ಹೃದಯ ಹುಷಾರು!; ಯುವಜನರಲ್ಲೂ ಹೆಚ್ಚುತ್ತಿರುವ ಹೃದಯಾಘಾತ..

Heart
Published on

| ಪಂಕಜ ಕೆ.ಎಂ. ಬೆಂಗಳೂರು

‘ಮುಷ್ಟಿಗಾತ್ರದ ಹೃದಯಕ್ಕೆ ಬೆಟ್ಟದಷ್ಟು ಕೆಲಸ’.. ಆರೋಗ್ಯವಂತ ಹೃದಯ ಪ್ರತಿ ನಿಮಿಷಕ್ಕೆ 75-85 ಬಡಿತ ಹೊಂದಿರುತ್ತದೆ. ಅಂದರೆ ಪ್ರತಿ ನಿತ್ಯ ಒಂದು ಲಕ್ಷ ಬಾರಿ ಮಿಡಿಯುತ್ತದೆ. ಇದು ಸದಾ ಹೀಗೆ ಇರಬೇಕೆಂದರೆ ಚಟುವಟಿಕೆಯುಕ್ತ ಜೀವನಶೈಲಿ ಹಾಗೂ ಉತ್ತಮ ಆಹಾರ ಕ್ರಮಗಳನ್ನು ಅನುಸರಿಸಿರಬೇಕು ಎನ್ನುತ್ತಾರೆ ಹೃದ್ರೋಗ ತಜ್ಞರು. ಇಂದು ಹೃದ್ರೋಗಿಗಳಲ್ಲಿ ಶೇ. 25 ಯುವಜನರಾಗಿದ್ದಾರೆ (30 ವರ್ಷದೊಳಗಿನ). ಮದುವೆ ವಯಸ್ಸಿನ ಯುವಜನರಲಿ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಿಂದೆಲ್ಲ ಮಕ್ಕಳು ಪೋಷಕರನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಈಗ ಪೋಷಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಹೃದ್ರೋಗಕ್ಕೆ ವ್ಯಕ್ತಿ ದಪ್ಪಗಿದ್ದರೆ, ಸಣ್ಣಗಿದ್ದರೆ ಎಂಬ ಪ್ರಶ್ನೆ ಬರುವುದಿಲ್ಲ. ಬದಲಿಗೆ ಅವರ ಜೀವನ ನಿರ್ವಹಣೆ ಕಾರಣವಾಗಿರುತ್ತದೆ. ಆಧುನಿಕ ಜೀವನಶೈಲಿಯಲ್ಲಿ ಆಹಾರದ ಕ್ರಮದ ಜತೆಗೆ ಮನುಷ್ಯನ ದೈನಂದಿನ ಚಟುವಟಿಕೆಗಳು ಬದಲಾಗುತ್ತಿವೆ. ಇದರಿಂದ ಮನುಷ್ಯನ ಮನಸ್ಥಿತಿ ದುರ್ಬಲಗೊಳ್ಳುತ್ತಿದ್ದು, ಕೆಲವರು ದುಶ್ಚಟಗಳ ದಾಸರಾದರೆ, ಹಲವರು ಒತ್ತಡದ ಜೀವನ ಹಾಗೂ ಆಲಸ್ಯದಿಂದ ಕೂಡಿರುತ್ತಾರೆ. ಪರಿಣಾಮ ಹೃದಯ ಸಮಸ್ಯೆಗೆ ದಾರಿಯಾಗಿದೆ.

ಯುವಜನರು ನಾನಾ ಕಾರಣಗಳಿಂದ ತಂಬಾಕು, ಮದ್ಯಪಾನ ಹಾಗೂ ಮಾದಕ ವ್ಯಸನಗಳಿಗೆ ಈಡಾಗುತ್ತಿದ್ದಾರೆ. ಇದು ಹೃದಯ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಸಾಮಾನ್ಯವಾಗಿ ಒಳ್ಳೆಯ ಅಭ್ಯಾಸ ಹೊಂದಿದವರಿಗೆ ಎಚ್ಚರಿಕೆ ನೀಡಿ ಹೃದಯಾಘಾತ ಸಂಭವಿಸಿದರೆ, ದುಶ್ಚಟಗಳಿಗೆ ಬಲಿಯಾದವರಿಗೆ ಯಾವುದೇ ಸೂಚನೆ ಇಲ್ಲದೆ ಹೃದಯಾಘಾತ ಕಾಣಿಸಿಕೊಳ್ಳುತ್ತದೆ. ತಂಬಾಕು ಬಳಕೆದಾರರಲ್ಲಿ ಶೇ. 50 ಮಂದಿ ಖಿನ್ನತೆ, ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ವಾಯುಮಾಲಿನ್ಯವೂ ಯುವಕರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಹಾಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ರಕ್ಷಣೆ ಹೊಂದಬೇಕು.

