

| ಗೋವಿಂದರಾಜು ಚಿನ್ನಕುರ್ಚಿ
ಬ್ಯಾಂಕ್ ಅಧಿಕಾರಿ, ಸಿಮ್ ಕಾರ್ಡ್ ಕಂಪನಿ ಸೋಗಿನಲ್ಲಿ ಗ್ರಾಹಕರಿಗೆ ಆಧಾರ್, ಪ್ಯಾನ್ಕಾರ್ಡ್ ಲಿಂಕ್ ಮಾಡುವ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ ಪಡೆದು ಮೋಸ ಮಾಡುತ್ತಿದ್ದಾರೆ. ಬಹುಮಾನ ಬಂದಿರುವುದಾಗಿ ಜನರಿಗೆ ಕರೆ, ಎಸ್ಎಂಎಸ್, ಇ-ಮೇಲ್ ಮಾಡಿ ಅಮಾಯಕರನ್ನು ಬುಟ್ಟಿಗೆ ಬೀಳಿಸಿಕೊಂಡು ಜಿಎಸ್ಟಿ, ಆದಾಯ ತೆರಿಗೆ, ಕಸ್ಟಮ್ ತೆರಿಗೆ ಎಂದೆಲ್ಲ ಹೇಳಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಸೈಬರ್ ಪೊಲೀಸರ ಜಾಗೃತಿಯಿಂದಾಗಿ ಬ್ಯಾಂಕ್ ಖಾತೆ ವಿವರ, ಕ್ರೆಡಿಟ್-ಡೆಬಿಟ್ ಕಾರ್ಡ್, ಸಿವಿವಿ, ಪಿನ್ ನಂಬರ್ ಕೊಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವರಸೆ ಬದಲಿಸಿರುವ ಸೈಬರ್ ಖದೀಮರು ಇದೀಗ ಮೊಬೈಲ್ ನಂಬರ್ ಮತ್ತು ಒನ್ಟೈಮ್ ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆ ಹೆಚ್ಚಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ (ಕೆವೈಸಿ) ಲಿಂಕ್ ಮಾಡಿರುವ ಪರಿಣಾಮ ಮೊಬೈಲ್ ನಂಬರ್ಗೆ ಬ್ಯಾಂಕ್ ವಿವರ ಲಿಂಕ್ ಆಗಿದೆ. ವ್ಯಾಲೆಟ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಸೇವೆ ಕೇವಲ ಮೊಬೈಲ್ ಮೂಲಕವೇ ನಡೆಸಬಹುದು. ಆನ್ಲೈನ್ನಲಿ ್ಲ ವ್ಯಾಪಾರ ನಡೆಸುವ ವಾಣಿಜ್ಯ ಕಂಪನಿಗಳು ವಸ್ತುಗಳ ಮಾರಾಟದ ಬಳಿಕ ಗ್ರಾಹಕರ ಮೊಬೈಲ್ಗೆ ಲಿಂಕ್ ಕಳುಹಿಸಿ ವ್ಯಾಲೆಟ್ನಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೇವಲ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ ಒಟಿಪಿ ಇದ್ದರೆ ಸಾಕು, ಹಣ ಎತ್ತಬಹುದು. ಇದನ್ನು ತಿಳಿದಿರುವ ಸೈಬರ್ ಕಳ್ಳರು, ಗೂಗಲ್ನಲ್ಲಿ ಹೆಲ್ಪ್ಲೈನ್ ಜಾಗದಲ್ಲಿ ತಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಿರುತ್ತಾರೆ. ಆ ನಂಬರ್ಗೆ ಕರೆ ಮಾಡಿದಾಗ ಸಹಾಯ ಮಾಡುವ ಸೋಗಿನಲ್ಲಿ ಗ್ರಾಹಕರ ಮೊಬೈಲ್ಗೆ ಲಿಂಕ್ ಕಳುಹಿಸಿ ಅದರ ಮೇಲೆ ಒತ್ತುವಂತೆ ಸೂಚನೆ ಕೊಡುತ್ತಾರೆ. ಅದರಂತೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿದರೆ ಅದಕ್ಕೆ ಬರುವ ಒಟಿಪಿ ಆಟೋ ಜನರೇಟ್ ಆಗಿ ಬ್ಯಾಂಕ್ಗೆ ಸಂಪರ್ಕವಾಗಿ ಹಣ ಸೈಬರ್ ಕಳ್ಳರ ಪಾಲಾಗಲಿದೆ. ಅದಕ್ಕಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಸಹ ಮುಖ್ಯ ಎಂದು ಸೈಬರ್ ತಜ್ಞರ ಅಭಿಪ್ರಾಯವಾಗಿದೆ.
