

| ಉಪೇಂದ್ರ ವಡ್ಡಾಡಿ
ಇದು ಕಲಾ ಕ್ಷೇತ್ರದ ಅನನ್ಯ ಪ್ರಯತ್ನ. ಕಲಾವಿದರಿಂದ, ಕಲಾವಿದರಿಗೋಸ್ಕರ ಕಲೆಯ ದಾಖಲೀಕರಣಕ್ಕಾಗಿ ರೂಪುಗೊಂಡಿರುವ ಕಲಾ ವೇದಿಕೆಯೇ ಲೇಖಾ. ಇಂಡಿಯನ್ ಸೋನಿಕ್ ರಿಸರ್ಚ್ ಆರ್ಗನೈಸೇಶನ್ನಲ್ಲಿ ಈ ರೀತಿಯ ಒಂದು ವಿಭಿನ್ನ ಆಲೋಚನೆ ರೂಪು ತಾಳಿದ್ದು. ಇಡೀ ಜಗತ್ತನ್ನು ಕೋವಿಡ್ ಬಾಧಿಸುತ್ತಿದ್ದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನಕ್ಕೆ ಶ್ರೀಕಾರ ದೊರಕಿತು.
ಇದುವರೆಗೂ ಕಲಾವಿದರಿಗಾಗಲೀ ಅಥವಾ ಕಲಾ ಸೇವೆಯಲ್ಲಿ ನಿರತವಾಗಿರುವ ಯಾವುದೇ ಸಂಸ್ಥೆಗೆ ತಮ್ಮ ಕಲೆಯ ಕುರಿತಾದ ವಿವಿಧ ಮಾಹಿತಿಗಳನ್ನು ದಾಖಲಿಸಿ, ಅದನ್ನು ಶಾಶ್ವತವಾಗಿರಿಸಲು, ಆನ್ಲೈನ್ನಲ್ಲಾಗಲೀ ಅಥವಾ ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಯಾವುದೇ ಒಂದು ವೇದಿಕೆ ಲಭ್ಯವಿರಲಿಲ್ಲ. ಈ ರೀತಿಯ ವೇದಿಕೆಯ ಅಗತ್ಯವನ್ನು ಮನಗಂಡ ಇಂಡಿಯನ್ ಸೋನಿಕ್ ರಿಸರ್ಚ್ ಆರ್ಗನೈಸೇಶನ್ ಲೇಖಾ ಎಂಬ ಈ ದಾಖಲೀಕರಣ ವೇದಿಕೆಯನ್ನು ಅಭಿವೃದ್ಧಿ ಪಡಿಸಿದೆ. ಕಲಾ ಪ್ರಕಾರಗಳ ದಾಖಲೀಕರಣಕ್ಕೆ ಲಭ್ಯವಿರುವ ದಾಖಲೀಕರಣದ ಸಾಧನಗಳು ಬಹಳಷ್ಟು ದುಬಾರಿಯಾಗಿರುವಂಥವು. ಅಲ್ಲದೇ ಅವನ್ನು ಬಳಸುವ ಬಗೆಯೂ ಕ್ಲಿಷ್ಟಕರ. ತಮ್ಮ ಆಯ್ಕೆಯ ಕಲಾಕ್ಷೇತ್ರದಲ್ಲಿ ತಾವು ಸಾಧಿಸಿರುವುದನ್ನು ದಾಖಲಿಸಬೇಕೆಂದು ಹಂಬಲಿಸುವವರಿಗೆ ಪ್ರಸ್ತುತ ವ್ಯವಸ್ಥೆ ನಿರಾಶಾದಾಯಕವಾಗಿದೆ. ಹೀಗಾಗಿ ಗೋಥೆ ಸಂಸ್ಥೆಯ ಸಹಯೋಗದೊಂದಿಗೆ ಲೇಖಾ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ದಾಖಲೀಕರಣಕ್ಕೆ ಬಳಸಲು ಸರಳವಾಗಿರುವ, ಕೈಗೆಟುಕಬಲ್ಲ ಮತ್ತು ಎಲ್ಲರಿಗೂ ಮುಕ್ತವಾಗಿ ದೊರಕಬಲ್ಲ, ಕಲಾವಿದರ ಪ್ರತಿಕ್ರಿಯೆಗಳನ್ನು ಒಳಗೊಂಡ ಅದರಲ್ಲೂ ವಿಶೇಷವಾಗಿ ಅವರ ದಾಖಲೀಕರಣದ ಬೇಡಿಕೆಗಳಿಗೆ ಒದಗಬಲ್ಲ ಮತ್ತು ಅವರ ಅಗತ್ಯಗಳನ್ನು ಪೂರೈಸಬಲ್ಲ ಪತ್ರಾಗಾರವನ್ನು ರಚಿಸಿತು.