ಹೃದ್ರೋಗದ ಲಕ್ಷಣಗಳು

ನಡೆಯುವಾಗ, ಓಡಾಡುವಾಗ, ಮೆಟ್ಟಿಲು ಏರುವಾಗ ಎದೆ ಉರಿ, ಎದೆ ನೋವು ಬರುವುದು. ಎದೆಯ ಎಡ ಭಾಗದಲ್ಲಿ ಅಥವಾ ಮಧ್ಯಭಾಗದಲ್ಲಿ ನೋವು. ಮೈ ಬೆವರು, ಉಸಿರಾಟದ ತೊಂದರೆ. ಕೆಲವರಿಗೆ ಹೃದಯಾಘಾತವಾದಾಗ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿ ಆಗಬಹುದು. ಕೆಲವರಿಗೆ ಹೃದಯಾಘಾತ ಆದಾಗ ಗಂಟಲಲ್ಲಿ ನೋವು, ದವಡೆಯಲ್ಲಿ ನೋವು, ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ತೋರಿಸಬೇಕು ಎನ್ನುತ್ತಾರೆ ಎಂ.ಎಸ್.ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್ ನ ಹೃದ್ರೋಗ ತಜ್ಞ, ಡಾ. ಯು. ಎಂ. ನಾಗಮಲೇಶ್.

ಆರೋಗ್ಯವಂತ ಹೃದಯಕ್ಕಾಗಿ...

  • ನಮ್ಮ ಹೃದಯ ಆರೋಗ್ಯ ನಮ್ಮ ನಾಲಿಗೆ, ನಮ್ಮ ಆಹಾರ ಹಾಗೂ ನಮ್ಮ ಕೈಯಲ್ಲಿದೆ.
  • ರಕ್ತದ ಒತ್ತಡ, ರಕ್ತದಲ್ಲಿ ಸಕ್ಕರೆ ಅಂಶ, ರಕ್ತದಲ್ಲಿ ಕೊಬ್ಬು, ಸೊಂಟದ ಸುತ್ತಳತೆ, ಶರೀರದ ತೂಕ ಹಾಗೂ ಅತಿ ಆಸೆ ಕಡಿಮೆ ಇರಬೇಕು.
  • ಪ್ರತಿ ವರ್ಷ ಹೆಲ್ತ್ ಆನಿವರ್ಸರಿ ಆಚರಿಸಿಕೊಳ್ಳಬೇಕು (35 ವರ್ಷ ಮೇಲ್ಪಟ್ಟ ಪುರುಷರು - 40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು).
  • ನಿತ್ಯ 40-50 ನಿಮಿಷ ನಡೆದರೆ ಆಯುಷ್ಯ 8-10 ವರ್ಷ ಹೆಚ್ಚಲಿದೆ.
  • ಆರೋಗ್ಯವಂತ ಹೃದಯಕ್ಕೆ ತಾಳ್ಮೆ, ನಂಬಿಕೆ, ನಗು ಅಗತ್ಯ.
  • ಆಯಾ ಪ್ರದೇಶಕ್ಕೆ ಅನುಗುಣವಾಗಿ ಪಾರಂಪರಿಕ ಆಹಾರ ಕ್ರಮ ಅನುಸರಿಸುವುದು ಒಳ್ಳೆಯದು.

