ಯುವ ನೀತಿ, ಯುವ ಬಜೆಟ್, ಯುವ ಹವಾ: ದಶಕದ ಬಳಿಕ ಹೊಸ ನೀತಿ, ಸರ್ಕಾರಕ್ಕೆ ವರದಿ ಸಲ್ಲಿಕೆ..

Youth
Published on

| ಶ್ರೀಕಾಂತ್ ಶೇಷಾದ್ರಿ

ಯುವಜನ ಚಟುವಟಿಕೆಗಳನ್ನು ಎಲ್ಲ ಆಯಾಮಗಳಲ್ಲಿ ಉತ್ತೇಜಿಸುವ, ಯುವಕರ ವ್ಯಕ್ತಿತ್ವ ವಿಕಸನ, ಜೀವನಮಟ್ಟ ಸುಧಾರಣೆ ಉದ್ದೇಶದಿಂದ ಯುವ ನೀತಿ ಜಾರಿ ಮಾಡುವ ಪರಂಪರೆ ಸರ್ಕಾರದಲ್ಲಿ ನಡೆದುಕೊಂಡು ಬಂದಿದೆ. ಇದೀಗ ಹೊಸ ಯುವ ನೀತಿ ಸಿದ್ಧವಾಗಿದೆ. ಜಿಲ್ಲಾಡಳಿಗಳು, ಯುವಜನ ಸೇವಾ ಇಲಾಖೆ ಜನರ ಅಭಿಪ್ರಾಯ ಸಂಗ್ರಹಿಸಿ ವರದಿಗೆ ಪೂರಕ ಅಂಶ ನೀಡಿದ್ದು, ತಜ್ಞರು ವಿಶ್ಲೇಷಣೆ ನಡೆಸಿ, ಅಗತ್ಯಗಳನ್ನು ಪಟ್ಟಿ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಮುಂದಿನ ಬಜೆಟ್ ವೇಳೆ ಇದರಲ್ಲಿ ಒಂದಷ್ಟು ಯೋಜನೆ ರೂಪದಲ್ಲಿ ಬರಹುದು. ಇನ್ನು ಕೆಲವು ಅಂಶಗಳು ಕಾಲಕಾಲಕ್ಕೆ ನೀತಿ ನಿರೂಪಣೆಯಾಗಿ ಅನುಷ್ಠಾನವಾಗಬಹುದು.

ಅಂದಹಾಗೆ ಡಾ. ಬಾಲಸುಬ್ರಹ್ಮಣ್ಯ ನೇತೃತ್ವದ ಸಮಿತಿ ವರದಿ ಸಿದ್ಧಪಡಿಸಿತ್ತು. ಸಾಕಷ್ಟು ತಾಲೀಮು ನಡೆಸಿ ಭವಿಷ್ಯದ ದೂರದೃಷ್ಟಿಯಲ್ಲಿ ಮುಂದಿನ ಐದು ವರ್ಷದಲ್ಲಿ ಆಗಬೇಕಾದ ಕ್ರಮಗಳನ್ನು ಪಟ್ಟಿಮಾಡಿಕೊಂಡು ಸರ್ಕಾರದ ಮುಂದೆ ಇಟ್ಟಿದೆ. ಈ ಹಿಂದೆ ರೂಪಿತವಾಗಿದ್ದ ನೀತಿಗೆ ಒಂದು ದಶಕವಾಗಿದೆ. ಹೀಗಾಗಿ ಹೊಸ ನೀತಿ ರೂಪುಗೊಳ್ಳಬೇಕು, ಯುವಕರಲ್ಲಿ ಚೈತನ್ಯ ತುಂಬಬೇಕೆಂಬುದು ಯುವ ಜನ ಸೇವಾ ಇಲಾಖೆ ಉದ್ದೇಶವಾಗಿತ್ತು, ಅದರಂತೆ ಸಮಿತಿ ರಚಿಸಿ ವರದಿ ಪಡೆದುಕೊಂಡಿದೆ.

