂಪರೆ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕೆರೆಯ ನೀರನು ಕೆರೆಗೆ ಚೆಲ್ಲಿ...: ಆದಿವಾಸಿ ಯುವಕರು ‘ಸುಶಿಕ್ಷಿತ’ರೆನಿಸಿ ಕೊಂಡ ಕೂಡಲೇ ಮೂಲಸಂಸ್ಕೃತಿಯನ್ನೇ ಮರೆಯುತ್ತಾರೆ, ಭಾಷೆಯನ್ನು ಕಡೆಗಣಿಸುತ್ತಾರೆ. ಇದು ಹೀಗೆ ಮುಂದುವರಿದರೆ ಸಮುದಾಯದ ಅಸ್ಮಿತೆಯೇ ಕಣ್ಮರೆಯಾಗಬಹುದೆಂಬ ಆತಂಕ ರಮೇಶ್ ಅವರದ್ದು. ಹೀಗಾಗಿ ತಮ್ಮ ಸಂಸ್ಕೃತಿ ಯನ್ನು ಉಳಿಸಿಕೊಳ್ಳಬೇಕೆಂಬ ದೃಢನಿರ್ಧಾರಕ್ಕೆ ಬಂದಿದ್ದು, ಕೂಲಿನಾಲಿ ಮಾಡಿ 17 ವರ್ಷಗಳಿಂದ ತಾವು ಗಳಿಸಿದ ಹಣವನ್ನು ಜಾಗೃತಿ ಮೂಡಿಸಲು ವಿನಿಯೋಗಿಸುತ್ತಿದ್ದಾರೆ. ನಾನು ಮಾಡಿದ್ದ ಸಂಪಾದನೆಯನ್ನು ಉಳಿಸಿಕೊಂಡಿದ್ದರೆ ಇಷ್ಟರವರೆಗೆ ಸ್ವಂತ ಮನೆಯನ್ನಾದರೂ ಕಟ್ಟಿಕೊಳ್ಳುತ್ತಿದ್ದೆ. ಆದರೆ ನನ್ನ ಗುರಿ ಅದಾಗಿರಲಿಲ್ಲ ಎನ್ನುತ್ತಾರೆ ರಮೇಶ್.

30 ಜನರ ತಂಡ: ರಮೇಶ್ ಅವರ ತಂಡದಲ್ಲಿ ಇರುವ ಯುವಕ, ಯುವತಿಯರು ಉತ್ತಮ ಹಾಡುಗಾರರಾಗಿದ್ದಾರೆ. ಅವರ ಗಟ್ಟಿದನಿ, ನಿರರ್ಗಳ ಆದಿವಾಸಿ ಭಾಷೆಯ ಮೇಲಿನ ಪ್ರಭುತ್ವ, ಹಾಡುವಾಗಿನ ಅವರ ಭಾವಾಭಿನಯ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ರಮೇಶ್ ಜತೆ ಜೆ.ಜಿ.ಕುಮಾರ್, ಪ್ರತಾಪ್, ಎ.ಆರ್.ಉದಯ, ಜೆ.ಎಸ್.ಸುದೀಪ್, ಬ್ಯಾಂಡ್ ವಾದಕರಾದ ನಿತಿನ್, ರಾಜಣ್ಣ, ಅನಿಲ್, ಅನಿತಾ, ಲೇಖ ಮುಂತಾದವರೆಲ್ಲರೂ ಉತ್ತಮ ಹಾಡುಗಾರರಾಗಿದ್ಧಾರೆ.

ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ: ಕೊಡಗು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಹುಣಸೂರು ತಾಲೂಕಿನ ಗಿರಿಜನ ಹಾಡಿಗಳಿಗೆ ಸಹಚರರೊಡಗೂಡಿ ತೆರಳಿ ಪೂರ್ವಜರು ಬಿಟ್ಟುಹೋದ ಸಾಂಪ್ರದಾಯಿಕ ಹಾಡುಗಳ ಜತೆಗೆ ತಾವೇ ಸಾಹಿತ್ಯರಚಿಸಿ ರಾಗ ಸಂಯೋಜಿಸಿದ ಹಾಡುಗಳನ್ನು ಹಾಡಲು ಆರಂಭಿಸಿದರು. ಕಾಡಿನ ಸೊಬಗು, ಆದಿವಾಸಿಗಳು ಬದುಕು, ಆದಿವಾಸಿಗಳ ದೇವರು, ಕಾಡುಕುಡಿಗಳ ಪ್ರೀತಿಯ ಕಥೆಗಳು ಹೀಗೆ ವಿವಿಧ ಹಾಡುಗಳನ್ನು ರಚಿಸಿಕೊಂಡರು. ವರ್ಷದ ಹಿಂದಷ್ಟೆ ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ ಎನ್ನುವ ಟ್ರಸ್ಟ್ ಸ್ಥಾಪಿಸಿಕೊಂಡು ಕಲಾಸೇವೆಯನ್ನು ಮುಂದುವರಿಸಿದ್ದಾರೆ. ಇದಕ್ಕೆ ಸಮಾಜದಿಂದಲೂ ಉತ್ತಮ ಸ್ಪಂದನೆಯೂ ಸಿಕ್ಕಿದೆ.

ಆಧುನಿಕತೆಯ ಆಕರ್ಷಣೆಗೆ ವಿದ್ಯಾವಂತ ಆದಿವಾಸಿ ಯುವಕರು ಬಲಿಯಾಗುತ್ತಿದ್ದಾರೆ. ವಿದ್ಯಾಭ್ಯಾಸ ಅವಶ್ಯ. ಹಾಗೆಂದ ಮಾತ್ರಕ್ಕೆ ನಮ್ಮತನವನ್ನು ಬಿಟ್ಟುಕೊಡಬೇಕೆಂದೇನಿಲ್ಲ. ಹಾಗಾಗಿ ನಮ್ಮ ಪರಂಪರೆಯನ್ನು ಉಳಿಸಬೇಕೆನ್ನುವ ಉದ್ದೇಶದಿಂದ ದಶಕಗಳಿಂದ ಒಂಟಿಯಾಗಿ ದುಡಿದು ಇದೀಗ ಟ್ರಸ್ಟ್ ಸ್ಥಾಪಿಸಿದ್ದೇನೆ. ಜತೆಯಲ್ಲಿ ಆದಿವಾಸಿಗಳ ಭೂಮಿಯ ಹಕ್ಕಿಗಾಗಿ ಹೋರಾಡುವ ಸಂಘಟನೆಗಳೊಂದಿಗೆ ಕೈಜೋಡಿಸಿ ಹೋರಾಟ ನಡೆಸುತ್ತದೆ.

| ರಮೇಶ್ ನಾಣಾಚ್ಚಿ ಅಧ್ಯಕ್ಷ, ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಘ, ಗದ್ದೆಹಾಡಿ ಪೊನ್ನಂಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net