ಹೃದಯ ಸಮಸ್ಯೆಗೆ ಕಾರಣಗಳು

  • ನಗರೀಕರಣ, ಕೈಗಾರಿಕೀಕರಣ ಹಾಗೂ ಸೋಮಾರಿತನದಿಂದ ಹೃದ್ರೋಗ ಹೆಚ್ಚಳ
  • ಫಾಸ್ಟ್ ಫುಡ್ ಶೇ. 15 ಜನರಲ್ಲಿ ಫಾಸ್ಟ್ ಡೆತ್​ಗೆ ಕಾರಣವಾಗಿದೆ.
  • ಒಂದೇ ಜಾಗದಲ್ಲಿ 3-4 ಗಂಟೆ ಕುಳಿತರೆ 5 ಸಿಗರೇಟು ಸೇದಿದಷ್ಟು ದುಷ್ಪರಿಣಾಮ ಬಾಧಿಸಲಿದೆ.
  • ಅತಿಯಾದ ಸಿಟ್ಟು, ಸಂಘರ್ಷದಿಂದಲೂ ಹೆಚ್ಚಿನ ಸಮಸ್ಯೆ ಆಗಲಿದೆ.
  • ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಹಾಗೂ ವಾಯುಮಾಲಿನ್ಯ ಹೃದ್ರೋಗಕ್ಕೆ ಪ್ರಮುಖ ಕಾರಣಗಳು.
  • ಹೃದಯ ಸಮಸ್ಯೆಯಲ್ಲಿ ಶೇ. 12 ಅನುವಂಶಿಕೆ.
  • ಸೋಮಾರಿತನದಿಂದ ಹೃದಯ ಸಮಸ್ಯೆ ಹೆಚ್ಚುತ್ತಿದ್ದು, ಐಸಿಎಂಆರ್ ಅಧ್ಯಯನದಿಂದ ಭಾರತದಲ್ಲಿ ಶೇ. 51 ಮಂದಿ ಸೋಮಾರಿಗಳಾಗಿದ್ದಾರೆ ಎಂಬ ಅಂಶ ತಿಳಿದು ಬಂದಿದೆ. ಇದರಲ್ಲಿ ಹೆಚ್ಚು ಕಾಲ ಒಂದೇ ಕಡೆ ಕೂತು ಟಿವಿ ನೋಡುವುದೂ ಸೇರಿದೆ.

ದೊಡ್ಡ ಆಸ್ಪತ್ರೆಗೇ ಧಾವಿಸಬೇಕಂತಿಲ್ಲ, ಹತ್ತಿರದಲ್ಲೇ ಇದೇ ಕ್ಯಾಡ್

ಹೃದ್ರೋಗಕ್ಕೆ ಗೋಲ್ಡನ್ ಅವರ್​ನ ಚಿಕಿತ್ಸೆ ಅನಿವಾರ್ಯ. ಹಾಗೆಂದು ಹೃದಯ ಸಮಸ್ಯೆ ಎದುರಾದರೆ ಚಿಕಿತ್ಸೆ ಬಗ್ಗೆ ಚಿಂತಿಸಬೇಕಿಲ್ಲ. ಇಂತಹ ಸಂದರ್ಭದಲ್ಲಿ ದೊಡ್ಡ ಆಸ್ಪತ್ರೆಗಳನ್ನು ಹುಡುಕುತ್ತ ಸಮಯ ವ್ಯರ್ಥ ಮಾಡುವ ಬದಲು, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಇಲ್ಲವೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಧಾವಿಸಿ ತುರ್ತು ಚಿಕಿತ್ಸೆ ಪಡೆಯಬಹುದು. ಹೆಚ್ಚುತ್ತಿರುವ ಹೃದ್ರೋಗ ಸಮಸ್ಯೆ ನಿಯಂತ್ರಿಸಲು ವೈದ್ಯಕೀಯ ಸೌಲಭ್ಯಗಳು ಇಲ್ಲದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಒದಗಿಸಲು ಮಂಗಳೂರಿನ ಹೆಸರಾಂತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್. ‘ಕಾರ್ಡಿಯಾಲಜಿ ಅಟ್ ಡೋರ್​ಸ್ಟೆಪ್’ (ಸಿಎಡಿ) ಫೌಂಡೇಷನ್ ಸ್ಥಾಪಿಸಿದ್ದು, ಅದರ ಮೂಲಕ ಹೃದ್ರೋಗಿಗಳಿಗೆ ಆನ್​ಲೈನ್ ಮೂಲಕ ತುರ್ತು ಚಿಕಿತ್ಸೆ ಒದಗಿಸುತ್ತಿದ್ದಾರೆ. ಹೃದಯ ಸಮಸ್ಯೆಯಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ರೋಗಿಗಳು ಸಾಯುವುದನ್ನು ತಪ್ಪಿಸಲು ಇವರು ಹಳ್ಳಿಗಳಿಗೆ ಹೃದ್ರೋಗ ತಪಾಸಣೆ ನಡೆಸಲು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ತಾಲೂಕು ಆಸ್ಪತ್ರೆಗಳಿಗೆ ಹಾಗೂ ಆರೋಗ್ಯ ಕ್ಷೇಮ ಕೇಂದ್ರಗಳು ಸೇರಿ ರಾಜ್ಯಾದ್ಯಂತ 700 ಇಸಿಜಿ ಯಂತ್ರವನ್ನು ಉಚಿತವಾಗಿ ವಿತರಿಸಿದ್ದಾರೆ. ಜತೆಗೆ ಹೃದ್ರೋಗಿಗಳ ಚಿಕಿತ್ಸೆಗಾಗಿ ಪ್ರಾಥಮಿಕ ಚಿಕಿತ್ಸಾ ಉಪಕರಣಗಳ ಕಿಟ್ ಸಹ ಒದಗಿಸಿದ್ದಾರೆ. ಈ ವೈದ್ಯಕೀಯ ಉಪಕರಣಗಳ ಸಮರ್ಪಕ ಬಳಕೆ ಕುರಿತು ಅನ್ವೇಷಣಾ ಹೆಸರಿನಲ್ಲಿ ಕಾರ್ಯಾಗಾರ ಆಯೋಜಿಸಿ ವೈದ್ಯರು ಹಾಗೂ ಸಿಬ್ಬಂದಿಗೆ ತರಬೇತಿ ಸಹ ನೀಡುತ್ತಿದ್ದಾರೆ.