ರಾಜ್ಯದ ಯುವ ಜನರ ಸಮಗ್ರ ಅಭಿವೃದ್ಧಿಯನ್ನು ಸಾಧ್ಯಗೊಳಿಸುವುದು ಹಾಗೂ ರಚನಾತ್ಮಕ ಸಾಮಾಜಿಕ ಬದಲಾವಣೆಗೆ ಅವರನ್ನು ಸಶಕ್ತರನ್ನಾಗಿಸುವುದು ನೀತಿಯ ಪ್ರಮುಖ ಉದ್ದೇಶ. ಈ ನೀತಿ 2030ರ ವರೆಗೆ ಎಂಟು ವರ್ಷ ಕಾಲ ಕಾರ್ಯಾಚರಣೆಯಲ್ಲಿರುತ್ತದೆ. ಈ ನೀತಿ ಯುವ ಜನರನ್ನು ವ್ಯಕ್ತಿಗಳಾಗಿ ಹಾಗೂ ಸಮಾಜದ ಭಾಗವಾಗಿ ನೋಡುತ್ತದೆ.

2012ರಲ್ಲಿ ಈ ಹಿಂದೆ ಯುವ ನೀತಿ ರೂಪಿಸಲಾಗಿತ್ತು. ತಂತ್ರಜ್ಞಾನದಲ್ಲಿ ಆದ ಪ್ರಗತಿ ಹಾಗೂ ಕೋವಿಡ್ ಸಾಂಕ್ರಾಮಿಕದಂತಹ ಮಾನವೀಯ ಬಿಕ್ಕಟ್ಟುಗಳು ಯುವ ಅಭಿವೃದ್ಧಿಯ ದೃಷ್ಟಿಕೋನದ ವಿಚಾರದಲ್ಲಿ ರಾಜ್ಯ ಸರ್ಕಾರ ಮರು ಆಲೋಚಿಸುವ ಅಗತ್ಯ ಸೂಚಿಸುತ್ತದೆ. ಈ ಆಧಾರದಲ್ಲಿ ಕರ್ನಾಟಕ ಯುವ ನೀತಿ 2022ರ ಅಂಶಗಳು ರಾಜ್ಯದ ಯುವ ಜನರನ್ನು ಬೆಂಬಲಿಸಲು, ಸಮಗ್ರ ಅಭಿವೃದ್ಧಿ ಸಾಧ್ಯಗೊಳಿಸುವುದು, ರಚನಾತ್ಮಕ ಸಾಮಾಜಿಕ ಬದಲಾವಣೆಗೆ ಅವರನ್ನು ಸಶಕ್ತರನ್ನಾಗಿಸುವ ಉದ್ದೇಶ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ. ಸಾಮಾಜಿಕ, ಆರ್ಥಿಕ ಹಾಗೂ ಪರಿಸರ ವಾಸ್ತವಗಳು ಈ ನೀತಿಯ ಅನುಷ್ಠಾನಕ್ಕೆ ಮಾರ್ಗದರ್ಶಿ ಆಗಿರುತ್ತವೆ. ಇನ್ನು ವ್ಯಕ್ತಿಗಳಾಗಿ ಹಾಗೂ ಸಮಾಜದ ಭಾಗವಾಗಿ ಗಮನ ನೀಡುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.

