

| ಕೆ.ಎಂ. ಪಂಕಜ ಬೆಂಗಳೂರು
ಮನುಷ್ಯನ ಆರೋಗ್ಯದ ಬಗ್ಗೆ ಹೇಳುವುದಾದರೆ ಅದು ಮೂರು ಪ್ರಕೃತಿಗಳ ಮೇಲೆ ಅವಲಂಬಿತ. ಮಕ್ಕಳು, ಯುವಜನರು ಹಾಗೂ ವೃದ್ಧರೂ ಸೇರಿ ಯಾರೇ ಅನಾರೋಗ್ಯ ಸಮಸ್ಯೆಗೆ ಒಳಗಾದರೂ ತ್ರಿದೋಷಗಳಾದ ವಾತ, ಪಿತ್ತ, ಕಫವೇ ಪ್ರಮುಖ ಕಾರಣವಾಗಿರುತ್ತದೆ. ಹಾಗೆಂದು ಇವನ್ನು ದೋಷಗಳು ಎನ್ನುವುದಕ್ಕಿಂತ ಈ ಮೂರೂ ಸಮತೋಲನದಲ್ಲಿದ್ದಾಗ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳುವುದು ಸರಿ. ಇದಕ್ಕಾಗಿ ಮನುಷ್ಯ ತನ್ನ ದೇಹಪ್ರಕೃತಿ ಹಾಗೂ ಪರಿಸರ ಪ್ರಕೃತಿಗೆ ತಕ್ಕಂತೆ ಜೀವನಶೈಲಿ ಹಾಗೂ ಆಹಾರಕ್ರಮ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಆಯುರ್ವೆದ ತಜ್ಞರು. ಕೋವಿಡ್ ನಂತರದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುವುದರ ಜೊತೆಗೆ ಆತಂಕವೂ ಹೆಚ್ಚಾಗಿದೆ. ಕಾರಣ ಸಾಂಕ್ರಾಮಿಕ ರೋಗಗಳ ಪ್ರಕರಣಗಳ ಸಂಖ್ಯೆ ಏರುತ್ತಿರುವುದು. ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ವಾತ, ಪಿತ್ತ ಹಾಗೂ ಕಫದಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗಳು ಸರ್ವೆಸಾಮಾನ್ಯವಾಗಿವೆ. ಇಉ ಸಾಮಾನ್ಯವಾಗಿ 5-7 ದಿನಗಳ ಕಾಲ ಬಾಧಿಸಲಿವೆ. ಕೆಲವರನ್ನು ದೀರ್ಘಕಾಲ ಕಾಡಲೂಬಹುದು. ಹಾಗಾಗಿ ಜನರು ಮಾತ್ರೆ ಹಾಗೂ ಸಿರಪ್ ಮೊರೆ ಹೋಗುತ್ತಾರೆ. ಇದು ತಾತ್ಕಾಲಿಕ ಪರಿಹಾರ ಮಾತ್ರವಲ್ಲ, ಅಡ್ಡಪರಿಣಾಮಗಳೂ ಉಂಟಾಗಬಹುದು. ಆದರೆ ಜೀವನ ನಿರ್ವಹಣೆ ಹಾಗೂ ಆಹಾರಕ್ರಮದಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ಹೊಂದಬಹುದು. ವಾತ, ಪಿತ್ತ ಹಾಗೂ ಕಫದ ಸಮಸ್ಯೆಗೆ ಆತಂಕ ಪಡುವ ಬದಲಿಗೆ ಮುನ್ನೆಚ್ಚರಿಕೆ ವಹಿಸಿದರೆ ಸಾಕು. ರೋಗ ಬಂದಾಗ ಮದ್ದು ಮಾಡಿ ಕುಡಿಯುವುದು ಒಂದಾದರೆ, ರೋಗ ಬಾರದಂತೆ ಅಥವಾ ಬರುವ ರೋಗಗಳನ್ನು ತಡೆಯುವ ರೀತಿಯಲ್ಲಿ ದೇಹವನ್ನು ಸದೃಢಗೊಳಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಯಾವುದೇ ರೋಗ ಏನೂ ಮಾಡಲು ಸಾಧ್ಯವಾಗದು ಎಂಬುದು ನೆನಪಿರಲಿ.