ಹೃದಯ ಚಿಕಿತ್ಸೆಯಲ್ಲಿ ಎಲ್ಲ ಪ್ರದೇಶಗಳಿಗೂ ತಲುಪಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ. ಇದೀಗ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಈ ಸೇವೆ ಒದಗಿಸಲಾಗುತ್ತಿದೆ. ಈವರೆಗೂ ರಾಜ್ಯಾದ್ಯಂತ 700 ಇಸಿಜಿ ಯಂತ್ರ ವಿತರಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೂ ಸೇವೆ ತಲುಪಿಸಲಾಗುವುದು. | ಡಾ. ಪದ್ಮನಾಭ ಕಾಮತ್ ಹೃದ್ರೋಗ ತಜ್ಞ, ಸ್ಥಾಪಕರು ‘ಕಾರ್ಡಿಯಾಲಜಿ ಅಟ್ ಡೋರ್​ಸ್ಟೆಪ್’ (ಸಿಎಡಿ) ಫೌಂಡೇಷನ್

ವಾಟ್ಸ್ಆ್ಯಪ್​ ಗ್ರೂಪ್ ಮೂಲಕ ಸ್ಪಂದನೆ

ಹೃದ್ರೋಗ ಚಿಕಿತ್ಸೆಗಾಗಿ ಡಾ. ಪದ್ಮನಾಭ ಕಾಮತ್ ಅವರು ಎಂಟು ವಾಟ್ಸ್​ಆ್ಯಪ್​ ಗ್ರೂಪ್​ಗಳನ್ನು ರಚಿಸಿದ್ದಾರೆ. ಇದರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ನುರಿತ ವೈದ್ಯರಿದ್ದಾರೆ. ಇವರು ತಮ್ಮಲ್ಲಿ ಹೃದಯ ಸಮಸ್ಯೆಯಿಂದ ಬರುವ ರೋಗಿಗಳ ತಪಾಸಣೆ ನಡೆಸಿ ಇಸಿಜಿ ಮಾಡಿ ಆ ವರದಿಯನ್ನು ಕೂಡಲೇ ಈ ವಾಟ್ಸ್​ಆ್ಯಪ್​ ಗ್ರೂಪ್​ಗೆ ಅಪ್​ಲೋಡ್ ಮಾಡಿದರೆ, ಹೃದ್ರೋಗ ತಜ್ಞರ ತಂಡ ಕೂಡಲೇ ವರದಿ ಪರಿಶೀಲಿಸಿ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡುತ್ತಾರೆ. ಇದರಿಂದ ಈವರೆಗೂ ನೂರಾರು ಹೃದ್ರೋಗಿಗಳ ಜೀವ ಉಳಿಸಿದ್ದಾರೆ. ರಾಜ್ಯವ್ಯಾಪಿ ಇರುವ ಈ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ಡಾ. ಕಾಮತ್ ಸಿದ್ಧತೆ ನಡೆಸಿದ್ದಾರೆ. ಮುಂದಿನ ಒಂದೂವರೆ ತಿಂಗಳಲ್ಲಿ ಜಾರ್ಖಂಡ್, ಹಿಮಾಚಲಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳಿಗೆ ಈ ಸೇವೆ ವಿಸ್ತರಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಈ ರೀತಿ ರೋಗಿಗಳ ಜೀವರಕ್ಷಣೆ ಮಾಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಪದ್ಮನಾಭ ಕಾಮತ್ ಅವರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net