ಗಮನ ಕೇಂದ್ರೀಕೃತ ಕ್ಷೇತ್ರಗಳು

ಶಿಕ್ಷಣ ಹಾಗೂ ತರಬೇತಿಯ ಗುಣಮಟ್ಟ ಸುಧಾರಣೆ ವಿಷಯದಲ್ಲಿ ದಾಖಲಾತಿ ಹಾಗೂ ಸಾಧನೆಯ ಮಟ್ಟಗಳನ್ನು ಹೆಚ್ಚಿಸುವುದು, ಶಾಲೆಯಿಂದ ಹೊರಗುಳಿದವರ ಕಡೆ ಗಮನ ನೀಡುವುದು, ತಡೆಗಟ್ಟುವುದು, ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ಇಲ್ಲದಿರುವಂತಹ ಯುವ ಜನರನ್ನು ಬೆಂಬಲಿಸುವುದು. ಉದ್ಯೋಗ ಹಾಗೂ ಉದ್ಯಮಶೀಲತೆ ವಿಚಾರಕ್ಕೆ ಬಂದರೆ, ಔದ್ಯೋಗಿಕ ಕೌಶಲಗಳಲ್ಲಿರುವ ಕೊರತೆ ನಿವಾರಿಸುವುದು. ವೃತ್ತಿಗೆ ಸಂಬಂಧಿಸಿದ ಆಪ್ತ ಸಮಾಲೋಚನಾ ಸೇವೆಗಳನ್ನು ಸುಧಾರಿಸುವುದು. ಮಾರ್ಗದರ್ಶನಕ್ಕಾಗಿ ಸೂಕ್ತ ಮಾರ್ಗ ರಚಿಸುವುದು ಹಾಗೂ ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆ ಬೆಂಬಲಿಸುವುದು. ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಮಾನಸಿಕ ಆರೋಗ್ಯಗಳ ದೊರೆಯುವಿಕೆ ಸುಧಾರಿಸುವುದು, ಪೌಷ್ಟಿಕತೆ ಕೊರತೆ ನೀಗಿಸುವುದು, ಡಿಜಿಟಲ್ ಚಟಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮದ್ಯಪಾನ, ತಂಬಾಕು ಸೇವನೆ ಹಾಗೂ ಮಾದಕ ವಸ್ತು ಬಳಕೆ ಕಡಿಮೆಗೊಳಿಸುವುದು ಪ್ರಮುಖ ಸಂಗತಿ ಇವೆ. ಕ್ರೀಡೆಗಳು ಹಾಗೂ ಫಿಟ್​ನೆಸ್ ವಿಚಾರದಲ್ಲಿ ರಾಜ್ಯ ನಿರ್ದಿಷ್ಟ ಕ್ರೀಡಾ ಕಾರ್ಯಕ್ರಮ ರಚನೆ, ಪ್ರತಿಭಾ ಅನ್ವೇಷಣಾ ಆಯೋಜನೆ ಜಾರಿ ಮಾಡುವುದು, ಕ್ರೀಡೆಗಳಲ್ಲಿ ವೈವಿಧ್ಯತೆ ಹೆಚ್ಚಿಸುವುದು, ದೇಸಿ ಆಟಗಳಿಗೆ ಪ್ರೋತ್ಸಾಹ ನೀಡುವುದು, ಸಾಂಸ್ಕೃತಿಕ ವಿಶ್ವಕೋಶ ಸೃಷ್ಟಿ ಮಾಡುವುದು ಮತ್ತು ಕಲೆ ಹಾಗೂ ಸಾಂಸ್ಕೃತಿಕ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಲು ಮತ್ತು ಯುವ ಮೇಳ ಆಯೋಜನೆಗೆ ಶಿಫಾರಸು ಮಾಡಲಾಗಿದೆ. ಮೌಲ್ಯಾಧಾರಿತ ನಾಯಕತ್ವ ಅಭಿವೃದ್ಧಿ ಇಂದಿನ ಅಗತ್ಯಗಳಲ್ಲೊಂದು. ಅದಕ್ಕೆ ಕೂಡ ಗಮನ ನೀಡಲಾಗಿದ್ದು, ನಾಗರಿಕ ಹಾಗೂ ರಾಜಕೀಯ ಭಾಗವಹಿಸುವಿಕೆ ಹೆಚ್ಚಿಸುವುದು, ಸ್ವಯಂಸೇವಾ ವ್ಯವಸ್ಥೆ ರಚನೆ, ನಾಯಕತ್ವ ಸಾಮರ್ಥ್ಯ ಅಭಿವೃದ್ಧಿ ಹಾಗೂ ಫೆಲೋಷಿಪ್ ಕಾರ್ಯಕ್ರಮಗಳ ಸ್ಥಾಪನೆ ಮಾಡಲು ಶಿಫಾರಸು ಮಾಡಲಾಗಿದೆ.