ಹಾಗಾದರೆ ಈ ಸಂಚಿಯಲ್ಲಿ ಏನೆಲ್ಲ ಇದೆ? ನಮ್ಮ ಕಲಾ ಕಾರ್ಯಗಳನ್ನು ಯಾಕೆ ದಾಖಲೀಕರಣ ಮಾಡಬೇಕು ಎನ್ನುವ ಸಂದೇಹವೇ? ಇಲ್ಲಿ ದಾಖಲೀಕರಣ ಎಂದರೆ ಸಂಗ್ರಹ. ನಾವು ಮಾಡುವ ಕೆಲಸದ ದಾಖಲೆ ಇರಿಸಿಕೊಳ್ಳುವುದು. ನಾವು ಕೈಗೊಂಡ ಕಾರ್ಯಗಳ ಪ್ರತೀ ಹಂತದ ವಿವರವನ್ನೂ ಇದು ಒಳಗೊಂಡಿರುತ್ತದೆ. ನಾವು ನಮ್ಮ ಕೆಲಸಗಳನ್ನು ದಾಖಲೆ ಮಾಡದೇ ಹೋದರೆ ಅದು ಕೇವಲ ನಮ್ಮ ಸಂಗ್ರಹದಲ್ಲಿ ಮಾತ್ರ ಉಳಿದು ಬಿಡುತ್ತದೆ. ಹೆಚ್ಚಿನ ಕಲಾವಿದರು, ಸೃಜನಶಿಲರು ಮತ್ತು ಕಲಾ ಸಂಸ್ಥೆಗಳಲ್ಲಿ ಅವರ ಕಲಾ ಕಾರ್ಯಗಳಿಗೆ ಸಂಬಂಧಿಸಿದ ನೂರಾರು ಫೈಲುಗಳು ಅವರ ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹಿಸಲ್ಪಟ್ಟಿರುತ್ತವೆ. ಅದರ ದಾಖಲೀಕರಣ ಅಲ್ಲಿಗೇ ಸೀಮಿತವಾಗಿರುತ್ತದೆ. ಅವರ ಕಲಾಪ್ರಕಾರಗಳು, ಅದನ್ನು ಅವರು ವಿನ್ಯಾಸಗೊಳಿಸಿದ ವಿಧಾನ ಎಲ್ಲವೂ ಅಲ್ಲೇ ಉಳಿದು ಬಿಡುತ್ತವೆ. ಆದರೆ ಲೇಖಾ ಈ ಎಲ್ಲ ದಾಖಲೆಗಳನ್ನು ಒಗ್ಗೂಡಿಸಿ ಎಲ್ಲ ದತ್ತಾಂಶಗಳನ್ನು ಕಲಾವಿದರ ವೈಯುಕ್ತಿಕ ನೆಲೆಯಲ್ಲಿಯೇ ಉಳಿಯಲು ಬಿಡದೆ ಒಂದೆಡೆ ಸಂಗ್ರಹಿಸಲು ನೆರವಾಗುತ್ತದೆ. ಇದು ದಾಖಲೀಕರಣದಲ್ಲಿ ನಿಮಗೆ ನೆರವಾಗುವುದಲ್ಲದೆ, ನಿಮ್ಮ ಅನುಮತಿ ಇದ್ದರೆ ಈ ಕಲಾ ಸಂಚಿಯನ್ನು ಇತರ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೂ ಅವರ ತಿಳಿವಿಗೆ ಮುಕ್ತವಾಗಿಸುತ್ತದೆ.
ಕಲಾ ಸಂಚಿ ನೋಡಬೇಕೆ?: ಲೇಖಾ (www.lekha.cc) ಪ್ರಸ್ತುತ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಮಾಹಿತಿ ಮತ್ತು ಪ್ರತಿಕ್ರಿಯೆಗೆ (ekha.archivegmail.com) ಇಮೇಲ್ ಕಳುಹಿಸಬಹುದು.