ಮನುಷ್ಯನ ಅನಾರೋಗ್ಯ ಸಮಸ್ಯೆಗಳಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಶ್ವಾಸಕೋಶದ ಸಮಸ್ಯೆ, ವಾತಾವರಣದಲ್ಲಿ ಏರುಪೇರು, ಕಲುಷಿತ ಆಹಾರ ಮತ್ತು ನೀರು ಸೇವನೆ ಈ ಬಗ್ಗೆ ಎಚ್ಚರವಹಿಸಬೇಕು. ಆರೋಗ್ಯಕರ ಆಹಾರ ಸೇವನೆ ಹಾಗೂ ಜೀವನ ನಿರ್ವಹಣೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲಿದ್ದು, ವಾತ, ಪಿತ್ತ ಹಾಗೂ ಕಫ ಸೇರಿ ಎದುರಾಗುವ ಅನಾರೋಗ್ಯ ಸಮಸ್ಯೆಗಳನ್ನು ತಡೆಯಬಹುದು. | ಡಾ. ಗಿರಿಧರ್ ಕಜೆ ಆಯುರ್ವೇದ ತಜ್ಞ
ವಾತ, ಪಿತ್ತ ಹಾಗೂ ಕಫ ಇವು ಮನುಷ್ಯನ ದೇಹವನ್ನು ನಿಯಂತ್ರಿಸುವ ಮೂರು ಪ್ರಮುಖ ಶಕ್ತಿಗಳು. ಈ ಮೂರರಲ್ಲಿ ಯಾವುದೇ ಒಂದರಲ್ಲಿ ವ್ಯತ್ಯಾಸವಾದರೂ ಅದು ದೋಷವೆಂದೇ ಪರಿಗಣಿಸಲ್ಪಡುತ್ತದೆ. ಇವನ್ನು ವಯಸ್ಸು, ದೇಹ ಪ್ರಕೃತಿ ಹಾಗೂ ವಾತಾವರಣ ಹೀಗೆ ಮೂರು ರೀತಿಯಲ್ಲಿ ಹೇಳಬಹುದು. ಮಕ್ಕಳಲ್ಲಿ ಕಫ ಹೆಚ್ಚು, ವಯಸ್ಕರಲ್ಲಿ ಪಿತ್ತ ಹೆಚ್ಚು, ಹಾಗೆಯೇ ವೃದ್ಧರಲ್ಲಿ ವಾತದ ಸಮಸ್ಯೆ ಹೆಚ್ಚು. ದೇಹಪ್ರಕೃತಿ ಎಂದು ಹೇಳುವುದಾದರೆ ಪ್ರತಿ ವ್ಯಕ್ತಿಯ ದೇಹವೂ ಒಂದೊಂದು ಪ್ರಕೃತಿಯಿಂದ ಕೂಡಿರುತ್ತದೆ. ಅಂದರೆ ಕಫದಿಂದ ಕೂಡಿದ ವ್ಯಕ್ತಿಸ್ಥೂಲಕಾಯನಾಗಿದ್ದು, ದೇಹ ತಂಪಾಗಿರುತ್ತದೆ. ಪಿತ್ತದಿಂದ ಕೂಡಿರುವ ವ್ಯಕ್ತಿ ತೆಳ್ಳಗೆ ಸಣ್ಣಗಿದ್ದು, ಉಷ್ಣದೇಹ ಹೊಂದಿರುತ್ತಾನೆ. ವಾತ ಹೊಂದಿರುವ ವ್ಯಕ್ತಿ ಈ ಎರಡು ಪ್ರಕೃತಿಯನ್ನೂ ಹೊಂದಿದವರಾಗಿರುತ್ತಾರೆ. ಇವೆರಡನ್ನೂ ಹೊರತು ಪಡಿಸಿ ವಾತಾವರಣದ ಬಗ್ಗೆ ಹೇಳುವುದಾದರೆ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳು ಕಾರಣವಾಗಿರುತ್ತವೆ. ಮಳೆಗಾಲವು ಕಫದ ದೋಷ ಉಂಟು ಮಾಡಿದರೆ, ಬೇಸಿಗೆ ಪಿತ್ತವನ್ನು ಹಾಗೂ ಚಳಿಗಾಲವು ವಾತದ ಸಮಸ್ಯೆಗಳನ್ನು ಉಂಟುಮಾಡಲಿದೆ. ಹಾಗಾಗಿ ರೋಗಿಗೆ ಯಾವ ದೋಷ ಇದೆ ಎಂಬುದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.
ಈ ದೋಷವು ವಾಯುವಿನಿಂದ ಕೂಡಿದ್ದಾಗಿರುತ್ತದೆ. ಶರೀರದ ಚಲನೆಯಲ್ಲಿ ಸಮಸ್ಯೆ ಕಾಣಿಸುತ್ತದೆ. ವಾತಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳೆಂದರೆ ದೇಹದ ನಿರ್ದಿಷ್ಟ ಭಾಗದಲ್ಲಿ ವಾಯು ತುಂಬಿರುವಿಕೆ, ಸಂಧಿವಾತ, ಉಸಿರು ಹಿಡಿದಂತಾಗುವುದು, ಕೀಲುನೋವು, ಹಲ್ಲುನೋವು, ಮಲಬದ್ಧತೆ, ಆಮವಾತ, ಖಿನ್ನತೆ, ತಲೆನೋವು ಉಂಟಾಗುತ್ತದೆ. ಇದಕ್ಕೆ ಪರಿಹಾರ ಎಂದರೆ ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ವಾತರಹಿತ ಅಹಾರ ಸೇವಿಸಬೇಕು. ವ್ಯಾಯಾಮ ಮಾಡಬೇಕು.