ಅನುಷ್ಠಾನ ಹೇಗೆ?

ಯುವ ನೀತಿ ಘೋಷಣೆ ಮಾಡಿದರೆ ಸಾಲದು, ಅದರ ಅನುಷ್ಠಾನದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡೆಗಳ ಪುನರ್​ರಚನೆ ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ. ಅಂದರೆ, ಯುವ ಸಬಲೀಕರಣ ಮತ್ತು ಕ್ರೀಡೆಗಳಿಗೆೆ ಎರಡು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಯುವಜನರಿಗೆ ಸಂಬಂಧಪಟ್ಟ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೇಲ್ವಿಚಾರಣೆಗಾಗಿ ಯುವ ಸಬಲೀಕರಣ ನಿರ್ದೇಶನಾಲಯವನ್ನು ಕೇಂದ್ರೀಯ ಸಂಚಾಲನ ಪ್ರಾಧಿಕಾರವನ್ನಾಗಿಸಬೇಕೆಂದು ಹೇಳಲಾಗಿದೆ. ಮಹಿಳಾ ಆಯವ್ಯಯ, ಕೃಷಿ ಆಯವ್ಯಯ, ಮಕ್ಕಳ ಆಯವ್ಯಯ ಹೀಗೆ ವಿಭಿನ್ನ ಕ್ಷೇತ್ರವನ್ನು ಬಜೆಟ್​ನಲ್ಲಿ ಘೋಷಿಸುವಂತೆ ಯುವ ಆಯವ್ಯಯದ ಪ್ರಸ್ತಾಪ ಮಾಡಲಾಗಿದೆ. ಯುವ ಜನರ ಅಭಿವೃದ್ಧಿಗಾಗಿ ಮಾಡುವ ಸಾರ್ವಜನಿಕ ವೆಚ್ಚವನ್ನು ಮುಖ್ಯವಾಹಿನಿಗೊಳಿಸುವುದು, ವೆಚ್ಚಗಳಲ್ಲಿ ಆಗುತ್ತಿರುವ ಲೋಪಗಳನ್ನು ಗುರುತಿಸುವುದು, ಇಲಾಖೆಗಳ ನಡುವಿನ ಸಂಯೋಜನೆಯನ್ನು ಔಪಚಾರಿಕಗೊಳಿಸುವುದು ಸಹ ಪ್ರಸ್ತಾಪದಲ್ಲಿರುವ ಪ್ರಮುಖ ಅಂಶಗಳು. ಯುವ ಸಬಲೀಕರಣಕ್ಕಾಗಿ ಕಾರ್ಯತಾಂತ್ರಿಕ ಮಾರ್ಗಸೂಚನೆಗಳನ್ನು ಒದಗಿಸಲು ಯುವ ಸಲಹಾ ಗುಂಪು ರಚನೆ ಪ್ರಸ್ತಾಪಿಸಲಾಗಿದೆ. ಇನ್ನು ಮೂರು ‘ಸಿ’ಗಳ ದೃಷ್ಟಿಕೋನದಡಿ ಸಮನ್ವಯತೆ, ಸಹಕಾರಗಳ ಮತ್ತು ಸಹಯೋಗಗಳನ್ನು ಬೆಳೆಸುವುದು, ಸಹಭಾಗಿತ್ವವನ್ನು ಖಾತ್ರಿಪಡಿಸಲು ಸಂಯೋಜನೆ, ಯುವ ಸಬಲೀಕರಣಕ್ಕಾಗಿ ರಾಜ್ಯಮಟ್ಟದ ಸಹಭಾಗಿತ್ವ ಸಮಿತಿ ಸ್ಥಾಪನೆಯನ್ನು ಪ್ರಸ್ತಾಪ ಮಾಡಲಾಗಿದೆ. ಪ್ರಮುಖ ಸಂಗತಿ ಎಂದರೆ ವರದಿಯ ಬಗ್ಗೆ ವಿಶೇಷ ಗಮನ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ಆಯವ್ಯಯದಲ್ಲಿ ಯುವ ಬಜೆಟ್ ರೂಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಯುವ ಜನರ ಅಭಿವೃದ್ಧಿ ದತ್ತಾಂಶ ಸಂಗ್ರಹ