ಬೆಂಗಳೂರು ನಗರ ಪೊಲೀಸ್ ವಿಭಾಗದ ಕಮಾಂಡ್ ಸೆಂಟರ್ನಲ್ಲಿ ‘ಸೈಬರ್ ಕ್ರೖೆಂ ಘಟನೆ ವರದಿ’ (ಸಿಐಆರ್) ಎಂಬ ವಿಶೇಷ ತಂಡ ರಚನೆ ಮಾಡಲಾಗಿದೆ. ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್ ಕಳ್ಳರಿಂದ ಯಾಮಾರಿ ವಂಚನೆಗೆ ಒಳಗಾದರೆ ಅಂತವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಅಥವಾ ನಮ್ಮ100ಗೆ ಕರೆ ಮಾಡಿ. ಪೊಲೀಸರು ಕೇಳುವ ಪ್ರಾಥಮಿಕ ಮಾಹಿತಿ ನೀಡಿದರೆ ಸಂಬಂಧಪಟ್ಟ ಬ್ಯಾಂಕ್ಗೆ ಇ-ಮೇಲ್ನಲ್ಲಿ ವಿವರ ಕಳುಹಿಸುತ್ತಾರೆ. ದೂರುದಾರನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿ ಸೈಬರ್ ಕಳ್ಳರು ಹಣ ಡ್ರಾ ಮಾಡುವುದನ್ನು ತಡೆಯುತ್ತಾರೆ. ಆನಂತರ ಗ್ರಾಹಕರಿಂದ ದೂರು, ಸೂಕ್ತ ದಾಖಲೆ ಪಡೆದು ಎಫ್ಐಆರ್ ಮಾಡಿ ಕಾನೂನು ಪ್ರಕಾರ ಬ್ಯಾಂಕಿಗೆ ಮಾಹಿತಿ ರವಾನಿಸಿ ಹಣ ವಾಪಸ್ ಪಡೆದು ಕೋರ್ಟ್ ಮೂಲಕ ದೂರುದಾರನಿಗೆ ನೀಡಲಾಗುತ್ತದೆ.
ಡಿಪಿಗೆ ಫೋಟೋ ಬಳಸಿ ಮೋಸ: ಮೊಬೈಲ್ ಡಿಪಿಗೆ ಪರಿಚಯಸ್ಥರ ಫೋಟೋ ಬಳಸಿಕೊಂಡು ವಾಟ್ಸ್ಆಪ್ನಲ್ಲಿ ಚಾಟ್ ಮಾಡಿ ಹಣ ಪಡೆದು ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ ಐಎಎಸ್, ಐಪಿಎಸ್, ನ್ಯಾಯಾಧೀಶರು ಇನ್ನಿತರ ಹಿರಿಯ ಅಧಿಕಾರಿಗಳ ಫೋಟೋಗಳನ್ನು ಡಿಪಿಗೆ ಬಳಸಿ ಅವರ ಕೈ ಕೆಳಗಿನ ಅಧಿಕಾರಿಗೆ ವಾಟ್ಸ್ಆಪ್ನಲ್ಲಿ ಗಿಫ್ಟ್ ವೋಚರ್ ಖರೀದಿಗೆ ಸೂಚಿಸುತ್ತಾರೆ.
ಹೆಲ್ಪ್ಲೈನ್ ಸೋಗಿನಲ್ಲಿ ವಂಚನೆ: ಗೂಗಲ್ನಲ್ಲಿ ಹೆಲ್ಪ್ಲೈನ್ ಜಾಗದಲ್ಲಿ ಸೈಬರ್ ಕಳ್ಳರು ತಮ್ಮ ನಂಬರ್ ಅಪ್ಲೋಡ್ ಮಾಡುತ್ತಾರೆ. ಜನರು ಗೂಗಲ್ನಲ್ಲಿ ಮೊಬೈಲ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದಾಗ ಸೈಬರ್ ಕಳ್ಳರು ಸಹಾಯ ಮಾಡುವ ಸೋಗಿನಲ್ಲಿ ವಂಚನೆ ಮಾಡುತ್ತಾರೆ. ಆನ್ಲೈನ್ ಶಾಪಿಂಗ್ನಲ್ಲಿ ಹಣ ಹಿಂದಿರುಗಿಸಲು ಸಹಾಯ, ಬ್ಯಾಂಕ್ಗೆ ಕೆವೈಸಿ ಮಾಡುವುದಾಗಿ ನಂಬಿಸಿ ಖಾತೆಗೆ ವಂಚನೆ ಮಾಡುತ್ತಿದ್ದಾರೆ.