ಇದು ಚಯಾಪಚಯ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಉಷ್ಣ ಇದರ ಮುಖ್ಯ ಗುಣಲಕ್ಷಣ. ಇದು ಜೀರ್ಣಕ್ರಿಯೆಯನ್ನು ನಿರ್ದೇಶಿಸಲು ಮತ್ತು ಚಯಾಪಚಯವನ್ನು ವೃದ್ಧಿಸಲು ಪಿತ್ತರಸವನ್ನು ಬಳಸುವ ಶಕ್ತಿ ತತ್ವವಾಗಿದೆ. ದೇಹವು ಸುಡುವುದು, ಕಣ್ಣಿನಲ್ಲಿ ಉರಿ, ಗಂಟಲು ನೋವು, ಎದೆಯಲ್ಲಿ ಉರಿ, ಉರಿಮೂತ್ರ ಇತ್ಯಾದಿ. ಇದರಿಂದ ಮೂಲವ್ಯಾಧಿ, ಚರ್ಮರೋಗಗಳು, ಮಲಬದ್ಧತೆ ಇತರೆ ಸಮಸ್ಯೆಗಳು ಬಾಧಿಸಲಿವೆ. ಪರಿಹಾರವಾಗಿ ಸಮಯಕ್ಕೆ ಸರಿಯಾಗಿ ಊಟ ಹಾಗೂ ನಿದ್ರೆ ಮಾಡಬೇಕು. ಖಾರ ಮತ್ತು ಹುಳಿ ಇರುವ ಆಹಾರ ಬಳಕೆ ಕಡಿಮೆ ಮಾಡಬೇಕು. ತಂಪಾದ ಹಾಗೂ ಸಮತೋಲನ ಆಹಾರ ಸೇವಿಸುವುದು ಸೂಕ್ತ.
ಇದು ಶರೀರದ ಪೋಷಕಘಟಕವಾಗಿದೆ. ಎಲ್ಲ ಮೃದು ಅಂಗಗಳು ಕಫದಿಂದ ಮಾಡಲ್ಪಟ್ಟಿವೆ ಮತ್ತು ಇದು ರುಚಿಯ ಗ್ರಹಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಶೀತ, ನೆಗಡಿ, ಉಸಿರಾಟದ ಸಮಸ್ಯೆ, ಅಜೀರ್ಣ ಕಾಣಿಸಿಕೊಳ್ಳುತ್ತದೆ. ಇದರಿಂದ ಹೃದಯ ಸಮಸ್ಯೆ, ಮಧುಮೇಹ ಇತರೆ ಸಮಸ್ಯೆಗಳು ಕಾಡಲಿವೆ. ಇಂತಹವರು ಸಮತೋಲಿತ ಆಹಾರ ಸೇವನೆಯ ಜೊತೆಗೆ ವ್ಯಾಯಾಮ ರೂಢಿಸಿಕೊಳ್ಳಬೇಕು. ಉಪು್ಪ, ಹುಳಿ, ಸಿಹಿ ನಿಯಂತ್ರಿಸಬೇಕು. ಉಷ್ಣ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ವಾತ, ಪಿತ್ತ ಮತ್ತು ಕಫ ಈ ದೋಷಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಂಡು ಬರುತ್ತದೆ. ಕೆಲವರಿಗೆ ದೇಹ ಪ್ರಕೃತಿಯಿಂದ ಉಂಟಾದರೆ ಇನ್ನು ಕೆಲವರಿಗೆ ವಾತಾವರಣದ ಬದಲಾವಣೆ ಕಾರಣವಾಗಿರುತ್ತದೆ. ಅದು ಹೇಗೇ ಇರಲಿ.. ಈ ರೀತಿಯ ಸಮಸ್ಯೆಗಳನ್ನು ನಿಯಂತ್ರಿಸಲು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಅದಕ್ಕಾಗಿ ಜನರು ವಾತಾವರಣಕ್ಕೆ ತಕ್ಕಂತೆ ಉಡುಪು ಧರಿಸಬೇಕು ಹಾಗೂ ಆಹಾರ ಸೇವಿಸಬೇಕು ಜೊತೆಗೆ ವ್ಯಾಯಾಮ ಮಾಡುವುದು ಸೇರಿ ಚುಟುವಟಿಕೆಯಿಂದ ಇರಬೇಕು. ಈ ಕ್ರಮಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಲಿದ್ದು, ರೋಗಗಳಿಂದ ರಕ್ಷಣೆ ಹೊಂದಲು ನೆರವಾಗಲಿದೆ ಎನ್ನುತ್ತಾರೆ ವೈದ್ಯರು.