ರಾಜ್ಯದಲ್ಲಿ ಯುವ ಜನರ ಅಭಿವೃದ್ಧಿ ಕುರಿತು ದತ್ತಾಂಶ ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಸಿದ್ಧಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಮೂಲಕ ಸೂಚ್ಯಂಕ ಬಳಸಿಕೊಂಡು ಯುವ ಗಮನಕೇಂದ್ರೀಕೃತ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಉಸ್ತುವಾರಿ ಹಾಗೂ ಮೌಲ್ಯಮಾಪನ ಮಾಡುವ ಪ್ರಸ್ತಾಪ ಮಾಡಲಾಗಿದೆ. ಅಲ್ಲದೇ ಭವಿಷ್ಯದ ಕಾರ್ಯಕ್ರಮಗಳು ನೀತಿಗಳಿಗೆ ಸಾಕ್ಷಾಧಾರ ರಚನೆಯ ಉದ್ದೇಶ ಹೊಂದಲಾಗಿದೆ. ಪ್ರತಿ ತ್ರೖೆಮಾಸಿಕ ಅವಧಿಯಲ್ಲಿ ನಿರ್ದೇಶನಾಲಯ ಮಟ್ಟದಲ್ಲಿ ಕಾರ್ಯಾಚರಣೆ ಪುನರ್ ಮನನ ನಡೆಸುವುದು, ಪ್ರತಿ ಅರ್ಧವಾರ್ಷಿಕ ಅವಧಿಯಲ್ಲಿ ಇಲಾಖಾ ಮಟ್ಟದಲ್ಲಿ ಸಾಧನೋಪಾಯದ ಕುರಿತು ಪುನರ್ ಮನನ ಮತ್ತು ವರ್ಷಕ್ಕೊಮ್ಮೆ ಮುಖ್ಯಮಂತ್ರಿ ಅವರಿಂದ ಕಾರ್ಯತಂತ್ರದ ಪ್ರಗತಿಪರಿಶೀಲನೆ ನಡೆಸುವ ಮೂಲಕ ವಿಶೇಷ ಗಮನ ಕೊಡಬೇಕೆಂಬ ಉದ್ದೇಶವಿದೆ.

ಸಚಿವರು ಹೇಳೋದೇನು?

ಡಾ.ಬಾಲಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ಯುವಜನರಿಗಾಗಿ ಶಿಕ್ಷಣ ಮತ್ತು ತರಬೇತಿ, ಉದ್ಯೋಗ ಮತ್ತು ಉದ್ಯಮಶೀಲತೆ, ಆರೋಗ್ಯ, ಕ್ರೀಡೆ, ಯುವ ಆಯವ್ಯಯ, ಯುವ ಸಬಲೀಕರಣ ಇಲಾಖೆಯ ಪುನರಾಚನೆ ಹಾಗೂ ಯುವ ಕಾರ್ಯಕ್ರಮಗಳ ಕುರಿತು ಹಲವು ಶಿಫಾರಸುಗಳನ್ನು ಮಾಡಿದೆ. ರಾಜ್ಯದ ಜನಸಂಖ್ಯೆಯ ಶೇ.30ರಷ್ಟಿರುವ ಯುವ ಸಮೂಹವನ್ನು ಸಮಗ್ರವಾಗಿ ಹಾಗೂ ಸಂಸ್ಕಾರಯುತವಾಗಿ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಯುವ ಜನತೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಸಮಿತಿ ನೀಡಿರುವ ವರದಿ ಕ್ಯಾಬಿನೆಟ್​ನಲ್ಲಿ ಅನುಮೋದನೆ ಪಡೆದು ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net